Friday 13 April 2018

ಚಿಕ್ಕಮಗಳೂರು ಪ್ರವಾಸ-ಕಾಫಿ ನಾಡಿನ ಘಮಲು

SHARE
ಒಂದು ಕಡೆ ಕಾಫಿ ಕಣಿವೆ, ಅವುಗಳ ನಡುವೆ ಕಾಣುವ ಓಕ್ ಟ್ರೀಗಳು, ಬೆಟ್ಟಗಳ ನಡುವೆ ಸೂರ್ಯನ ನೆರಳು-ಬೆಳಕಿನಾಟಗಳನ್ನು ನೋಡುತ್ತಿದ್ದರೆ ಪ್ರಕೃತಿ ಮಾತೆಯ ಮಡಿಲಲ್ಲಿ ನಾವೆಷ್ಟು ಚಿಕ್ಕವರು ಎನಿಸುತ್ತದೆ. ತಣ್ಣಗೆ ಬೀಸುವ ಗಾಳಿಗೆ ಮುಖವೊಡ್ಡಿ ನಿಂತರೆ ಹಾಯೆನಿಸುತ್ತದೆ. 


-ಶ್ರೀಲಕ್ಷ್ಮಿ ಹೊಸ್ಕೊಪ್ಪ

ಕಣ್ಣು ಹಾಯಿಸಿದ ಕಡೆಯಲೆಲ್ಲ ಹಸಿರು, ಎಷ್ಟು ನೋಡಿದರೂ ಮುಗಿಯದ ಬೆಟ್ಟ ಗುಡ್ಡಗಳ ಸರಣಿ, ಮುಂಜಾನೆ ಕವಿದಿರುವ ದಟ್ಟ ಮಂಜು... ಇಂತಹ ಪ್ರಕೃತಿ ಸೌಂದರ್ಯವನ್ನು ಮಧ್ಯೆ ಕಳೆದುಹೋಗಬೇಕೆನ್ನುವವರು ಚಿಕ್ಕಮಗಳೂರಿಗೊಮ್ಮೆ ಭೇಟಿ ನೀಡಲೇಬೇಕು. ಇಲ್ಲಿ ಟ್ರಾಫಿಕ್ ಕಿರಿ ಕಿರಿ ಇಲ್ಲ. ಆಫೀಸ್, ಯಾಂತ್ರಿಕ ಜೀವನದ ಜಂಜಡವಿಲ್ಲ. ಏನಿದ್ದರೂ ಬರೀ ರಿಲ್ಯಾಕ್ಸ್ ಮೂಡ್. ಕರ್ನಾಟಕದ ಅತ್ಯಂತ ಎತ್ತರದ ಬೆಟ್ಟವಾದ ಮುಳ್ಳಯ್ಯನ ಗಿರಿ, ಭಕ್ತಿಕೇಂದ್ರವಾಗಿರುವ ಬಾಬಾಬುಡನ್ ಗಿರಿ, ಸಫಾರಿ ಪ್ರಿಯರಿಗೆ ಮುತ್ತೋಡಿ ಅಭಯಾರಣ್ಯ ಹೀಗೆ ಸಾಕಷ್ಟು ಆಕರ್ಷಣೆಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಕೂಲ್ ಕೂಲ್ ಚಿಕ್ಕಮಗಳೂರು ಎಲ್ಲರಿಗೂ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.


ಮುಳ್ಳಯ್ಯನ ಗಿರಿ
ಬೆಟ್ಟಗಳ ಸಾಲು
ಸಮುದ್ರ ಮಟ್ಟದಿಂದ 6300.17 ಅಡಿ ಎತ್ತವಿರುವ ಮುಳ್ಳಯ್ಯನ ಗಿರಿ, ಬಾಬಾಬುಡನ್ ಗಿರಿ ಶ್ರೇಣಿಯ ಅತ್ಯುನ್ನತ ಶಿಖರವಾಗಿದೆ. ಚಾರಣಿಗರ ನಾಕವಾಗಿರುವ ಮುಳ್ಳಯ್ಯನ ಗಿರಿಯಲ್ಲಿ, ಬೆಳ್ಳಂಬೆಳಗ್ಗೆ ದಟ್ಟವಾಗಿ ಕವಿದ ಮಂಜಿನ ಜತೆ ಚಿಕ್ಕಪುಟ್ಟ ಬೆಟ್ಟಗಳನ್ನು ಹತ್ತಿ ಇಳಿಯುತ್ತಾ, ಕವಲು ದಾರಿಗಳಲ್ಲಿ ಸಾಗುತ್ತಾ ಟ್ರೆಕ್ಕಿಂಗ್ ಮಾಡುವ ಖುಷಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಮುಳ್ಳಯ್ಯನ ಗಿರಿಯನ್ನು ತಲುಪಲು ರಸ್ತೆಯೂ ಇದೆ. ಚಾರಣ ಮಾಡಲು ಸರ್ಪದ ಹಾದಿ ಎನ್ನುವ ಕವಲು ದಾರಿಯೂ ಇದೆ. ನಡೆಯಲು ಆಗುವುದಿಲ್ಲವೆನ್ನುವವರು ಅರ್ಧದೂರದವರೆಗೆ ತಮ್ಮ ವಾಹನವನ್ನು ಸಹ ತೆಗೆದುಕೊಂಡು ಹೋಗಬಹುದಾಗಿದೆ. ಆದರೆ ಮಠದ ತಪ್ಪಲಿನಲ್ಲಿ ಸರಿಸುಮಾರು 500 ಮೆಟ್ಟಿಲುಗಳನ್ನಂತೂ ಹತ್ತಲೇಬೇಕು. ಈ ಬೆಟ್ಟದ ಮೇಲ್ಭಾಗದಲ್ಲಿ ಮುಳ್ಳಯ್ಯ ಸ್ವಾಮಿ ಮಠವಿದೆ. ಬೆಳಗ್ಗೆ 10 ಗಂಟೆಯಾದರೂ ಸೂರ್ಯನ ದರ್ಶನವೇ ಆಗದ ಜಾಗವದು. ಎತ್ತಲೂ ಮಂಜು. ಅಲ್ಲಲ್ಲಿ ಸಿಗುವ ತಿರುವುಗಳಲ್ಲಿ ಒಂದಷ್ಟು ಹೊತ್ತು ನಿಂತು ನೋಡಿದರೆ ಸೂರ್ಯನ ಕಣ್ಣಾಮುಚ್ಚಾಲೆಯಲ್ಲಿ ಪ್ರಕೃತಿಯ ಸೌಂದರ್ಯ ನಮ್ಮ ಕಣ್ಣು ಕುಕ್ಕುತ್ತದೆ. ಪ್ರತಿ ಋತುವಿನಲ್ಲೂ ಭಿನ್ನ-ವಿಭಿನ್ನ ಸನ್ನಿವೇಶಕ್ಕೆ ಸಾಕ್ಷಿಯಗಿ ನಿಲ್ಲುತ್ತದೆ. ಕ್ಷಣ ಕ್ಷಣವೂ ಹೊಸ ಅನುಭವ ನೀಡುತ್ತದೆ. ಮುಳ್ಳಯ್ಯನಗಿರಿಗೆ ಯಾವಾಗ ಹೋದರೂ ನಿರಾಶೆ ಆಗುವುದಿಲ್ಲ. ಅಲ್ಲಿನ ಸೊಬಗೇ ಹಾಗೆ. ಮಳೆಗಾಲ, ಚಳಿಗಾಲದಲ್ಲಂತೂ ಈ ಪರ್ವತಗಳ ದೊಡ್ಡಣ್ಣನ ಸೌಂದರ್ಯ ವರ್ಣನೆಗೆ ನಿಲುಕದ್ದು.

ದತ್ತಾತ್ರೇಯ ಪೀಠ/ಬಾಬಾಬುಡನ್ ಗಿರಿ
ಚಿಕ್ಕಮಗಳೂರಿನಿಂದ 35 ಕಿ.ಮೀ.ದೂರದಲ್ಲಿರುವ ಬಾಬಾಬುಡನ್ ಗಿರಿ ಭಾವೈಕ್ಯತೆಯ ಕೇಂದ್ರ ಬಿಂದುವಾಗಿದೆ. 17ನೇ ಶತಮಾನದಲ್ಲಿದ್ದ ಬಾಬಾ ಬುಡನ್ ಎಂಬ ಮುಸ್ಲಿಂ ಸಂತನಿಂದ ಈ ಹೆಸರು ಪಡೆದುಕೊಂಡಿದ್ದ ಈ ದತ್ತಾತ್ರೇಯ ಪೀಠ ಹಿಂದೂ-ಮುಸ್ಲಿಂರಿಗೆ ಪವಿತ್ರಕ್ಷೇತ್ರವಾಗಿದೆ. ಇಲ್ಲಿ ಪ್ರತಿವರ್ಷ ದತ್ತಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಅದೃಷ್ಟವಿದ್ದರೆ ಇಲ್ಲಿ 12 ವರ್ಷಕ್ಕೊಮ್ಮೆ ಅರಳುವ `ಕುರುಂಜಿ' ಹೂವನ್ನು ವೀಕ್ಷಿಸಲು ಸಾಧ್ಯ. ಜತೆಗೆ ಈ ಪ್ರದೇಶ ಹಕ್ಕಿಗಳ ವೀಕ್ಷಣೆ ಕೈಗೊಳ್ಳಲು ಬಯಸುವವರಿಗೆ, ಪ್ರಕೃತಿ ಫೋಟೋ ತೆಗೆಯಲಿಚ್ಛಿಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಮಾಣಿಕ್ಯಧಾರಾ
ಬಾಬಾಬುಡನ್ ಗಿರಿಯಿಂದ 3 ಕಿ.ಮೀ. ದೂರದಲ್ಲಿ ಮಾಣಿಕ್ಯಧಾರಾ ಜಲಪಾತವಿದೆ. ಇಲ್ಲಿ ನೀರು ಅಕ್ಷರಶಃ ಮಾಣಿಕ್ಯದ ಧಾರೆಯಾಗಿ ಸುರಿಯುತ್ತದೆ. ಈ ಜಲಪಾತದ ಪ್ರವೇಶ ಶುಲ್ಕ ಒಬ್ಬರಿಗೆ 5 ರೂ. ಮರಗಿಡಗಳ ಸಂಧಿಯಿಂದ ಆಳೆತ್ತರದ ಕಲ್ಲುಬಂಡೆಯನ್ನು ಬಳಸಿ ಧುಮುಕುವ ಈ ಜಲಧಾರೆಯಲ್ಲಿ ಸ್ನಾನ ಮಾಡಲು ಅವಕಾಶವಿದೆ. ನೀರಾಟವನ್ನೂ ಆಡಬಹುದಾಗಿದೆ. ಒಂದು ಕಡೆ ಕಾಫಿ ಕಣಿವೆ, ಅವುಗಳ ನಡುವೆ ಕಾಣುವ ಓಕ್ ಟ್ರೀಗಳು, ಬೆಟ್ಟಗಳ ನಡುವೆ ಸೂರ್ಯನ ನೆರಳು-ಬೆಳಕಿನಾಟಗಳನ್ನು ನೋಡುತ್ತಿದ್ದರೆ ಪ್ರಕೃತಿ ಮಾತೆಯ ಮಡಲಿಲ್ಲ ನಾವೆಷ್ಟು ಚಿಕ್ಕವರು ಎನಿಸುತ್ತದೆ. ತಣ್ಣಗೆ ಬೀಸುವ ಗಾಳಿಗೆ ಮುಖವೊಡ್ಡಿ ನಿಂತರೆ ಹಾಯೆನಿಸುತ್ತದೆ. ಮಾಣಿಕ್ಯಧಾರ ಹತ್ತಿರದಲ್ಲೇ ಗಾಳಿಕೆರೆ, ಅಕ್ಕಯ್ಯಮ್ಮನ ಬೆಟ್ಟ ಅನೇಕ ಪ್ರವಾಸಿ ಸ್ಥಳಗಳಿವೆ.

ಮುತ್ತೋಡಿ ಅಭಯಾರಣ್ಯಸಫಾರಿ ಹೋಗಲು ಇಷ್ಟಪಡುವವರಿಗೆ ಮುತ್ತೋಡಿ ಹೇಳಿ ಮಾಡಿಸಿದ ಜಾಗವಾಗಿದೆ. ವನ್ಯಜೀವಿಗಳ ತಾಣವಾಗಿರುವ ಇದು, 1968 ಕಿ.ಮೀ. ವಿಸ್ತೀರ್ಣ ಹೊಂದಿದೆ. ಇಲ್ಲಿ ಅನೇಕ ವಿಧವಾದ ಬೆಲೆ ಬಾಳುವ ಮರಗಳಿವೆ. ಹುಲಿ, ಇಂಡಿಯನ್ ಕಾಡೆಮ್ಮೆ, ಪಟ್ಟೆಕಿರುಬ, ದೈತ್ಯ ಮರಗಳ ಕಾಣಸಿಗುವ ಅಪರೂಪದ ಹಲ್ಲಿಗಳನ್ನಿಲ್ಲಿ ನೋಡಬಹುದು. ಜತೆಗೆ, ಇಲ್ಲಿ ಪಕ್ಷಿಗಳು, ಚಿಟ್ಟೆ, ಉರಗಗಳು ಯಥೇಚ್ಛವಾಗಿದೆ. ಪಶ್ಚಿಮ ಘಟ್ಟಗಳಲ್ಲೇ ವಿಶೇಷವಾಗಿ ಕಂಡುಬರುವ 250ಕ್ಕೂ ಹೆಚ್ಚು ಪಕ್ಷಿಪ್ರಭೇದಗಳನ್ನು ಇಲ್ಲಿ ಕಾಣಬಹುದು. ಈ ಅಭಯಾರಣ್ಯಕ್ಕೆ ಒಬ್ಬರಿಗೆ 400 ರೂ. ಪ್ರವೇಶ ಶುಲ್ಕವಿದೆ.

ಸೂರ್ಯಾಸ್ತ
ಹಿರೆಕೊಳಲು ಕೆರೆ
ಮುಳ್ಳಯ್ಯನ ಗಿರಿಗೆ ಹೋಗುವ ದಾರಿಯ ಆಸುಪಾಸಿನಲ್ಲೇ ಈ ಕೆರೆ ಸಿಗುತ್ತದೆ. ಇಲ್ಲಿ ಡಾ.ವಿಷ್ಣುವರ್ಧನ್ ಸೇರಿದಂತೆ ಹಲವಾರು ಪ್ರಖ್ಯಾತ ನಟರ ಚಿತ್ರಗಳ ಶೂಟಿಂಗ್ ಇಲ್ಲಿ ನಡೆದಿದೆ. ಜತೆಗೆ ಸಂಜೆ ಸೂರ್ಯಾಸ್ತವನ್ನು ನೋಡಿಕೊಂಡು ಕೆರೆ ದಡದಲ್ಲಿ ತಣ್ಣನೆ ಬೀಸುವ ಗಾಳಿಯಲ್ಲಿ ಒಂದು ಲಾಂಗ್ ವಾಕ್ ಹೋಗಲು ಈ ಜಾಗ ಪ್ರಿಯವಾಗುತ್ತದೆ. ಕೊಕ್ಕರೆ, ಬಾತುಕೋಳಿಯಂತ ಹಕ್ಕಿಗಳನ್ನು ನೋಡುತ್ತಾ ಇಲ್ಲಿ ಫೋಟೋಗ್ರಫಿ ಮಾಡಬಹುದಾಗಿದೆ.
ಇನ್ನುಳಿದಂತೆ ಇತ್ತೀಚಗಷ್ಟೇ ಅಭಿವೃದ್ಧಿಪಡಿಸಲಾಗಿರುವ ಸಿರಿಮನೆ ರೆಸಾರ್ಟ್ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಸಿರು, ಬಣ್ಣ ಬಣ್ಣದ ಹೂಗಳನ್ನು ಹೊದ್ದು ಮಲಗಿರುವ ಯುವತಿಯ ಪಕ್ಕ ನಿಂತು ಫೋಟೋ ತೆಗೆಸಿಕೊಳ್ಳದಿದ್ದರೆ ಮನಸ್ಸಿಗೆ ಸಮಾಧಾನವಂತೂ ಖಂಡಿತ ಇಲ್ಲ. ಇನ್ನು ನಗರದೊಳಗೆ ಇರುವ ಮಹಾತ್ಮಾ ಗಾಂಧಿ ಪಾರ್ಕ್‍ನಲ್ಲಿ ಮನರಂಜನೆಗಾಗಿ ಸಂಗೀತ ಕಾರಂಜಿ, ಪುಟಾಣಿ ರೈಲು, ತಾವರೆ ಕೊಳ, ಔಷಧಿ ವನ, ಬಾಲವನಗಳನ್ನು ನಿರ್ಮಿಸಲಾಗಿದೆ. ಸಂಜೆ ಸಮಯವಿದ್ದರೆ ಅದನ್ನು ನೋಡಿಕೊಂಡು ಬರಬಹುದು.

ಇತರ ಆಕರ್ಷಣೆಗಳು
ಚಿಕ್ಕಮಗಳೂರಿನಿಂದ ಆಗ್ನೇಯ ದಿಕ್ಕಿಗೆ 25 ಕಿ.ಮೀ. ದೂರದಲ್ಲಿ ಬೆಳವಾಡಿ ವೀರನಾರಾಯಣ ಸ್ವಾಮಿ ದೇವಸ್ಥಾನವಿದೆ. ಇದು ಅದ್ಭುತ ಹೊಯ್ಸಳ ಶಿಲ್ಪಕಲೆಯನ್ನು ಒಳಗೊಂಡಿದೆ. ವೀರನಾರಾಯಣ, ಯೋಗಾನರಸಿಂಹ, ವೇಣುಗೋಪಾಲ ಸ್ವಾಮಿಯ ವಿಗ್ರಹಗಳನ್ನು ಒಂದೇ ಆಲಯ ಸಂಕೀರ್ಣದೊಳಗೆ ಪ್ರತಿಷ್ಠಾಪಿಸಿರುವ ವಿಖ್ಯಾತ ತ್ರಿಕೂಟ ದೇವಸ್ಥಾನ ನೋಡಲು ಭವ್ಯವಾಗಿದೆ. ಇದೇ ಗ್ರಾಮದಲ್ಲಿ ಉದ್ಭವ ಗಣಪತಿ ದೇವಾಲಯವಿದ್ದು ಭಕ್ತಿಯ ಕೇಂದ್ರವಾಗಿದೆ. ಪಟ್ಟಣದಿಂದ 20 ಕಿ.ಮೀ. ದೂರದಲ್ಲಿ ಅಯ್ಯನಕೆರೆ ಸರೋವರವಿದೆ. ಕ್ಯಾಂಪಿಂಗ್ ಹಾಗೂ ಮೀನುಗಾರಿಕೆಗೆ ಇದು ಸೂಕ್ತ ಸ್ಥಳವಾಗಿದೆ. ಇದರ ಜತೆ ಶೃಂಗೇರಿ, ಹೊರನಾಡು, ಕೆಮ್ಮಣ್ಣುಗುಂಡಿಯಂತಹ ಸಾಕಷ್ಟು ಪ್ರವಾಸಿ ತಾಣಗಳು ಚಿಕ್ಕಮಗಳೂರಿನ ಸುತ್ತಮುತ್ತವೇ ಇದೆ. ನಾಲ್ಕೈದು ದಿನದ ಟ್ರಿಪ್ ಪ್ಲ್ಯಾನ್ ಮಾಡಿಕೊಂಡರೆ ಎಲ್ಲ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಶಾಪಿಂಗ್: ಚಿಕ್ಕಮಗಳೂರಿನಲ್ಲಿ ಶಾಪಿಂಗ್ ಪ್ರಿಯರಿಗೆ ಮೋಸವಿಲ್ಲ. ಇಲ್ಲಿರುವ ಎಂ.ಜಿ.ರೋಡ್ ಬೆಂಗಳೂರಿನ ಎಂ.ಜಿ.ರೋಡನ್ನು ನೆನಪಿಸುವುದರಲ್ಲಿ ಡೌಟೇ ಇಲ್ಲ. ಯಾವಾಗಲೂ ಬಿಜಿಯಾಗಿರುವ ಇದು ಸಂಜೆಯಾಗುತ್ತಿದ್ದಂತೆ ಕಳೆಕಟ್ಟುತ್ತದೆ. ವಿವಿಧ ವಿನ್ಯಾಸದ, ಎಲ್ಲ ದರಗಳ ವೆಸ್ಟರ್ನ್, ಟ್ರೆಡಿಷನಲ್ ವೇರ್‍ಗಳು ಇಲ್ಲಿ ಸಿಗುತ್ತದೆ.

ಹೊಟ್ಟೆಪಾಡು: ಚಿಕ್ಕಮಗಳೂರಿಗೆ ಹೋದವರು ಮಿಸ್ ಮಾಡಲೇ ಬಾರದ ಇನ್ನೊಂದು ಜಾಗವೆಂದರೆ ಫುಡ್ ಸ್ಟ್ರೀಟ್. ಇಲ್ಲಿ ಸಿಗುವ ಚಾಟ್ಸ್, ಅಕ್ಕಿರೊಟ್ಟಿ ಎಲ್ಲವೂ ಸಕತ್ ರುಚಿಯಾಗಿರುತ್ತವೆ. ಕಾಫಿ ನಾಡಲ್ಲಿ ಅಪ್ಪಿತಪ್ಪಿಯೂ ಕಾಫಿ ಮಿಸ್ ಮಾಡಬೇಡಿ.

ವಸತಿ: ರಾಜ್ಯದ ಮುಖ್ಯ ಪ್ರವಾಸಿ ಜಿಲ್ಲೆಯಾಗಿರುವ ಚಿಕ್ಕಮಗಳೂರಿನಲ್ಲಿ ಸಾಕಷ್ಟು ರೆಸಾರ್ಟ್‍ಗಳು. ಅವುಗಳು ದುಬಾರಿ ಎನಿಸಿದರೆ, ಸರ್ಕಾರದ ಪಿಡಬ್ಲ್ಯೂಡಿ ಗೇಸ್ಟ್ ಹೌಸ್ ಇದೆ. ಅಲ್ಲಿ ನೀವು ಮೊದಲೇ ರೂಂ ಬುಕ್ ಮಾಡಿದ್ದರೆ ಅತ್ಯಂತ ಕಡಿಮೆ ದರದಲ್ಲಿ ವಸತಿ ಸಿಗುತ್ತದೆ. ಊಟಕ್ಕೆ ದೊಡ್ಡ ದೊಡ್ಡ ಹೊಟೆಲ್‍ಗಳನ್ನು ಹುಡುಕುವ ಬದಲು, ಮೆಸ್‍ಗಳಿಗೆ ಹೋಗಬಹುದು. ಇಲ್ಲಿ ರುಚಿಕಟ್ಟಾಗಿ ಹೊಟ್ಟೆ ತುಂಬ ಊಟ ಮುಗಿಸಬಹುದು.

ಓಡಾಟಕ್ಕೆ: ನಿಮ್ಮ ಸ್ವಂತ ವಾಹನದಲ್ಲೇ ಹೋದರೂ ಜಿಲ್ಲೆಯೊಳಗೆ ಓಡಾಡಲು ಅಲ್ಲಿನ ಸ್ಥಳೀಯ ಕಾರುಗಳನ್ನೇ ಬುಕ್ ಮಾಡಿಕೊಳ್ಳುವುದು ಸೂಕ್ತ. ಏಕೆಂದರೆ ಬಾಬಾಬುಡನ್ ಗಿರಿ ಬೆಟ್ಟದ ರಸ್ತೆಗಳು ತುಂಬಾ ಕಡಿದಾಗಿದೆ. ತಿರುವುಗಳು ತುಂಬಾ ಇರುತ್ತದೆ. ಅಲ್ಲಿನ ಡ್ರೈವರ್‍ಗಳು ಆ ರೋಡ್‍ಗಳಲ್ಲಿ ಎಕ್ಸ್‍ಪರ್ಟ್ ಆಗಿರುವುದರಿಂದ ಸ್ಪಲ್ಪ ದುಬಾರಿ ಎನಿಸಿದರೂ ಆರಾಮಾಗಿ ಹೋಗಿ ಬರಬಹುದು.

ಸುತ್ತೋರಿಗೆ ಒಂದಿಷ್ಟು ಟಿಪ್ಸ್
  • ಬಾಬಾಬುಡನ್ ಗಿರಿ, ಮುಳ್ಳಯ್ಯನ ಗಿರಿಗೆ ಟ್ರೆಕ್ಕಿಂಗ್ ಹೋಗುವವರು ನೀರಿನ ಬಾಟಲ್, ಹಣ್ಣು, ಡ್ರೈ ಫ್ರೂಟ್ಸ್, ಹಣ್ಣುಗಳನ್ನು, ಬಿಸ್ಕತ್‍ನಂತಹ ಲೈಟ್ ಫುಡ್‍ಗಳನ್ನು ತಪ್ಪದೇ ತೆಗೆದುಕೊಂಡು ಹೋಗಿ.
  • ಟ್ರೆಕ್ಕಿಂಗ್‍ಗೆ ಮುಂಜಾನೆ ಅತ್ಯುತ್ತಮ ಸಮಯವಾದರೂ ಬೆಳ್ಳಂಬೆಳಗ್ಗೆ 3-4 ಗಂಟೆಗೆಲ್ಲ  ಹೋಗುವ ಯೋಚನೆ ಬೇಡ. ಬೆಳಗ್ಗೆ ಇಬ್ಬನಿ ತಬ್ಬಿರುವುದರಿಂದ ರಸ್ತೆಯೂ ಕಾಣುವುದಿಲ್ಲ, ಚಾರಣದ ಮಜವೂ ಸಿಗುವುದಿಲ್ಲ.
  • ಸಿಟಿಯಲ್ಲಿ ಬಿಸಿಲಿದೆ, ಸೆಕೆ ಎಂದು ಚಾರಣಿಗರು ಸ್ಪೆಟರ್, ಶಾಲ್ ತೆಗೆದುಕೊಂಡು ಹೋಗದಿದ್ದರೆ ಅರ್ಧ ಬೆಟ್ಟ ಹತ್ತುವಷ್ಟರಲ್ಲಿ ಕಷ್ಟಪಡಬೇಕಾದಿತು. ಬೆಟ್ಟದ ಮೇಲೆ ಅಷ್ಟೊಂದು ಗಾಳಿ, ಚಳಿಯಿರುತ್ತದೆ.
  • ಚಪ್ಪಲಿ ಆರಾಮವೆನಿಸಿದರೂ ಸುತ್ತಾಟಕ್ಕೆ ಶೂ ಬೆಸ್ಟ್.
  • ಮಾಣಿಕ್ಯಧಾರದಲ್ಲಿ ಸ್ನಾನ ಮಾಡಲು, ಆಟವಾಡಲು ಬಯಸುವವರು ಇನ್ನೊಂದು ಜತೆ ಬಟ್ಟೆ ಕೊಂಡೊಯ್ಯುವುದು ಉತ್ತಮ.



SHARE

Author: verified_user

2 comments:

  1. Very Nice Post, Chikkamagaluru very best place to visit

    ReplyDelete
    Replies
    1. Thank You. Visit again to www.karnatakabest.com

      Delete