Monday 30 January 2017

ವರ್ಡ್ ಪ್ರೆಸ್: ಸ್ವಂತ ವೆಬ್ ಸೈಟ್ ನೀವೇ ನಿರ್ಮಿಸಿಕೊಳ್ಳಿ

ವರ್ಡ್ ಪ್ರೆಸ್: ಸ್ವಂತ ವೆಬ್ ಸೈಟ್ ನೀವೇ ನಿರ್ಮಿಸಿಕೊಳ್ಳಿ

ನನಗೊಂದು ಕನಸಿತ್ತು. ನನ್ನ ವೈಯಕ್ತಿಕ ಹೆಸರಿನಲ್ಲೊಂದು ವೆಬ್ ಸೈಟ್ ಇರಬೇಕು. ಕೆಲವು ವರ್ಷಗಳ ಹಿಂದೆ ಪ್ರವೀಣ್ ಚಂದ್ರ ಡಾಟ್ ಕಾಮ್ ಎಂದು ಡೊಮೈನ್ ಖರೀದಿಸಿದ್ದೆ. ವೆಬ್ ಬಿಲ್ಡರ್ ಅನ್ನೂ ಖರೀದಿಸಿದ್ದೆ. ತಾತ್ಕಾಲಿಕ ಅವಧಿಯ ಹೋಸ್ಟಿಂಗ್ ಅನ್ನೂ ಖರೀದಿಸಿದ್ದೆ. ಅಲ್ಲಿ ಬ್ಲಾಗಿಂಗ್ ರೀತಿಯ ವೆಬ್ ಸೈಟ್ ರೂಪಿಸಲು ಪ್ರಯತ್ನಿಸದರೆ ನನ್ನಿಂದ ಸಾಧ್ಯವಾಗಲೇ ಇಲ್ಲ. ಸರಕಾರಿ ವೆಬ್ ಸೈಟ್ ಗಳಂತೆ ಮುಖ ಪುಟ ರಚಿಸಿ ಲಿಂಕ್ ನೀಡುವುದು ಮಾತ್ರ ನನ್ನಿಂದ ಸಾಧ್ಯವಾಯಿತು.



ಒಂದೆರಡು ತಿಂಗಳು ಕಷ್ಟಪಟ್ಟು ಆ ಆಸೆಯನ್ನು ಅಲ್ಲಿಗೇ ಕೈ ಬಿಟ್ಟೆ. ಖರ್ಚಾದ ಕೆಲವು ಸಾವಿರ ನನ್ನನ್ನು ಅಣಕಿಸುತ್ತಿತ್ತು.

ಆದರೂ ವರ್ಷಕ್ಕೆ ಒಂದೆರಡು ಸಾವಿರ ವಿನಿಯೋಗಿಸಿ ವೆಬ್ ನಿರ್ಮಿಸಬಹುದೆಂಬ ಇತ್ತೀಚಿನ ಸಾಧ್ಯತೆ ನನ್ನನ್ನು ಸುಮ್ಮನಿರಲು ಬಿಡಲಿಲ್ಲ. ಏನಾದರೂ ಆಗಲಿ, ಸ್ವಂತ ವೆಬ್ ಸೈಟ್ ನಿರ್ಮಿಸಬೇಕೆಂದು ಎಚ್ಟಿಎಂಎಲ್, ಸಿಎಸ್ಎಸ್ ಇತ್ಯಾದಿ ಪುಸ್ತಕಗಳನ್ನು ಓದಿದೆ. ಆನ್ ಲೈನ್ ನಲ್ಲಿ ಪಿಡಿಎಫ್ಗಳನ್ನು ಡೌನ್ ಲೋಡ್ ಮಾಡಿಕೊಂಡೆ. ಜಿಯೊ ಬಂದ ಮೇಲೆ ವಿಡಿಯೋ ಟ್ಯಟೋರಿಯಲ್ ಗಳಿಗೂ ಸೇರಿದೆ. ಕೋಡಿಂಗ್ ಆರಂಭ ಅಂತ್ಯ ನೀಡುವುದನ್ನು ಕಂಡುಕೊಂಡೆ. ಆದರೂ, ಕೆಲಸದ ಒತ್ತಡಗಳಿಂದ ಪೂರ್ಣವಾಗಿ ಕಲಿಯಲು ಸಾಧ್ಯವಾಗಲಿಲ್ಲ. ಕೋಡಿಂಗ್ ಬರೆಯುವಾಗ ತಾಳ್ಮೆಯೂ ಕೈಕೊಡುತ್ತಿತ್ತು.

ಆದರೂ, ನನ್ನಲ್ಲೊಂದು ಸ್ವಂತ ವೆಬ್ ಸೈಟ್ ಇರಬೇಕಿತ್ತು ಹೀಗೊಂದು ಕನಸು ನನಗಿತ್ತು. ಆದರೆ, ವೆಬ್ ಸೈಟ್ ನಿರ್ಮಿಸುವವರಿಗೆ ಹತ್ತು ಸಾವಿರವಾದರೂ ಕೊಡುವ ಆಸಕ್ತಿ ನನ್ನಲ್ಲಿರಲಿಲ್ಲ. ಆ ವಿಷಯದಲ್ಲಿ ನನ್ನಲೊಬ್ಬ ಕಂಜೂಸ್ ಇದ್ದ. :-)

ರೆಸ್ಪಾನ್ಸಿವ್ ವೆಬ್ ಸೈಟ್ ನಿರ್ಮಿಸುವ ವಿಷಯದಲ್ಲಿ ಈಗ ನೆಟ್ ಜಗತ್ತಿನಲ್ಲಿ ಕ್ರಾಂತಿಯೇ ನಡೆಯುತ್ತಿದೆ ಎಂದುಕೊಂಡಿದ್ದೇನೆ. ಈಗ ಕೋಡಿಂಗ್ ಜ್ಞಾನ ಇಲ್ಲದವರೂ ತಮ್ಮದೊಂದು ಸ್ವಂತ ವೆಬ್ ತಾಣ ರೂಪಿಸಿಕೊಳ್ಳಬಹುದಾಗಿದೆ. ಅದರ ಪ್ರತಿಫಲವೇ http://praveenputtur.com

ವರ್ಡ್ ಪ್ರೆಸ್ ಮೂಲಕ ವೆಬ್ ಸೈಟ್ ರೂಪಿಸುವವರಿಗೆ ಸಾಕಷ್ಟು ಥೀಮ್ಸ್ ಮತ್ತು ಪ್ಲಗಿನ್ ಗಳು ಉಚಿತವಾಗಿ ದೊರಕುತ್ತವೆ.

ವರ್ಡ್ ಪ್ರೆಸ್ ನಲ್ಲಿ ಬ್ಲಾಗ್ ಹೊಂದಿದ್ದರೆ ಸ್ವಂತ ವೆಬ್ ಸೈಟ್ ರೂಪಿಸಿಕೊಳ್ಳುವುದು ಇನ್ನೂ ಸುಲಭ.

ನಿಮ್ಮ ಈಗಿರುವ ಬ್ಲಾಗ್ ಅನ್ನೇ ಅಪ್ ಗ್ರೇಡ್ ಮಾಡಿದರಾಯ್ತು. ಇದಕ್ಕೆ ವರ್ಡ್ ಪ್ರೆಸ್ ಕೆಲವು ಡಾಲರ್ ಕೇಳುತ್ತದೆ. ಇದನ್ನು ಖರೀದಿಸಲು ನಿಮ್ಮಲ್ಲಿ ಅಂತಾರಾಷ್ಟ್ರೀಯವಾಗಿ ವರ್ಕ್ ಆಗುವ ಡೆಬಿಟ್ ಕಾರ್ಡ್ ಇರಬೇಕು. ನನ್ನ ಕಾರ್ಡ್ ದೇಶಕ್ಕೆ ಸೀಮಿತವಾಗಿರುವ ಕಾರಣ ನನ್ನ ಆ ಪ್ರಯತ್ನ ವಿಫಲವಾಗಿತ್ತು. ಆದರೆ, ಈ ರೀತಿ ಅಪ್ ಗ್ರೇಡ್ ಮಾಡಿ ಬೇಸಿಕ್ ಪ್ಲಾನ್ ಖರೀದಿಸಿದರೆ ಸೌಲಭ್ಯಗಳು ಸೀಮಿತವಾಗಿರುತ್ತವೆ. ನಿಮಗೆ ಬೇಕಾದಂತೆ ವಿನ್ಯಾಸ ಮಾಡಿಕೊಳ್ಳುವುದು ಕಷ್ಟ. ಹೈ ಎಂಡ್ ಪ್ಲಾನ್ ಗೆ ಹೆಚ್ಚು ಡಾಲರ್ ಪಾವತಿಸಬೇಕು. ಹೀಗಾಗಿ ಈ ರೀತಿ ಅಪ್ ಗ್ರೇಡ್ ಮಾಡುವುದಕ್ಕೆ ನನ್ನ ಬೆಂಬಲವಿಲ್ಲ. ಸೀಮಿತ ಸೌಲಭ್ಯ ಸಾಕೆನಿಸಿದರೆ ಅಪ್ ಗ್ರೇಡ್ ಮಾಡಿಕೊಳ್ಳಿ J

ಸ್ವಂತವಾಗಿ ರೂಪಿಸಿ: ನಾನು ಮಾಡಿದಿಷ್ಟು. ಮೊದಲು ಡಿಜಿಕ್ಸ್ ಆನ್ ಲೈನ್ ಎಂಬ ತಾಣದಲ್ಲಿ ಡೊಮೈನ್ ಖರೀದಿಸಿದೆ. ಒಂದು ವರ್ಷದ ಹೋಸ್ಟಿಂಗ್ ಖರೀದಿಸಿದೆ. ಇವೆರಡಕ್ಕೆ ನನಗೆ ಖರ್ಚಾಗಿದ್ದು ಸುಮಾರು ಎರಡು ಮುಕ್ಕಾಲು ಸಾವಿರ. ಒನ್ ಕ್ಲಿಕ್ ವರ್ಡ್ ಪ್ರೆಸ್ ಇನ್ ಸ್ಟಾಲ್ ಸೌಲಭ್ಯ ಇರುವ ತಾಣದಿಂದಲೇ ಹೋಸ್ಟಿಂಗ್ ಖರೀದಿಸಿ. ಡಿಜಿಕ್ಸ್ ಆನ್ ಲೈನ್ ನಲ್ಲಿ ಖರೀದಿಸಿದ್ದರಿಂದ ನನಗೆ  ಒಂದು ವಿಶೇಷ ಲಾಭವಾಯಿತು.

ಈ ತಾಣದ ಹನೀಫ್ ಪುತ್ತೂರು ಎಂಬ ಎಂಬವರ ಪರಿಚಯ. ಇವರು ಅಬುದಾಬಿಯ ಖಲೀಫಾ ವಿವಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಪ್ರೋಗ್ರಾಮರ್ ಅನಾಲಿಸ್ಟ್. ವೆಬ್ ಜಗತ್ತಿಗೆ ತನ್ನದೇ ಆದ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರಿಂದ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡು ವೆಬ್ ಸೈಟ್ ನಿರ್ಮಿಸಿದೆ. ವೆಬ್ ಸೈಟ್ ನಿರ್ಮಿಸುವವರಿಗೆ ಇಂಟರ್ನೆಟ್ ಇಲ್ಲದೆಯೇ ವರ್ಡ್ ಪ್ರೆಸ್ ಕಲಿಸುವ ಟೂಲ್ ಒಂದನ್ನು ಇವರು ನಿರ್ಮಿಸಿದ್ದಾರೆ. ಇದರ ಬಗ್ಗೆ ಮುಂದೆ ಹೇಳುತ್ತೇನೆ.

ಹೋಸ್ಟಿಂಗ್, ಡೊಮೈನ್ ಖರೀದಿಸಿ ಒನ್ ಕ್ಲಿಕ್ ವರ್ಡ್ ಪ್ರೆಸ್ ಇನ್ ಸ್ಟಾಲ್ ಮಾಡಿದ ಬಳಿಕ ನಿಮಗೆ ವರ್ಡ್ ಪ್ರೆಸ್ ಬ್ಲಾಗ್ ತರಹದ್ದೇ ಲಾಗಿನ್ ವ್ಯವಸ್ಥೆ ದೊರಕುತ್ತದೆ. ಅಲ್ಲಿ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಕೊಟ್ಟು ಲಾಗಿನ್ ಆದರೆ ಆಯ್ತು.

ಅಲ್ಲಿ ನಿಮಗೆ ಇಷ್ಟವಾದ ಥೀಮ್ ಮತ್ತು ಪ್ಲಗಿನ್ ಜೋಡಿಸಿಕೊಂಡು ಸ್ವಂತ ವೆಬ್ ಸೈಟ್ ರಚಿಸಿಕೊಳ್ಳಬಹುದು.

  • ಆದಷ್ಟು ಹೆಚ್ಚು ಸ್ಟಾರ್ ರೇಟಿಂಗ್ ಇರುವ ಪ್ಲಗಿನ್ ಮತ್ತು ಥೀಮ್ ಪಡೆದುಕೊಳ್ಳಿ.

  • ಅವಶ್ಯಕತೆ ಇರುವಷ್ಟು ಪ್ಲಗಿನ್ ಅಥವಾ ಥೀಮ್ ಡೌನ್ ಲೋಡ್ ಮಾಡಿಕೊಳ್ಳಿ.

  • ಅನಾವಶ್ಯಕ ಪ್ಲಗಿನ್ ಅಥವಾ ಥೀಮ್ ಗಳನ್ನು ಡಿಲೀಟ್ ಮಾಡಿ.

  • ಇಲ್ಲವಾದರೆ ನಿಮ್ಮವೆಬ್ ಸೈಟ್ ಸ್ಪೀಡ್ ಕಡಿಮೆಯಾಗುತ್ತದೆ.

ವರ್ಡ್ ಪ್ರೆಸ್ ನಲ್ಲಿ ವೆಬ್ ಸೈಟ್ ರಚನೆ

  1. ವರ್ಡ್ ಪ್ರೆಸ್ ಗೆ ಲಾಗಿನ್ ಆಗಿ

  2. ಡ್ಯಾಷ್ ಬೋರ್ಡ್ ನಲ್ಲಿರುವ ಫೀಚರ್ ಗಳನ್ನೆಲ್ಲ ಅವಲೋಕಿಸಿ

  3. ಥೀಮ್ ವಿಭಾಗಕ್ಕೆ ಹೋಗಿ. ನಿಮಗೆ ಇಷ್ಟವಾದ ಒಂದು ಥೀಮ್ ಆಯ್ಕೆ ಮಾಡಿಕೊಂಡು ಇನ್ ಸ್ಟಾಲ್ ಮಾಡಿ ಆ್ಯಕ್ಟಿವೇಟ್ ಮಾಡಿ.

  4. ಪೇಜಸ್ ವಿಭಾಗಕ್ಕೆ ಹೋಗಿ ಪುಟಗಳನ್ನು ರಚಿಸಿ. ಅಂದರೆ, ಮುಖಪುಟ, ಸಂಪರ್ಕಿಸಿ, ಬ್ಲಾಗ್ ಇತ್ಯಾದಿ.

  5. ಮೆನು ವಿಭಾಗಕ್ಕೆ ಹೋಗಿ ಮೆನುಗಳನ್ನು ರಚಿಸಿ. ಪುಟಗಳನ್ನು ಮೆನುಗಳಿಗೆ ಜೋಡಿಸಿ.

  6. ಆ್ಯಡ್ ಪೋಸ್ಟ್ ವಿಭಾಗಕ್ಕೆ ಹೋಗಿ ಹೊಸ ಬರಹಗಳನ್ನು ಪೋಸ್ಟ್ ಮಾಡಬಹುದು.

  7. ಮೊದಲಿಗೆ ನಿಮ್ಮ ವೆಬ್ ಸೈಟಿಗೆ ಹೆಸರು ಮತ್ತು ಟ್ಯಾಗ್ ಲೈನ್ ನೀಡಿ. ಇದಕ್ಕಾಗಿ ಜನರಲ್ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ.

  8. ಹೀಗೆ ಅಲ್ಲಿರುವ ವಿವಿಧ ವಿಭಾಗಗಳಲ್ಲಿ ನಿಮಗೆ ಬೇಕಾದಂತೆ ಮಾರ್ಪಾಡು ಮಾಡಿ. ಗೊತ್ತಾಗದೆ ಇದ್ದರೆ ನನ್ನಲ್ಲಿ ಕೇಳಿ J

  9. ಬ್ಲಾಗ್ ಮಾಡಬಲ್ಲವರಿಗೆ ಇಲ್ಲಿ ಮಾಡಬೇಕಾದ ಪ್ರತಿಯೊಂದನ್ನು ಹೇಳಿಕೊಡಬೇಕಾದ ಅವಶ್ಯಕತೆ ಇಲ್ಲ. ಡ್ಯಾಷ್ ಬೋರ್ಡ್ ಪ್ರವೇಶಿಸಿ ಸೂಕ್ಷ್ಮವಾಗಿ ಅವಲೋಕಿಸಿ ಎಲ್ಲವನ್ನೂ ಕಲಿತುಕೊಳ್ಳಬಹುದು.

ಟಿಪ್ಪಣಿ

ಆರಂಭಿಕರಿಗೆ ಶೇರಿಂಗ್ ಹೋಸ್ಟಿಂಗ್ ಉತ್ತಮ. ಒಂದು ಸರ್ವರ್ ನಲ್ಲಿ ಹಲವು ವೆಬ್ ಸೈಟ್ ಗಳನ್ನು ಪಾರ್ಕ್ ಮಾಡಲಾಗಿರುತ್ತದೆ. ಇದರ ವೇಗ ಕೊಂಚ ಕಡಿಮೆ ಇರುತ್ತದೆ.

ಈ ಎಚ್ಚರಿಕೆಗಳನ್ನು ಗಮನಿಸಿ

  1. ಕೆಲವೊಂದು ಎರರ್ ಗಳು ಉಂಟಾದರೆ ಅದನ್ನು ಸರಿಪಡಿಸಲು ವೆಬ್ ಸೈಟ್ ತಂತ್ರಜ್ಞರೇ ಬೇಕು. ಇದಕ್ಕಾಗಿ ಪ್ರಯೋಗಗಳನ್ನು ಮಾಡುವಾಗ ಎಚ್ಚರವಿರಲಿ. ಹಲವು ಬಾರಿ ವೆಬ್ ಸೈಟ್ ಕ್ರಾಷ್ ಆಗಬಹುದು. ಇದನ್ನು ಸರಿಪಡಿಸಲು ಪರಿಣತರೇ ಬೇಕು.

  2. ಒಂದು ಲಾಗಿನ್ ಆದಾಗ ಒಂದು ಟ್ಯಾಬ್ ಮೂಲಕ ಮಾತ್ರ ಬಳಕೆ ಮಾಡುವುದು ಉತ್ತಮ. ಹಲವು ಟ್ಯಾಬ್ ಗಳಲ್ಲಿ ವೆಬ್ ಸೈಟ್ ಡ್ಯಾಷ್ ಬೋರ್ಡ್ ತೆರೆದಿಡುವುದು ಉತ್ತಮವಲ್ಲ.

ಡೊಮೈನ್ ಅಥವಾ ಹೋಸ್ಟಿಂಗ್ ಖರೀದಿಸದೆ ಲೋಕಲ್ ಹೋಸ್ಟ್ ನಲ್ಲಿ ವೆಬ್ ಸೈಟ್ ನಿರ್ಮಾಣ ಕಲಿಯುವುದು ಹೇಗೆ?
ಈ ರೀತಿ ಖರೀದಿಸಿ ಆಮೇಲೆ ಕಲಿಯುವುದಕ್ಕಿಂತ ಮೊದಲೇ ಕಲಿತು ಆಮೇಲೆ ಹೋಸ್ಟಿಂಗ್ ಡೊಮೈನ್ ಖರೀದಿಸುವುದು ಉತ್ತಮ.

ಸ್ನೇಹಿತರಾದ ಹನೀಫ್ ಪುತ್ತೂರು ಅವರು ಗಿತ್ ಹಬ್ ತಾಣದಲ್ಲಿ ಇದಕ್ಕೊಂದು ಉಚಿತ ಟೂಲ್ ನೀಡಿದ್ದಾರೆ. ಅದರ ಹೆಸರು ಪೋರ್ಟೆಬಲ್ ವರ್ಡ್ ಪ್ರೆಸ್. ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಇದನ್ನು ನೀವು ಪೆನ್ ಡ್ರೈವ್ ನಲ್ಲಿಯೂ ಇಟ್ಟುಕೊಳ್ಳಬಹುದು. ಇಂಟರ್ ನೆಟ್ ಇಲ್ಲದೆ ಬಳಕೆ ಮಾಡಬಹುದು. ಇದರಲ್ಲಿ ನೀವು ಸಾಕಷ್ಟು ಪ್ರಯೋಗ ಮಾಡಿ, ಸುಂದರವಾದ ವೆಬ್ ಸೈಟ್ ನಿರ್ಮಿಸಿದ ಬಳಿಕ ಹೋಸ್ಟಿಂಗ್ ಖರೀದಿಸಬಹುದು. ಹೋಸ್ಟಿಂಗ್ ಡೊಮೈನ್ ಖರೀದಿಸಿದ ಬಳಿಕ ನಿಮ್ಮ ವರ್ಡ್ ಪ್ರೆಸ್ ವೆಬ್ ಸೈಟ್ ಗೆ ಇದನ್ನು ಅಪ್ ಲೋಡ್ ಮಾಡಬಹುದು. ಹೀಗೆ ಮಾಡುವುದರಿಂದ  ಹೋಸ್ಟಿಂಗ್ ಸರ್ವರ್ನಲ್ಲಿ ಪ್ರಯೋಗ ಮಾಡುತ್ತ ಎರರ್, ಕ್ರ್ಯಾಷ್ ಇತ್ಯಾದಿ ತೊಂದರೆಗೆ ಒಳಗಾಗುವ ಅಪಾಯ ಕಡಿಮೆ. ಪೋರ್ಟೆಬಲ್ ವರ್ಡ್ ಪ್ರೆಸ್ ಅನ್ನು ಉಚಿತವಾಗಿ ಬಳಸಬಹುದು. ಅದನ್ನು ಈ ಲಿಂಕ್ ನಿಂದ  ಡೌನ್ ಲೋಡ್ ಮಾಡಿಕೊಳ್ಳಿ. ಈ ಲಿಂಕ್ ನಲ್ಲಿಯೇ ಅದನ್ನು ಬಳಕೆ ಮಾಡಬಹುದಾದ ಮಾರ್ಗದರ್ಶನಗಳು ಇವೆ.

ನಿಮಗೆ ಕೋಡಿಂಗ್ ಬಗ್ಗೆ ಉಚಿತವಾಗಿ ಕಲಿಯಬೇಕೆಂದದಿದ್ದರೆ ಆನ್ ಲೈನ್ ನಲ್ಲಿ ಹಲವು ತಾಣಗಳಿವೆ. ಅವುಗಳಲ್ಲಿ ಡಬ್ಲ್ಯು3 ಸ್ಕೂಲ್ ನನ್ನ ಫೇವರಿಟ್. ಅದರ ಲಿಂಕ್ ಇಲ್ಲಿದೆ.

ನಿಮ್ಮ ಸಲಹೆ ಸೂಚನೆ ಅಥವಾ ಪ್ರಶ್ನೆಗಳಿಗೆ ಸ್ವಾಗತ. ನನ್ನ ವೆಬ್ ಸೈಟ್ ಪ್ರಾಯೋಗಿಕ ಹಂತದಲ್ಲಿ ಇರುವುದರಿಂದ ಕೊಂಚ ಸ್ಲೋ ಅನಿಸಬಹುದು. ಸಹಿಸಿಕೊಳ್ಳಿ.

ನಿಮ್ಮ ವೆಬ್ ಸೈಟ್ ಸ್ಪೀಡ್ ಅನ್ನು ಗೂಗಲ್ ಡೆವಲಪರ್ ಇನ್ ಸೈಟ್ ನಲ್ಲಿ ಪರೀಕ್ಷಿಸಿಕೊಳ್ಳಿ.

ಪ್ರವೀಣ್ ಪುತ್ತೂರು.ಕಾಂ ಮುಖಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ.

Monday 23 January 2017

ಉಚಿತ ಇ-ಲರ್ನಿಂಗ್ ಕೋರ್ಸ್‍ಗಳಿವು

ಉಚಿತ ಇ-ಲರ್ನಿಂಗ್ ಕೋರ್ಸ್‍ಗಳಿವು

ಕಲಿಯುವ ಆಸಕ್ತಿ ಇರುವವರಿಗೆ ಆನ್‍ಲೈನ್‍ನಲ್ಲಿಂದು ಹಲವು ಉಚಿತ ಕೋರ್ಸ್‍ಗಳು ಲಭ್ಯ ಇವೆ. ಈ ಕೋರ್ಸ್‍ಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಈಗಾಗಲೇ ಉದ್ಯೋಗದಲ್ಲಿರುವವರಿಗೆ ತಮ್ಮ ಕೌಶಲವನ್ನು ಅಪ್‍ಗ್ರೇಡ್ ಮಾಡಿಕೊಳ್ಳಲು ಸಹಾಯಕ. ಪ್ರೋಗ್ರಾಮಿಂಗ್ ಮತ್ತು ಡಿಸೈನ್‍ಗೆ ಸಂಬಂಧಪಟ್ಟ ಹಲವು ಉಚಿತ ಕೋರ್ಸ್‍ಗಳ ವಿವರ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಕಂಪ್ಯೂಟರ್ ಪ್ರೋಗ್ರಾಮಿಂಗ್ ಕುರಿತು ಈಗಾಗಲೇ ನೀವು ಕಾಲೇಜಿನಲ್ಲಿ ಕಲಿತಿರಬಹುದು ಅಥವಾ ಕಲಿಯುತ್ತಿರಬಹುದು. ಎಂದೋ ಕಾಲೇಜಿನಲ್ಲಿ ಈ ವಿಷಯದ ಕುರಿತು ಕಲಿತಿರಬಹುದು. ಪ್ರೋಗ್ರಾಮಿಂಗ್ ಮತ್ತು ಡಿಸೈನ್ ಬಗ್ಗೆ ನಿಮಗೆ ಏನೂ ತಿಳಿಯದೆ ಇರಬಹುದು. ಒಂದಿಷ್ಟು ಸಮಯ ಬಿಡುವು ಮಾಡಿಕೊಂಡರೆ ಈ ಕುರಿತಾದ ಕೋರ್ಸ್‍ಗಳನ್ನು ಉಚಿತವಾಗಿ ಆನ್‍ಲೈನ್‍ನಲ್ಲೇ ಕಲಿಯಬಹುದಾಗಿದೆ.

ಪ್ರೋಗ್ರಾಮಿಂಗ್ ಕೋರ್ಸ್‍ಗಳು
ಕಂಪ್ಯೂಟರ್ ಸೈನ್ಸ್ ಪರಿಚಯ: ಹಾರ್ವಡ್ ವಿವಿಯು ಕಂಪ್ಯೂಟರ್ ಸೈನ್ಸ್ ಸಂಬಂಧಪಟ್ಟ ಉಚಿತ ಪ್ರೋಗ್ರಾಮಿಂಗ್ ಕೋರ್ಸ್ ಲಭ್ಯವಿದೆ. ಇದು ಆರಂಭಿಕರಿಗೆ ಸೂಕ್ತ. ಇದರಲ್ಲಿ ಸಿಎಸ್‍ಎಸ್, ಎಚ್‍ಟಿಎಂಎಲ್ ಮತ್ತು ಪಿಎಚ್‍ಪಿ ಕುರಿತು ಜ್ಞಾನ ಪಡೆದುಕೊಳ್ಳಬಹುದಾಗಿದೆ. ಈ ಕೋರ್ಸ್‍ನ ತರಗತಿಗಳೆಲ್ಲ ಉಚಿತ. ನಿಮಗೆ ಹಾರ್ವಡ್‍ನ ಅಂಗೀಕೃತ ಸರ್ಟಿಫಿಕೇಟ್ ಬೇಕಿದ್ದರೆ ಸುಮಾರು 90 ಡಾಲರ್ ಹಣ ಪಾವತಿಸಬೇಕು. ಈ ಕೋರ್ಸ್‍ನಲ್ಲಿ 180 ಗಂಟೆಯಲ್ಲಿ ಕಲಿಯಬಹುದಾದ 9 ಲೆಸನ್‍ಗಳಿವೆ. ವೆಬ್‍ಸೈಟ್ ಲಿಂಕ್
ಸಾಫ್ಟ್‍ವೇರ್ ಅಭಿವೃದ್ಧಿ: ಈ ಕೋರ್ಸ್ ಮೂಲಕ ವಿದ್ಯಾರ್ಥಿಗಳು ಅತ್ಯಧಿಕ ಗುಣಮಟ್ಟದ ಸಾಫ್ಟ್‍ವೇರ್‍ಗಳನ್ನು ಅಭಿವೃದ್ಧಿಪಡಿಸಲು ಕಲಿಯಬಹುದು. ಕೊಂಚ ಮಟ್ಟಿಗೆ ಪ್ರೋಗ್ರಾಮಿಂಗ್ ಅನುಭವ ಇರುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕಲಿಕಾ ಸಾಮಾಗ್ರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅನುಭವ ಇಲ್ಲದವರೂ ಕಲಿಯಬಹುದು. 16 ಗಂಟೆಯ ಈ ಕ್ಲಾಸ್‍ನಲ್ಲಿ 7 ಪಾಠ ಮತ್ತು 7 ಪ್ರಯೋಗಗಳಿವೆ. ವೆಬ್ ಸೈಟ್ ಲಿಂಕ್
ಎಲ್ಲರೂ ಕಲಿಯಬಹುದಾದ ಪೆÇ್ರೀಗ್ರಾಮಿಂಗ್: ಯೂನಿವರ್ಸಿಟಿ ಆಫ್ ಮಿಚಿಗ ` ಪ್ರೋಗ್ರಾಮಿಂಗ್ ಫಾರ್ ಎವರಿಬಡಿ' ಎಂಬ ಕೋರ್ಸ್ ಅನ್ನು ಕೋರ್ಸ್‍ಇರಾ ಉಚಿತವಾಗಿ ನೀಡುತ್ತಿದೆ. ಪ್ರೋಗ್ರಾಮಿಂಗ್ ಕುರಿತು ಯಾವುದೇ ಅನುಭವ ಇಲ್ಲದವರು ಸಹ ಈ ಕೋರ್ಸ್‍ಗೆ ಸೇರಬಹುದು. 20ರಿಂದ 40 ಗಂಟೆಯಲ್ಲಿ ಕಲಿಯಬಹುದಾದ ಈ ಕೋರ್ಸ್‍ನಲ್ಲಿ 10 ಲೆಸನ್‍ಗಳಿವೆ. ವೆಬ್ ಸೈಟ್ ಲಿಂಕ್
ಡ್ಯಾಷ್ ಜನರಲ್ ಅಸೆಂಬ್ಲಿ: ಡ್ಯಾಷ್ ಎಂಬ ವೆಬ್‍ಸೈಟ್‍ನಲ್ಲಿ ಎಚ್‍ಟಿಎಂಎಲ್, ಸಿಎಸ್‍ಎಸ್ ಮತ್ತು ಜಾವಾಸ್ಕ್ರಿಪ್ಟ್ ಅನ್ನು ಮುದದಿಂದ ಕೊನೆಯವರೆಗೆ ಹಂತಹಂತವಾಗಿ ಸರಳವಾಗಿ ಹೇಳಕೊಡಲಾಗುತ್ತದೆ. ಕೋಡಿಂಗ್ ಬಗ್ಗೆ ಗೊತ್ತಿದ್ದವರು, ಗೊತ್ತಿಲ್ಲದವರೂ ಈ ಕೋರ್ಸ್ ಅನ್ನು ಉಚಿತವಾಗಿ ಕಲಿಯಬಹುದು. ವೆಬ್‍ಸೈಟ್ ಲಿಂಕ್
ಎಂಐಟಿ ಓಪನ್ ಕೋರ್ಸ್: ಸಿ ಮತ್ತು ಸಿಪ್ಲಸ್‍ಪ್ಲಸ್ ಪೆÇ್ರೀಗ್ರಾಮಿಂಗ್ ಭಾಷೆಯ ಕುರಿತು ಕಲಿಯಲು ಈ ನಾಲ್ಕು ವಾರದ ಕೋರ್ಸ್‍ಗೆ ಸೇರಬಹುದು. ಪೆÇ್ರೀಗ್ರಾಮಿಂಗ್ ಭಾಷೆಯ ಪರಿಚಯ ಮಾತ್ರವಲ್ಲದೆ ಮೆಮೊರಿ ಮ್ಯಾನೇಜ್‍ಮೆಂಟ್, ಪಾಯಿಂಟರ್, ಆಬ್ಜೆಕ್ಟ್ ಓರಿಯೆಂಟೆಡ್ ಪೆÇ್ರೀಗ್ರಾಮಿಂಗ್ ಇತ್ಯಾದಿಗಳನ್ನು ಇಲ್ಲಿ ಕಲಿಯಬಹುದು. 8 ಪಾಠ, 8 ಲ್ಯಾಬ್ಸ್‍ನ ಈ ಕೋರ್ಸ್ ಅನ್ನು ಕೇವಲ 16 ಗಂಟೆಯಲ್ಲಿ ಕಲಿಯಬಹುದಾಗಿದೆ. ವೆಬ್‍ಸೈಟ್ ಲಿಂಕ್
ಕೋಡ್ ಅಕಾಡೆಮಿ: ಕೋಡ್ ಅಕಾಡೆಮಿಯಲ್ಲಿ ಎಚ್‍ಟಿಎಂಎಲ್ ಮತ್ತು ಸಿಎಸ್‍ಎಸ್ ಬಳಸಿ ಹಲವು ಲಕ್ಷ ಜನರು ವೆಬ್‍ಸೈಟ್ ರಚಿಸಿದ್ದಾರೆ. ವೆಬ್ ಅಭಿವೃದ್ಧಿಯಲ್ಲಿ ಪರಿಣತಿ ಪಡೆಯಲು ಯಾವುದೇ ಅನುಭವ ಬೇಕಿಲ್ಲ. ಕೋಡ್ ಅಕಾಡೆಮಿಯ 7 ಗಂಟೆಯ 12 ಪಾಠವಿರುವ ಕೋರ್ಸ್‍ಗೆ ಸೇರಬಹುದಾಗಿದೆ. ವೆಬ್‍ಸೈಟ್ ಲಿಂಕ್
ಉದೆಮಿಯಿಂದ ಆ್ಯಪ್ ಕ್ಲಾಸ್: ಐಫೋನ್  ಆ್ಯಪ್ ಅಭಿವೃದ್ಧಿಪಡಿಸಲು ಕಲಿಯುವವರಿಗೆ ಉದೆಮಿಯ ಈ ಕೋರ್ಸ್ ನೆರವಾಗುತ್ತದೆ. 5 ಗಂಟೆಯ 23 ಕ್ಲಾಸ್ ಮುಗಿಸುವ ಹಂತದಲ್ಲಿ ಸಂಪೂರ್ಣ ಕಾರ್ಯನಿರ್ವಹಿಸುವ ಮೊದಲ ಆ್ಯಪ್ ಅನ್ನು ನೀವು ಆ್ಯಪ್ ಸ್ಟೋರ್‍ಗೆ ಸಬ್‍ಮಿಟ್ ಮಾಡಬಹುದಾಗಿದೆ. ವೆಬ್ ವಿಳಾಸ



ಡಿಸೈನ್ ಕಲಿಕೆಗೆ ಕೋರ್ಸ್‍ಗಳು
ಅಡಾಬ್ ಫೋಟೊಶಾಪ್: ಅಡೋಬ್ ಫೋಟೊಶಾಪ್ ಅನ್ನು ಯಾವ ರೀತಿ ಬಳಸಬೇಕೆಂದು ಆರಂಭಿಕರಿಗೆ ಕಲಿಸುವ ಕೋರ್ಸ್ ಇದಾಗಿದೆ. ಈ ಕೋರ್ಸ್‍ನಲ್ಲಿ ಸರಳವಾಗಿ ಪ್ರಾಕ್ಟಿಕಲ್ ಉದಾಹರಣೆಗಳ ಮೂಲಕ ಹೇಳಿಕೊಡಲಾಗಿದೆ. ಈ ಕೋರ್ಸ್‍ನಲ್ಲಿ 26 ಪಾಠಗಳಿದ್ದು 14 ಗಂಟೆಯಲ್ಲಿ ಕಲಿಯಬಹುದಾಗಿದೆ. ವೆಬ್‍ಸೈಟ್ ಲಿಂಕ್: www.adobeknowhow.com  ಅಥವಾ http://bit.ly/JpFOnI
ಇಲ್ಯುಸ್ಟ್ರೇಟರ್ ಕಲಿಯಿರಿ: ಅಡಾಬ್ ಇಲ್ಯುಸ್ಟ್ರೇಟರ್ ಕಲಿತು ಅದ್ಭುತವಾದ ಗ್ರಾಫಿಕ್ಸ್‍ಗಳನ್ನು ತಯಾರಿಸಲು ಬಯಸಿದ್ದೀರಾ? ಹಾಗಿದ್ದರೆ ನಿಮಗೆ ಈ ಕೋರ್ಸ್ ಸೂಕ್ತ. ಈ ಕೋರ್ಸ್‍ನಲ್ಲಿ ಇಲ್ಯುಸ್ಟ್ರೇಟರ್‍ನ ಸಾಮಾನ್ಯ ತಂತ್ರಗಳು, ಅಡ್ವಾನ್ಸಡ್ ವಿಷಯಗಳನ್ನು ಕಲಿಯಬಹುದಾಗಿದೆ. ಸುಮಾರು 41 ಪಾಠಗಳನ್ನು 11 ಗಂಟೆಯಲ್ಲಿ ಕಲಿಯಬಹುದಾಗಿದೆ. ಉದೆಮಿ ಸಂಸ್ಥೆಯ ವೆಬ್‍ಸೈಟ್ ವಿಳಾಸ
ಅಡೊಬ್ ಇನ್‍ಡಿಸೈನ್: ಅಡೋಬ್ ನೋ ಹೌ ವೆಬ್‍ಸೈಟ್‍ನಲ್ಲಿ ಆರಂಭಿಕರಿಗೆ ಅಡೋಬ್ ಇಂಡಿಸೈನ್ ಉಚಿತ ಕೋರ್ಸ್ ಲಭ್ಯವಿದೆ. ಅತ್ಯುತ್ತಮ ಗುಣಮಟ್ಟದ ಪುಟಗಳನ್ನು, ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ಇದು ಸೂಕ್ತ. ಗ್ರಾಫಿಕ್ಸ್, ಟೇಬಲ್ಸ್, ಕಲರ್, ಇಫೆಕ್ಟ್ ಇತ್ಯಾದಿಗಳನ್ನೂ ಇಲ್ಲಿ ಕಲಿಯಬಹುದು. ವೆಬ್ ಸೈಟ್ ಲಿಂಕ್
ಗ್ರಾಫಿಕ್ ಡಿಸೈನ್ ಕೋರ್ಸ್: ಉದೆಮಿಯು ಉಚಿತ ಗ್ರಾಫಿಕ್ ಡಿಸೈನ್ ಕೋರ್ಸ್ ಅನ್ನು ಆರಂಭಿಕರಿಗೆ ನೀಡುತ್ತಿದೆ. ಗ್ರಾಫಿಕ್ ಡಿಸೈನ್ ಜಗತ್ತಿಗೆ ಪ್ರವೇಶಿಸಲು ಬಯಸುವವರಿಗೆ ಇದು ಉತ್ತಮ ಆರಂಭಿಕ ಕೋರ್ಸ್ ಆಗಿದೆ. ವೆಬ್ ವಿಳಾಸ
ಆನ್‍ಲೈನ್ ಮಾರ್ಕೆಟಿಂಗ್ ಕೋರ್ಸ್‍ಗಳು
* ಬಫರ್ ಸಂಸ್ಥೆಯ ಸೋಷಿಯಲ್ ಮೀಡಿಯ 101 ಕೋರ್ಸ್‍ಗೆ ಲಿಂಕ್
* ಅಲಿಸನ್‍ನ ಡಿಪ್ಲೊಮಾ ಇನ್ ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್
* ಉದೆಮಿಯಿಂದ ಅಡ್ವಾನ್ಸಡ್ ಎಸ್‍ಇಒ ಕೋರ್ಸ್
* ಕಾಪಿ ಬ್ಲಾಗರ್‍ನಲ್ಲಿ ಇಂಟರ್‍ನೆಟ್ ಮಾರ್ಕೆಟಿಂಗ್ ಕೋರ್ಸ್ ಲಭ್ಯವಿದೆ. ಲಿಂಕ್
* ಕೋರ್ಸ್ ಇರಾದಲ್ಲಿ ಡಿಜಿಟಲ್ ವಲ್ರ್ಡ್ ಮಾರ್ಕೆಟಿಂಗ್ ಕುರಿತು ಉಚಿತ ಕೋರ್ಸ್ ಇದೆ. ಲಿಂಕ್

Published in Vijayakarnataka Mini

Wednesday 18 January 2017

ಉಪಯುಕ್ತ ವೆಬ್ ಸೈಟ್: ಕನ್ನಡ ಸ್ಲೇಟ್

ಉಪಯುಕ್ತ ವೆಬ್ ಸೈಟ್: ಕನ್ನಡ ಸ್ಲೇಟ್

ನಿಮಗೆ ಗೂಗಲ್ ನಲ್ಲಿ ಕನ್ನಡದಲ್ಲಿ ಏನೋ ಹುಡುಕಬೇಕೆಂದೆನಿಸುತ್ತದೆ. ನಿಮ್ಮ ಕಂಪ್ಯೂಟ್ ನಲ್ಲಿ ಯೂನಿಕೋಡ್ ನಲ್ಲಿ ಬರೆಯುವ ಸೌಲಭ್ಯ ಇಲ್ಲ ಎಂದಿರಲಿ. ಕೆಲವೊಮ್ಮೆ ಇಂತಹ ಬದಲಾವಣೆಗಳನ್ನು ತಕ್ಷಣ ಆಫೀಸ್ ಕಂಪ್ಯೂಟರ್ ಗಳಲ್ಲಿ ಮಾಡಲು ಸಾಧ್ಯವಾಗುವುದಿಲ್ಲ.

ನೀವು ಕನ್ನಡ ಸ್ಲೇಟ್ ಎಂಬ ವೆಬ್ ಸೈಟ್ ಹೋಗಿಲ್ಲದಿದ್ದರೆ ಒಮ್ಮೆ ಹೋಗಿ ನೋಡಿ. ಇಲ್ಲಿ ನೀವು ನೇರವಾಗಿ ಇಂಗ್ಲಿಷ್ ಅಕ್ಷರದಲ್ಲಿ ಬರೆದರೆ ಕನ್ನಡದಲ್ಲಿ ಅಕ್ಷರ ಮೂಡುತ್ತದೆ. ಇಲ್ಲಿ ನಿಮಗೆ ಬೇಕಾದ ಪದವನ್ನು ಬರೆದು ಅದನ್ನು ಕಾಪಿ ಮಾಡಿ ಗೂಗಲ್ ಗೆ ಪೇಸ್ಟ್ ಮಾಡಬಹುದಾಗಿದೆ.

ಕನ್ನಡ ಸ್ಲೇಟ್ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Saturday 14 January 2017

ಸಿಎಗೆ ಪರ್ಯಾಯ ಎಸಿಸಿಎ

ಸಿಎಗೆ ಪರ್ಯಾಯ ಎಸಿಸಿಎ

ದೇಶದಲ್ಲಿ ಬಹುತೇಕರು ಚಾರ್ಟೆಡ್ ಅಕೌಂಟೆಂಟ್(ಸಿಎ) ಮಾಡುತ್ತಿದ್ದಾರೆ. ಭಾರತೀಯ ಸಿಎಗೆ ಪರ್ಯಾಯವಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಮನ್ನಣೆ ಪಡೆದಿರುವ ಎಸಿಸಿಎಯನ್ನೂ ಮಾಡಿದರೆ ಇನ್ನಷ್ಟು ಉತ್ತಮ ಉದ್ಯೋಗಾವಕಾಶ ಪಡೆಯಬಹುದು ಎನ್ನುತ್ತಾರೆ ತಜ್ಞರು. ಎಸಿಸಿಎ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


* ಪ್ರವೀಣ್ ಚಂದ್ರ ಪುತ್ತೂರು

ಚಾರ್ಟೆಡ್ ಅಕೌಂಟೆಂಟ್, ಫೈನಾನ್ಶಿಯಲ್ ಅಕೌಂಟೆಂಟ್, ಅಡಿಟರ್, ಮ್ಯಾನೆಜ್‍ಮೆಂಟ್ ಕನ್ಸಲ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಪಡೆಯಲು ಹೆಚ್ಚಿನವರು `ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ' (ಡಿಡಿಡಿ.ಜ್ಚಿZಜಿ.ಟ್ಟಜ) ನೀಡುವ `ಸಿಎ' ಅಥವಾ `ಚಾರ್ಟೆಡ್ ಅಕೌಂಟೆಂಟ್' ಕೋರ್ಸ್ ಮಾಡುತ್ತಾರೆ. ಸಿಎಗೆ ಪರ್ಯಾಯವಾಗಿ ಯಾವ ಕೋರ್ಸ್ ಮಾಡಬಹುದು? ಎಂಬ ಪ್ರಶ್ನೆ ಎದುರಾದರೆ ನಮ್ಮ ಗಮನ ಸೆಳೆಯುವುದು `ದಿ ಅಸೋಸಿಯೇಷನ್ ಆಫ್ ಚಾರ್ಟೆಡ್ ಸರ್ಟಿಫೈಡ್ ಅಕೌಂಟೆಂಟ್ಸ್(ಎಸಿಸಿಎ)'. ಈ ಕುರಿತು ಒಂದು ವಿಶ್ಲೇಷಣೆ ಇಲ್ಲಿದೆ.

ಜಾಗತಿಕವಾಗಿ ಫೇಮಸ್ಸು
ಖಂಡಿತವಾಗಿಯೂ ಭಾರತದ ಸಿಎ ಜಾಗತಿಕ ಗುಣಮಟ್ಟ ಹೊಂದಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ತನ್ನ ಸಿಲೇಬಸ್ ಅನ್ನು ಬದಲಾಯಿಸುವ ಇಂಗಿತವನ್ನೂ ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ಸಂಸ್ಥೆಯು ವ್ಯಕ್ತಪಡಿಸಿದೆ. ಈಗಾಗಲೇ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಅಪ್‍ಡೇಟ್ ಆಗಿರುವ ಎಸಿಸಿಎ ಹೆಚ್ಚು ಫೇಮಸ್ ಎನ್ನುವುದು ಕೆಲವು ಶಿಕ್ಷಣ ಪರಿಣತರ ಅಭಿಪ್ರಾಯ. ಎಸಿಸಿಎಯು ಜಗತ್ತಿನ 181 ದೇಶಗಳಲ್ಲಿ ಸುಮಾರು 1,88,000 ಸದಸ್ಯರನ್ನು ಮತ್ತು 4,80,000 ವಿದ್ಯಾರ್ಥಿಗಳನ್ನು ಹೊಂದಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ 91ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಎಸಿಸಿಎಯು ಇಂಗ್ಲೆಂಡ್‍ನ ಜಿಎಎಪಿ, ಲಾ, ಐಎಫ್‍ಆರ್‍ಎಸ್‍ನ ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ. ಇದು ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚುವರಿ ಜ್ಞಾನವನ್ನು ಒದಗಿಸಿದಂತಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?
* ಎಸಿಸಿಎಗೆ ಸೇರಲು ಯಾವುದೇ ಔಪಚಾರಿಕ ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ. ಆಸಕ್ತರು ನೇರವಾಗಿ ಫೌಂಡೇಷನ್ ಲೆವೆಲ್‍ಗೆ ಸೇರಬಹುದು.. ಅಕೌಂಟೆನ್ಸಿಗೆ ಹೊಸದಾಗಿ ಸೇರಬಯಸುವ ವಿದ್ಯಾರ್ಥಿಗಳು, ಯಾವುದೇ ಅಕೌಂಟೆನ್ಸಿ ವಿದ್ಯಾರ್ಹತೆ ಇಲ್ಲದೆ ಇದ್ದರೂ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು, ಈಗಾಗಲೇ ಡಿಪೆÇ್ಲಮಾ ಅಥವಾ ಬೇರೆ ಸರ್ಟಿಫಿಕೇಟ್ ಕೋರ್ಸ್ ಪಡೆಯುತ್ತಿರುವಾಗಲೇ ಎಸಿಸಿಎ ಶಿಕ್ಷಣವನ್ನು ಪಡೆಯಬಹುದಾಗಿದೆ.
* ಪದವಿ/ಸ್ನಾತಕೋತ್ತರ ಪದವಿ ಅಥವಾ ಇತರ ಶೈಕ್ಷಣಿಕ ಅರ್ಹತೆ ಇರುವ ಅಭ್ಯರ್ಥಿಗಳು ಎಸಿಸಿಎ ಸದಸ್ಯರಾಗಬಹುದು. ಭಾರತೀಯ ಸಿಎಯಲ್ಲಿ ಕೆಲವು ಪೇಪರ್‍ಗಳನ್ನು ಬರೆದು ಪೂರ್ಣಗೊಳಿಸಿದವರಿಗೆ ಎಸಿಸಿಎಯಲ್ಲಿ ಕೆಲವು ಪೇಪರ್‍ಗಳನ್ನು ಬರೆಯುವುದರಿಂದ ವಿನಾಯಿತಿಯನ್ನೂ ನೀಡಲಾಗುತ್ತದೆ. ಅಂದರೆ, ಭಾರತೀಯ ಸಿಎಯಲ್ಲಿ ಕೆಲವು ಪೇಪರ್ ಪೂರ್ಣಗೊಳಿಸಿದವರು ನೇರವಾಗಿ ಎಸಿಸಿಎಯ ಪೆÇ್ರಫೆಷನಲ್ ಲೆವೆಲ್‍ಗೆ ಸೇರಬಹುದು. ಈ ಕುರಿತು ಪೂರ್ಣ ಮಾಹಿತಿಯನ್ನು ಎಸಿಸಿಎ ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು.

ಯಾವಾಗ ಪರೀಕ್ಷೆ ನಡೆಯುತ್ತದೆ?
ಎಸಿಸಿಎ ಶಿಕ್ಷಣವು ಒಟ್ಟು 14 ಪೇಪರ್‍ಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಬರೆಯಬಹುದು. ಪ್ರತಿ ಅವಧಿಯಲ್ಲಿಯೂ 4 ಎಗ್ಸಾಂವರೆಗೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವಿದೆ. ಈ ರೀತಿ ಮಾಡಿದರೆ ಕನಿಷ್ಠ 2 ವರ್ಷದಲ್ಲಿಯೇ ಎಸಿಸಿಎ ಕೋರ್ಸ್ ಪೂರ್ಣಗೊಳಿಸಬಹುದು. ಭಾರತೀಯ ಸಿಎ ಮಾಡಿದವರಿಗೆ ಕೆಲವು ಪೇಪರ್‍ಗಳ ವಿನಾಯಿತಿಯೂ ಲಭ್ಯ ಇರುವುದರಿಂದ ಇದಕ್ಕಿಂತಲೂ ಕಡಿಮೆ ಅವಧಿಯಲ್ಲಿಯೂ ಕೋರ್ಸ್ ಪೂರ್ಣಗೊಳಿಸಬಹುದು. ಎಸಿಸಿಎ ಮೆಂಬರ್‍ಷಿಪ್ ಪಡೆಯಲು ವಿದ್ಯಾರ್ಥಿಗಳಿಗೆ 3 ವರ್ಷ ಅಥವಾ 36 ತಿಂಗಳ ಪ್ರಾಕ್ಟಿಕಲ್ ವರ್ಕ್ ಅನುಭವ ಇರಬೇಕು. ಈ ಕೆಲಸದ ಅನುಭವವನ್ನು ಎಸಿಸಿಎಗೆ ಸೇರುವ ಮುನ್ನ ಅಥವಾ ಎಸಿಸಿಎ ಅಧ್ಯಯನ ಸಮಯದಲ್ಲಿ ಅಥವಾ ಅಧ್ಯಯನ ಪೂರ್ಣಗೊಳಿಸಿದ ನಂತರವೂ ಪಡೆಯಬಹುದು.

ಪರೀಕ್ಷೆ ಯಾವಾಗ ನಡೆಯುತ್ತದೆ
ವರ್ಷಕ್ಕೆ ಎರಡು ಬಾರಿ ಎಸಿಸಿಎ ಪರೀಕ್ಷೆ ನಡೆಸಲಾಗುತ್ತದೆ. ಜೂನ್ ಮತ್ತು ಡಿಸೆಂಬರ್ ಅವಧಿಯ ಪರೀಕ್ಷೆಯನ್ನು `ಅರ್ಲಿ', `ಸ್ಟಾಂಡರ್ಡ್' ಮತ್ತು `ಲೇಟ್' ಎಂಬ ಮೂರು ಸಮಯಗಳಲ್ಲಿ ಬರೆಯಲು ಅವಕಾಶವಿದೆ. ಅರ್ಲಿ(ಬೇಗ) ಎಗ್ಸಾಂ ಮಾರ್ಚ್ 8 ಮತ್ತು ಸೆಪ್ಟೆಂಬರ್ 8ರಂದು ನಡೆಯುತ್ತದೆ. ಈ ಎಗ್ಸಾಂ ಅನ್ನು ಆನ್‍ಲೈನ್‍ನಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಸ್ಟಾಂಡರ್ಡ್ ಎಗ್ಸಾಂ ಮಾರ್ಚ್ 9-ಏಪ್ರಿಲ್ 8ರಂದು ಮತ್ತು ಸೆಪ್ಟೆಂಬರ್ 9 -ಅಕ್ಟೋಬರ್ 8ರಂದು ನಡೆಯುತ್ತದೆ. ಈ ಎಗ್ಸಾಂ ಅನ್ನು ಆನ್‍ಲೈನ್ ಅಥವಾ ಪೇಪರ್ ಮೂಲಕ ಬರೆಯಲು ಅವಕಾಶ ನೀಡಲಾಗುತ್ತದೆ. ಲೇಟ್ ಎಗ್ಸಾಂ 9 ಏಪ್ರಿಲ್-ಮೇ 8ರಂದು ಮತ್ತು ಅಕ್ಟೋಬರ್ 9-ನವೆಂಬರ್ 8ರಂದು ಬರೆಯಲು ಅವಕಾಶವಿದೆ. ಈ ಪರೀಕ್ಷೆಯನ್ನು ಆನ್‍ಲೈನ್ ಮೂಲಕ ಮಾತ್ರ ನಡೆಸಲಾಗುತ್ತದೆ.

ಫೀಸ್ ಎಷ್ಟು?
ಎಸಿಸಿಎ ಪರೀಕ್ಷೆಗೆ ದಾಖಲಾತಿ ಮತ್ತು ಚಂದಾದಾರಿಕೆ (ಸಬ್‍ಸ್ಕ್ರಿಪ್ಷನ್) ಶುಲ್ಕ ಇಂತಿದೆ. ಆರಂಭಿಕ ದಾಖಲಾತಿಗೆ 79 ಪೌಂಡ್. ಅಂದರೆ, ಸುಮಾರು 6,690 ರೂಪಾಯಿ ಆಗಿದೆ. ಮರು ದಾಖಲಾತಿಗೂ ಇಷ್ಟೇ ಶುಲ್ಕ ವಿಧಿಸಲಾಗುತ್ತದೆ. ವಾರ್ಷಿಕ ಸಬ್‍ಸ್ಕ್ರಿಪ್ಷನ್‍ಗೆ 85 ಪೌಂಡ್ ಅಂದರೆ, ಸುಮಾರು 8 ಸಾವಿರ ರೂಪಾಯಿ. ವಿನಾಯಿತಿ(ಎಗ್ಸೆಂಪ್ಷನ್ ಫೀ) ಶುಲ್ಕ: ಜ್ಞಾನದ ಪರೀಕ್ಷೆಗೆ 72 ಪೌಂಡ್(6,097 ರೂ.) ಮತ್ತು ಕೌಶಲ ಪರೀಕ್ಷೆಗೆ 97 ಪೌಂಡ್(8,214) ರೂಪಾಯಿ. ಪರೀಕ್ಷಾ ಪ್ರವೇಶ ಶುಲ್ಕವನ್ನು ಪ್ರತಿವರ್ಷ ಪಾವತಿಸಬೇಕು. ಇಲ್ಲಿ ಒಂದು ಪೌಂಡ್‍ಗೆ 84.68 ರೂಪಾಯಿ ಎಂದು ಲೆಕ್ಕಹಾಕಲಾಗಿದೆ.
ಸಿಎ ಬೆಸ್ಟಾ? ಎಸಿಸಿಎ ಬೆಸ್ಟಾ?
ಈ ಪ್ರಶ್ನೆಗೆ ಇದಮಿತ್ತಂ ಉತ್ತರ ಕಷ್ಟ. ಈಗಾಗಲೇ ಹೇಳಿದಂತೆ ಭಾರತದ ಸಿಎ ಪೂರ್ಣಗೊಳಿಸಲು 5 ವರ್ಷ ಬೇಕು. ನಿಮಗೆ 6 ತಿಂಗಳಿಗೆ ನಾಲ್ಕು ಪೇಪರ್ ಬರೆಯುವ ಸಾಮಥ್ರ್ಯ ಇದ್ದರೆ ಎಸಿಸಿಎ ಪೂರ್ಣಗೊಳಿಸಲು 2 ವರ್ಷ ಸಾಕು. ಎಸಿಸಿಎ ಎಗ್ಸಾಂ ಜೂನ್ ಮತ್ತು ಡಿಸೆಂಬರ್‍ನಲ್ಲಿ ನಡೆಯುತ್ತದೆ. ಸಿಎ ಪರೀಕ್ಷೆಯು ಜನವರಿ, ಫೆಬ್ರವರಿ, ಏಪ್ರಿಲ್, ಮೇ, ಜುಲೈ, ಆಗಸ್ಟ್, ಅಕ್ಟೋಬರ್, ನವೆಂಬರ್‍ನಲ್ಲಿ ನಡೆಯುತ್ತದೆ.
ಭಾರತದ ಸಿಎ ಶಿಕ್ಷಣದಂತೆ ಇಂಗ್ಲೆಂಡ್‍ನ ಎಸಿಸಿಎ ಇದೆ. ಭಾರತದ ಸಿಎಗಿಂತ ಎಸಿಸಿಎ ಕಲಿಕೆಯು ಹೆಚ್ಚುವರಿಯಾಗಿ ಇಂಗ್ಲೆಂಡ್ ಜಿಎಎಪಿ(ಇಂಗ್ಲೆಂಡ್‍ನ ಅಕೌಂಟಿಂಗ್ ಪ್ರಾಕ್ಟೀಸ್ ಜ್ಞಾನ), ಕಾನೂನು ಮತ್ತು ಅಂತಾರಾಷ್ಟ್ರೀಯ ಹಣಕಾಸು ರಿಪೆÇೀರ್ಟಿಂಗ್ ಸ್ಟಾಂಡರ್ಡ್(ಐಎಫ್‍ಆರ್‍ಎಸ್) ಜ್ಞಾನವನ್ನು ನೀಡುತ್ತದೆ. ಇದರಿಂದ ನಿಮಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅಥವಾ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸಲು ಅನುಕೂಲವುಂಟು ಮಾಡುತ್ತದೆ. ಎಸಿಸಿಎ ಸರ್ಟಿಫಿಕೇಟ್ ಜೊತೆ ಎಂಬಿಎ ಪದವಿಯನ್ನು ಪಡೆದರೆ ಹೆಚ್ಚು ಉದ್ಯೋಗಾವಕಾಶ ದೊರಕುತ್ತದೆ.
ಎಸಿಸಿಎಯ ಶಿಕ್ಷಣ ಗುಣಮಟ್ಟವು ಜಗತ್ತಿನಾದ್ಯಂತ ಇರುವ ಉದ್ಯೋಗದಾತರ ಅವಶ್ಯಕತೆಗೆ ತಕ್ಕಂತೆ ಇದೆ. ಭಾರತದ ಸಿಎಯು ಶೀಘ್ರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ತನ್ನ ಪಠ್ಯಕ್ರಮವನ್ನು ಬದಲಾಯಿಸಿಕೊಳ್ಳಲು ಉದ್ದೇಶಿಸಿದೆ.
ಭಾರತೀಯ ಸಿಎ ಮಾಡುತ್ತಿರುವಾಗ ಬೇರೆ ಕೋರ್ಸ್ ಮಾಡುವುದು ಬಹಳಷ್ಟು ಕಷ್ಟಕಾರಿ ಎನ್ನುತ್ತಾರೆ ಬಹುತೇಕ ಸಿಎ ವಿದ್ಯಾರ್ಥಿಗಳು. ಆದರೆ, ಬೇರೆ ಕೋರ್ಸ್ ಮಾಡುತ್ತಿರುವಾಗಲೇ ಎಸಿಸಿಎ ಕ್ವಾಲಿಫಿಕೇಷನ್ ಪಡೆಯಬಹುದಾಗಿದೆ. ಭಾರತೀಯ ಸಿಎಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಸಿಸಿಎಗೆ ಸಂಬಂಧಪಟ್ಟ ಆನ್‍ಲೈನ್ ತರಬೇತಿಗಳು ಲಭ್ಯ ಇವೆ.
ನಿಮ್ಮ ಕರಿಯರ್‍ಗೆ ಈ ಸಾಧಕರು ಸ್ಫೂರ್ತಿಯಾಗಲಿ

ನಿಮ್ಮ ಕರಿಯರ್‍ಗೆ ಈ ಸಾಧಕರು ಸ್ಫೂರ್ತಿಯಾಗಲಿ

ಕರಿಯರ್‍ನಲ್ಲಿ ಸೋಲು ಬಂದಾಗ ಕುಗ್ಗುವವರಿಗೆ ಸ್ಫೂರ್ತಿಯಾಗಬಲ್ಲ ಪ್ರಮುಖ ಸಾಧಕರ ಪರಿಚಯ ಇಲ್ಲಿದೆ.

ಜೀವನದಲ್ಲಿ ಎಲ್ಲವೂ ಇದ್ದರೂ ಸಾಧಿಸಲು ಹಿಂಜರಿಯುವವರಿಗೆ ಪ್ರೇರಣೆ ನೀಡಬಲ್ಲ ವ್ಯಕ್ತಿಗಳ ಪುಟ್ಟ ಪರಿಚಯ ಇಲ್ಲಿದೆ. ಇವರೆಲ್ಲರು `ವಿಕಲತೆ ಎನ್ನುವುದು ಮನಸ್ಸಿನಲ್ಲಿದೆ' ಎನ್ನುವ ಮಾತನ್ನು ನಿಜವಾಗಿಸಿದವರು. ತಮ್ಮ ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಂತು ಜಗತ್ತೇ ನಿಬ್ಬೆರಾಗುವಂತೆ ಮಾಡಿದವರು. ಇವರು ಬದುಕಿರುವ ರೀತಿ ಎಲ್ಲರಿಗೂ ಸ್ಫೂರ್ತಿಯಾಗಲಿ.

ಸುಧಾ ಚಂದ್ರನ್: ಭಾರತೀಯ ನಟಿ ಮತ್ತು ನೃತ್ಯ ಕಲಾವಿದೆ ಸುಧಾ ಚಂದ್ರನ್ ಬಗ್ಗೆ ನಿಮಗೆ ಗೊತ್ತಿರಬಹುದು. ಕೇರಳದಲ್ಲಿ ಜನಿಸಿದ ಇವರಿಗೆ ನೃತ್ಯವೇ ಸರ್ವಸ್ವ. ಭರತನಾಟ್ಯವೆಂದರೆ ಪಂಚಪ್ರಾಣ. 16ನೇ ವಯಸ್ಸಿನಲ್ಲಿ ನಡೆದ ಅಪಘಾತದಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡರು. ನೃತ್ಯವೇ ಸರ್ವಸ್ವ ಎಂದುಕೊಂಡ ಇವರಿಗೆ ಇದರಿಂದ ಆದ ಆಘಾತ ಅಷ್ಟಿಷ್ಟಲ್ಲ. ಎಲ್ಲವೂ ಮುಗಿದು ಹೋಯಿತು ಎಂದುಕೊಳ್ಳಲಿಲ್ಲ. ಜೈಪುರದ ಕೃತಕ ಕಾಲುಗಳಲ್ಲಿಯೇ ನೃತ್ಯ ಮುಂದುವರೆಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದರು. ನೃತ್ಯ ಮಾತ್ರವಲ್ಲದೆ ಟೀವಿ ಮತ್ತು ಸಿನಿಮಾ ಜಗತ್ತಿನಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ.

ರವೀಂದ್ರ ಜೈನ್: ಹುಟ್ಟಿದ್ದಾಗ ಇವರಿಗೆ ಜಗತ್ತು ಸುಂದರವಾಗಿ ಕಾಣಲಿಲ್ಲ. ಅಂಧತ್ವ ಇವರ ಜೊತೆಗಿತ್ತು. ಬೆಳೆಯುತ್ತ ತನಗೆ ಕಣ್ಣಿಲ್ಲ ಎಂಬ ಸತ್ಯ ಅರಿವಾಗತೊಡಗಿತು. ಇದನ್ನು ವೈಕಲ್ಯತೆ ಎಂದುಕೊಳ್ಳದೇ ತಮ್ಮ ಸಾಧನೆ ಮುಂದುವರೆಸಿದರು. ಬಾಲ್ಯದಿಂದಲೂ ಹಾಡಲು ಆರಂಭಿಸಿದ ಇವರು 1970ರ ಆಸುಪಾಸಿನಲ್ಲಿ ಜನಪ್ರಿಯ ಸಂಗೀತ ನಿರ್ದೇಶಕ ಎಂಬ ಹೆಸರು ಪಡೆದರು.

ಗಿರೀಶ್ ಶರ್ಮಾ: ಸಣ್ಣ ಪ್ರಾಯದಲ್ಲೇ ರೈಲು ಅಪಘಾತದಲ್ಲಿ ಗಿರೀಶ್ ತನ್ನ ಒಂದು ಕಾಲನ್ನು ಕಳೆದುಕೊಂಡರು. ಕಾಲಿಲ್ಲದಿದ್ದರೂ ಬ್ಯಾಂಡ್ಮಿಟನ್ ಚಾಂಪಿಯನ್ ಆಗಬೇಕೆಂಬ ಕನಸನ್ನು ತೊರೆಯಲಿಲ್ಲ. ಕೇವಲ ಒಂದೇ ಕಾಲಿನಲ್ಲಿ ಬ್ಯಾಂಡ್ಮಿಟನ್ ಕೋರ್ಟ್‍ನಲ್ಲಿ ಎಲ್ಲರೂ ಅಚ್ಚರಿಪಡುವಂತೆ ಆಡಿ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಶೇಖರ್ ನಾಯ್ಕ್: ಶಿವಮೊಗ್ಗದ ಶೇಖರ್ ನಾಯ್ಕ್‍ಗೆ ಹುಟ್ಟಿದಾಗಲೇ ಅಂಧತ್ವ ಜೊತೆಯಾಗಿತ್ತು. ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳ ಸರದಾರ. ಟಿ20 ಬ್ಲೈಂಡ್ ಕ್ರಿಕೆಟ್ ವಿಶ್ವ ಚಾಂಪಿಯನ್‍ನಲ್ಲಿ ಭಾಗವಹಿಸಿದ್ದಾರೆ. ಇವರ ಹೆಸರಿನಲ್ಲಿ 32 ಶತಕಗಳಿವೆ. ಸಾಕಷ್ಟು ಹಣಕಾಸು ತೊಂದರೆಯ ನಡುವೆಯೂ ಚಾಂಪಿಯನ್ ಆಗಿ ಹೊರಹೊಮ್ಮಿದ ಇವರ ಬದುಕು ನಮ್ಮ ನಿಮ್ಮೆಲ್ಲರ ಕರಿಯರ್ ಸಾಧನೆಗೆ ಸ್ಫೂರ್ತಿಯಾಗಬಲ್ಲದು.

ಎಚ್ ರಾಮಕೃಷ್ಣನ್: ಮಗುವಾಗಿದ್ದಾಗಲೇ ರಾಮಕೃಷ್ಣನ್ ಕಾಲುಗಳೆರಡು ಪೆÇಲೀಯೊದಿಂದ ಊನವಾಗಿದ್ದವು. ಎಲ್ಲರಂತೆ ಶಾಲೆಗೂ ಪ್ರವೇಶ ದೊರಕಲಿಲ್ಲ. ಬದುಕಿನಲ್ಲಿ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಆದರೂ, ಎದೆಗುಂದದೆ 40 ವರ್ಷ ಪತ್ರಕರ್ತರಾಗಿ ಹೆಸರುಗಳಿಸಿದರು. ಎಸ್‍ಎಸ್ ಮ್ಯೂಸಿಕ್ ಟೆಲಿವಿಷನ್ ಚಾನೆಲ್‍ನ ಸಿಇಒ ಆದರು. ವಿಶೇಷ ಚೇತನರಿಗಾಗಿಯೇ ಕೃಪಾ ಎಂಬ ಟ್ರಸ್ಟ್ ಅನ್ನೂ ನಡೆಸಿಕೊಡುತ್ತಿದ್ದಾರೆ.

ಸಾಯಿ ಪ್ರಸಾದ್ ವಿಶ್ವನಾಥನ್: ಬಾಲ್ಯದಲ್ಲಿಯೇ ತನ್ನ ದೇಹದ ಕೆಳ ಅರ್ಧಭಾಗದ ಸ್ವಾಧೀನ ಕಳೆದುಕೊಂಡರು. ತನ್ನ ವೈಕಲ್ಯವನ್ನು ಮರೆತು ಸಾಧನೆ ಮಾಡಿದ್ದಾರೆ. ಇವರು ಭಾರತದ ಮೊದಲ ವಿಶೇಷ ಚೇತನ ಸ್ಕೈ ಡೈವರ್. 14 ಸಾವಿರ ಅಡಿ ಆಳದಲ್ಲಿ ಸ್ಕೈ ಡೈವಿಂಗ್ ಮಾಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‍ನಲ್ಲಿಯೂ ಹೆಸರು ದಾಖಲಿಸಿದ್ದಾರೆ. ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸ್ಕಾಲರ್‍ಷಿಪ್ ನೀಡುವ ಸಹಸ್ರ ಎಂಬ ಸಂಸ್ಥೆಯ ಸಹ ಸ್ಥಾಪಕರಾಗಿದ್ದಾರೆ.

ಅರುಣಿಮಾ ಸಿನ್ಹಾ: ಚಲಿಸುತ್ತಿರುವ ರೈಲಿನಿಂದ ದರೋಡೆಕೋರರು ತಳ್ಳಿದ್ದರಿಂದ ತನ್ನ ಕಾಲುಗಳನ್ನು ಕಳೆದುಕೊಂಡರು. ತನ್ನ ವೈಕಲ್ಯತೆಗೆ ಎದೆಗುಂದದ ದಿಟ್ಟೆ. ಘಟನೆ ನಡೆದ ಎರಡು ವರ್ಷದಲ್ಲೇ ಮೌಂಟ್ ಎವರೆಸ್ಟ್ ಪರ್ವತವನ್ನು ಹತ್ತಿ ತೋರಿಸಿದರು. ಈ ಸಾಧನೆ ಮಾಡಿದ ಮೊದಲ ವಿಶೇಷ ಚೇತನ ವ್ಯಕ್ತಿ ಎಂಬ ದಾಖಲೆ ಮಾಡಿದ್ದಾರೆ.

ಮಾಲತಿ ಕೃಷ್ಣಮೂರ್ತಿ ಹೊಳ್ಳ: ವಿಷಮ ಜ್ವರದಿಂದ ತನ್ನ ದೇಹದ ಸ್ವಾಧೀನ ಕಳೆದುಕೊಂಡ ಮಾಲತಿ ಕೃಷ್ಣಮೂರ್ತಿ ಹೊಳ್ಳ ಮಾಡಿರುವ ಸಾಧನೆಯೂ ಎಲ್ಲರಿಗೂ ಸ್ಪೂರ್ತಿಯಾಗುವಂತದ್ದು. ವಿವಿಧ ಪ್ಯಾರಾ ಒಲಿಂಪಿಕ್‍ಗಳಲ್ಲಿ ಭಾಗವಹಿಸಿ 300ಕ್ಕೂ ಹೆಚ್ಚು ಮೆಡಲ್‍ಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Published in Vijayakarnataka Mini