Friday, 30 September 2016

ಅಜ್ಜ ಹೇಳಿದ ಲವ್ ಸ್ಟೋರಿ

SHARE
"ಈ ಗುಲಾಬಿಗೆ ಎಷ್ಟು?" ಹರೆಯದ ಯುವಕನೊಬ್ಬ ಕೇಳುತ್ತಿದ್ದ. "30 ರೂಪಾಯಿ" ಹೂ ಮಾರುವ ಹೆಂಗಸಿನ ಮಾರುತ್ತರ. "ಜಾಸ್ತಿಯಾಯಿತು" ಹುಡುಗ ಅಸಹನೆಯ ಮುಖ ಮಾಡಿದ. "ಇವತ್ತು ಇದಕ್ಕಿಂತ ಕಡಿಮೆಗೆ ಎಲ್ಲೂ ಸಿಗೋಲ್ಲ, ತಗೋ" ಎಂದು ಪಕೆಳೆಗಳಲ್ಲಿ ನೀರಿನ ಬಿಂದು ಜಾರುತ್ತಿದ್ದ ಚಂದದ ಹೂವನ್ನು ಆತನ ಕೈಗಿತ್ತಳು. ಯುವಕ ಮರು ಮಾತಾಡದೆ ದುಡ್ಡು ನೀಡಿ ಹೂವನ್ನು ಹಿಡಿದುಕೊಂಡು ನಡೆದ. ನನಗೂ ಹೂವೊಂದು ಬೇಕಿತ್ತು. ಆಕೆಗೆ ಹಣ ನೀಡಿ ಮುದ್ದಾಗಿ ಕಂಡ ರೋಜಾವನ್ನು ಪಡೆದುಕೊಂಡೆ.


ಅಲ್ಲೇ ಕಲ್ಲು ಬೆಂಚಿನಲ್ಲಿ ಕುಳಿತಿದ್ದ ಅಜ್ಜ ಕುತೂಹಲದಿಂದ ನೋಡುತ್ತಿದ್ದರು. ಆ ಅಜ್ಜನನ್ನು ನೋಡಿದಾಗ ನನಗೂ ನನ್ನ ಅಜ್ಜನ ನೆನಪಾಯಿತು. ನನ್ನಜ್ಜನೂ ಇಷ್ಟೇ ಬಲಿಷ್ಠವಾಗಿದ್ದ. ಇಷ್ಟು ವಯಸ್ಸಾದರೂ ಮುಖದಲ್ಲಿ ಉತ್ಸಾಹ ಎದ್ದು ಕಾಣುತ್ತಿದೆ. ಅಜ್ಜ ಹೂವಮ್ಮನನ್ನು ಹತ್ತಿರ ಕರೆದು "ಏನಮ್ಮ ಇವತ್ತು ರೇಟು ಜಾಸ್ತಿ" ಎಂದರು. ಅದಕ್ಕೆ ಆಕೆ ""ಏನಜ್ಜ ನಿಂಗೂ ಹೂವು ಬೇಕಾ, ಲವರ್ಸ್ ಡೇ ಇವತ್ತು, ಅಜ್ಜಿಗೆ ಗುಲಾಬಿ ಕೊಡುವಿಯಂತೆ" ಎಂದು ವಿಚಿತ್ರವಾಗಿ ನಗುತ್ತ ಮುಂದೆ ಸಾಗಿದಳು. ಅಜ್ಜ ನಗಲಿಲ್ಲ.

ನಾನು ಮೆಲ್ಲಗೆ ಹೋಗಿ ಅಜ್ಜನ ಪಕ್ಕ ಕೂತೆ. "ಅಜ್ಜ ಇವತ್ತು ಲವರ್ಸ್ ಡೇ, ಅದಕ್ಕೆ ಹೂವಿನ ರೇಟು ಜಾಸ್ತಿ' ಅಂದೆ. "ಹೌದಾ? ಎಂದು ಅಜ್ಜ ಪ್ರಶ್ನಿಸಿ ಸುಮ್ಮನಾದರು. ನಂತರ ನನ್ನ ಬಗ್ಗೆ ವಿಚಾರಿಸಿದರು. ನನ್ನ ಸಂಕ್ಷಿಪ್ತ ಪರಿಚಯ ನೀಡಿದೆ.

ಆಗ ನನ್ನ ಮೊಬೈಲಿಗೆ "ಟಿಂಕ್" ಅಂತ ಎಸ್ ಎಂ ಎಸ್ ಬಂತು. ಅದನ್ನು ಓದುತ್ತಲೇ ನನ್ನ ಮುಖ ಅರಳಿತು. ಒಂದು ಗಂಟೆ ಕಳೆದು ಮಾಲ್ ಹತ್ತಿರ ಬರಲು ಹೇಳಿದ್ದಳು. ನಾನು ಪ್ರೀತಿಸುತ್ತಿರುವುದಾಗಿ ಅವಳಿಗೆ ಅವತ್ತೇ ಹೇಳಿದ್ದೆ. ಸುಮ್ಮಗೆ ನಕ್ಕಿದ್ದಳು. ಇವತ್ತು ಸ್ಪೆಷಲ್ ಆಗಿ ಪ್ರೊಪೊಸ್ ಮಾಡಬೇಕು. ಆಗ ಅಜ್ಜ ಕೆಮ್ಮಿ ನನ್ನ ಯೋಚನೆಗೆ ಕಡಿವಾಣ ಹಾಕಿದ್ರು.

ಅಜ್ಜ ನನ್ನ ಮುಖವನ್ನೇ ನೋಡುತ್ತ "ನಮ್ಮ ಕಾಲದಲ್ಲಿ ಪತ್ರ ವ್ಯವಹಾರ ಇಷ್ಟು ಸುಲಭವಾಗಿರಲಿಲ್ಲ. ಅವಳ ಪತ್ರ ತಲುಪಲು ದಿನಗಟ್ಟಲೆ ಕಾಯಬೇಕಿತ್ತು" ಎಂದಾಗ ನನಗೂ ಕುತೂಹಲ ತಡೆಯಲಿಲ್ಲ. "ಅಜ್ಜ ನಿಂಗೂ ಪ್ರೇಯಸಿ ಇದ್ದಳಾ?" ನನ್ನ ಕುತೂಹಲದ ಪ್ರಶ್ನೆಗೆ ನಕ್ಕ ಅಜ್ಜ ನನ್ನ ಒತ್ತಾಯದ ಮೇರೆಗೆ ಅವರ ಕತೆ ಹೇಳತೊಡಗಿದರು.

***
ಬಹುಶಃ ಇದೇ ದಿನವಾಗಿರಬೇಕು ಅವತ್ತು. ಸರಿಯಾಗಿ ನೆನಪಿಲ್ಲ. ಫೆಬ್ರವರಿ ಅನ್ನೋದು ನಿಜ. ನಾನೂ ಅವಳ ಮನೆಗೆ ಹೋಗಿದ್ದೆ. ಅವಳ ಮನೆಯ ಮುಂದಿನ ಮಾವಿನ ಮರ ಹೂವು ಬಿಟ್ಟು ಸೊಗಸಾಗಿ ಕಾಣುತ್ತಿತ್ತು. ಗೇಟಿನ ಬಳಿಯಲ್ಲಿ ಯಾರೋ ಗೂರ್ಖ ಕುಳಿತಿದ್ದ. ಅವನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡವರಿಸಿದೆ. ಆಗ ಆ ಉದ್ದ ಮೀಸೆಯವ ಬಂದ.

"ಯಾರು ಬೇಕಿತ್ತು" ದೊಡ್ಡ ಧ್ವನಿಯಲ್ಲಿ ಕೇಳಿದ್ದ. ಬ್ರಿಟಿಷ್ ಸರಕಾರದ ನೌಕರಿ ಮಾಡುವ ಹಮ್ಮು ಅವನಿಗೆ. "ಇದು ಅರುಂದತಿಯ ಮನೆನಾ?" ನನ್ನ ಪ್ರಶ್ನೆಗೆ ಆತ "ಹೌದು, ನಾನು ಅವಳಪ್ಪ". ಒಮ್ಮೆಗೆ ನಾನು ನೇರವಾಗಿ ನಿಂತುಕೊಂಡೆ. ಸರ್, ಅದು ಅದು ಅವರು ನನ್ನ ಬರಲು ಹೇಳಿದ್ರು... ಎಂದೆ. ಆತ ನಂಬಲಿಲ್ಲ. ಆಕೆಯಿಂದ ಬಂದ ಪತ್ರ ತೋರಿಸಿದೆ. ಅದು ನಾನು ಮಾಡಿದ ಮೂರ್ಖ ಕೆಲಸ.

ಅದರಲ್ಲಿ, "ಪ್ರೀತಿಯ ರಾಜ, ಇನ್ನೆಷ್ಟು ವರ್ಷ ಈ ಪತ್ರ ಸಲ್ಲಾಪ. ಮನೆಗೆ ಬಂದು ನನ್ನ ಕರೆದುಕೊಂಡು ಹೋಗು" ಎಂದೆಲ್ಲ ಬರೆದಿತ್ತು. ಅವನು ಒಮ್ಮೆಗೆ ಮುಖಗಂಟಿಕ್ಕಿಕ್ಕೊಂಡ. ನಂತರ ಆತನ ಮುಖ ಸಡಿಲಗೊಂಡಿತು. "ಬನ್ನಿ ಬನ್ನಿ, ಬಹಳ ದೂರದಿಂದ ಬಂದಹಾಗೆ ಇದೆ. ಎಲ್ಲರೂ ಕ್ಷೇಮವೇ? ಎಂದೆಲ್ಲ ಆದರಿಸಿ, ಪಕ್ಕದಲ್ಲಿದ್ದ ಸೇವಕನಿಗೆ "ಇವರನ್ನು ಕುಳಿತುಕೊಳ್ಳಲು ಹೇಳು, ನಾನೀಗ ಬಂದೆ" ಎಂದು ಅವಸರದಲ್ಲಿ ಹೊರಟರು. ನಾನು ಮನೆ ಪ್ರವೇಶಿಸಿದೆ.

ಮನೆಯೊಳಗೆ ದೊಡ್ಡದಾಗಿ ಇಂಗ್ಲೆಂಡ್ ರಾಣಿಯ ಭಾವಚಿತ್ರ ನೇತಾಡಿಸಿತ್ತು. ನಾನು ಬರಬಾರದ ದಾರಿಯಲ್ಲಿ ಬಂದೆನೋ... ಮನಸ್ಸಿಗೆ ಖೇದವೆನಿಸಿತು. ನಮ್ಮ ನಾಯಕರಿಗೆ ಈ ವಿಷಯ ತಿಳಿದರೆ ನನ್ನನ್ನು ಸಿಗಿದು ನೇತಾಡಿಸಿಬಿಡಬಹುದು. ಅವರಿಗೆ ಬ್ರಿಟಿಷರ ಎಂಜಲು ಕಾಯುವ ಭಾರತೀಯರೆಂದರೆ ರಕ್ತ ಕುದಿಯುತ್ತಿತ್ತು. ನಾನೂ ಅವರ ಸೇವಕ. ಅವರಷ್ಟು ಲೋಕ ಜ್ಞಾನ ಇಲ್ಲದಿದ್ದರೂ ನಮ್ಮ ದೇಶ ಬೇರೆಯವರ ಪಾಲಾಗಲು ಮನಸ್ಸು ವಿರೋಧಿಸುತ್ತಿತ್ತು. ದೇಶಕ್ಕಾಗಿ ರಕ್ತ ಕೊಡಲು ಮಾನಸಿಕವಾಗಿ ಸಿದ್ಧವಾಗಿಬಿಟ್ಟಿದೆ.

"ಬಾಯಾರಿಕೆ ತೆಗೆದುಕೊಳ್ಳಿ" ಸೇವಕ ದೊಡ್ಡ ಗಾಜಿನ ಗ್ಲಾಸಿನಲ್ಲಿ ಬಣ್ಣದ ಪಾನೀಯ ತಂದಿರಿಸಿದ. ನಾನು ಅದನ್ನು ಕೈಗೆ ತೆಗೆದುಕೊಂಡು ಪ್ರೀಯೆಯ ಸುಳಿವಿದೆಯೇ ಎಂದು ಸುತ್ತಮುತ್ತ ನೋಡತೊಡಗಿದೆ. ಆ ಬಣ್ಣದ ಪಾನೀಯ ಬಾಯಿಗಿರಿಸಿದೆ. ಹೆಜ್ಜೆಯ ಸದ್ದು ಕೇಳಿತು. ಯಾರೋಬರುತ್ತಿರುವಂತೆ ಅನಿಸಿತು. ಅವಳಪ್ಪ. ಕೈನಲ್ಲಿ ಚಾಟಿ. ಅಕ್ಕಪಕ್ಕ ದೊಣ್ಣೆ ಹಿಡಿದುಕೊಂಡ ಸೇವಕರು.

ಯಾಕೋ ತಲೆ ಧಿಮ್ಮೆನ್ನತೊಡಗಿತು. ಅರೇ ಎದುರಿಗೆ ಬರುತ್ತಿರುವರ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಕಣ್ಣು ಮಂಜು ಮಂಜಾಗುತ್ತಿದೆ. ಯಾಕೋ ಕಾಲುಗಳು ಜೋಮು ಹಿಡಿದಂತೆ ಭಾಸವಾಗತೊಡಗಿತು. ಪಾನೀಯಕ್ಕೆ ಮತ್ತು ಬೆರೆಸಿದ್ದಾರೆಯೇ? "ಈ ಕುನ್ನಿಯನ್ನು ಕಂಬಕ್ಕೆ ಕಟ್ಟಿ" ಅವಳಪ್ಪನ ಆಜ್ಞೆ ಕೇಳಿತು. "ಓಹ್, ದೇವರೆ ನಾನು ಮೋಸದ ಸುಳಿಗೆ ಬಿದ್ದೆ" ಎಂದು ತಿಳಿದು ಒಮ್ಮೆಗೆ ಎದ್ದು ನಿಂತು ವಸ್ತ್ರದೊಳಗಿನ ಸಣ್ಣ ಕತ್ತಿ ತೆಗೆಯಲು ಹೋದೆ. ತಲೆಗೆ ದಡ್ ಅಂತ ಯಾರೋ ಹೊಡೆದರು. ನಿಲ್ಲಲಾಗದೆ ತಲೆ ಹಿಡಿದುಕೊಂಡು ಬಿದ್ದೆ.

ಮುಖಕ್ಕೆ ನೀರು ಎರಚಿದಂತಾಗಿ ಮುಖ ಎತ್ತಿ ನೋಡಿದೆ. ನನ್ನ ಕೈಕಾಲುಗಳನ್ನು ಕಟ್ಟಿದ್ದರು. ಏನು ಇವರ ಉದ್ದೇಶ. ಏನಿದು ಮೋಸ. ನನ್ನ ನಾಯಕನ ಜೊತೆ ಹೋರಾಡುವುದು ಬಿಟ್ಟು ನನ್ನನ್ಯಾಕೆ ಇಲ್ಲಿಗೆ ಕರೆಸಿದರು...

"ನನ್ನ ಮಗಳಿಗೆ ಪತ್ರ ಬರೆಯುವೆಯಾ? ಎಷ್ಟು ದೈರ್ಯ ನಿನಗೆ. ನೋಡು ಇವಳೇ ನನ್ನ ಮಗಳು. ಬೇಕೆ ನಿನಗೆ?" ಆತ ಅಬ್ಬರಿಸುತ್ತಿದ್ದ. ನಾನು ಮೆಲ್ಲಗೆ ತಲೆಯೆತ್ತಿ ನೋಡಿದೆ. ಕೊಂಚ ಕುಳ್ಳಗಿನ ನನ್ನ ಸುಂದರ ಪ್ರೇಯಸಿ ತಲೆತಗ್ಗಿಸಿ ನಿಂತಿದ್ದಳು. ಶಾಕುಂತಲೆ ನಾನೆಂದು ಪತ್ರ ಬರೆಯುತ್ತಿದ್ದ ನನ್ನ ಸುಂದರಿ, ನನಗ್ಯಾಕೆ ಇಂತಹ ಮೋಸ ಮಾಡಿದೆ ಎಂದು ಜೋರಾಗಿ ಕೇಳಬೇಕೆನಿಸಿತು. ಆಗ ಅವಳಪ್ಪ ಚಾಟಿಯ ಉದ್ದವನ್ನು ಎರಡು ಕೈನಿಂದ ಅಳೆದು ಚಟಿರನೆ ಬೀಸಿದ. ನನ್ನ ಪ್ರಿಯೆ ಮುಖಮುಚ್ಚಿ ಒಳಗೆ ಓಡಿದಳು.

ಒಂದು, ಎರಡು, ಮೂರು, ನಾಲ್ಕು ಎಷ್ಟು ಹೊಡೆದನೋ.. ಲೆಕ್ಕವಿಡಲಾಗಲಿಲ್ಲ. ಮೈನಲ್ಲಿ ರಕ್ತ ಹೊರಗೆ ಬರುತ್ತಿತ್ತು. ಅವನಿಗೆ ಅವನ ಸೇವಕನೊಬ್ಬ ಏನೋ ಗುಸುಗುಸು ಎಂದ. ತಕ್ಷಣ ಆತನ ಮುಖ ಇನ್ನಷ್ಟು ವ್ಯಗ್ರವಾಯಿತು. "ನೀನು ಸ್ವಾತಂತ್ರ್ಯ ಹೋರಾಟಗಾರನೇ? ನಿನ್ನ ನಾಯಕನ ಬಗ್ಗೆ ಸಂಪೂರ್ಣ ವಿಷಯ ಹೇಳು. ನೀವು ಎಷ್ಟು ಜನರಿದ್ದೀರಿ. ಯಾವಾಗ ದಂಗೆ? ಎಷ್ಟು ಮದ್ದುಗುಂಡುಗಳಿವೆ? ಎಲ್ಲೆಲ್ಲಿ ಅಡಗುತಾಣಗಳಿವೆ?" ಲೆಕ್ಕಪತ್ರ ಓದುವಂತೆ ಆತ ಪ್ರಶ್ನೆಗಳ ಮಳೆ ಸುರಿಸಿದ್ದ.

ಓಹ್, ಇದಾ ವಿಷಯ. ಮೈನಲ್ಲಿ ರಕ್ತ ಸುರಿಯುತ್ತಿದ್ದರೂ ದೇಶಭಕ್ತಿ ಉರಿದುಬಂತು. "ನಿನಗೆ ತಾಕತ್ತು ಇದ್ದರೆ ನನ್ನ ಹಗ್ಗ ಬಿಚ್ಚಿ ಯುದ್ದಕ್ಕೆ ಬಾರೋ" ನಾನು ಶಕ್ತಿಮೀರಿ ಜೋರಾಗಿ ಹೇಳಿದೆ. ಅವನ ಮುಖ ಒಮ್ಮೆಗೆ ಕಪ್ಪಿಟ್ಟಿತು. ಮತ್ತೊಂದಿಷ್ಟು ಚಾಟಿಯ ಏಟು ಬಿತ್ತು. ಹೊರಗೆ ಏನೋ ಸದ್ದಾದಂತೆ ಕೇಳಿತು. ಪೊಲೀಸರು ಬಂದು ನನ್ನ ಹಗ್ಗ ಬಿಚ್ಚಿ ಕೋಳ ಹಾಕಿ ಕರೆದೊಯ್ದರು.

ನಾನು ಕಂಬಿಯ ಹಿಂದೆ ಬಂಧಿಯಾದೆ. ಯಾವುದೋ ಸುಳ್ಳು ಪ್ರಕರಣ ದಾಖಲಿಸಿದ್ದರು. ಎಷ್ಟೇ ಹಿಂಸಿಸಿದರೂ ನಾಯಕನ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡಲಿಲ್ಲ. ನನ್ನನ್ನು ಬೇರೆ ಯಾವುದೋ ಜೈಲಿಗೆ ಕಳುಹಿಸುವ ಬಗ್ಗೆ ಮಾತನಾಡುತ್ತಿದ್ದರು. ಈ ಮಾಹಿತಿಯನ್ನು ಪೊಲೀಸಪ್ಪನೊಬ್ಬ ನನಗೆ ನೀಡಿದ್ದ. ಅವನಿಗೆ ನನ್ನ ಬಗ್ಗೆ ಕರುಣೆಯಿತ್ತು. ಆತ ಅನಿವಾರ್ಯವಾಗಿ ಸರಕಾರಿ ಚಾಕರಿ ಮಾಡುತ್ತಿದ್ದ.  ನಿಮ್ಮ ನಾಯಕರ ಸೈನ ಈ ಕಡೆಗೆ ಬಂದಾಗ ನಾನು ಅವರ ಜೊತೆ ಸೇರುತ್ತೇನೆ ಎಂಬ ಭರವಸೆ ನೀಡಿದ್ದ. ಆತನಲ್ಲೂ ಸುಪ್ತವಾಗಿರುವ ದೇಶಪ್ರೇಮ ಕಂಡು ಎದೆಯುಬ್ಬಿ ಬಂದಿತ್ತು.

ಆದರೂ, ನನ್ನ ಪ್ರೇಯಸಿಯದ್ದು ಸುಳ್ಳು ಪ್ರೀತಿಯೆಂದು ನನ್ನ ಒಳಮನಸ್ಸು ಒಪ್ಪಲಿಲ್ಲ. ಆಕೆ ಬರೆಯುತ್ತಿದ್ದ ಪತ್ರಗಳಲ್ಲಿ ನಾಟಕೀಯತೆ ಇರಲಿಲ್ಲ. ಅವಳನ್ನು ಐದು ವರ್ಷದ ಹಿಂದೆ ನೋಡಿದ್ದು. ಮಡಿಕೇರಿಯಿಂದ ಎತ್ತಿನಗಾಡಿಯಲ್ಲಿ ಆಕೆ ತನ್ನ ಕುಟುಂಬದ ಜೊತೆ ಸಾಗುತ್ತಿದ್ದಳು. ನಾನು ಅದೇ ದಾರಿಯಲ್ಲಿ ಯಾವುದೋ ಕೆಲಸದ ನಿಮಿತ್ತ ಹೋಗಿದ್ದೆ. ಆಗ ಆನೆಗಳ ಗುಂಪು ಅವರು ಹೋಗುವ ದಾರಿಯಲ್ಲಿ ಬೀಡುಬಿಟ್ಟಿತು.

ಆನೆಗಳ ಹಾದಿಯಲ್ಲಿ ಸಾಗಲಾಗದೆ ಭೀತಿಯಲ್ಲಿದ್ದ ಅವರನ್ನು ಮತ್ತೊಂದು ಒಳದಾರಿಯ ಮೂಲಕ ಕರೆದೊಯ್ದಿದೆ. ಅವಳ ಜೊತೆಯಿದ್ದ ಮುದುಕಿ ನನಗೆ ವಿಳಾಸ ನೀಡಿ "ಘಟ್ಟದ ಕೆಳಗೆ ತಾವು ಭಾರೀ ಪ್ರಭಾವಿಗಳು, ಏನಾದರೂ ಕಷ್ಟ ಬಂದರೆ ನಮ್ಮನ್ನು ಕಾಣು ಎಂದಿದ್ದರು. ಜೊತೆಗೆ ವಿಳಾಸವನ್ನೂ ನೀಡಿದ್ದರು. ಅದ್ಯಾವುದೋ ಸಮಯದಲ್ಲಿ ನಾನು ಕುಶಲ ಕ್ಷೇಮ ವಿಚಾರಿಸಿ ಪತ್ರ ಬರೆದಿದ್ದೆ. ಅದಕ್ಕೆ ಅವರ ಮನೆಯಿಂದ ಮಾರುತ್ತರ ಬಂದಿರಲಿಲ್ಲ. ತುಂಬಾ ದಿನ ಕಳೆದು ಕಾಗದವೊಂದು ಬಂತು. ಅಂದು ನಾನು ಬಂಡಿಯಲ್ಲಿ ನೋಡಿದ್ದ ಕುಳ್ಳಗಿನ ಸುಂದರಿಯ ಪತ್ರವಾಗಿತ್ತು.

"ಅಂದೇ ನನ್ನನ್ನು ನೋಡಿ ಇಷ್ಟಪಟ್ಟದಾಗಿಯೂ, ಮದುವೆಯಾಗುವುದಿದ್ದರೆ ನಿಮ್ಮನೇ" ಎಂದು ಬರೆದಿದ್ದಳು. ಪತ್ರ ವ್ಯವಹಾರಕ್ಕಾಗಿ ಸ್ನೇಹಿತೆಯೊಬ್ಬಳ ಮನೆಯ ವಿಳಾಸ ನೀಡಿದ್ದಳು. ದುಷ್ಯಂತ ಶಾಕುಂತಲೆ, ರೊಮಿಯೊ ಜ್ಯೂಲಿಯಟ್ ಬರಹಗಳ ಸಾಲುಗಳನ್ನೂ ಉಲ್ಲೇಖಿಸಿದ್ದಳು. ತುಂಬಾ ಓದಿಕೊಂಡಿದ್ದಾಳೆ ಅನಿಸಿತು.

ನನಗೂ ಜೀವನಕ್ಕೆ ಹೊಸ ಚೈತನ್ಯ ಬಂದಂತಾಗಿತ್ತು. ನಾನೂ ಮಾರುತ್ತರ ಬರೆದೆ. ನಮ್ಮ ಪತ್ರ ವ್ಯವಹಾರ ಯಾವುದೇ ಎಗ್ಗಿಲ್ಲದೇ ಸಾಗುತ್ತಿತ್ತು. ನಾನು ಒಮ್ಮೊಮ್ಮೆ ತಡವಾಗಿ ಕಾಗದ ಬರೆದರೆ ಮುನಿಸಿಕೊಳ್ಳುತ್ತಿದ್ದಳು. ಸ್ವಾತಂತ್ರ್ಯ ಹೋರಾಟಕ್ಕಾಗಿ ನಾವು ಗುಂಪುಗಟ್ಟಿ ರಹಸ್ಯ ಕಾರ್ಯಚರಣೆಗಳನ್ನು ಮಾಡುತ್ತಿದ್ದೇವು. ಬ್ರಿಟಿಷರನ್ನು ವಿರೋಧಿಸುತ್ತಿದ್ದರೂ ನನ್ನ ಪತ್ರ ವ್ಯವಹಾರಗಳು ಆಗ ಬ್ರಿಟಿಷ್ ಈಸ್ಟ್ ಇಂಡಿಯಾ ಪೋಸ್ಟಲ್ ಸೇವೆಯನ್ನು ಬಳಸಿಕೊಳ್ಳುತ್ತಿತ್ತು. ಈ ವಿಷಯ ನಮ್ಮ ನಾಯಕರಿಗೆ ಗೊತ್ತಿರಲಿಲ್ಲ. ಪೋಸ್ಟ್ ಮ್ಯಾನ್ ಕರಿಯಪ್ಪ ಯಾರಿಗೂ ಗೊತ್ತಾಗದಂತೆ ನನಗೆ ಪತ್ರಗಳನ್ನು ನೀಡುತ್ತಿದ್ದ.

ಆದರೆ ನಾನು ಎಡವಿದ್ದೆಲ್ಲಿ ಎನ್ನುವುದು ಇನ್ನೂ ಅರಿವಾಗಲಿಲ್ಲ. ಈ ಕುರಿತು ಆ ಜೈಲಿನ ಪೊಲೀಸ್ ಬಳಿಯೂ ವಿಚಾರಿಸಿದೆ. ಕೆಲವು ದಿನ ಕಳೆದ ಬಳಿಕ ಆತ ಒಂದು ಪತ್ರದೊಂದಿಗೆ ಬಂದ. ಅದು ನನಗೆ ಪ್ರೇಯಸಿ ಬರೆದ ಅಂತಿಮ ಪತ್ರವಾಗಿತ್ತು. ಅದರಲ್ಲಿ ಅವಳಪ್ಪ ಕ್ರೂರಿಯೆಂದೂ, ಸಾಕಷ್ಟು ಪ್ರಭಾವಿಯಾಗಿರುವುದರಿಂದ ಅವನನ್ನು ಎದುರಿಸುವುದು ಕಷ್ಟ. ಅವಳನ್ನು ಅವಳಪ್ಪ ಯಾವುದೋ ಬ್ರಿಟಿಷ್ ಅಧಿಕಾರಿಗೆ ಮದುವೆ ಮಾಡಲು ಬಯಸಿದ್ದಾನೆ, ಆ ನರಕದ ಬದುಕಿಗಿಂತ ಸಾವೇ ಮೇಲು, ಮುಂದಿನ ಜನ್ಮದಲ್ಲಿ ಒಂದಾಗೋಣ... ನೀನು ನಿನ್ನ ಜೀವನವನ್ನು ಸಂಪೂರ್ಣವಾಗಿ ದೇಶಸೇವೆಗೆ ಮುಡಿಪಾಗಿಡು" ಎಂದೆಲ್ಲ ಬರೆದಿದ್ದಳು.

ಆ ಪತ್ರ ನನ್ನ ಕೈಸೇರುವಾಗಲೇ ತಡವಾಗಿತ್ತು. ಪೊಲೀಸ್ ನೀಡಿದ ಮಾಹಿತಿ ಪ್ರಕಾರ ಆಕೆ ಆತ್ಮಹತ್ಯೆ ಮಾಡಿಕೊಂಡಾಗಿತ್ತು. ಕೆಲವೇ ವರ್ಷಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ದೇಶಸೇವೆ ಮಾಡಬೇಕಿದ್ದ ನಾನು ಪ್ರೇಮದ ಆಕರ್ಷಣೆಗೆ ಸಿಲುಕಿ, ಮೋಸದಿಂದ ಸುಳ್ಳು ಅಪರಾಧದ ಹೆಸರಿನಲ್ಲಿ ಜೈಲಿನಲ್ಲಿದ್ದು ಬಿಡುಗಡೆಯಾದೆ.

**
ಹಳೆಯ ನೆನಪಿನಿಂದ ತೇವವಾದ ಕಣ್ಣನ್ನು ಒರೆಸಿಕೊಂಡು ಅವರು ಎದ್ದು ನಿಂತರು. "ಈಗಿನ ಜನರೇಷನ್ ಬಗ್ಗೆ ಕರುಣೆ ಎನಿಸುತ್ತಿದೆ. ಕೆಲವೇ ಕ್ಷಣದಲ್ಲಿ ಎಲ್ಲಿಗೋ ಪತ್ರ ತಲುಪಿಸುತ್ತೀರಿ. ನಿಮಿಷದಲ್ಲೇ ಪ್ರೇಮಿಗಳನ್ನು ಪಡೆಯುತ್ತೀರಿ. ಮದುವೆಯಾಗುತ್ತೀರಿ. ಡೈವರ್ಸ್ ಮಾಡಿಕೊಳ್ಳುತ್ತೀರಿ. ತುಂಬಾ ಸ್ಪೀಡ್ ಒಳ್ಳೆಯದಲ್ಲ" ಎಂದು ಹೇಳುತ್ತ ಮುಂದೆ ಮುಂದೆ ಸಾಗಿದರು.

ಆಗಲೇ, "ಥ್ಯಾಂಕ್ಯು ಕಿರಣ್. ಐ ಲವ್ ಯು ಕಣೋ" ಎಂಬ ಸಂದೇಶ ನನ್ನ ಮೊಬೈಲಿಗೆ ಬಂದುಬಿತ್ತು. ನನಗೆ ದಿಗ್ಭಮೆಯಾಯಿತು. ನಾನು ಪ್ರೀತಿಸಿದಾಕೆ ಬೇರೊಬ್ಬನಿಗೆ ಕಳುಹಿಸಬೇಕಿದ್ದ ಎಸ್ಎಂಎಸ್ ನ್ನು ತಪ್ಪಿ ನನ್ನ ಮೊಬೈಲಿಗೆ ಕಳುಹಿಸಿದ್ದಳು. ನನಗೆ ನೂರಾರು ಚಾಟಿಯೇಟು ಬಿದ್ದಹಾಗಾಯ್ತು. ಕೈನಲ್ಲಿದ್ದ ಹೂವನ್ನು ಅಲ್ಲೇ ಬಿಸಾಕಿ ಅಜ್ಜನ ಹಿಂದೆಯೇ ಸಾಗಿದೆ.

______

ಪ್ರವೀಣ ಚಂದ್ರ ಪುತ್ತೂರು
SHARE

Author: verified_user

0 ಪ್ರತಿಕ್ರಿಯೆಗಳು: