ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಉದ್ಯೋಗಿಗಳು ಕಲಿಯಬೇಕಾದ ಮತ್ತು ಕಲಿಯಬಾರದ ಅಂಶಗಳೇನು? ಈ ಕಾರ್ಯಕ್ರಮ ನೀಡುವ ಪಾಠವನ್ನು ನಮ್ಮ ಕರಿಯರ್ ಪ್ರಗತಿಗೂ ಬಳಸಬಹುದೇ? ಇಲ್ಲಿದೆ ಹೆಚ್ಚಿನ ಮಾಹಿತಿ.
* ಪ್ರವೀಣ್ ಚಂದ್ರ ಪುತ್ತೂರು
ಬಿಗ್‍ಬಾಸ್ ಕಾರ್ಯಕ್ರಮ ನೀವು ಇಷ್ಟಪಡಬಹುದು. ಇಷ್ಟ ಪಡದೆ ಇರಬಹುದು. ಆದರೆ, ಸಂಪೂರ್ಣವಾಗಿ ನಿರಾಕರಿಸುವುದು ಕಷ್ಟ. ಯಾಕೆಂದರೆ, ಕ್ಯಾಮೆರಾ ಇಲ್ಲವೆನ್ನುವುದನ್ನು ಬಿಟ್ಟರೆ ಪ್ರತಿಯೊಂದು ಮನೆಯಲ್ಲಿ, ಆಫೀಸ್‍ನಲ್ಲಿ ಇರುವ ವಾತಾವರಣದಂತೆಯೇ ಬಿಗ್‍ಬಾಸ್ ಮನೆ ಇರುತ್ತದೆ.
ನೀವು ಕೆಲಸ ಮಾಡುತ್ತಿರುವ ಆಫೀಸ್ ಅನ್ನೇ ನೋಡಿ. ಅದನ್ನೇ ಬಿಗ್‍ಬಾಸ್ ಮನೆಯೆಂಬ ದೃಷ್ಟಿಯಲ್ಲಿ ನೋಡಿ. ಅಲ್ಲಿ ಎಷ್ಟೊಂದು ಜನರಿದ್ದಾರೆ. ವಿವಿಧ ಜಾತಿ, ಧರ್ಮ, ಪ್ರತಿಭೆಯುಳ್ಳವರು ಅಲ್ಲಿರುತ್ತಾರೆ. ಎಲ್ಲರೂ ಒಂದೇ ಮನೆಯಲ್ಲಿ ಇರುವವರಂತೆ ಇರುತ್ತಾರೆ. ಅಲ್ಲೂ ಗುಂಪುಗಾರಿಕೆ ಇದೆ. ಜಗಳವಿದೆ. ದರ್ಪ, ಆಹಂ, ಮತ್ಸರ, ಕಾಲೆಳೆಯುವಿಕೆ ಇದೆ. ಅಷ್ಟೇ ಏಕೆ, ಯಾರ್ಯಾರೋ ಒಳಗೆ ಬರುತ್ತಾರೆ. ಯಾರ್ಯಾರೋ ಹೊರಗೆ ಬರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮವು ಕರಿಯರ್‍ಗೆ ಅತ್ಯಂತ ಮಹತ್ವದ ಪಾಠ ಕಲಿಸುತ್ತದೆ. ನಾವು ಅನುಕರಿಸಬಹುದಾದ ಮತ್ತು ಅನುಕರಿಸಬಾರದ ಹಲವು ಸಂಗತಿಗಳು ಬಿಗ್‍ಬಾಸ್‍ನಲ್ಲಿದೆ.
ಉತ್ತಮ ನಾಯಕತ್ವ: ಕನ್ನಡ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಸ್ಥಾನದಲ್ಲಿ ಇನ್ಯಾರೋ ಸಾಮಾನ್ಯ ನಟರನ್ನು ಕಲ್ಪಿಸಿಕೊಳ್ಳಿ. ಯಾಕೋ, ಸರಿಬರುತ್ತಿಲ್ಲ ತಾನೇ. ಕನ್ನಡದಲ್ಲಿ ಬಿಗ್‍ಬಾಸ್‍ಗೆ ಸುದೀಪ್ ಮಾತ್ರ ಸೂಕ್ತವೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿರುತ್ತದೆ. ಉತ್ತಮ ನಾಯಕತ್ವದ ಲಕ್ಷಣವೇ ಇದು. ನೀವು ಕೆಳಹಂತದ ಉದ್ಯೋಗದಲ್ಲಿದ್ದರೆ ನಿಮಗೆ ನಿಮ್ಮ ಟೀಮ್ ಲೀಡರೇ ನಾಯಕ ಆಗಬಹುದು. ಆ ಟೀಮ್ ಲೀಡರ್‍ಗೆ ಇನ್ಯಾರೋ ಮ್ಯಾನೇಜರ್ ನಾಯಕ ಆಗಿರಬಹುದು. ಮ್ಯಾನೇಜರ್‍ಗೆ ಚೀಫ್ ಮ್ಯಾನೇಜರ್, ಚೀಫ್ ಮ್ಯಾನೇಜರ್‍ಗೆ ಸಿಇಒ ಬಿಗ್‍ಬಾಸ್‍ನಂತೆ ಕಾಣಬಹುದು. ಈ ಎಲ್ಲಾ ಚೈನ್‍ಗಳು ಸಮರ್ಥವಾಗಿರುವುದು ಅತ್ಯಂತ ಮುಖ್ಯ. ಸಹೋದ್ಯೋಗಿಗಳು ಗೌರವಿಸುವಂತಹ ಉತ್ತಮ ವ್ಯಕ್ತಿತ್ವವನ್ನು ಲೀಡರ್ ಹೊಂದಿರಬೇಕು. ಇಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವವರು ಮಾತ್ರ ನಾಯಕರಾಗುತ್ತಾರೆ.
ಬೇಗ ಎದ್ದೇಳಿ: ತಡವಾಗಿ ಮಲಗಿ ತಡವಾಗಿ ಎದ್ದೇಳುವ ಗುಣವನ್ನು ಬಿಗ್‍ಬಾಸ್ ನೋಡಿ ಕಲಿಯಬೇಡಿ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಬಹುತೇಕರಿಗೆ ಬೆಳಗಾಗುವುದು ಒಂಬತ್ತರ ಮೇಲೆಯೇ. ಮತ್ತೆ ಬಹುತೇಕರು ಮಲಗುವುದು ತಡವಾಗಿಯೇ. ಥೇಟ್ ಕಾಪೆರ್Çರೇಟ್ ಕಲ್ಚರ್‍ನಂತೆಯೇ. ರಾತ್ರಿ ಯಾವುದೋ ಪಾರ್ಟಿಗೆ ಹೋಗುವುದು. ಬೆಳಗ್ಗೆ ಒಂಬತ್ತರ ನಂತರ ಎದ್ದೇಳುವುದನ್ನು ಬಹುತೇಕ ಉದ್ಯೋಗಿಗಳು ರೂಢಿಸಿಕೊಂಡಿದ್ದಾರೆ. ಬೆಳಗ್ಗೆ ಎದ್ದು ನಿದ್ದೆಗಣ್ಣಿನಲ್ಲೇ ಆಫೀಸ್‍ಗೆ ಬರುತ್ತಾರೆ. ಇದರ ಬದಲು, ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಎದ್ದು, ವ್ಯಾಯಾಮ, ವಾಕಿಂಗ್ ಮಾಡಿ. ದಿನದ ಆರಂಭ ಉತ್ತಮವಾಗಿದ್ದರೆ ನೀವು ಆಫೀಸ್‍ನಲ್ಲಿಯೂ ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕರಿಯರ್ ಪ್ರಗತಿಗೆ ಈ ಲವಲವಿಕೆ ಅತ್ಯಂತ ಅಗತ್ಯ.
ಗಾಸಿಪ್ ಬೇಡ: ಬಿಗ್‍ಮನೆಯ ಅತ್ಯಂತ ಆಕರ್ಷಣೆ ಅಲ್ಲಿನ ಗಾಸಿಪ್ ಆಗಿದೆ. ಯಾರೋ ಅವರ ಬಗ್ಗೆ ಹೀಗಂದರು, ಹಾಗಂದರು, ಆತ ಹೀಗೆ, ಇವಳು ಹೀಗೆ ಎಂದೆಲ್ಲ ಗುಸುಗುಸಿಗೆ ಬಿಗ್‍ಬಾಸ್ ಕ್ಯಾಮೆರಾ ಕಣ್ಣಾಗುತ್ತದೆ ಮತ್ತು ಕಿವಿಯಾಗುತ್ತದೆ. ಬಿಗ್‍ಮನೆಯಲ್ಲಿ ನಡೆಯುವ ಈ ಗುಸುಗುಸು ಪೂರ್ತಿ ಮನೆಯ ವಾತಾವರಣವನ್ನೇ ಹಾಳು ಮಾಡುತ್ತದೆ. ಆಫೀಸ್‍ನಲ್ಲಿಯೂ ಇಂತಹ ಗಾಸಿಪ್‍ಗಳು ಸಾಮಾನ್ಯ. ನೀವು ಗಾಸಿಪ್ ಮಾಡುವವರಾಗಿದ್ದರೆ ನೀವು ನಾಮಿನೆಟ್ ಆಗುವವರ ಲಿಸ್ಟ್‍ನಲ್ಲಿದ್ದೀರಿ ಎಂದು ತಿಳಿಯಿರಿ.
ಗುಂಪುಗಾರಿಕೆ: ಬಿಗ್‍ಬಾಸ್ ಮನೆಯಲ್ಲಿ ಗುಂಪುಗಾರಿಕೆ ನೋಡಿರುತ್ತೀರಿ. ಇರುವ ಕೆಲವೇ ಮಂದಿಯಲ್ಲಿ ಹಲವು ಬಣಗಳು ಸೃಷ್ಟಿಯಾಗುತ್ತವೆ. ಆಫೀಸ್‍ನಲ್ಲಿಯೂ ಹಾಗೆಯೇ. ಒಂದಿಷ್ಟು ಗುಂಪುಗಾರಿಕೆ, ರಾಜಕೀಯ ಇರುತ್ತದೆ. ಇಂತಹ ಗುಂಪುಗಾರಿಕೆಯೂ ಕಂಪನಿಯ ಶತ್ರು.
ಆರೋಗ್ಯಕರ ಸ್ಪರ್ಧೆ: ಬಿಗ್‍ಬಾಸ್‍ನಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರೂ ಸ್ಫರ್ಧಿಯಾಗಿರುತ್ತಾರೆ. ಎಲ್ಲರೂ ಗೆಲ್ಲಬೇಕೆಂದು ಬಯಸುತ್ತಾರೆ. ಆದರೆ, ಆ ಗೆಲುವು ಪಡೆಯಲು ಅತ್ಯಂತ ಪ್ರಮುಖವಾಗಿ ಬೇಕಾದದ್ದು ಪ್ರಯತ್ನ, ಪ್ರಾಮಾಣಿಕತೆ ಮತ್ತು ಪ್ರತಿಭೆ. ನೀವಿರುವ ಕಂಪನಿಯಲ್ಲಿಯೂ ಉನ್ನತ್ತ ಸ್ಥಾನಕ್ಕೆ ಹೋಗಲು ಪ್ರತಿಯೊಬ್ಬರೂ ಬಯಸುತ್ತಿರುತ್ತಾರೆ. ಪ್ರಯತ್ನ, ಪ್ರತಿಭೆ, ಪ್ರಾಮಾಣಿಕತೆ ಇರುವವರು ಇಲ್ಲೂ ಪ್ರಗತಿ ಕಾಣುತ್ತಾರೆ.
ಪರ್ಫಾಮೆನ್ಸ್ ಮುಖ್ಯ: ಬಿಗ್‍ಬಾಸ್‍ನಲ್ಲಿ ವಿವಿಧ ರೀತಿಯ ಟಾಸ್ಕ್‍ಗಳು ಇರುತ್ತವೆ. ಪ್ರತಿದಿನ, ಕ್ಷಣವೂ ಟಾಸ್ಕ್‍ನಿಂದ ಕೂಡಿರುತ್ತದೆ. ಇಲ್ಲಿ ಉತ್ತಮ ಪರ್ಫಾಮೆನ್ಸ್ ತೋರಿದವರು ಮಾತ್ರ ಉಳಿಯುತ್ತಾರೆ. ಇದ್ದು ಇಲ್ಲದಂತೆ ಇರುವವರು, ಟಾಸ್ಕ್‍ಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳದವರು ಬಿಗ್‍ಬಾಸ್ ಮನೆಯಿಂದ ಮನೆಗೆ ಹೋಗುತ್ತಾರೆ. ಕಂಪನಿಗಳು ಸಹ ಪರ್ಫಾಮೆನ್ಸ್ ತೋರುವವರಿಗೆ ಮಾತ್ರ ಮಣೆ ಹಾಕುತ್ತದೆ. ಇಲ್ಲವಾದರೆ ಮನೆಗೆ ಕಳುಹಿಸುತ್ತದೆ.
ಮಾತು ಮತ್ತು ಕೃತಿ: ಬಿಗ್‍ಬಾಸ್‍ನಲ್ಲಿ ಕೆಲವರು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಅವರ ಮಾತಿಗೂ ಕೃತಿಗೂ ತಾಳೆಯಾಗುವುದೇ ಇಲ್ಲ. ಆಫೀಸ್‍ನಲ್ಲಿಯೂ ಹಾಗೆಯೇ, ಕೆಲವರು ಮಾತು ಮಾತ್ರ ಆಡುತ್ತಾರೆ. ಅವರ ಮಾತು ಕೃತಿಯಾಗುವುದೇ ಇಲ್ಲ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುವವರು ಒಂದಿಷ್ಟು ದಿನ ಕಂಪನಿಯನ್ನು ಯಾಮಾರಿಸಬಹುದಾದರೂ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಕೆಲಸ ಕಲಿಯಿರಿ: ಬಿಗ್‍ಬಾಸ್‍ನಲ್ಲಿ ವಿವಿಧ ವಿಐಪಿಗಳು ಇರುತ್ತಾರೆ. ಅವರೂ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಬಾತ್‍ರೂಂ ಸ್ವಚ್ಛ ಮಾಡಬೇಕಾಗುತ್ತದೆ. ನೀವು ಕರಿಯರ್‍ನಲ್ಲಿ ಪ್ರಗತಿ ಕಾಣಬೇಕಾದರೆ ನಿಮ್ಮ ಕೆಲಸಕ್ಕೆ ಮಾತ್ರ ಸೀಮಿತರಾಗಬೇಡಿ. ಕಂಪನಿಯ ಎಲ್ಲಾ ಸಿಬ್ಬಂದಿಗಳು ಮಾಡುವ ಕೆಲಸದ ಬಗ್ಗೆಯೂ ಅರಿವಿರಲಿ.
ದುಂದು ವೆಚ್ಚ ಬೇಡ: ಬಿಗ್‍ಬಾಸ್‍ನ ಲಗ್ಷುರಿ ಟಾಸ್ಕ್‍ನಿಂದ ಎಲ್ಲರೂ ಕಲಿಯಬಹುದಾದ ಒಂದು ಅಂಶವಿದೆ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟೇ ಖರ್ಚು ಮಾಡಿ ಎಂಬ ಅತ್ಯಂತ ಮಹತ್ವದ ಪಾಠವನ್ನು ಅದು ಹೇಳಿಕೊಡುತ್ತದೆ. ನಿಮ್ಮ ವೇತನಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಕಾರು ಸಾಲ, ಮನೆ ಸಾಲವೆಂದು ಹೆಚ್ಚು ಹೊರೆಯಲ್ಲಿ ಇರಬೇಡಿ.
ಬ್ಯಾಗ್ ಸಿದ್ಧವಾಗಿರಲಿ: ಕೊನೆಯ ಮತ್ತು ಅತ್ಯಂತ ಪ್ರಮುಖ ಪಾಠವೆಂದರೆ `ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಟ್ಟುಕೊಳ್ಳಿ'. ನೀವು ಸದಾ ಯಾವಾಗ ಬೇಕಾದರೂ ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು. ಕೆಲಸ ಹೋಗುವ ಭಯದಲ್ಲಿ ಇರಬೇಡಿ. ನಿಮಗೆ ಎಲ್ಲಿ ಹೋದರೂ ಅವಕಾಶ ಸಿಗುತ್ತದೆ ಎಂಬಂತಹ ವ್ಯಕ್ತಿತ್ವ, ಪ್ರತಿಭೆ ಬೆಳೆಸಿಕೊಳ್ಳಿ.
- ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಆಫೀಸ್‍ನಲ್ಲಿ ಮತ್ತು ಬಿಗ್‍ಬಾಸ್‍ನಲ್ಲಿ ಉಳಿಯಬಹುದು. ಇತ್ತೀಚೆಗೆ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ಅಭ್ಯರ್ಥಿಯೊಬ್ಬರು ಹೊರಹೋಗಲು ಆರೋಗ್ಯ ಸಮಸ್ಯೆಯೂ ಪ್ರಮುಖ ಕಾರಣವಾಗಿತ್ತು.
- ಬಿಗ್‍ಬಾಸ್‍ನಲ್ಲಿ ಅತ್ತರೆ ಅನುಕಂಪದ ಓಟ್ ಬರುತ್ತೆ ಎಂದು ಹೇಳುವವರು ಇದ್ದಾರೆ. ಆದರೆ ಆಫೀಸ್‍ನಲ್ಲಿ ಯಾವಾಗಲೂ ನಮ್ಮ ವೀಕ್‍ನೆಸ್ ಅನ್ನು ಪ್ರದರ್ಶಿಸಬಾರದು. ನೀವು ಸ್ಟ್ರಾಂಗ್ ಆಗಿದ್ದಷ್ಟು ಒಳ್ಳೆಯದು.
- ನಿಮಗೆ ಇಷ್ಟವಾಗದ ವಿಚಾರದ ಬಗ್ಗೆ ಸಾತ್ವಿಕವಾಗಿ ಪ್ರತಿಭಟನೆ ಮಾಡಿ. ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡಬೇಡಿ. ಒಳ್ಳೆಯ ಕಾರಣದಿಂದ ಗಮನ ಸೆಳೆಯಿರಿ. ಗಿಮಿಕ್ ಮಾಡಿ ಗಮನ ಸೆಳೆಯಬೇಡಿ.
- ಇತರರನ್ನು ಗೌರವಿಸಿ. ನಿಮ್ಮಲ್ಲಿ ಇರುವ ಕೆಟ್ಟಗುಣಗಳನ್ನು ಬಿಟ್ಟುಬಿಡಿ. ನಿಮ್ಮಲ್ಲಿ ಇತರರಿಗೆ ಇಷ್ಟವಾಗದ ಸಂಗತಿಗಳು ಯಾವುದು ಎಂದು ತಿಳಿದುಕೊಳ್ಳಿ.ತಾನು ಮಾತ್ರ ಗೆಲ್ಲಬೇಕೆಂದು ಸ್ವಾರ್ಥಿಯಾದರೆ ಎಲ್ಲರೂ ದೂರ ಸರಿಯುತ್ತಾರೆ.
- ನಿಮಗೆ ಗೊತ್ತಿರುವ ಕೌಶಲವನ್ನು ಕಂಪನಿಯ ಇತರ ಸಹೋದ್ಯೋಗಿಗಳಿಗೂ ಹೇಳಿಕೊಡಿ. ಇತರರ ನೋವಿಗೆ ಸ್ಪಂದಿಸಿ. ಅಗತ್ಯಬಿದ್ದರೆ ಸಹಾಯ ಮಾಡಿ.
- ನಾವು ಆಡುವ ಮಾತುಗಳ ಕುರಿತೂ ಎಚ್ಚರದಿಂದ ಇರಬೇಕು. ನಿಮಗೆ ತಿಳಿಯದಂತೆ ಆಗುವ ತಪ್ಪುಗಳ ಕುರಿತೂ ಎಚ್ಚರದಿಂದ ಇರಬೇಕು.
- ಆಫೀಸ್ ಎಂದರೆ ಸದಾ ಕತ್ತೆಯಂತೆ ದುಡಿಯಬೇಕೆಂದಿಲ್ಲ. ಆಗಾಗ ಫನ್, ಮನರಂಜನೆ ಇರಬೇಕು. ನಗುಮುಖದಿಂದ ಇದ್ದರೆ ಮಾತ್ರ ನಿಮ್ಮ ಆರೋಗ್ಯ ಮತ್ತು ಕಂಪನಿಯ ಆರೋಗ್ಯ ಚೆನ್ನಾಗಿರುತ್ತದೆ.
- ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಪ್ರದರ್ಶಿಸಲು ಬಿಗ್‍ಬಾಸ್ ಅಥವಾ ಆಫೀಸ್ ಉತ್ತಮ ವೇದಿಕೆಯಾಗಿದೆ. ಇಲ್ಲಿ ಪ್ರತಿಭಾನ್ವಿತರು ಉಳಿಯುವ ಸಾಧ್ಯತೆ ಹೆಚ್ಚಿದೆ.
0 ಪ್ರತಿಕ್ರಿಯೆಗಳು: