* ಪ್ರವೀಣ್ ಚಂದ್ರ ಪುತ್ತೂರು
ನಿಮಗೆ ಯಾವುದೋ ವಿಷಯದ ಬಗ್ಗೆ ಮಾಹಿತಿ ಬೇಕು. ಉದಾಹರಣೆಗೆ ಆ ವಿಷಯ
ಕಾರ್' ಎಂದಿರಲಿ. ಗೂಗಲ್‍ನ ಸರ್ಚ್ ಬಾಕ್ಸ್‍ಗೆ ಹೋಗಿ ಕಾರ್ ಎಂದು ಟೈಪ್ ಮಾಡಿ ಎಂಟರ್ ಹೊಡೆಯುವಿರಿ. ಆಗ ವೆಬ್‍ಫಲಿತಾಂಶಗಳ ರಾಶಿಯೇ ನಿಮ್ಮ ಮುಂದೆ ಬರುತ್ತದೆ. ಮೊದಲ ಪುಟದ ಟಾಪ್‍ನಲ್ಲಿ ಕಾರ್‍ವಾಲೆ, ಕಾರ್‍ಟ್ರೇಡ್, ಕಾರ್‍ದೇಕೊ ಮುಂತಾದ ವೆಬ್‍ಸೈಟ್‍ಗಳ ಮಾಹಿತಿಗಳು ಬರುತ್ತವೆ. ಕಾರುಗಳ ಮಾಹಿತಿ ನೀಡುವ ಸಾವಿರಾರು ವೆಬ್‍ಸೈಟ್‍ಗಳು ಭಾರತದಲ್ಲಿವೆ. ಯಾಕೆ, ಕೆಲವೇ ಕೆಲವು ವೆಬ್‍ಸೈಟ್‍ಗಳ ಹೆಸರು ಗೂಗಲ್ ಹುಡುಕಾಟದಲ್ಲಿ ಮೊದಲಿಗೆ ಬರುತ್ತವೆ? ಪವರ್‍ಫುಲ್ ವೆಬ್ ಮಾರ್ಕೆಟಿಂಗ್ ಟೆಕ್ನಿಕ್ ಆದ
ಎಸ್‍ಇಒ' ಅನ್ನು ಸಮರ್ಥವಾಗಿ ಅಳವಡಿಸಿಕೊಂಡಿರುವುದೇ ಆ ವೆಬ್‍ಸೈಟ್‍ಗಳ ಲಿಂಕ್‍ಗಳು ಗೂಗಲ್, ಬಿಂಗ್, ಯಾಹೂ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಟಾಪ್‍ನಲ್ಲಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ.ಏನಿದು ಎಸ್‍ಇಒ?
ಎಸ್‍ಇಒ ವಿಸ್ತೃತ ರೂಪ ಸರ್ಚ್ ಎಂಜಿನ್ ಆಪ್ಟಿಮೈಜೇಷನ್. ಸರ್ಚ್ ಎಂಜಿನ್‍ನಲ್ಲಿರುವ ಕೋಟಿ ಕೋಟಿ ವೆಬ್‍ಸೈಟ್‍ಗಳು, ಮಾಹಿತಿ ಕಣಜಗಳನ್ನು ಹಿಂದಿಕ್ಕಿ ನಿಮ್ಮ ವೆಬ್‍ಸೈಟ್‍ಗೆ ಅಗ್ರ ರ್ಯಾಂಕ್ ನೀಡಿ ಮಾಹಿತಿ ಹುಡುಕಾಡುವವರಿಗೆ ಮೊದಲ ಪುಟದಲ್ಲಿ ತೋರಿಸಲು ಸಹಕರಿಸುವ ವೆಬ್ ಟೆಕ್ನಿಕ್ ಅನ್ನು ಎಸ್‍ಇಒ ಎನ್ನಬಹುದು. ಸರ್ಚ್ ಫಲಿತಾಂಶಗಳಲ್ಲಿ ಮೊದಲ ಪುಟದಲ್ಲಿ ಕಾಣುವ ಲಿಂಕ್‍ಗಳನ್ನು ಅತ್ಯಧಿಕ ಜನರು ಕ್ಲಿಕ್ ಮಾಡುತ್ತಾರೆ. ನಿಮ್ಮ ವೆಬ್ ತಾಣಕ್ಕೆ ಹೆಚ್ಚು ಜನರು ಭೇಟಿ ನೀಡಬೇಕಾದರೆ ಉತ್ತಮ ಎಸ್‍ಇಒ ತಂತ್ರವನ್ನು ನೀವು ಅಳವಡಿಸಿಕೊಳ್ಳಲೇಬೇಕು.
ಎಸ್‍ಇಒಗೆ ಸಖತ್ ಬೇಡಿಕೆ
ಈಗ ಬಹುತೇಕ ವ್ಯವಹಾರಗಳು ಆನ್‍ಲೈನ್ ಅನ್ನು ಅವಲಂಬಿಸಿವೆ. ಆನ್‍ಲೈನ್ ವ್ಯವಹಾರಕ್ಕಾಗಿ ವೆಬ್‍ಸೈಟ್‍ಗಳು ಪ್ರಮುಖವಾಗಿರುತ್ತವೆ. ಇಂಟರ್‍ನೆಟ್‍ನಲ್ಲಿಂದು ಕೋಟಿ ಕೋಟಿ ವೆಬ್‍ಸೈಟ್‍ಗಳಿವೆ. ಆನ್‍ಲೈನ್ ಮಾರುಕಟ್ಟೆಯಲ್ಲಿ ಗ್ರಾಹಕರು ಅಜ್ಞಾತವಾಗಿರುತ್ತಾರೆ. ಅಜ್ಞಾತ ಗ್ರಾಹಕರನ್ನು ತಮ್ಮ ಕಂಪನಿಗೆ ಸೆಳೆಯಲು ಪರಿಣಿತರ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ಆನ್‍ಲೈನ್‍ನಲ್ಲಿ ನೀವು ಗಿಫ್ಟ್ ಸೆಂಟರ್ ತೆರೆದಿದ್ದೀರಿ ಎಂದಿರಲಿ. ಯಾರಾದರೂ ಗಿಫ್ಟ್ ಇನ್ ಬೆಂಗಳೂರು ಎಂದು ಹುಡುಕಿದಾಗ ಸುಲಭವಾಗಿ ನಿಮ್ಮ ವೆಬ್‍ಸೈಟ್ ಅವರಿಗೆ ಕಾಣಿಸಬೇಕು. ಯಾವುದೇ ಆನ್‍ಲೈನ್ ವ್ಯವಹಾರದ ಪ್ರಮುಖ ಉದ್ದೇಶ ಹೆಚ್ಚಿನ ಗ್ರಾಹಕರಿಗೆ ತಲುಪುವುದಾಗಿದೆ. ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಮಾರ್ಕೆಟ್ ಮಾಡಲು ಎಸ್‍ಇಒ ಪರಿಣತಿ ನೆರವಾಗುತ್ತದೆ. ಅದಕ್ಕಾಗಿ ಎಸ್‍ಇಒ ಪರಿಣಿತರನ್ನು ಕಂಪನಿಗಳು ನೇಮಿಸಿಕೊಳ್ಳುತ್ತವೆ. ಭವಿಷ್ಯದಲ್ಲಿ ಆನ್‍ಲೈನ್ ವ್ಯವಹಾರ ಇನ್ನಷ್ಟು ಅಧಿಕಗೊಳ್ಳುವುದರಿಂದ ಇದು ಮುಂದೆಯೂ ಬೇಡಿಕೆಯಲ್ಲಿರಲಿರುವ ಜಾಬ್ ಆಗಿದೆ.
ಎಸ್‍ಇಒ ಕೋರ್ಸ್
ಎಸ್‍ಇಒ ಕಲಿಸುವ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳಿಂದು ಲಭ್ಯ ಇವೆ. ಮಾರಾಟ ಮತ್ತು ಮಾರುಕಟ್ಟೆ ವೃತ್ತಿಪರರು, ಉದ್ಯಮಿಗಳು, ವೆಬ್ ವಿನ್ಯಾಸ ಮತ್ತು ಅಭಿವೃದ್ಧಿ ವೃತ್ತಿಪರರು, ಕಂಟೆಂಟ್ ಬರಹಗಾರರು, ಎಸ್‍ಇಒ ಬಗ್ಗೆ ಅಷ್ಟಾಗಿ ತಿಳಿದಿರದ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಎಸ್‍ಇಒ ಉದ್ಯಮದಲ್ಲಿ ತಮ್ಮ ಕರಿಯರ್ ರೂಪಿಸಿಕೊಳ್ಳಲು ಬಯಸುವ ಯಾರೂ ಬೇಕಾದರೂ ಈ ಕೋರ್ಸ್ ಮಾಡಬಹುದಾಗಿದೆ.
ಎಲ್ಲ ಕಲಿಯಬಹುದು?
ಎಸ್‍ಇಒ ಮೂಲಭೂತ ಅಂಶಗಳನ್ನು ನೀವು ಇಂಟರ್‍ನೆಟ್‍ನಲ್ಲಿ ಕಲಿಯಿರಿ. ಅಂದರೆ, ಎಸ್‍ಇಒ ಬಗ್ಗೆ ಪಾಠ ಮಾಡುವ ಸಾಕಷ್ಟು ಉಚಿತ ಕೋರ್ಸ್‍ಗಳು ಇವೆ. ಅದಕ್ಕಾಗಿ ಫ್ರೀ ಎಸ್‍ಇಒ ಕೋರ್ಸ್ ಎಂದು ಗೂಗಲ್ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಹುಡುಕಾಡಿ. ಇಲ್ಲಿ ನಿಮ್ಮ ಜ್ಞಾನ ಹೆಚ್ಚಿಸಿಕೊಂಡ ನಂತರ ಯಾವುದಾದರೂ ಕ್ಲಾಸ್‍ರೂಂ ಅಥವಾ ಆನ್‍ಲೈನ್ ಕೋರ್ಸ್‍ಗಳಿಗೆ ಸೇರಬಹುದು. ನೀವಿರುವ ಊರಿಗೆ ಸಮೀಪದಲ್ಲಿ ಎಲ್ಲೆಲ್ಲಿ ಎಸ್‍ಇಒ ಕಲಿಕಾ ಕೇಂದ್ರಗಳಿವೆ ಎಂದು ಗೂಗಲ್‍ನಲ್ಲಿ ಹುಡುಕಾಟ ನಡೆಸಬಹುದು. ಆನ್‍ಲೈನ್ ಮೂಲಕ ಕಲಿಯಲು www.seocertification.org, www.simplilearn.com, www.digitalvidya.com, www.seotrainingpoint.com, www.inventateq.com ಮುಂತಾದ ವೆಬ್‍ಸೈಟ್‍ಗಳಿಗೆ ಭೇಟಿ ನೀಡಬಹುದು. ದುಬಾರಿ ದರ ಕೇಳುವ ಕಲಿಕಾ ಕೇಂದ್ರಗಳಿಂದ ದೂರವಿರಿ. ಅಲ್ಲಿರುವ ಸೌಲಭ್ಯ, ಫ್ಯಾಕಲ್ಟಿ ಗಮನಿಸಿ ಮುಂದುವರೆಯಿರಿ.
ವೆಬ್‍ಸೈಟ್ ಎಸ್‍ಇಒ ಟಿಪ್ಸ್
* ವೆಬ್‍ಸೈಟ್‍ನಲ್ಲಿ ಬಳಸಿರುವ ವಿಷಯಕ್ಕೆ ಸಂಬಂಧಪಟ್ಟ ಸಮರ್ಪಕ ಕೀವರ್ಡ್‍ಗಳನ್ನು ಬರೆಯಿರಿ.
* ನಿಮ್ಮ ವೆಬ್‍ಸೈಟ್‍ಗೆ ಬೇರೆ ಆಂತರಿಕ ಲಿಂಕ್‍ಗಳನ್ನು ಸೇರಿಸಿ.
* ವೆಬ್‍ಸೈಟ್ ಅನ್ನು ಸ್ಲೋ ಮಾಡುವ ಪ್ರತಿಯೊಂದು ಅಂಶವನ್ನು ತೆಗೆದುಬಿಡಿ.
* ಇಮೇಜ್ ಟೈಟಲ್, ಡಿಸ್ಕ್ರಿಪ್ಷನ್ ಇತ್ಯಾದಿಗಳಲ್ಲಿಯೂ ಕೀವರ್ಡ್‍ಗಳನ್ನು ಬಳಕೆ ಮಾಡಿ.
* ಇತರ ಪ್ರಮುಖ ವೆಬ್‍ಸೈಟ್‍ಗಳ ಲಿಂಕ್‍ಗಳನ್ನೂ ಸಂದರ್ಭಕ್ಕೆ ತಕ್ಕಂತೆ ನೀಡಿ.
* ಸಮಯಕ್ಕೆ ಸರಿಯಾಗಿ ವೆಬ್‍ಸೈಟ್ ಅನ್ನು ಅಪ್‍ಗ್ರೇಡ್ ಮಾಡುತ್ತಿರಿ.
* ಸರ್ಚ್ ಎಂಜಿನ್‍ಗಳಿಗೆ ನಿಮ್ಮ ವೆಬ್‍ಸೈಟ್ ಅನ್ನು ಇಂಡಕ್ಸ್ ಮಾಡಿ.
* ಆಗಾಗ ನಿಮ್ಮ ವೆಬ್‍ಸೈಟ್‍ನ ಡೊಮೇನ್ ಹೆಸರನ್ನು ಬದಲಾಯಿಸಬೇಡಿ.
* ವೆಬ್‍ಸೈಟ್‍ನಲ್ಲಿ ಮನುಷ್ಯರು ಬರೆದಂತೆ ಬರೆಯಿರಿ. ಯಂತ್ರ ಬರೆದಂತೆ ಬರೆಯದಿರಿ.
0 ಪ್ರತಿಕ್ರಿಯೆಗಳು: