Showing posts with label Career. Show all posts
Showing posts with label Career. Show all posts

Tuesday, 21 November 2017

ವಿಲಾಸ್ ನಾಯಕ್ ಸಂದರ್ಶನ: ಕಲೆ ಎಂಬ ಕರಿಯರ್

ವಿಲಾಸ್ ನಾಯಕ್ ಸಂದರ್ಶನ: ಕಲೆ ಎಂಬ ಕರಿಯರ್

ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ಬಿಟ್ಟು ಕಲೆಯನ್ನೇ ಕರಿಯರ್ ಆಗಿ ಸ್ವೀಕರಿಸಿ ದೇಶ-ವಿದೇಶಗಳಲ್ಲಿ ಮಿಂಚುತ್ತಿದ್ದಾರೆ ಕರ್ನಾಟದ ಪ್ರತಿಭೆ ವಿಲಾಸ್ ನಾಯಕ್. ಕಲೆಯನ್ನು ಪೂರ್ಣಕಾಲಿಕ ಅಥವಾ ಅರೆಕಾಲಿಕ ಕರಿಯರ್ ಆಗಿ ಸ್ವೀಕರಿಸಲು ಬಯಸುವವರಿಗೆ ಸ್ಪೂರ್ತಿ ತುಂಬುವ ಟಿಪ್ಸ್‍ಗಳನ್ನು ವಿಕೆ ಮಿನಿ ವಿಶೇಷ ಸಂದರ್ಶನದಲ್ಲಿ ಅವರು ನೀಡಿದ್ದಾರೆ.

* ಪ್ರವೀಣ ಚಂದ್ರ ಪುತ್ತೂರು
ರಾಷ್ಟ್ರಮಟ್ಟದ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಚಕಚಕನೆ ಕೆಲವೇ ನಿಮಿಷದಲ್ಲಿ ಪೇಂಟಿಂಗ್ ಬಿಡಿಸಿ ಬೆರಗುಗೊಳಿಸುವ ವಿಲಾಸ್ ನಾಯಕ್ ಬಗ್ಗೆ ನಿಮಗೆ ಗೊತ್ತಿರಬಹುದು. ಈಗ ಅವರು ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಬೇಡಿಕೆ ಪಡೆದಿರುವ ಸ್ಪೀಡ್ ಪೇಂಟರ್.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ಸಿಂಗಾಪುರದ ಅಧ್ಯಕ್ಷರ ಚಾರಿಟಿ ಶೋನಲ್ಲಿ, ಏಷ್ಯಾ ಗಾಟ್ ಟಾಲೆಂಟ್‍ನಲ್ಲಿ, ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸೇರಿದಂತೆ ನೂರಾರು ಕಡೆ ಸ್ಪೀಡ್ ಪೇಂಟಿಗೆ ನಡೆಸಿ ಜನರ ಮುಖದಲ್ಲಿ ಅಚ್ಚರಿ ಹುಟ್ಟಿಸಿದ್ದಾರೆ. ಅಬ್ದುಲ್ ಕಲಾಂ, ಸಚಿನ್ ತೆಂಡೂಲ್ಕರ್, ನರೇಂದ್ರ ಮೋದಿ, ಪ್ರಣಬ್ ಮುಖರ್ಜಿ , ಪುಟ್ಬಾಲ್ ದಂತಕತೆ ಪೀಲೆ ಮುಂತಾದವರ ಮುಂದೆ ತನ್ನ ಕಲೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.
ಕೆಲವು ವರ್ಷದ ಹಿಂದೆ ಅವರು ಕಾಪೆರ್Çರೇಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಐದು ವರ್ಷದ ಹಿಂದೆ ಎಚ್‍ಆರ್ ಹುದ್ದೆಯನ್ನು ಬಿಟ್ಟ ಇವರ ಈಗಿನ ಕಲಾ ಕರಿಯರ್‍ನ ಸಕ್ಸಸ್ ಸ್ಟೋರಿ ಅಚ್ಚರಿ ಹುಟ್ಟಿಸುವಂತದ್ದು. ವಿವಿಧ ಹವ್ಯಾಸ, ಪ್ರತಿಭೆಯನ್ನು ಹೊಂದಿದ್ದು, ಇಷ್ಟವಿಲ್ಲದ ಇಷ್ಟವಿಲ್ಲದ ವೃತ್ತಿಯಲ್ಲಿ ಜೀವನ ಸವೆಸುತ್ತಿರುವವರಿಗೆ, ಪ್ರತಿಭೆಯನ್ನು ವೃತ್ತಿಯಾಗಿ ಸ್ವೀಕರಿಸಲು ಬಯಸುವವರಿಗೆ ಅಮೂಲ್ಯ ಸಲಹೆಗಳನ್ನು ವಿಲಾಸ್ ಇಲ್ಲಿ ನೀಡಿದ್ದಾರೆ.
ಶಿಕ್ಷಣ ಮತ್ತು ಕೆಲಸ
ಉಜಿರೆಯಲ್ಲಿ ಬಿಎ ಪದವಿ (7ನೇ ರ್ಯಾಂಕ್), ಮೈಸೂರು ವಿವಿಯಲ್ಲಿ ಎಂಎಸ್‍ಡಬ್ಲ್ಯು ಪದವಿ(2ನೇ ರ್ಯಾಂಕ್) ಕನ್ನಡ ಮುಕ್ತ ವಿವಿಯಲ್ಲಿ ಪಿಜಿಡಿಎಚ್‍ಆರ್‍ಎಂ ಓದಿದ್ದೆ. ಶಿಕ್ಷಣ ಮುಗಿದ ನಂತರ ನಾನು ಶಾಹಿ ಎಕ್ಸ್‍ಪೆÇೀರ್ಟ್ ಕಂಪನಿಯಲ್ಲಿ 1 ವರ್ಷ, 2 ತಿಂಗಳು ಕೆಲಸ ಮಾಡಿದೆ. ನಂತರ ಐಬಿಎಂನ ಮಾನವ ಸಂಪನ್ಮೂಲ ವಿಭಾಗದಲ್ಲಿ ಸುಮಾರು ನಾಲ್ಕೂವರೆ ವರ್ಷ ಕೆಲಸ ಮಾಡಿದೆ. ಹೀಗೆ ಎಂಎನ್‍ಸಿ ಕಂಪನಿಯಲ್ಲಿ ಸುಮಾರು 6 ವರ್ಷ ಕೆಲಸ ಮಾಡಿದ್ದೆ.

ಕೆಲಸದಲ್ಲಿ ಕಲೆಯ ಗುಂಗು
ಆಫೀಸ್‍ನಲ್ಲಿ ಕೆಲಸ ಮಾಡುವಾಗ, ಮನೆಯಲ್ಲಿ ಒಬ್ಬನೇ ಇದ್ದಾಗ, ಚಿತ್ರ ಬಿಡಿಸಿಕೊಂಡಿರುವಾಗ, ಟ್ಯಾಲೆಂಟ್ ಮ್ಯಾನೇಜ್‍ಮೆಂಟ್ ಕುರಿತು ತಿಳುವಳಿಕೆ ಬಂದ ಸಂದರ್ಭದಲ್ಲಿ ನಾನು ನನ್ನ ಬಗ್ಗೆ ಹೆಚ್ಚು ಯೋಚಿಸಲು ಆರಂಭಿಸಿದ್ದೆ. ನಾನು ನನ್ನ ಪ್ರತಿಭೆಯನ್ನು ಏನು ಮಾಡುತ್ತಿದ್ದೇನೆ? ಯಾವ ರೀತಿ ಬಳಕೆ ಮಾಡುತ್ತಿದ್ದೇನೆ? ಯಾಕೆ ವ್ಯರ್ಥ ಮಾಡುತ್ತಿದ್ದೇನೆ? ಇತ್ಯಾದಿ ಚಿಂತನೆಗಳನ್ನು ಮಾಡುತ್ತಿದ್ದೆ. ಇರುವ ಒಂದು ಜೀವನದಲ್ಲಿ ದೇವರು ನಮಗೆ ನೀಡಿರುವ ಪ್ರತಿಭೆಯನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಬೇಕು ಎಂದೆನಿಸಿತ್ತು. ನಾನು ನನ್ನ ಪ್ರತಿಭೆಯನ್ನಿಟ್ಟುಕೊಂಡು ಏನಾದರೂ ಸಾಧನೆ ಮಾಡಬೇಕು ಎಂದೆಲ್ಲ ಯೋಚಿಸುತ್ತಿದ್ದೆ. ಕೆಲಸ ಮುಗಿಸಿ ಮನೆಗೆ ಬಂದು ರಾತ್ರಿಯಿಡಿ ಚಿತ್ರ ಬಿಡಿಸುತ್ತ ಮುಂಜಾನೆ 3-4 ಗಂಟೆಯವರೆಗೆ ಇದೇ ಆಲೋಚನೆಯಲ್ಲಿ ಇರುತ್ತಿದ್ದೆ. ಕೆಲಸ ಮಾಡುವಾಗಲೂ ಮುಂದೆ ಏನಾಗಬೇಕು ಎಂಬ ಪರಿಕಲ್ಪನೆ ಮಾಡುತ್ತಿದ್ದೆ.
ಕೆಲಸ ಬಿಡುವ ರಿಸ್ಕ್
ಕೆಲಸ ಬಿಡಲು ತೆಗೆದುಕೊಳ್ಳುವ ನಿರ್ಧಾರ ಮತ್ತು ಕೆಲಸ ಬಿಟ್ಟ ನಂತರ ಕಲೆಯ ಕಡೆಗೆ ಪೂರ್ತಿ ತೊಡಗಿಸಿಕೊಳ್ಳುವುದು ಕೊಂಚ ಸವಾಲಿನ ಸಂಗತಿ. ಆ ಸಮಯದಲ್ಲಿ ಬಹಳಷ್ಟು ಜನರು ಉತ್ಸಾಹ ಕುಗ್ಗಿಸುವ ಮಾತುಗಳನ್ನಾಡುತ್ತಿದ್ದರು. ರಿಯಾಲಿಟಿ ಶೋನಲ್ಲಿ ಜನಪ್ರಿಯತೆ ಪಡೆದ ತಕ್ಷಣ ಕರಿಯರ್ ಹಾಳು ಮಾಡಿಕೊಳ್ಳಬೇಡಿ. ಇಂತಹ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಬಹಳಷ್ಟು ಜನರು ಹೇಳುತ್ತಿದ್ದರು. ಆದರೆ, ನಾನೂ ಆದಾಗಲೇ ರಿಸ್ಕ್ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಾಗಿತ್ತು.
 ಜೀವನದಲ್ಲಿ ನಾಳೆ ಏನಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಯಾಕೆ, ಒಂದು ಖಾಯಂ ಉದ್ಯೋಗಕ್ಕೆ ಅಂಟಿಕೊಂಡು ನಮ್ಮ ಪ್ಯಾಷನ್ ಅನ್ನು ಬಿಡಬೇಕು? ಯಾಕೆ ನಮ್ಮ ಕನಸನ್ನು ಸಾಯಿಸಬೇಕು ಎಂದು ಅನಿಸಿದ್ದರಿಂದ ಎಂಎನ್‍ಸಿ ಜಾಬ್‍ಗೆ ರಿಸೈನ್ ಮಾಡಿದ್ದೆ.
ಸರಿಯಾದ ಪ್ಲಾನ್ ಅಗತ್ಯ
ನಾನು ಎಂಎನ್‍ಸಿ ಕಂಪನಿಗೆ ರಾಜೀನಾಮೆ ನೀಡಿ ಈ ತಿಂಗಳಿಗೆ ಐದು ವರ್ಷವಾಗುತ್ತದೆ. ಇಲ್ಲಿಯವರೆಗೆ ಯಾವುದೇ ಸಮಸ್ಯೆಯಾಗಿಲ್ಲ. ಯಾಕೆಂದರೆ, ಕೆಲಸ ಬಿಡುವ ಕುರಿತು ಮತ್ತು ಕಲೆಯನ್ನು ಕರಿಯರ್ ಆಗಿ ಸ್ವೀಕರಿಸುವ ಕುರಿತು ನಾನು ಸರಿಯಾದ ಪ್ಲಾನ್ ಮಾಡಿದ್ದೆ. ನಾನು ಮಾಡುವುದು ಎಕ್ಸ್‍ಕ್ಲೂಸಿವ್ ಆರ್ಟ್ ಆಗಿರುವ ಕಾರಣ ಅವಕಾಶಗಳು ಸಿಗುತ್ತದೆ ಎನ್ನುವ ಭರವಸೆ ಇತ್ತು. ಈಗ ನನಗೆ ಬರುತ್ತಿರುವ ಹೆಚ್ಚು ಅವಕಾಶವನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ನನ್ನ ಮುಂದಿರುವ ಅತ್ಯುತ್ತಮ ರೀತಿಯ ಸವಾಲಾಗಿದೆ.
ಹೊಸ ಬಗೆಯ ಉದ್ಯೋಗಾವಕಾಶ
ನೀನು ಡಾಕ್ಟರ್ ಆಗು, ಎಂಜಿನಿಯರ್ ಆಗು, ಆರ್ಟಿಸ್ಟ್ ಆಗಿ ಏನು ಮಾಡ್ತಿಯಾ? ಸ್ಟಾಂಡ್ ಅಪ್ ಕಮಿಡಿಯನ್ ಆಗಿ, ಡಿಜೆ ಆಗಿ ಏನು ಮಾಡ್ತಿಯಾ? ಎಂದು ಹೇಳುವವರಿದ್ದಾರೆ. ಆದರೆ, ಇದೆಲ್ಲ ಹೊಸ ಬಗೆಯ ಉದ್ಯೋಗ ಮತ್ತು ಹವ್ಯಾಸಗಳು. ಇಂತಹ ಕಲೆಗಳನ್ನು ವೃತ್ತಿಯಾಗಿ ಸ್ವೀಕರಿಸಿ ಉತ್ತಮ ದುಡಿಮೆ ಮಾಡಬಹುದು ಎನ್ನುವುದಕ್ಕೆ ನನ್ನ ಬದುಕೇ ಸಾಕ್ಷಿ. ನನಗೂ ಎಷ್ಟೋ ಸಾರಿ ಅನಿಸಿದೆ, ನಾನು ಈಗಲೂ ಎಂಎನ್‍ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನನ್ನ ಆರ್ಥಿಕ ಪರಿಸ್ಥಿತಿ ಹೀಗೆ ಇರುತ್ತಿತ್ತಾ ಎಂದು.

ಆರ್ಥಿಕತೆಯೂ ಉತ್ತಮ
ಪ್ರತಿಭೆ ಕೈ ಹಿಡಿದರೆ ಆರ್ಥಿಕವಾಗಿಯೂ ಉತ್ತಮಗೊಳ್ಳಬಹುದು. ನಾನು ಇನ್ನೂ ಎಂಎನ್‍ಸಿ ಕಂಪನಿಯಲ್ಲೇ ಇರುತ್ತಿದ್ದರೆ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಲು ಸಾಧ್ಯವಿರಲಿಲ್ಲ. ಕಲೆಯನ್ನು ಕರಿಯರ್ ಆಗಿ ಸ್ವೀಕರಿಸಿದ ಎರಡೂವರೆ ವರ್ಷದಲ್ಲಿಯೇ ಬೆಂಗಳೂರಿನಲ್ಲಿ ನಾನು ಸ್ವಂತ ಮನೆ ಮಾಡಿದ್ದೇನೆ. (ಇವರ ಚಿತ್ರಕಲೆಯಿಂದ ಸಂಗ್ರಹಗೊಂಡಿರುವ 20 ಮಿಲಿಯನ್‍ಗೂ ಹೆಚ್ಚು ಡಾಲರ್‍ಗಳು ಸಮಾಜ ಸೇವೆಗೆ ಬಳಕೆಯಾಗಿದೆ) .
ಸ್ಪೀಡ್ ಪೇಂಟಿಂಗ್ ಮತ್ತು ಫೈನ್ ಆಟ್ರ್ಸ್: ಈಗ ನನಗೆ ಹೆಚ್ಚು ಪ್ರಮಾಣದಲ್ಲಿ ಸ್ಪೀಡ್ ಪೇಂಟಿಂಗ್ ಆಫರ್ ಬರುತ್ತಿದೆ. ಎಷ್ಟೇಂದರೆ, ನನ್ನ ಫೈನ್ ಆಟ್ರ್ಸ್ ಕುರಿತು ಗಮನಕೊಡಲಾಗದಷ್ಟು. ಈಗಾಗಲೇ 26 ದೇಶ ಸುತ್ತಿದ್ದೇನೆ. ಸ್ಟೇಜ್‍ನಲ್ಲಿ ನಿಂತು ವೇಗವಾಗಿ ಮಾಡುವ ಸ್ಪೀಡ್ ಪೇಂಟಿಂಗ್ ಮತ್ತು ಮನೆಯಲ್ಲಿ ಕುಳಿತು ಸಾವಧಾನವಾಗಿ ರಚಿಸುವ ಫೈನ್ ಆಟ್ರ್ಸ್ ಅನ್ನು ಬ್ಯಾಲೆನ್ಸ್ ಮಾಡುವುದು ನನ್ನ ಮುಂದಿರುವ ಸವಾಲಾಗಿದೆ. ಇದಕ್ಕಾಗಿ ಎಷ್ಟೋ ಸ್ಪೀಡ್ ಪೇಂಟಿಂಗ್ ಶೋಗಳಿಗೆ ಒಪ್ಪಿಗೆ ನೀಡದೆ ಸಮತೋಲನ ಕಾಯ್ದುಕೊಳ್ಳುತ್ತಿದ್ದೇನೆ.



ವೃತ್ತಿ ಮತ್ತು ಪ್ರವೃತ್ತಿ ಜೊತೆಜೊತೆಗೆ
ಕರಿಯರ್ ಜೊತೆ ಹವ್ಯಾಸವನ್ನೂ ಜೊತೆಜೊತೆಯಾಗಿ ನಿಭಾಯಿಸುವವರು ಸಾಕಷ್ಟು ಜನರು ಇದ್ದಾರೆ. ನಾನು ಎಂಎನ್‍ಸಿಯಲ್ಲಿದ್ದಾಗ ಇವೆರಡನ್ನು ಜೊತೆಜೊತೆಯಾಗಿಯೇ ಮಾಡಿದ್ದೆ. ಆದರೆ, ಇದರ ಒಂದು ಅವಗುಣ ಎಂದರೆ ನಮಗೆ ಹವ್ಯಾಸಕ್ಕಾಗಿ ಸಿಗುವ ಸಮಯ ತೀರ ಅತ್ಯಲ್ಪ. ನಿಮ್ಮ ಹವ್ಯಾಸವೇ ಪೂರ್ತಿ ಕರಿಯರ್ ಆದರೆ ನಿಮಗೆ ವರ್ಷದ 345 ದಿನವೂ ದೊರಕುತ್ತದೆ. ನಿಮ್ಮ ಕನಸನ್ನು ಬೇಗ ಈಡೇರಿಸಿಕೊಳ್ಳಬಹುದು.


ಕನಸನ್ನು ಚೇಸ್ ಮಾಡಿ
ನೀವು ನಿಮ್ಮ ಕನಸನ್ನು ಫಾಲೊ ಮಾಡಿ. ನಿಮ್ಮ ಕನಸನ್ನು ಸರಿಯಾಗಿ ಹಿಂಬಾಲಿಸಿ. ಇದಕ್ಕೆ ಸರಿಯಾಗಿ ಪ್ಲಾನ್ ಮಾಡಿ, ಕಷ್ಟಪಟ್ಟು ದುಡಿದರೆ ನಂತರ ಹಣ, ಫೇಮ್ ಎಲ್ಲವೂ ನಿಮ್ಮನ್ನು ಫಾಲೊ ಮಾಡುತ್ತೆ.
ಎಂಎನ್‍ಸಿಯಿಂದ ಕಲಿತ ಪಾಠ
ಕಾಪೆರ್Çರೇಟ್ ಜಗತ್ತಿನಲ್ಲಿ ನಾನು ಕಲಿತ ಪಾಠಗಳು ನನ್ನ ಕಲಾ ಕರಿಯರ್‍ಗೆ ಸಾಕಷ್ಟು ನೆರವಾಗಿದೆ. ನನ್ನ ಹಳೆಯ ಸ್ನೇಹಿತರು ಟೀವಿ ಸಂದರ್ಶನಗಳಲ್ಲಿ ಮಾತನಾಡುವುದನ್ನು ನೋಡುವಾಗ `ನಾವು ನೋಡಿದ ಹಳೆಯ ವಿಲಾಸ್ ಇವನೇನಾ?' ಎಂದು ಅಚ್ಚರಿಗೊಳ್ಳುತ್ತಾರೆ. ಜನರೊಂದಿಗೆ ಹೇಗೆ ಸಂವಹನ ನಡೆಸಬೇಕೆಂದು, ಸ್ಟೇಜ್‍ನಲ್ಲಿ ಹೇಗೆ ಮಾತನಾಡಬೇಕೆಂಬ ಕೌಶಲ ನನ್ನಲ್ಲಿ ಬಹಳಷ್ಟು ಕಡಿಮೆ ಇತ್ತು. ಫೇಸ್ ಟು ಫೇಸ್ ಕಮ್ಯುನಿಕೇಷನ್, ಇಮೇಲ್ ಕಮ್ಯುನಿಕೇಷನ್, ಸ್ಟೇಜ್ ಪ್ರಸಂಟೇಷನ್ ಇತ್ಯಾದಿಗಳನ್ನು ಕಾಪೆರ್Çರೇಟ್ ಜಗತ್ತು ನನಗೆ ಕಲಿಸಿಕೊಟ್ಟಿದೆ. ಅಲ್ಲಿ ಕಲಿತ ಪಾಠಗಳು ನನಗೆ ದೇಶ ವಿದೇಶಗಳಿಂದ ಬೇರೆ ಬೇರೆ ಸಂಘಟಕರಿಂದ ಆಫರ್ ಬಂದಾಗ, ಕೋ ಆರ್ಡಿನೇಟ್ ಮಾಡಲು, ಚಾರಿಟಿ ಶೋಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸಲು, ಆಫರ್‍ಗಳ ಕುರಿತು ನೆಗೋಸಿಯೇಷನ್ ಮಾಡಲು ಸಾಕಷ್ಟು ನೆರವಾಗುತ್ತಿದೆ.
ಸ್ಪೀಡ್ ಪೇಂಟಿಂಗ್ ಹಿಂದಿನ ಪರಿಶ್ರಮ
ಕೆಲವೊಂದು ರಿಯಾಲಿಟಿ ಶೋನಲ್ಲಿ ನಾನು ಕೆಲವೇ ನಿಮಿಷದಲ್ಲಿ ಮಾಡುವ ಪೇಟಿಂಗ್ ಹಿಂದೆ ಸಾಕಷ್ಟು ಪ್ರ್ಯಾಕ್ಟೀಸ್ ಇರುತ್ತದೆ. ಸ್ಟೇಜಲ್ಲಿ ಎಷ್ಟು ದೊಡ್ಡ ಕ್ಯಾನ್ವಸ್‍ನಲ್ಲಿ ಪೇಂಟಿಂಗ್ ಮಾಡುತ್ತೇನೋ ಅದೇ ರೀತಿ ಮನೆಯಲ್ಲಿ ಕುಳಿತು 50-60 ಕ್ಯಾನ್ವಸ್‍ನಲ್ಲಿ ತಪ್ಪುಗಳನ್ನು ಕಂಡುಹುಡುಕುತ್ತ, ಮತ್ತೆ ಮತ್ತೆ ಪೇಂಟಿಂಗ್ ರಚಿಸಬೇಕಾಗುತ್ತದೆ. ಇಷ್ಟೆಲ್ಲ ಪ್ರಯತ್ನ ಪಟ್ಟರೂ ಸ್ಟೇಜ್‍ನಲ್ಲಿ ಅದೇ ರೀತಿ ಪೇಂಟಿಂಗ್ ಮೂಡಿ ಬರುತ್ತೇ ಎಂದು ಹೇಳಲಾಗುವುದಿಲ್ಲ.

ಸೋಷಿಯಲ್ ಮೀಡಿಯಾದ ಮಿತವಾದ ಬಳಕೆ
ಈಗ ಅವಶ್ಯಕತೆಗಿಂತ ಹೆಚ್ಚು ವಾಟ್ಸ್‍ಆ್ಯಪ್, ಫೇಸ್‍ಬುಕ್, ಟೀವಿ, ಯೂಟ್ಯೂಬ್ ಇತ್ಯಾದಿಗಳ ಲಭ್ಯತೆ ಇದೆ. ಇವುಗಳನ್ನು ಎಷ್ಟು ಬಳಕೆ ಮಾಡಬೇಕೆಂಬ ಅರಿವು ಎಲ್ಲರಲ್ಲಿಯೂ ಇರಬೇಕು. ಅವಶ್ಯಕತೆ ಇಲ್ಲದೆ ಇದ್ದಾಗ ಇವುಗಳನ್ನು ಸ್ವಿಚ್ ಆಫ್ ಮಾಡಿ. ಯಾವಾಗ ನಾವು ಇವುಗಳೊಂದಿಗೆ ಡಿಸ್‍ಕನೆಕ್ಟ್ ಆಗಿ ನಮ್ಮ ಜೊತೆ ಕನೆಕ್ಟ್ ಆಗ್ತಿವೋ ಆಗ ನಮಗೆ ನಮ್ಮಲ್ಲಿರುವ ಸ್ಟ್ರೆಂಥ್ ಏನು, ನಮ್ಮಲ್ಲಿರುವ ಸಕಾರಾತ್ಮಕ ಶಕ್ತಿಗಳೇನು, ನಮ್ಮ ದೌರ್ಬಲ್ಯ ಏನು ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಇಷ್ಟವಿಲ್ಲದ ಕ್ಷೇತ್ರದಲ್ಲಿಯೂ ಆಸಕ್ತಿ
ಕೆಲವರು ಅನಿವಾರ್ಯವಾಗಿ ಆಸಕ್ತಿ ಇಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಂತಹ ಸನ್ನಿವೇಶದಲ್ಲಿ ಎಷ್ಟು ಸಾಧ್ಯವೋ ಅಷ್ಟು ಆಸಕ್ತಿ ಬೆಳೆಸಿಕೊಳ್ಳಿ. ಇನ್ವಾಲ್ ಆಗಿ ಕೆಲಸ ಮಾಡಿ. ನಿಮ್ಮಲ್ಲಿ ಹಾಡುವುದು, ಕ್ರಿಕೆಟ್ ಆಡುವುದು, ನಾಟಕ, ಚಿತ್ರಕಲೆ, ಕರಕುಶಲತೆ ಇತ್ಯಾದಿ ವಿಶೇಷ ಪ್ರತಿಭೆ ಇದ್ದರೆ, ಸಮಯ ಸಿಕ್ಕಾಗಲೆಲ್ಲ ಇವುಗಳಲ್ಲಿ ತೊಡಗಿಸಿಕೊಳ್ಳಿ. ಸಂತೋಷ ಸಿಗುತ್ತೆ.
ಪ್ರತಿಭಾನ್ವಿತರಿಗೆ ಟಿಪ್ಸ್

  1.  ತುಂಬಾ ಜನರು ತಮ್ಮಲ್ಲಿರುವ ಪ್ರತಿಭೆ ಮತ್ತು ಆರ್ಥಿಕ ತೊಂದರೆಗಳ ಕುರಿತು ನನ್ನಲ್ಲಿ ಹೇಳುತ್ತಾರೆ. ಕೆಲಸ ಬಿಡುವುದಕ್ಕೆ ಆಗೋಲ್ಲ ಅಂತಾರೆ. ನನ್ನಲ್ಲೂ ಆರ್ಥಿಕ ತೊಂದರೆ ಇತ್ತು. ಅಪ್ಪನ ಪುಟ್ಟ ಅಂಗಡಿಯಲ್ಲಿ ಕೆಲಸ ಮಾಡುತ್ತ, ಚಿತ್ರಕಲೆ ಮಾಡುತ್ತ, ಓದುತ್ತ ಬೆಳೆದವನು ನಾನು. ನಿಮ್ಮಲ್ಲಿ ಎಷ್ಟು ಸಮಯವಿದೆ ಅಷ್ಟು ಸಮಯವನ್ನು ಪ್ರತಿಭೆಗಾಗಿ ಮೀಸಲಿರಿಸಿ, ನಿಮ್ಮ ಖುಷಿಗಾಗಿ ಪ್ರತಿಭೆಯನ್ನು ಕಂಟಿನ್ಯೂ ಮಾಡಿ.

  2.  ಯಾವಾಗಲೂ ರಿಸ್ಕ್ ತೆಗೆದುಕೊಳ್ಳಬೇಕು ಎಂಬ ಕಾರಣದಿಂದ ರಿಸ್ಕ್ ತೆಗೆದುಕೊಳ್ಳಬೇಡಿ. ಲೆಕ್ಕಚಾರದ ರಿಸ್ಕ್ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ. ನಾನು ತುಂಬಾ ಯೋಚಿಸಿ, ಅಳೆದುತೂಗಿ ತೆಗೆದುಕೊಂಡಿರುವ ರಿಸ್ಕ್ ಇದಾಗಿದೆ.

  3.  ಪ್ಲಾನ್ ಎ ಮತ್ತು ಪ್ಲಾನ್ ಬಿ ಇರಲಿ. ಎಲ್ಲಾದರೂ ನಾನು ಚಿತ್ರಕಲೆಯಲ್ಲಿ ಯಶಸ್ವಿಯಾಗದೆ ಇದ್ದರೆ ಮತ್ತೆ ಕಾಪೆರ್Çರೇಟ್ ಜಗತ್ತಿಗೆ ಮರಳುವ ತೀರ್ಮಾನ ಮಾಡಿಯೇ ಕೆಲಸ ಬಿಟ್ಟಿದ್ದೆ. ಎಲ್ಲಾದರೂ ನಿಮ್ಮ ಮೊದಲ ಪ್ಲಾನ್ ಯಶಸ್ವಿಯಾಗದೆ ಇದ್ದರೆ ಮತ್ತೊಂದು ಪ್ಲಾನ್‍ಗೆ ಪ್ರವೇಶಿಸಿ.

  4.  ಕಲೆಗೆ ಖಚಿತ ವೇತನ ಇರುವುದಿಲ್ಲ. ಹೀಗಾಗಿ, ಕೆಲಸ ಬಿಡುವ ಮೊದಲು ಕನಿಷ್ಠ ಇಂತಿಷ್ಟು ದುಡಿಯಬಲ್ಲೆ ಎಂಬ ಭರವಸೆ ಹುಟ್ಟಿದ ನಂತರವೇ ತೀರ್ಮಾನ ಕೈಗೊಳ್ಳಿರಿ.

  5.  ಸರಿಯಾಗಿ ಹೋಂವರ್ಕ್ ಮಾಡಿ. ನಿಖರವಾದ ಪ್ಲಾನ್ ಮಾಡಿ. ತಕ್ಷಣಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

Published in Vijayakarnataka Mini

ವಿಲಾಸ್ ನಾಯಕ್ ವೆಬ್ ಲಿಂಕ್

All Image Copyrights: Villas Nayak

Tuesday, 27 December 2016

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್

ಎಲ್ಲವೂ ಇಂಟರ್‍ನೆಟ್‍ಮಯವಾಗುತ್ತಿರುವ ಈ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಲ್ಲವರಿಗೆ ಉತ್ತಮ ಬೇಡಿಕೆಯಿದೆ. ಸರ್ಚ್ ಎಂಜಿನ್ ಆಪ್ಟಿಮಿಜೇಷನ್, ಸೋಷಿಯಲ್ ಮೀಡಿಯಾ ಆಪ್ಟಿಮಿಜೇಷನ್ ಸೇರಿದಂತೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಕಲಿಯಲು ಸೂಕ್ತವಾದ ಸರ್ಟಿಫಿಕೇಷನ್ ಕೋರ್ಸ್‍ಗಳು ಯಾವುವು? ಇಲ್ಲಿದೆ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಇದು ಇಂಟರ್‍ನೆಟ್ ಯುಗ. ಮಾರಾಟ ಮತ್ತು ಖರೀದಿಗೆ ಇ-ಕಾಮರ್ಸ್ ಪ್ರಮುಖ ವೇದಿಕೆ. ಯಾವುದೇ ಕಂಪನಿಗೂ ವಹಿವಾಟು ನಡೆಸಲು ಇಂಟರ್‍ನೆಟ್ ಬಳಸುವುದು ಅನಿವಾರ್ಯವಾಗಿಬಿಟ್ಟಿದೆ. ಇಂತಹ ಸಮಯದಲ್ಲಿ ಆನ್‍ಲೈನ್‍ನಲ್ಲಿ ಮಾರುಕಟ್ಟೆ ಮಾಡುವ ಪರಿಣತರಿಗೂ ಉತ್ತಮ ಬೇಡಿಕೆಯಿದೆ. ಇದಕ್ಕೆ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳು ಲಭ್ಯ ಇವೆ. ವಿಶೇಷವೆಂದರೆ ಆನ್‍ಲೈನ್‍ನಲ್ಲಿ ಹಲವು ಉಚಿತ ಕೋರ್ಸ್‍ಗಳು ಲಭ್ಯ. ಕೆಲವು ಸರ್ಟಿಫಿಕೇಷನ್ ಕೋರ್ಸ್‍ಗಳು 10ರಿಂದ 50 ಸಾವಿರ ರೂ. ತನಕ ದುಬಾರಿಯಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ಎಂದರೇನು?
ಸರಳವಾಗಿ ಹೇಳುವುದಾದರೆ ಯಾವುದಾದರೂ ಉತ್ಪನ್ನ ಅಥವಾ ಬ್ರಾಂಡ್ ಅನ್ನು ವಿವಿಧ ರೀತಿಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಪಡಿಸುವುದನ್ನು ಡಿಜಿಟಲ್ ಮಾರ್ಕೆಟಿಂಗ್ ಎನ್ನಬಹುದು. ಈಗ ಗೂಗಲ್, ಫೇಸ್‍ಬುಕ್, ಇಮೇಲ್, ಮೊಬೈಲ್, ಸ್ಮಾರ್ಟ್‍ಫೆÇೀನ್ ಇತ್ಯಾದಿ ಮಾಧ್ಯಮಗಳ ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ವಿಧಾನವನ್ನು ಅನುಸರಿಸುತ್ತದೆ. ಇಂತಹ ನವ ಮಾಧ್ಯಮದಲ್ಲಿ ಉತ್ಪನ್ನ ಅಥವಾ ಬ್ರಾಂಡ್ ಪ್ರಚಾರ ಪಡಿಸಲು ವಿಶೇಷ ಸ್ಕಿಲ್ ಬೇಕಾಗುತ್ತದೆ. ಇಂತಹ ಕೌಶಲಗಳನ್ನು ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಕೋರ್ಸ್‍ಗಳು ಕಲಿಸಿ ಕೊಡುತ್ತವೆ.
ಡಿಜಿಟಲ್ ಮಾರುಕಟ್ಟೆಯ ಬೇಸಿಕ್ಸ್, ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಡಿಜಿಟಲ್ ಮಾರುಕಟ್ಟೆ ಕಾರ್ಯತಂತ್ರ ರೂಪಿಸುವುವುದು, ಮೊಬೈಲ್, ಸರ್ಚ್ ಮತ್ತು ಸೋಷಿಯಲ್ ನೆಟ್‍ವರ್ಕಿಂಗ್ ಇತ್ಯಾದಿ ನವಮಾಧ್ಯಮಗಳನ್ನು ಬಳಸಿ ಮಾರುಕಟ್ಟೆ ವಿಸ್ತರಿಸುವುದು, ಡಿಜಿಟಲ್ ಮಾರುಕಟ್ಟೆಗೆ ಸಂಬಂಧಪಟ್ಟ ಕಾನೂನುಗಳನ್ನು ತಿಳಿದುಕೊಳ್ಳುವುದು ಸಹ ಈ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ಒಳಗೊಂಡಿರುತ್ತದೆ.

ಉಚಿತವಾಗಿ ಕಲಿಯಿರಿ
ಇಂದು ಜಗತ್ತಿನ ವಿವಿಧ ಸಂಸ್ಥೆಗಳು ಆನ್‍ಲೈನ್‍ನಲ್ಲೇ ಉಚಿತವಾಗಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಅವಕಾಶ ಮಾಡಿಕೊಡುತ್ತಿವೆ. ಈ ಕೆಳಗೆ ನೀಡಿರುವ ಲಿಂಕ್‍ಗಳ ಮೂಲಕ ನೀವೂ ಉಚಿತವಾಗಿ ಕಲಿಯಬಹುದು.
* ಗೂಗಲ್‍ನ ಆನ್‍ಲೈನ್ ಮಾರ್ಕೆಟಿಂಗ್ ಚಾಲೆಂಜಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಬಹುದು. ಇಲ್ಲಿ ವಿಡಿಯೋ ಟ್ಯುಟೋರಿಯಲ್ ಸಹ ಇದ್ದು, ಎಸ್‍ಇಎಂ, ಆ್ಯಡ್‍ವಡ್ರ್ಸ್, ಸೋಷಿಯಲ್ ನೆಟ್‍ವಕ್ರ್ಸ್, ಮೊಬೈಲ್ ಸ್ಟ್ರಾಟರ್ಜಿ ಸೇರಿದಂತೆ ಹಲವು ವಿಷಯಗಳನ್ನು ಕಲಿಯಬಹುದು. ಕೆಲವೊಂದು ವಿಷಯಗಳಲ್ಲಿ ಸರ್ಟಿಫಿಕೇಷನ್ ಸಹ ದೊರಕುತ್ತದೆ.
ಮಾಹಿತಿಗೆ ಲಿಂಕ್: 
* ವಲ್ರ್ಡ್‍ಸ್ಟ್ರೀಮ್ ಎಂಬ ವೆಬ್‍ಸೈಟ್‍ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕುರಿತು ತುಂಬಾ ಬೇಸಿಕ್ಸ್‍ನಿಂದ ಹಿಡಿದು ಹಲವು ಹಂತಗಳ ಕೋರ್ಸ್‍ಗಳಿವೆ. ಹಂತಹಂತವಾಗಿ ಕಲಿಯುವುದು ಇಲ್ಲಿ ಸುಲಭ. ಲಿಂಕ್:
* ಕಾಪಿಬ್ಲಾಗರ್ ಎಂಬ ವೆಬ್‍ಸೈಟ್ ನಿಮಗೆ ಇಮೇಲ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‍ಗಳನ್ನು ಕಳುಹಿಸಿಕೊಡುತ್ತದೆ. ಇದರಿಂದ ನೀವು ಕಂಟೆಂಟ್ ಮಾರ್ಕೆಟಿಂಗ್, ಕಾಪಿರೈಟಿಂಗ್, ಎಸ್‍ಇಒ, ಕೀವರ್ಡ್ ರಿಸರ್ಚ್ ಇತ್ಯಾದಿಗಳನ್ನು ಕಲಿಯಬಹುದು. ಲಿಂಕ್
* ಕೊರ್ಸ್‍ರಾ ಎಂಬ ವೆಬ್‍ಸೈಟ್‍ನಲ್ಲಿ ವಾರದಲ್ಲಿ ನಾಲ್ಕೈದು ಗಂಟೆಯಂತೆ 5 ವಾರದ ಡಿಜಿಟಲ್ ಮಾರ್ಕೆಟಿಂಗ್ ಕ್ಲಾಸ್ ಅನ್ನು ನಡೆಸಲಾಗುತ್ತದೆ. ಮುಂದಿನ ಕೋರ್ಸ್ ಫೆಬ್ರವರಿ 22ರಿಂದ ಏಪ್ರಿಲ್ 1ರ ತನಕ ಇದೆ. ಆದಷ್ಟು ಬೇಗ ಭೇಟಿ ನೀಡಿ. ಲಿಂಕ್
* ಹಬ್‍ಸ್ಪಾಟ್‍ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಪಡೆಯಲು 18 ಉಚಿತ ತರಗತಿಗಳಿವೆ. ಉಚಿತವೆಂದಿರುವ ಕೋರ್ಸ್ ಅನ್ನು ಈ ಲಿಂಕ್‍ನಲ್ಲಿ ಹುಡುಕಿರಿ. ಲಿಂಕ್

ಇವು ಉಚಿತವಲ್ಲ
ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿ ಎಸ್‍ಇಒ, ಎಸ್‍ಇಎಂ, ಎಸ್‍ಎಂಒ, ಪಿಪಿಸಿ ಇತ್ಯಾದಿ ಸರ್ಟಿಫಿಕೇಷನ್‍ಗಳನ್ನು ಪಡೆಯಬಹುದು. ವಾರಾಂತ್ಯ ಕ್ಲಾಸ್‍ಗಳು ಮಾತ್ರವಲ್ಲದೆ ವಾರದ ಎಲ್ಲಾ ದಿನದ ಕ್ಲಾಸ್‍ಗಳೂ ಇವೆ. ಒಟ್ಟು 40 ದಿನಗಳ, 100 ಗಂಟೆಯ ಈ ಕೋರ್ಸ್‍ಗೆ 25ಸಾವಿರ ಶುಲ್ಕ ನೀಡಬೇಕು. ಆನ್‍ಲೈನ್ ಕೋರ್ಸ್‍ಗಳೂ ಲಭ್ಯ. ಹೆಚ್ಚಿನ ಮಾಹಿತಿಗೆ ಲಿಂಕ್
ಮನಿಪಾಲ್ ಗ್ಲೋಬಲ್ ಶಿಕ್ಷಣ ಸಂಸ್ಥೆಯ ಪೆÇ್ರಲರ್ನ್ ಆನ್‍ಲೈನ್ ಕಲಿಕಾ ತಾಣದಲ್ಲಿ ಕಲಿಯಬಹುದು. ಗೂಗಲ್ ಜೊತೆ ಸೇರಿ ನೀಡುವ ಈ ಡಿಜಿಟಲ್ ಕೋರ್ಸ್‍ನ ಅವಧಿ 90 ಗಂಟೆ. ಬೆಂಗಳೂರಿನಲ್ಲಿ ಮುಂದಿನ ಎನ್‍ರೋಲ್‍ಮೆಂಟ್ ಫೆಬ್ರವರಿ 14. ಮ್ಯಾನೇಜ್‍ಮೆಂಟ್ ಅಥವಾ ಎಂಜಿನಿಯರಿಂಗ್ ಹಿನ್ನೆಲೆ ಇರುವ ವಿದ್ಯಾರ್ಥಿಗಳು ಈ ಕೋರ್ಸ್‍ಗೆ ಸೇರಬಹುದು. ಮಾಹಿತಿಗೆ ಲಿಂಕ್
ಬೆಂಗಳೂರಿನ ಇನ್‍ವೆಂಟಾಟೆಕ್‍ನಲ್ಲಿಯೂ ಡಿಜಿಟಲ್ ಮಾರ್ಕೆಟಿಂಗ್ ಕುರಿತಾದ ಹಲವು ಕೋರ್ಸ್‍ಗಳು ಲಭ್ಯ ಇವೆ. ಲಿಂಕ್
ಎಎಂಪಿ ಡಿಜಿಟಲ್‍ನಲ್ಲಿ 14 ವಾರದ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಕೊಂಚ ದುಬಾರಿ ಎಂದೇ ಹೇಳಬೇಕು. ಇಲ್ಲಿ 48 ಸಾವಿರ ರೂ. ಶುಲ್ಕ ನೀಡಬೇಕು. ಇದು ಇಂಟರ್ನ್‍ಷಿಪ್ ಅವಕಾಶವನ್ನೂ ನೀಡುತ್ತದೆ. ಇದೇ ಸಂಸ್ಥೆಯು 14 ಸಾವಿರ ರೂ.ಗೆ ಸೋಷಿಯಲ್ ಮೀಡಿಯಾ ಕೋರ್ಸ್ ಸಹ ನೀಡುತ್ತಿದೆ.
ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿರುವ ಸ್ಕೈಡ್ರೀಮ್‍ಕನ್ಸಲ್ಟ್ ಸಂಸ್ಥೆಯು 100 ಗಂಟೆಗಳ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಕೋರ್ಸ್ ನೀಡುತ್ತದೆ. ತೆರಿಗೆ ಸೇರಿ 25 ಸಾವಿರ ರೂ. ಶುಲ್ಕ ಇದೆ. ಮಾಹಿತಿಗೆ ಲಿಂಕ್

Published in Vijayakarnataka Mini

Tuesday, 29 November 2016

ಏರ್ ಟ್ರಾಫಿಕ್ ಕಂಟ್ರೋಲರ್ ಉದ್ಯೋಗ ಪಡೆಯುವುದು ಹೇಗೆ?

ಏರ್ ಟ್ರಾಫಿಕ್ ಕಂಟ್ರೋಲರ್ ಉದ್ಯೋಗ ಪಡೆಯುವುದು ಹೇಗೆ?

ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಸಮರ್ಥವಾಗಿ ಆಗುವಂತೆ ನೋಡಿಕೊಳ್ಳುವ `ಏರ್ ಟ್ರಾಫಿಕ್ ಕಂಟ್ರೋಲರ್' ಉದ್ಯೋಗ ಪಡೆಯುವುದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ನಮ್ಮ ರಾಜ್ಯದಲ್ಲಿ ಬಹುತೇಕ ಪ್ರತಿಭಾವಂತರು ಯಾವೆಲ್ಲ ಉದ್ಯೋಗಗಳ ಲಭ್ಯತೆಯಿದೆ? ಏನು ಓದಿದರೆ ಯಾವ ಹುದ್ದೆ ಪಡೆಯಬಹುದು ಎಂಬ ಸಮರ್ಪಕ ಮಾಹಿತಿಯಿಲ್ಲದ ಕಾರಣದಿಂದಲೇ ಹಲವು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಗೊತ್ತಿರದ ಅಥವಾ ಸಮರ್ಪಕ ಮಾಹಿತಿ ಇಲ್ಲದ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್' ಸಹ ಒಂದು. ಬನ್ನಿ, ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.
ರಸ್ತೆಯಲ್ಲಿ ವಾಹನಗಳನ್ನು ನಿಯಂತ್ರಿಸುವ ಟ್ರಾಫಿಕ್ ಪೆÇಲೀಸರನ್ನು ನೀವು ನೋಡಿದ್ದೀರಿ. ಸುಗಮ ವಾಹನ ಸಂಚಾರಕ್ಕೆ ಇವರ ಕೊಡುಗೆ ಅಪಾರವಾದದ್ದು. ಹಾಗೆಯೇ, ಆಕಾಶಕ್ಕೆ ರೊಂಯ್ಯನೆ ನೆಗೆಯುವ, ಭೂಮಿಗೆ ಇಳಿಯುವ ಅಷ್ಟೊಂದು ವಿಮಾನಗಳನ್ನು ವಿಮಾನ ನಿಲ್ದಾಣಗಳಲ್ಲಿ ನಿಯಂತ್ರಿಸಲು ಟ್ರಾಫಿಕ್ ಪೆÇಲೀಸರು ಇದ್ದಾರೆ. ಅವರ ಉದ್ಯೋಗದ ಹೆಸರು `ಏರ್ ಟ್ರಾಫಿಕ್ ಕಂಟ್ರೋಲರ್'. ಇವರ ಕೆಲಸ ಟ್ರಾಫಿಕ್ ಪೆÇಲೀಸರಂತೆಯೇ ಆದರೂ, ಕೆಲಸದ ರೀತಿ ರಿವಾಜುಗಳು ಟ್ರಾಫಿಕ್ ಪೆÇಲೀಸರಿಗಿಂತ ಸಂಪೂರ್ಣ ಭಿನ್ನ. ಅತ್ಯಧಿಕ ವೇಗದಲ್ಲಿ ಆಕಾಶದಲ್ಲಿ ಹಾರುವ ಇವುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್‍ಗಳೂ ಕೊಂಚ ಮೈಮರೆತರೂ ಭಾರೀ ಅನಾಹುತ ಸಂಭವಿಸಬಹುದು. ವಿಮಾನ ನಿಲ್ದಾಣಗಳಲ್ಲಿ ಇರುವ ಆಕರ್ಷಕ ಮತ್ತು ಅತ್ಯಗತ್ಯ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್' ಸಹ ಪ್ರಮುಖವಾದದ್ದು. ಈಗಾಗಲೇ ಆಕಾಶದಲ್ಲಿ ವಿಮಾನಗಳ ದಟ್ಟಣೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ವಿಮಾನಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಈ ಉದ್ಯೋಗಕ್ಕೆ ಉತ್ತಮ ಬೇಡಿಕೆಯಿದೆ.

* ಏರ್ ಟ್ರಾಫಿಕ್ ಕಂಟ್ರೋಲರ್ ಆಗಬೇಕಿದ್ದರೆ ಯಾವ ಎಗ್ಸಾಂ ಪಾಸ್ ಆಗಬೇಕು?
ಸಿವಿಲ್ ಎಟಿಸಿ ಎಂಟ್ರೆನ್ಸ್ ಎಗ್ಸಾಂ ಪಾಸ್ ಆಗಬೇಕು.

* ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಲು ಇರಬೇಕಾದ ಸಾಮಾನ್ಯ ವಿದ್ಯಾರ್ಹತೆ ಏನು?
ಎಲೆಕ್ಟ್ರಾನಿಕ್ಸ್/ ಟೆಲಿ ಕಮ್ಯುನಿಕೇಷನ್/ರೇಡಿಯೊ ಎಂಜಿನಿಯರಿಂಗ್/ಎಲೆಕ್ಟ್ರಾನಿಕ್ಸ್ ಸ್ಪೆಷಲೈಜೇಷನ್‍ನಲ್ಲಿ ಎಲೆಕ್ಟ್ರಿಕಲ್‍ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು ಎಟಿಸಿ ಎಂಟೆನ್ಸ್ ಎಗ್ಸಾಂಗೆ ಅರ್ಜಿ ಸಲ್ಲಿಸಬಹುದು. ವೈರ್‍ಲೆಸ್ ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್, ರೇಡಿಯೋ ಫಿಸಿಕ್ಸ್ ಅಥವಾ ರೇಡಿಯೊ ಎಂಜಿನಿಯರಿಂಗ್ ಅನ್ನು ವಿಶೇಷ ವಿಷಯವಾಗಿ ಆಯ್ಕೆ ಮಾಡಿಕೊಂಡು ಎಂಎಸ್ಸಿ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು. ಇವುಗಳಲ್ಲಿ ಶೇಕಡ 60ಕ್ಕಿಂತ ಹೆಚ್ಚು ಅಂಕ ಪಡೆದವರು ಮಾತ್ರ ಪರೀಕ್ಷೆ ಬರೆಯಬಹುದಾಗಿದೆ.

* ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಬರೆಯಲು ವಯೋಮಿತಿ ಎಷ್ಟು?
ಕನಿಷ್ಠ 21 ವರ್ಷ. ಗರಿಷ್ಠ 27 ವರ್ಷ.

* ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಲಿಖಿತ ಪರೀಕ್ಷೆ, ಧ್ವನಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಶೇಕಡ 50ರಷ್ಟು ಪ್ರಶ್ನೆಗಳಿರುತ್ತವೆ. ಉಳಿದ ಶೇಕಡ 50ರಷ್ಟು ಪ್ರಶ್ನೆಗಳು ಸಾಮಾನ್ಯ ಜ್ಞಾನ, ಸಾಮಾನ್ಯ ಬುದ್ಧಿಮತ್ತೆ(ಇಂಟಲಿಜೆನ್ಸ್), ಜನರಲ್ ಆ್ಯಪ್ಟಿಟ್ಯೂಡ್, ಇಂಗ್ಲಿಷ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆ ಪಾಸ್ ಆದ ನಂತರ ಧ್ವನಿ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ.

* ಎಟಿಸಿ ಎಂಟ್ರೆನ್ಸ್ ಎಗ್ಸಾಂನಲ್ಲಿ ಒಮ್ಮೆ ಅಭ್ಯರ್ಥಿಗಳು ಆಯ್ಕೆಯಾದ ನಂತರ ಮುಂದಿನ ತರಬೇತಿಗೆ ಎಲ್ಲಿಗೆ ಕಳುಹಿಸಲಾಗುತ್ತದೆ?
ಅಲಹಾಬಾದ್ ಅಥವಾ ಹೈದರಾಬಾದ್‍ನಲ್ಲಿರುವ ಸಿವಿಲ್ ಏವಿಯೇಷನ್ ಟ್ರೈನಿಂಗ್ ಕಾಲೇಜುಗಳಿಗೆ ಕಳುಹಿಸಲಾಗುತ್ತದೆ.

* ತರಬೇತಿ ಅವಧಿ ಎಷ್ಟು? ಯಾವೆಲ್ಲ ಮಾಡ್ಯುಲ್‍ಗಳನ್ನು ಓದಬೇಕಾಗುತ್ತದೆ ಮತ್ತು ಪ್ರಾಕ್ಟಿಕಲ್‍ನಲ್ಲಿ ಏನೆಲ್ಲ ಇರುತ್ತದೆ?
ಈಗ ತರಬೇತಿ ಅವಧಿಯು ಸುಮಾರು 1 ವರ್ಷದ್ದಾಗಿದೆ. ಅಂದರೆ 6 ತಿಂಗಳ ಎರಡು ವಿಭಾಗದಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್‍ಗಳು: ಏರ್ ಟ್ರಾಫಿಕ್ ಸರ್ವೀಸಸ್, ಏರೊಡ್ರೊಮ್ಸ್ ಆ್ಯಂಡ್ ಗ್ರೌಂಡ್ ಏಯ್ಡ್‍ಸ್, ಏರ್ ಲಿಜಿಸ್ಲೆಷನ್, ಮೆಟಿಯೊರೊಲಾಜಿ, ಕಮ್ಯುನಿಕೇಷನ್ ಪೆÇ್ರಸಿಜರ್, ಟೆಕ್ನಿಕಲ್, ಸರ್ಚ್ ಆ್ಯಂಡ್ ರಿಸ್ಕ್ಯೂ, ಏರ್ ನ್ಯಾವಿಗೇಷನ್ ಇತ್ಯಾದಿ ಮಾಡ್ಯುಲ್‍ಗಳಿರುತ್ತವೆ.

* ತರಬೇತಿ ಖರ್ಚು ಎಷ್ಟು?
ವೆಚ್ಚವನ್ನು ದೇಶದ ವಿಮಾನಯಾನ ಪ್ರಾಧಿಕಾರ ನೋಡಿಕೊಳ್ಳುತ್ತದೆ.

* ತರಬೇತಿಯಲ್ಲಿ ಅನರ್ಹತೆ ಪಡೆಯುವ ಸಾಧ್ಯತೆ ಇದೆಯೇ?
ಹೌದು, ಅಭ್ಯರ್ಥಿಯು ಎರಡು ಬಾರಿ ಪರೀಕ್ಷೆ ಬರೆದರೂ ಶೇಕಡ 70ಕ್ಕಿಂತ ಹೆಚ್ಚು ಅಂಕ ಪಡೆಯದಿದ್ದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಆಗುವ ಅರ್ಹತೆ ಕಳೆದುಕೊಳ್ಳುತ್ತಾರೆ.

* ತರಬೇತಿ ಮುಗಿದ ನಂತರ ಅಭ್ಯರ್ಥಿಗಳಿಗೆ ಮೊದಲು ದೊರಕುವ ಉದ್ಯೋಗ ಯಾವುದು?
ಜೂನಿಯರ್ ಎಕ್ಸಿಕ್ಯೂಟಿವ್(ಎಟಿಸಿ).

* ಯಾರು ಕೆಲಸ ಕೊಡುತ್ತಾರೆ?
ಭಾರತದಲ್ಲಿ ಏರ್ ಪೆÇೀರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಮಾತ್ರ ಪ್ರಮುಖ ಉದ್ಯೋಗದಾತ. ಎಚ್‍ಎಎಲ್ ಇತ್ಯಾದಿ ಸಂಸ್ಥೆಗಳಲ್ಲಿಯೂ ಇಂತಹ ಉದ್ಯೋಗಗಳು ಇರುತ್ತವೆ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಎಎಐ ಜಾಬ್ ನೀಡುತ್ತದೆ. ಒಂಥರಾ ಇದು ಜಾಬ್ ಗ್ಯಾರಂಟಿ ಕೋರ್ಸ್ .

* ವೇತನ ಎಷ್ಟಿರುತ್ತದೆ?
ತರಬೇತಿ ಅವಧಿಯಲ್ಲಿ ಟ್ರೈನಿಗಳಿಗೆ ಉಚಿತ ವಸತಿಯೊಂದಿಗೆ 7,500 ರೂ. ನೀಡಲಾಗುತ್ತದೆ. ಜೂನಿಯರ್ ಎಕ್ಸಿಕ್ಯೂಟಿವ್(ಎಟಿಸಿ)-ಗೆ 16,400ರಿಂದ 40 ಸಾವಿರ ರೂ. ಇರುತ್ತದೆ. ಮ್ಯಾನೇಜರ್(ಎಟಿಸಿ)ಗೆ 24,900ರೂ.ನಿಂದ 50,500 ರೂ.ವರೆಗೆ ಇರುತ್ತದೆ. ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್)(ನಾನ್ ಎಕ್ಸಿಕ್ಯೂಟಿವ್ ಕೇಡರ್)ಗೆ 14, 500 ರೂ.ನಿಂದ 33, 500 ರೂ.ವರೆಗೆ ಇರುತ್ತದೆ.

* ಉದ್ಯೋಗದ ನೆಗೆಟಿವ್ ಮತ್ತು ಪಾಸಿಟೀವ್ ಗುಣಗಳೇನು?
ಪಾಸಿಟೀವ್: ಚಾಲೆಂಜಿಂಗ್ ಎನ್ವಾಯರ್ನ್‍ಮೆಂಟ್, ಕೆಲವೇ ಸೆಕೆಂಡಿನಲ್ಲಿ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ, ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಅವಕಾಶ ಇದೆ.
ನೆಗೆಟಿವ್: ಅತ್ಯಧಿಕ ಒತ್ತಡವಿರುತ್ತದೆ. ಶಿಫ್ಟ್ ಡ್ಯೂಟಿ ಇರುತ್ತದೆ. ಹೆಚ್ಚುವರಿ ಕೆಲಸದ ಒತ್ತಡ ಇರುತ್ತದೆ. ರಜೆಯ ಕೊರತೆ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ರಜೆ ಸಿಗುವುದು ಅಪರೂಪ, ಅತ್ಯಧಿಕ ವೃತ್ತಿಪರ ರಿಸ್ಕ್ ಇರುವ ಕೆಲಸ ಇದಾಗಿದೆ.

* ಎಟಿಸಿ ಅಧಿಕಾರಿಗೆ ಯಾವೆಲ್ಲ ರ್ಯಾಂಕ್ ಅಥವಾ ಭಡ್ತಿ ದೊರಕುತ್ತದೆ?
ಜೂನಿಯರ್ ಎಕ್ಸಿಕ್ಯೂಟಿವ್, ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಜಾಯಿಂಟ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಡೈರೆಕ್ಟರ್(ಎಟಿಎಂ), ಎಎಐ ಆಡಳಿತ ಮಂಡಳಿಯ ಸದಸ್ಯ(ಎಟಿಎಂ).

* ತರಬೇತಿ ಮತ್ತು ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸಗಳ ಲಿಂಕ್

www.aai.aero

www.atcguild.com

www.aviationmagic.com

www.aaians.org

www.iata.org


Published in Vijayakarnataka Mini

Monday, 21 November 2016

ಮೆಡಿಕಲ್ ಶಾಪ್ ಇಡಬೇಕೆಂದಿದ್ದೀರಾ? ಇಲ್ಲಿದೆ ಮಾರ್ಗದರ್ಶನ

ಮೆಡಿಕಲ್ ಶಾಪ್ ಇಡಬೇಕೆಂದಿದ್ದೀರಾ? ಇಲ್ಲಿದೆ ಮಾರ್ಗದರ್ಶನ

ಸ್ವಂತ ಮೆಡಿಕಲ್ ಸ್ಟೋರ್ ಓನರ್ ಆಗಬೇಕಾದರೆ ಏನು ಓದಿರಬೇಕು? ಮೆಡಿಕಲ್ ಸ್ಟೋರ್‍ನಲ್ಲಿ ಯಾವೆಲ್ಲ ವಿಧಗಳಿವೆ? ಲೈಸನ್ಸ್ ಪಡೆಯುವುದು ಹೇಗೆ? ರಿಜಿಸ್ಟ್ರೇಷನ್ ಹೇಗೆ? ಫಾರ್ಮಸಿ ಬಿಸ್ನೆಸ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು
ಜಗತ್ತಿನಲ್ಲಿಂದು ರೋಗಗಳಿಗೆ ಬರವಿಲ್ಲ. ಇದಕ್ಕೆ ಪೂರಕವಾಗಿ ಕಾಪೆರ್Çರೇಟ್ ಆಸ್ಪತ್ರೆಗಳೂ, ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗಳೂ ಹೆಚ್ಚಾಗಿವೆ. ರೋಗಿಗಳಿದ್ದಲ್ಲಿ ಆಸ್ಪತ್ರೆಗಳು ಇರುವಂತೆ, ಆಸ್ಪತ್ರೆಗಳು ಇದ್ದಲ್ಲಿ ಮೆಡಿಕಲ್ ಸ್ಟೋರ್‍ಗಳು ಇದ್ದೇ ಇರುತ್ತವೆ. ಗಲ್ಲಿಗಲ್ಲಿಯಲ್ಲಿಂದು ಮೆಡಿಕಲ್ ಶಾಪ್‍ಗಳು ತಲೆಎತ್ತಿವೆ. ಹೆಲ್ತ್‍ಕೇರ್ ಮತ್ತು ಫಾರ್ಮಸಿ ಬಿಸ್ನೆಸ್ ಜೋರಾಗಿಯೇ ನಡೆಯುತ್ತಿದೆ. ಕೆಲವು ಕಡೆ ಸಾಕಷ್ಟು ಮೆಡಿಕಲ್ ಶಾಪ್‍ಗಳಿದ್ದರೆ, ಇನ್ನು ಕೆಲವೆಡೆ ಒಂದೂ ಮೆಡಿಕಲ್ ಶಾಪ್ ಇಲ್ಲದಿರಬಹುದು. ಇಂತಹ ಸ್ಥಳದಲ್ಲಿ ಮೆಡಿಕಲ್ ಶಾಪ್ ಇದ್ದಿದ್ದರೆ ಸಾಕಷ್ಟು ಜನರಿಗೆ ಹೆಲ್ಪ್ ಆಗಬಹುದಿತ್ತು ಎಂಬ ಭಾವನೆ ನಿಮ್ಮಲ್ಲಿ ಇರಬಹುದು. ಫಾರ್ಮಸಿ ಬಿಸ್ನೆಸ್‍ಗೆ ಬಿ.ಫಾರ್ಮಾ/ಎಂ.ಫಾರ್ಮಾ ಇತ್ಯಾದಿ ಶೈಕ್ಷಣಿಕ ಅರ್ಹತೆ ಇದ್ದರೆ ನೀವೂ ಮೆಡಿಕಲ್ ಶಾಪ್ ಮಾಲಿಕರಾಗಬಹುದು.

 

ಮೆಡಿಕಲ್ ಶಾಪ್ ವಿಧಗಳು
ಮೆಡಿಕಲ್ ಶಾಪ್ ತೆರೆಯಲು ವಿವಿಧ ಬಗೆಯ ಲೈಸನ್ಸ್‍ಗಳು ಅಸ್ತಿತ್ವದಲ್ಲಿವೆ.
1. ಹಾಸ್ಪಿಟಲ್ ಫಾರ್ಮಸಿ: ಆಸ್ಪತ್ರೆಯ ಒಳಭಾಗದಲ್ಲಿ ರೋಗಿಗಳ ಅನುಕೂಲಕ್ಕಾಗಿ ಮೆಡಿಕಲ್ ಶಾಪ್ ನಿರ್ಮಿಸುವುದನ್ನು ಹಾಸ್ಪಿಟಲ್ ಫಾರ್ಮಸಿ ಎನ್ನುತ್ತಾರೆ. ಹೆಚ್ಚಾಗಿ ಇದಕ್ಕೆ ಆ ಆಸ್ಪತ್ರೆಯ ರೋಗಿಗಳೇ ಪ್ರಮುಖ ಗ್ರಾಹಕರಾಗಿರುತ್ತಾರೆ.
2. ಸ್ಟಾಂಡೊಲಾನ್ ಫಾರ್ಮಸಿ: ಯಾವುದಾದರೂ ರೆಸಿಡೆನ್ಶಿಯಲ್ ಪ್ರದೇಶದಲ್ಲಿ ಅಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ಫಾರ್ಮಸಿ ಅಥವಾ ಮೆಡಿಕಲ್ ಸ್ಟೋರ್ ಸೆಟಪ್ ಮಾಡುವುದಾಗಿದೆ.
3. ಚೈನ್ ಫಾರ್ಮಸಿ: ಮಾಲ್ ಅಥವಾ ಇತರ ಶಾಪಿಂಗ್ ತಾಣಗಳಲ್ಲಿ ಯಾವುದಾದರೂ ಫಾರ್ಮಸಿ ಜಾಲವು ತನ್ನ ಸ್ಟೋರ್ ತೆರೆಯುವುದಾಗಿದೆ. ಇದು ಒಂದು ನೆಟ್‍ವರ್ಕ್ ಆಗಿ ಕಾರ್ಯನಿರ್ವಹಿಸುತ್ತದೆ.
4. ಟೌನ್‍ಷಿಪ್ ಫಾರ್ಮಸಿ: ಯಾವುದಾದರೂ ಟೌನ್‍ಷಿಪ್ ಒಳಗೆ ಫಾರ್ಮಸಿ ನಿರ್ಮಿಸುವುದನ್ನು ಟೌನ್‍ಷಿಪ್ ಫಾರ್ಮಸಿ ಎನ್ನುತ್ತಾರೆ.
ದೇಶದಲ್ಲಿ ಬಹುತೇಕ ಮೆಡಿಕಲ್ ಸ್ಟೋರ್‍ಗಳಿಂದು ಸ್ಟಾಂಡ್‍ಅಲೋನ್ ಫಾರ್ಮಸಿ ಅನ್ವಯ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಂತಹ ನಗರಗಳಲ್ಲಿ ಇಂದು ಮೆಡ್‍ಪ್ಲಸ್, ಟ್ರಸ್ಟ್ ಕೆಮಿಸ್ಟ್, ಮೆಡ್ ಝೋನ್ ಇತ್ಯಾದಿ ಹಲವು ಚೈನ್ ಫಾರ್ಮಸಿಗಳು ಹೆಚ್ಚಾಗುತ್ತಿವೆ. ಚೈನ್ ಫಾರ್ಮಸಿ, ಟೌನ್‍ಷಿಪ್ ಫಾರ್ಮಸಿಗಳನ್ನು ಹೆಚ್ಚಾಗಿ ಆಸ್ಪತ್ರೆಗಳು ಅಥವಾ ಕಂಪನಿಗಳು ಸ್ಥಾಪಿಸುತ್ತವೆ. ಆದರೆ, ಸ್ಟಾಂಡ್‍ಅಲೊನ್ ಫಾರ್ಮಸಿಗಳನ್ನು ಹೆಚ್ಚಾಗಿ ಸ್ವಂತ ಮಾಲಿಕತ್ವ ಅಥವಾ ಪಾಲುದಾರಿಕೆಯಲ್ಲಿ ಇಂತಹ ಬಿಸ್ನೆಸ್ ಮಾಡಲಾಗುತ್ತದೆ.

ತೆರಿಗೆಗೆ ಸಂಬಂಧಪಟ್ಟ ವಿಷಯ
ಭಾರತದಲ್ಲಿ ಸರಕು ಅಥವಾ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯಾಟ್ ರಿಜಿಸ್ಟ್ರೇಷನ್ ಅವಶ್ಯಕ. ಯಾವ ರಾಜ್ಯದಲ್ಲಿ ನೀವು ಮೆಡಿಕಲ್ ಸ್ಟೋರ್ ತೆರೆಯುವಿರೋ ಅಲ್ಲಿನ ವ್ಯಾಟ್ ನೀತಿನಿಯಮಕ್ಕೆ ತಕ್ಕಂತೆ ನೀವು ಕಾರ್ಯನಿರ್ವಹಿಸಬೇಕಾಗುತ್ತದೆ. ಆಯಾ ರಾಜ್ಯದ ವ್ಯಾಟ್ ಅಥವಾ ಮಾರಾಟ ತೆರಿಗೆ ಇಲಾಖೆಗೆ ವ್ಯಾಟ್ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ. ಕರ್ನಾಟಕ ವ್ಯಾಟ್ ರಿಜಿಸ್ಟ್ರೇಷನ್‍ಗಾಗಿ ಈ ವೆಬ್ ವಿಳಾಸಕ್ಕೆ ಭೇಟಿ ನೀಡಿರಿ. 

ಲೈಸನ್ಸ್ ಪಡೆಯುವುದು ಹೇಗೆ?
ಫಾರ್ಮಸಿ ಬಿಸ್ನೆಸ್‍ಗೆ ಫಾರ್ಮಸಿ ಅಥವಾ ಡ್ರಗ್ ಲೈಸನ್ಸ್ ಪಡೆಯುವುದು ಅತ್ಯಂತ ಅಗತ್ಯ. ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಜೇಶನ್ ಮತ್ತು ಸ್ಟೇಟ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಜೇಶನ್ ಕಂಟ್ರೋಲ್ ಈ ಡ್ರಗ್ ಲೈಸನ್ಸ್ ನೀಡುತ್ತದೆ. ಸಾಮಾನ್ಯ ಮೆಡಿಕಲ್ ಶಾಪ್ ತೆರೆಯಲು ರಿಟೇಲ್ ಡ್ರಗ್ ಲೈಸನ್ಸ್(ಆರ್‍ಡಿಎಲ್) ಸಾಕಾಗುತ್ತದೆ. ವೋಲ್ ಸೇಲ್ ಡ್ರಗ್ ಲೈಸನ್ಸ್(ಡಬ್ಲ್ಯುಡಿಎಲ್) ಸಹ ದೊರಕುತ್ತದೆ. ಹೆಚ್ಚಿನ ರಾಜ್ಯಗಳಲ್ಲಿ ಫಾರ್ಮಾಸಿಯಲ್ಲಿ ಪದವಿ ಅಥವಾ ಡಿಪ್ಲೊಮಾ ಪಡೆದವರಿಗೆ ಮಾತ್ರ ಇಂತಹ ಲೈಸನ್ಸ್ ದೊರಕುತ್ತದೆ. ಈ ಕಂಡಿಷನ್ ವೋಲ್‍ಸೇಲ್ ಡ್ರಗ್ ಲೈಸನ್ಸ್‍ಗೆ ಅನ್ವಯವಾಗುವುದಿಲ್ಲ.

ಏನೆಲ್ಲ ಬೇಕು?
ಮೆಡಿಕಲ್ ಶಾಪ್ ಲೈಸನ್ಸ್ ಪಡೆಯಲು ಅಥವಾ ಮೆಡಿಕಲ್ ಶಾಪ್ ನಿರ್ಮಿಸಲು ಬೇಕಾಗುವ ಕನಿಷ್ಠ ಅವಶ್ಯಕತೆಗಳು ಈ ರೀತಿ ಇವೆ.
* ಸ್ಥಳ: ಮೆಡಿಕಲ್ ಶಾಪ್‍ಗಾದರೆ ಕನಿಷ್ಠ 10 ಚದರಡಿ ಸ್ಥಳಾವಕಾಶ ಇರಬೇಕು. ಎಲ್ಲಾದರೂ ರಿಟೇಲ್ ಅಥವಾ ವೋಲ್‍ಸೇಲ್ ಬಿಸ್ನೆಸ್‍ಗೆ ಕನಿಷ್ಠ 15 ಚದರಡಿ ಸ್ಥಳಾವಕಾಶ ಇರಬೇಕು.
* ಸ್ಟೋರೇಜ್: ಮೆಡಿಕಲ್ ಶಾಪ್‍ನಲ್ಲಿ ಕಡ್ಡಾಯವಾಗಿ ರೆಫ್ರಿಜರೇಟರ್ ಇರಬೇಕು.
* ಸಿಬ್ಬಂದಿ ವರ್ಗ: ಮೆಡಿಕಲ್ ಶಾಪ್‍ನಲ್ಲಿ ಔಷಧ ಮಾರಾಟ ಮಾಡುವವರು ಫಾರ್ಮಾ ಸಂಬಂಧಿತ ಶಿಕ್ಷಣ ಪಡೆದಿರಬೇಕು.

ಏನು ಓದಿರಬೇಕು?
ಫಾರ್ಮಸಿ ಲೈಸನ್ಸ್ ಪಡೆಯಲು ಮತ್ತು ಫಾರ್ಮಸಿ ರಿಜಿಸ್ಟ್ರಾರ್ ಮಾಡಲು ನೀವು ಬಿ.ಫಾರ್ಮಾ ಅಥವಾ ಎಂ. ಫಾರ್ಮಾ ಓದಿರಬೇಕು. ಕೆಲವರು ಈ ರೀತಿ ಶಿಕ್ಷಣ ಪಡೆದವರ ಹೆಸರಿನಲ್ಲಿ ಗುಡ್‍ವಿಲ್ ಪೇಮೇಂಟ್ ಒಪ್ಪಂದ ಮಾಡಿಕೊಂಡು ಮೆಡಿಕಲ್ ಶಾಪ್ ನಿರ್ಮಿಸಬಹುದು. ಇದು ನ್ಯಾಯಸಮ್ಮತವಲ್ಲವಾದರೂ ದೇಶದಲ್ಲಿಂದು ಇಂತಹ ಮೆಡಿಕಲ್ ಸಂಖ್ಯೆ ಸಾಕಷ್ಟಿದೆ.
ನೀವು ಎಷ್ಟು ಹಣ ಹೂಡಿಕೆ ಮಾಡಲು ರೆಡಿ ಇದ್ದೀರಿ ಎನ್ನುವುದರ ಮೇಲೆ ನೀವು ಎಷ್ಟು ದೊಡ್ಡ ಮೆಡಿಕಲ್ ಸ್ಟೋರ್ ನಿರ್ಮಿಸಬಹುದು ಎನ್ನುವುದು ನಿಂತಿದೆ. ಪುಟ್ಟ ಕೋಣೆಯಂತಹ ರೂಂಗೆ ಬಾಡಿಗೆ, ಅಡ್ವಾನ್ಸ್ ಎಂದು ಹಲವು ಲಕ್ಷ ಖರ್ಚು ಮಾಡಬೇಕಾಗುತ್ತದೆ. ನಂತರ ಅಲ್ಲಿ ಔಷಧಗಳನ್ನು ಸಂಗ್ರಹಿಸಬೇಕು.
ಇಂತಹ ಮೆಡಿಕಲ್ ಸ್ಟೋರ್ ಮಾಡಿದ ನಂತರ ಡಾಕ್ಟರ್ ಅಥವಾ ಹಾಸ್ಪಿಟಲ್‍ನ ನೆಟ್‍ವರ್ಕ್ ನಿಮಗೆ ಅಗತ್ಯವಿರುತ್ತದೆ. ನೀವು ಗಮನಿಸಿರಬಹುದು. ಕೆಲವು ಡಾಕ್ಟರ್‍ಗಳು ಅವರು ಹೇಳಿದ ಮೆಡಿಕಲ್ ಸ್ಟೋರ್‍ಗೆ ಹೋಗುವಂತೆ ತಿಳಿಸುತ್ತಾರೆ. ಇಲ್ಲಿ ಡಾಕ್ಟರ್‍ಗೂ ಮೆಡಿಕಲ್ ಸ್ಟೋರ್‍ನವರಿಗೂ ಒಳ ಒಪ್ಪಂದ ಇರುತ್ತದೆ. ಇಂತಹ ನೆಟ್ ವರ್ಕ್ ಳಿದ್ದರೆ ಮಾತ್ರ ಔಷಧಗಳು ಹೆಚ್ಚು ಮಾರಾಟವಾಗುತ್ತವೆ. ಇದು ಕೂಡ ನೈತಿಕ ಹಾದಿಯಲ್ಲ. ಆದರೆ, ಹೆಚ್ಚಿನವರು ಇದೇ ಹಾದಿಯನ್ನು ಫಾಲೊ ಮಾಡುತ್ತಿದ್ದಾರೆ.

ಡಾಕ್ಯುಮೆಂಟ್ಸ್ ಏನುಬೇಕು?
ಡ್ರಗ್ ಲೈಸನ್ಸ್ ಪಡೆಯಲು ಮತ್ತು ಮೆಡಿಕಲ್ ಶಾಪ್ ತೆರೆಯಲು ಬೇಕಾದ ಅರ್ಜಿ ನಮೂನೆಗಳು ಮತ್ತು ದಾಖಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ನೀವು ಕರ್ನಾಟಕ ರಾಜ್ಯದವರಾದರೆ ಈ ರಾಜ್ಯದ ಫಾರ್ಮಸಿ ಲೈಸನ್ಸ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಳ್ಳಬೇಕು. ಡ್ರಗ್ ಲೈಸನ್ಸ್‍ಗಾಗಿ ಡೆಪೆÇಸಿಟ್ ಮಾಡಿದ ಮೊತ್ತದ ಚಲನ್, ಡಿಕ್ಲರೇಷನ್, ಸ್ಥಳದ ಕೀ ಪ್ಲಾನ್, ಸೈಟ್ ಪ್ಲಾನ್ ಬ್ಲೂಪ್ರಿಂಟ್ ಇತ್ಯಾದಿಗಳನ್ನು ನೀಡಬೇಕಾಗುತ್ತದೆ. ಈ ಕುರಿತು ಮಾಹಿತಿ ಪಡೆಯಲು ಮತ್ತು ಅರ್ಜಿ ನಮೂನೆಗಾಗಿ ವೆಬ್‍ಸೈಟ್ ಗೆ ಭೇಟಿ ನೀಡಿ.

Published in Vijaya Karnataka Mini

Monday, 14 November 2016

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಉದ್ಯೋಗಿಗಳು ಕಲಿಯಬೇಕಾದ ಮತ್ತು ಕಲಿಯಬಾರದ ಅಂಶಗಳೇನು? ಈ ಕಾರ್ಯಕ್ರಮ ನೀಡುವ ಪಾಠವನ್ನು ನಮ್ಮ ಕರಿಯರ್ ಪ್ರಗತಿಗೂ ಬಳಸಬಹುದೇ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಬಿಗ್‍ಬಾಸ್ ಕಾರ್ಯಕ್ರಮ ನೀವು ಇಷ್ಟಪಡಬಹುದು. ಇಷ್ಟ ಪಡದೆ ಇರಬಹುದು. ಆದರೆ, ಸಂಪೂರ್ಣವಾಗಿ ನಿರಾಕರಿಸುವುದು ಕಷ್ಟ. ಯಾಕೆಂದರೆ, ಕ್ಯಾಮೆರಾ ಇಲ್ಲವೆನ್ನುವುದನ್ನು ಬಿಟ್ಟರೆ ಪ್ರತಿಯೊಂದು ಮನೆಯಲ್ಲಿ, ಆಫೀಸ್‍ನಲ್ಲಿ ಇರುವ ವಾತಾವರಣದಂತೆಯೇ ಬಿಗ್‍ಬಾಸ್ ಮನೆ ಇರುತ್ತದೆ.
ನೀವು ಕೆಲಸ ಮಾಡುತ್ತಿರುವ ಆಫೀಸ್ ಅನ್ನೇ ನೋಡಿ. ಅದನ್ನೇ ಬಿಗ್‍ಬಾಸ್ ಮನೆಯೆಂಬ ದೃಷ್ಟಿಯಲ್ಲಿ ನೋಡಿ. ಅಲ್ಲಿ ಎಷ್ಟೊಂದು ಜನರಿದ್ದಾರೆ. ವಿವಿಧ ಜಾತಿ, ಧರ್ಮ, ಪ್ರತಿಭೆಯುಳ್ಳವರು ಅಲ್ಲಿರುತ್ತಾರೆ. ಎಲ್ಲರೂ ಒಂದೇ ಮನೆಯಲ್ಲಿ ಇರುವವರಂತೆ ಇರುತ್ತಾರೆ. ಅಲ್ಲೂ ಗುಂಪುಗಾರಿಕೆ ಇದೆ. ಜಗಳವಿದೆ. ದರ್ಪ, ಆಹಂ, ಮತ್ಸರ, ಕಾಲೆಳೆಯುವಿಕೆ ಇದೆ. ಅಷ್ಟೇ ಏಕೆ, ಯಾರ್ಯಾರೋ ಒಳಗೆ ಬರುತ್ತಾರೆ. ಯಾರ್ಯಾರೋ ಹೊರಗೆ ಬರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮವು ಕರಿಯರ್‍ಗೆ ಅತ್ಯಂತ ಮಹತ್ವದ ಪಾಠ ಕಲಿಸುತ್ತದೆ. ನಾವು ಅನುಕರಿಸಬಹುದಾದ ಮತ್ತು ಅನುಕರಿಸಬಾರದ ಹಲವು ಸಂಗತಿಗಳು ಬಿಗ್‍ಬಾಸ್‍ನಲ್ಲಿದೆ.
ಉತ್ತಮ ನಾಯಕತ್ವ: ಕನ್ನಡ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಸ್ಥಾನದಲ್ಲಿ ಇನ್ಯಾರೋ ಸಾಮಾನ್ಯ ನಟರನ್ನು ಕಲ್ಪಿಸಿಕೊಳ್ಳಿ. ಯಾಕೋ, ಸರಿಬರುತ್ತಿಲ್ಲ ತಾನೇ. ಕನ್ನಡದಲ್ಲಿ ಬಿಗ್‍ಬಾಸ್‍ಗೆ ಸುದೀಪ್ ಮಾತ್ರ ಸೂಕ್ತವೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿರುತ್ತದೆ. ಉತ್ತಮ ನಾಯಕತ್ವದ ಲಕ್ಷಣವೇ ಇದು. ನೀವು ಕೆಳಹಂತದ ಉದ್ಯೋಗದಲ್ಲಿದ್ದರೆ ನಿಮಗೆ ನಿಮ್ಮ ಟೀಮ್ ಲೀಡರೇ ನಾಯಕ ಆಗಬಹುದು. ಆ ಟೀಮ್ ಲೀಡರ್‍ಗೆ ಇನ್ಯಾರೋ ಮ್ಯಾನೇಜರ್ ನಾಯಕ ಆಗಿರಬಹುದು. ಮ್ಯಾನೇಜರ್‍ಗೆ ಚೀಫ್ ಮ್ಯಾನೇಜರ್, ಚೀಫ್ ಮ್ಯಾನೇಜರ್‍ಗೆ ಸಿಇಒ ಬಿಗ್‍ಬಾಸ್‍ನಂತೆ ಕಾಣಬಹುದು. ಈ ಎಲ್ಲಾ ಚೈನ್‍ಗಳು ಸಮರ್ಥವಾಗಿರುವುದು ಅತ್ಯಂತ ಮುಖ್ಯ. ಸಹೋದ್ಯೋಗಿಗಳು ಗೌರವಿಸುವಂತಹ ಉತ್ತಮ ವ್ಯಕ್ತಿತ್ವವನ್ನು ಲೀಡರ್ ಹೊಂದಿರಬೇಕು. ಇಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವವರು ಮಾತ್ರ ನಾಯಕರಾಗುತ್ತಾರೆ.
ಬೇಗ ಎದ್ದೇಳಿ: ತಡವಾಗಿ ಮಲಗಿ ತಡವಾಗಿ ಎದ್ದೇಳುವ ಗುಣವನ್ನು ಬಿಗ್‍ಬಾಸ್ ನೋಡಿ ಕಲಿಯಬೇಡಿ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಬಹುತೇಕರಿಗೆ ಬೆಳಗಾಗುವುದು ಒಂಬತ್ತರ ಮೇಲೆಯೇ. ಮತ್ತೆ ಬಹುತೇಕರು ಮಲಗುವುದು ತಡವಾಗಿಯೇ. ಥೇಟ್ ಕಾಪೆರ್Çರೇಟ್ ಕಲ್ಚರ್‍ನಂತೆಯೇ. ರಾತ್ರಿ ಯಾವುದೋ ಪಾರ್ಟಿಗೆ ಹೋಗುವುದು. ಬೆಳಗ್ಗೆ ಒಂಬತ್ತರ ನಂತರ ಎದ್ದೇಳುವುದನ್ನು ಬಹುತೇಕ ಉದ್ಯೋಗಿಗಳು ರೂಢಿಸಿಕೊಂಡಿದ್ದಾರೆ. ಬೆಳಗ್ಗೆ ಎದ್ದು ನಿದ್ದೆಗಣ್ಣಿನಲ್ಲೇ ಆಫೀಸ್‍ಗೆ ಬರುತ್ತಾರೆ. ಇದರ ಬದಲು, ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಎದ್ದು, ವ್ಯಾಯಾಮ, ವಾಕಿಂಗ್ ಮಾಡಿ. ದಿನದ ಆರಂಭ ಉತ್ತಮವಾಗಿದ್ದರೆ ನೀವು ಆಫೀಸ್‍ನಲ್ಲಿಯೂ ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕರಿಯರ್ ಪ್ರಗತಿಗೆ ಈ ಲವಲವಿಕೆ ಅತ್ಯಂತ ಅಗತ್ಯ.
ಗಾಸಿಪ್ ಬೇಡ: ಬಿಗ್‍ಮನೆಯ ಅತ್ಯಂತ ಆಕರ್ಷಣೆ ಅಲ್ಲಿನ ಗಾಸಿಪ್ ಆಗಿದೆ. ಯಾರೋ ಅವರ ಬಗ್ಗೆ ಹೀಗಂದರು, ಹಾಗಂದರು, ಆತ ಹೀಗೆ, ಇವಳು ಹೀಗೆ ಎಂದೆಲ್ಲ ಗುಸುಗುಸಿಗೆ ಬಿಗ್‍ಬಾಸ್ ಕ್ಯಾಮೆರಾ ಕಣ್ಣಾಗುತ್ತದೆ ಮತ್ತು ಕಿವಿಯಾಗುತ್ತದೆ. ಬಿಗ್‍ಮನೆಯಲ್ಲಿ ನಡೆಯುವ ಈ ಗುಸುಗುಸು ಪೂರ್ತಿ ಮನೆಯ ವಾತಾವರಣವನ್ನೇ ಹಾಳು ಮಾಡುತ್ತದೆ. ಆಫೀಸ್‍ನಲ್ಲಿಯೂ ಇಂತಹ ಗಾಸಿಪ್‍ಗಳು ಸಾಮಾನ್ಯ. ನೀವು ಗಾಸಿಪ್ ಮಾಡುವವರಾಗಿದ್ದರೆ ನೀವು ನಾಮಿನೆಟ್ ಆಗುವವರ ಲಿಸ್ಟ್‍ನಲ್ಲಿದ್ದೀರಿ ಎಂದು ತಿಳಿಯಿರಿ.
ಗುಂಪುಗಾರಿಕೆ: ಬಿಗ್‍ಬಾಸ್ ಮನೆಯಲ್ಲಿ ಗುಂಪುಗಾರಿಕೆ ನೋಡಿರುತ್ತೀರಿ. ಇರುವ ಕೆಲವೇ ಮಂದಿಯಲ್ಲಿ ಹಲವು ಬಣಗಳು ಸೃಷ್ಟಿಯಾಗುತ್ತವೆ. ಆಫೀಸ್‍ನಲ್ಲಿಯೂ ಹಾಗೆಯೇ. ಒಂದಿಷ್ಟು ಗುಂಪುಗಾರಿಕೆ, ರಾಜಕೀಯ ಇರುತ್ತದೆ. ಇಂತಹ ಗುಂಪುಗಾರಿಕೆಯೂ ಕಂಪನಿಯ ಶತ್ರು.
ಆರೋಗ್ಯಕರ ಸ್ಪರ್ಧೆ: ಬಿಗ್‍ಬಾಸ್‍ನಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರೂ ಸ್ಫರ್ಧಿಯಾಗಿರುತ್ತಾರೆ. ಎಲ್ಲರೂ ಗೆಲ್ಲಬೇಕೆಂದು ಬಯಸುತ್ತಾರೆ. ಆದರೆ, ಆ ಗೆಲುವು ಪಡೆಯಲು ಅತ್ಯಂತ ಪ್ರಮುಖವಾಗಿ ಬೇಕಾದದ್ದು ಪ್ರಯತ್ನ, ಪ್ರಾಮಾಣಿಕತೆ ಮತ್ತು ಪ್ರತಿಭೆ. ನೀವಿರುವ ಕಂಪನಿಯಲ್ಲಿಯೂ ಉನ್ನತ್ತ ಸ್ಥಾನಕ್ಕೆ ಹೋಗಲು ಪ್ರತಿಯೊಬ್ಬರೂ ಬಯಸುತ್ತಿರುತ್ತಾರೆ. ಪ್ರಯತ್ನ, ಪ್ರತಿಭೆ, ಪ್ರಾಮಾಣಿಕತೆ ಇರುವವರು ಇಲ್ಲೂ ಪ್ರಗತಿ ಕಾಣುತ್ತಾರೆ.
ಪರ್ಫಾಮೆನ್ಸ್ ಮುಖ್ಯ: ಬಿಗ್‍ಬಾಸ್‍ನಲ್ಲಿ ವಿವಿಧ ರೀತಿಯ ಟಾಸ್ಕ್‍ಗಳು ಇರುತ್ತವೆ. ಪ್ರತಿದಿನ, ಕ್ಷಣವೂ ಟಾಸ್ಕ್‍ನಿಂದ ಕೂಡಿರುತ್ತದೆ. ಇಲ್ಲಿ ಉತ್ತಮ ಪರ್ಫಾಮೆನ್ಸ್ ತೋರಿದವರು ಮಾತ್ರ ಉಳಿಯುತ್ತಾರೆ. ಇದ್ದು ಇಲ್ಲದಂತೆ ಇರುವವರು, ಟಾಸ್ಕ್‍ಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳದವರು ಬಿಗ್‍ಬಾಸ್ ಮನೆಯಿಂದ ಮನೆಗೆ ಹೋಗುತ್ತಾರೆ. ಕಂಪನಿಗಳು ಸಹ ಪರ್ಫಾಮೆನ್ಸ್ ತೋರುವವರಿಗೆ ಮಾತ್ರ ಮಣೆ ಹಾಕುತ್ತದೆ. ಇಲ್ಲವಾದರೆ ಮನೆಗೆ ಕಳುಹಿಸುತ್ತದೆ.
ಮಾತು ಮತ್ತು ಕೃತಿ: ಬಿಗ್‍ಬಾಸ್‍ನಲ್ಲಿ ಕೆಲವರು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಅವರ ಮಾತಿಗೂ ಕೃತಿಗೂ ತಾಳೆಯಾಗುವುದೇ ಇಲ್ಲ. ಆಫೀಸ್‍ನಲ್ಲಿಯೂ ಹಾಗೆಯೇ, ಕೆಲವರು ಮಾತು ಮಾತ್ರ ಆಡುತ್ತಾರೆ. ಅವರ ಮಾತು ಕೃತಿಯಾಗುವುದೇ ಇಲ್ಲ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುವವರು ಒಂದಿಷ್ಟು ದಿನ ಕಂಪನಿಯನ್ನು ಯಾಮಾರಿಸಬಹುದಾದರೂ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಕೆಲಸ ಕಲಿಯಿರಿ: ಬಿಗ್‍ಬಾಸ್‍ನಲ್ಲಿ ವಿವಿಧ ವಿಐಪಿಗಳು ಇರುತ್ತಾರೆ. ಅವರೂ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಬಾತ್‍ರೂಂ ಸ್ವಚ್ಛ ಮಾಡಬೇಕಾಗುತ್ತದೆ. ನೀವು ಕರಿಯರ್‍ನಲ್ಲಿ ಪ್ರಗತಿ ಕಾಣಬೇಕಾದರೆ ನಿಮ್ಮ ಕೆಲಸಕ್ಕೆ ಮಾತ್ರ ಸೀಮಿತರಾಗಬೇಡಿ. ಕಂಪನಿಯ ಎಲ್ಲಾ ಸಿಬ್ಬಂದಿಗಳು ಮಾಡುವ ಕೆಲಸದ ಬಗ್ಗೆಯೂ ಅರಿವಿರಲಿ.
ದುಂದು ವೆಚ್ಚ ಬೇಡ: ಬಿಗ್‍ಬಾಸ್‍ನ ಲಗ್ಷುರಿ ಟಾಸ್ಕ್‍ನಿಂದ ಎಲ್ಲರೂ ಕಲಿಯಬಹುದಾದ ಒಂದು ಅಂಶವಿದೆ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟೇ ಖರ್ಚು ಮಾಡಿ ಎಂಬ ಅತ್ಯಂತ ಮಹತ್ವದ ಪಾಠವನ್ನು ಅದು ಹೇಳಿಕೊಡುತ್ತದೆ. ನಿಮ್ಮ ವೇತನಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಕಾರು ಸಾಲ, ಮನೆ ಸಾಲವೆಂದು ಹೆಚ್ಚು ಹೊರೆಯಲ್ಲಿ ಇರಬೇಡಿ.
ಬ್ಯಾಗ್ ಸಿದ್ಧವಾಗಿರಲಿ: ಕೊನೆಯ ಮತ್ತು ಅತ್ಯಂತ ಪ್ರಮುಖ ಪಾಠವೆಂದರೆ `ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಟ್ಟುಕೊಳ್ಳಿ'. ನೀವು ಸದಾ ಯಾವಾಗ ಬೇಕಾದರೂ ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು. ಕೆಲಸ ಹೋಗುವ ಭಯದಲ್ಲಿ ಇರಬೇಡಿ. ನಿಮಗೆ ಎಲ್ಲಿ ಹೋದರೂ ಅವಕಾಶ ಸಿಗುತ್ತದೆ ಎಂಬಂತಹ ವ್ಯಕ್ತಿತ್ವ, ಪ್ರತಿಭೆ ಬೆಳೆಸಿಕೊಳ್ಳಿ.

  • ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಆಫೀಸ್‍ನಲ್ಲಿ ಮತ್ತು ಬಿಗ್‍ಬಾಸ್‍ನಲ್ಲಿ ಉಳಿಯಬಹುದು. ಇತ್ತೀಚೆಗೆ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ಅಭ್ಯರ್ಥಿಯೊಬ್ಬರು ಹೊರಹೋಗಲು ಆರೋಗ್ಯ ಸಮಸ್ಯೆಯೂ ಪ್ರಮುಖ ಕಾರಣವಾಗಿತ್ತು.

  •  ಬಿಗ್‍ಬಾಸ್‍ನಲ್ಲಿ ಅತ್ತರೆ ಅನುಕಂಪದ ಓಟ್ ಬರುತ್ತೆ ಎಂದು ಹೇಳುವವರು ಇದ್ದಾರೆ. ಆದರೆ ಆಫೀಸ್‍ನಲ್ಲಿ ಯಾವಾಗಲೂ ನಮ್ಮ ವೀಕ್‍ನೆಸ್ ಅನ್ನು ಪ್ರದರ್ಶಿಸಬಾರದು. ನೀವು ಸ್ಟ್ರಾಂಗ್ ಆಗಿದ್ದಷ್ಟು ಒಳ್ಳೆಯದು.

  •  ನಿಮಗೆ ಇಷ್ಟವಾಗದ ವಿಚಾರದ ಬಗ್ಗೆ ಸಾತ್ವಿಕವಾಗಿ ಪ್ರತಿಭಟನೆ ಮಾಡಿ. ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡಬೇಡಿ. ಒಳ್ಳೆಯ ಕಾರಣದಿಂದ ಗಮನ ಸೆಳೆಯಿರಿ. ಗಿಮಿಕ್ ಮಾಡಿ ಗಮನ ಸೆಳೆಯಬೇಡಿ.

  •  ಇತರರನ್ನು ಗೌರವಿಸಿ. ನಿಮ್ಮಲ್ಲಿ ಇರುವ ಕೆಟ್ಟಗುಣಗಳನ್ನು ಬಿಟ್ಟುಬಿಡಿ. ನಿಮ್ಮಲ್ಲಿ ಇತರರಿಗೆ ಇಷ್ಟವಾಗದ ಸಂಗತಿಗಳು ಯಾವುದು ಎಂದು ತಿಳಿದುಕೊಳ್ಳಿ.ತಾನು ಮಾತ್ರ ಗೆಲ್ಲಬೇಕೆಂದು ಸ್ವಾರ್ಥಿಯಾದರೆ ಎಲ್ಲರೂ ದೂರ ಸರಿಯುತ್ತಾರೆ.

  •  ನಿಮಗೆ ಗೊತ್ತಿರುವ ಕೌಶಲವನ್ನು ಕಂಪನಿಯ ಇತರ ಸಹೋದ್ಯೋಗಿಗಳಿಗೂ ಹೇಳಿಕೊಡಿ. ಇತರರ ನೋವಿಗೆ ಸ್ಪಂದಿಸಿ. ಅಗತ್ಯಬಿದ್ದರೆ ಸಹಾಯ ಮಾಡಿ.

  •  ನಾವು ಆಡುವ ಮಾತುಗಳ ಕುರಿತೂ ಎಚ್ಚರದಿಂದ ಇರಬೇಕು. ನಿಮಗೆ ತಿಳಿಯದಂತೆ ಆಗುವ ತಪ್ಪುಗಳ ಕುರಿತೂ ಎಚ್ಚರದಿಂದ ಇರಬೇಕು.

  •  ಆಫೀಸ್ ಎಂದರೆ ಸದಾ ಕತ್ತೆಯಂತೆ ದುಡಿಯಬೇಕೆಂದಿಲ್ಲ. ಆಗಾಗ ಫನ್, ಮನರಂಜನೆ ಇರಬೇಕು. ನಗುಮುಖದಿಂದ ಇದ್ದರೆ ಮಾತ್ರ ನಿಮ್ಮ ಆರೋಗ್ಯ ಮತ್ತು ಕಂಪನಿಯ ಆರೋಗ್ಯ ಚೆನ್ನಾಗಿರುತ್ತದೆ.

  •  ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಪ್ರದರ್ಶಿಸಲು ಬಿಗ್‍ಬಾಸ್ ಅಥವಾ ಆಫೀಸ್ ಉತ್ತಮ ವೇದಿಕೆಯಾಗಿದೆ. ಇಲ್ಲಿ ಪ್ರತಿಭಾನ್ವಿತರು ಉಳಿಯುವ ಸಾಧ್ಯತೆ ಹೆಚ್ಚಿದೆ.


 

Published in VK Mini