ಕ್ಲಾಸಿನಲ್ಲಿ ಅವಳೇ ಸುಂದರಿ. 4 ಕಾಲೇಜು ಹುಡುಗರು ಪ್ರೀತಿಸುವುದಾಗಿ ಹಿಂದೆ ಬಿದ್ದಿದ್ದರು. ಆಕೆಗೂ ಒಬ್ಬ ಪ್ರಿಯಕರನ ಅವಶ್ಯಕತೆಯಿತ್ತು.
“ನನಗೆ ಮುತ್ತಿನ ಉಂಗುರ ತಂದುಕೊಡಿ. ನನಗೆ ಇಷ್ಟವಾದ ಉಂಗುರ ತರುವರನ್ನು ಪ್ರೀತಿಸ್ತಿನಿ”
ಆಕೆಯ ಬೇಡಿಕೆಗೆ ಮನಸ್ಸಲ್ಲೆ ನಕ್ಕು ಎಲ್ಲರೂ ಮನೆಗೆ ಹೋದರು. ಮರುದಿನ ಮೂವರು ತಾವು ತಂದ ಉಂಗುರಗಳನ್ನು ತೋರಿಸಿದರು.
ಒಬ್ಬ ವಜ್ರಖಚಿತ ಮುತ್ತಿನ ಉಂಗುರ ತಂದಿದ್ದ. ಮತ್ತೊಬ್ಬ ಆಕರ್ಷಕ ವಿನ್ಯಾಸದ ಮುತ್ತಿನ ಉಂಗುರ ತಂದುಕೊಂಡಿದ್ದ. ಮತ್ತೊಬ್ಬನೂ ಮುತ್ತಿನ ಉಂಗುರ ತಂದಿದ್ದ. ಮೊದಲ ನೋಟಕ್ಕೆ ಎಲ್ಲವೂ ದುಬಾರಿ ಬೆಲೆಯ ಉಂಗುರ ಎಂದು ಗೊತ್ತಾಗುತ್ತಿತ್ತು.
ಆಕೆ ಯಾವುದನ್ನು ಪಡೆದುಕೊಳ್ಳಲಿಲ್ಲ.
ನಾಲ್ಕನೆಯವ ಬಂದ.
ಅವನ ಮೇಲೆ ಅವಳಿಗೆ ಏನೋ ಭರವಸೆ ಇತ್ತು. ಉಂಗುರ ತೋರಿಸು ಎಂದಳು.
ನಾನು ಹೊಸ ಉಂಗುರ ಖರೀದಿಸಿಲ್ಲ ಅಂದ.
“ಓಹ್ ಅಷ್ಟೇನಾ ನಿನ್ನ ಪ್ರೀತಿ” ಅವಳು ಕೇಳಿದಳು. ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕೆ ಎಂಬ ಭೀತಿಯೂ ಅವಳಲ್ಲಿತ್ತು.
“ನನ್ನ ಅಪ್ಪ ಕೊಟ್ಟ ದುಡ್ಡಿನಲ್ಲಿ ನನ್ನ ಪ್ರೀತಿಗೆ ಉಂಗುರ ತೊಡಿಸೋದು ನನಗೆ ಇಷ್ಟವಿಲ್ಲ” ಅವನು ಸ್ವಾಭಿಮಾನದ ಮಾತನಾಡಿದ.
ಸರಿ ಹಾಗಾದರೆ ನಿನ್ನ ಸ್ವಂತ ದುಡ್ಡಿನಿಂದ ತಂದ ಉಂಗುರ ಕೊಡು.
ಆತ ತನ್ನ ಕೈನಲ್ಲಿದ್ದ ಉಂಗುರ ಬಿಚ್ಚಿ ಹೇಳಿದ.
“ತೆಗೆದುಕೋ ಇದು ನಾನು ರಜೆಯಲ್ಲಿ ದುಡಿದ ಹಣದಲ್ಲಿ ಖರೀದಿಸಿದ ಉಂಗುರ”
ಅವಳು ಉಂಗುರ ಕೈನಲ್ಲಿಡಿದು ಆ ಕಡೆ ಈ ಕಡೆ ತಿರುಗಿಸಿ ನೋಡಿ ಕೇಳಿದಳು
ಇದರಲ್ಲಿ ಮುತ್ತಿಲ್ಲ ಅವಳು ಮುಗ್ಧವಾಗಿ ಕೇಳಿ ಬಾಯಿಮುಚ್ಚಿಸುವಷ್ಟರಲ್ಲಿ
ಅವನಿಗೆ ಮುತ್ತುಕೊಟ್ಟಾಗಿತ್ತು.
ಅವಳ ಕಣ್ಣಲ್ಲಿ ಸಾವಿರ ಮುತ್ತುಗಳು ಮಿಣುಗುತ್ತಿದ್ದವು.
0 ಪ್ರತಿಕ್ರಿಯೆಗಳು: