"ಸುತ್ತಲೂ ಕಾಡು. ನಡುವೆ ನಮ್ಮ ಮನೆ. ಮನೆ ಪಕ್ಕ ಜುಳುಜುಳು ಹರಿವ ಪುಟ್ಟ ನದಿ. ನೂರಾರು ಹಕ್ಕಿಗಳ ಗಾನ. ಎಲ್ಲೆಲ್ಲೂ ತಂಪು. ವಾಹ್, ಎಷ್ಟೊಂದು ಹಿತ' ಕನಸಲ್ಲಿ ನನ್ನ ಸ್ವಗತವನ್ನು ನಿಲ್ಲಿಸುವಂತೆ ರೋಬೊ ಎಚ್ಚರಿಸಿತು. "ಗುಡ್ ಮಾರ್ನಿಂಗ್, ಶುಭೋದಯ, ಸಮಯ ಆರುಗಂಟೆ, ಎದ್ದೇಳಿ ಮಿಸ್ಟರ್ ಪ್ರವೀಣ್ ಚಂದ್ರ" ಎಂದಿತು. ಅದು ನಮ್ಮ ಮನೆ ಕೆಲಸಗಾರ ರೋಬೊ.
"ಇವತ್ತು ಡೇಟ್ ಎಷ್ಟು?' ಪಿಳಿಪಿಳಿ ಕಣ್ಣುಬಿಟ್ಟು ಕೇಳಿದೆ. ಅದಕ್ಕೆ ರೋಬೊ "ಎರಡು ಸಾವಿರದ ಐವತ್ತು, ಅಕ್ಟೋಬರ್ ಇಪತ್ತು' ಎಂದಿತ್ತು. ಸಮಯ ಹೋಗೋದೇ ಗೊತ್ತಾಗ್ತ ಇಲ್ಲ. ರಾಮ ರಾಮ' ಎಂದೆ. ಅದನ್ನೇ ಕಮಾಂಡ್ ಎಂದುಕೊಂಡ ರೋಬೊ "ರಾಮ ರಾಮ ಜಯರಾಮ, ರಘುರಾಮ' ಎಂದು ರಾಮ ಶ್ಲೋಕ ಹಾಡತೊಡಗಿತು. ಸ್ವಲ್ಪ ಹೊತ್ತು ಕೇಳುತ್ತ ಕುಳಿತೆ.
ಸರಿ, ಬಾತ್ ರೂಂಗೆ ಹೋಗಿ ಬರೋಣ ಎಂದು ಎದ್ದೆ. ಜೊತೆಗೆ ರೋಬೊನೂ ಬಂತು. "ಶೀ, ನೀನು ಹೊರಗೆ ಇರಪ್ಪ' ಎಂದೆ. "ನಿಮ್ಮ ಸೇವೆ ನನ್ನ ಕರ್ತವ್ಯ' ಎಂದು ಒಳಗೆ ಬಂತು. ಪ್ರತಿದಿನ ಇದೇ ಡೈಲಾಗ್ ಎಂದುಕೊಂಡು ಕುಳಿತುಕೊಂಡೆ. "ಸರಿಯಾದ ಪೊಸಿಷನ್ ನಲ್ಲಿ ಕುಳಿತುಕೊಳ್ಳಿ' ಆಜ್ಞಾಪಿಸಿತು. ಅದು ಹೇಳಿದಂತೆ ಕೇಳದೆ ಬೇರೆ ವಿಧಿಯಿಲ್ಲ. "ರೋಬೊ ಇಂಡಿಯಾ" ಪರಿಕಲ್ಪನೆ ಸರಿಯಾಗಿ ಜಾರಿಯಾಗಿದೆ ಎಂದುಕೊಂಡೆ.
'ಯಾವ ಪೇಪರ್ ಓದಲು ಇಷ್ಟಪಡುವಿರಿ' ಅದೇ ಮಾಮೂಲಿ ಡೈಲಾಗ್. ಇದನ್ನು ಪ್ರೋಗ್ರಾಮ್ ಮಾಡಿದವ ಸಿಕ್ಕರೆ ಸಾಯಿಸಿಬಿಡುತ್ತಿದ್ದೆ. "ಮರ್ಡರ್ ಬಗ್ಗೆ ಯೋಚನೆ ಮಾಡುವುದು ಅಪರಾಧ' ಎಂದಿತು ರೋಬೊ. ಇದಕ್ಕೆ ಮೈಂಡ್ ರೀಡಿಂಗ್ ಸಹ ಗೊತ್ತು. ಇನ್ನೊಮ್ಮೆ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೋ ಏನೋ.
"ಪೇಪರ್ ಆಮೇಲೆ ಓದ್ತಿನಿ. ಕನ್ನಡ ಚಿತ್ರಗೀತೆ ಹಾಕಪ್ಪ' ಅಂದೆ. ತಕ್ಷಣ ಅದು ಯಾವುದೋ ಹಾಡು ಹಾಕಿತು. ನಾನು ಬೇಡವೆಂದು ತಲೆಯಾಡಿಸಿದರೆ ಬೇರೆ ಹಾಡುಬರುತ್ತಿತ್ತು. ಈಗ ಕನ್ನಡ ಹಾಡುಗಳಲ್ಲಿ ಕನ್ನಡ ಪದ ಹುಡುಕಬೇಕು ಎಂದು ಗೊಣಗಿದೆ. ಅದಕ್ಕೆ ರೋಬೊ "ಪ್ಲೀಸ್ ರಿಪೀಟ್ ಯುವರ್ ಕಮಾಂಡ್' ಅಂತು. "ಏನಿಲ್ಲ ಮುಗೀತು' ಅಂದೆ. ಅದು ಟಿಶ್ಯು ತಂದುಕೊಡ್ತು. ಟಾಯ್ಲೆಟ್ ನಲ್ಲಿ ನೀರು ಬಳಸುವುದು ಅಪರಾಧ ಅಂತ ಗ್ಲೋಬಲ್ ಐಟಿ ಕೋರ್ಟ್ ಬೇರೆ ಇತ್ತೀಚೆಗೆ ತೀರ್ಪು ನೀಡಿದೆ. .
ಅಲ್ಲಿಂದ ಹೊರಗೆ ಬಂದೆ. ರೋಬೊ ಅಲ್ಲೇ ಪಕ್ಕದಲ್ಲಿದ್ದ ಮೆಷಿನ್ ಒಳಗಿನಿಂದ ಒಂದು ಲೋಟ ಚಹಾ ತಂದುಕೊಡ್ತು. ಕುಡಿದಾಗ ಹಾಯೆನಿಸಿತ್ತು. "ಏನಪ್ಪ ಇವತ್ತಿನ ಸುದ್ದಿ?" ಅಂದೆ. ರೋಬೊ ಕೈಬೆರಳಿನಿಂದ ಬೆಳಕು ಹೊರಗೆ ಬಂದು ಗೋಡೆ ಮೇಲೆ ಬಿತ್ತು. ನೂರಾರು ಇಂಗ್ಲಿಷ್ ಪೇಪರ್ ಗಳ ಹೆಸರು ಪಟಪಟನೆ ಮೂಡಿದವು. ಕನ್ನಡ ಪೇಪರ್ ಅಂದ್ರೆ ಈ ರೋಬೊಗೂ ತಾತ್ಸಾರ. ವಿಜಯ ಕರ್ನಾಟಕ ಹಾಕಪ್ಪ ಅಂದೆ. ಸ್ವಲ್ಪ ಸ್ಲೋ ಆಗಿ ಲೋಡ್ ಆಯ್ತು. ಕನ್ನಡ ಪೇಪರ್ ಗಳೆಲ್ಲ ಸ್ಲೋ ಆಗಿಯೇ ಲೋಡ್ ಆಗೋದು. ಅದು ಈ ರೋಬೊ ಕುತಂತ್ರ ಆಗಿರಬೇಕು.
ವಿಜಯ ಕರ್ನಾಟಕ ಗೋಡೆ ಮೇಲೆ ಮೂಡಿತು. ರಾಜ್ಯದಲ್ಲಿ ವೈಫೈ ಉಚಿತ ಅಂತ ಮುಖ್ಯಮಂತ್ರಿ ಘೋಷಣೆ ಮಾಡಿದ್ರು. ಅಕ್ಕಿ ಬೆಲೆ ಇಳಿಕೆ ಎಂದಿತ್ತು. ಅದನ್ನು ನೋಡಿ ಖುಷಿಯಾಯ್ತು. ಒಂದು ಕೇಜಿ ಅಕ್ಕಿ ದರ 12 ಸಾವಿರಕ್ಕೆ ಇಳಿದಿತ್ತು. ಕೆಲವು ದಿನದ ಹಿಂದೆ ಅಕ್ಕಿ ರೇಟ್ ಕೇಜಿಗೆ 18 ಸಾವಿರ ರೂ. ಇತ್ತು. ದುಡ್ಡಿಗೆ ಬೆಲೆ ಇಲ್ಲ. ಒಂದೊಂದು ಸುದ್ದಿನ ನೋಡಿದಾಗ ಅದು ಝೂಮ್ ಆಗುತ್ತಿತ್ತು. ಏನೋ ಗೆಶ್ಚರ್ ಟೆಕ್ನಾಲಜಿಯಂತೆ. ನಾನು ದೂರದಿಂದಲೇ ಕೈಯಾಡಿಸಿದರೆ ಸುದ್ದಿ ಬೇಕಾದಂತೆ ಬದಲಾಗುತ್ತಿತ್ತು. ನಾನು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಹೀಗಿರಲಿಲ್ಲ. ಚೆನ್ನಾಗಿ ಹತ್ತಿಪ್ಪತ್ತು ಪುಟಗಳ ಪೇಪರ್ ಬರುತ್ತಿತ್ತು. ಈಗ ಪೇಪರ್ ಕತೆ ಹೇಳಿದರೆ ಮಗ ನಗುತ್ತಾನೆ. ಈಗ ಅದೇ ವಿನ್ಯಾಸದ ಪೇಪರ್ ಗೋಡೆ ಮೇಲೆ ಮೂಡುತ್ತದೆ.
ಸರಿ, ನಾನು ವಾಕಿಂಗ್ ಹೋಗಿ ಬರ್ತಿನಿ ಅಂತ ಎದ್ದು ಹೋದೆ. ಓಕೆ ಅಂತ ಹೇಳಿತು ರೋಬೊ. ಸದ್ಯ ಇದರ ಸಹವಾಸ ತಪ್ಪಿತು ಅಂತ ಹೊರಗೆ ಬಂದೆ. ಹೆಸರಿಗಷ್ಟೇ ಪಾರ್ಕ್. ಎಲ್ಲವೂ ಗಿಡಗಳ ಕಾಂಕ್ರಿಟ್ ಕಲಾಕೃತಿಗಳು. ಒಂದೆಡೆ ಆಮ್ಲಜನಕ ಸಿಂಪಡಣೆ ಬೇರೆ. ಕೈನಲ್ಲಿದ್ದ ವಾಚ್ ವೈಬ್ರೆಟ್ ಆಯ್ತು. ಪಾರ್ಕ್ ಬೆಂಚ್ ಮೇಲೆ ವಾಚ್ ಪೋಕಸ್ ಮಾಡಿದೆ. ಅಲ್ಲಿ ಮೂಡಿದ ಪರದೆ ಮೇಲೆ ಗೆಳೆಯ ಸೂರ್ಯ ಇದ್ದ. ಅವನು ಆಗಾಗ ಚಾಟಿಂಗ್ ಗೆ ಬರುತ್ತಾನೆ. ಆತ ನನ್ನ ಕ್ಲಾಸ್ ಮೇಟ್. ನಾನು ವಿಜಯ ನೆಕ್ಸ್ಟ್ ವೀಕ್ಲಿಯಲ್ಲಿದ್ದಾಗ ಅವನು ಪ್ರಜಾವಾಣಿಯಲ್ಲಿದ್ದ.
"ಹೇ, ದನಿಕುಲೆ, ದಾನೆ ಮಾರಾಯ ಸುದ್ದಿನೇ ಇಜ್ಜಿ(ಏನು ಧನಿಗಳೇ ಸುದ್ದಿನೇ ಇಲ್ಲ)' ಅಂದ. "ಎಂಚಿ ಸಾವು ಮಾರೆ, ಬೋರ್ ಲೈಫ್' ಅಂದೆ. ಹೆಚ್ಚಾಗಿ ನಾವು ತುಳುವಿನಲ್ಲೇ ಮಾತಾಡೋದು. ತುಳು ಭಾಷೆಯನ್ನು ಅರ್ಥ ಮಾಡಿಕೊಳ್ಳುವ ರೋಬೊ ಇನ್ನೂ ಬಂದಿಲ್ಲ. ರೋಬೊ ಭಾಷೆಗೆ ತುಳುವನ್ನು ಸೇರಿಸಬೇಕು ಎಂದು ದೆಹಲಿಯಲ್ಲಿ ಈಗಲೂ ಹೋರಾಟ ನಡೆಯುತ್ತಲೇ ಇದೆ.
ನಾವು ತುಳುವಿನಲ್ಲೇ ಮಾತು ಮುಂದುವರೆಸಿದೆವು. ಅದರ ಕನ್ನಡ ಅನುವಾದ ಹೀಗಿದೆ. "ಸೂರ್ಯ ನಿನ್ನ ಮಗ ಮಾರ್ಸ್ ನಿಂದ ಯಾವಾಗ ವಾಪಸ್ ಬರ್ತಾನೆ' ಎಂದೆ. "ಅವನನ್ನು ಬಿಡಪ್ಪ. ಅಲ್ಲೇ ಹೋಗಿ ಸೆಟ್ಲ್ ಆದರೂ ಆದನು' ಎಂದ. ಸೂರ್ಯನ ಮಗ ನಾಸಾದಲ್ಲಿ ಕೆಲಸ ಮಾಡೋದು. ಒಮ್ಮೆ ಮಾರ್ಸ್, ಒಮ್ಮೆ ಲೂನಾರ್ಸ್ ಅಂತ ವರ್ಷಕ್ಕೆ ಎರಡು ಬಾರಿ ಟ್ರಿಪ್ ಹೋಗ್ತಾ ಇರ್ತಾನೆ. "ನನ್ನನ್ನೂ ಲೂನಾರ್ಸ್ ಗೆ ಕರ್ಕೊಂಡು ಹೋಗ್ತಾನಂತೆ' ಎಂದು ಸೂರ್ಯ. "ನೀನು ಬಿಡಪ್ಪ ನಿನ್ನ ಹೆಸರೇ ಸೂರ್ಯ, ಎಲ್ಲಾ ಗ್ರಹಗಳು ನಿನ್ನ ಸುತ್ತ ಸುತ್ತುತ್ತಿವೆ' ಅಂದೆ. "ಹ್ಹ ಹ್ಹ ಹ್ಹ' ಗಹಿಗಹಿಸಿ ನಕ್ಕ' ಅವನ ನಗುವೇ ಹಾಗೆ. ಕ್ಲಾಸಲ್ಲಿ ಪಾಠ ನಡೆಯುವಾಗಲೂ ಹೀಗೆ ಅಟ್ಟಹಾಸ ಮಾಡುತ್ತಿದ್ದ.
"ವಿಷ್ಯ ಗೊತ್ತಾಯ್ತ' ಅವನು ಬ್ರೇಕಿಂಗ್ ನ್ಯೂಸೊಂದು ಹೇಳಿದ. "ಗ್ಯಾಲಾಕ್ಸಿಯಲ್ಲಿ ತುಂಬಾ ನೀರಿರುವ ಒಂದು ಗ್ರಹ ಸಿಕ್ಕಿದೆಯಂತೆ. ಇಲ್ಲಿರುವ ಎಲ್ಲಾ ಓಲ್ಡ್ ಪೀಪಲ್ ಗಳನ್ನು ಅಲ್ಲಿಗೆ ಕಲಿಸ್ತಾರಂತೆ. ನಾಸಾದಲ್ಲಿ ಈ ಪ್ರಾಜೆಕ್ಟ್ ನಡೀತಾ ಇದೆ. ನಾವೇಲ್ಲ ಬೇಗ ಆ ಗ್ರಹಕ್ಕೆ ಹೋಗೋದು ಗ್ಯಾರಂಟಿ' ಅಂದ.
ಯಾರು ಬೇಕಾದರೂ ಹೋಗ್ಲಿ. ನಾನು ಮಾತ್ರ ಪುತ್ತೂರಲ್ಲೇ ಸಾಯೋದು ಅಂದೆ. ಮತ್ತೆ ಹ್ಹ ಹ್ಹ ಎಂದು ನಕ್ಕ ಸೂರ್ಯ "ಸರಿ, ನಾನು ಆಮೇಲೆ ಸಿಗ್ತಿನಿ. ರೋಬೊ ವಿಶ್ವಕಪ್ ಫುಟ್ಬಾಲ್ ನೋಡ್ಬೇಕು' ಅಂತ ಹೇಳಿ ಮರೆಯಾದ.
ಕತೆ ತುಂಬಾ ಉದ್ದ ಆಯ್ತು. ಸದ್ಯ ಇಷ್ಟು ಸಾಕು ;-).