Friday, 30 September 2016

ಪುಟ್ಟಕಥೆ: ಪ್ರೇಮದ ಹಕ್ಕಿ

SHARE
ಹೂದೋಟದಲ್ಲಿದ್ದೆ. ಯಾವುದೋ ರೆಕ್ಕೆ ಬಡಿತದ ಸದ್ದು ಕೇಳಿ ಮೇಲ್ನೋಡಿದೆ. ಮುದ್ದಾದ ಹಕ್ಕಿ ನನ್ನನ್ನೇ ನೋಡುತ್ತಿತ್ತು. ಯಾವೂರ ಹಕ್ಕಿಯಿದು? ಎಲ್ಲಿಂದ ಬಂತು? ಸಣ್ಣದಾಗಿದ್ದರೂ ಚೂಟಿಯಾಗಿದೆಯಲ್ವ ಎಂದೆನಿಸಿತು. ನಾನೂ ಹಕ್ಕಿಯತ್ತ ನೋಡಿ ಕಣ್ ಮಿಟುಕಿಸಿದೆ. ಅದು ಗರಿಗೆದರಿ ಸ್ಮೈಲ್ ಕೊಟ್ಟಿತು.

ಪ್ರತಿದಿನ ಹೂದೋಟಕ್ಕೆ ಬರುತ್ತಿದ್ದೆ. ಆ ಹಕ್ಕಿ ನನಗೆ ಒಳ್ಳೆ ಕಂಪೆನಿ ಕೊಡುತ್ತಿತ್ತು. ಹೂದೋಟದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿತ್ತು. ನನ್ನ ಕಣ್ಣುಗಳನ್ನೇ ನೋಡುತ್ತಿತ್ತು. ಹಕ್ಕಿ ಚೆನ್ನಾಗಿರಬೇಕು ಎಂದು ಹೂದೋಟವನ್ನು ಹೆಚ್ಚು ಜತನದಿಂದ ನೋಡಿಕೊಳ್ಳತೊಡಗಿದೆ.

ಇತ್ತೀಚೆಗೆ ಹೂದೋಟದಲ್ಲಿ ಬಣ್ಣಬಣ್ಣದ ಹೂವುಗಳು ನಳನಳಿಸುತ್ತಿದ್ದವು. ಹಕ್ಕಿ ಕಾಲ್ಗುಣವಾಗಿರಬೇಕು. ದಿನಕಳೆದಂತೆ ಹಕ್ಕಿಯನ್ನು ನನ್ನ ಮನಸ್ಸು ಹೆಚ್ಚು ಹಚ್ಚಿಕೊಂಡಿತು. ಕುಂಚವಿಡಿದು ಹಕ್ಕಿ ಚಿತ್ರಬಿಡಿಸುತ್ತಿದೆ.

ಅಂದೊಂದು ದಿನ ಹಕ್ಕಿಗೆ ತಿಳಿಸಿದೆ. “ನೀ ಬಂದು ಇಷ್ಟು ದಿನವಾಯ್ತಲ್ಲ, ನನ್ನ ಹೂದೋಟದಲ್ಲೇ ಗೂಡು ಕಟ್ಟಿಬಿಡಬಾರದೇ?” ಎಂದೆ. ಹಕ್ಕಿಗದು ಅನಿರೀಕ್ಷಿತ. ಹಕ್ಕಿಗಳ ಮನಸ್ಸು ಅರಿಯೋದು ಕಷ್ಟ.

ನನ್ನ ಹೂದೋಟದಿಂದ ಹೊರಬಂದ ಹಕ್ಕಿ “ನಾನು ಈಗಾಗಲೇ ಬೇರೆಡೆ ಗೂಡು ಕಟ್ಟುತ್ತಿದ್ದೇನೆ” ಎಂದು ಹಾರಿಹೋಯಿತು. ಮತ್ತೆ ಬರಲೇ ಇಲ್ಲ.

ಮುದ್ದು ಹಕ್ಕಿಯೇ ಗೂಡು ಕಟ್ಟುವುದು ಬೇಡ. ಹಾಗೆ ಬಂದುಹೋಗಬಾರದೇ, ಹೂದೋಟದಲ್ಲಿ ಹೂಗಳು ಬಾಡಿಹೋಗಿವೆ. ನಾನು ಕಾಯುತ್ತಿದ್ದೇನೆ.
SHARE

Author: verified_user

0 ಪ್ರತಿಕ್ರಿಯೆಗಳು: