Tuesday 27 December 2016

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್

ಎಲ್ಲವೂ ಇಂಟರ್‍ನೆಟ್‍ಮಯವಾಗುತ್ತಿರುವ ಈ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಲ್ಲವರಿಗೆ ಉತ್ತಮ ಬೇಡಿಕೆಯಿದೆ. ಸರ್ಚ್ ಎಂಜಿನ್ ಆಪ್ಟಿಮಿಜೇಷನ್, ಸೋಷಿಯಲ್ ಮೀಡಿಯಾ ಆಪ್ಟಿಮಿಜೇಷನ್ ಸೇರಿದಂತೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಕಲಿಯಲು ಸೂಕ್ತವಾದ ಸರ್ಟಿಫಿಕೇಷನ್ ಕೋರ್ಸ್‍ಗಳು ಯಾವುವು? ಇಲ್ಲಿದೆ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಇದು ಇಂಟರ್‍ನೆಟ್ ಯುಗ. ಮಾರಾಟ ಮತ್ತು ಖರೀದಿಗೆ ಇ-ಕಾಮರ್ಸ್ ಪ್ರಮುಖ ವೇದಿಕೆ. ಯಾವುದೇ ಕಂಪನಿಗೂ ವಹಿವಾಟು ನಡೆಸಲು ಇಂಟರ್‍ನೆಟ್ ಬಳಸುವುದು ಅನಿವಾರ್ಯವಾಗಿಬಿಟ್ಟಿದೆ. ಇಂತಹ ಸಮಯದಲ್ಲಿ ಆನ್‍ಲೈನ್‍ನಲ್ಲಿ ಮಾರುಕಟ್ಟೆ ಮಾಡುವ ಪರಿಣತರಿಗೂ ಉತ್ತಮ ಬೇಡಿಕೆಯಿದೆ. ಇದಕ್ಕೆ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳು ಲಭ್ಯ ಇವೆ. ವಿಶೇಷವೆಂದರೆ ಆನ್‍ಲೈನ್‍ನಲ್ಲಿ ಹಲವು ಉಚಿತ ಕೋರ್ಸ್‍ಗಳು ಲಭ್ಯ. ಕೆಲವು ಸರ್ಟಿಫಿಕೇಷನ್ ಕೋರ್ಸ್‍ಗಳು 10ರಿಂದ 50 ಸಾವಿರ ರೂ. ತನಕ ದುಬಾರಿಯಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ಎಂದರೇನು?
ಸರಳವಾಗಿ ಹೇಳುವುದಾದರೆ ಯಾವುದಾದರೂ ಉತ್ಪನ್ನ ಅಥವಾ ಬ್ರಾಂಡ್ ಅನ್ನು ವಿವಿಧ ರೀತಿಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಪಡಿಸುವುದನ್ನು ಡಿಜಿಟಲ್ ಮಾರ್ಕೆಟಿಂಗ್ ಎನ್ನಬಹುದು. ಈಗ ಗೂಗಲ್, ಫೇಸ್‍ಬುಕ್, ಇಮೇಲ್, ಮೊಬೈಲ್, ಸ್ಮಾರ್ಟ್‍ಫೆÇೀನ್ ಇತ್ಯಾದಿ ಮಾಧ್ಯಮಗಳ ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ವಿಧಾನವನ್ನು ಅನುಸರಿಸುತ್ತದೆ. ಇಂತಹ ನವ ಮಾಧ್ಯಮದಲ್ಲಿ ಉತ್ಪನ್ನ ಅಥವಾ ಬ್ರಾಂಡ್ ಪ್ರಚಾರ ಪಡಿಸಲು ವಿಶೇಷ ಸ್ಕಿಲ್ ಬೇಕಾಗುತ್ತದೆ. ಇಂತಹ ಕೌಶಲಗಳನ್ನು ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಕೋರ್ಸ್‍ಗಳು ಕಲಿಸಿ ಕೊಡುತ್ತವೆ.
ಡಿಜಿಟಲ್ ಮಾರುಕಟ್ಟೆಯ ಬೇಸಿಕ್ಸ್, ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಡಿಜಿಟಲ್ ಮಾರುಕಟ್ಟೆ ಕಾರ್ಯತಂತ್ರ ರೂಪಿಸುವುವುದು, ಮೊಬೈಲ್, ಸರ್ಚ್ ಮತ್ತು ಸೋಷಿಯಲ್ ನೆಟ್‍ವರ್ಕಿಂಗ್ ಇತ್ಯಾದಿ ನವಮಾಧ್ಯಮಗಳನ್ನು ಬಳಸಿ ಮಾರುಕಟ್ಟೆ ವಿಸ್ತರಿಸುವುದು, ಡಿಜಿಟಲ್ ಮಾರುಕಟ್ಟೆಗೆ ಸಂಬಂಧಪಟ್ಟ ಕಾನೂನುಗಳನ್ನು ತಿಳಿದುಕೊಳ್ಳುವುದು ಸಹ ಈ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ಒಳಗೊಂಡಿರುತ್ತದೆ.

ಉಚಿತವಾಗಿ ಕಲಿಯಿರಿ
ಇಂದು ಜಗತ್ತಿನ ವಿವಿಧ ಸಂಸ್ಥೆಗಳು ಆನ್‍ಲೈನ್‍ನಲ್ಲೇ ಉಚಿತವಾಗಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಅವಕಾಶ ಮಾಡಿಕೊಡುತ್ತಿವೆ. ಈ ಕೆಳಗೆ ನೀಡಿರುವ ಲಿಂಕ್‍ಗಳ ಮೂಲಕ ನೀವೂ ಉಚಿತವಾಗಿ ಕಲಿಯಬಹುದು.
* ಗೂಗಲ್‍ನ ಆನ್‍ಲೈನ್ ಮಾರ್ಕೆಟಿಂಗ್ ಚಾಲೆಂಜಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಬಹುದು. ಇಲ್ಲಿ ವಿಡಿಯೋ ಟ್ಯುಟೋರಿಯಲ್ ಸಹ ಇದ್ದು, ಎಸ್‍ಇಎಂ, ಆ್ಯಡ್‍ವಡ್ರ್ಸ್, ಸೋಷಿಯಲ್ ನೆಟ್‍ವಕ್ರ್ಸ್, ಮೊಬೈಲ್ ಸ್ಟ್ರಾಟರ್ಜಿ ಸೇರಿದಂತೆ ಹಲವು ವಿಷಯಗಳನ್ನು ಕಲಿಯಬಹುದು. ಕೆಲವೊಂದು ವಿಷಯಗಳಲ್ಲಿ ಸರ್ಟಿಫಿಕೇಷನ್ ಸಹ ದೊರಕುತ್ತದೆ.
ಮಾಹಿತಿಗೆ ಲಿಂಕ್: 
* ವಲ್ರ್ಡ್‍ಸ್ಟ್ರೀಮ್ ಎಂಬ ವೆಬ್‍ಸೈಟ್‍ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕುರಿತು ತುಂಬಾ ಬೇಸಿಕ್ಸ್‍ನಿಂದ ಹಿಡಿದು ಹಲವು ಹಂತಗಳ ಕೋರ್ಸ್‍ಗಳಿವೆ. ಹಂತಹಂತವಾಗಿ ಕಲಿಯುವುದು ಇಲ್ಲಿ ಸುಲಭ. ಲಿಂಕ್:
* ಕಾಪಿಬ್ಲಾಗರ್ ಎಂಬ ವೆಬ್‍ಸೈಟ್ ನಿಮಗೆ ಇಮೇಲ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‍ಗಳನ್ನು ಕಳುಹಿಸಿಕೊಡುತ್ತದೆ. ಇದರಿಂದ ನೀವು ಕಂಟೆಂಟ್ ಮಾರ್ಕೆಟಿಂಗ್, ಕಾಪಿರೈಟಿಂಗ್, ಎಸ್‍ಇಒ, ಕೀವರ್ಡ್ ರಿಸರ್ಚ್ ಇತ್ಯಾದಿಗಳನ್ನು ಕಲಿಯಬಹುದು. ಲಿಂಕ್
* ಕೊರ್ಸ್‍ರಾ ಎಂಬ ವೆಬ್‍ಸೈಟ್‍ನಲ್ಲಿ ವಾರದಲ್ಲಿ ನಾಲ್ಕೈದು ಗಂಟೆಯಂತೆ 5 ವಾರದ ಡಿಜಿಟಲ್ ಮಾರ್ಕೆಟಿಂಗ್ ಕ್ಲಾಸ್ ಅನ್ನು ನಡೆಸಲಾಗುತ್ತದೆ. ಮುಂದಿನ ಕೋರ್ಸ್ ಫೆಬ್ರವರಿ 22ರಿಂದ ಏಪ್ರಿಲ್ 1ರ ತನಕ ಇದೆ. ಆದಷ್ಟು ಬೇಗ ಭೇಟಿ ನೀಡಿ. ಲಿಂಕ್
* ಹಬ್‍ಸ್ಪಾಟ್‍ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಪಡೆಯಲು 18 ಉಚಿತ ತರಗತಿಗಳಿವೆ. ಉಚಿತವೆಂದಿರುವ ಕೋರ್ಸ್ ಅನ್ನು ಈ ಲಿಂಕ್‍ನಲ್ಲಿ ಹುಡುಕಿರಿ. ಲಿಂಕ್

ಇವು ಉಚಿತವಲ್ಲ
ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿ ಎಸ್‍ಇಒ, ಎಸ್‍ಇಎಂ, ಎಸ್‍ಎಂಒ, ಪಿಪಿಸಿ ಇತ್ಯಾದಿ ಸರ್ಟಿಫಿಕೇಷನ್‍ಗಳನ್ನು ಪಡೆಯಬಹುದು. ವಾರಾಂತ್ಯ ಕ್ಲಾಸ್‍ಗಳು ಮಾತ್ರವಲ್ಲದೆ ವಾರದ ಎಲ್ಲಾ ದಿನದ ಕ್ಲಾಸ್‍ಗಳೂ ಇವೆ. ಒಟ್ಟು 40 ದಿನಗಳ, 100 ಗಂಟೆಯ ಈ ಕೋರ್ಸ್‍ಗೆ 25ಸಾವಿರ ಶುಲ್ಕ ನೀಡಬೇಕು. ಆನ್‍ಲೈನ್ ಕೋರ್ಸ್‍ಗಳೂ ಲಭ್ಯ. ಹೆಚ್ಚಿನ ಮಾಹಿತಿಗೆ ಲಿಂಕ್
ಮನಿಪಾಲ್ ಗ್ಲೋಬಲ್ ಶಿಕ್ಷಣ ಸಂಸ್ಥೆಯ ಪೆÇ್ರಲರ್ನ್ ಆನ್‍ಲೈನ್ ಕಲಿಕಾ ತಾಣದಲ್ಲಿ ಕಲಿಯಬಹುದು. ಗೂಗಲ್ ಜೊತೆ ಸೇರಿ ನೀಡುವ ಈ ಡಿಜಿಟಲ್ ಕೋರ್ಸ್‍ನ ಅವಧಿ 90 ಗಂಟೆ. ಬೆಂಗಳೂರಿನಲ್ಲಿ ಮುಂದಿನ ಎನ್‍ರೋಲ್‍ಮೆಂಟ್ ಫೆಬ್ರವರಿ 14. ಮ್ಯಾನೇಜ್‍ಮೆಂಟ್ ಅಥವಾ ಎಂಜಿನಿಯರಿಂಗ್ ಹಿನ್ನೆಲೆ ಇರುವ ವಿದ್ಯಾರ್ಥಿಗಳು ಈ ಕೋರ್ಸ್‍ಗೆ ಸೇರಬಹುದು. ಮಾಹಿತಿಗೆ ಲಿಂಕ್
ಬೆಂಗಳೂರಿನ ಇನ್‍ವೆಂಟಾಟೆಕ್‍ನಲ್ಲಿಯೂ ಡಿಜಿಟಲ್ ಮಾರ್ಕೆಟಿಂಗ್ ಕುರಿತಾದ ಹಲವು ಕೋರ್ಸ್‍ಗಳು ಲಭ್ಯ ಇವೆ. ಲಿಂಕ್
ಎಎಂಪಿ ಡಿಜಿಟಲ್‍ನಲ್ಲಿ 14 ವಾರದ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಕೊಂಚ ದುಬಾರಿ ಎಂದೇ ಹೇಳಬೇಕು. ಇಲ್ಲಿ 48 ಸಾವಿರ ರೂ. ಶುಲ್ಕ ನೀಡಬೇಕು. ಇದು ಇಂಟರ್ನ್‍ಷಿಪ್ ಅವಕಾಶವನ್ನೂ ನೀಡುತ್ತದೆ. ಇದೇ ಸಂಸ್ಥೆಯು 14 ಸಾವಿರ ರೂ.ಗೆ ಸೋಷಿಯಲ್ ಮೀಡಿಯಾ ಕೋರ್ಸ್ ಸಹ ನೀಡುತ್ತಿದೆ.
ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿರುವ ಸ್ಕೈಡ್ರೀಮ್‍ಕನ್ಸಲ್ಟ್ ಸಂಸ್ಥೆಯು 100 ಗಂಟೆಗಳ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಕೋರ್ಸ್ ನೀಡುತ್ತದೆ. ತೆರಿಗೆ ಸೇರಿ 25 ಸಾವಿರ ರೂ. ಶುಲ್ಕ ಇದೆ. ಮಾಹಿತಿಗೆ ಲಿಂಕ್

Published in Vijayakarnataka Mini

Saturday 10 December 2016

ರೆಸಿಪಿ: ಮಂಗಳೂರು ಬನ್ಸ್ ತಯಾರಿಸುವುದು ಹೇಗೆ?

ರೆಸಿಪಿ: ಮಂಗಳೂರು ಬನ್ಸ್ ತಯಾರಿಸುವುದು ಹೇಗೆ?


  • ರಶ್ಮಿ ಪ್ರವೀಣ್

ಕರಾವಳಿಗರಿಗೆ ಬನ್ಸ್ ಅಂದ್ರೆ ಇಷ್ಟ. ಕರಾವಳಿ ಬಿಟ್ಟು ಪರ ಊರಿಗೆ ಹೋದವರಿಗೆ ಬೆಂಗಳೂರಿನಂತಹ ನಗರಗಳಲ್ಲಿ ಬನ್ಸ್ ಕಂಡರಂತೂ ಬಾಯಲ್ಲಿ ನೀರೂರುವುದು ಸಹಜ. ಆದರೆ, ಬೆಂಗಳೂರಿನಂತಹ ನಗರಗಳಲ್ಲಿ ಮಾಡುವ ಬನ್ಸ್ ಗೂ ಮಂಗಳೂರಿನಲ್ಲಿ ಮಾಡುವ ಬನ್ಸ್ ಗೂ ರುಚಿಯಲ್ಲಿ ಅಜಗಜಾಂತರ ವ್ಯತ್ಯಾಸ ಇರುತ್ತದೆ.  ಮಂಗಳೂರು ಬನ್ಸ್ ಮಾಡುವುದು ಬಲು ಸುಲಭ. ನೀವೂ ಟ್ರೈ ಮಾಡಬಹುದು. ಬನ್ಸ್ ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು



  • ಮೈದಾ ಹಿಟ್ಟು 4 ಕಪ್





  • ಬಾಳೆಹಣ್ಣು 2 ಅಥವಾ 3 (ಚೆನ್ನಾಗಿ ಹಣ್ಣಾಗಿರಲಿ)



  • ಸಕ್ಕರೆ ಅರ್ಧ ಕಪ್ (ಸಿಹಿ ಹೆಚ್ಚು ಬೇಕಿದ್ದರೆ ಎರಡ್ಮೂರು ಸ್ಪೂನ್ ಜಾಸ್ತಿ ಹಾಕಿ.



  • ಒಂದು ಚಿಟಿಕೆ ಅಡುಗೆ ಸೋಡಾ.

  • ಉಪ್ಪು- ಒಂದುವರೆ ಚಮಚ.



  • ಮೊಸರು ಅರ್ಧ ಕಪ್.



ಮೊದಲ ಹಂತ

  • ಪಾತ್ರೆಯೊಂದರಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಹಿಚುಕಿ. ಪೇಸ್ಟ್ ಆಗುವ ತನಕ



  • ಅದಕ್ಕೆ ಸಕ್ಕರೆ, ಅಡುಗೆ ಸೋಡಾ, ಮೊಸರು, ಉಪ್ಪು ಹಾಕಿ ಚೆನ್ನಾಗಿ ಹಿಸುಕಿ. ಸಕ್ಕರೆ ಇತ್ಯಾದಿಗಳು ಕರಗುವ ತನಕ.



  • ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಹಾಕಿ ಮುದ್ದೆ ಮಾಡಿ. ಚಪಾತಿ ಹಿಟ್ಟಿನಂತೆ ಮುದ್ದೆ ಆಗುವ ತನಕ ಮೈದಾ ಹಿಟ್ಟು ಹಾಕಿ. ನಾಲ್ಕು ಕಪ್ ಸಾಕಾಗದೆ ಇದ್ದರೆ ಇನ್ನು ಸ್ವಲ್ಪ ಹಾಕಿ.



  • ಚಪಾತಿ ಹಿಟ್ಟಿನಂತೆ ರೆಡಿಯಾದ ನಂತರ ಬನ್ಸ್ ಮಾಡಲು ರೆಡಿಯಾಗಬೇಡಿ. ಇನ್ನೂ ಏಳೆಂಟು ಗಂಟೆ ಕಾಯಬೇಕು. ಬೆಳಗ್ಗೆ ಹಿಟ್ಟು ಮುದ್ದೆ ರೆಡಿಯಾದರೆ ಸಂಜೆಯ ತನಕ ಹಿಟ್ಟು ಇಟ್ಟುಬಿಡಿ. ರಾತ್ರಿ ಸಿದ್ಧಮಾಡಿದ್ದರೆ ಬೆಳಗ್ಗೆ ಬನ್ಸ್ ಮಾಡಬಹುದಾಗಿದೆ.

ಎರಡನೇ ಹಂತ (ಎಂಟು ಗಂಟೆಯ ನಂತರ)

  • ಮುದ್ದೆಯನ್ನು ಚೆನ್ನಾಗಿ ಹಿಸುಕಿ.

  • ಪುಟ್ಟ ಪುಟ್ಟ ಉಂಡೆ ಮಾಡಿ ಚಪಾತಿಗಿಂತ ಕೊಂಚ ದಪ್ಪಗಾಗಿ ಪುಟ್ಟ ಪುಟ್ಟ ದೋಸೆಯಂತೆ ಲಟ್ಟಿಸಬೇಕು.



ಮೂರನೇ ಹಂತ

  • ಬಾಣಲೆಯಲ್ಲಿ ಎಣ್ಣೆ ಕುದಿಸಿ (ಬನ್ಸ್ ಮುಳುಗುವಷ್ಟು ಇರಲಿ)

  • ಲಟ್ಟಿಸಿಟ್ಟಿರುವುದನ್ನು ಒಂದೊಂದಾಗಿ ಕುದಿಯುವ ಎಣ್ಣೆಗೆ ಹಾಕಿ.

  • ಕುದಿಯುವ ಎಣ್ಣೆಯಲ್ಲಿ ಬನ್ಸ್ ಕೆಂಬಣ್ಣಕ್ಕೆ ಬರುವಷ್ಟು ಕಾಯಿಸಿ.



  • ಎಣ್ಣೆಯಿಂದ ಬನ್ಸ್ ಅನ್ನು ತೆಗೆಯಿರಿ.

ಬನ್ಸ್ ರೆಡಿ :-)







Friday 9 December 2016

ನೆನಪಿನ ತೋರಣ: ಬಾಲ್ಯ ಲೀಲೆಗಳು!!!

ನೆನಪಿನ ತೋರಣ: ಬಾಲ್ಯ ಲೀಲೆಗಳು!!!

ನಿನಗೆ ಶೇಷಮ್ಮ ಟೀಚರ್‌ನ ನಂಬರ್‌ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್‌ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್‌, ಮೇಸ್ಟ್ರು, ಊರು, ಕಾಡುಗುಡ್ಡ,  ಅಮ್ಮನ ಪ್ರೀತಿ, ಗುರುಗಳು ನೀಡಿದ್ದ ಬೆತ್ತದ ಏಟು, ಸ್ನೇಹಿತನ ಮುನಿಸು, ತಂಟೆ, ತಕರಾರು ಹೀಗೆ ನೆನಪುಗಳ ಜಾತ್ರೆ. ಎಲ್ಲರ ಭೀತಿಯಂತೆ ನನಗೆ ನನ್ನೂರು ಏನೋ ಕಳೆದುಕೊಂಡಂತೆ ಅನಿಸುತ್ತಿಲ್ಲ. ಊರು ವೃದ್ಧಾಶ್ರಮವೂ ಆಗಿಲ್ಲ. ಒಂದಿಷ್ಟು ಅಭಿವೃದ್ಧಿ ಬಿಟ್ಟರೆ ಹಿಂದಿನ ಹಾಗೇ ಇದೆ.


ಬಾಲ್ಯದ ಕನವರಿಕೆಯಿಂದ ಶೇಷಮ್ಮ ಟೀಚರ್‌ಗೆ ಫೋನ್‌ ಮಾಡಿದೆ. ಮನಸಿನ ತುಂಬಾ ಬಾಲ್ಯದ ಪ್ರವೀಣನೇ ತುಂಬಿಕೊಂಡಿದ್ದ. ಹೆಸರು ಹೇಳಿದಾಕ್ಷಣ ಗುರುತು ಹಿಡಿದು ಮಾತನಾಡಿದ್ದೇ ಮಾತನಾಡಿದ್ದು. ಅಮ್ಮ ಹೇಗಿದ್ದಾರೆ? ಅವರು ಹೇಗಿದ್ದಾರೆ? ಇವರು ಹೇಗಿದ್ದಾರೆ ಅಂತ ಇಡೀ ನನ್ನೂರಿನ ಆರೋಗ್ಯ ವಿಚಾರಿಸಿಕೊಂಡರು. ನಾನು ತಲುಪಿದ ನೆಲೆಯನ್ನು ಕೇಳಿ ಸಂತೋಷ ಪಟ್ಟರು. ಎಲ್ಲ ಅಬ್ಬೆಪಾರಿಯಾಗುತ್ತನೆಂದುಕೊಂಡಿದ್ದ  ಹುಡುಗ ಇವನೇನಾ ಅಂತ ಅನಿಸಿರಬೇಕು.


ಶೇಷಮ್ಮ ಟೀಚರ್‌ ಎಂದರೆ ಮನದಲ್ಲಿ ಮೂಡುವುದು ಹಲವು ಮುಖಗಳು. ಕೋಪಗೊಂಡಾಗ ದುರ್ಗೆ. ಪ್ರೀತಿಯಿಂದ ಮಾತನಾಡುವಾಗ ಅಮ್ಮ. ಲೆಕ್ಕ ಹೇಳಿಕೊಡುವುದರಲ್ಲಿ ಸರಸ್ವತಿ. ಕ್ಲಾಸ್‌ನಲ್ಲಿ ನಾನು ಏನು ತಪ್ಪು ಮಾಡಿದರೂ ಮನೆಗೆ ಬಂದು ದೂರು ಹೇಳುತ್ತಿದ್ದರು. ನಾನು ಏಳನೇ ತರಗತಿ ಮುಗಿಸೋವರೆಗೂ ಅವರಿಗೆ ಮದುವೆಯಾಗಿರಲ್ಲಿಲ್ಲ. ನಂತರ ಮದುವೆಯಾಗಿ ದೂರದೂರಿಗೆ ಟ್ರಾನ್ಸ್‌ಫಾರ್‌ ಆಗಿದ್ದರು.  ಇನ್ನು ಇವರು ನೋಡಲು ಸಿಗಲಾರರು ಅಂತ ಅಂದುಕೊಂಡಿದ್ದೆ. 10-12 ವರ್ಷಗಳ ನಂತರ ಮಾತನಾಡುವ ಅವಕಾಶ ಒದಗಿ ಬಂದಿತ್ತು. ಹೊಡೆಯುವುದನ್ನು ಹೊರತು ಪಡಿಸಿದರೆ  ಶೇಷಮ್ಮ ಟೀಚರ್‌ ಕೆಟ್ಟವರಾಗಿರಲ್ಲಿಲ್ಲ. ಶಾರದ ಪೂಜೆಯಂದು ಅವರ ಮಡಿಲಲ್ಲಿ ಕುಳಿತುಕೊಂಡು ಅಕ್ಕಿಯ ಮೇಲೆ ಮೊದಲಾಕ್ಷರ ಕಲಿತಿದ್ದೆ. ಪ್ರವೀಣ್‌ ಅನ್ನೋ ಹೆಸರಿಗೆ ಚಂದ್ರನನ್ನು ಸೇರಿಸಿದ್ದು ಕೂಡ ಇವರೇ.


ನನಗಿನ್ನೂ ನೆನಪಿದೆ. ನಾನು ಶಾಲೆಗೆ ಹೋಗುವಾಗ ಬ್ಯಾಗ್‌ನಲ್ಲಿ ಪಾಠ ಪುಸ್ತಕಕ್ಕಿಂತ ಚಂದಮಾಮ, ಬಾಲಮಂಗಳ ಮತ್ತು ಒಂದಿಷ್ಟು ಕಸ ಯಾವತ್ತೂ ಇರುತ್ತಿತ್ತು. ಟೀಚರ್‌ ನನ್ನ ಬ್ಯಾಗನ್ನು ಮೇಜಿನ ಮೇಲೆ ಸುರಿದು ಅದರಲ್ಲಿದ್ದ ಹರಿದ ಕತೆ ಪುಸ್ತಕಗಳನ್ನು ಎಲ್ಲರಿಗೆ ತೋರಿಸಿ ಅಪಹಾಸ್ಯ ಮಾಡುತ್ತಿದ್ದರು.  `ಇವನ ಚೀಲದಲ್ಲಿ ಪಾಠ ಪುಸ್ತಕಕ್ಕಿಂತ ಬಾಲಮಂಗಳ, ಚಂದಮಾಮ, ಕಸವೇ ಜಾಸ್ತಿ’ ಅಂತ ದಿನಾ ಅಮ್ಮನ ಬಳಿ ಬಂದು ದೂರು ಹೇಳುತ್ತಿದ್ದಳು. ಅಮ್ಮ ಇಂತಹ ದೂರುಗಳಿಗೆ ಕಿವುಡಿಯಾಗುತ್ತಿದ್ದಳು. ಪಕ್ಕದ ಮನೆಯ ರಶ್ಮಿಗೆ ಹೋಲಿಸಿ `ಅವಳು ನೋಡು ಎಷ್ಟು ಜಾಣ ಹುಡುಗಿ. ಕ್ಲಾಸ್‌ಗೆ ಯಾವಾಗಲೂ ಫಸ್ಟ್‌. ಇವನನ್ನು ಕೂಡ ಅದೇರೀತಿ ಕುಳಿತು ಓದೋಕೆ ಹೇಳಿ ಅಂತ’ ಅಮ್ಮನಿಗೆ ಹೇಳುತ್ತಿದ್ದರು. ರಶ್ಮಿಗೆ ನನ್ನನ್ನು ಹೋಲಿಸುವಾಗ ಅಮ್ಮ ಕೋಪಗೊಳ್ಳುತ್ತಿದ್ದಳು. ಅವಳಿಗೇನು ಅಪ್ಪ  ಸರ್ಕಾರಿ ಕೆಲಸದಲ್ಲಿದ್ದಾರೆ. ದುಡ್ಡು ವಿದ್ಯೆ ಎರಡೂ ಇದೆ. ಹೇಳಿ ಕೊಡ್ತಾರೆ’ ಅಂತ ಅಮ್ಮ ಸುಮ್ಮನಾಗುತ್ತಿದ್ದಳು.


ಇಷ್ಟಕ್ಕೂ ನನಗೆ ಕಥೆ ಪುಸ್ತಕ ಓದುವ ಹುಚ್ಚು ಹಿಡಿಸಿದೇ ಅಮ್ಮ. `ಒಂದು ಗೋಣಿ ತುಂಬಾ ಚಂದಮಾಮ ಇಟ್ಟಿದೆ. ಹಾಳಾದ ಗೆದ್ದಲು ತಿಂದು ಬಿಡ್ತು’ ಹಾಗಂತ ನಾನು ಹೈಸ್ಕೂಲ್‌ನಲ್ಲಿರುವಾಗ ಅವ್ಯಕ್ತ ನೋವಿನಿಂದ ಹೇಳುತ್ತಿದ್ದಳು. ಓದಿರುವುದು ನಾಲ್ಕನೇ ತರಗತಿಯಾದರೂ ರಾಮಾಯಣ, ಮಹಾಭಾರತ ಅಂತ ಅವಳು ಓದದ ಪುಸ್ತಕವಿಲ್ಲ. ನಾನು ಎಂಎ ಮುಗಿಸುವರೆಗೂ ಅವಳಿಗಾಗಿ ಲೈಬ್ರೆರಿಯಿಂದ ಪುಸ್ತಕ ತರುತ್ತಿದ್ದೆ. ಚಿಕ್ಕವರಿದ್ದಾಗ ನಾನು ಮತ್ತು ನನ್ಣಣ್ಣ ನಿದ್ರೆಗೆ ಮುನ್ನ ಅಮ್ಮನ ಅಕ್ಕ ಪಕ್ಕ ಮಲಗಿ ಕತೆ ಹೇಳುವಂತೆ ಪೀಡಿಸುತ್ತಿದ್ದೇವು.


ಪಂಚತಂತ್ರ, ನರಿ, ರಾಜರಾಣಿ, ಹುಲಿ ತೋಳ ರಾಕ್ಷಸ ಅಂತ ಅವಳಲ್ಲಿ ಕಥೆಗಳೆಂದೂ ಮುಗಿಯುತ್ತಿರಲ್ಲಿಲ್ಲ. ಏನೋ ತಪ್ಪು ಮಾಡಿದಕ್ಕೆ ತಡೆಯಾಲಾರದೇ ಅಮ್ಮ ಒಂದು ದಿನ ಚಾಟಿಯಿಂದ ಹೊಡೆದಿದ್ದಳು. ಆ ಏಟಿಗೆ ನಾನು ಅಮ್ಮ ಅಂತ ಕಿರುಚಿ ದೂರಕ್ಕೆ ಓಡಿದ್ದೆ. ಮತ್ತೆ ಬಂದು ನೋಡಿದಾಗ ಅಮ್ಮ ಅಳುತ್ತಿದ್ದಳು.


ಚಂದಮಾಮ ಅಂದಾಗ ನನಗೆ ನೆನಪಾಗುವುದು ಮಳಿಯ ವೆಂಕಟಕೃಷ್ಣ ಭಟ್ರು. ಪ್ರತಿವಾರ(ಗುರುವಾರ ಅಂತ ನೆನಪು) ತಪ್ಪದೇ ಮನೆಗೆ ಚಂದಮಾಮ ತರುತ್ತಿದ್ದರು. ಅಮ್ಮ ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಭಟ್ರು ಸೈಕಲ್‌ ಮೂಲಕ ಮನೆ ಮನೆಗೆ ಚಂದಮಾಮ, ಪತ್ರಿಕೆಗಳನ್ನು ಹಂಚುತ್ತಿದ್ದರು. ಅವರಿಗೆ ಆಗಲೇ ಜೇನು ಸಾಕುವ ಹುಚ್ಚು ಕೂಡ ವಿಪರಿತವಾಗಿತ್ತು. ಇದೆಲ್ಲವುದರ ಪರಿಣಾಮ ಎಂಬಂತೆ ಅವರೀಗ `ಮಧು ಮಲ್ಟಿಪಲ್ಸ್‌’ ಎನ್ನುವ ಉದ್ಯಮ ಮಾಲೀಕ. ಸುಮಾರು ನೂರೈವತ್ತು ಜನರಿಗೆ ಉದ್ಯೋಗದಾತ. ಚಂದಮಾಮ ಮಾರುತ್ತಿದ್ದ ಭಟ್ರು ಈಗ ಯಶಸ್ವಿ ಉದ್ಯಮಿಯಾಗಲು ಎಷ್ಟು ಶ್ರಮ ಪಟ್ಟಿದ್ದಾರೋ? ಅವರಿಗೇ ಗೊತ್ತು. (http://madhumultiples.com).


ನನ್ನಣ್ಣ ನನಗಿಂತ ಎರಡು ಕ್ಲಾಸ್‌ ಮುಂದಿದ್ದ. ಸೈಕಲ್‌ ಕಲಿತದ್ದು ಅವನು ಫಸ್ಟ್‌. ಸೈಕಲ್‌ ಕಲಿತ ಖುಷಿಯಲ್ಲಿ ನನ್ನನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ಹೋಗಿದ್ದ. ಆಗ ಸೋಡದಂಗಡಿಯ ಮಮ್ಮದೆ ಬಳಿ ಗಂಟೆಗೆ 2 ರೂಪಾಯಿಗೆ ಸೈಕಲ್‌ ಬಾಡಿಗೆಗೆ ಸಿಗುತ್ತಿತ್ತು.  ತುಂಬಾ ವೇಗವಾಗಿ ಹೋಗುತ್ತಿದ್ದ. ಅದು ನಮ್ಮೂರಿನ ದೊಡ್ಡ ತಿರುವು. ಅಲ್ಲಿ ಸಾಮಾನ್ಯ ಸೈಕಲ್‌ಗಳಿಗೆ ಬ್ರೇಕ್‌ ಹಿಡಿತಾ ಇರಲ್ಲಿಲ್ಲ. ಅತೀ ವೇಗದಿಂದ ಕೆಳಗಿಳಿಯುತ್ತಿರುವಾಗ ಎದುರಿನಿಂದ ಬಸ್‌ ಬರುತ್ತಿತ್ತು. ಅಣ್ಣ ಬ್ರೇಕ್‌ ಹಿಡಿಯೋಕೆ ನೋಡ್ತನೆ. ನಿಲ್ಲೋದೆ ಇಲ್ಲ. ಎದುರಿನಿಂದ ಯಮನಂತೆ ಬರುವ ಬಸ್ಸು. ಏನಾಯಿತು ಅಂತ ಗೊತ್ತಾಗಲ್ಲಿಲ್ಲ. ನಾವಿಬ್ಬರು ಮಾರ್ಗದಲ್ಲಿ ಬಿದ್ದಿದ್ದೇವು.


ಬಸ್‌ ನಿಂತಿತು. ಅದರಲ್ಲಿದ್ದವರು ನಮ್ಮನ್ನು ಎಬ್ಬಿಸಿದರು. ಅಣ್ಣ ಎದುರಿನ ಮೋರಿಗೆ ಸೈಕಲ್‌ನ್ನು ಗುದ್ದಿಸಿದ. ಸ್ವಲ್ಪ ಎಚ್ಚರ ತಪ್ಪಿದರೆ ಕೆಳಗಿನ ದೊಡ್ಡ ಗುಂಡಿಗೆ ಬೀಳುತ್ತಿದ್ದೇವು. ಸೈಕಲ್‌ನ ಎದುರಿನ ಟೈರ್‌ ಎಂಟು ಆಕಾರಕ್ಕೆ ತಿರುಗಿತ್ತು. ಅದೇ ಕೊನೆ ಮತ್ತೆ ನಾನು ಅವನೊಂದಿಗೆ ಸೈಕಲ್‌ನಲ್ಲಿ ಹೋಗಿಲ್ಲ.


ಶಾರದ ಪೂಜೆ, ಸ್ವಾತಂತ್ರೋತ್ಸವ ಸೇರಿದಂತೆ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ. ಕಾಗದ ಕೊಡೊಕೆ ನಾನು ಮತ್ತು ಸುನಿಲನೇ ಆಗಬೇಕು. ಕ್ಲಾಸ್‌ ಇಲ್ಲದೇ ಊರು ಸುತ್ತುವುದೆಂದರೆ ನಮಗೂ ಎಲ್ಲಿಲ್ಲದ ಖುಷಿ. ಕಾಡಿನೆಡೆಯಲ್ಲಿರುವ ಮನೆಗಳಿಗೆ, ಗುಡ್ಡದಾಚೆ ಹೋಗೊದಂದ್ರೆ ಮಜಾನೇ ಮಜಾ.


ಕಾಡಿನಲ್ಲಿ ಯಾವುದೋ ದೊಡ್ಡ ಬಂಡೆಯನ್ನು ತೋರಿಸಿ ಸುನಿಲ ‘ಇದು ಹುಲಿಯ ಗುಹೆಯಾಗಿತ್ತು’ ಅಂದ್ರೆ ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಈ ಮರದಲ್ಲಿ ಮೋಹಿನಿ ದೆವ್ವ ಇದೆ ಅಂತಲೂ ಹೆದರಿಸುತ್ತಿದ್ದ. ಕ್ಲಾಸ್‌ ಮುಗಿದ ಕ್ಷಣ ನಾನು ಮತ್ತು ಸುನಿಲ ಕಾಡಿಗೆ ಓಡುತ್ತಿದ್ದೇವು. ಅಲ್ಲಿ ನೆಲ್ಲಿಕಾಯಿ ಕಾರೆಕಾಯಿ ಅಂತ ಸಿಕ್ಕಿಸಿಕ್ಕಿದನ್ನು ತಿನ್ನುತ್ತಿದ್ದೇವು. ಕಾಡಿನಲ್ಲಿ ಜೇನು ಹಿಡಿಯೋ ನಾರ್ಣ ಸಿಕ್ಕದರೆ ಮುಗೀತು.ಮತ್ತೆ ಅವನೊಂದಿಗೆ ಕತ್ತಲಾಗುವ ತನಕ ಕಾಡು ಸುತ್ತುತ್ತಿದ್ದೇವು.


ನಾರ್ಣನಿಗೆ ಒಂದು ಜೇನು ಹುಳ ಕಣ್ಣಿಗೆ ಬಿದ್ದರೆ ಸಾಕು. ಅದರ ಹಿಂದೆಯೇ ಸಾಗಿ ಜೇನು ಗೂಡಿನ ಜಾಡು ಹಿಡಿಯುತ್ತಿದ್ದ. ಇವನ ತಾಯಿ ಅಯ್ತೆ ತೋಡಿನ ಬದಿಯಲ್ಲಿ ಕುಳಿತುಕೊಂಡು ಏಡಿಯ ಪುಟ್ಟ ಗುಹೆಯೊಳಗೆ ಕೈಹಾಕಿ ಏಡಿ ಹಿಡಿಯುವುದನ್ನು ನಾವು ನೋಡಿ ಆಶ್ಚರ್ಯಗೊಳ್ಳುತ್ತಿದ್ದೇವು. ಕಾಡಿನಲ್ಲಿ ಸಂಗ್ರಹಿಸಿದ ಸೀಗೆಕಾಯಿಗಳನ್ನು ನನ್ನ ಮನೆಯ ಪಕ್ಕದಲ್ಲಿದ್ದ ಅಜ್ಮೀರ್‌ನ ಅಂಗಡಿಗೆ ಮಾರುತ್ತಿದ್ದೇವು. ಆತ ನೀಡಿದ ಚಿಲ್ಲರೆ ಹಣದಲ್ಲಿ ತಪ್ಪದೆ ತಿಂಡಿ, ಐಸ್‌ಕ್ಯಾಂಡಿ ತಿನ್ನುತ್ತಿದ್ದೇವು.


ಅಜ್ಮೀರ್‌ ಅಂದಾಗ ನೆನಪಾಯಿತು. ನಾನು ಚಿಕ್ಕದಾಗಿರುವಾಗ ಕಿಸೆಯಲ್ಲಿ ಅಡಕೆ ತುಂಬಿಸಿಕೊಂಡು ಬಂದು ಇವನಿಗೆ ಮಾರುತ್ತಿದ್ದೆ. ಆತ ಒಂದೆರಡು ದಿನ ಸುಮ್ಮನಿದ್ದ. ಕೊನೆಗೆ ಅಜ್ಜನಿಗೆ ಕಂಪ್ಲೇಟ್‌ ಕೊಡೋದ?. ಅಜ್ಜ ಬೈರವನಂತೆ ದೊಣ್ಣೆ ಹಿಡಿದು ಬಂದಿದ್ದರು. ಮನೆಗೆ ಕರೆದುಕೊಂಡು ಹೋಗಿ ಕಳ್ಳತನ ಮಾಡಬಾರದೆಂದು ತುಂಬಾ ಬುದ್ದಿವಾದ ಹೇಳಿದ್ದರು. ಅಜ್ಜ ಅಂದರೆ ಅಜಾನುಬಾಹು ವ್ಯಕ್ತಿತ್ವ. ಹಳ್ಳಿ ಮದ್ದು ಕೊಡುವುದರಲ್ಲಿ ಹೆಸರುವಾಸಿಯಾಗಿದ್ದರು. ಪಾಡ್ದನ, ಸಂದಿ ಅಂತ ಅವರಿಗೆ ತಿಳಿಯದ ವಿಷಯವಿರಲ್ಲಿಲ್ಲ. ಅಜ್ಜ ನಮಗೊಂದು ಅಚ್ಚರಿಯಾಗಿದ್ದರು.


ಚಂದದ ಚಂದಮಾಮ ಹುಡುಕಿದರೂ ಸಿಗುತ್ತ್ತಿಲ್ಲ. ಈಗೀಗ ನನಗೆ ಗೆದ್ದಲು ಹುಳುಗಳ ಮೇಲೆ ವಿಪರೀತ ಸಿಟ್ಟು ಬರುತ್ತಿದೆ. ನನ್ನ ಅಜ್ಜನಂತೆ ದೊಡ್ಡ ನೆಲ್ಲಿಕಾಯಿ ಮರ ಕೂಡ ಧರೆಗುರುಳಿದೆ. ಊರಿಗೆ ಹೋದಾಗ ಪ್ರೈಮರಿಯ ಮಕ್ಕಳು ನಮ್ಮನ್ನು ಅಚ್ಚರಿಗಣ್ಣಿನಿಂದ ನೋಡುತ್ತಾರೆ. ನನಗೆ ಅವರನ್ನು ನೋಡುವಾಗ ಅಸೂಯೆಯಾಗುತ್ತದೆ. ಬಾಲ್ಯವೆಂಬುದು ನೆನಪುಗಳ ಅಕ್ಷಯ ಪಾತ್ರೆ. ಅದು ಖಾಲಿಯಾಗುವುದೇ ಇಲ್ಲ. ದೊಡ್ಡಾದಾಗುತ್ತ ಬಂದಂತೆ ಊರು ಅಚ್ಚರಿಯಾಗಿ ಉಳಿಯಲ್ಲಿಲ್ಲ. ಪ್ರತಿಯೊಬ್ಬರಲ್ಲೂ ಬಾಲ್ಯದ ಅಕ್ಕರೆಯ ಸಕ್ಕರೆಯ ನೆನಪಿರುತ್ತದೆ. ಯಾಕೋ ಶೇಷಮ್ಮ ಟೀಚರ್‌ನಲ್ಲಿ ಮಾತನಾಡಿದ ನಂತರ ಮನದ ಮೂಲೆಯಲ್ಲಿ ಬೆಚ್ಚಗೆ ಮಲಗಿದ್ದ ನೆನಪುಗಳು ಮತ್ತೆ ಕಾಡತೊಡಗಿವೆ.

ಪ್ರವೀಣ ಚಂದ್ರ ಪುತ್ತೂರು

Tuesday 6 December 2016

ನಿಮಗಿದು ಗೊತ್ತೆ? Did You Know ಸೋಜಿಗದ ಸಂಗತಿಗಳು

ನಿಮಗಿದು ಗೊತ್ತೆ? Did You Know ಸೋಜಿಗದ ಸಂಗತಿಗಳು

* ನಮ್ಮ ಹೃದಯದ ಬಡಿತ ದಿನಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು.

* ನಮಗೆ ಎಷ್ಟು ವಯಸ್ಸಾದರೂ ನಮ್ಮ ಕಣ್ಣು ನಾವು ಹುಟ್ಟಿದಾಗ ಇದ್ದಷ್ಟೇ ಗಾತ್ರ ಇರುತ್ತದೆ. ಆದರೆ ಕಿವಿ ಮತ್ತು ಮೂಗು ನಿರಂತರವಾಗಿ ಬೆಳೆಯುತ್ತಿರುತ್ತದೆ.

* ಜಗತ್ತಿನಲ್ಲಿರುವ ಮನುಷ್ಯರ ಸಂಖ್ಯೆಗಿಂತ ಹೆಚ್ಚು ಬ್ಯಾಕ್ಟಿರಿಯಾಗಳು ನಿಮ್ಮ ಬಾಯಿಯಲ್ಲಿದೆಯಂತೆ!

* ನಿಮ್ಮ ಕೈಯ ಮಧ್ಯದ ಬೆರಳು ವೇಗವಾಗಿ ಬೆಳೆಯುತ್ತದೆ.

*ಟೊಮೆಟೊದ ನಂತರ ಬಾಳೆಹಣ್ಣು ಜಗತ್ತಿನಲ್ಲಿ ಅತ್ಯಂತ ಪ್ರಶಿದ್ಧ ಹಣ್ಣು

* ಚಿಟ್ಟೆಗಳು ಕಾಲಿನ ಮೂಲಕ ರುಚಿ ನೋಡುತ್ತವೆ.

* ಪ್ರಪಂಚದಲ್ಲಿ ಅತ್ಯಧಿಕ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ- ಭಾರತದ ರೈಲ್ವೆ

* ಈಜಬಲ್ಲ ಆದರೆ ಹಾರಲಾಗದ ಒಂದೇ ಹಕ್ಕಿಯೆಂದರೆ ಪೆಂಗ್ವಿನ್‌.

* ನಮ್ಮ ಹೃದಯದ ಬಡಿತ ದಿನಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು.

* ನಮಗೆ ಎಷ್ಟು ವಯಸ್ಸಾದರೂ ನಮ್ಮ ಕಣ್ಣು ನಾವು ಹುಟ್ಟಿದಾಗ ಇದ್ದಷ್ಟೇ ಗಾತ್ರ ಇರುತ್ತದೆ. ಆದರೆ ಕಿವಿ ಮತ್ತು ಮೂಗು ನಿರಂತರವಾಗಿ ಬೆಳೆಯುತ್ತಿರುತ್ತದೆ.

*ನಿಮ್ಮ ದೇಹ ಪ್ರತಿ ಸೆಕೆಂಡ್‌ಗೆ 15 ದಶಲಕ್ಷ ಕೆಂಪು ರಕ್ತಕಣಗಳನ್ನು ಕೊಲ್ಲುತ್ತದೆ. ಹೆದರಬೇಡಿ ಅಷ್ಟೇ ರಕ್ತಕಣಗಳನ್ನು ಉತ್ಪಾದಿಸುತ್ತದೆ.

*ವಿಶ್ವದಲ್ಲಿ ಆಯಾತಕಾರದ ಧ್ವಜ ಹೊಂದಿರದ ದೇಶ ನೇಪಾಲ ಮಾತ್ರ.*ಎಮ್ಮುಗಳಿಗೆ ಹಿಂದಕ್ಕೆ ನಡೆಯಲು ಸಾಧ್ಯವಾಗುವುದಿಲ್ಲವಂತೆ!

*ಕರಡಿಗಳಿಗೆ 42 ಹಲ್ಲುಗಳಿವೆ.

*ಜಗತ್ತಿನಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿರುವ ಹೆಸರು- ಮೊಹಮ್ಮದ್‌

*`ಟೌನ್‌’ ಎಂಬುದು ಅತ್ಯಂತ ಹಳೆಯ ಆಂಗ್ಲ ಪದ.

* ಪ್ರತಿಗಂಟೆಗೆ ಬೆಕ್ಕು 20 ಕಿ.ಮೀ. ಓಡಬಲ್ಲದು.

* ವೆನಿಲಾ ಜಗತ್ತಿನಲ್ಲಿ ಅತ್ಯಂತ ಫೇಮಸ್‌ ಐಸ್‌ಕ್ರೀಂ ಪ್ಲೇವರ್‌.

* ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸುಮಾರು 60 ಸಾವಿರ ಪೌಂಡ್‌ ಆಹಾರ ಸೇವಿಸುತ್ತಾನೆ. ಅಂದ್ರೆ 6 ದೊಡ್ಡ ಆನೆಯಷ್ಟು.

* ನಿಮ್ಮ ಹುಟ್ಟುಹಬ್ಬದಂದೇ ಪ್ರಪಂಚದಲ್ಲಿ ಕನಿಷ್ಠ 9 ಲಕ್ಷ ಜನರಾದರೂ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಾರಂತೆ!

* ಮನುಷ್ಯರಿಗಿರುವುದಕ್ಕಿಂತ ಹೆಚ್ಚು ಸ್ನಾಯುಗಳು ಕಂಬಳಿ ಹುಳುಗಳಿಗೆ ಇವೆಯಂತೆ!

* ಆಗಷ್ಟೇ ಹುಟ್ಟಿದ ಕಾಂಗರೂ ಸುಮಾರು ಒಂದು ಇಂಚಿನಷ್ಟು ಮಾತ್ರ ಉದ್ಧವಿರುತ್ತದೆ.

* ಆಗಷ್ಟೇ ಹುಟ್ಟಿದ ಮಗುವಿನ ಮಿದುಳು ಮೊದಲ ವರ್ಷದಲ್ಲಿ ಸುಮಾರು ಮೂರು ಪಟ್ಟು ಬೆಳೆಯುತ್ತದಂತೆ!

* ಬೆಕ್ಕಿನ ಪ್ರತಿ ಕಣ್ಣಿನಲ್ಲೂ ಸುಮಾರು 32 ಸ್ನಾಯುಗಳಿವೆ.

*ಜೇಡಗಳಿಗೆ ಸಾಮಾನ್ಯವಾಗಿ 8 ಕಣ್ಣುಗಳಿರುತ್ತವೆ. ಆದರೂ ಅವಕ್ಕೆ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ.

*ಕಿಂಗ್‌ ಕಾಂಗ್‌ ಎಂಬುದು ಹಿಟ್ಲರ್‌ನ ಫೇವರಿಟ್‌ ಸಿನಿಮಾ.

*1993ರಲ್ಲಿ ಮಿಕ್ಕಿ ಮೌಸ್‌ಗೆ ಕಡಿಮೆಯೆಂದರೆ 8 ಲಕ್ಷಕ್ಕಿಂತ ಹೆಚ್ಚು ಅಭಿಮಾನಿಗಳು ಪತ್ರ ಬರೆದಿರುವುದಾಗಿ ನಂಬಲಾಗಿದೆ.

*ಮನುಷ್ಯರ ಎಲುಬು ಉಕ್ಕಿನಷ್ಟೇ ಗಟ್ಟಿಯಾಗಿದೆ. ಆದರೆ 50 ಪಟ್ಟು ಕಡಿಮೆ ಹಗುರವಾಗಿದೆ.

*ಕತ್ತಲಿನಲ್ಲಿ ಬೆಕ್ಕಿನ ಮೂತ್ರ ಹೊಳೆಯುತ್ತದಂತೆ!

*ಬಿಸಿಗಾಳಿಯ ಬಲೂನ್‌ನಲ್ಲಿ ಮೊದಲು ಹಾರಾಟ ನಡೆಸಿದ್ದು ಒಂದು ಕುರಿ, ಒಂದು ಬಾತುಕೋಳಿ ಮತ್ತು ಒಂದು ಹುಂಜ.

*ಟೆಲಿಫೋನ್‌ ಕಂಡುಹಿಡಿದ ಅಲೆಕ್ಸಾಂಡರ್‌ ಗ್ರಾಹಂ ಬೆಲ್‌ ತನ್ನ ಪತ್ನಿ ಮತ್ತು ಹೆಂಡತಿಯರೊಂದಿಗೆ ಫೋನ್‌ನಲ್ಲಿ ಮಾತನಾಡಲಿಲ್ಲ.ಕಾರಣ ಅವರಿಬ್ಬರಿಗೆ ಕಿವಿ ಕೇಳಿಸುತ್ತಿರಲಿಲ್ಲ!

*12 ಮೊಟ್ಟೆಯಿಡಲು ಕೋಳಿ ಸುಮಾರು 1.81 ಕಿಲೋ ಗ್ರಾಂ.ನಷ್ಟು ಆಹಾರ ಸೇವಿಸಬೇಕಾಗುತ್ತದೆ.

*ಕಡಿಮೆ ಮತ್ತು ಅತ್ಯಧಿಕ ಕಂಪನ(ಪ್ರೀಕ್ವೆನ್ಸಿ)ಗಳನ್ನು ದನಗಳು ಮನುಷ್ಯರಿಗಿಂತ ಚೆನ್ನಾಗಿ ಗ್ರಹಿಸಿಕೊಳ್ಳಬಲ್ಲವು.

* ನಮ್ಮ ಬಾಯಿ ದಿನವೊಂದಕ್ಕೆ ಸುಮಾರು ಒಂದು ಲೀಟರ್‌ನಷ್ಟು ಜೊಳ್ಳು ಉತ್ಪಾದಿಸುತ್ತದೆ.

* ಕಣ್ಣು ತೆರೆದು ಸೀನಲು ಯಾರಿಗೂ ಸಾಧ್ಯವಿಲ್ಲವಂತೆ!

* ಮನುಷ್ಯ ಆಹಾರವಿಲ್ಲದೆ ತಿಂಗಳುಗಳ ಕಾಲ ಬದುಕಬಲ್ಲ. ಆದರೆ ನೀರಿಲ್ಲದೆ ಒಂದು ವಾರ ಬದುಕುವುದು ಕಷ್ಟ.

* ಪುರುಷರಲ್ಲಿ ದಿನವೊಂದಕ್ಕೆ ಸುಮಾರು 40 ಮತ್ತು ಮಹಿಳೆಯರಲ್ಲಿ ದಿನವೊಂದಕ್ಕೆ ಸುಮಾರು 70 ಕೂದಲು ಉದುರುತ್ತದೆ.

*ನೀವು ನಿಮ್ಮ ಜೀವಿತಾವಧಿಯಲ್ಲಿ ಸುಮಾರು 75 ಸಾವಿರ ಲೀಟರ್‌(20 ಸಾವಿರ ಗ್ಯಾಲನ್‌)ಗಿಂತ ಹೆಚ್ಚು ನೀರು ಕುಡಿಯಬಹುದು.

* ಒಬ್ಬ ವ್ಯಕ್ತಿಯ ತಲೆಕಡಿದ ನಂತರ ಆತನಿಗೆ 8 ಸೆಕೆಂಡ್‌ ಕಾಲ ಪ್ರಜ್ಞೆಯಿರುತ್ತದಂತೆ!

* ನೀರಿನಲ್ಲಿ ಶಬ್ದವು ಗಾಳಿಗಿಂತ ನಾಲ್ಕು ಪಟ್ಟು ವೇಗದಲ್ಲಿ ಚಲಿಸುತ್ತದೆ.

* ನೀಲಿ ತಿಮಿಂಗಿಲ 188 ಡೆಸಿಬಲ್‌ ಸದ್ದು ಹೊರಡಿಸುತ್ತದೆ.  ಎಲ್ಲ ಪ್ರಾಣಿಗಳಿಗಿಂತ ಅಧಿಕವಾಗಿದ್ದು ಸುಮಾರು 530 ಕಿ.ಮೀ. ವರೆಗೆ ಕೇಳುತ್ತದೆ.

* ದೇಹದಲ್ಲಿ ಹೆಚ್ಚು ವರ್ಷ ಬದುಕುವ ಜೀವಕೋಶವೆಂದರೆ ಮಿದುಳುಕೋಶ. ಇದು ಸಾಯೋವರೆಗೂ ಇರುತ್ತದೆ.

* ಆರ್ಮಡಿಲೋ, ಅಪಾಸಮ್‌ ಮತ್ತು ಸ್ಲಾತ್‌ ಮುಂತಾದ ಸಸ್ತನಿಗಳು ಜೀವಮಾನದ ಶೇಕಡ 80ಕ್ಕಿಂತ ಆಯಸ್ಸನ್ನು ನಿದ್ದೆಯಲ್ಲಿ ಕಳೆಯುತ್ತವೆ.

* ಜಗತ್ತಿನ ಎಲ್ಲ ಪ್ರಾಣಿಗಳಿಗೆ ಹೋಲಿಸಿದರೆ ಸೊಳ್ಳೆಗಳು ಹೆಚ್ಚು ಅಪಾಯಕಾರಿ. ಇವು ಎಲ್ಲಕ್ಕಿಂತ ಹೆಚ್ಚು ರೋಗ ಹರಡುತ್ತವೆ.

* ಪಾಯಿಸನ್‌ ಆ್ಯರೋ ಕಪ್ಪೆ- ದಕ್ಷಿಣ ಮತ್ತು ಮಧ್ಯಅಮೆರಿಕ ದೇಶಗಳಲ್ಲಿ ಅತೀ ಹೆಚ್ಚು ವಿಷ ಹೊಂದಿರುವ ಪ್ರಾಣಿ.

* ಮುಖದಲ್ಲಿರುವ ಎಲುಬುಗಳು ಮತ್ತು ತಲೆಬುರುಡೆ ಸೇರಿದಂತೆ ಮಾನವನ ತಲೆಯಲ್ಲಿ 22 ಎಲುಬುಗಳಿವೆ.

* ವಿಶ್ವದ ದೊಡ್ಡ ಹೂವು ರಫ್ಲೇಶಿಯಾ ಅರ್ನೊಲ್ಡಿ. ಇದು ಸುಮಾರು 7 ಕೆ.ಜಿ ಇದ್ದು ಇಂಡೋನೇಷ್ಯಾದ ಸುಮತ್ರಾ ದ್ವೀಪದಲ್ಲಿದೆ.

* ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಕ್ಕಳು ಹುಟ್ಟುವುದು ಆಗಸ್ಟ್‌ನಲ್ಲಂತೆ. ಕಾರಣ ಗೊತ್ತಿಲ್ಲ.

*ವಿಶ್ವದ ದೊಡ್ಡ ದ್ವೀಪ ಆಸ್ಟ್ರೇಲಿಯಾದಲ್ಲಿರುವ ಗ್ರೀನ್‌ಲ್ಯಾಂಡ್‌. ಅತ್ಯಂತ ಸಣ್ಣದ್ವೀಪ ಬ್ರಿಟನ್‌ನಲ್ಲಿರುವ ಬಿಷಪ್‌ ರಾಕ್‌.

* ನಮ್ಮ ಬಾಯಿ ದಿನವೊಂದಕ್ಕೆ ಸುಮಾರು ಒಂದು ಲೀಟರ್‌ನಷ್ಟು ಲಾವಾರಸ ಉತ್ಪಾದಿಸುತ್ತದೆ.

* ಮನುಷ್ಯರು ಶೇಕಡ 90ರಷ್ಟು ಕನಸನ್ನು ಮರೆಯುತ್ತಾರಂತೆ*ಬೆಕ್ಕಿನ ಪ್ರತಿಕಣ್ಣಿನಲ್ಲೂ 32 ಸ್ನಾಯುಗಳಿವೆ.

*ಸೊಳ್ಳೆಗಳಿಗೂ ಹಲ್ಲಿದೆ.

* ಪೆರುವಿನಲ್ಲಿ ಈಜಿಪ್ಟ್‌ಗಿಂತ ಹೆಚ್ಚು ಪಿರಾಮಿಡ್‌ಗಳಿವೆ.

*ಜಗತ್ತಿನ ವಿವಿಧ ಭಾಗಗಳಲ್ಲಿ ಸುಮಾರು 500 ಜಾತಿಯ ಬಾಳೆಹಣ್ಣುಗಳಿವೆ.

* ಚೆಸ್‌ ಕಂಡು ಹುಡುಕಿದ ದೇಶ ಭಾರತ.

* ದೊಡ್ಡ ಆಕ್ಟೋಪಸ್‌ ಸುಮಾರು 15 ಕೆ.ಜಿ ತೂಕವಿರುತ್ತದೆ.

* ಚಿಟ್ಟೆಗಳು ರುಚಿ ನೋಡುವುದು ಕಾಲಿನ ಮೂಲಕವಂತೆ!

* ಪ್ರಪಂಚದಲ್ಲಿ ಅತ್ಯಧಿಕ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ- ಭಾರತದ ರೈಲ್ವೆ

* ಈಜಬಲ್ಲ ಆದರೆ ಹಾರಲಾಗದ ಒಂದೇ ಹಕ್ಕಿಯೆಂದರೆ ಪೆಂಗ್ವಿನ್‌.

Friday 2 December 2016

Scribe for blind people: ದೃಷ್ಟಿ ವಿಶೇಷ ಚೇತನರಿಗೆ ಓದಲು ನೆರವಾಗಿ

Scribe for blind people: ದೃಷ್ಟಿ ವಿಶೇಷ ಚೇತನರಿಗೆ ಓದಲು ನೆರವಾಗಿ

ದೃಷ್ಟಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಪಾಠ ಓದಿ ಹೇಳುವುದು, ಸಹಾಯಕ ಬರಹಗಾರರಾಗಿ ಪರೀಕ್ಷೆ ಬರೆಯಲು ನೆರವಾಗುವುದು ಯುವಜನತೆಗೆ ಅಚ್ಚುಮೆಚ್ಚು. ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೆ ಐಟಿಬಿಟಿ, ಸರಕಾರಿ, ಖಾಸಗಿ ರಂಗದಲ್ಲಿರುವ ತರುಣ ತರುಣಿಯರ ಈ ಸಮಾಜಮುಖಿ ಕಾರ್ಯದ ಬಗ್ಗೆ ಒಂದು ನೋಟ ಇಲ್ಲಿದೆ.

* ಪ್ರವೀಣ್ ಚಂದ್ರ

ಬೆಂಗಳೂರಿನ ಜಯನಗರದ ಒಂದು ಕಾಲೇಜು. ಅದಿತಿ ಇನ್ನೇನೂ ಕ್ಲಾಸ್ ಪ್ರವೇಶಿಸಬೇಕೆಂದಿದ್ದಳು. ಆಗ ಅವಳಿಗೆ ವಾಣಿಯಿಂದ ಒಂದು ಎಸ್‍ಎಂಎಸ್ ಬರುತ್ತದೆ. `ವೆರಿ ಅರ್ಜೆಂಟ್, ನೀಡೆಡ್ 4 ಸ್ಕ್ರೈಬ್ಸ್. ಸುರಾನ ಕಾಲೇಜು' ಎಂದಿರುತ್ತೆ. ಕ್ಲಾಸ್‍ನೊಳಗೆ ಹೋದವಳೇ ತನ್ನ ಮೂವರು ಗೆಳತಿಯರನ್ನು `ಕ್ಲಾಸ್ ಬಂಕ್ ಮಾಡೋಣ' ಎಂದು ಹೊರಗೆಳೆದುಕೊಂಡು ಬರುತ್ತಾಳೆ. ಎಲ್ಲೋ ಫಿಲ್ಮ್ ನೋಡುವ ಪ್ಲಾನ್ ಇರಬೇಕು ಎಂದು ಎಲ್ಲರೂ ಖುಷಿಯಿಂದಲೇ ಹೊರಬರುತ್ತಾರೆ. ಆದರೆ ಆಕೆ ಅವರೆಲ್ಲರನ್ನೂ ಕರೆದುಕೊಂಡು ಬಂದದ್ದು ಸುರಾನ ಕಾಲೇಜಿಗೆ.
ಅವರೆಲ್ಲರು ಎಗ್ಸಾಂ ಹಾಲ್ ಪ್ರವೇಶಿಸಿದರು. ಅಲ್ಲಿ ತಮಗೆ ನಿಗದಿಪಡಿಸಿದ ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಯ ಮುಂದೆ ಕುಳಿತರು. ಅವರಿಗೆ ಪ್ರಶ್ನೆಪತ್ರಿಕೆಯಲ್ಲಿದ್ದ ಪ್ರಶ್ನೆಗಳನ್ನು ಓದಿ ಹೇಳತೊಡಗಿದರು. ಆ ವಿದ್ಯಾರ್ಥಿ ಹೇಳಿದ ಉತ್ತರಗಳನ್ನು ಉತ್ತರ ಪತ್ರಿಕೆಯಲ್ಲಿ ಟಿಕ್ ಮಾಡತೊಡಗಿದರು. ಈ ರೀತಿ ಎಗ್ಸಾಂ ಬರೆಯುವವರನ್ನು ಸ್ಕ್ರೈಬ್ ಅಥವಾ ಸಹಾಯಕ ಬರಹಗಾರರು ಎನ್ನುತ್ತಾರೆ. ಪರೀಕ್ಷಾ ಅಭ್ಯರ್ಥಿ ಹೇಳಿದ್ದನ್ನೇ ಉತ್ತರ ಪತ್ರಿಕೆಯಲ್ಲಿ ಟಿಕ್ ಮಾಡುತ್ತಾರೋ ಎಂದು ನಿಗಾವಹಿಸಲು ಪಕ್ಕದಲ್ಲಿ ಒಬ್ಬರು ಇನ್ವಿಜಲೇಟರ್ ಇರುತ್ತಾರೆ.

ಕಾಲೇಜು ವಿದ್ಯಾರ್ಥಿಗಳ ಫೇವರಿಟ್
ದೃಷ್ಟಿ ವಿಶೇಷ ಚೇತನರಿಗೆ ಪರೀಕ್ಷೆ ಬರೆಯಲು ನೆರವಾಗುವ ಕಾರ್ಯ ಕಾಲೇಜಿನ ಕೆಲವು ತರುಣ ತರುಣಿಯರಿಗೆ ಅಚ್ಚುಮೆಚ್ಚು. `ಈ ವರ್ಷ ಒಟ್ಟು ಹನ್ನೆರಡು ಪರೀಕ್ಷೆ ಬರೆದಿದ್ದೇನೆ. ನನಗೆ ಸಿಕ್ಕ ಕ್ಯಾಂಡಿಡೆಟ್ ತುಂಬಾ ಬ್ರಿಲಿಯಂಟ್ ಆಗಿದ್ದ. ತುಂಬಾ ವಿಷಯ ತಿಳಿದುಕೊಂಡಿದ್ದ' ಎನ್ನುತ್ತಾರೆ ಕೃಪಾ ಕೆ. ಆಕೆ ಆರ್‍ವಿ ಕಾಲೇಜಿನ ವಿದ್ಯಾರ್ಥಿನಿ. `ಪಾಪಾ, ಅವರಿಗೂ ನಮ್ಮಂತೆ ಕಣ್ಣು ಕಾಣುತ್ತಿದ್ದರೆ ಚೆನ್ನಾಗಿತ್ತು. ಆದರೆ, ಅವರ ಗ್ರಹಿಕಾ ಶಕ್ತಿ ತುಂಬಾ ಉತ್ತಮವಾಗಿರುತ್ತದೆ. ಎಷ್ಟೆಷ್ಟೋ ಕಷ್ಟದ ಉತ್ತರಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಈ ರೀತಿ ಎಗ್ಸಾಂ ಬರೆಯುವುದು ಸಮಾಜ ಸೇವೆಯೂ ಹೌದು. ನಮಗೂ ವಿಶೇಷ ಅನುಭವ ನೀಡುತ್ತದೆ' ಎನ್ನುತ್ತಾರೆ ಅವರು.
ಆಕೆಯ ಗೆಳತಿ ಅನುಪಮ ವಿಎಸ್ ಅನುಭವ ಭಿನ್ನವಾಗಿತ್ತು. `ಆ ವಿದ್ಯಾರ್ಥಿ ಏನೂ ಓದಿಕೊಂಡು ಬಂದಿರಲಿಲ್ಲ. ನೀವೇ ನಿಮಗೆ ಗೊತ್ತಿದ್ದನ್ನೇ ಟಿಕ್ ಮಾಡಿ ಎನ್ನುತ್ತಿದ್ದ. ಈ ರೀತಿ ಮಾಡಿದರೆ ನಿನಗೆ ಏನು ಉಪಯೋಗ' ಎಂದು ಪ್ರಶ್ನಿಸಿದೆ. `ನಮಗೆ ಒಂದು ಡಿಗ್ರಿ ಸಿಕ್ಕರೆ ಸಾಕು ಮೇಡಂ. ಎಲ್ಲಾದರೂ ಕೆಲಸ ಸಿಗಬಹುದು ಎಂದಾಗ ಪಾಪ ಎನಿಸಿತು' ಎಂದರು.
`ದೃಷ್ಟಿ ಚೇತನರಿಗೆ ಪರೀಕ್ಷೆ ಬರೆಯಲು ಕಾಲೇಜು ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಸಬ್ಜೆಕ್ಟ್ ಬರೆಯಲು ಮಾತ್ರ ಬರುತ್ತಾರೆ. ಆದರೆ, ಇಂತಹ ಸಮಾಜ ಸೇವೆ ಮಾಡಲು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿವಹಿಸಬೇಕು. ಈ ಮೂಲಕ ಅಂಧರ ಬದುಕು ಬೆಳಗಲು ಸಹಾಯ ಹಸ್ತ ನೀಡಬೇಕು' ಎನ್ನುತ್ತಾರೆ ಆರ್. ಜೆ. ಪೈ ಮಜೈನ್. ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜೆಎಂಆರ್ ಸ್ಕೂಲ್ ಫಾರ್ ಬ್ಲೈಂಡ್ ಚಿಲ್ಡ್ರನ್ಸ್‍ನ ಮಾಜಿ ಅಧ್ಯಕ್ಷರು.

ಟೆಕಿಗಳಿಗೂ ಅಚ್ಚುಮೆಚ್ಚು
ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ. ಐಟಿಬಿಟಿಗಳಲ್ಲಿ ಕೆಲಸ ಮಾಡುವವರೂ ದೃಷ್ಟಿ ಚೇತನರಿಗೆ ಪರೀಕ್ಷೆ ಬರೆಯಲು ನೆರವಾಗುತ್ತಾರೆ. ಸಾಫ್ಟ್‍ವೇರ್ ಉದ್ಯೋಗಿಯಾಗಿರುವ 25 ವರ್ಷ ವಯಸ್ಸಿನ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ನಿವಾಸಿ ಕಾರ್ತಿಕ್ ಎಂ ಸಹ ಇಂತಹ ಅನೇಕ ಪರೀಕ್ಷೆಗಳನ್ನು ಬರೆದಿದ್ದಾರೆ. ಜಯನಗರ ನ್ಯಾಷನಲ್ ಕಾಲೇಜು, ಶೇಷಾದ್ರಿಪುರಂ ಕಾಲೇಜುಗಳಲ್ಲಿ ಸ್ಕ್ರೈಬ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಾಗವೇಣಿ ಎಂಬ ವಿದ್ಯಾರ್ಥಿನಿಗೆ ಬ್ಯಾಂಕ್ ಎಗ್ಸಾಂ ಬರೆಯಲೂ ಇವರು ಸಹಾಯಕ ಬರಹಗಾರರಾಗಿದ್ದರು. ಮಾತ್ರವಲ್ಲದೆ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಪಾಠ ಓದಿ ಹೇಳುವುದು, ರೆಕಾರ್ಡ್ ಕೇಳಿಸುವುದು, ಓದಿನ ಕುರಿತಾದ ಸಂದೇಹಗಳನ್ನು ನಿವಾರಿಸುವ ಕಾರ್ಯವನ್ನು ಮಾಡುತ್ತಾರೆ. ಇವರು ಕಾಲೇಜಿನಲ್ಲಿ ಓದುತ್ತಿದ್ದಾಗ ಈ ಕಾರ್ಯಕ್ಕೆ ಪ್ರತಿದಿನ ಒಂದಿಷ್ಟು ಸಮಯ ಮೀಸಲಿಡುತ್ತಿದ್ದರಂತೆ. ಈಗ ಉದ್ಯೋಗ ಸಿಕ್ಕ ನಂತರ ವಾರಾಂತ್ಯಗಳಲ್ಲಿ ಈ ಸೋಷಿಯಲ್ ವರ್ಕ್ ಮಾಡುತ್ತಾರೆ. ಇವರು ಆರಂಭದಲ್ಲಿ ಸಮರ್ಥನಂ ಎಂಬ ಎನ್‍ಜಿಒ ಜೊತೆ ಕಾರ್ಯನಿರ್ವಹಿಸುತ್ತಿದ್ದರು. ನಂತರ ಇಂತಹ ವಿಶೇಷ ಚೇತನರಿಗಾಗಿಯೇ ಸ್ಟೆಪ್ಪಿಂಗ್ ಸ್ಟೋನ್ ಎಂಬ ಕಂಪ್ಯೂಟರ್ ತರಬೇತಿ ಕೇಂದ್ರ ತೆರೆದಿದ್ದಾರೆ.
ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‍ನಲ್ಲಿ ಕೆಲಸ ಮಾಡುವ ವಾಣಿ ಶೆಟ್ಟಿ ಹಲವು ಬಾರಿ ಸ್ಕ್ರೈಬ್ ಆಗಿ ಸೇವೆ ಸಲ್ಲಿಸಿದ್ದಾರೆ. ಸೋಷಿಯಲ್ ನೆಟ್‍ವರ್ಕ್ ಸೈಟ್‍ಗಳ ಮೂಲವೂ ಇಂತಹ ವಾಲೆಂಟರ್ಸ್‍ಗಳನ್ನು ಕಂಡುಹಿಡಿಯಬಹುದು ಎನ್ನುತ್ತಾರೆ ಇವರು. ಫೇಸ್‍ಬುಕ್‍ನಲ್ಲಿ ಬ್ಲೈಂಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಸಕ್ತರು ಬೇಕಿದ್ದಾರೆ ಎಂದು ಸ್ಟೇಟಸ್ ಹಾಕಿದ್ದಾರಂತೆ. ಬಹಳಷ್ಟು ಜನರು ಪ್ರತಿಕ್ರಿಯೆ ನೀಡಿದ್ದರು ಎನ್ನುತ್ತಾರೆ.

ನೀವೂ ವಾಲೆಂಟರ್ ಆಗಿ
ನಿಮ್ಮ ಊರಿನಲ್ಲಿರುವ, ಕಾಲೇಜಿನಲ್ಲಿರುವ ದೃಷ್ಟಿ ವಿಶೇಷಚೇತನರನ್ನು ನೇರವಾಗಿ ಸಂಪರ್ಕಿಸಿ ಅವರಿಗೆ ಓದಲು ಅಥವಾ ಪರೀಕ್ಷೆ ಬರೆಯಲು ನೆರವಾಗಬಹುದು. ಇಲ್ಲವಾದರೆ ಎನ್‍ಜಿಒಗಳ ನೆರವು ಪಡೆಯಬಹುದು. ಸಮರ್ಥನಂ ಎಂಬ ಎನ್‍ಜಿಒ ರಾಜ್ಯದಲ್ಲಿ ಬೆಂಗಳೂರು, ಗದಗ, ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ಮಿತ್ರಜ್ಯೋತಿ ಎಂಬ ಎನ್‍ಜಿಒ ಕಳೆದ 25 ವರ್ಷಗಳಿಂದ ಇಂತಹ ಸೇವೆ ನೀಡುತ್ತಿದೆ. ನೀವು ನಿಮ್ಮ ಊರಿನಲ್ಲಿರುವ ಇಂತಹ ಸಂಸ್ಥೆಗಳನ್ನು ಹುಡುಕಿ ವಾಲೆಂಟರ್ ಆಗಬಹುದು.
ದೃಷ್ಟಿ ವಿಶೇಷಚೇತನರ ಶಿಕ್ಷಣಕ್ಕೆ ನೀವು ಹಲವು ಬಗೆಯಲ್ಲಿ ನೆರವು ನೀಡಬಹುದು. ಉದಾಹರಣೆಗೆ ನೀವು ಪಾಠ ಓದಬೇಕು. ವಿಷುಯಲ್ ಚಾಲೆಂಜ್ಡ್ ವಿದ್ಯಾರ್ಥಿಗಳು ಅದನ್ನು ಕೇಳಿಸಿಕೊಳ್ಳುತ್ತಾರೆ. ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನೀವು ಸ್ಕ್ರೈಬ್ ಸರ್ವೀಸ್ ನೀಡಬಹುದು. ಇಂತಹ ವಿದ್ಯಾರ್ಥಿಗಳಿಗೆ ಟ್ಯೂಷನ್ ಸೇವೆಯನ್ನೂ ನೀಡಬಹುದು. ಕೆಲವೊಂದು ಎನ್‍ಜಿಒಗಳು ನಡೆಸುವ ಇಂತಹ ಸೇವೆಯಲ್ಲಿ ಆನ್‍ಲೈನ್ ಮೂಲಕ ಟ್ಯೂಷನ್ ನಡೆಸುವ ವ್ಯವಸ್ಥೆಯೂ ಇರುತ್ತದೆ. ಅಂದರೆ, ಸ್ಕೈಪ್ ಮೂಲಕ ವಾಯ್ಸ್ ಚಾಟ್ ಮಾಡುತ್ತ ಈ ಮಕ್ಕಳಿಗೆ ಪಾಠ ಮಾಡಬಹುದು. ಇಂಗ್ಲಿಷ್ ಭಾಷೆ, ಸಾಫ್ಟ್ ಸ್ಕಿಲ್, ಪರ್ಸನಲಿಟಿ ಡೆವಲಪ್‍ಮೆಂಟ್ ಬಗ್ಗೆಯೂ ಹೇಳಿಕೊಡಬಹುದು. ಇಂತಹ ಕೆಲವು ಮಕ್ಕಳು ಅತೀವ ಬೇಸರದಲ್ಲಿರುತ್ತಾರೆ. ಅವರಿಗೆ ಕೌನ್ಸಿಲಿಂಗ್ ನಡೆಸಿ ಬದುಕಿನಲ್ಲಿ ಹುಮ್ಮಸ್ಸು ತುಂಬಬಹುದು. ಕೇವಲ ಶಿಕ್ಷಣ ಮಾತ್ರವಲ್ಲದೆ ಸಂಗೀತ, ಡ್ಯಾನ್ಸ್, ಆಟ ಮತ್ತು ಇತರ ಚಟುವಟಿಕೆಗಳನ್ನು ಇವರಿಗೆ ಹೇಳಿಕೊಡಬಹುದು. ಒಟ್ಟಾರೆ ವಿಶೇಷ ಚೇತನರಿಗೆ ಕಣ್ಣಾಗುವ ಹೃದಯ ನಿಮ್ಮಲ್ಲಿದ್ದರೆ ಸಾಕು.
 




ಅನುಕಂಪ ಬೇಡ
ದೃಷ್ಟಿ ವಿಶೇಷ ಚೇತನರಿಗೆ ಬದಲಿ ಬರಹಗಾರರಾಗಿ ಅನುಕಂಪದಿಂದ ಕಾರ್ಯನಿರ್ವಹಿಸಬಾರದು. ಅವರು ನಮ್ಮಂತೆಯೇ ಎಂಬ ಫ್ರೆಂಡ್ಲಿ ಭಾವನೆಯಿಂದ ಈ ಕಾರ್ಯನಿರ್ವಹಿಸಬೇಕು. ಇದೊಂದು ಸೋಷಿಯಲ್ ರೆಸ್ಪಾನ್ಸಿಬಿಲಿಟಿ.
ಕಾರ್ತಿಕ್ ಎಂ | ಟೆಕಿ, ಬೆಂಗಳೂರು




ಕನ್ನಡಕ್ಕೆ ಇ-ಸ್ಪೀಕ್ ಕೊಟ್ಟ ಶ್ರೀಧರ್
ದೃಷ್ಟಿ ವಿಶೇಷ ಚೇತನರಿಗೆ ದೃಷ್ಟಿ ವಿಶೇಷ ಚೇತನ ಯುವಕ ಶ್ರೀಧರ್ ಟಿಎಸ್ ನೀಡಿದ ಕೊಡುಗೆ ಇಲ್ಲಿ ಸ್ಮರಿಸಲೇಬೇಕು. ಶ್ರೀಧರ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವರು. ಸ್ಕ್ರೀನ್ ರೀಡರ್ ತಂತ್ರಾಂಶವನ್ನು ಕನ್ನಡ ಯೂನಿಕೋಡ್ ಅಕ್ಷರಗಳನ್ನು ಓದಲು ಸಾಧ್ಯವಾಗುವಂತಹ ಇ-ಸ್ಪೀಕ್ ತಂತ್ರಾಂಶವನ್ನು ಶ್ರೀಧರ್ ಟಿಎಸ್ ನೆರವಿನಿಂದ ಅಭಿವೃದ್ಧಿಪಡಿಸಲಾಗಿದೆ. ಇದು ಕಂಪ್ಯೂಟರ್ ಪರದೆಯಲ್ಲಿ ಮೂಡುವ ಅಕ್ಷರಗಳನ್ನು `ಟೆಕ್ಸ್ಟ್ ಟು ಸ್ಪೀಚ್' ಮೂಲಕ ಧ್ವನಿ ರೂಪದಲ್ಲಿ ಕೇಳಿಸುತ್ತದೆ. ಇದರಿಂದ ಕಂಪ್ಯೂಟರ್‍ನಲ್ಲಿರುವ ವಿಷಯಗಳನ್ನು ಪಡೆದುಕೊಳ್ಳಲು ಮತ್ತು ಐಟಿಬಿಟಿಯಂತಹ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಲು ದೃಷ್ಟಿ ವಿಶೇಷ ಚೇತನರಿಗೆ ಸಾಧ್ಯವಾಗಿದೆ. ``ನನಗೆ ಶಿಕ್ಷಣ ಪಡೆಯಲು ಈ ಇ-ಸ್ಪೀಕ್ ಸಾಕಷ್ಟು ನೆರವಾಗಿದೆ. ಜೊತೆಗೆ, ನನ್ನ ಕುಟುಂಬ, ಕಸಿನ್ಸ್, ಕಾಲೇಜ್ ಬ್ಯಾಚ್‍ಮೇಟ್ಸ್, ಶಿಕ್ಷಕರ ಸಹಾಯ ಸದಾ ಸ್ಮರಣೀಯ. ದೃಷ್ಟಿ ವಿಶೇಷ ಚೇತನರಿಗೆ ಪಾಠ ಓದಲು, ಪರೀಕ್ಷೆ ಬರೆಯಲು ನೆರವಾಗಲೂ ತಾವೆಲ್ಲರೂ ಸ್ನೇಹಿತರಾಗಿ ಮುಂದೆ ಬರಬೇಕು' ಎಂದು ಮನವಿ ಮಾಡಿದ್ದಾರೆ ಶ್ರೀಧರ್ ಟಿಎಸ್.






facebook page- write for blind 


www.samarthanam.org