Thursday, 29 September 2016

ಡ್ರೈವಿಂಗ್ ಲೈಸನ್ಸ್ ಪಡೆಯುವುದು ಹೇಗೆ?

SHARE
ಹೆಚ್ಚಿನ ಜನರು ಡ್ರೈವಿಂಗ್ ಸ್ಕೂಲ್ ಅಥವಾ ಮಧ್ಯವರ್ತಿಗಳ ನೆರವಿನಿಂದಲೇ ವಾಹನ ಚಾಲನಾ ಪರವಾನಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಇವರ ನೆರವಿಲ್ಲದೆಯೇ ಎಲ್‍ಎಲ್, ಡಿಎಲ್, ಐಡಿಪಿ ಪಡೆಯುವುದು ಹೇಗೆ?

ವಾಹನ ಚಾಲನಾ ಪರವಾನಿಗೆ  ಹೇಗೆ ಪಡೆದಿರಿ? ಎಂಬ ಪ್ರಶ್ನೆಗೆ ಹೆಚ್ಚಿನ ಜನರು `ಡ್ರೈವಿಂಗ್ ಸ್ಕೂಲ್ ಮೂಲಕ' ಎಂದು ಉತ್ತರಿಸುತ್ತಾರೆ. ಅಪರೂಪಕ್ಕೆ ಕೆಲವರು ಮಾತ್ರ ಯಾವುದೇ ಮಧ್ಯವರ್ತಿಗಳಿಗೆ ಹಲವು ಪಟ್ಟು ದುಡ್ಡು ನೀಡಲು ಇಚ್ಚಿಸದೇ ಸ್ವತಃ ತಾವೇ ಡಿಎಲ್ ಮಾಡಿಸಿಕೊಳ್ಳುತ್ತಾರೆ.

`ಡಿಎಲ್ ಕುರಿತು ಮೊದಲು ಡ್ರೈವಿಂಗ್ ಸ್ಕೂಲ್‍ನವರಲ್ಲಿ ವಿಚಾರಿಸಿದ್ದೆ. ಹೇಗೂ ಫ್ರೆಂಡ್ಸ್ ಕಾರು ಡ್ರೈವಿಂಗ್ ಮಾಡಿದ ಅನುಭವವಿತ್ತು. ಸ್ಕೂಲ್‍ನವರು ವಿದೌಟ್ ಕ್ಲಾಸ್ 2,500 ರೂಪಾಯಿ ಕೇಳಿದ್ರು. ನಂತ್ರ ಆರ್‍ಟಿಒ ಕಚೇರಿಗೆ ಹೋಗಿ ಡಿಎಲ್ ಮಾಡಿಸ್ಕೊಂಡೆ. ಕೆಲವು ನೂರು ರುಪಾಯಿ ಖರ್ಚಾಯಿತು ಅಷ್ಟೇ!' ಎಂದವರು ಬೆಂಗಳೂರಿನ ರಿಚ್‍ಮಂಡ್ ನಿವಾಸಿ ಸುದರ್ಶನ್ ಎಂ.
ವಾಹನ ಚಾಲನೆ ತಿಳಿದಿದ್ದರೂ ಎಲ್‍ಎಲ್, ಡಿಎಲ್ ಪಡೆಯಲು ಮಧ್ಯವರ್ತಿಗಳ ನೆರವು ಪಡೆಯುವರು ಹೆಚ್ಚಿದ್ದಾರೆ. ಸ್ಕೂಲ್ ಮೂಲಕ ಹೋದರೆ ಸುಲಭವಾಗಿ ಪಾಸ್ ಆಗಬಹುದು, ಅರ್ಜಿ, ದಾಖಲೆ ಪತ್ರ ವ್ಯವಹಾರಗಳನ್ನು ಅವರೇ ನಿರ್ವಹಿಸುತ್ತಾರೆ. ಒಂದೆರಡು ಸಾವಿರ ರೂಪಾಯಿ ವ್ಯರ್ಥವಾದರೂ ಪರವಾಗಿಲ್ಲ ಎಂಬ ಮನೋಭಾವ ಹೆಚ್ಚಿನವರದ್ದು. ವಾಹನ ಚಾಲನೆ(ರಿವರ್ಸ್ ಚಾಲನೆ ಸೇರಿದಂತೆ), ಸಂಚಾರ ನೀತಿ ನಿಯಮಗಳ ಸಾಮಾನ್ಯ ಜ್ಞಾನ ಇದ್ದರೆ ಸಾಕು. ಯಾವುದೇ ಕಷ್ಟವಿಲ್ಲದೇ ಲೈಸನ್ಸ್ ಪಡೆಯಬಹುದು.

ಕಲಿಕೆಗೆ ಪರ್ಮಿಟ್(ಎಲ್‍ಎಲ್)
ಡ್ರೈವಿಂಗ್ ಕಲಿಕೆಗೂ ಪರವಾನಿಗೆ ಪಡೆದುಕೊಳ್ಳಬೇಕು. ನೇರ ಆರ್‍ಟಿಒ ಕಚೇರಿಗೆ ಹೋಗಿ ಸಿಎಂವಿ2 ಫಾರ್ಮ್ ಪಡೆಯಿರಿ. ಇದನ್ನು ಆರ್‍ಟಿಒ ವೆಬ್‍ಸೈಟ್‍ನಿಂದಲೂ ಡೌನ್‍ಲೋಡ್ ಮಾಡಿಕೊಳ್ಳಬಹುದು. ಪಾಸ್‍ಪೆÇೀರ್ಟ್ ಗಾತ್ರದ ಮೂರು ಭಾವಚಿತ್ರ, ವಿಳಾಸ ದಾಖಲೆ, ವಯಸ್ಸು ಪ್ರಮಾಣ ಪತ್ರ(ಎಸ್‍ಎಸ್‍ಎಲ್‍ಸಿ ಮಾರ್ಕ್‍ಕಾರ್ಡ್ ಇತ್ಯಾದಿ) ಮತ್ತು 30 ರುಪಾಯಿ ಶುಲ್ಕ ಪಾವತಿಸಿದರೆ ಸಾಕು. ಟೆಸ್ಟ್‍ಗೆ ಯಾವಾಗ ಹಾಜರಾಗಬೇಕು ಎಂದು ಕೇಳಿತಿಳಿದುಕೊಳ್ಳಿ.
ಪರೀಕ್ಷೆ ಎಂದರೆ ಭಯಬೀಳದಿರಿ. ಟ್ರಾಫಿಕ್ ಚಿನ್ಹೆಗಳು, ಸಂಚಾರ ನೀತಿನಿಯಮಗಳ ಬಗ್ಗೆ  ಪ್ರಶ್ನೆಗಳಿರುತ್ತವೆ. ಇದನ್ನು ಇಂಟರ್‍ನೆಟ್‍ನಲ್ಲಿ ಹುಡುಕಿ ಕಲಿಯಬಹುದು ಅಥವಾ ಆರ್‍ಟಿಒ ಕಚೇರಿಗಳ ಗೋಡೆಗಳಲ್ಲಿಯೇ ಈ ಮಾಹಿತಿಗಳು ಇರುತ್ತವೆ. ಎಲ್‍ಎಲ್ ಪಡೆಯಲು ಲಿಖಿತ ಅಥವಾ ಮೌಖಿಕ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತವಾದರೆ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳಿರುತ್ತವೆ. ಮೌಖಿಕ ಪರೀಕ್ಷೆಯಲ್ಲಿ ಟ್ರಾಫಿಕ್ ಇನ್‍ಸ್ಪೆಕ್ಟರ್ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಹೆಚ್ಚಾಗಿ, ಕೆಲವು ಟ್ರಾಫಿಕ್ ಚಿನ್ಹೆಗಳನ್ನು ತೋರಿಸಿ, ಇದೇನು.. ಇದೇನು ಎಂದು ಪ್ರಶ್ನಿಸುತ್ತಾರೆ. ತಡವರಿಸದೆ ಸರಿಯಾಗಿ ಉತ್ತರಿಸಿದರೆ ಪಾಸ್! ಆಮೇಲೆ ದೃಷ್ಟಿ ದೋಷವಿದೆಯೇ ಎಂದು ಪರಿಶೀಲಿಸಲು ಒಂದು ಕಣ್ಣು ಮುಚ್ಚಲು ಹೇಳಿ ಏನಾದರೂ ಅಕ್ಷರಗಳನ್ನು ಓದಿಸುತ್ತಾರೆ. ಪಾಸ್ ಆದರೆ ಒಂದು ದಿನದಲ್ಲಿ ಎಲ್‍ಎಲ್ ನಿಮಗೆ ದೊರಕುತ್ತದೆ.
ಕೆಲವೊಮ್ಮೆ ಎಲ್‍ಎಲ್ ಕಳೆದುಹೋಗಬಹುದು. ಕಳೆದು ಹೋಗಿರುವುದಕ್ಕೆ ದಾಖಲೆ (ಪೆÇಲೀಸ್ ಕಂಪ್ಲೇಟ್ ಪ್ರತಿ) ಇರಲಿ. ಆರ್‍ಟಿಒಗೆ ಹೋಗಿ ಕೆಎಂವಿ-1ಎ ಫಾರ್ಮ್ ಪಡೆಯಿರಿ. 2 ಪಾಸ್‍ಪೆÇೀರ್ಟ್ ಗಾತ್ರದ ಭಾವಚಿತ್ರ ನೀಡಬೇಕು. ಆರ್‍ಟಿಒ ಕ್ಯಾಷ್ ಕೌಂಟರ್‍ನಲ್ಲಿ 15 ರುಪಾಯಿ ಶುಲ್ಕ ಪಾವತಿಸಿ. ಒಂದು ದಿನದಲ್ಲಿ ಡುಬ್ಲಿಕೇಟ್ ಲರ್ನಿಂಗ್ ಲೈಸನ್ಸ್ ನಿಮ್ಮ ಕೈ ಸೇರಬಹುದು.

ಡ್ರೈವಿಂಗ್ ಲೈಸನ್ಸ್
ವಾಹನ ಚಾಲನೆ ತಿಳಿದಿದ್ದರೆ ಡ್ರೈವಿಂಗ್ ಸ್ಕೂಲ್ ಅವಲಂಬನೆ ಇಲ್ಲದೆಯೇ ಆರ್‍ಟಿಒ ಬಳಿ ಡಿಎಲ್ ಮಾಡಿಸಿಕೊಳ್ಳಬಹುದು. ಎಲ್‍ಎಲ್ ಪಡೆದ 30 ದಿನಗಳ ನಂತರ ಡಿಎಲ್ ಪರೀಕ್ಷೆ ಇರುತ್ತದೆ. ಆರ್‍ಟಿಒ ಕಚೇರಿಯಿಂದ ಸಿಎಂವಿ 4 ಫಾರ್ಮ್ ಪಡೆದು ತುಂಬಬೇಕು. ಪಾಸ್‍ಪೆÇೀರ್ಟ್ ಗಾತ್ರದ ಮೂರು ಭಾವಚಿತ್ರ, ಡಿಎಲ್ ಕಾರ್ಡ್ ದರ 215 ರು ಮತ್ತು ಡ್ರೈವಿಂಗ್ ಟೆಸ್ಟ್ ಶುಲ್ಕ 50 ರು ಪಾವತಿಸಬೇಕು. ವ್ಯಾಲಿಡಿಟಿ ಮುಗಿಯದ ಎಲ್‍ಎಲ್ ಜೊತೆಗಿರಲಿ.
ಡ್ರೈವಿಂಗ್ ಟೆಸ್ಟ್ ಎಂದರೆ ಕೆಲವರಿಗೆ ಭಯ. ಡ್ರೈವಿಂಗ್ ಗೊತ್ತಿದ್ದವರು ಸಹ ಕೆಲವೊಮ್ಮೆ ಭಯಪಟ್ಟು ಫೇಲಾಗುವುದುಂಟು. ಡ್ರೈವಿಂಗ್ ಇನ್‍ಸ್ಪೆಕ್ಟರ್ ಸಾಮಾನ್ಯವಾಗಿ ಫಾರ್ವಡ್ ಅಥವಾ ರಿವರ್ಸ್ ಡ್ರೈವಿಂಗ್ ಟೆಸ್ಟ್ ಮಾಡುವಂತೆ ಹೇಳುತ್ತಾರೆ. ನಿಮ್ಮ ವಾಹನ ಚಾಲನೆ ಇನ್‍ಸ್ಪೆಕ್ಟರ್‍ಗೆ ತೃಪ್ತಿದಾಯಕವೆನಿಸಿದರೆ ಪಾಸ್. ಶೀಘ್ರದಲ್ಲಿ ಡಿಎಲ್ ನಿಮಗೆ ಸಿಗುತ್ತದೆ. ನಪಾಸಾದರೆ  7 ದಿನದ ನಂತರ 50 ರು. ಶುಲ್ಕ ಪಾವತಿಸಿ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಬೇಕು.
ಕೆಲವೊಮ್ಮೆ ಡಿಎಲ್ ಕಳೆದುಹೋಗಬಹುದು. ಡುಬ್ಲಿಕೇಟ್ ಡಿಎಲ್ ಪಡೆಯುವುದು ಕಷ್ಟವಲ್ಲ. ರೋಟರಿಯಿಂದ ಅಫಿಡವಿಟ್ ಮಾಡಿಸಿ. ಆರ್‍ಟಿಒ ಕಚೇರಿಗೆ ಹೋಗಿ ಕೆಎಂವಿ 1 ಅರ್ಜಿ ಪಡೆದು ತುಂಬಿಸಬೇಕು. ಸಂಬಂಧಿತ ದಾಖಲೆಗಳನ್ನು ನೀಡಬೇಕು. ಡಿಎಲ್ ಕಾರ್ಡ್ ಶುಲ್ಕ 215 ರುಪಾಯಿ ನೀಡಬೇಕು.

ಅಂತಾರಾಷ್ಟ್ರೀಯ ಪರ್ಮಿಟ್
ನೀವು ಕೆಲವು ಸಮಯ ವಿದೇಶಕ್ಕೆ ಹೋಗುತ್ತೀರಿ ಎಂದಿರಲಿ. ಅಲ್ಲಿ ವಾಹನ ಚಲಾಯಿಸುವಾಗ ಟ್ರಾಫಿಕ್ ಪೆÇಲೀಸರು ಅಡ್ಡಗಟ್ಟಿದರೆ ಭಾರತದ ಡಿಎಲ್ ತೋರಿಸಿದರೆ ಆಗದು. ಅಂತಾರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್(ಇಡಿಪಿ) ನಿಮ್ಮಲ್ಲಿರಬೇಕು.
ಇಡಿಪಿ ಪಡೆಯವುದುದು ಕಷ್ಟವಲ್ಲ. ಆರ್‍ಟಿಒ ಕಚೇರಿಯಿಂದ ಸಿಎಂವಿ 4ಎ ಅಪ್ಲಿಕೇಷನ್ ಪಡೆಯಬೇಕು. 500 ರು. ಶುಲ್ಕ ಪಾವತಿಸಬೇಕು. ಒರಿಜಿನಲ್ ಡಿಎಲ್, ಪಾಸ್‍ಪೋರ್ಟ್, ವೀಸಾ, ವಿಮಾನ ಟಿಕೇಟ್ ಇತ್ಯಾದಿಗಳ ಒಂದು ಪ್ರತಿ ನೀಡಬೇಕು. ಸಿಎಂವಿ1 ಮತ್ತು ಸಿಎಂವಿ1ಎ ಫಾರ್ಮ್‍ನಲ್ಲಿ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕು. ಪಾಸ್‍ಪೋರ್ಟ್ ಗಾತ್ರದ ಮೂರು ಭಾವಚಿತ್ರ ನೀಡಬೇಕು. ಖುದ್ದಾಗಿ ಆರ್‍ಟಿಒ ಕಚೇರಿಯಲ್ಲಿ ನೀವೇ ಹಾಜರಾಗಬೇಕು. ಹೊಸ ಡಿಎಲ್ ಪಡೆದು ಮೂರು ತಿಂಗಳು ಕಳೆದಿದ್ದರೆ ಮತ್ತೊಮ್ಮೆ ಡ್ರೈವಿಂಗ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಡಿಎಲ್ ಮಾಡಿಸಿದ ವ್ಯಾಪ್ತಿಯ ಆರ್‍ಟಿಒ ಕಚೇರಿಯಲ್ಲಿಯೇ ಅಂತಾರಾಷ್ಟ್ರೀಯ ವಾಹನ ಚಾಲನೆ ಪರವಾನಿಗೆಗೆ ಅರ್ಜಿ ಸಲ್ಲಿಸಬೇಕು. ಐಡಿಪಿ ವ್ಯಾಲಿಡಿಟಿ ಒಂದು ವರ್ಷ.

ಎಲ್ಲಾದರೂ ಡಿಎಲ್, ಎಲ್‍ಎಲ್‍ಗೆ ನೀಡಿದ ವಿಳಾಸವನ್ನು ಬದಲಾಯಿಸುವ ಅನಿವಾರ್ಯತೆ ಇದ್ದರೆ ನೀವು ಆರ್‍ಟಿಒ ಕಚೇರಿಗೆ ಭೇಟಿ ನೀಡಿ ಹೊಸ ವಿಳಾಸದ ದಾಖಲೆ ಪತ್ರ ನೀಡಬೇಕು. ವಾಹನ ಚಾಲನೆ ಎಬಿಸಿಡಿ ಗೊತ್ತಿಲ್ಲದವರು ಡ್ರೈವಿಂಗ್ ಸ್ಕೂಲ್ ಮೂಲಕವೇ ಎಲ್‍ಎಲ್, ಡಿಎಲ್ ಮಾಡಿಸಿಕೊಳ್ಳುವುದು ಒಳಿತು. ವಾಹನದ ಲಭ್ಯತೆ ಇದ್ದೂ, ಡ್ರೈವಿಂಗ್ ಗೊತ್ತಿದ್ದೂ ಮಧ್ಯವರ್ತಿಗಳನ್ನು ಅವಲಂಬಿಸಿದರೆ ನಷ್ಟ ನಿಮಗೆ!

ಕರ್ನಾಟಕ ಆರ್ ಟಿಒ ವಿಳಾಸ

* ಪ್ರವೀಣ ಚಂದ್ರ
SHARE

Author: verified_user

0 ಪ್ರತಿಕ್ರಿಯೆಗಳು: