Tuesday, 21 November 2017

ವಿಲಾಸ್ ನಾಯಕ್ ಸಂದರ್ಶನ: ಕಲೆ ಎಂಬ ಕರಿಯರ್

SHARE
ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ಬಿಟ್ಟು ಕಲೆಯನ್ನೇ ಕರಿಯರ್ ಆಗಿ ಸ್ವೀಕರಿಸಿ ದೇಶ-ವಿದೇಶಗಳಲ್ಲಿ ಮಿಂಚುತ್ತಿದ್ದಾರೆ ಕರ್ನಾಟದ ಪ್ರತಿಭೆ ವಿಲಾಸ್ ನಾಯಕ್. ಕಲೆಯನ್ನು ಪೂರ್ಣಕಾಲಿಕ ಅಥವಾ ಅರೆಕಾಲಿಕ ಕರಿಯರ್ ಆಗಿ ಸ್ವೀಕರಿಸಲು ಬಯಸುವವರಿಗೆ ಸ್ಪೂರ್ತಿ ತುಂಬುವ ಟಿಪ್ಸ್‍ಗಳನ್ನು ವಿಕೆ ಮಿನಿ ವಿಶೇಷ ಸಂದರ್ಶನದಲ್ಲಿ ಅವರು ನೀಡಿದ್ದಾರೆ.

* ಪ್ರವೀಣ ಚಂದ್ರ ಪುತ್ತೂರು
ರಾಷ್ಟ್ರಮಟ್ಟದ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಚಕಚಕನೆ ಕೆಲವೇ ನಿಮಿಷದಲ್ಲಿ ಪೇಂಟಿಂಗ್ ಬಿಡಿಸಿ ಬೆರಗುಗೊಳಿಸುವ ವಿಲಾಸ್ ನಾಯಕ್ ಬಗ್ಗೆ ನಿಮಗೆ ಗೊತ್ತಿರಬಹುದು. ಈಗ ಅವರು ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಬೇಡಿಕೆ ಪಡೆದಿರುವ ಸ್ಪೀಡ್ ಪೇಂಟರ್.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ಸಿಂಗಾಪುರದ ಅಧ್ಯಕ್ಷರ ಚಾರಿಟಿ ಶೋನಲ್ಲಿ, ಏಷ್ಯಾ ಗಾಟ್ ಟಾಲೆಂಟ್‍ನಲ್ಲಿ, ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸೇರಿದಂತೆ ನೂರಾರು ಕಡೆ ಸ್ಪೀಡ್ ಪೇಂಟಿಗೆ ನಡೆಸಿ ಜನರ ಮುಖದಲ್ಲಿ ಅಚ್ಚರಿ ಹುಟ್ಟಿಸಿದ್ದಾರೆ. ಅಬ್ದುಲ್ ಕಲಾಂ, ಸಚಿನ್ ತೆಂಡೂಲ್ಕರ್, ನರೇಂದ್ರ ಮೋದಿ, ಪ್ರಣಬ್ ಮುಖರ್ಜಿ , ಪುಟ್ಬಾಲ್ ದಂತಕತೆ ಪೀಲೆ ಮುಂತಾದವರ ಮುಂದೆ ತನ್ನ ಕಲೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.
ಕೆಲವು ವರ್ಷದ ಹಿಂದೆ ಅವರು ಕಾಪೆರ್Çರೇಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಐದು ವರ್ಷದ ಹಿಂದೆ ಎಚ್‍ಆರ್ ಹುದ್ದೆಯನ್ನು ಬಿಟ್ಟ ಇವರ ಈಗಿನ ಕಲಾ ಕರಿಯರ್‍ನ ಸಕ್ಸಸ್ ಸ್ಟೋರಿ ಅಚ್ಚರಿ ಹುಟ್ಟಿಸುವಂತದ್ದು. ವಿವಿಧ ಹವ್ಯಾಸ, ಪ್ರತಿಭೆಯನ್ನು ಹೊಂದಿದ್ದು, ಇಷ್ಟವಿಲ್ಲದ ಇಷ್ಟವಿಲ್ಲದ ವೃತ್ತಿಯಲ್ಲಿ ಜೀವನ ಸವೆಸುತ್ತಿರುವವರಿಗೆ, ಪ್ರತಿಭೆಯನ್ನು ವೃತ್ತಿಯಾಗಿ ಸ್ವೀಕರಿಸಲು ಬಯಸುವವರಿಗೆ ಅಮೂಲ್ಯ ಸಲಹೆಗಳನ್ನು ವಿಲಾಸ್ ಇಲ್ಲಿ ನೀಡಿದ್ದಾರೆ.
ಶಿಕ್ಷಣ ಮತ್ತು ಕೆಲಸ
ಉಜಿರೆಯಲ್ಲಿ ಬಿಎ ಪದವಿ (7ನೇ ರ್ಯಾಂಕ್), ಮೈಸೂರು ವಿವಿಯಲ್ಲಿ ಎಂಎಸ್‍ಡಬ್ಲ್ಯು ಪದವಿ(2ನೇ ರ್ಯಾಂಕ್) ಕನ್ನಡ ಮುಕ್ತ ವಿವಿಯಲ್ಲಿ ಪಿಜಿಡಿಎಚ್‍ಆರ್‍ಎಂ ಓದಿದ್ದೆ. ಶಿಕ್ಷಣ ಮುಗಿದ ನಂತರ ನಾನು ಶಾಹಿ ಎಕ್ಸ್‍ಪೆÇೀರ್ಟ್ ಕಂಪನಿಯಲ್ಲಿ 1 ವರ್ಷ, 2 ತಿಂಗಳು ಕೆಲಸ ಮಾಡಿದೆ. ನಂತರ ಐಬಿಎಂನ ಮಾನವ ಸಂಪನ್ಮೂಲ ವಿಭಾಗದಲ್ಲಿ ಸುಮಾರು ನಾಲ್ಕೂವರೆ ವರ್ಷ ಕೆಲಸ ಮಾಡಿದೆ. ಹೀಗೆ ಎಂಎನ್‍ಸಿ ಕಂಪನಿಯಲ್ಲಿ ಸುಮಾರು 6 ವರ್ಷ ಕೆಲಸ ಮಾಡಿದ್ದೆ.

ಕೆಲಸದಲ್ಲಿ ಕಲೆಯ ಗುಂಗು
ಆಫೀಸ್‍ನಲ್ಲಿ ಕೆಲಸ ಮಾಡುವಾಗ, ಮನೆಯಲ್ಲಿ ಒಬ್ಬನೇ ಇದ್ದಾಗ, ಚಿತ್ರ ಬಿಡಿಸಿಕೊಂಡಿರುವಾಗ, ಟ್ಯಾಲೆಂಟ್ ಮ್ಯಾನೇಜ್‍ಮೆಂಟ್ ಕುರಿತು ತಿಳುವಳಿಕೆ ಬಂದ ಸಂದರ್ಭದಲ್ಲಿ ನಾನು ನನ್ನ ಬಗ್ಗೆ ಹೆಚ್ಚು ಯೋಚಿಸಲು ಆರಂಭಿಸಿದ್ದೆ. ನಾನು ನನ್ನ ಪ್ರತಿಭೆಯನ್ನು ಏನು ಮಾಡುತ್ತಿದ್ದೇನೆ? ಯಾವ ರೀತಿ ಬಳಕೆ ಮಾಡುತ್ತಿದ್ದೇನೆ? ಯಾಕೆ ವ್ಯರ್ಥ ಮಾಡುತ್ತಿದ್ದೇನೆ? ಇತ್ಯಾದಿ ಚಿಂತನೆಗಳನ್ನು ಮಾಡುತ್ತಿದ್ದೆ. ಇರುವ ಒಂದು ಜೀವನದಲ್ಲಿ ದೇವರು ನಮಗೆ ನೀಡಿರುವ ಪ್ರತಿಭೆಯನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಬೇಕು ಎಂದೆನಿಸಿತ್ತು. ನಾನು ನನ್ನ ಪ್ರತಿಭೆಯನ್ನಿಟ್ಟುಕೊಂಡು ಏನಾದರೂ ಸಾಧನೆ ಮಾಡಬೇಕು ಎಂದೆಲ್ಲ ಯೋಚಿಸುತ್ತಿದ್ದೆ. ಕೆಲಸ ಮುಗಿಸಿ ಮನೆಗೆ ಬಂದು ರಾತ್ರಿಯಿಡಿ ಚಿತ್ರ ಬಿಡಿಸುತ್ತ ಮುಂಜಾನೆ 3-4 ಗಂಟೆಯವರೆಗೆ ಇದೇ ಆಲೋಚನೆಯಲ್ಲಿ ಇರುತ್ತಿದ್ದೆ. ಕೆಲಸ ಮಾಡುವಾಗಲೂ ಮುಂದೆ ಏನಾಗಬೇಕು ಎಂಬ ಪರಿಕಲ್ಪನೆ ಮಾಡುತ್ತಿದ್ದೆ.
ಕೆಲಸ ಬಿಡುವ ರಿಸ್ಕ್
ಕೆಲಸ ಬಿಡಲು ತೆಗೆದುಕೊಳ್ಳುವ ನಿರ್ಧಾರ ಮತ್ತು ಕೆಲಸ ಬಿಟ್ಟ ನಂತರ ಕಲೆಯ ಕಡೆಗೆ ಪೂರ್ತಿ ತೊಡಗಿಸಿಕೊಳ್ಳುವುದು ಕೊಂಚ ಸವಾಲಿನ ಸಂಗತಿ. ಆ ಸಮಯದಲ್ಲಿ ಬಹಳಷ್ಟು ಜನರು ಉತ್ಸಾಹ ಕುಗ್ಗಿಸುವ ಮಾತುಗಳನ್ನಾಡುತ್ತಿದ್ದರು. ರಿಯಾಲಿಟಿ ಶೋನಲ್ಲಿ ಜನಪ್ರಿಯತೆ ಪಡೆದ ತಕ್ಷಣ ಕರಿಯರ್ ಹಾಳು ಮಾಡಿಕೊಳ್ಳಬೇಡಿ. ಇಂತಹ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಬಹಳಷ್ಟು ಜನರು ಹೇಳುತ್ತಿದ್ದರು. ಆದರೆ, ನಾನೂ ಆದಾಗಲೇ ರಿಸ್ಕ್ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಾಗಿತ್ತು.
 ಜೀವನದಲ್ಲಿ ನಾಳೆ ಏನಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಯಾಕೆ, ಒಂದು ಖಾಯಂ ಉದ್ಯೋಗಕ್ಕೆ ಅಂಟಿಕೊಂಡು ನಮ್ಮ ಪ್ಯಾಷನ್ ಅನ್ನು ಬಿಡಬೇಕು? ಯಾಕೆ ನಮ್ಮ ಕನಸನ್ನು ಸಾಯಿಸಬೇಕು ಎಂದು ಅನಿಸಿದ್ದರಿಂದ ಎಂಎನ್‍ಸಿ ಜಾಬ್‍ಗೆ ರಿಸೈನ್ ಮಾಡಿದ್ದೆ.
ಸರಿಯಾದ ಪ್ಲಾನ್ ಅಗತ್ಯ
ನಾನು ಎಂಎನ್‍ಸಿ ಕಂಪನಿಗೆ ರಾಜೀನಾಮೆ ನೀಡಿ ಈ ತಿಂಗಳಿಗೆ ಐದು ವರ್ಷವಾಗುತ್ತದೆ. ಇಲ್ಲಿಯವರೆಗೆ ಯಾವುದೇ ಸಮಸ್ಯೆಯಾಗಿಲ್ಲ. ಯಾಕೆಂದರೆ, ಕೆಲಸ ಬಿಡುವ ಕುರಿತು ಮತ್ತು ಕಲೆಯನ್ನು ಕರಿಯರ್ ಆಗಿ ಸ್ವೀಕರಿಸುವ ಕುರಿತು ನಾನು ಸರಿಯಾದ ಪ್ಲಾನ್ ಮಾಡಿದ್ದೆ. ನಾನು ಮಾಡುವುದು ಎಕ್ಸ್‍ಕ್ಲೂಸಿವ್ ಆರ್ಟ್ ಆಗಿರುವ ಕಾರಣ ಅವಕಾಶಗಳು ಸಿಗುತ್ತದೆ ಎನ್ನುವ ಭರವಸೆ ಇತ್ತು. ಈಗ ನನಗೆ ಬರುತ್ತಿರುವ ಹೆಚ್ಚು ಅವಕಾಶವನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ನನ್ನ ಮುಂದಿರುವ ಅತ್ಯುತ್ತಮ ರೀತಿಯ ಸವಾಲಾಗಿದೆ.
ಹೊಸ ಬಗೆಯ ಉದ್ಯೋಗಾವಕಾಶ
ನೀನು ಡಾಕ್ಟರ್ ಆಗು, ಎಂಜಿನಿಯರ್ ಆಗು, ಆರ್ಟಿಸ್ಟ್ ಆಗಿ ಏನು ಮಾಡ್ತಿಯಾ? ಸ್ಟಾಂಡ್ ಅಪ್ ಕಮಿಡಿಯನ್ ಆಗಿ, ಡಿಜೆ ಆಗಿ ಏನು ಮಾಡ್ತಿಯಾ? ಎಂದು ಹೇಳುವವರಿದ್ದಾರೆ. ಆದರೆ, ಇದೆಲ್ಲ ಹೊಸ ಬಗೆಯ ಉದ್ಯೋಗ ಮತ್ತು ಹವ್ಯಾಸಗಳು. ಇಂತಹ ಕಲೆಗಳನ್ನು ವೃತ್ತಿಯಾಗಿ ಸ್ವೀಕರಿಸಿ ಉತ್ತಮ ದುಡಿಮೆ ಮಾಡಬಹುದು ಎನ್ನುವುದಕ್ಕೆ ನನ್ನ ಬದುಕೇ ಸಾಕ್ಷಿ. ನನಗೂ ಎಷ್ಟೋ ಸಾರಿ ಅನಿಸಿದೆ, ನಾನು ಈಗಲೂ ಎಂಎನ್‍ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನನ್ನ ಆರ್ಥಿಕ ಪರಿಸ್ಥಿತಿ ಹೀಗೆ ಇರುತ್ತಿತ್ತಾ ಎಂದು.

ಆರ್ಥಿಕತೆಯೂ ಉತ್ತಮ
ಪ್ರತಿಭೆ ಕೈ ಹಿಡಿದರೆ ಆರ್ಥಿಕವಾಗಿಯೂ ಉತ್ತಮಗೊಳ್ಳಬಹುದು. ನಾನು ಇನ್ನೂ ಎಂಎನ್‍ಸಿ ಕಂಪನಿಯಲ್ಲೇ ಇರುತ್ತಿದ್ದರೆ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಲು ಸಾಧ್ಯವಿರಲಿಲ್ಲ. ಕಲೆಯನ್ನು ಕರಿಯರ್ ಆಗಿ ಸ್ವೀಕರಿಸಿದ ಎರಡೂವರೆ ವರ್ಷದಲ್ಲಿಯೇ ಬೆಂಗಳೂರಿನಲ್ಲಿ ನಾನು ಸ್ವಂತ ಮನೆ ಮಾಡಿದ್ದೇನೆ. (ಇವರ ಚಿತ್ರಕಲೆಯಿಂದ ಸಂಗ್ರಹಗೊಂಡಿರುವ 20 ಮಿಲಿಯನ್‍ಗೂ ಹೆಚ್ಚು ಡಾಲರ್‍ಗಳು ಸಮಾಜ ಸೇವೆಗೆ ಬಳಕೆಯಾಗಿದೆ) .
ಸ್ಪೀಡ್ ಪೇಂಟಿಂಗ್ ಮತ್ತು ಫೈನ್ ಆಟ್ರ್ಸ್: ಈಗ ನನಗೆ ಹೆಚ್ಚು ಪ್ರಮಾಣದಲ್ಲಿ ಸ್ಪೀಡ್ ಪೇಂಟಿಂಗ್ ಆಫರ್ ಬರುತ್ತಿದೆ. ಎಷ್ಟೇಂದರೆ, ನನ್ನ ಫೈನ್ ಆಟ್ರ್ಸ್ ಕುರಿತು ಗಮನಕೊಡಲಾಗದಷ್ಟು. ಈಗಾಗಲೇ 26 ದೇಶ ಸುತ್ತಿದ್ದೇನೆ. ಸ್ಟೇಜ್‍ನಲ್ಲಿ ನಿಂತು ವೇಗವಾಗಿ ಮಾಡುವ ಸ್ಪೀಡ್ ಪೇಂಟಿಂಗ್ ಮತ್ತು ಮನೆಯಲ್ಲಿ ಕುಳಿತು ಸಾವಧಾನವಾಗಿ ರಚಿಸುವ ಫೈನ್ ಆಟ್ರ್ಸ್ ಅನ್ನು ಬ್ಯಾಲೆನ್ಸ್ ಮಾಡುವುದು ನನ್ನ ಮುಂದಿರುವ ಸವಾಲಾಗಿದೆ. ಇದಕ್ಕಾಗಿ ಎಷ್ಟೋ ಸ್ಪೀಡ್ ಪೇಂಟಿಂಗ್ ಶೋಗಳಿಗೆ ಒಪ್ಪಿಗೆ ನೀಡದೆ ಸಮತೋಲನ ಕಾಯ್ದುಕೊಳ್ಳುತ್ತಿದ್ದೇನೆ.



ವೃತ್ತಿ ಮತ್ತು ಪ್ರವೃತ್ತಿ ಜೊತೆಜೊತೆಗೆ
ಕರಿಯರ್ ಜೊತೆ ಹವ್ಯಾಸವನ್ನೂ ಜೊತೆಜೊತೆಯಾಗಿ ನಿಭಾಯಿಸುವವರು ಸಾಕಷ್ಟು ಜನರು ಇದ್ದಾರೆ. ನಾನು ಎಂಎನ್‍ಸಿಯಲ್ಲಿದ್ದಾಗ ಇವೆರಡನ್ನು ಜೊತೆಜೊತೆಯಾಗಿಯೇ ಮಾಡಿದ್ದೆ. ಆದರೆ, ಇದರ ಒಂದು ಅವಗುಣ ಎಂದರೆ ನಮಗೆ ಹವ್ಯಾಸಕ್ಕಾಗಿ ಸಿಗುವ ಸಮಯ ತೀರ ಅತ್ಯಲ್ಪ. ನಿಮ್ಮ ಹವ್ಯಾಸವೇ ಪೂರ್ತಿ ಕರಿಯರ್ ಆದರೆ ನಿಮಗೆ ವರ್ಷದ 345 ದಿನವೂ ದೊರಕುತ್ತದೆ. ನಿಮ್ಮ ಕನಸನ್ನು ಬೇಗ ಈಡೇರಿಸಿಕೊಳ್ಳಬಹುದು.


ಕನಸನ್ನು ಚೇಸ್ ಮಾಡಿ
ನೀವು ನಿಮ್ಮ ಕನಸನ್ನು ಫಾಲೊ ಮಾಡಿ. ನಿಮ್ಮ ಕನಸನ್ನು ಸರಿಯಾಗಿ ಹಿಂಬಾಲಿಸಿ. ಇದಕ್ಕೆ ಸರಿಯಾಗಿ ಪ್ಲಾನ್ ಮಾಡಿ, ಕಷ್ಟಪಟ್ಟು ದುಡಿದರೆ ನಂತರ ಹಣ, ಫೇಮ್ ಎಲ್ಲವೂ ನಿಮ್ಮನ್ನು ಫಾಲೊ ಮಾಡುತ್ತೆ.
ಎಂಎನ್‍ಸಿಯಿಂದ ಕಲಿತ ಪಾಠ
ಕಾಪೆರ್Çರೇಟ್ ಜಗತ್ತಿನಲ್ಲಿ ನಾನು ಕಲಿತ ಪಾಠಗಳು ನನ್ನ ಕಲಾ ಕರಿಯರ್‍ಗೆ ಸಾಕಷ್ಟು ನೆರವಾಗಿದೆ. ನನ್ನ ಹಳೆಯ ಸ್ನೇಹಿತರು ಟೀವಿ ಸಂದರ್ಶನಗಳಲ್ಲಿ ಮಾತನಾಡುವುದನ್ನು ನೋಡುವಾಗ `ನಾವು ನೋಡಿದ ಹಳೆಯ ವಿಲಾಸ್ ಇವನೇನಾ?' ಎಂದು ಅಚ್ಚರಿಗೊಳ್ಳುತ್ತಾರೆ. ಜನರೊಂದಿಗೆ ಹೇಗೆ ಸಂವಹನ ನಡೆಸಬೇಕೆಂದು, ಸ್ಟೇಜ್‍ನಲ್ಲಿ ಹೇಗೆ ಮಾತನಾಡಬೇಕೆಂಬ ಕೌಶಲ ನನ್ನಲ್ಲಿ ಬಹಳಷ್ಟು ಕಡಿಮೆ ಇತ್ತು. ಫೇಸ್ ಟು ಫೇಸ್ ಕಮ್ಯುನಿಕೇಷನ್, ಇಮೇಲ್ ಕಮ್ಯುನಿಕೇಷನ್, ಸ್ಟೇಜ್ ಪ್ರಸಂಟೇಷನ್ ಇತ್ಯಾದಿಗಳನ್ನು ಕಾಪೆರ್Çರೇಟ್ ಜಗತ್ತು ನನಗೆ ಕಲಿಸಿಕೊಟ್ಟಿದೆ. ಅಲ್ಲಿ ಕಲಿತ ಪಾಠಗಳು ನನಗೆ ದೇಶ ವಿದೇಶಗಳಿಂದ ಬೇರೆ ಬೇರೆ ಸಂಘಟಕರಿಂದ ಆಫರ್ ಬಂದಾಗ, ಕೋ ಆರ್ಡಿನೇಟ್ ಮಾಡಲು, ಚಾರಿಟಿ ಶೋಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸಲು, ಆಫರ್‍ಗಳ ಕುರಿತು ನೆಗೋಸಿಯೇಷನ್ ಮಾಡಲು ಸಾಕಷ್ಟು ನೆರವಾಗುತ್ತಿದೆ.
ಸ್ಪೀಡ್ ಪೇಂಟಿಂಗ್ ಹಿಂದಿನ ಪರಿಶ್ರಮ
ಕೆಲವೊಂದು ರಿಯಾಲಿಟಿ ಶೋನಲ್ಲಿ ನಾನು ಕೆಲವೇ ನಿಮಿಷದಲ್ಲಿ ಮಾಡುವ ಪೇಟಿಂಗ್ ಹಿಂದೆ ಸಾಕಷ್ಟು ಪ್ರ್ಯಾಕ್ಟೀಸ್ ಇರುತ್ತದೆ. ಸ್ಟೇಜಲ್ಲಿ ಎಷ್ಟು ದೊಡ್ಡ ಕ್ಯಾನ್ವಸ್‍ನಲ್ಲಿ ಪೇಂಟಿಂಗ್ ಮಾಡುತ್ತೇನೋ ಅದೇ ರೀತಿ ಮನೆಯಲ್ಲಿ ಕುಳಿತು 50-60 ಕ್ಯಾನ್ವಸ್‍ನಲ್ಲಿ ತಪ್ಪುಗಳನ್ನು ಕಂಡುಹುಡುಕುತ್ತ, ಮತ್ತೆ ಮತ್ತೆ ಪೇಂಟಿಂಗ್ ರಚಿಸಬೇಕಾಗುತ್ತದೆ. ಇಷ್ಟೆಲ್ಲ ಪ್ರಯತ್ನ ಪಟ್ಟರೂ ಸ್ಟೇಜ್‍ನಲ್ಲಿ ಅದೇ ರೀತಿ ಪೇಂಟಿಂಗ್ ಮೂಡಿ ಬರುತ್ತೇ ಎಂದು ಹೇಳಲಾಗುವುದಿಲ್ಲ.

ಸೋಷಿಯಲ್ ಮೀಡಿಯಾದ ಮಿತವಾದ ಬಳಕೆ
ಈಗ ಅವಶ್ಯಕತೆಗಿಂತ ಹೆಚ್ಚು ವಾಟ್ಸ್‍ಆ್ಯಪ್, ಫೇಸ್‍ಬುಕ್, ಟೀವಿ, ಯೂಟ್ಯೂಬ್ ಇತ್ಯಾದಿಗಳ ಲಭ್ಯತೆ ಇದೆ. ಇವುಗಳನ್ನು ಎಷ್ಟು ಬಳಕೆ ಮಾಡಬೇಕೆಂಬ ಅರಿವು ಎಲ್ಲರಲ್ಲಿಯೂ ಇರಬೇಕು. ಅವಶ್ಯಕತೆ ಇಲ್ಲದೆ ಇದ್ದಾಗ ಇವುಗಳನ್ನು ಸ್ವಿಚ್ ಆಫ್ ಮಾಡಿ. ಯಾವಾಗ ನಾವು ಇವುಗಳೊಂದಿಗೆ ಡಿಸ್‍ಕನೆಕ್ಟ್ ಆಗಿ ನಮ್ಮ ಜೊತೆ ಕನೆಕ್ಟ್ ಆಗ್ತಿವೋ ಆಗ ನಮಗೆ ನಮ್ಮಲ್ಲಿರುವ ಸ್ಟ್ರೆಂಥ್ ಏನು, ನಮ್ಮಲ್ಲಿರುವ ಸಕಾರಾತ್ಮಕ ಶಕ್ತಿಗಳೇನು, ನಮ್ಮ ದೌರ್ಬಲ್ಯ ಏನು ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಇಷ್ಟವಿಲ್ಲದ ಕ್ಷೇತ್ರದಲ್ಲಿಯೂ ಆಸಕ್ತಿ
ಕೆಲವರು ಅನಿವಾರ್ಯವಾಗಿ ಆಸಕ್ತಿ ಇಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಂತಹ ಸನ್ನಿವೇಶದಲ್ಲಿ ಎಷ್ಟು ಸಾಧ್ಯವೋ ಅಷ್ಟು ಆಸಕ್ತಿ ಬೆಳೆಸಿಕೊಳ್ಳಿ. ಇನ್ವಾಲ್ ಆಗಿ ಕೆಲಸ ಮಾಡಿ. ನಿಮ್ಮಲ್ಲಿ ಹಾಡುವುದು, ಕ್ರಿಕೆಟ್ ಆಡುವುದು, ನಾಟಕ, ಚಿತ್ರಕಲೆ, ಕರಕುಶಲತೆ ಇತ್ಯಾದಿ ವಿಶೇಷ ಪ್ರತಿಭೆ ಇದ್ದರೆ, ಸಮಯ ಸಿಕ್ಕಾಗಲೆಲ್ಲ ಇವುಗಳಲ್ಲಿ ತೊಡಗಿಸಿಕೊಳ್ಳಿ. ಸಂತೋಷ ಸಿಗುತ್ತೆ.
ಪ್ರತಿಭಾನ್ವಿತರಿಗೆ ಟಿಪ್ಸ್

  1.  ತುಂಬಾ ಜನರು ತಮ್ಮಲ್ಲಿರುವ ಪ್ರತಿಭೆ ಮತ್ತು ಆರ್ಥಿಕ ತೊಂದರೆಗಳ ಕುರಿತು ನನ್ನಲ್ಲಿ ಹೇಳುತ್ತಾರೆ. ಕೆಲಸ ಬಿಡುವುದಕ್ಕೆ ಆಗೋಲ್ಲ ಅಂತಾರೆ. ನನ್ನಲ್ಲೂ ಆರ್ಥಿಕ ತೊಂದರೆ ಇತ್ತು. ಅಪ್ಪನ ಪುಟ್ಟ ಅಂಗಡಿಯಲ್ಲಿ ಕೆಲಸ ಮಾಡುತ್ತ, ಚಿತ್ರಕಲೆ ಮಾಡುತ್ತ, ಓದುತ್ತ ಬೆಳೆದವನು ನಾನು. ನಿಮ್ಮಲ್ಲಿ ಎಷ್ಟು ಸಮಯವಿದೆ ಅಷ್ಟು ಸಮಯವನ್ನು ಪ್ರತಿಭೆಗಾಗಿ ಮೀಸಲಿರಿಸಿ, ನಿಮ್ಮ ಖುಷಿಗಾಗಿ ಪ್ರತಿಭೆಯನ್ನು ಕಂಟಿನ್ಯೂ ಮಾಡಿ.

  2.  ಯಾವಾಗಲೂ ರಿಸ್ಕ್ ತೆಗೆದುಕೊಳ್ಳಬೇಕು ಎಂಬ ಕಾರಣದಿಂದ ರಿಸ್ಕ್ ತೆಗೆದುಕೊಳ್ಳಬೇಡಿ. ಲೆಕ್ಕಚಾರದ ರಿಸ್ಕ್ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ. ನಾನು ತುಂಬಾ ಯೋಚಿಸಿ, ಅಳೆದುತೂಗಿ ತೆಗೆದುಕೊಂಡಿರುವ ರಿಸ್ಕ್ ಇದಾಗಿದೆ.

  3.  ಪ್ಲಾನ್ ಎ ಮತ್ತು ಪ್ಲಾನ್ ಬಿ ಇರಲಿ. ಎಲ್ಲಾದರೂ ನಾನು ಚಿತ್ರಕಲೆಯಲ್ಲಿ ಯಶಸ್ವಿಯಾಗದೆ ಇದ್ದರೆ ಮತ್ತೆ ಕಾಪೆರ್Çರೇಟ್ ಜಗತ್ತಿಗೆ ಮರಳುವ ತೀರ್ಮಾನ ಮಾಡಿಯೇ ಕೆಲಸ ಬಿಟ್ಟಿದ್ದೆ. ಎಲ್ಲಾದರೂ ನಿಮ್ಮ ಮೊದಲ ಪ್ಲಾನ್ ಯಶಸ್ವಿಯಾಗದೆ ಇದ್ದರೆ ಮತ್ತೊಂದು ಪ್ಲಾನ್‍ಗೆ ಪ್ರವೇಶಿಸಿ.

  4.  ಕಲೆಗೆ ಖಚಿತ ವೇತನ ಇರುವುದಿಲ್ಲ. ಹೀಗಾಗಿ, ಕೆಲಸ ಬಿಡುವ ಮೊದಲು ಕನಿಷ್ಠ ಇಂತಿಷ್ಟು ದುಡಿಯಬಲ್ಲೆ ಎಂಬ ಭರವಸೆ ಹುಟ್ಟಿದ ನಂತರವೇ ತೀರ್ಮಾನ ಕೈಗೊಳ್ಳಿರಿ.

  5.  ಸರಿಯಾಗಿ ಹೋಂವರ್ಕ್ ಮಾಡಿ. ನಿಖರವಾದ ಪ್ಲಾನ್ ಮಾಡಿ. ತಕ್ಷಣಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

Published in Vijayakarnataka Mini

ವಿಲಾಸ್ ನಾಯಕ್ ವೆಬ್ ಲಿಂಕ್

All Image Copyrights: Villas Nayak
SHARE

Author: verified_user

1 comment: