Friday, 30 September 2016

ಮಂಗಳೂರು ಬಜ್ಜಿ: ಒಂದು ಗೋಳಿಬಜೆ ಪ್ರಸಂಗ

SHARE
ಮೊನ್ನೆ ಬಾನು ತೂತಾದ ಹಾಗೆ ಎರಡು ದಿನ ಬಿಡದೆ ಮಳೆ ಸುರಿಯಿತಲ್ಲ. ಆ ಸಂಜೆಯೊಂದರಲ್ಲಿ ನಾನು ಬಸವನಗುಡಿ ಪಕ್ಕ ಹಾದು ಹೋಗುತ್ತಿದ್ದೆ. ಹೊಟ್ಟೆ ಹಸಿವಿನಿಂದ ತಾಳ ಹಾಕುತ್ತಿತ್ತು. ಮಳೆ ಜೋರಿದ್ದಾಗ ಹಸಿವು ಜಾಸ್ತಿಯಾಗೋದ್ಯಾಕೆ ಅಂತ ಇನ್ನೂ ಅರ್ಥವಾಗಿಲ್ಲ. ಊರಲ್ಲಿಯಾದರೆ ಮಳೆಗೆ ತಿನ್ನಲು ಕುರುಕುರು ಹಲಸಿನ ಹಪ್ಪಳ ಇರುತ್ತಿತ್ತು. ಬೆಂಗಳೂರಲ್ಲಿ ಕುರುಕುರೇ, ಲೇಸ್ ಪ್ಯಾಕೇಟೇ ಗತಿ!


ಅಲ್ಲೇ ಪಕ್ಕದಲ್ಲಿದ್ದ ಹಳ್ಳಿತಿಂಡಿ ಹೋಟೆಲ್ ಪ್ರವೇಶಿಸಿದಾಗ ನನ್ನ ಗಮನಸೆಳೆದದ್ದು ಗೋಳಿಬಜೆ, ಅಂದ್ರೆ ಮಂಗಳೂರು ಬಜ್ಜಿ. ಒಂದನೊಂದು ಕಾಲದಲ್ಲಿ ಅದು ನನ್ನ ಫೇವರಿಟ್ ಡಿಶ್. ಬೆಂಗಳೂರಲ್ಲಿ ಅಪರೂಪಕ್ಕೆಂಬಂತೆ ಅಲ್ಲೊಂದು ಇಲ್ಲೊಂದು ಹೋಟೆಲ್ ನಲ್ಲಿ ಗೋಳಿಬಜೆ ಸಿಗುತ್ತೆ. ಹಾಗೆ ಒಂದು ಪ್ಲೇಟ್ ಮಂಗಳೂರು ಬಜ್ಜಿ ತಿಂದು ಮನೆ ಕಡೆ ಹೊರಟವನಿಗೆ ಯಾಕೋ ಗೋಳಿಬಜೆಯ ಆ ದಿನಗಳು ನೆನಪಾದವು.

ಪೆರ್ನಾಜೆಯಲ್ಲಿ ಹೈಸ್ಕೂಲ್ ಓದುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಸಂಕಪ್ಪಣ್ಣನ ಹೋಟೆಲ್ ಇತ್ತು. ಬುತ್ತಿ ತರದವತ್ತು ಕಿಸೆಯಲ್ಲಿ ಐದ್ರೂಪಾಯಿ ಇಟ್ಟುಕೊಂಡು ಅಲ್ಲಿಗೆ ಹೋಗಿ ಒಂದು ಪ್ಲೇಟ್ ಗೋಳಿಬಜೆ ತಿನ್ನುತ್ತಿದ್ದೆ. ಕ್ರಮೇಣ ಬುತ್ತಿ ತರೋದೆ ನಿಲ್ಲಿಸಿಬಿಟ್ಟೆ. ಬೇಯಿಸಿದ ಕಡಲೆಯ ನೀರಿಗೆ ಉಪ್ಪು, ಮಸಾಲ ಹಾಕಿ ಅದನ್ನೇ ಸಾಂಬಾರು ತರಹ ನೀಡುತ್ತಿದ್ದರು. ಅದರಲ್ಲಿ ಗೋಳಿಬಜೆ ಮುಳುಗಿಸಿ ತಿಂದರೆ ಸಕತ್ ಟೇಸ್ಟು.

ಐದ್ರೂಪಾಯಿಗೆ ಲೆಕ್ಕಮಾಡಿ ಐದು ಗೋಳಿಬಜೆ ಸಿಗುತ್ತಿತ್ತು. ಅಷ್ಟು ದುಡ್ಡಿಗೆ ಮನೆಯಲ್ಲೇ ಐವತ್ತಕ್ಕೂ ಹೆಚ್ಚು ಗೋಳಿಬಜೆ ಮಾಡಬಹುದಂತ ಸ್ನೇಹಿತ ಸುನಿಲ ಹೇಳಿದ್ದು ಕಿವಿಗೆ ಹುಳಬಿಟ್ಟಂತಾಗಿತ್ತು. ಅದೊಂದು ದಿನ ಮನೆಯಲ್ಲೇ ಗೋಳಿಬಜೆ ಮಾಡಲು ನಾನು, ಮಾಮನ ಮಗ ಸೇರಿ ಸ್ಕೆಚ್ ಹಾಕಿದೆವು.

ಅಂದು ಮನೆಯಲ್ಲಿ ಯಾರೂ ಇರಲಿಲ್ಲ. ನಾನು, ಮಾಮನ ಮಗ ಮಾತ್ರ. ಆಗ ಕಣ್ಣಿಗೆ ಬಿದ್ದದ್ದು ದೇವರಕೋಣೆಯಲ್ಲಿ ದೊಡ್ಡ ಬಿಳಿಕ್ಯಾನ್ ನಲ್ಲಿಟ್ಟಿದ್ದ ತೆಂಗಿನ ಎಣ್ಣೆ. ತಕ್ಷಣ ನನಗೆ ಸಂಕಪ್ಪಣ್ಣನ ಹೋಟೆಲ್ ಗೋಳಿಬಜೆ ನೆನಪಾಯಿತು. ಅದನ್ನುಅವನಿಗೆ ಹೇಳಿದ್ದೇ ತಡ, ಅದು ಸುಲಭ. ಮೈದಾ ಇದ್ರೆ ಆಯ್ತು ಅಂದ.

ತಕ್ಷಣ ಪಕ್ಕದ ಅಜ್ಮಿರ್ ನ ಅಂಗಡಿಯಿಂದ ಐದ್ರೂಪಾಯಿಯ ಮೈದಾ ತಂದಾಯ್ತು. ಅದಕ್ಕೆ ಸ್ವಲ್ಪ ಉಪ್ಪು ಮತ್ತು ನೀರು ಹಾಕಿ ಮಿಕ್ಸ್ ಮಾಡಿದೆವು. ಅದು ದೋಸೆ ಹಿಟ್ಟಿನಂತೆ ನೀರಾಯಿತು. ಏನ್ಮಾಡೋದು? ಮತ್ತೆ ಐದ್ರೂಪಾಯಿಯ ಮೈದಾ ತಂದೆವು.

ಗಟ್ಟಿಯಾದ ಹಿಟ್ಟನ್ನು ಚಿಕ್ಕಚಿಕ್ಕ ಉಂಡೆ ಮಾಡಿ ಲೆಕ್ಕ ಮಾಡಿದೆವು. 33 ಉಂಡೆ ಆಗಿದ್ದವು. ಹತ್ರೂಪಾಯಿಗೆ ಇಷ್ಟೊಂದು ಗೋಳಿಬಜೆ ವಾಹ್! ನಾಲಗೆಯಲ್ಲಿ ನೀರು ಜಿನುಗುತ್ತಿತ್ತು. ಅರ್ಧ ಲೀಟರ್ ನಷ್ಟು ತೆಂಗಿನ ಎಣ್ಣೆಯನ್ನು ಬಾಣಲೆಗೆ ಹಾಕಿದೆವು. ಅದು ಸಾಕಾಗದು ಎಣಿಸಿ ಮತ್ತೆ ಸ್ವಲ್ಪ ಎಣ್ಣೆ ಹಾಕಿದೆವು. ಮೈಕೈ ಪೂರ್ತಿ ಬಿಳಿಬಿಳಿ ಹಿಟ್ಟಿನ ಕಲೆಗಳಿದ್ದವು. ನೆಲದಲ್ಲೂ ಅಲ್ಲಲ್ಲಿ ಹಿಟ್ಟು ಬಿದ್ದಿತ್ತು. ಒಟ್ಟಾರೆ ಅಡುಗೆ ಮನೆ ಪೂರ್ತಿ ಸುಣ್ಣ ಚೆಲ್ಲಿದಂತೆ ಇತ್ತು.

ಎಣ್ಣೆ ಬಿಸಿಯಾದಗ ಉಂಡೆ ಉಂಡೆ ಹಿಟ್ಟು ಹಾಕಿದೆವು. ಎಣ್ಣೆಮೇಲಿದ್ದ ಗೋಳಿಬಜೆಗಳನ್ನು ಆಸೆಯಿಂದ ನೋಡತೊಡಗಿದೆವು. ಯಾಕೋ ಸಂಕಪ್ಪಣ್ಣನ ಹೋಟೆಲ್ ಗೋಳಿಬಜೆಯ ಬಣ್ಣಬರಲೇ ಇಲ್ಲ. ಬಣ್ಣ ಯಾವುದಾದರೇನು ಅಂದುಕೊಂಡು ರೆಡಿಯಾದ ಗೋಳಿಬಜೆಯನ್ನು ಬಾಯಿಗೆ ಹಾಕಿನೋಡಿದೆ. ಕಲ್ಲಿನಷ್ಟು ಗಟ್ಟಿಯಾಗಿತ್ತು. ರುಚಿನೇ ಇರಲಿಲ್ಲ. ಗುಡ್ಡಪ್ಪಣ್ಣನ ಹೋಟೆಲ್ ನಲ್ಲಿ ಸ್ಪಾಂಜ್ ತರಹ ಮೃದುವಾದ ಗೋಳಿಬಜೆ ಇರುತ್ತಿತ್ತು.

ತಕ್ಷಣ ಅಂಗಡಿಗೆ ಹೋಗಿ ಮೆಲ್ಲಗೆ ಅಜ್ಮಿರ್ ಬಳಿ ಗೋಳಿಬಜೆ ಮಾಡೋದು ಹೇಗೆ ಅಂತ ಕೇಳಿದೆವು. ಅದಕ್ಕೆ ಕಡ್ಲೆ ಪುಡಿನೂ ಬೇಕು ಅಂತ ಗೊತ್ತಾಯ್ತು. ಮೂರು ರುಪಾಯಿ ಕಡ್ಲೆ ಹುಡಿ ತಂದು ಅದನ್ನೂ ಮಿಕ್ಸ್ ಮಾಡಿದೆವು. ಮತ್ತೊಂದು ಸುತ್ತು ಹಿಟ್ಟಿನ ಉಂಡೆಗಳನ್ನು ಎಣ್ಣೆಗೆ ಹಾಕಿದೆವು. ತೆಗೆದು ನೋಡಿದಾಗ ಮತ್ತೆ ಗಟ್ಟಿಗಟ್ಟಿಯಾಗಿತ್ತು.

ಆಗ ಮಾಮನ ಮಗನಿಗೆ ಸೋಡಾ ಹಾಕಿದಾಗ ಮೃದುವಾಗುವ ಇಡ್ಲಿ ಸಿದ್ದಾಂತ ನೆನಪಾಯಿತು. ತಕ್ಷಣ ಅಡುಗೆಮನೆ ಅಟ್ಟದಲ್ಲಿ ಸೋಡಾದ ಹುಡಿ ಹುಡುಕಿದೆವು. ಕೊನೆಗೂ ಸಿಕ್ತು. ಮೈಕೈನಲ್ಲಿ ಕೊಂಚ ಮಸಿಯೂ ಆಗಿತ್ತು. ಸೋಡಾ ಹಾಕಿ ಮಾಡಿದ ಗೋಲಿಬಜೆ ಕೊಂಚ ಮೃದುವಾಗಿತ್ತು. ಜಾಸ್ತಿ ಸ್ಮೂತ್ ಆಗಲಿ ಅಂತ ಆತ ಸ್ವಲ್ಪ ಜಾಸ್ತಿನೇ ಸೋಡಾ ಪುಡಿ ಹಾಕಿದೆವು. ಮತ್ತೆ ರೆಡಿಯಾದ ಗೋಲಿ ಬಜೆ ಕಹಿಕಹಿಯಾಗಿತ್ತು. ಇಷ್ಟು ಮಾಡುವ ಹೊತ್ತಿಗೆ ಸಂಜೆ ಆಗಿತ್ತು.

ವಾಪಸ್ ಬಂದ ಅಮ್ಮನಿಗೆ ಮನೆ ಅವಸ್ಥೆ ನೋಡಿ ಏನಾನಿಸಿತೋ, ಒಂದು ಲೀಟರ್ ತೆಂಗಿನ ಎಣ್ಣೆ ವ್ಯರ್ಥವಾದ ಚಿಂತೆ ಬೇರೆ. ಅಪ್ಪ ಬರ್ಲಿ, ನಿಂಗೆ ಕಾದಿದೆ ಅಂದ್ರು. ನನಗೆ ಭಯ ಶುರು ಆಯ್ತು. ಮಾಮನ ಮಗ ಎಸ್ಕೇಪ್ ಆಗಿದ್ದ. ಅಷ್ಟೊತ್ತಿಗೆ ನನಗೆ ಹೊಟ್ಟೆನೋವು ಆರಂಭವಾಗಿತ್ತು. ಹೊಟ್ಟೆನೋವು ನೆಪದಿಂದ ಅಪ್ಪನ ಬೈಗುಳ ತಪ್ಪಿತ್ತು.

ಮರುದಿನ ಅಪ್ಪ ಭಟ್ರ ಹೋಟೆಲ್ ನಿಂದ ಗೋಳಿಬಜೆ ತಂದು ಕೊಟ್ರು :-) ನಂತ್ರ ಕೆಲವು ಸಮಯದ ನಂತರ ನಾನು ಅಪ್ಪ, ಅಮ್ಮ ಸೇರಿ ಮನೆಯಲ್ಲಿ ಗೋಳಿಬಜೆ ಮಾಡಿದೆವು. ಅದಕ್ಕೆ ಬಾಳೆಹಣ್ಣು ಸಹ ಹಾಕಿದ್ದರಿಂದ ಸ್ವೀಟಾಗಿತ್ತು........

(ಗೋಳಿಬಜೆ ಮಾಡೋದು ಹೀಗೆ: 4 ಕಪ್ಪು ಮೈದಾಹಿಟ್ಟು, ಅರ್ಧಕಪ್ ಕಡಲೇ ಹಿಟ್ಟು, ಕೊಂಚ ಅಡುಗೆ ಸೋಡ ಮತ್ತು ರುಚಿಗೆ ತಕ್ಕಷ್ಟು ಉಪ್ಪು, ಹಸಿಮೆಣಸಿನ ಕಾಯಿ 3-4 ಮತ್ತು ಬಾಣಲೆಯಲ್ಲಿ ಗೋಳಿಬಜೆ ಮುಳುಗುವಷ್ಟಾದರೂ ಎಣ್ಣೆ ಬಾಣಲೆಯಲ್ಲಿ ಇರಬೇಕು.

ಮೈದಾಹಿಟ್ಟು, ಕಡಲೇ ಹಿಟ್ಟು, ಸ್ವಲ್ಪ ಸೋಡಾ ಎಲ್ಲವನ್ನು ಕೊಂಚ ನೀರು ಹಾಕಿ ಮಿಕ್ಸ್ ಮಾಡಿ ಕಲಸಬೇಕು. ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ. ಸ್ವೀಟಾಗಬೇಕು ಅಂದರೆ ಸ್ವಲ್ಪ ಸಕ್ಕರೆ ಅಥವಾ ಒಂದೆರಡು ಬಾಳೆಹಣ್ಣು ಹಾಕಬಹುದು. ಇವೆಲ್ಲ ಹಾಕಿ ರೆಡಿಯಾದ ಹಿಟ್ಟನ್ನು ಉಂಡೆ ಮಾಡಿ ಕಾದ ಎಣ್ಣೆಗೆ ಹಾಕಿ. ಗೋಳಿಬಜೆ ರೆಡಿ :-) )
SHARE

Author: verified_user

0 ಪ್ರತಿಕ್ರಿಯೆಗಳು: