Monday, 29 May 2017

ಸಂದರ್ಶನದ ಪ್ರಶ್ನೆ: ನಿಮ್ಮ ಬಗ್ಗೆ ಹೇಳಿ..

ಸಂದರ್ಶನದ ಪ್ರಶ್ನೆ: ನಿಮ್ಮ ಬಗ್ಗೆ ಹೇಳಿ..

ಉದ್ಯೋಗ ಸಂದರ್ಶನದಲ್ಲಿ ಕೇಳುವ ಸಾಮಾನ್ಯ ಪ್ರಶ್ನೆಗಳು ಇಲ್ಲಿವೆ. ಇವುಗಳಿಗೆ ಹೇಗೆ ಉತ್ತರಿಸುವುದೆಂದು ತಿಳಿದುಕೊಳ್ಳಿ


* ಪ್ರವೀಣ್ ಚಂದ್ರ ಪುತ್ತೂರು

ಉದ್ಯೋಗ ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳಿಗೆ `ನಮ್ಮಲ್ಲಿ ಏನು ಪ್ರಶ್ನೆ ಕೇಳ್ತಾರಪ್ಪ?' ಎಂಬ ಟೆನ್ಷನ್ ಇರುವುದು ಸಾಮಾನ್ಯ. ಯಾವ ಪ್ರಶ್ನೆ ಕೇಳುತ್ತಾರೆ ಎಂದು ಗೊತ್ತಿದ್ದರೆ ಒಂದಿಷ್ಟು ಹೊತ್ತು ಕನ್ನಡಿ ಮುಂದೆ ನಿಂತುಕೊಂಡು ಉತ್ತರ ಹೇಳಲು ಪ್ರ್ಯಾಕ್ಟೀಸ್ ಮಾಡಬಹುದಿತ್ತು ಎಂದುಕೊಳ್ಳುವವರು ಬಹಳಷ್ಟು ಜನರು ಇರುತ್ತಾರೆ. ಸಂದರ್ಶನದಲ್ಲಿ ಇದೇ ರೀತಿಯ ಪ್ರಶ್ನೆ ಕೇಳುತ್ತಾರೆ ಎಂದು ಇದಮಿತ್ತಂ ಹೇಳುವುದು ಕಷ್ಟ. ಯಾಕೆಂದರೆ, ಪ್ರಶ್ನೆ ಕೇಳುವುದು ಆಯಾ ಸಂದರ್ಶಕರ ಮರ್ಜಿಗೆ ಬಿಟ್ಟ ವಿಷಯ. ಆದರೆ, ಅವರಲ್ಲಿಯೂ ಪ್ರಶ್ನೆ ಕೇಳಲು ಸಾಕಷ್ಟು ವಿಷಯಗಳು ಇರುವುದಿಲ್ಲ. ಬಹುತೇಕ ಪ್ರಶ್ನೆಗಳು ಈ ಹಿಂದೆ ಕೇಳಿದ್ದೇ ಆಗಿರುತ್ತವೆ. ಸಾಮಾನ್ಯವಾಗಿ ಸಂದರ್ಶಕರು ಕೇಳುವ ಸಾಮಾನ್ಯ ಪ್ರಶ್ನೆಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಮುಂದೆ ನೀವು ಸಂದರ್ಶನಕ್ಕೆ ಹೋದಾಗ ಹೇಗೆ ಉತ್ತರಿಸಬೇಕೆಂದು ಈಗಲೇ ತಯಾರಿ ನಡೆಸಿರಿ.
ಪ್ರಶ್ನೆ: ನಿಮ್ಮ ಬಗ್ಗೆ ಸ್ವಲ್ಪ ಹೇಳುವಿರಾ?
ವಾಹ್, ಎಷ್ಟು ಸರಳ ಪ್ರಶ್ನೆ ಎಂದುಕೊಂಡಿರಾ? ನಿಜಕ್ಕೂ ಇದು ಕಠಿಣ ಪ್ರಶ್ನೆ. ನಿಮ್ಮ ಬಗ್ಗೆ ನೀವು ಏನೇನೋ ಹೇಳಲು ಹೋಗಬೇಡಿ. ಇದು ಸರಳ ಪ್ರಶ್ನೆಯಾಗಿ ಕಂಡರೂ ನಿಮ್ಮನ್ನು ಮೌಲ್ಯಮಾಪನ ಮಾಡುವ ಅತ್ಯಂತ ಪ್ರಮುಖ ಪ್ರಶ್ನೆಯೆಂದು ನೆನಪಿಡಿ.
ಈ ಪ್ರಶ್ನೆ ಕೇಳುವ ಹಿಂದೆ ಹಲವು ಉದ್ದೇಶಗಳು ಇರುತ್ತವೆ. ಕೆಲವೊಮ್ಮೆ ಸಂದರ್ಶಕರು ಅಭ್ಯರ್ಥಿಯ ಮನದಲ್ಲಿ ಸಹಜವಾಗಿ ಮೂಡುವ ಆರಂಭಿಕ ನರ್ವಸ್‍ನೆಸ್ ಅನ್ನು ಕಡಿಮೆ ಮಾಡಲು ನಿಮ್ಮ ಬಗ್ಗೆ ಹೇಳಿ, ಓದಿನ ಬಗ್ಗೆ ಹೇಳಿ, ಹವ್ಯಾಸಗಳ ಬಗ್ಗೆ ಹೇಳಿ ಎಂದೆಲ್ಲ ಕೇಳುತ್ತಾರೆ. ಆ ಸಂದರ್ಶನದ ರೂಂಗೆ ನಿಮ್ಮನ್ನು ಹೊಂದಿಕೊಳ್ಳುವಂತೆ ಮಾಡುವುದು ಇದರ ಉದ್ದೇಶ. ನಿಮ್ಮ ಬಗ್ಗೆ ಹೇಳಿ ಎಂದಾಗ ಎಲ್ಲರಂತೆ ನೀವು ಕೂಡ `ನಾನು ಮಿಸ್ಟರ್ ಎಕ್ಸ್, ಇಲ್ಲಿ ಓದಿದ್ದೀನಿ. ಅಲ್ಲಿ ಕೆಲಸ ಮಾಡಿದ್ದೀನಿ' ಎಂದು ಓತಪೆÇ್ರೀತವಾಗಿ ಹೇಳಬೇಡಿ. ನಿಮ್ಮ ಬಗ್ಗೆ ಹೇಳುವುದೂ ಒಂದು ಕಲೆ. ಆ ಕಲೆ ಕಲಿತುಕೊಂಡರೆ ನಿಮ್ಮ ಮುಂದಿರುವ ಸಂದರ್ಶಕರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಬಹುದು.
ನಿಮ್ಮ ಆತ್ಮವಿಶ್ವಾಸದ ಪರೀಕ್ಷೆ: ಸಂದರ್ಶಕರು ಹೆಚ್ಚಾಗಿ ಈ ಪ್ರಶ್ನೆಯಲ್ಲಿ ನೀವು ಹೇಳುವ ಉತ್ತರದೊಳಗಿನ ಮಾಹಿತಿಯ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ ಇರಬಹುದು. ಅವರು ನಿಮ್ಮಲ್ಲಿರುವ ಆತ್ಮವಿಶ್ವಾಸ, ಉತ್ಸಾಹ ಮತ್ತು ಪ್ಯಾಶನ್ ಅನ್ನು ಪರಿಶೀಲಿಸಲು ಹೆಚ್ಚಾಗಿ ಇಂತಹ ಪ್ರಶ್ನೆ ಕೇಳುತ್ತಾರೆ. ನಿಮ್ಮ ಬಗ್ಗೆ ಹೇಳುವಾಗ ತಡಬಡಾಯಿಸಬೇಡಿ. ನಿಮ್ಮ ಬಗ್ಗೆ ನೀವೇ ತಿಳಿದುಕೊಳ್ಳದೆ ಇದ್ದರೆ ಹೇಗೆ? ಜೊತೆಗೆ ಅದನ್ನು ಪ್ರಸಂಟೇಷನ್ ಮಾಡುವ ಕಲೆಯೂ ನಿಮಗೆ ಗೊತ್ತಿರಬೇಕು.
ಉತ್ತರಿಸುವ ಮೊದಲು ಇರಲಿ ಎಚ್ಚರ: ಟೆಲ್ ಮಿ ಅಬೌಟ್ ಯುವರ್‍ಸೆಲ್ಫ್ ಎಂಬ ಪ್ರಶ್ನೆಗೆ ಉತ್ತರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಕೆಲವರು ಅಪಾಯಕಾರಿಯಾಗಿ, ಅನಿರೀಕ್ಷಿತವಾಗಿ ಮತ್ತು ಅಸಂಪ್ರದಾಯಿಕವಾಗಿ ಪ್ರತಿಕ್ರಿಯಿಸುತ್ತರೆ. ಇದು ಸುಲಭದ ಪ್ರಶ್ನೆಯಾಗಿದ್ದರೂ ಉತ್ತರಿಸಲು ಕೆಲವರು ತಡಬಡಾಯಿಸುತ್ತಾರೆ. ಯಾಕೆಂದರೆ, ಎಲ್ಲದಕ್ಕೂ ಸಿದ್ಧತೆ ಮಾಡಿಕೊಂಡಿರುವವರು ಈ ಸರಳ ಪ್ರಶ್ನೆಯ ಬಗ್ಗೆ ಯೋಚಿಸಿರುವುದೇ ಇಲ್ಲ. ಇದಕ್ಕೆ ಸಮರ್ಪಕವಾಗಿ ಉತ್ತರಿಸಿದರೆ ನಿಮ್ಮನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಯಾರಾದರೂ ನಿಮ್ಮ ಬಗ್ಗೆ ಹೇಳಿ ಎಂದು ಕೇಳಿದರೆ, ಪ್ರಶ್ನೆ ಕೇಳಿದವರಿಗೆ ಸಂತೋಷ ಆಗುವಂತೆ ನಿಮ್ಮ ಬಗ್ಗೆ ಹೇಳಿ. ಯಾಕಪ್ಪ ಇವನಲ್ಲಿ ಇವನ ಬಗ್ಗೆ ಕೇಳಿದೆ ಎಂದನಿಸದೆ ಇರಲಿ.
ನಡೆಸಿ ಸಿದ್ಧತೆ: ಇಲ್ಲಿಯವರೆಗೆ ನೀವು ಇದು ಸರಳ ಪ್ರಶ್ನೆ ಎಂದುಕೊಂಡಿರಬಹುದು. ಒಮ್ಮೆ ಕನ್ನಡಿ ಮುಂದೆ ನಿಂತುಕೊಂಡು ನಿಮ್ಮ ಬಗ್ಗೆ ಹೇಳಲು ಪ್ರಯತ್ನಿಸಿ. ಕಷ್ಟವಾಗುತ್ತಿದೆಯಲ್ಲವೇ? ಇಲ್ಲಿಯವರೆಗೆ ಈ ಪ್ರಶ್ನೆಯ ಬಗ್ಗೆ ನೀವು ಗಂಭೀರವಾಗಿ ಯೋಚಿಸದೆ ಇದ್ದರೆ ಈಗಿನಿಂದಲೇ ಈ ಕುರಿತು ಯೋಚಿಸಲು ಆರಂಭಿಸಿ. ನಿಮ್ಮ ಬಗ್ಗೆ ಆಪ್ಯಾಯಮಾನವಾಗಿ ಹೇಳಲು ಕಲಿಯಿರಿ. ಏನು ಹೇಳಬೇಕು ಮತ್ತು ಏನು ಹೇಳಬಾರದು ಎನ್ನುವುದನ್ನು ಮೊದಲೇ ಪಟ್ಟಿಮಾಡಿಟ್ಟುಕೊಳ್ಳಿ.
ಹೀಗೆ ಹೇಳಿ ನೋಡಿ
* `ಐ ಕ್ಯಾನ್ ಸಮ್ಮರೈಜ್ ಹೂ ಐ ಆ್ಯಮ್ ಇನ್ ತ್ರೀ ವಡ್ರ್ಸ್....' ಎಂದು ಆರಂಭಿಸಿದರೆ ಸಂದರ್ಶಕರ ಆಸಕ್ತಿಯನ್ನು ಹೆಚ್ಚಿಸುವಿರಿ. ನೀವು ಸಂಕ್ಷಿಪ್ತವಾಗಿ ಅತ್ಯುತ್ತಮವಾಗಿ ವಿಷಯ ಮಂಡನೆ ಮಾಡುವವರು, ಕ್ರಿಯೇಟಿವ್ ಮತ್ತು ಸೃಜನಶೀಲರೆಂದು ಸಂದರ್ಶಕರು ತಿಳಿದುಕೊಳ್ಳುತ್ತಾರೆ.
* `ದಿ ಕ್ವೊಟೇಷನ್ ಐ ಲೈವ್ ಮೈ ಲೈಫ್ ಬೈ ಈಸ್...' ಎಂದು ಹೇಳಿ ನೋಡಿ. ನಿಮ್ಮ ಪ್ರಗತಿ ಯೋಜನೆಯಲ್ಲಿ ವೈಯಕ್ತಿಕ ಅಭಿವೃದ್ಧಿ ಪ್ರಮುಖವಾಗಿದೆ ಎಂದು ಸಂದರ್ಶಕರು ತಿಳಿದುಕೊಳ್ಳುತ್ತಾರೆ. ನಿಮ್ಮನ್ನು ನೀವು ಮೋಟಿವೇಟ್ ಅಥವಾ ಉತ್ತೇಜಿಸುವವರು ಎಂದು ಸಹ ಅವರು ತಿಳಿದುಕೊಳ್ಳುತ್ತಾರೆ.
* `ಮೈ ಪರ್ಸನಲ್ ಪಿಲಾಸಫಿ ಈಸ್...' ಎಂದು ಆರಂಭಿಸಿ. ಹೀಗೆ ಆರಂಭಿಸಿದರೆ ನೀವು ಕೇವಲ ಉದ್ಯೋಗಿ ಮಾತ್ರವಲ್ಲದೆ ಅತ್ಯುತ್ತಮ ಆಲೋಚನೆಗಾರರು ಎಂದು ಸಂದರ್ಶಕರು ತಿಳಿದುಕೊಳ್ಳುತ್ತಾರೆ.
* `ಪೀಪಲ್ ಹೂ ನೋ ಮಿ ಬೆಸ್ಟ್ ಸೇ ದಟ್ ಐ ಆ್ಯಪ್...' ಎಂದು ಆರಂಭಿಸಿ. ಇದು ನಿಮ್ಮ ಸ್ವ ಅರಿವನ್ನು ಸೂಚಿಸುತ್ತದೆ. ಈ ರೀತಿ ಹೇಳುವುದು ಸಹ ಸಂದರ್ಶಕರ ಕುತೂಹಲವನ್ನು ಕೆರಳಿಸುತ್ತದೆ.
* `ವೆಲ್, ಐ ಗೂಗಲ್ಡ್ ಮೈ ಸೆಲ್ಫ್ ದೀಸ್ ಮಾರ್ನಿಂಗ್, ಆ್ಯಂಡ್ ಇಯರ್ ವಾಟ್ ಐ ಫೌಂಡ್....' ಎಂದು ಆರಂಭಿಸಿದರೆ ನೀವು ಟೆಕ್ ಸೇವಿ, ಫನ್, ಕೂಲ್ ವ್ಯಕ್ತಿಯೆಂದು ಸಂದರ್ಶಕರು ತಿಳಿದುಕೊಳ್ಳಬಹುದು. ಆಯಾ ಸಂದರ್ಶನದ ವಾತಾವರಣವನ್ನು ಗಮನಿಸಿಕೊಂಡು ಇಂತಹ ಮಾತು ಹೇಳಿ. ತುಂಬಾ ಗಂಭೀರ ಸಂದರ್ಶನದಲ್ಲಿ ಈ ರೀತಿಯಾಗಿ ಹೇಳಲು ಹೋಗಬೇಡಿ.
* `ಮೈ ಪ್ಯಾಷನ್ ಈಸ್...' ಎಂದು ಆರಂಭಿಸಿ. ನೀವು ಏನು ಮಾಡುವಿರಿ ಎಂದು ಹೆಚ್ಚು ಜನರು ಆಲೋಚಿಸುವುದಿಲ್ಲ. ನೀವು ಯಾರು ಎಂದು ಹೆಚ್ಚಿನವರು ನೋಡುತ್ತಾರೆ. ನೀವ್ಯಾರು ಎಂಬ ಪ್ರಶ್ನೆಗೆ ನಿಮ್ಮ ಪ್ಯಾಷನ್ ಕುರಿತಾದ ಉತ್ತರವು ಸಂದರ್ಶಕರಿಗೆ ಇಷ್ಟವಾಗಬಹುದು.
* ವೆಬ್ ಐ ವಾಸ್ ಸೆವೆನ್ ಇಯರ್ಸ್ ಓಲ್ಡ್, ಐ ಆಲ್ವೇಸ್ ವಾಟೆಂಡ್ ಟು ಬಿ...' ಎಂದು ಆರಂಭಿಸಿ. ಈ ರೀತಿ ಉತ್ತರಿಸಿದರೆ ನೀವು ಈ ಉದ್ಯೋಗದ ಕುರಿತು ಕೆಲವು ದಿನದಿಂದ ಕನಸು ಕಂಡವರಲ್ಲ, ಹಲವು ವರ್ಷಗಳಿಂದ ಈ ಹುದ್ದೆ ಪಡೆಯಲು ಪ್ರಯತ್ನಿಸುತ್ತಿದ್ದೀರಿ ಎಂದು ಸಂದರ್ಶಕರು ತಿಳಿದುಕೊಳ್ಳುತ್ತಾರೆ.
* ಎಲ್ಲಾದರೂ ಸಂದರ್ಶನವು ಅತ್ಯುತ್ತಮವಾಗಿದ್ದು, ತಮಾಷೆಯಿಂದ ಕೂಡಿದ್ದರೆ ನಿಮ್ಮ ಬಗ್ಗೆ ನೀವು `ಇಫ್ ಹಾಲಿವುಡ್ ಮೇಡ್ ಎ ಮೂವಿ ಅಬೌಟ್ ಮೈ ಲೈಫ್, ಇಟ್ ವುಡ್ ಬಿ ಕಾಲ್ಡ್..' ಎಂದು ಹೇಳಬಹುದು.
* ಕ್ಯಾನ್ ಐ ಶೋ ಯು, ಇನ್‍ಸ್ಟೀಡ್ ಆಫ್ ಟೆಲ್ ಯು' ಎಂದು ಉತ್ತರಿಸಬಹುದು. ನಿಮ್ಮ ಬಗ್ಗೆ ನೀವು ಹೇಳುವುದಕ್ಕಿಂತ ನಿಮ್ಮ ಸಾಧನೆ ಕುರಿತಾದ ಪಿಪಿಟಿ ಇತ್ಯಾದಿಗಳು ಸಿದ್ಧವಾಗಿಟ್ಟುಕೊಂಡರೆ ಸಂದರ್ಶಕರಿಗೆ ತೋರಿಸಬಹುದು.
ಇವೆಲ್ಲ ಕೆಲವು ಉದಾಹರಣೆಗಳಷ್ಟೇ. ಸಂದರ್ಶಕರು ನಿಮ್ಮ ಜೊತೆ ಹೇಗೆ ಸಂವಹನ ನಡೆಸುತ್ತಿದ್ದಾರೆ ಎಂದು ತಿಳಿದುಕೊಂಡು ನಿಮ್ಮ ಕುರಿತು ಹೆಚ್ಚು ಆಸಕ್ತಿದಾಯಕವಾಗಿ ಉತ್ತರಿಸಬಹುದು.
Published in Vijayakarnataka Mini