Showing posts with label ಲಹರಿ. Show all posts
Showing posts with label ಲಹರಿ. Show all posts

Monday, 13 February 2017

ನನ್ ಫಸ್ಟ್ ಲವ್ ಸ್ಟೋರಿ 5ನೇ ಕ್ಲಾಸಲ್ಲಿ ಶುರುವಾಯ್ತು!

ನನ್ ಫಸ್ಟ್ ಲವ್ ಸ್ಟೋರಿ 5ನೇ ಕ್ಲಾಸಲ್ಲಿ ಶುರುವಾಯ್ತು!


(2012ರಲ್ಲಿ ಒನ್ ಇಂಡಿಯಾಕ್ಕಾಗಿ ನೆನಪಿಸಿಕೊಂಡು ಬರೆದ ಸತ್ಯ ಘಟನೆ :-) )

ಹಲವು ವರ್ಷಗಳ ನಂತ್ರ ಅನಿರೀಕ್ಷಿತವಾಗಿ ರಿಲೇಷನ್ ಹುಡುಗಿ ಮಮತಾ ಎದುರಿಗೆ ಸಿಕ್ಕಿದಾಗ ಸುಮ್ಮಗೆ ಕೇಳಿದ್ದೆ.

ಲಾವಣ್ಯ ಹೇಗಿದ್ದಾಳೆ? ಅಂತ.


ಅವ್ಳಿಗೆ ಎಷ್ಟು ಅಚ್ಚರಿಯಾಯಿತೆಂದರೆ... "ಅಯ್ಯೋ.. ಅಣ್ಣಾ, ನೀನಿನ್ನು ಅವಳ್ನ ಮರೆತಿಲ್ವಾ" ಅಂತ ಹೇಳಿದ್ಮೇಳೆ "ಅವ್ಳಿಗೆ ಕಳೆದ ವರ್ಷ ಮದುವೆಯಾಯ್ತು. ಗಂಡ ಮಿಲಿಟಿರಿಯಲ್ಲಿದ್ದಾನೆ" ಅನ್ನೋ ಬಾಂಬ್ ಕೂಡ ಹಾಕಿದಳು.

ಆದ್ರೆ ಆ ಬಾಂಬ್ ನನ್ನೆದೆಯಲ್ಲಿ ಸ್ಪೋಟಿಸಲಿಲ್ಲ.

ಲಾವಣ್ಯ ಅಂದ್ರೆ ನನ್ನ ಮೊದಲ ಲವ್.

ಐದನೇ ಕ್ಲಾಸ್‌ನಲ್ಲಿ ನನಗೆ ಗೊತ್ತಿಲ್ಲದೇ ಸುರುವಾದ ಡವ್.

ಆಗ ಪ್ರೀತಿ ಪ್ರೇಮ ಪ್ರಣಯ ಅಂದ್ರೆ ಏನಂತ ಸರಿಯಾಗಿ ಗೊತ್ತಿರದ ವಯಸ್ಸು.

ಆದ್ರೂ ನಮ್ಮ ಲವ್ ಮದುವೆಯವರೆಗೂ ಬಂದಿತ್ತು!

ಮೂಲ ಊರು ಮಡಿಕೇರಿಯಾದರೂ ನಾನು ಹುಟ್ಟಿದ್ಮೆಲೆ ನಮ್ ಫ್ಯಾಮಿಲಿ ನೆಲೆ ನಿಂತದ್ದು ಪುತ್ತೂರಲ್ಲಿ. ಎಷ್ಟೋ ವರ್ಷಗಳಿಗೊಮ್ಮೆ ಅಜ್ಜಿ ಮನೆ ನೆಪದಲ್ಲಿ ಮಡಿಕೇರಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಯಾಕೋ ಗೊತ್ತಿಲ್ಲ. ಮಡಿಕೇರಿಯಲ್ಲಿ ಅತ್ತೆ ಮನೆಗೆ ಹೋಗುವುದೆಂದರೆ ಭಾರಿ ಖುಷಿ. ಅಲ್ಲಿ ಮನು ಮಮತಾ(ಮಾಮನ ಮಕ್ಕಳು) ರೊಂದಿಗೆ ಆಟವಾಡುವ ಖುಷಿನೋ ಗೊತ್ತಿಲ್ಲ.

ನಾನು ಸಣ್ಣವನಿದ್ದಾಗ ಅಂದ್ರೆ 5ನೇ ಕ್ಲಾಸ್‌ನಲ್ಲಿ ಮಡಿಕೇರಿಯ ಗೋಣಿಕೊಪ್ಪಲು ಸಮೀಪದ ಅಮ್ಮತಿ ಎಂಬಲ್ಲಿಗೆ ಹೋಗಿದ್ದೆ. ಅದು ನನ್ನ ಅತ್ತೆಯ ಮನೆ. ಅಂದ್ರೆ ಅಪ್ಪನ ತಂಗಿ ಮನೆ.

ಅಲ್ಲಿನ ಗದ್ದೆ, ಕುಬ್ಜ ಕಾಫಿ ಗಿಡಗಳು, ಒಂದು ಬೃಹತ್ ಮರದಲ್ಲಿ ಹತ್ತಿಪ್ಪತ್ತು ದೊಡ್ಡ ಜೇನುಗೂಡುಗಳು.

...ಹೀಗೆ ಅಜ್ಜಿ ಮನೆಯ ನೆನಪು ಜೇನಿಗಿಂತ ಹೆಚ್ಚು ಸಿಹಿ. ನಾವು ಮಾಮನ ಪಕ್ಕದ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೇವು.

ಆ ಮನೆಗೆ ಲಾವಣ್ಯ ಎಂಬ ಆರನೇ ಕ್ಲಾಸ್‌ನ ಹುಡುಗಿ ಕೂಡ ನಮ್ಮ ತರಹನೇ ನೆಂಟರ ಮನೆಗೆಂದು ಬಂದಿದ್ದಳು. ಮೊದಲ ದಿನವೇ ನನಗವಳು ಇಷ್ಟ(?)ವಾಗಿದ್ದಳು. ಮೊದ್ಲಿಗೆ ಒಂದೆರಡು ದಿನ ಸುಮ್ಮನೆ ಸೈಲೆಂಟಾಗಿ ಬಿಟ್ಟಿದಳು. ಮೊದಲು ಅವಳು ಹೇಗಿದ್ದಳು ಅಂತ ವಿವರಿಸಬೇಕು. ಅವರ ಮನೆಯವರು ಕೊಂಚ ಶ್ರೀಮಂತರಾಗಿರಬೇಕು. ತುಂಬಾ ಮಾಡರ್ನ್‌ ಆಗಿದ್ದಳು. ಪುಟ್ಟ ಜೀನ್ಸ್ ಚಡ್ಡಿ, ಕಿವಿಯಲ್ಲಿ ರಿಂಗ್, ವೈಟ್ ಶಾರ್ಟ್ ಶರ್ಟ್, ಬಿಳಿ ಬಣ್ಣ, ನನಗಿಂತ ಉದ್ದವಾಗಿದ್ದ ಲಾವಣ್ಯ ಮುದ್ದಾಗಿ ಕಾಣುತ್ತಿದ್ದಳು.

ಕ್ಷಮಿಸಿ ಹೆಚ್ಚು ನೆನಪಿಲ್ಲ! ಒಂದೆರಡು ದಿನಗಳಲ್ಲಿ ಊರಿಂದ ಬಂದ ನನ್ನೊಂದಿಗೆ ತುಂಬಾ ಆತ್ಮೀಯಳಾಗಿಬಿಟ್ಟಳು. ಎಷ್ಟೆಂದರೆ ಉಳಿದ ಮಕ್ಕಳಿಗೆ ಅಸೂಯೆಯಾಗುವಷ್ಟು. ಆ ಗದ್ದೆ ಬದುಗಳಲ್ಲಿ, ರಸ್ತೆಯ ಬದಿಯಲ್ಲಿ ಸುಮ್ಮಗೆ ನಡೆಯುತ್ತಿದ್ದೇವು. ಆ ನಾಲ್ಕು ದಿನದಲ್ಲಿ ಎಷ್ಟು ಸುತ್ತಾಡಿದ್ದೇವೆ, ಎಷ್ಟು ಮಾತನಾಡಿದ್ದೇವೆ ಅಂದ್ರೆ ಹೇಳೋಕ್ಕಾಗಲ್ಲ.

ನಿಮಗೀಗ ಕೋಪ ಬಂದಿರಬಹುದು. ಬಾಲ್ಯದ ಮಕ್ಕಳ ಆಟವನ್ನು ಲವ್‌ ಅನ್ನೋ ಹೆಸರಿನಲ್ಲಿ ಕರೆದದ್ದು ಉದ್ಧಟ್ಟತನದ ಪರಮಾವಧಿ ಅಂತ ಕರೀಬೇಡಿ. ಕತೆ ಮುಗಿದಿಲ್ಲ.

ಅದೊಂದು ದಿನ. ರಸ್ತೆ, ಗದ್ದೆ ಸುತ್ತಾಡಿಕೊಂಡು ಬಂದು ಸುಸ್ತಾಗಿ ಮನೆಯ ಜಗಲಿಯಲ್ಲಿ ಕುಳಿತುಕೊಂಡೆವು. ಅತ್ತೆಮಾವ ಎಲ್ಲೋ ಹೋಗಿದ್ದರು. ಅಲ್ಲಿ ನಾವಿಬ್ಬರೇ ಇದ್ದೇವು!

ಆ ಸಮಯದಲ್ಲಿ ನಾವು ಮಾತನಾಡಿದ್ದು ನಮ್ ಮದುವೆಯ ಬಗ್ಗೆ..!

ನೀನು ಯಾವಾಗ ಮನೆಗೆ ಹೋಗೋದು. ನಂಗೆ ಬೇಜಾರಾಗ್ತಿದೆ ಅಂತ ಲಾವಣ್ಯ ಅಳು ಮುಖ ಮಾಡಿಕೊಂಡ್ಳು. ಆ ಸಮಯದಲ್ಲಿ ನಮ್ ಮನಸ್ಸಿಗೆ ಹೊಳೆದದ್ದು ಮದುವೆ. ಸರಿ ಮದುವೆ ಕುರಿತು ತುಂಬಾ ಹೊತ್ತು ಮಾತನಾಡಿದೆವು. ಕೊನೆವರೆಗೂ ಜೊತೆಯಾಗಿರೋಣ. ಮದುವೆಯಾದ್ಮೆಳೆ ಜಗಳವಾಡಬಾರ್ದು, ಯಾವ ಕಲ್ಯಾಣಮಂಟಪದಲ್ಲಿ ಮದುವೆಯಾಗೋದು... ಹೀಗೆ ಒಂದಿಷ್ಟು ಕನಸು ಕಾಣುತ್ತ ಮಾತನಾಡಿದ್ದೇವು.

ಆಮೇಲೆ ಏನೋ ಜ್ಞಾನೋದಯವಾದಂತೆ ಹೇ ಬೇಡ ಇಷ್ಟು ಬೇಗ ಮದುವೆಯಾಗೋದು. ನಾವು ಚೆನ್ನಾಗಿ ಓದಿ, ಒಳ್ಳೆ ಕೆಲಸಕ್ಕೆ ಸೇರಿ, ದೊಡ್ಡ ಜನವಾಗಿ ಆಮೇಲೆ ಮದುವೆಯಾಗೋಣ ಅಂತ ಮಾತನಾಡಿಕೊಂಡೆವು. ಜಗಲಿಯಲ್ಲಿ ಕುಳಿತು ಮಾತನಾಡಿದ್ದು ಸಾಕೆನಿಸಿ ಮತ್ತೆ ಆಟವಾಡಲು ಹೋದೆವು..

.....ಸಂಜೆ ಮನೆಗೆ ಮರಳಿದಾಗ ಅದೇ ಜಗಲಿಯಲ್ಲಿ ಮಾವ, ಅತ್ತೆ, ಅಜ್ಜಿ, ಅಜ್ಜ ಎಲ್ಲ ಕೂತು ಜೋರಾಗಿ ನಗುತ್ತ ಮಾತನಾಡುತ್ತಿದ್ದರು.

ಆಮೇಲೆ ನಮಗೆ ಗೊತ್ತಾದ ವಿಷ್ಯವೆಂದ್ರೆ,

ನಾವಿಬ್ಬರು ಮಧ್ಯಾಹ್ನ ಮದುವೆ ಮಾತುಕತೆಯಾಡುವಾಗ ಒಳಗೆ ಮಲಗಿಕೊಂಡಿದ್ದ ಅಜ್ಜಿ ಎಲ್ಲಾ ಕೇಳಿಸಿಕೊಂಡಿದ್ರಂತೆ. ಅದನ್ನು ಎಲ್ಲರಿಗೂ ಹೇಳಿ ಬೊಚ್ಚು ಬಾಯಿಯಿಂದ ನಗುತ್ತಿದ್ದರು. ಅವ್ರ ಹಲ್ಲು ಉದುರಿಸಬೇಕೆಂದು ಆಗ ಅನಿಸಿತ್ತೋ ಇಲ್ವೋ ಅನ್ನೋದು ಈಗ ನೆನಪಿಲ್ಲ!

ನನ್ನನ್ನು ಹತ್ತಿರ ಕೂರಿಸಿಕೊಂಡ ಮಾಮಿ "ಇವಳನ್ನು ಮದುವೆಯಾಗ್ತಿಯಾ? ಅಪ್ಪನಿಗೆ ಫೋನ್‌ ಮಾಡಿ ಹೇಳ್ಬೇಕಾ? ಅಂತ ಅತ್ತೆ ತಮಾಷೆ ಮಾಡತೊಡಗಿದಾಗ ಅವಳು ಅತ್ತಳು. ಯಾಕೋ ಗೊತ್ತಿಲ್ಲ ಅವ್ಳು ಅಳೋದನ್ನು ನೋಡಿ ನಂಗೂ ಅಳು ಬಂದು ಮನೆಯೊಳಗೆ ಓಡಿದೆ.

Friday, 9 December 2016

ನೆನಪಿನ ತೋರಣ: ಬಾಲ್ಯ ಲೀಲೆಗಳು!!!

ನೆನಪಿನ ತೋರಣ: ಬಾಲ್ಯ ಲೀಲೆಗಳು!!!

ನಿನಗೆ ಶೇಷಮ್ಮ ಟೀಚರ್‌ನ ನಂಬರ್‌ ಬೇಕಾ? ಅಂತ ಸ್ನೇಹಿತನೊಬ್ಬ ಕೇಳಿದಾಗ ನನಗೆ ಅಚ್ಚರಿ. ಸುಮಾರು 12 ವರ್ಷದ ಹಿಂದೆ ನನಗೆ ಪ್ರಾಥಮಿಕ ಶಿಕ್ಷಣ ಕಲಿಸಿದ ಟೀಚರ್‌ ಅವರು. ಬಾಲ್ಯವೆಂದರೆ ಹಾಗೇ ತಾನೇ. ಅಲ್ಲಿ ಟೀಚರ್‌, ಮೇಸ್ಟ್ರು, ಊರು, ಕಾಡುಗುಡ್ಡ,  ಅಮ್ಮನ ಪ್ರೀತಿ, ಗುರುಗಳು ನೀಡಿದ್ದ ಬೆತ್ತದ ಏಟು, ಸ್ನೇಹಿತನ ಮುನಿಸು, ತಂಟೆ, ತಕರಾರು ಹೀಗೆ ನೆನಪುಗಳ ಜಾತ್ರೆ. ಎಲ್ಲರ ಭೀತಿಯಂತೆ ನನಗೆ ನನ್ನೂರು ಏನೋ ಕಳೆದುಕೊಂಡಂತೆ ಅನಿಸುತ್ತಿಲ್ಲ. ಊರು ವೃದ್ಧಾಶ್ರಮವೂ ಆಗಿಲ್ಲ. ಒಂದಿಷ್ಟು ಅಭಿವೃದ್ಧಿ ಬಿಟ್ಟರೆ ಹಿಂದಿನ ಹಾಗೇ ಇದೆ.


ಬಾಲ್ಯದ ಕನವರಿಕೆಯಿಂದ ಶೇಷಮ್ಮ ಟೀಚರ್‌ಗೆ ಫೋನ್‌ ಮಾಡಿದೆ. ಮನಸಿನ ತುಂಬಾ ಬಾಲ್ಯದ ಪ್ರವೀಣನೇ ತುಂಬಿಕೊಂಡಿದ್ದ. ಹೆಸರು ಹೇಳಿದಾಕ್ಷಣ ಗುರುತು ಹಿಡಿದು ಮಾತನಾಡಿದ್ದೇ ಮಾತನಾಡಿದ್ದು. ಅಮ್ಮ ಹೇಗಿದ್ದಾರೆ? ಅವರು ಹೇಗಿದ್ದಾರೆ? ಇವರು ಹೇಗಿದ್ದಾರೆ ಅಂತ ಇಡೀ ನನ್ನೂರಿನ ಆರೋಗ್ಯ ವಿಚಾರಿಸಿಕೊಂಡರು. ನಾನು ತಲುಪಿದ ನೆಲೆಯನ್ನು ಕೇಳಿ ಸಂತೋಷ ಪಟ್ಟರು. ಎಲ್ಲ ಅಬ್ಬೆಪಾರಿಯಾಗುತ್ತನೆಂದುಕೊಂಡಿದ್ದ  ಹುಡುಗ ಇವನೇನಾ ಅಂತ ಅನಿಸಿರಬೇಕು.


ಶೇಷಮ್ಮ ಟೀಚರ್‌ ಎಂದರೆ ಮನದಲ್ಲಿ ಮೂಡುವುದು ಹಲವು ಮುಖಗಳು. ಕೋಪಗೊಂಡಾಗ ದುರ್ಗೆ. ಪ್ರೀತಿಯಿಂದ ಮಾತನಾಡುವಾಗ ಅಮ್ಮ. ಲೆಕ್ಕ ಹೇಳಿಕೊಡುವುದರಲ್ಲಿ ಸರಸ್ವತಿ. ಕ್ಲಾಸ್‌ನಲ್ಲಿ ನಾನು ಏನು ತಪ್ಪು ಮಾಡಿದರೂ ಮನೆಗೆ ಬಂದು ದೂರು ಹೇಳುತ್ತಿದ್ದರು. ನಾನು ಏಳನೇ ತರಗತಿ ಮುಗಿಸೋವರೆಗೂ ಅವರಿಗೆ ಮದುವೆಯಾಗಿರಲ್ಲಿಲ್ಲ. ನಂತರ ಮದುವೆಯಾಗಿ ದೂರದೂರಿಗೆ ಟ್ರಾನ್ಸ್‌ಫಾರ್‌ ಆಗಿದ್ದರು.  ಇನ್ನು ಇವರು ನೋಡಲು ಸಿಗಲಾರರು ಅಂತ ಅಂದುಕೊಂಡಿದ್ದೆ. 10-12 ವರ್ಷಗಳ ನಂತರ ಮಾತನಾಡುವ ಅವಕಾಶ ಒದಗಿ ಬಂದಿತ್ತು. ಹೊಡೆಯುವುದನ್ನು ಹೊರತು ಪಡಿಸಿದರೆ  ಶೇಷಮ್ಮ ಟೀಚರ್‌ ಕೆಟ್ಟವರಾಗಿರಲ್ಲಿಲ್ಲ. ಶಾರದ ಪೂಜೆಯಂದು ಅವರ ಮಡಿಲಲ್ಲಿ ಕುಳಿತುಕೊಂಡು ಅಕ್ಕಿಯ ಮೇಲೆ ಮೊದಲಾಕ್ಷರ ಕಲಿತಿದ್ದೆ. ಪ್ರವೀಣ್‌ ಅನ್ನೋ ಹೆಸರಿಗೆ ಚಂದ್ರನನ್ನು ಸೇರಿಸಿದ್ದು ಕೂಡ ಇವರೇ.


ನನಗಿನ್ನೂ ನೆನಪಿದೆ. ನಾನು ಶಾಲೆಗೆ ಹೋಗುವಾಗ ಬ್ಯಾಗ್‌ನಲ್ಲಿ ಪಾಠ ಪುಸ್ತಕಕ್ಕಿಂತ ಚಂದಮಾಮ, ಬಾಲಮಂಗಳ ಮತ್ತು ಒಂದಿಷ್ಟು ಕಸ ಯಾವತ್ತೂ ಇರುತ್ತಿತ್ತು. ಟೀಚರ್‌ ನನ್ನ ಬ್ಯಾಗನ್ನು ಮೇಜಿನ ಮೇಲೆ ಸುರಿದು ಅದರಲ್ಲಿದ್ದ ಹರಿದ ಕತೆ ಪುಸ್ತಕಗಳನ್ನು ಎಲ್ಲರಿಗೆ ತೋರಿಸಿ ಅಪಹಾಸ್ಯ ಮಾಡುತ್ತಿದ್ದರು.  `ಇವನ ಚೀಲದಲ್ಲಿ ಪಾಠ ಪುಸ್ತಕಕ್ಕಿಂತ ಬಾಲಮಂಗಳ, ಚಂದಮಾಮ, ಕಸವೇ ಜಾಸ್ತಿ’ ಅಂತ ದಿನಾ ಅಮ್ಮನ ಬಳಿ ಬಂದು ದೂರು ಹೇಳುತ್ತಿದ್ದಳು. ಅಮ್ಮ ಇಂತಹ ದೂರುಗಳಿಗೆ ಕಿವುಡಿಯಾಗುತ್ತಿದ್ದಳು. ಪಕ್ಕದ ಮನೆಯ ರಶ್ಮಿಗೆ ಹೋಲಿಸಿ `ಅವಳು ನೋಡು ಎಷ್ಟು ಜಾಣ ಹುಡುಗಿ. ಕ್ಲಾಸ್‌ಗೆ ಯಾವಾಗಲೂ ಫಸ್ಟ್‌. ಇವನನ್ನು ಕೂಡ ಅದೇರೀತಿ ಕುಳಿತು ಓದೋಕೆ ಹೇಳಿ ಅಂತ’ ಅಮ್ಮನಿಗೆ ಹೇಳುತ್ತಿದ್ದರು. ರಶ್ಮಿಗೆ ನನ್ನನ್ನು ಹೋಲಿಸುವಾಗ ಅಮ್ಮ ಕೋಪಗೊಳ್ಳುತ್ತಿದ್ದಳು. ಅವಳಿಗೇನು ಅಪ್ಪ  ಸರ್ಕಾರಿ ಕೆಲಸದಲ್ಲಿದ್ದಾರೆ. ದುಡ್ಡು ವಿದ್ಯೆ ಎರಡೂ ಇದೆ. ಹೇಳಿ ಕೊಡ್ತಾರೆ’ ಅಂತ ಅಮ್ಮ ಸುಮ್ಮನಾಗುತ್ತಿದ್ದಳು.


ಇಷ್ಟಕ್ಕೂ ನನಗೆ ಕಥೆ ಪುಸ್ತಕ ಓದುವ ಹುಚ್ಚು ಹಿಡಿಸಿದೇ ಅಮ್ಮ. `ಒಂದು ಗೋಣಿ ತುಂಬಾ ಚಂದಮಾಮ ಇಟ್ಟಿದೆ. ಹಾಳಾದ ಗೆದ್ದಲು ತಿಂದು ಬಿಡ್ತು’ ಹಾಗಂತ ನಾನು ಹೈಸ್ಕೂಲ್‌ನಲ್ಲಿರುವಾಗ ಅವ್ಯಕ್ತ ನೋವಿನಿಂದ ಹೇಳುತ್ತಿದ್ದಳು. ಓದಿರುವುದು ನಾಲ್ಕನೇ ತರಗತಿಯಾದರೂ ರಾಮಾಯಣ, ಮಹಾಭಾರತ ಅಂತ ಅವಳು ಓದದ ಪುಸ್ತಕವಿಲ್ಲ. ನಾನು ಎಂಎ ಮುಗಿಸುವರೆಗೂ ಅವಳಿಗಾಗಿ ಲೈಬ್ರೆರಿಯಿಂದ ಪುಸ್ತಕ ತರುತ್ತಿದ್ದೆ. ಚಿಕ್ಕವರಿದ್ದಾಗ ನಾನು ಮತ್ತು ನನ್ಣಣ್ಣ ನಿದ್ರೆಗೆ ಮುನ್ನ ಅಮ್ಮನ ಅಕ್ಕ ಪಕ್ಕ ಮಲಗಿ ಕತೆ ಹೇಳುವಂತೆ ಪೀಡಿಸುತ್ತಿದ್ದೇವು.


ಪಂಚತಂತ್ರ, ನರಿ, ರಾಜರಾಣಿ, ಹುಲಿ ತೋಳ ರಾಕ್ಷಸ ಅಂತ ಅವಳಲ್ಲಿ ಕಥೆಗಳೆಂದೂ ಮುಗಿಯುತ್ತಿರಲ್ಲಿಲ್ಲ. ಏನೋ ತಪ್ಪು ಮಾಡಿದಕ್ಕೆ ತಡೆಯಾಲಾರದೇ ಅಮ್ಮ ಒಂದು ದಿನ ಚಾಟಿಯಿಂದ ಹೊಡೆದಿದ್ದಳು. ಆ ಏಟಿಗೆ ನಾನು ಅಮ್ಮ ಅಂತ ಕಿರುಚಿ ದೂರಕ್ಕೆ ಓಡಿದ್ದೆ. ಮತ್ತೆ ಬಂದು ನೋಡಿದಾಗ ಅಮ್ಮ ಅಳುತ್ತಿದ್ದಳು.


ಚಂದಮಾಮ ಅಂದಾಗ ನನಗೆ ನೆನಪಾಗುವುದು ಮಳಿಯ ವೆಂಕಟಕೃಷ್ಣ ಭಟ್ರು. ಪ್ರತಿವಾರ(ಗುರುವಾರ ಅಂತ ನೆನಪು) ತಪ್ಪದೇ ಮನೆಗೆ ಚಂದಮಾಮ ತರುತ್ತಿದ್ದರು. ಅಮ್ಮ ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಭಟ್ರು ಸೈಕಲ್‌ ಮೂಲಕ ಮನೆ ಮನೆಗೆ ಚಂದಮಾಮ, ಪತ್ರಿಕೆಗಳನ್ನು ಹಂಚುತ್ತಿದ್ದರು. ಅವರಿಗೆ ಆಗಲೇ ಜೇನು ಸಾಕುವ ಹುಚ್ಚು ಕೂಡ ವಿಪರಿತವಾಗಿತ್ತು. ಇದೆಲ್ಲವುದರ ಪರಿಣಾಮ ಎಂಬಂತೆ ಅವರೀಗ `ಮಧು ಮಲ್ಟಿಪಲ್ಸ್‌’ ಎನ್ನುವ ಉದ್ಯಮ ಮಾಲೀಕ. ಸುಮಾರು ನೂರೈವತ್ತು ಜನರಿಗೆ ಉದ್ಯೋಗದಾತ. ಚಂದಮಾಮ ಮಾರುತ್ತಿದ್ದ ಭಟ್ರು ಈಗ ಯಶಸ್ವಿ ಉದ್ಯಮಿಯಾಗಲು ಎಷ್ಟು ಶ್ರಮ ಪಟ್ಟಿದ್ದಾರೋ? ಅವರಿಗೇ ಗೊತ್ತು. (http://madhumultiples.com).


ನನ್ನಣ್ಣ ನನಗಿಂತ ಎರಡು ಕ್ಲಾಸ್‌ ಮುಂದಿದ್ದ. ಸೈಕಲ್‌ ಕಲಿತದ್ದು ಅವನು ಫಸ್ಟ್‌. ಸೈಕಲ್‌ ಕಲಿತ ಖುಷಿಯಲ್ಲಿ ನನ್ನನ್ನು ಸೈಕಲ್‌ನಲ್ಲಿ ಕೂರಿಸಿಕೊಂಡು ಹೋಗಿದ್ದ. ಆಗ ಸೋಡದಂಗಡಿಯ ಮಮ್ಮದೆ ಬಳಿ ಗಂಟೆಗೆ 2 ರೂಪಾಯಿಗೆ ಸೈಕಲ್‌ ಬಾಡಿಗೆಗೆ ಸಿಗುತ್ತಿತ್ತು.  ತುಂಬಾ ವೇಗವಾಗಿ ಹೋಗುತ್ತಿದ್ದ. ಅದು ನಮ್ಮೂರಿನ ದೊಡ್ಡ ತಿರುವು. ಅಲ್ಲಿ ಸಾಮಾನ್ಯ ಸೈಕಲ್‌ಗಳಿಗೆ ಬ್ರೇಕ್‌ ಹಿಡಿತಾ ಇರಲ್ಲಿಲ್ಲ. ಅತೀ ವೇಗದಿಂದ ಕೆಳಗಿಳಿಯುತ್ತಿರುವಾಗ ಎದುರಿನಿಂದ ಬಸ್‌ ಬರುತ್ತಿತ್ತು. ಅಣ್ಣ ಬ್ರೇಕ್‌ ಹಿಡಿಯೋಕೆ ನೋಡ್ತನೆ. ನಿಲ್ಲೋದೆ ಇಲ್ಲ. ಎದುರಿನಿಂದ ಯಮನಂತೆ ಬರುವ ಬಸ್ಸು. ಏನಾಯಿತು ಅಂತ ಗೊತ್ತಾಗಲ್ಲಿಲ್ಲ. ನಾವಿಬ್ಬರು ಮಾರ್ಗದಲ್ಲಿ ಬಿದ್ದಿದ್ದೇವು.


ಬಸ್‌ ನಿಂತಿತು. ಅದರಲ್ಲಿದ್ದವರು ನಮ್ಮನ್ನು ಎಬ್ಬಿಸಿದರು. ಅಣ್ಣ ಎದುರಿನ ಮೋರಿಗೆ ಸೈಕಲ್‌ನ್ನು ಗುದ್ದಿಸಿದ. ಸ್ವಲ್ಪ ಎಚ್ಚರ ತಪ್ಪಿದರೆ ಕೆಳಗಿನ ದೊಡ್ಡ ಗುಂಡಿಗೆ ಬೀಳುತ್ತಿದ್ದೇವು. ಸೈಕಲ್‌ನ ಎದುರಿನ ಟೈರ್‌ ಎಂಟು ಆಕಾರಕ್ಕೆ ತಿರುಗಿತ್ತು. ಅದೇ ಕೊನೆ ಮತ್ತೆ ನಾನು ಅವನೊಂದಿಗೆ ಸೈಕಲ್‌ನಲ್ಲಿ ಹೋಗಿಲ್ಲ.


ಶಾರದ ಪೂಜೆ, ಸ್ವಾತಂತ್ರೋತ್ಸವ ಸೇರಿದಂತೆ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮವಿರಲಿ. ಕಾಗದ ಕೊಡೊಕೆ ನಾನು ಮತ್ತು ಸುನಿಲನೇ ಆಗಬೇಕು. ಕ್ಲಾಸ್‌ ಇಲ್ಲದೇ ಊರು ಸುತ್ತುವುದೆಂದರೆ ನಮಗೂ ಎಲ್ಲಿಲ್ಲದ ಖುಷಿ. ಕಾಡಿನೆಡೆಯಲ್ಲಿರುವ ಮನೆಗಳಿಗೆ, ಗುಡ್ಡದಾಚೆ ಹೋಗೊದಂದ್ರೆ ಮಜಾನೇ ಮಜಾ.


ಕಾಡಿನಲ್ಲಿ ಯಾವುದೋ ದೊಡ್ಡ ಬಂಡೆಯನ್ನು ತೋರಿಸಿ ಸುನಿಲ ‘ಇದು ಹುಲಿಯ ಗುಹೆಯಾಗಿತ್ತು’ ಅಂದ್ರೆ ನಾನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ಈ ಮರದಲ್ಲಿ ಮೋಹಿನಿ ದೆವ್ವ ಇದೆ ಅಂತಲೂ ಹೆದರಿಸುತ್ತಿದ್ದ. ಕ್ಲಾಸ್‌ ಮುಗಿದ ಕ್ಷಣ ನಾನು ಮತ್ತು ಸುನಿಲ ಕಾಡಿಗೆ ಓಡುತ್ತಿದ್ದೇವು. ಅಲ್ಲಿ ನೆಲ್ಲಿಕಾಯಿ ಕಾರೆಕಾಯಿ ಅಂತ ಸಿಕ್ಕಿಸಿಕ್ಕಿದನ್ನು ತಿನ್ನುತ್ತಿದ್ದೇವು. ಕಾಡಿನಲ್ಲಿ ಜೇನು ಹಿಡಿಯೋ ನಾರ್ಣ ಸಿಕ್ಕದರೆ ಮುಗೀತು.ಮತ್ತೆ ಅವನೊಂದಿಗೆ ಕತ್ತಲಾಗುವ ತನಕ ಕಾಡು ಸುತ್ತುತ್ತಿದ್ದೇವು.


ನಾರ್ಣನಿಗೆ ಒಂದು ಜೇನು ಹುಳ ಕಣ್ಣಿಗೆ ಬಿದ್ದರೆ ಸಾಕು. ಅದರ ಹಿಂದೆಯೇ ಸಾಗಿ ಜೇನು ಗೂಡಿನ ಜಾಡು ಹಿಡಿಯುತ್ತಿದ್ದ. ಇವನ ತಾಯಿ ಅಯ್ತೆ ತೋಡಿನ ಬದಿಯಲ್ಲಿ ಕುಳಿತುಕೊಂಡು ಏಡಿಯ ಪುಟ್ಟ ಗುಹೆಯೊಳಗೆ ಕೈಹಾಕಿ ಏಡಿ ಹಿಡಿಯುವುದನ್ನು ನಾವು ನೋಡಿ ಆಶ್ಚರ್ಯಗೊಳ್ಳುತ್ತಿದ್ದೇವು. ಕಾಡಿನಲ್ಲಿ ಸಂಗ್ರಹಿಸಿದ ಸೀಗೆಕಾಯಿಗಳನ್ನು ನನ್ನ ಮನೆಯ ಪಕ್ಕದಲ್ಲಿದ್ದ ಅಜ್ಮೀರ್‌ನ ಅಂಗಡಿಗೆ ಮಾರುತ್ತಿದ್ದೇವು. ಆತ ನೀಡಿದ ಚಿಲ್ಲರೆ ಹಣದಲ್ಲಿ ತಪ್ಪದೆ ತಿಂಡಿ, ಐಸ್‌ಕ್ಯಾಂಡಿ ತಿನ್ನುತ್ತಿದ್ದೇವು.


ಅಜ್ಮೀರ್‌ ಅಂದಾಗ ನೆನಪಾಯಿತು. ನಾನು ಚಿಕ್ಕದಾಗಿರುವಾಗ ಕಿಸೆಯಲ್ಲಿ ಅಡಕೆ ತುಂಬಿಸಿಕೊಂಡು ಬಂದು ಇವನಿಗೆ ಮಾರುತ್ತಿದ್ದೆ. ಆತ ಒಂದೆರಡು ದಿನ ಸುಮ್ಮನಿದ್ದ. ಕೊನೆಗೆ ಅಜ್ಜನಿಗೆ ಕಂಪ್ಲೇಟ್‌ ಕೊಡೋದ?. ಅಜ್ಜ ಬೈರವನಂತೆ ದೊಣ್ಣೆ ಹಿಡಿದು ಬಂದಿದ್ದರು. ಮನೆಗೆ ಕರೆದುಕೊಂಡು ಹೋಗಿ ಕಳ್ಳತನ ಮಾಡಬಾರದೆಂದು ತುಂಬಾ ಬುದ್ದಿವಾದ ಹೇಳಿದ್ದರು. ಅಜ್ಜ ಅಂದರೆ ಅಜಾನುಬಾಹು ವ್ಯಕ್ತಿತ್ವ. ಹಳ್ಳಿ ಮದ್ದು ಕೊಡುವುದರಲ್ಲಿ ಹೆಸರುವಾಸಿಯಾಗಿದ್ದರು. ಪಾಡ್ದನ, ಸಂದಿ ಅಂತ ಅವರಿಗೆ ತಿಳಿಯದ ವಿಷಯವಿರಲ್ಲಿಲ್ಲ. ಅಜ್ಜ ನಮಗೊಂದು ಅಚ್ಚರಿಯಾಗಿದ್ದರು.


ಚಂದದ ಚಂದಮಾಮ ಹುಡುಕಿದರೂ ಸಿಗುತ್ತ್ತಿಲ್ಲ. ಈಗೀಗ ನನಗೆ ಗೆದ್ದಲು ಹುಳುಗಳ ಮೇಲೆ ವಿಪರೀತ ಸಿಟ್ಟು ಬರುತ್ತಿದೆ. ನನ್ನ ಅಜ್ಜನಂತೆ ದೊಡ್ಡ ನೆಲ್ಲಿಕಾಯಿ ಮರ ಕೂಡ ಧರೆಗುರುಳಿದೆ. ಊರಿಗೆ ಹೋದಾಗ ಪ್ರೈಮರಿಯ ಮಕ್ಕಳು ನಮ್ಮನ್ನು ಅಚ್ಚರಿಗಣ್ಣಿನಿಂದ ನೋಡುತ್ತಾರೆ. ನನಗೆ ಅವರನ್ನು ನೋಡುವಾಗ ಅಸೂಯೆಯಾಗುತ್ತದೆ. ಬಾಲ್ಯವೆಂಬುದು ನೆನಪುಗಳ ಅಕ್ಷಯ ಪಾತ್ರೆ. ಅದು ಖಾಲಿಯಾಗುವುದೇ ಇಲ್ಲ. ದೊಡ್ಡಾದಾಗುತ್ತ ಬಂದಂತೆ ಊರು ಅಚ್ಚರಿಯಾಗಿ ಉಳಿಯಲ್ಲಿಲ್ಲ. ಪ್ರತಿಯೊಬ್ಬರಲ್ಲೂ ಬಾಲ್ಯದ ಅಕ್ಕರೆಯ ಸಕ್ಕರೆಯ ನೆನಪಿರುತ್ತದೆ. ಯಾಕೋ ಶೇಷಮ್ಮ ಟೀಚರ್‌ನಲ್ಲಿ ಮಾತನಾಡಿದ ನಂತರ ಮನದ ಮೂಲೆಯಲ್ಲಿ ಬೆಚ್ಚಗೆ ಮಲಗಿದ್ದ ನೆನಪುಗಳು ಮತ್ತೆ ಕಾಡತೊಡಗಿವೆ.

ಪ್ರವೀಣ ಚಂದ್ರ ಪುತ್ತೂರು

Monday, 14 November 2016

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಉದ್ಯೋಗಿಗಳು ಕಲಿಯಬೇಕಾದ ಮತ್ತು ಕಲಿಯಬಾರದ ಅಂಶಗಳೇನು? ಈ ಕಾರ್ಯಕ್ರಮ ನೀಡುವ ಪಾಠವನ್ನು ನಮ್ಮ ಕರಿಯರ್ ಪ್ರಗತಿಗೂ ಬಳಸಬಹುದೇ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಬಿಗ್‍ಬಾಸ್ ಕಾರ್ಯಕ್ರಮ ನೀವು ಇಷ್ಟಪಡಬಹುದು. ಇಷ್ಟ ಪಡದೆ ಇರಬಹುದು. ಆದರೆ, ಸಂಪೂರ್ಣವಾಗಿ ನಿರಾಕರಿಸುವುದು ಕಷ್ಟ. ಯಾಕೆಂದರೆ, ಕ್ಯಾಮೆರಾ ಇಲ್ಲವೆನ್ನುವುದನ್ನು ಬಿಟ್ಟರೆ ಪ್ರತಿಯೊಂದು ಮನೆಯಲ್ಲಿ, ಆಫೀಸ್‍ನಲ್ಲಿ ಇರುವ ವಾತಾವರಣದಂತೆಯೇ ಬಿಗ್‍ಬಾಸ್ ಮನೆ ಇರುತ್ತದೆ.
ನೀವು ಕೆಲಸ ಮಾಡುತ್ತಿರುವ ಆಫೀಸ್ ಅನ್ನೇ ನೋಡಿ. ಅದನ್ನೇ ಬಿಗ್‍ಬಾಸ್ ಮನೆಯೆಂಬ ದೃಷ್ಟಿಯಲ್ಲಿ ನೋಡಿ. ಅಲ್ಲಿ ಎಷ್ಟೊಂದು ಜನರಿದ್ದಾರೆ. ವಿವಿಧ ಜಾತಿ, ಧರ್ಮ, ಪ್ರತಿಭೆಯುಳ್ಳವರು ಅಲ್ಲಿರುತ್ತಾರೆ. ಎಲ್ಲರೂ ಒಂದೇ ಮನೆಯಲ್ಲಿ ಇರುವವರಂತೆ ಇರುತ್ತಾರೆ. ಅಲ್ಲೂ ಗುಂಪುಗಾರಿಕೆ ಇದೆ. ಜಗಳವಿದೆ. ದರ್ಪ, ಆಹಂ, ಮತ್ಸರ, ಕಾಲೆಳೆಯುವಿಕೆ ಇದೆ. ಅಷ್ಟೇ ಏಕೆ, ಯಾರ್ಯಾರೋ ಒಳಗೆ ಬರುತ್ತಾರೆ. ಯಾರ್ಯಾರೋ ಹೊರಗೆ ಬರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮವು ಕರಿಯರ್‍ಗೆ ಅತ್ಯಂತ ಮಹತ್ವದ ಪಾಠ ಕಲಿಸುತ್ತದೆ. ನಾವು ಅನುಕರಿಸಬಹುದಾದ ಮತ್ತು ಅನುಕರಿಸಬಾರದ ಹಲವು ಸಂಗತಿಗಳು ಬಿಗ್‍ಬಾಸ್‍ನಲ್ಲಿದೆ.
ಉತ್ತಮ ನಾಯಕತ್ವ: ಕನ್ನಡ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಸ್ಥಾನದಲ್ಲಿ ಇನ್ಯಾರೋ ಸಾಮಾನ್ಯ ನಟರನ್ನು ಕಲ್ಪಿಸಿಕೊಳ್ಳಿ. ಯಾಕೋ, ಸರಿಬರುತ್ತಿಲ್ಲ ತಾನೇ. ಕನ್ನಡದಲ್ಲಿ ಬಿಗ್‍ಬಾಸ್‍ಗೆ ಸುದೀಪ್ ಮಾತ್ರ ಸೂಕ್ತವೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿರುತ್ತದೆ. ಉತ್ತಮ ನಾಯಕತ್ವದ ಲಕ್ಷಣವೇ ಇದು. ನೀವು ಕೆಳಹಂತದ ಉದ್ಯೋಗದಲ್ಲಿದ್ದರೆ ನಿಮಗೆ ನಿಮ್ಮ ಟೀಮ್ ಲೀಡರೇ ನಾಯಕ ಆಗಬಹುದು. ಆ ಟೀಮ್ ಲೀಡರ್‍ಗೆ ಇನ್ಯಾರೋ ಮ್ಯಾನೇಜರ್ ನಾಯಕ ಆಗಿರಬಹುದು. ಮ್ಯಾನೇಜರ್‍ಗೆ ಚೀಫ್ ಮ್ಯಾನೇಜರ್, ಚೀಫ್ ಮ್ಯಾನೇಜರ್‍ಗೆ ಸಿಇಒ ಬಿಗ್‍ಬಾಸ್‍ನಂತೆ ಕಾಣಬಹುದು. ಈ ಎಲ್ಲಾ ಚೈನ್‍ಗಳು ಸಮರ್ಥವಾಗಿರುವುದು ಅತ್ಯಂತ ಮುಖ್ಯ. ಸಹೋದ್ಯೋಗಿಗಳು ಗೌರವಿಸುವಂತಹ ಉತ್ತಮ ವ್ಯಕ್ತಿತ್ವವನ್ನು ಲೀಡರ್ ಹೊಂದಿರಬೇಕು. ಇಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವವರು ಮಾತ್ರ ನಾಯಕರಾಗುತ್ತಾರೆ.
ಬೇಗ ಎದ್ದೇಳಿ: ತಡವಾಗಿ ಮಲಗಿ ತಡವಾಗಿ ಎದ್ದೇಳುವ ಗುಣವನ್ನು ಬಿಗ್‍ಬಾಸ್ ನೋಡಿ ಕಲಿಯಬೇಡಿ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಬಹುತೇಕರಿಗೆ ಬೆಳಗಾಗುವುದು ಒಂಬತ್ತರ ಮೇಲೆಯೇ. ಮತ್ತೆ ಬಹುತೇಕರು ಮಲಗುವುದು ತಡವಾಗಿಯೇ. ಥೇಟ್ ಕಾಪೆರ್Çರೇಟ್ ಕಲ್ಚರ್‍ನಂತೆಯೇ. ರಾತ್ರಿ ಯಾವುದೋ ಪಾರ್ಟಿಗೆ ಹೋಗುವುದು. ಬೆಳಗ್ಗೆ ಒಂಬತ್ತರ ನಂತರ ಎದ್ದೇಳುವುದನ್ನು ಬಹುತೇಕ ಉದ್ಯೋಗಿಗಳು ರೂಢಿಸಿಕೊಂಡಿದ್ದಾರೆ. ಬೆಳಗ್ಗೆ ಎದ್ದು ನಿದ್ದೆಗಣ್ಣಿನಲ್ಲೇ ಆಫೀಸ್‍ಗೆ ಬರುತ್ತಾರೆ. ಇದರ ಬದಲು, ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಎದ್ದು, ವ್ಯಾಯಾಮ, ವಾಕಿಂಗ್ ಮಾಡಿ. ದಿನದ ಆರಂಭ ಉತ್ತಮವಾಗಿದ್ದರೆ ನೀವು ಆಫೀಸ್‍ನಲ್ಲಿಯೂ ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕರಿಯರ್ ಪ್ರಗತಿಗೆ ಈ ಲವಲವಿಕೆ ಅತ್ಯಂತ ಅಗತ್ಯ.
ಗಾಸಿಪ್ ಬೇಡ: ಬಿಗ್‍ಮನೆಯ ಅತ್ಯಂತ ಆಕರ್ಷಣೆ ಅಲ್ಲಿನ ಗಾಸಿಪ್ ಆಗಿದೆ. ಯಾರೋ ಅವರ ಬಗ್ಗೆ ಹೀಗಂದರು, ಹಾಗಂದರು, ಆತ ಹೀಗೆ, ಇವಳು ಹೀಗೆ ಎಂದೆಲ್ಲ ಗುಸುಗುಸಿಗೆ ಬಿಗ್‍ಬಾಸ್ ಕ್ಯಾಮೆರಾ ಕಣ್ಣಾಗುತ್ತದೆ ಮತ್ತು ಕಿವಿಯಾಗುತ್ತದೆ. ಬಿಗ್‍ಮನೆಯಲ್ಲಿ ನಡೆಯುವ ಈ ಗುಸುಗುಸು ಪೂರ್ತಿ ಮನೆಯ ವಾತಾವರಣವನ್ನೇ ಹಾಳು ಮಾಡುತ್ತದೆ. ಆಫೀಸ್‍ನಲ್ಲಿಯೂ ಇಂತಹ ಗಾಸಿಪ್‍ಗಳು ಸಾಮಾನ್ಯ. ನೀವು ಗಾಸಿಪ್ ಮಾಡುವವರಾಗಿದ್ದರೆ ನೀವು ನಾಮಿನೆಟ್ ಆಗುವವರ ಲಿಸ್ಟ್‍ನಲ್ಲಿದ್ದೀರಿ ಎಂದು ತಿಳಿಯಿರಿ.
ಗುಂಪುಗಾರಿಕೆ: ಬಿಗ್‍ಬಾಸ್ ಮನೆಯಲ್ಲಿ ಗುಂಪುಗಾರಿಕೆ ನೋಡಿರುತ್ತೀರಿ. ಇರುವ ಕೆಲವೇ ಮಂದಿಯಲ್ಲಿ ಹಲವು ಬಣಗಳು ಸೃಷ್ಟಿಯಾಗುತ್ತವೆ. ಆಫೀಸ್‍ನಲ್ಲಿಯೂ ಹಾಗೆಯೇ. ಒಂದಿಷ್ಟು ಗುಂಪುಗಾರಿಕೆ, ರಾಜಕೀಯ ಇರುತ್ತದೆ. ಇಂತಹ ಗುಂಪುಗಾರಿಕೆಯೂ ಕಂಪನಿಯ ಶತ್ರು.
ಆರೋಗ್ಯಕರ ಸ್ಪರ್ಧೆ: ಬಿಗ್‍ಬಾಸ್‍ನಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರೂ ಸ್ಫರ್ಧಿಯಾಗಿರುತ್ತಾರೆ. ಎಲ್ಲರೂ ಗೆಲ್ಲಬೇಕೆಂದು ಬಯಸುತ್ತಾರೆ. ಆದರೆ, ಆ ಗೆಲುವು ಪಡೆಯಲು ಅತ್ಯಂತ ಪ್ರಮುಖವಾಗಿ ಬೇಕಾದದ್ದು ಪ್ರಯತ್ನ, ಪ್ರಾಮಾಣಿಕತೆ ಮತ್ತು ಪ್ರತಿಭೆ. ನೀವಿರುವ ಕಂಪನಿಯಲ್ಲಿಯೂ ಉನ್ನತ್ತ ಸ್ಥಾನಕ್ಕೆ ಹೋಗಲು ಪ್ರತಿಯೊಬ್ಬರೂ ಬಯಸುತ್ತಿರುತ್ತಾರೆ. ಪ್ರಯತ್ನ, ಪ್ರತಿಭೆ, ಪ್ರಾಮಾಣಿಕತೆ ಇರುವವರು ಇಲ್ಲೂ ಪ್ರಗತಿ ಕಾಣುತ್ತಾರೆ.
ಪರ್ಫಾಮೆನ್ಸ್ ಮುಖ್ಯ: ಬಿಗ್‍ಬಾಸ್‍ನಲ್ಲಿ ವಿವಿಧ ರೀತಿಯ ಟಾಸ್ಕ್‍ಗಳು ಇರುತ್ತವೆ. ಪ್ರತಿದಿನ, ಕ್ಷಣವೂ ಟಾಸ್ಕ್‍ನಿಂದ ಕೂಡಿರುತ್ತದೆ. ಇಲ್ಲಿ ಉತ್ತಮ ಪರ್ಫಾಮೆನ್ಸ್ ತೋರಿದವರು ಮಾತ್ರ ಉಳಿಯುತ್ತಾರೆ. ಇದ್ದು ಇಲ್ಲದಂತೆ ಇರುವವರು, ಟಾಸ್ಕ್‍ಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳದವರು ಬಿಗ್‍ಬಾಸ್ ಮನೆಯಿಂದ ಮನೆಗೆ ಹೋಗುತ್ತಾರೆ. ಕಂಪನಿಗಳು ಸಹ ಪರ್ಫಾಮೆನ್ಸ್ ತೋರುವವರಿಗೆ ಮಾತ್ರ ಮಣೆ ಹಾಕುತ್ತದೆ. ಇಲ್ಲವಾದರೆ ಮನೆಗೆ ಕಳುಹಿಸುತ್ತದೆ.
ಮಾತು ಮತ್ತು ಕೃತಿ: ಬಿಗ್‍ಬಾಸ್‍ನಲ್ಲಿ ಕೆಲವರು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಅವರ ಮಾತಿಗೂ ಕೃತಿಗೂ ತಾಳೆಯಾಗುವುದೇ ಇಲ್ಲ. ಆಫೀಸ್‍ನಲ್ಲಿಯೂ ಹಾಗೆಯೇ, ಕೆಲವರು ಮಾತು ಮಾತ್ರ ಆಡುತ್ತಾರೆ. ಅವರ ಮಾತು ಕೃತಿಯಾಗುವುದೇ ಇಲ್ಲ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುವವರು ಒಂದಿಷ್ಟು ದಿನ ಕಂಪನಿಯನ್ನು ಯಾಮಾರಿಸಬಹುದಾದರೂ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಕೆಲಸ ಕಲಿಯಿರಿ: ಬಿಗ್‍ಬಾಸ್‍ನಲ್ಲಿ ವಿವಿಧ ವಿಐಪಿಗಳು ಇರುತ್ತಾರೆ. ಅವರೂ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಬಾತ್‍ರೂಂ ಸ್ವಚ್ಛ ಮಾಡಬೇಕಾಗುತ್ತದೆ. ನೀವು ಕರಿಯರ್‍ನಲ್ಲಿ ಪ್ರಗತಿ ಕಾಣಬೇಕಾದರೆ ನಿಮ್ಮ ಕೆಲಸಕ್ಕೆ ಮಾತ್ರ ಸೀಮಿತರಾಗಬೇಡಿ. ಕಂಪನಿಯ ಎಲ್ಲಾ ಸಿಬ್ಬಂದಿಗಳು ಮಾಡುವ ಕೆಲಸದ ಬಗ್ಗೆಯೂ ಅರಿವಿರಲಿ.
ದುಂದು ವೆಚ್ಚ ಬೇಡ: ಬಿಗ್‍ಬಾಸ್‍ನ ಲಗ್ಷುರಿ ಟಾಸ್ಕ್‍ನಿಂದ ಎಲ್ಲರೂ ಕಲಿಯಬಹುದಾದ ಒಂದು ಅಂಶವಿದೆ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟೇ ಖರ್ಚು ಮಾಡಿ ಎಂಬ ಅತ್ಯಂತ ಮಹತ್ವದ ಪಾಠವನ್ನು ಅದು ಹೇಳಿಕೊಡುತ್ತದೆ. ನಿಮ್ಮ ವೇತನಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಕಾರು ಸಾಲ, ಮನೆ ಸಾಲವೆಂದು ಹೆಚ್ಚು ಹೊರೆಯಲ್ಲಿ ಇರಬೇಡಿ.
ಬ್ಯಾಗ್ ಸಿದ್ಧವಾಗಿರಲಿ: ಕೊನೆಯ ಮತ್ತು ಅತ್ಯಂತ ಪ್ರಮುಖ ಪಾಠವೆಂದರೆ `ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಟ್ಟುಕೊಳ್ಳಿ'. ನೀವು ಸದಾ ಯಾವಾಗ ಬೇಕಾದರೂ ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು. ಕೆಲಸ ಹೋಗುವ ಭಯದಲ್ಲಿ ಇರಬೇಡಿ. ನಿಮಗೆ ಎಲ್ಲಿ ಹೋದರೂ ಅವಕಾಶ ಸಿಗುತ್ತದೆ ಎಂಬಂತಹ ವ್ಯಕ್ತಿತ್ವ, ಪ್ರತಿಭೆ ಬೆಳೆಸಿಕೊಳ್ಳಿ.

  • ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಆಫೀಸ್‍ನಲ್ಲಿ ಮತ್ತು ಬಿಗ್‍ಬಾಸ್‍ನಲ್ಲಿ ಉಳಿಯಬಹುದು. ಇತ್ತೀಚೆಗೆ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ಅಭ್ಯರ್ಥಿಯೊಬ್ಬರು ಹೊರಹೋಗಲು ಆರೋಗ್ಯ ಸಮಸ್ಯೆಯೂ ಪ್ರಮುಖ ಕಾರಣವಾಗಿತ್ತು.

  •  ಬಿಗ್‍ಬಾಸ್‍ನಲ್ಲಿ ಅತ್ತರೆ ಅನುಕಂಪದ ಓಟ್ ಬರುತ್ತೆ ಎಂದು ಹೇಳುವವರು ಇದ್ದಾರೆ. ಆದರೆ ಆಫೀಸ್‍ನಲ್ಲಿ ಯಾವಾಗಲೂ ನಮ್ಮ ವೀಕ್‍ನೆಸ್ ಅನ್ನು ಪ್ರದರ್ಶಿಸಬಾರದು. ನೀವು ಸ್ಟ್ರಾಂಗ್ ಆಗಿದ್ದಷ್ಟು ಒಳ್ಳೆಯದು.

  •  ನಿಮಗೆ ಇಷ್ಟವಾಗದ ವಿಚಾರದ ಬಗ್ಗೆ ಸಾತ್ವಿಕವಾಗಿ ಪ್ರತಿಭಟನೆ ಮಾಡಿ. ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡಬೇಡಿ. ಒಳ್ಳೆಯ ಕಾರಣದಿಂದ ಗಮನ ಸೆಳೆಯಿರಿ. ಗಿಮಿಕ್ ಮಾಡಿ ಗಮನ ಸೆಳೆಯಬೇಡಿ.

  •  ಇತರರನ್ನು ಗೌರವಿಸಿ. ನಿಮ್ಮಲ್ಲಿ ಇರುವ ಕೆಟ್ಟಗುಣಗಳನ್ನು ಬಿಟ್ಟುಬಿಡಿ. ನಿಮ್ಮಲ್ಲಿ ಇತರರಿಗೆ ಇಷ್ಟವಾಗದ ಸಂಗತಿಗಳು ಯಾವುದು ಎಂದು ತಿಳಿದುಕೊಳ್ಳಿ.ತಾನು ಮಾತ್ರ ಗೆಲ್ಲಬೇಕೆಂದು ಸ್ವಾರ್ಥಿಯಾದರೆ ಎಲ್ಲರೂ ದೂರ ಸರಿಯುತ್ತಾರೆ.

  •  ನಿಮಗೆ ಗೊತ್ತಿರುವ ಕೌಶಲವನ್ನು ಕಂಪನಿಯ ಇತರ ಸಹೋದ್ಯೋಗಿಗಳಿಗೂ ಹೇಳಿಕೊಡಿ. ಇತರರ ನೋವಿಗೆ ಸ್ಪಂದಿಸಿ. ಅಗತ್ಯಬಿದ್ದರೆ ಸಹಾಯ ಮಾಡಿ.

  •  ನಾವು ಆಡುವ ಮಾತುಗಳ ಕುರಿತೂ ಎಚ್ಚರದಿಂದ ಇರಬೇಕು. ನಿಮಗೆ ತಿಳಿಯದಂತೆ ಆಗುವ ತಪ್ಪುಗಳ ಕುರಿತೂ ಎಚ್ಚರದಿಂದ ಇರಬೇಕು.

  •  ಆಫೀಸ್ ಎಂದರೆ ಸದಾ ಕತ್ತೆಯಂತೆ ದುಡಿಯಬೇಕೆಂದಿಲ್ಲ. ಆಗಾಗ ಫನ್, ಮನರಂಜನೆ ಇರಬೇಕು. ನಗುಮುಖದಿಂದ ಇದ್ದರೆ ಮಾತ್ರ ನಿಮ್ಮ ಆರೋಗ್ಯ ಮತ್ತು ಕಂಪನಿಯ ಆರೋಗ್ಯ ಚೆನ್ನಾಗಿರುತ್ತದೆ.

  •  ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಪ್ರದರ್ಶಿಸಲು ಬಿಗ್‍ಬಾಸ್ ಅಥವಾ ಆಫೀಸ್ ಉತ್ತಮ ವೇದಿಕೆಯಾಗಿದೆ. ಇಲ್ಲಿ ಪ್ರತಿಭಾನ್ವಿತರು ಉಳಿಯುವ ಸಾಧ್ಯತೆ ಹೆಚ್ಚಿದೆ.


 

Published in VK Mini

Thursday, 20 October 2016

ರೋಬೊ ಕಥೆ: ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

ರೋಬೊ ಕಥೆ: ಎರಡು ಸಾವಿರದ ಐವತ್ತು, ಜಗತ್ತು ಬದಲಾಗಿಬಿಡ್ತು

"ಸುತ್ತಲೂ ಕಾಡು. ನಡುವೆ ನಮ್ಮ ಮನೆ. ಮನೆ ಪಕ್ಕ ಜುಳುಜುಳು ಹರಿವ ಪುಟ್ಟ ನದಿ. ನೂರಾರು ಹಕ್ಕಿಗಳ ಗಾನ. ಎಲ್ಲೆಲ್ಲೂ ತಂಪು. ವಾಹ್, ಎಷ್ಟೊಂದು ಹಿತ' ಕನಸಲ್ಲಿ ನನ್ನ ಸ್ವಗತವನ್ನು ನಿಲ್ಲಿಸುವಂತೆ ರೋಬೊ ಎಚ್ಚರಿಸಿತು. "ಗುಡ್ ಮಾರ್ನಿಂಗ್, ಶುಭೋದಯ, ಸಮಯ ಆರುಗಂಟೆ, ಎದ್ದೇಳಿ ಮಿಸ್ಟರ್ ಪ್ರವೀಣ್ ಚಂದ್ರ" ಎಂದಿತು. ಅದು ನಮ್ಮ ಮನೆ ಕೆಲಸಗಾರ ರೋಬೊ.


"ಇವತ್ತು ಡೇಟ್ ಎಷ್ಟು?' ಪಿಳಿಪಿಳಿ ಕಣ್ಣುಬಿಟ್ಟು ಕೇಳಿದೆ. ಅದಕ್ಕೆ ರೋಬೊ  "ಎರಡು ಸಾವಿರದ ಐವತ್ತು, ಅಕ್ಟೋಬರ್ ಇಪತ್ತು' ಎಂದಿತ್ತು. ಸಮಯ ಹೋಗೋದೇ ಗೊತ್ತಾಗ್ತ ಇಲ್ಲ. ರಾಮ ರಾಮ' ಎಂದೆ. ಅದನ್ನೇ ಕಮಾಂಡ್ ಎಂದುಕೊಂಡ ರೋಬೊ "ರಾಮ ರಾಮ ಜಯರಾಮ, ರಘುರಾಮ' ಎಂದು ರಾಮ ಶ್ಲೋಕ ಹಾಡತೊಡಗಿತು. ಸ್ವಲ್ಪ ಹೊತ್ತು ಕೇಳುತ್ತ ಕುಳಿತೆ.


ಸರಿ, ಬಾತ್ ರೂಂಗೆ ಹೋಗಿ ಬರೋಣ ಎಂದು ಎದ್ದೆ. ಜೊತೆಗೆ ರೋಬೊನೂ ಬಂತು. "ಶೀ, ನೀನು ಹೊರಗೆ ಇರಪ್ಪ' ಎಂದೆ. "ನಿಮ್ಮ ಸೇವೆ ನನ್ನ ಕರ್ತವ್ಯ' ಎಂದು ಒಳಗೆ ಬಂತು. ಪ್ರತಿದಿನ ಇದೇ ಡೈಲಾಗ್ ಎಂದುಕೊಂಡು ಕುಳಿತುಕೊಂಡೆ. "ಸರಿಯಾದ ಪೊಸಿಷನ್ ನಲ್ಲಿ ಕುಳಿತುಕೊಳ್ಳಿ' ಆಜ್ಞಾಪಿಸಿತು. ಅದು ಹೇಳಿದಂತೆ ಕೇಳದೆ ಬೇರೆ ವಿಧಿಯಿಲ್ಲ. "ರೋಬೊ ಇಂಡಿಯಾ" ಪರಿಕಲ್ಪನೆ ಸರಿಯಾಗಿ ಜಾರಿಯಾಗಿದೆ ಎಂದುಕೊಂಡೆ.


'ಯಾವ ಪೇಪರ್ ಓದಲು ಇಷ್ಟಪಡುವಿರಿ' ಅದೇ ಮಾಮೂಲಿ ಡೈಲಾಗ್. ಇದನ್ನು ಪ್ರೋಗ್ರಾಮ್ ಮಾಡಿದವ ಸಿಕ್ಕರೆ ಸಾಯಿಸಿಬಿಡುತ್ತಿದ್ದೆ. "ಮರ್ಡರ್ ಬಗ್ಗೆ ಯೋಚನೆ ಮಾಡುವುದು ಅಪರಾಧ' ಎಂದಿತು ರೋಬೊ. ಇದಕ್ಕೆ ಮೈಂಡ್ ರೀಡಿಂಗ್ ಸಹ ಗೊತ್ತು. ಇನ್ನೊಮ್ಮೆ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೋ ಏನೋ.


"ಪೇಪರ್ ಆಮೇಲೆ ಓದ್ತಿನಿ. ಕನ್ನಡ ಚಿತ್ರಗೀತೆ ಹಾಕಪ್ಪ' ಅಂದೆ. ತಕ್ಷಣ ಅದು ಯಾವುದೋ ಹಾಡು ಹಾಕಿತು. ನಾನು ಬೇಡವೆಂದು ತಲೆಯಾಡಿಸಿದರೆ ಬೇರೆ ಹಾಡುಬರುತ್ತಿತ್ತು. ಈಗ ಕನ್ನಡ ಹಾಡುಗಳಲ್ಲಿ ಕನ್ನಡ ಪದ ಹುಡುಕಬೇಕು ಎಂದು ಗೊಣಗಿದೆ. ಅದಕ್ಕೆ ರೋಬೊ "ಪ್ಲೀಸ್ ರಿಪೀಟ್ ಯುವರ್ ಕಮಾಂಡ್' ಅಂತು. "ಏನಿಲ್ಲ ಮುಗೀತು' ಅಂದೆ. ಅದು ಟಿಶ್ಯು ತಂದುಕೊಡ್ತು. ಟಾಯ್ಲೆಟ್ ನಲ್ಲಿ ನೀರು ಬಳಸುವುದು ಅಪರಾಧ ಅಂತ ಗ್ಲೋಬಲ್ ಐಟಿ ಕೋರ್ಟ್ ಬೇರೆ ಇತ್ತೀಚೆಗೆ ತೀರ್ಪು ನೀಡಿದೆ. .


ಅಲ್ಲಿಂದ ಹೊರಗೆ ಬಂದೆ. ರೋಬೊ ಅಲ್ಲೇ ಪಕ್ಕದಲ್ಲಿದ್ದ ಮೆಷಿನ್ ಒಳಗಿನಿಂದ ಒಂದು ಲೋಟ ಚಹಾ ತಂದುಕೊಡ್ತು. ಕುಡಿದಾಗ ಹಾಯೆನಿಸಿತ್ತು. "ಏನಪ್ಪ ಇವತ್ತಿನ ಸುದ್ದಿ?" ಅಂದೆ. ರೋಬೊ ಕೈಬೆರಳಿನಿಂದ ಬೆಳಕು ಹೊರಗೆ ಬಂದು ಗೋಡೆ ಮೇಲೆ ಬಿತ್ತು. ನೂರಾರು ಇಂಗ್ಲಿಷ್ ಪೇಪರ್ ಗಳ ಹೆಸರು ಪಟಪಟನೆ ಮೂಡಿದವು. ಕನ್ನಡ ಪೇಪರ್ ಅಂದ್ರೆ ಈ ರೋಬೊಗೂ ತಾತ್ಸಾರ. ವಿಜಯ ಕರ್ನಾಟಕ ಹಾಕಪ್ಪ ಅಂದೆ. ಸ್ವಲ್ಪ ಸ್ಲೋ ಆಗಿ ಲೋಡ್ ಆಯ್ತು. ಕನ್ನಡ ಪೇಪರ್ ಗಳೆಲ್ಲ ಸ್ಲೋ ಆಗಿಯೇ ಲೋಡ್ ಆಗೋದು. ಅದು ಈ ರೋಬೊ ಕುತಂತ್ರ ಆಗಿರಬೇಕು.


ವಿಜಯ ಕರ್ನಾಟಕ ಗೋಡೆ ಮೇಲೆ ಮೂಡಿತು. ರಾಜ್ಯದಲ್ಲಿ ವೈಫೈ ಉಚಿತ ಅಂತ ಮುಖ್ಯಮಂತ್ರಿ ಘೋಷಣೆ ಮಾಡಿದ್ರು. ಅಕ್ಕಿ ಬೆಲೆ ಇಳಿಕೆ ಎಂದಿತ್ತು. ಅದನ್ನು ನೋಡಿ ಖುಷಿಯಾಯ್ತು. ಒಂದು ಕೇಜಿ ಅಕ್ಕಿ ದರ 12 ಸಾವಿರಕ್ಕೆ ಇಳಿದಿತ್ತು. ಕೆಲವು ದಿನದ ಹಿಂದೆ ಅಕ್ಕಿ ರೇಟ್ ಕೇಜಿಗೆ 18 ಸಾವಿರ ರೂ. ಇತ್ತು. ದುಡ್ಡಿಗೆ ಬೆಲೆ ಇಲ್ಲ. ಒಂದೊಂದು ಸುದ್ದಿನ ನೋಡಿದಾಗ ಅದು ಝೂಮ್ ಆಗುತ್ತಿತ್ತು. ಏನೋ ಗೆಶ್ಚರ್ ಟೆಕ್ನಾಲಜಿಯಂತೆ. ನಾನು ದೂರದಿಂದಲೇ ಕೈಯಾಡಿಸಿದರೆ ಸುದ್ದಿ ಬೇಕಾದಂತೆ ಬದಲಾಗುತ್ತಿತ್ತು. ನಾನು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಹೀಗಿರಲಿಲ್ಲ. ಚೆನ್ನಾಗಿ ಹತ್ತಿಪ್ಪತ್ತು ಪುಟಗಳ ಪೇಪರ್ ಬರುತ್ತಿತ್ತು. ಈಗ ಪೇಪರ್ ಕತೆ ಹೇಳಿದರೆ ಮಗ ನಗುತ್ತಾನೆ. ಈಗ ಅದೇ ವಿನ್ಯಾಸದ ಪೇಪರ್ ಗೋಡೆ ಮೇಲೆ ಮೂಡುತ್ತದೆ.


ಸರಿ, ನಾನು ವಾಕಿಂಗ್ ಹೋಗಿ ಬರ್ತಿನಿ ಅಂತ ಎದ್ದು ಹೋದೆ. ಓಕೆ ಅಂತ ಹೇಳಿತು ರೋಬೊ. ಸದ್ಯ ಇದರ ಸಹವಾಸ ತಪ್ಪಿತು ಅಂತ ಹೊರಗೆ ಬಂದೆ. ಹೆಸರಿಗಷ್ಟೇ ಪಾರ್ಕ್. ಎಲ್ಲವೂ ಗಿಡಗಳ ಕಾಂಕ್ರಿಟ್  ಕಲಾಕೃತಿಗಳು. ಒಂದೆಡೆ ಆಮ್ಲಜನಕ ಸಿಂಪಡಣೆ ಬೇರೆ. ಕೈನಲ್ಲಿದ್ದ ವಾಚ್ ವೈಬ್ರೆಟ್ ಆಯ್ತು. ಪಾರ್ಕ್ ಬೆಂಚ್ ಮೇಲೆ ವಾಚ್ ಪೋಕಸ್ ಮಾಡಿದೆ. ಅಲ್ಲಿ ಮೂಡಿದ ಪರದೆ ಮೇಲೆ ಗೆಳೆಯ ಸೂರ್ಯ ಇದ್ದ. ಅವನು ಆಗಾಗ ಚಾಟಿಂಗ್ ಗೆ ಬರುತ್ತಾನೆ. ಆತ ನನ್ನ ಕ್ಲಾಸ್ ಮೇಟ್. ನಾನು ವಿಜಯ ನೆಕ್ಸ್ಟ್ ವೀಕ್ಲಿಯಲ್ಲಿದ್ದಾಗ ಅವನು ಪ್ರಜಾವಾಣಿಯಲ್ಲಿದ್ದ.


"ಹೇ, ದನಿಕುಲೆ, ದಾನೆ ಮಾರಾಯ ಸುದ್ದಿನೇ ಇಜ್ಜಿ(ಏನು ಧನಿಗಳೇ ಸುದ್ದಿನೇ ಇಲ್ಲ)' ಅಂದ. "ಎಂಚಿ ಸಾವು ಮಾರೆ, ಬೋರ್ ಲೈಫ್' ಅಂದೆ. ಹೆಚ್ಚಾಗಿ ನಾವು ತುಳುವಿನಲ್ಲೇ ಮಾತಾಡೋದು. ತುಳು ಭಾಷೆಯನ್ನು ಅರ್ಥ ಮಾಡಿಕೊಳ್ಳುವ ರೋಬೊ ಇನ್ನೂ ಬಂದಿಲ್ಲ. ರೋಬೊ ಭಾಷೆಗೆ ತುಳುವನ್ನು ಸೇರಿಸಬೇಕು ಎಂದು ದೆಹಲಿಯಲ್ಲಿ ಈಗಲೂ ಹೋರಾಟ ನಡೆಯುತ್ತಲೇ ಇದೆ.


ನಾವು ತುಳುವಿನಲ್ಲೇ ಮಾತು ಮುಂದುವರೆಸಿದೆವು. ಅದರ ಕನ್ನಡ ಅನುವಾದ ಹೀಗಿದೆ. "ಸೂರ್ಯ ನಿನ್ನ ಮಗ ಮಾರ್ಸ್ ನಿಂದ ಯಾವಾಗ ವಾಪಸ್ ಬರ್ತಾನೆ' ಎಂದೆ. "ಅವನನ್ನು ಬಿಡಪ್ಪ. ಅಲ್ಲೇ ಹೋಗಿ ಸೆಟ್ಲ್ ಆದರೂ ಆದನು' ಎಂದ. ಸೂರ್ಯನ ಮಗ ನಾಸಾದಲ್ಲಿ ಕೆಲಸ ಮಾಡೋದು. ಒಮ್ಮೆ ಮಾರ್ಸ್, ಒಮ್ಮೆ ಲೂನಾರ್ಸ್ ಅಂತ ವರ್ಷಕ್ಕೆ ಎರಡು ಬಾರಿ ಟ್ರಿಪ್ ಹೋಗ್ತಾ ಇರ್ತಾನೆ. "ನನ್ನನ್ನೂ ಲೂನಾರ್ಸ್ ಗೆ ಕರ್ಕೊಂಡು ಹೋಗ್ತಾನಂತೆ' ಎಂದು  ಸೂರ್ಯ. "ನೀನು ಬಿಡಪ್ಪ ನಿನ್ನ ಹೆಸರೇ ಸೂರ್ಯ, ಎಲ್ಲಾ ಗ್ರಹಗಳು ನಿನ್ನ ಸುತ್ತ ಸುತ್ತುತ್ತಿವೆ' ಅಂದೆ. "ಹ್ಹ ಹ್ಹ ಹ್ಹ' ಗಹಿಗಹಿಸಿ ನಕ್ಕ' ಅವನ ನಗುವೇ ಹಾಗೆ. ಕ್ಲಾಸಲ್ಲಿ ಪಾಠ ನಡೆಯುವಾಗಲೂ ಹೀಗೆ ಅಟ್ಟಹಾಸ ಮಾಡುತ್ತಿದ್ದ.


"ವಿಷ್ಯ ಗೊತ್ತಾಯ್ತ' ಅವನು ಬ್ರೇಕಿಂಗ್ ನ್ಯೂಸೊಂದು ಹೇಳಿದ. "ಗ್ಯಾಲಾಕ್ಸಿಯಲ್ಲಿ ತುಂಬಾ ನೀರಿರುವ ಒಂದು ಗ್ರಹ ಸಿಕ್ಕಿದೆಯಂತೆ. ಇಲ್ಲಿರುವ ಎಲ್ಲಾ ಓಲ್ಡ್ ಪೀಪಲ್ ಗಳನ್ನು ಅಲ್ಲಿಗೆ ಕಲಿಸ್ತಾರಂತೆ. ನಾಸಾದಲ್ಲಿ ಈ ಪ್ರಾಜೆಕ್ಟ್ ನಡೀತಾ ಇದೆ. ನಾವೇಲ್ಲ ಬೇಗ ಆ ಗ್ರಹಕ್ಕೆ ಹೋಗೋದು ಗ್ಯಾರಂಟಿ' ಅಂದ.


ಯಾರು ಬೇಕಾದರೂ ಹೋಗ್ಲಿ. ನಾನು ಮಾತ್ರ ಪುತ್ತೂರಲ್ಲೇ ಸಾಯೋದು ಅಂದೆ. ಮತ್ತೆ ಹ್ಹ ಹ್ಹ ಎಂದು ನಕ್ಕ ಸೂರ್ಯ "ಸರಿ, ನಾನು ಆಮೇಲೆ ಸಿಗ್ತಿನಿ. ರೋಬೊ ವಿಶ್ವಕಪ್ ಫುಟ್ಬಾಲ್ ನೋಡ್ಬೇಕು' ಅಂತ ಹೇಳಿ ಮರೆಯಾದ.


ಕತೆ ತುಂಬಾ ಉದ್ದ ಆಯ್ತು. ಸದ್ಯ ಇಷ್ಟು ಸಾಕು ;-).

Friday, 30 September 2016

ಪ್ರಭಾ

ಪ್ರಭಾ

ಪ್ರಭಾ…

`ಎಲ್ಲಿಗೆ ಮೇಡಂ` ಕಂಡೆಕ್ಟರ್‌ ಧ್ವನಿ ಕೇಳಿ ಬೆಚ್ಚಿದವಳಂತೆ ಎಚ್ಚೆತ್ತ ಪ್ರಭಾ `ಪುತ್ತೂರು’ ಎಂದು ಐನೂರರ ನೋಟೊಂದನ್ನು ನೀಡಿದಳು. ಕಂಡೆಕ್ಟರ್‌ ನೀಡಿದ ಚಿಲ್ಲರೆಯನ್ನು ಪರ್ಸ್‌ಗೆ ತುಂಬಿಕೊಂಡವಳ ಮನಸ್ಸು ಚಡಪಡಿಸುತ್ತಿತ್ತು. ನಾನು ಕೆಲಸ ಬಿಟ್ಟು ಬಂದೆ ಅಂದರೆ ಅಮ್ಮ ಏನು ಹೇಳಬಹುದು. ಅಪ್ಪನ ಮುಖ ಸಪ್ಪೆಯಾಗಬಹುದಾ? ಎರಡು ವರ್ಷದ ಹಿಂದೆ ಎಷ್ಟು ಆರಾಮವಾಗಿದ್ದೆ. ಯಾರಿಗೆ ಬೇಕು ಬೆಂಗಳೂರು ಥೂ!

***

ಅವಳು ಬೆಂಗಳೂರಿಗೆ ಬಂದು ಎರಡು ವರ್ಷ ಕಳೆದಿದೆ. ಕೈಯಲ್ಲಿ ಒಂದಿಷ್ಟು ದುಡ್ಡು, ಅನುಭವ ಎಲ್ಲವೂ ನಿರೀಕ್ಷೆಗಿಂತ ಸ್ವಲ್ಪ ಹೆಚ್ಚೇ ಸಿಕ್ಕಿದೆ. ಓದಿದ್ದು ಎಂಸಿಎ. ಕ್ಯಾಂಪಸ್‌ನಲ್ಲಿಯೇ ಪ್ರತಿಷ್ಠಿತ ಕಂಪನಿಗೆ ಸೆಲೆಕ್ಟ್‌ ಆಗಿದ್ದಳು. ತಿಂಗಳಿಗೆ ಹತ್ತುವರೆ ಸಾವಿರ ರೂ. ಸಂಬಳ ಇತ್ತು. ಸುಮ್ಮನೆ ಯಾಕೆ ಮನೆಯಲ್ಲಿ ಟೈಂವೇಸ್ಟ್‌ ಮಾಡುವುದು ಅಂತಲೂ ಅನಿಸಿತ್ತು. ಇವಳ್ಯಾಕೆ ಬೆಂಗಳೂರಿಗೆ ಹೋಗಬೇಕು ಅಂತಾ ಅಮ್ಮ ತಡೆದರೂ ಅನುಭವ ಆಗಲಿ ಅಂತ ಅಪ್ಪ ಓಕೆ ಎಂದಿದ್ದರು.

***

ಊರಿನಲ್ಲಿ ಓದು, ಭರತನಾಟ್ಯ, ಕ್ರೀಡೆ ಎಲ್ಲದರಲ್ಲೂ ಅವಳೇ ಫಸ್ಟ್‌. ಊರಿನವರಿಗಂತೂ ಪ್ರಭಾ ಎಂದರೆ ಅಚ್ಚುಮೆಚ್ಚು. ತುಂಬಾ ಮುಗ್ಧ ಹುಡುಗಿ. ಮೊದಲ ಸಲ ಬೆಂಗಳೂರಿನ ಬಸ್‌ ಏರಿದಾಗ ನೆರೆಮನೆಯ ಯಮುನಕ್ಕನ ಕಣ್ಣ ತುಂಬಾ ನೀರು. ಗೆಳತಿಯರಾದ ಸವಿತ, ರೇಖಾ, ಕವಿತ ಇವರೆಲ್ಲರ ಮುಖ ಕೂಡ ನೋಡುವಂತಿರಲ್ಲಿಲ್ಲ. ಊರಲ್ಲೇ ಟ್ರೈಮಾಡಿದ್ದರೆ ಟೀಚಿಂಗ್‌ ಕೆಲಸ ಸಿಗುತ್ತಿತ್ತು. ಇವಳಿಗೆ ಮನಸ್ಸಿರಲ್ಲಿಲ್ಲ. ಹಾಗಂತ ಇಷ್ಟು ಓದಿದ ತಪ್ಪಿಗೆ ಊರಲ್ಲಿ ಇರುವಂತಿಲ್ಲ. ಸ್ನಾತಕೋತ್ತರ ಪದವಿಗಾಗಿ ಬ್ಯಾಂಕ್‌ನಿಂದ ಸಾಲ ಬೇರೆ ಮಾಡಿಯಾಗಿದೆ. ಅನಿವಾರ್ಯವಾಗಿ ಮುಗ್ಧ ಮುಖದಲ್ಲಿ ದುಗುಡ ತುಂಬಿಕೊಂಡು ಬೆಂಗಳೂರು ಬಸ್ಸು ಹತ್ತಿದ್ದಳು. ಗೊತ್ತು ಗುರಿ ಇಲ್ಲದ ಊರಲ್ಲಿ ಒಬ್ಬಳೇ ಏನು ಮಾಡುವುದು. ಅದಕ್ಕೆ ಅಮ್ಮನೇ ಪರಿಹಾರ ನೀಡಿದ್ದಳು.  ಅಮ್ಮನ ದೂರದ ಸಂಬಂಧಿ ನಿಶಾಂತ್‌ ಬೆಂಗಳೂರಿನಲ್ಲಿದ್ದ. ಅವನೇ ಇವಳನ್ನು ಯಾವುದಾದರೂ ಲೇಡಿಸ್‌ ಹಾಸ್ಟೇಲ್‌ಗೆ ಸೇರಿಸುವ ಭರವಸೆ ನೀಡಿದ್ದ. ಇವಳಿಗಿಂತ ಒಂದು ವರ್ಷ ದೊಡ್ಡವ. ಬಾಲ್ಯದಲ್ಲಿ ಒಂದೆರಡು ಬಾರಿ ಅವನ ಮನೆಗೆ ಹೋಗಿ ಅವನೊಂದಿಗೆ ಆಟವಾಡಿದ ನೆನಪೂ ಅವಳಿಗಿದೆ. ಎಂಬಿಎ ಮುಗಿಸಿ ಕೈತುಂಬಾ ಸಂಪಾದಿಸುತ್ತಿದ್ದ.

***

ಅವಳು ಮೊದಲನೇ ದಿನವೇ ಬೆಂಗಳೂರನ್ನು ಬೆರಗುಗಣ್ಣಿನಿಂದಲೇ ನೋಡಿದಳು. ಇಲ್ಲಿನ ಗಿಜಿಗುಟ್ಟುವ ಜನ, ಟ್ರಾಫಿಕ್‌, ಆಧುನಿಕತೆ, ಅಪರಿಚಿತತೆ ಎಲ್ಲವೂ ಅವಳಲ್ಲಿ ಅವ್ಯಕ್ತ ನೋವು ಉಂಟು ಮಾಡಿದ್ದು ಸುಳ್ಳಲ್ಲ. ಬಸ್‌ಸ್ಟಾಂಡ್‌ನಲ್ಲಿ ನಿಶಾಂತ ಕಾಯುತ್ತಿದ್ದ. ಅವನ ಬೈಕ್‌ನಲ್ಲಿ ಸೀದಾ ಆತನ ಮನೆಗೆ ಕರೆದುಕೊಂಡು ಹೋದ. ಇವನು ರೂಂಗೆ ಕರೆದುಕೊಂಡು ಬಂದದ್ದನ್ನು ನೋಡಿ ಭಯದಿಂದ ನೋಡಿದವಳಿಗೆ ‘ಇವತ್ತು ಸಂಜೆ ತನಕ ಇಲ್ಲೇ ಇರು. ನನ್ನ ಆಫೀಸ್‌ನಲ್ಲಿರುವ ಮೇಡಂಗಳಲ್ಲಿ ವಿಚಾರಿಸಿ ಒಳ್ಳೆಯ ಹಾಸ್ಟೇಲ್‌ಗೆ ಸೇರಿಸ್ತಿನಿ’ ಅಂದ. ಬಕೆಟ್‌ನಲ್ಲಿ ಕ್ವಾಯಿಲ್‌ ಹಾಕಿ ಬಂದು ಯಾರ್ಯಾರಿಗೋ ಫೋನ್‌ ಮಾಡಿದ. ನೀರು ಬಿಸಿಯಾಗಿದೆ ಸ್ನಾನ ಮಾಡಿ ಬಾ ಅಂತ ಟವಲ್‌ ಕೊಟ್ಟು ಕಳುಹಿಸಿದ. ಇವಳು ಸ್ನಾನ ಮಾಡಿಬಂದಾಗ ಅವನು ಉಪ್ಪಿಟ್ಟು ರೆಡಿ ಮಾಡಿಟ್ಟಿದ್ದ. ಉಪ್ಪಿಟ್ಟು ರುಚಿಯಾಗಿತ್ತು. 10 ಗಂಟೆಯಾಗುತ್ತಿದ್ದಂತೆ ಅವನು ಆಫೀಸ್‌ಗೆ ಸಿದ್ದನಾಗಿ ಮನೆಯ ಕೀಯನ್ನು ಅವಳಲ್ಲಿ ನೀಡಿ. ಬೋರಾದರೆ ಕಂಪ್ಯೂಟರ್‌ ಆನ್‌ ಮಾಡು. ಮದ್ಯಾಹ್ನ ಊಟಕ್ಕೆ ಹೊರಗಡೆ ಹೋಗು ಎಂದಾಗ ಇವಳು ಉಳಿದಿರುವ ಅಷ್ಟು ಉಪ್ಪಿಟ್ಟನ್ನು ನೋಡಿ ಬೇಡಾ ಇದನ್ನೇ ತಿನ್ತಿನಿ ಅಂದಳು. ಅವನು ಮುಗುಳ್ನಗುತ್ತ ಹೊರಗೆ ಹೋದ. ಮನೆಯವರೊಂದಿಗೆ ಫೋನ್‌ ಮಾಡಿ ತುಂಬಾ ಮಾತನಾಡಿ ಬೆಂಗಳೂರನ್ನು ವಿವರಿಸತೊಡಗಿದಳು. ಕಂಪ್ಯೂಟರ್‌ನಲ್ಲಿದ್ದ ಹಾಡುಗಳನ್ನು ಕೇಳತೊಡಗಿದಳು. ನಿಶಾಂತ ಒಳ್ಳೆ ಹುಡುಗ ಅಂತ ಅವಳಿಗೆ ಅನಿಸಿತು. ರೂಮ್‌ನ್ನು ಎಷ್ಟು ನೀಟಾಗಿ ಇಟ್ಟುಕೊಂಡಿದ್ದಾನೆ. ಟೆಲಿವಿಷನ್‌ ಮಾತ್ರ ಇಲ್ಲ. ಕಂಪ್ಯೂಟರ್‌, ಗೋಡೆಯಲ್ಲಿನ ಚಿತ್ರಗಳು ಎಲ್ಲವೂ ಅವಳಿಗೆ ಇಷ್ಟವಾದವು.

ಮನೆಯವರ ನೆನಪು ಕಾಡತೊಡಗಿದಾಗ ಫೋನ್‌ ಮಾಡಿದಳು. ಎಲ್ಲರ ಪ್ರೀತಿಯ ಮಾತುಗಳನ್ನು ಕೇಳಿದಾಗ ಊರಲ್ಲೇ ಇದ್ದರೆ ಎಷ್ಟು ಒಳ್ಳೆಯದ್ದಿತ್ತು ಅಂತ ಅವಳಿಗೆ ಅನಿಸಿತು. ಹಾಡು ಕೇಳಿ ಬೋರಾಯಿತು. ಅದರಲ್ಲಿ ಇಂಗ್ಲಿಷ್‌ ಸಿನಿಮಾಗಳೇ ತುಂಬಿಕೊಂಡಿದ್ದವು. ಹೆಸರಿಲ್ಲದ ಒಂದು ಫೈಲ್‌ನ್ನೂ ಆನ್‌ ಮಾಡಿದಾಗ ತಬ್ಬಿಬ್ಬಾದಳು. ಅದರಲ್ಲಿ ಬ್ಲೂಫಿಲ್ಮ್‌ಗಳ ದೊಡ್ಡ ರಾಶಿಯೇ ತುಂಬಿಕೊಂಡಿತ್ತು. ನೋಡುವ ಕುತೂಹಳವಾದರೂ ಕ್ಲೋಸ್‌ ಮಾಡಿದಳು. ಥೂ ಈ ನಿಶಾಂತನೂ ಇಂತವನೇ. ಊರಿನಲ್ಲಿ ಎಷ್ಟು ಒಳ್ಳೆಯ ಹುಡುಗನಾಗಿದ್ದ ಅಂತ ಅಂದುಕೊಂಡಳು.

***

ಸಂಜೆ ಬಂದ ನಿಶಾಂತ ಇವಳನ್ನು ಯಾವುದೋ ಹಾಸ್ಟೇಲ್‌ಗೆ ಕರೆದೊಯ್ದ. ಹಾಸ್ಟೇಲ್‌ನ ಪುಟ್ಟ ಕೋಣೆಯಲ್ಲಿ ಕುಳಿತಾಗ ಊರು, ಗೆಳೆಯ ಗೆಳತಿಯರು, ಕಾಡು, ನಾಯಿ ಬೆಕ್ಕು ದನ ಕರುಗಳೂ ಎಲ್ಲವೂ ನೆನಪಾಯಿತು. ರಾತ್ರಿಯಾದಗ ಇವಳಿದ್ದ ರೂಮ್‌ಗೆ ಮತ್ತೊಬ್ಬಳು ಬಂದಳು. ಐಟಿ ಕಂಪನಿಯಲ್ಲಿ ಕೆಲಸವಂತೆ ಇವಳ ಮುಗ್ಧಮುಖವನ್ನು ಒಂದು ತರಹಾ ನೋಡಿ ಹಾಯ್‌ ಐಹ್ಯಾಮ್‌ ನಮ್ರತಾ ಅಂತಾ ಕೈಕೊಟ್ಟಳು. ಸ್ವಲ್ಪಹೊತ್ತಾದರೂ ಅವಳು ಕೈ ಬಿಡಿಸದೇ ಇದ್ದಾಗ ಇವಳೇ ಬಿಡಿಸಿಕೊಂಡು ಐ ಏಮ್‌ ಪ್ರ..ಭಾ ಅಂತಾ ಉಗುಳು ನುಂಗುತ್ತ ಹೇಳಿದ್ದಳು. ಅವಳು ಒಂದಿಷ್ಟು ತೂರಾಡುವುದನ್ನು ನೋಡಿದಾಗ ಇವಳು ಕುಡಿದಿರುವುದು ಪ್ರಭಾಳಿಗೆ ಖಾತ್ರಿಯಾಗಿ ನಗರದ ಬಗೆಗಿನ ತಿರಸ್ಕಾರ ಮತ್ತಷ್ಟು ಹೆಚ್ಚಾಯಿತು. ತಿರಸ್ಕಾರದೊಂದಿಗೆ ನಗರದ ಕುರಿತು ಅಸಹ್ಯ ಮೂಡಿದ್ದು ರಾತ್ರಿ ಮಲಗಿದಾಗ ನಮ್ರತಾ ಇವಳ ಎದೆಗೆ ಕೈ ಹಾಕಿದಾಗ! ಪ್ರಭಾ ಭಯದಿಂದ ಮೂಲೆಯಲ್ಲಿ ಹೋಗಿ ಕುಳಿತುಕೊಂಡಳು. ಏನೋ ಗೊಣಗುತ್ತಿದ್ದ ಅವಳು ನಿದ್ದೆ ಹೋದದ್ದನ್ನು ಖಾತ್ರಿ ಪಡಿಸಿಕೊಂಡ ನಂತರ ಬೆಡ್‌ನ ಮೂಲೆಯಲ್ಲಿ ಮುದುಡಿಕೊಂಡಳು. ಎಲ್ಲಿಯ ನಿದ್ದೆ!

ಮುಂಜಾನೆ ಎದ್ದವಳೇ ನಿಶಾಂತನಿಗೆ ಫೋನ್‌ ಮಾಡಿ ಬಡಬಡಿಸಿದಳು. ಅವನು ಹಾಸ್ಟೇಲ್‌ನ ಓನರ್‌ಗೆ ಫೋನ್‌ ಮಾಡಿ ಬೇರೆ ರೂಂಗೆ ಶಿಫ್ಟ್‌ ಮಾಡಿಸಿದ.

**

ಮರುದಿನ ಆಫೀಸ್‌ಗೆ ಹೋಗಿ ಬಂದಳು. ಹೀಗೆ ಹಾಸ್ಟೇಲ್‌, ಆಫೀಸ್‌ ಅಂತ ದಿನಗಳುರಿದವು. ಹಣದ ರುಚಿಯೂ ಹಿಡಿಯಿತು. ಹಣ ನೀರಿನಂತೆ ಖರ್ಚಾಗುವುದನ್ನು ಕಂಡು ಬೆಚ್ಚಿದಳು. ಒಂದು ಸಾರಿ ಬಸ್‌ನಲ್ಲಿ ಇವಳ ಪರ್ಸ್‌ ಕಳುವಾಗಿ ಒಂದೆರಡು ಸಾವಿರ ಕಳೆದುಕೊಂಡಿದ್ದಳು.

ಒಂದು ಸಾರಿ ಇವಳಿಗೆ ಜ್ವರ ಬಂದಾಗ ರೂಂನಲ್ಲಿ ಗೀತಾ ಇರಲ್ಲಿಲ್ಲ. ನಿಶಾಂತನೇ ಇವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಅವಳಿಗೆ ಟೈಫಾಯಿಡ್‌ ಜ್ವರ ಬಂದ ಕಾರಣ ಕುಡಿಯುವ ನೀರು, ಸೇವಿಸುವ ಆಹಾರದ ಕುರಿತು ಎಚ್ಚರದಿರುವಂತೆ ಡಾಕ್ಟರ್‌ ಹೇಳಿದ್ದರು. ಮನೆಗೆ ಫೋನ್‌ ಮಾಡಿದಾಗ ಎಲ್ಲರೂ ಮನೆಗೆ ಬರಲು ಹೇಳಿದ್ದರು. ಆದರೆ ಪ್ರಯಾಣ ಮಾಡುವಷ್ಟು ತ್ರಾಸ ಇರಲ್ಲಿಲ್ಲ. ನಿಶಾಂತನೇ ಇವಳನ್ನು ಖಾಸಗಿ ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡಿದ. ಮೊದಲ ಒಂದು ದಿನ ಅವಳನ್ನು ನೋಡಿಕೊಳ್ಳುವರಿಲ್ಲದರಿಂದ ನಿಶಾಂತನೇ ಆಫೀಸ್‌ಗೆ ರಜೆ ಮಾಡಿ ಆಸ್ಪತ್ರೆಯಲ್ಲಿ ಉಳಿದಿದ್ದ.

ಅವನು ಅವಳನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದ. ಆದರೆ ಅವಳ ಬಗ್ಗೆ ಕಾಮಕ್ಕಿಂತ ಮಮತೆಯೇ ಇವನಿಗೆ ಉಕ್ಕಿ ಬರುತ್ತಿತ್ತು. ಮುಖಕ್ಕೆ ಬಿದ್ದ ಕೂದಲನ್ನು ಹಿಂದಕ್ಕೆ ಸರಿಸಿ ತಲೆ ನೇವರಿಸುವ ಬಯಕೆಯೂ ಆಗುತ್ತಿತ್ತು.

ರಾತ್ರಿ ಇವಳ ನರಳಿಕೆ ಕೇಳಿ ಬಂದರೆ ಹಣೆ ಮುಟ್ಟಿ ನೋಡಿ ಹಣೆಗೆ ಒದ್ದೆ ಬಟ್ಟೆಯಿಡುತ್ತಿದ್ದ. ಅವನ ಆರೈಕೆಯ ಫಲವೋ ಅವಳು ಬೇಗ ಗುಣಗೊಂಡು ಹಾಸ್ಟೇಲ್‌ಗೆ ಮರಳಿದಳು.

***

ರೂಂಗೆ ಮರಳಿದವಳಿಗೆ ನಿಶಾಂತ ತೋರಿದ ಕಾಳಜಿಯದ್ದೇ ನೆನಪಾಗಿ ಎದೆ ತುಂಬಿ ಬಂತು. ಎಷ್ಟು ಒಳ್ಳೆಯವನು. ಅಂತ ನೂರಾರು ಸಾರಿ ಅಂದುಕೊಂಡಳು. ಸುಮ್ಮನೆ ಇವನ ಬಗ್ಗೆ ತಪ್ಪಾಗಿ ತಿಳಿದುಕೊಂಡೆ ಅಂತ ಅಂದುಕೊಂಡಳು. ಅವನ ನೆನಪು ಅವಳಿಗೆ ಇಷ್ಟವಾಗತೊಡಗಿತ್ತು. ಥಕ್‌ ಅವನಿಗೆ ನನ್ನ ಬಗ್ಗೆ ಯಾವ ಭಾವನೆ ಇದೆಯೋ ಸುಮ್ಮನೆ ದೂರಾಗುವುದು ಬೇಡಾ ಅಂತ ಪ್ರೀತಿನಾ ಎದೆಯಲ್ಲಿ ಬಚ್ಚಿಟ್ಟುಕೊಂಡಳು.

ಅವನಿಗೂ ಅಷ್ಟೇ. ಅವಳೊಂದಿಗಿನ ಒಂದೆರಡು ದಿನದ ಸಾಮೀಪ್ಯ ಇಷ್ಟವಾಗಿತ್ತು. ಇವಳೊಂದಿಗೆ ಜೀವನ ಪೂರ್ತಿ ಕಳೆವ ಬದುಕ ನನ್ನದಾಗಿರಬಾರದೇ ಅಂತ ಮನ ಹಂಬಲಿಸಿತು.

**

ದಿನಗಳು ಕಳೆದವು.

ಆರ್ಥಿಕ ಬಿಕ್ಕಟ್ಟು ನಿಶಾಂತನ ಕಂಪನಿಗೂ ತಟ್ಟಿತು. ಪಿಂಕ್‌ಸ್ಲಿಪ್‌ ಇವನಿಗೂ ದೊರಕಿತು. ಮತ್ತೆ ಬೇರೆ ಕೆಲಸ ಹುಡುಕುವ ಗೋಜಿಗೆ ಹೋಗಲ್ಲಿಲ್ಲ. ಊರಿಗೆ ಮರಳಿದ ನಿಶಾಂತ್‌ ಸೈಬರ್‌ ಕೆಫೆಯೊಂದನ್ನು ಆರಂಭಿಸಿದ. ಇವಳು ಒಬ್ಬಂಟಿಯಾದಳು. ಇವಳನ್ನೂ ಊರಿಗೆ ಬರಲು ಒತ್ತಾಯ ಮಾಡುತ್ತಿದ್ದ. ಸೈಬರ್‌ನ ಹಿಂದಿನ ಖಾಲಿ ಜಾಗದಲ್ಲಿ ಟ್ಯುಟೋರಿಯಲ್‌ ಮಾಡುವಂತೆ ಹೇಳಿ ನಾನು ನೆರವಾಗುವುದಾಗಿ ಹೇಳುತ್ತಿದ್ದ. ಇವಳಲ್ಲಿ ಹೊಸ ಕನಸು ಕಟ್ಟ ತೊಡಗಿದ.

***

ಆಫೀಸ್‌ನಲ್ಲಿ ಬಾಸ್‌ ಸುಮ್ಮಗೆ ಕಿರಿಕಿರಿ ಮಾಡಿದಾಗ ಯಾಕೋ ನಗರದ ಸಹವಾಸವೇ ಬೇಡ ಅನಿಸಿ ಅಳು ಬಂದುಬಿಟ್ಟಿತ್ತು. ಬಿಕ್ಕಟ್ಟಿನಿಂದ ಮೊದಲ ವರ್ಷದ ಇನ್‌ಕ್ರಿಮೆಂಟ್‌ ಕೂಡ ಇಲ್ಲ. ನೆಮ್ಮದಿ ಅಂತು ಇಲ್ಲವೇ ಇಲ್ಲ. ದುಡ್ಡು ಕೊಡೋ ತೃಪ್ತಿಗಿಂತ ಬದುಕಿನ ನೆಮ್ಮದಿಯೇ ಮುಖ್ಯ ಅಂತ ಅನಿಸತೊಡಗಿತ್ತು. ಮತ್ತೆ ಊರು ನೆನಪಾಗತೊಡಗಿತು. ದನ ಕರು, ನಾಯಿ ಬೆಕ್ಕು, ಹೂವಿನ ಗಿಡಗಳು ಮತ್ತೆ ಕಾಡತೊಡಗಿದವು. ಗೆಳತಿಯ ಕೈ ಹಿಡಿದು ಬೆಟ್ಟ ಹತ್ತಬೇಕು. ತಂಗಿಯ ಜುಟ್ಟು ಹಿಡಿದು ಓದಿಸಬೇಕು. ತೋಡಲ್ಲಿ ಹೋಗಿ ಸುಮ್ಮನೆ ಏಡಿ ಹಿಡಿಯಬೇಕು.. ಇಂಥ ಕನಸುಗಳು ಇಷ್ಟವಾಗತೊಡಗಿದವು. ಊರಿನ ನೆನಪಿನ ಪುಳಕದಲ್ಲಿಯೇ ಇಂದು ಅಂತಿನ ನಿರ್ಧಾರ ಮಾಡಿ ಊರಿನ ಬಸ್‌ ಹತ್ತಿದ್ದಳು.

****

ಮತ್ತೆ ಊರಿಗೆ ಬಂದಾಗ ಮನಸ್ಸಿಗೆ ಏನೋ ನೆಮ್ಮದಿ. ಪ್ರತಿ ಗಿಡಮರಗಳನ್ನೂ ಹೊಸತು ಎಂಬಂತೆ ನೋಡಿದಳು. ಗೆಳತಿಯರು ಇವಳು ವಾಪಸ್‌ ಬಂದದ್ದನ್ನು ನೋಡಿ ಖುಷಿಗೊಂಡರು. ಮನೆಯವರು ಪ್ರೀತಿಯಿಂದ ಸ್ವಾಗತಿದರು. ನಿಶಾಂತನೂ ಫೋನ್‌ ಮಾಡಿ ಮಾತನಾಡಿದ.

***

ನಗರದಲ್ಲಿ ಕಳೆದ ಬದುಕು ಮತ್ತೆ ಊರಿಗೆ ಹೊಂದಿಕೊಳ್ಳಲು ಒಂದಿಷ್ಟು ತಡವರಿಸಿತು. ಟ್ರಾಫಿಕ್‌ ಕಿರಿಕಿರಿ ಇಲ್ಲದ ಕಿವಿ ಗುಂಯಿಗುಡುತ್ತಿತ್ತು. ಒಂದೆರಡು ವಾರ ಕಳೆದಿರಬಹುದು. ನಾಳೆ ನಿನ್ನನ್ನು ನೋಡಲು ಗಂಡಿನ ಕಡೆಯವರು ಬರುತ್ತಾರೆ ಅಂತ ಅಮ್ಮ ಹೇಳಿದಾಗ ಬೆಚ್ಚಿದಳು. ಒಳ್ಳೆ ಆಸ್ತಿ ಇರೋರು ಕಣೇ. ಒಬ್ಬನೇ ಮಗ ಒಪ್ಪಿಕೋ ಮತ್ತೆ ನಮಗೆ ಹುಡುಕಲು ಆಗುವುದಿಲ್ಲ. ಅಂತ ಅಪ್ಪ ಜೋರು ಮಾಡಿದಾಗ ಥೂ ನಗರದಲ್ಲಿಯೇ ಇದ್ರೆ ಆಗ್ತಾ ಇತ್ತು ಅಂತ ಅವಳಿಗೆ ಅನಿಸಿತು. ನಾಳೆ ಬರುವ ಹುಡುಗ ಇಷ್ಟವಾಗಿಲ್ಲ ಅಂತ ಹೇಳಬೇಕೆಂದು ಇವತ್ತೇ ತೀರ್ಮಾನ ಮಾಡಿಕೊಂಡಳು.

***

ನನ್ನ ಬಗ್ಗೆ ಈ ನಿಶಾಂತ್‌ಗೆ ಏನು ಭಾವನೆ ಇದೆ ಅಂತ ತಿಳಿದುಕೊಳ್ಳಬೇಕು ಅಂತ ಅವನಿಗೆ ಫೋನ್‌ ಮಾಡಿದಳು. ಪರಿಸ್ಥಿತಿ ಹೀಗಿದೆ ಅಂದಾಗ ಅವನು ನಗುತ್ತಾ ಹೇಳಿದ `ನಾಳೆ ನಿನ್ನನ್ನು ನೋಡಲು ಬಂದವರನ್ನು ಒಪ್ಪಿಕೋ. ಏನಾಗುವುದಿಲ್ಲ’ ಅಂತ ಹೇಳಿ ಫೋನ್‌ ಇಟ್ಟ. ಛೇ ಇವನಿಗೂ ನನ್ನ ಭಾವನೆ ಅರ್ಥವಾಗುತ್ತಿಲ್ವ. ಅಂತ ಬೇಜಾರಾಗಿ ಫೋನ್‌ ಕುಕ್ಕಿದಳು.

***

ಮರುದಿನ 11 ಗಂಟೆಗೆ ಸರಿಯಾಗಿ ಗಂಡಿನ ಕಡೆಯವರು ಬಂದರು. ಜ್ಯೂಸ್‌ ತೆಗೆದುಕೊಂಡು ಹೋಗು ಅಂತ ಅಮ್ಮ ಹೇಳಿದಾಗ ತಲೆತಗ್ಗಿಸಿ ಹೋದವಳು ಒಮ್ಮೆಗೆ ತಲೆಯೆತ್ತಿ ನೋಡಿದಳು. ನೋಡಲು ಬಂದ ಹುಡುಗ ನಿಶಾಂತನಾಗಿದ್ದ.

(ಕಥೆ ದಾರಾವಾಹಿಯಾಗುವ ಲಕ್ಷಣ ಕಂಡು ಬಂದಿರುವುದರಿಂದ ಇಲ್ಲಿಗೆ ನಿಲ್ಲಿಸಲಾಗಿದೆ. ಧನ್ಯವಾದಗಳು- ಪ್ರವೀಣ ಚಂದ್ರ)