Thursday, 9 November 2017

 ಆನ್‍ಲೈನ್ ಟ್ಯೂಟರ್ ಆಗುವಿರಾ?

ಆನ್‍ಲೈನ್ ಟ್ಯೂಟರ್ ಆಗುವಿರಾ?

ಈಗಿನ ಇಂಟರ್‍ನೆಟ್ ಜಗತ್ತು ಹಲವು ವಿಭಿನ್ನ ಉದ್ಯೋಗಾವಕಾಶಗಳನ್ನು ಮನೆ ಬಾಗಿಲಿಗೆ ತಂದಿರಿಸಿದೆ. ಅಂತಹ ಹುದ್ದೆಗಳಲ್ಲಿ ಆನ್‍ಲೈನ್ ಟೀಚಿಂಗ್ ಸಹ ಪ್ರಮುಖವಾದದ್ದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಬಹುತೇಕ ವಿದ್ಯಾರ್ಥಿಗಳಿಂದು ಶಾಲೆ, ಕಾಲೇಜು ಮುಗಿಸಿ ಟ್ಯೂಷನ್‍ಗೆಂದು ಹೊರಗಡೆ ಹೋಗುವುದಿಲ್ಲ. ತಮ್ಮ ಮನೆಯಲ್ಲಿಯೇ ವೆಬ್ ಕ್ಯಾಮ್ ಆನ್ ಮಾಡಿ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುತ್ತಾರೆ. ಅವರಿಗೆ ಆನ್‍ಲೈನ್ ಟೀಚರ್ ಪಾಠ ಮಾಡುತ್ತಾರೆ. ಈ ರೀತಿಯ ಶಿಕ್ಷಣ ಟ್ರೆಂಡ್ ಈಗ ಹೆಚ್ಚಾಗಿದೆ. ಇದರಿಂದ ಉದ್ಯೋಗಾವಕಾಶವೂ ಹೆಚ್ಚಾಗಿದೆ. ಆನ್‍ಲೈನ್ ಟ್ಯೂಟರ್ ಎಂದು ಜಾಬ್ ವೆಬ್‍ಸೈಟ್‍ಗಳಲ್ಲಿ ಹುಡುಕಿದರೆ ಸಾಕಷ್ಟು ಜಾಬ್ ಆಫರ್‍ಗಳು ಕಾಣಸಿಗುತ್ತವೆ. ಮನೆಯಲ್ಲಿಯೇ ಕುಳಿತು ಪಾಠ ಮಾಡುವುದರಿಂದ ಇದು ಗ್ರಹಿಣಿಯರಿಗೆ, ನಿವೃತ್ತರಿಗೆ ಮತ್ತು ಉನ್ನತ್ತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪಾರ್ಟ್‍ಟೈಂ ಉದ್ಯೋಗವಾಗುತ್ತದೆ. ಈಗ ಆನ್‍ಲೈನ್‍ನಲ್ಲಿ ಹೊಸ ಹೊಸ ಕೋರ್ಸ್‍ಗಳನ್ನು ಕಲಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಆನ್‍ಲೈನ್ ಟ್ಯೂಟರ್‍ಗಳಿಗೆ ಉದ್ಯೋಗಾವಕಾಶ ಹೆಚ್ಚಾಗುತ್ತಿದೆ.

ಅರ್ಹತೆ ಏನಿರಬೇಕು?
ಆನ್‍ಲೈನ್ ಟ್ಯೂಟರ್ ಆಗಲು ಉಳಿದ ಟೀಚಿಂಗ್ ಪೆÇೀಸ್ಟ್‍ಗಳಿಗೆ ಇರುವಂತೆ ಟೀಚಿಂಗ್ ಶಿಕ್ಷಣ, ಸ್ನಾತಕೋತ್ತರ ಇತ್ಯಾದಿ ವಿದ್ಯಾರ್ಹತೆ ಇರಬೇಕು. ತಂತ್ರಜ್ಞಾನದ ಸಮರ್ಪಕ ಬಳಕೆ ತಿಳಿದರಬೇಕಾಗುತ್ತದೆ. ಹೆಚ್ಚಿನ ಟ್ಯೂಟರ್ ಸಂಸ್ಥೆಗಳು ಉತ್ತಮ ಸಂವಹನ ಕೌಶಲ ಇರುವವರಿಗೆ ಆದ್ಯತೆ ನೀಡುತ್ತವೆ.
ಹೇಗೆ ಟೀಚಿಂಗ್ ಮಾಡಬೇಕು?: ಆನ್‍ಲೈನ್ ಟ್ಯೂಟರ್‍ಗಳು ಕ್ಲಾಸ್ ರೂಂನಲ್ಲಿ ಪಾಠ ಮಾಡುವ ಕೆಲಸವನ್ನೇ ಮಾಡುತ್ತಾರೆ. ಆದರೆ, ಆನ್‍ಲೈನ್‍ನಲ್ಲಿ ಕೇವಲ ಬೋಧನೆ ಮಾಡುತ್ತ ಇದ್ದರೆ ಸಾಲದು. ಇಂಟರ್‍ನೆಟ್ ತಂತ್ರಜ್ಞಾನದ ವೆಬ್ ಕ್ಯಾಮೆರಾ, ಫೆÇೀರಮ್‍ಗಳು, ಸೋಷಿಯಲ್ ಮೀಡಿಯಾ, ಬ್ಲಾಗಿಂಗ್ ತಾಣಗಳು, ಚಾಟ್ ರೂಂ ಇತ್ಯಾದಿಗಳನ್ನು ಬಳಸಿ ಪಾಠ ಮಾಡಬೇಕಾಗುತ್ತದೆ. ಇಮೇಲ್, ಚಾಟ್ ರೂಂ ಅಥವಾ ಮೆಸೆಜ್ ಬೋರ್ಡ್ ಮೂಲಕ ವಿದ್ಯಾರ್ಥಿಯೊಂದಿಗೆ ಮುಖಾಮುಖಿಯಾಗಬೇಕಾಗುತ್ತದೆ.

ಟ್ಯೂಟರ್‍ಗೆ ಟಿಪ್ಸ್
ನಿಮ್ಮ ಆನ್‍ಲೈನ್ ಟೀಚಿಂಗ್ ಹೆಚ್ಚು ಪರಿಣಾಮಕಾರಿಯಾಗಲು ಸಹಕರಿಸುವ ಒಂದಿಷ್ಟು ಟಿಪ್ಸ್‍ಗಳು ಇಲ್ಲಿವೆ.
* ಆನ್‍ಲೈನ್‍ನಲ್ಲಿ ಏನು ಪಾಠ ಮಾಡಬೇಕೆಂದು ಮೊದಲೇ ರೂಪುರೇಷೆ ಸಿದ್ಧವಾಗಿರುತ್ತದೆ. ಅದನ್ನು ಸಮರ್ಪಕವಾಗಿ ಪ್ರಸಂಟೇಷನ್ ಮಾಡುವ ಕಲೆ ನಿಮಗಿರಬೇಕು. ವಿದ್ಯಾರ್ಥಿಗಳು ತಕ್ಷಣ ಏನಾದರೂ ಪ್ರಶ್ನೆ ಕೇಳಿದರೆ ಉತ್ತರಿಸುವ ಜ್ಞಾನ ನಿಮ್ಮಲ್ಲಿ ಇರಬೇಕು. ಇದಕ್ಕಾಗಿ ಆನ್‍ಲೈನ್‍ನಲ್ಲಿ ವಿದ್ಯಾರ್ಥಿಗಳಿಗೆ ಇಂಪ್ರೆಷನ್ ಮಾಡುವಂತಹ ಗುಣ ಬೆಳೆಸಿಕೊಳ್ಳಿ.
* ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಇರುವವರು ಎಂದು ಕಡೆಗಣಿಸಬೇಡಿ. ಕಾಲಕಾಲಕ್ಕೆ ಎಲ್ಲಾ ಅಸೈನ್‍ಮೆಂಟ್‍ಗಳನ್ನು ಕೇಳಿರಿ. ಅವರಿಗೆ ಹೋಂವರ್ಕ್ ಕುರಿತು ನೆನಪಿಸುತ್ತ ಇರಿ. ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಮೂಡಿಸಿ. ಆನ್‍ಲೈನ್ ಎನ್ನುವುದು ಮಾಧ್ಯಮವಷ್ಟೇ, ಕ್ಲಾಸ್‍ರೂಂನಲ್ಲಿ ಪಾಠ ಮಾಡುವಷ್ಟು ಸೀರಿಯಸ್‍ನೆಸ್ ಇಲ್ಲೂ ಇರಲಿ.
* ನಿಗದಿತ ಸಮಯದಲ್ಲಿ ಇಂತಿಷ್ಟು ವಿಷಯಗಳನ್ನು ಬೋಧಿಸುವ ಅನಿವಾರ್ಯತೆ ಇರುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೇ ಎಂದು ತಿಳಿದುಕೊಂಡೇ ಮುಂದುವರೆಯಿರಿ.
* ಪ್ಲಾನಿಂಗ್ ಇರಲಿ: ಸಿದ್ಧತೆ ನಡೆಸದೆ ಆನ್‍ಲೈನ್ ಟೀಚಿಂಗ್ ಮಾಡಬೇಡಿ. ಪ್ರತಿದಿನ ಹೆಚ್ಚು ಕಲಿಯಿರಿ. ಪರಿಣಾಮಕಾರಿಯಾಗಿ ಬೋಧನೆ ಮಾಡಿ.
* ಸಮರ್ಪಕ ಫೀಡ್‍ಬ್ಯಾಕ್ ನೀಡಿ. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿ. ಜೊತೆಗೆ, ಅವರಲ್ಲಿ ಹೆಚ್ಚು ಹೆಚ್ಚು ಪ್ರಶ್ನೆ ಕೇಳುವಂತೆ ಮಾಡಿ. ವಿದ್ಯಾರ್ಥಿಗಳು ಕೇಳಿದ ಕಲಿಕಾ ಸಾಮಾಗ್ರಿಗಳನ್ನು ಶೀಘ್ರದಲ್ಲಿ ಸಲ್ಲಿಸಲು ಪ್ರಯತ್ನ ಮಾಡಿ. ಸಾಧ್ಯವಾದರೆ ಒಂದೇ ದಿನದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಿ.
* ವಿದ್ಯಾರ್ಥಿಗಳೊಂದಿಗೆ ಪಠ್ಯದ ವಿಷಯ ಹೊರತುಪಡಿಸಿ ಬೇರೆ ಯಾವುದೇ ವಿಷಯಗಳನ್ನು ಮಾತನಾಡಬೇಡಿ.
* ಗುಣಮಟ್ಟ ಕಾಯ್ದುಕೊಳ್ಳಿ. ಆನ್‍ಲೈನ್ ಕಲಿಕಾ ಅನುಭವವನ್ನು ಉತ್ತಮ ಪಡಿಸಲು ಯತ್ನಿಸಿ. ಗುಣಮಟ್ಟದಲ್ಲಿ ಎಂದಿಗೂ ರಾಜಿಯಾಗಬೇಡಿ.

ಉದ್ಯೋಗ ಹುಡುಕಾಟ ಹೇಗೆ?
ಇಂಟರ್‍ನೆಟ್: ಆನ್‍ಲೈನ್ ಟೀಚಿಂಗ್ ಉದ್ಯೋಗ ಹುಡುಕಾಟಕ್ಕೆ ಇಂಟರ್‍ನೆಟ್ ಪ್ರಮುಖ ಮಾಧ್ಯಮ. ಜಾಬ್ ಪೆÇೀರ್ಟಲ್‍ಗಳಲ್ಲಿ ನಿಮ್ಮ ರೆಸ್ಯೂಂ ಅಪ್‍ಲೋಡ್ ಮಾಡಿ. ಅಲ್ಲಿ ಸ್ಪಷ್ಟವಾಗಿ ಆನ್‍ಲೈನ್ ಟ್ಯೂಟರ್ ಆಗಲು ಬಯಸಿರುವುದನ್ನು ಉಲ್ಲೇಖಿಸಿ. ರೆಸ್ಯೂಂನಲ್ಲಿ ಇಮೇಲ್ ಐಡಿ ಮತ್ತು ಫೆÇೀನ್ ನಂಬರ್ ಬರೆಯಲು ಮರೆಯಬೇಡಿ.
ವೆಬ್‍ಸೈಟ್‍ಗಳು: ನೀವು ಯಾವುದಾದರೂ ಪ್ರಮುಖ ಆನ್‍ಲೈನ್ ಟ್ಯೂಷನ್ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದಾರ? ನೇರವಾಗಿ ಆ ಸಂಸ್ಥೆಯ ವೆಬ್‍ಸೈಟ್‍ಗೆ ಪ್ರವೇಶಿಸಿ. ಅಲ್ಲಿ ಉದ್ಯೋಗಾವಕಾಶ ಇದೆಯೇ ಎಂದು ಕರಿಯರ್ ವಿಭಾಗದಲ್ಲಿ ಹುಡುಕಿ. ಅಲ್ಲಿ ಇದ್ದರೆ ಅರ್ಜಿ ಸಲ್ಲಿಸಿ. ಇಲ್ಲದಿದ್ದರೂ ಒಂದು ಇಮೇಲ್‍ನಲ್ಲಿ ರೆಸ್ಯೂಂ ಫಾವರ್ಡ್ ಮಾಡಿಬಿಡಿ.
ಆನ್‍ಲೈನ್ ನೇಮಕಾತಿ ಸಂಸ್ಥೆಗಳು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆನ್‍ಲೈನ್ ಟೀಚಿಂಗ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕಲು ನೇಮಕಾತಿ ಸಂಸ್ಥೆಗಳು ಅಥವಾ ಏಜೆನ್ಸಿಗಳು ಇರುತ್ತವೆ. ಇಂತಹ ಸಂಸ್ಥೆಗಳನ್ನೂ ಸಂಪರ್ಕಿಸಬಹುದು. ಆದರೆ, ಈ ವಿಭಾಗದಲ್ಲಿ ವಂಚಕರು ಹೆಚ್ಚಿರುತ್ತಾರೆ. ಅತ್ಯಧಿಕ ಶುಲ್ಕ ಕೇಳುವ ಏಜೆನ್ಸಿ ಅಥವಾ ಕನ್ಸಲ್ಟೆಂಟ್‍ಗಳಿಂದ ದೂರವಿರಿ.
ನ್ಯೂಸ್‍ಪೇಪರ್ಸ್-ಆನ್‍ಲೈನ್: ಸುದ್ದಿಪತ್ರಿಕೆಗಳ ಉದ್ಯೋಗ ಮಾಹಿತಿ ವಿಭಾಗದಲ್ಲಿಯೂ ಆನ್‍ಲೈನ್ ಟ್ಯೂಟರ್ ಓಪನಿಂಗ್ಸ್ ಕುರಿತು ಮಾಹಿತಿ ಇರುತ್ತದೆ. ಹೀಗಾಗಿ ಪತ್ರಿಕೆಗಳನ್ನು ಓದುತ್ತಿರಿ. ಆನ್‍ಲೈನ್ ನ್ಯೂಸ್ ಪೆÇೀರ್ಟಲ್‍ಗಳಲ್ಲಿಯೂ ಉದ್ಯೋಗ ಸುದ್ದಿಗಳಿವೆಯೇ ನೋಡಿಕೊಳ್ಳಿ.
ಪರ್ಸನಲ್ ರೆಫರೆನ್ಸ್: ಈಗಾಗಲೇ ಆನ್‍ಲೈನ್ ಟೀಚಿಂಗ್ ಮಾಡುತ್ತಿರುವ ಸ್ನೇಹಿತರು ಇದ್ದರೆ ಅವರಿಂದಲೂ ಉದ್ಯೋಗ ಮಾಹಿತಿ ಪಡೆದುಕೊಳ್ಳಿ. ಸೋಷಿಯಲ್ ನೆಟ್‍ವರ್ಕಿಂಗ್ ಸೈಟ್‍ಗಳಲ್ಲಿಯೂ ಇಂತಹ ಕರಿಯರ್ ಮಾಡುತ್ತಿರುವವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು. ಅವರಿಂದ ಮಾಹಿತಿ ಪಡೆದುಕೊಳ್ಳಬಹುದು.
ಆನ್‍ಲೈನ್ ಟ್ಯೂಟರ್ ಕೋರ್ಸ್
ನೀವು ಎಂಎ ಇತ್ಯಾದಿ ಶಿಕ್ಷಣ ಪಡೆದಿದ್ದರೂ ಆನ್‍ಲೈನ್‍ನಲ್ಲಿ ಟೀಚಿಂಗ್ ಮಾಡಲು ವಿಶೇಷ ಕೌಶಲ ಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟ ವಿವಿಧ ಕೋರ್ಸ್‍ಗಳನ್ನು ಕಲಿತರೆ ಉಪಯೋಗವಾಗಬಹುದು. ಆನ್‍ಲೈನ್‍ನಲ್ಲಿ ಇದಕ್ಕೆ ಸಂಬಂಧಪಟ್ಟ ಸರ್ಟಿಫಿಕೇಷನ್‍ಗಳು, ಕೋರ್ಸ್‍ಗಳು ಲಭ್ಯ ಇವೆ. ಇವುಗಳನ್ನು ಬಳಸಿಕೊಳ್ಳಬಹುದು. ಕೆಲವು ಲಿಂಕ್‍ಗಳನ್ನು ಇಲ್ಲಿ ನೀಡಲಾಗಿದೆ.
ಟೀಚರ್ ಫೌಂಡೇಷನ್
ಟಿಇಎಫ್‍ಎಲ್ ಟೆಸೊಲ್:
ಟ್ಯೂಟರ್ ಇಂಡಿಯಾ
ಟೀಚರ್ ಡಿಪೆÇ್ಲಮಾ ಕೋರ್ಸ್
ವಿದೇಶಿ ಉದ್ಯೋಗಕ್ಕೆ ಹೋಗುವಿರಾ? ಈ ಮಾಹಿತಿಗಳು ನಿಮ್ಮ ಗಮನದಲ್ಲಿ ಇರಲಿ

ವಿದೇಶಿ ಉದ್ಯೋಗಕ್ಕೆ ಹೋಗುವಿರಾ? ಈ ಮಾಹಿತಿಗಳು ನಿಮ್ಮ ಗಮನದಲ್ಲಿ ಇರಲಿ

ಫಾರಿನ್ ಎಂಬ ಮೂರಕ್ಷರದ ಸೆಳೆದ ಅಗಾಧವಾದದ್ದು. ವಿದೇಶಕ್ಕೆ ತೆರಳಿ ಅಲ್ಲಿ ಕೈತುಂಬಾ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎನ್ನುವುದು ಬಹುತೇಕರ ಕನಸು. ಫಾರಿನ್‍ಗೆ ಹೋಗಿ ಬಂದವರನ್ನು ಕಂಡಾಗ ನಮ್ಮಲ್ಲಿನ ಯುವಕರಿಗೂ ಆಸೆ ಚಿಗುರುತ್ತದೆ. ನಾವೂ ಅವರಂತಾಗಬೇಕು ಎಂದು ಸಾಲಗೀಲ ಮಾಡಿ ವೀಸಾ, ಪಾಸ್‍ಪೆÇೀರ್ಟ್ ರೆಡಿ ಮಾಡುತ್ತಾರೆ. ಕಾಣದ ಕಡಲಿಗೆ ಹಂಬಲಿಸಿದ ಮನದಂತೆ ಗೊತ್ತಿಲ್ಲದ ಊರಿಗೆ ಪ್ರಯಾಣ ಬೆಳೆಸುತ್ತಾರೆ.

ನಿಮಗೆ ಗೊತ್ತಿರಬಹುದು. ದುಬೈನಲ್ಲೀಗ ಮಹಾ ಬಿಕ್ಕಟ್ಟು. ತೈಲವನ್ನು ಮೊಗೆಮೊಗೆದು ಹಣ ಸಂಪಾದಿಸಿ ಶ್ರೀಮಂತವಾದ ಕೊಲ್ಲಿ ರಾಷ್ಟ್ರದಲ್ಲೀಗ ವಿದೇಶಿಗರು ಹಸಿವಿನಿಂದ ಕಂಗೆಟ್ಟಿದ್ದಾರೆ. ಲಕ್ಷ ಲಕ್ಷ ಭಾರತೀಯರು ಭಾರತಕ್ಕೆ ವಾಪಸ್ಸಾಗಲೂ ಆಗದೆ, ಅಲ್ಲಿರಲು ಆಗದೆ ತತ್ತರಿಸಿದ್ದಾರೆ. ಕಣ್ಣುಮುಚ್ಚಿ ವಿದೇಶಕ್ಕೆ ಉದ್ಯೋಗದ ಆಸೆಯಿಂದ ಹೋಗುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಬಲ್ಲದು. ವಿದೇಶಿ ಉದ್ಯೋಗದ ಕನಸಿನಲ್ಲಿರುವವರಿಗೆ ಒಂದಿಷ್ಟು ಟಿಪ್ಟ್‍ಗಳು ಇಲ್ಲಿವೆ.

ಪ್ರವೀಣ್ ಚಂದ್ರ ಪುತ್ತೂರು

ಮಧ್ಯವರ್ತಿಗಳಿಂದ ಮೋಸ: ವಿದೇಶದಲ್ಲಿ ಕೆಲಸ ಮಾಡಲು ಬಯಸುವ ಭಾರತೀಯರನ್ನು ವಂಚಿಸಲೆಂದೇ ಸಾಕಷ್ಟು ವಂಚಕರು ಬಕಪಕ್ಷಿಗಳಂತೆ ಕಾದುಕುಳಿತಿದ್ದಾರೆ. ಫಾರಿನ್‍ನಲ್ಲಿ ಜಾಬ್ ನೀಡುತ್ತೇವೆ ಎಂದು ಭರವಸೆ ನೀಡಿ ವೀಸಾ, ಪಾಸ್‍ಪೆÇೀರ್ಟ್ ಇತ್ಯಾದಿ ಶುಲ್ಕವೆಂದು ಹೇಳಿ ಲಕ್ಷಲಕ್ಷ ಪೀಕಿ ಪರವೂರಿನಲ್ಲಿ ನರಕದರ್ಶನ ಮಾಡಿಸಲೆಂದೇ ಹಲವು ಏಜೆನ್ಸಿಗಳು, ಮಧ್ಯವರ್ತಿಗಳು ಇರುತ್ತಾರೆ. ವಿದೇಶಿ ಜಾಬ್ ಆಫರ್ ನೀಡುವ ಅಪರಿಚಿತ ಮಧ್ಯವರ್ತಿಗಳನ್ನು ಯಾವತ್ತೂ ನಂಬಲೇಬೇಡಿ. ಹೀಗಾಗಿ ನಂಬಿಕಸ್ಥ ಏಜೆನ್ಸಿಗಳ ಮುಖಾಂತರ ಮಾತ್ರ ಹೋಗಿ. ನೀವು ಆಯ್ಕೆ ಮಾಡಿಕೊಳ್ಳುವ ಏಜೆನ್ಸಿಗಳ ಕುರಿತು ಏನಾದರೂ ದೂರುಗಳಿವೆಯೇ ಎಂದು ಆನ್‍ಲೈನ್ ಫಾರಮ್‍ಗಳಲ್ಲಿ ಹುಡುಕಾಡಿ.

ವೀಸಾದ ವಿಷಯ: ನಿಮಗೆ ಉದ್ಯೋಗದ ಆಫರ್ ಜೊತೆ ನೀಡಿರುವ ವೀಸಾವನ್ನು ಸರಿಯಾಗಿ ಓದಿಕೊಳ್ಳಿ. ಕೆಲವರು ವಿಸಿಟಿಂಗ್ ವೀಸಾ ಕೊಟ್ಟು ನಿಮ್ಮನ್ನು ಕೆಲಸಕ್ಕೆ ಕಳುಹಿಸುತ್ತಾರೆ. ಆಮೇಲೆ ನೀವು ಆ ದೇಶದಲ್ಲಿ ಕದ್ದು ಮುಚ್ಚಿ (ಕೆಲವೊಮ್ಮೆ ಸಂಪೂರ್ಣವಾಗಿ ಗ್ರಹಬಂಧನದಲ್ಲಿ) ಬದುಕಬೇಕಾಗುತ್ತದೆ. ಹೀಗಿದ್ದರೆ, ಅಲ್ಲಿಂದ ವಾಪಸ್ ಬರಲು ಸಹ ಕಳ್ಳತನದ ಹಾದಿಯನ್ನೇ ಹಿಡಿಯಬೇಕಾಗುತ್ತದೆ. ಸಿಕ್ಕಿಬಿದ್ದರೆ ಕಠಿಣ ಶಿಕ್ಷೆಗೂ ಒಳಗಾಗಬೇಕಾಗುತ್ತದೆ. ವೀಸಾದ ಅವಧಿ ಎಷ್ಟಿದೆ ಎಂದು ಖಚಿತಪಡಿಸಿಕೊಳ್ಳಿ. ಅತ್ಯಂತ ಕಡಿಮೆ ಅವಧಿಯದ್ದಾಗಿದ್ದರೆ ವಾಪಸ್ ಬರಲು ವ್ಯವಸ್ಥೆಯೇನಿದೆ? ನೀವು ಅಷ್ಟು ದಿನ ದುಡಿದ ಹಣ ವಿಮಾನ ಟಿಕೇಟ್‍ಗೆ ಸಾಕಾಗಬಲ್ಲದೇ? ತಿಳಿದುಕೊಳ್ಳಿ.

ಯಾವ ಕಂಪನಿ?: ನಿಮಗೆ ಯಾವ ಕಂಪನಿಯಿಂದ ಜಾಬ್ ಆಫರ್ ಬಂದಿದೆ ಎಂದು ತಿಳಿದುಕೊಳ್ಳಿ. ಅಂತಹ ಕಂಪನಿ ಅಸ್ತಿತ್ವದಲ್ಲಿದೆಯೇ ತಿಳಿದುಕೊಳ್ಳಿ. ನಿಮಗೆ ಉದ್ಯೋಗದ ಆಫರ್ ನೀಡಿದ ಕಂಪನಿಯ ಅಸಲಿಯತ್ತನ್ನು ವೆಬ್‍ಸೈಟ್‍ನಲ್ಲಿಯೂ ಪರಿಶೀಲಿಸಬಹುದು. ಇದು ಬೆಂಗಳೂರಿನ ರಿಜೋರ್ಸ್ ರಿಸೋರ್ಸ್ ಫೌಂಡೇಷನ್ ಆಗಿದ್ದು, ಅಸಲಿ ಮತ್ತು ನಕಲಿ ಕಂಪನಿಗಳನ್ನು ಖಚಿತಪಡಿಸಲಾಗುತ್ತದೆ.

ಭಾವನಾತ್ಮಕ ಸಂಗತಿ: ಮೊದಲಿಗೆ ನೀವು ಪರವೂರಿನಲ್ಲಿ ಕೆಲಸ ಮಾಡುವಷ್ಟು ಮಾನಸಿಕ ಸಾಮಥ್ರ್ಯ ಹೊಂದಿದ್ದೀರೋ ತಿಳಿದುಕೊಳ್ಳಿ. ಅಲ್ಲಿ ಅತ್ಯಂತ ಕಷ್ಟವನ್ನೂ ಎದುರಿಸಬೇಕಾದೀತು. ಮನೆಯವರ ನೆನಪು ಕಾಡಬಹುದು. ಇವೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು ಫಾರಿನ್‍ಗೆ ಹೋಗುವ ಕುರಿತು ನಿರ್ಧಾರ ಮಾಡಿ.

ಎಲ್ಲಿಗೆ ಹೋಗುವಿರಿ?: ತೈಲ ದರ ಇಳಿಕೆಯಿಂದ ಬಿಕ್ಕಟ್ಟು ಅನುಭವಿಸುತ್ತಿರುವ ದುಬೈಗೋ, ಐಸಿಸ್ ಹಾವಳಿ ಅತಿಯಾಗಿರುವ ಇನ್ನೊಂದು ದೇಶಕ್ಕೋ, ಬಂಡುಕೋರರು ಇರುವ ಆ ದೇಶಕ್ಕೋ, ರಾಜಕೀಯ ಸಿತ್ಯಾಂತರದಲ್ಲಿ ಗಲಭೆಯೇಳುತ್ತಿರುವ ದೇಶಕ್ಕೋ, ವಿದೇಶಿಗರ ಮೇಲೆ ಸದಾ ಹಲ್ಲೆ ನಡೆಸುತ್ತಿರುವ ಅಸುರಕ್ಷಿತ ದೇಶಕ್ಕೋ... ಯಾವ ದೇಶಕ್ಕೆ ನೀವು ಹೋಗುವಿರಿ? ಅಲ್ಲಿನ ಬೆಳವಣಿಗೆಗಳೇನು? ಇತ್ಯಾದಿಗಳನ್ನು ತಿಳಿದುಕೊಂಡೇ ಮುಂದುವರೆಯಿರಿ.

ಎಷ್ಟು ವೇತನ ಸಿಗುತ್ತದೆ?: ಕೆಲವು ಉದ್ಯೋಗದ ಆಫರ್‍ಗಳು ಭಾರತದ ಹಣದ ಲೆಕ್ಕದಲ್ಲಿ ಆಫರ್ ನೀಡುತ್ತವೆ. ಆದರೆ, ವಿದೇಶದಲ್ಲಿ ಅಲ್ಲಿನ ಖರ್ಚುವೆಚ್ಚುಗಳು ಹೆಚ್ಚಿರುವುದರಿಂದ ಹಣ ಉಳಿಸುವುದು ಕಷ್ಟವಾಗುತ್ತದೆ. ನಿಮ್ಮ ವೇತನದಲ್ಲಿಯೇ ವಸತಿ ಇತ್ಯಾದಿಗಳೂ ಕಟ್ ಆದರೆ ನಿಮಗೆ ಏನೂ ಉಳಿಯದು. ಅದಕ್ಕಾಗಿ ಅತ್ಯಧಿಕ ಮೊತ್ತದ ಆಫರ್ ಸಿಕ್ಕಿದೆಯೇ, ಸಾಧಾರಣ ವೇತನದ ಆಫರ್ ದೊರಕಿರುವುದೇ ತಿಳಿದು ಮುಂದುವರೆಯಿರಿ. ವಸತಿ ಸೌಲಭ್ಯ ಇಲ್ಲದಿದ್ದರೆ ಗೊತ್ತಿಲ್ಲದ ಊರಿನಲ್ಲಿ ಎಲ್ಲಿ ಉಳಿದುಕೊಳ್ಳುವಿರಿ. ಅದಕ್ಕೆ ಬೇಕಾದಷ್ಟು ಹಣ ಎಲ್ಲಿಂದ ಹೊಂದಿಸುವಿರಿ.

ಕೌಶಲವಿದೆಯೇ?: ಫಾರಿನ್ ಜಾಬ್ ಆಫರ್ ಮಾಡುವಾಗ ನಿಮ್ಮಲ್ಲಿ ಯಾವುದಾದರೂ ಕೌಶಲವನ್ನು ಬಯಸಲಾಗುತ್ತದೆ. ಅಲ್ಲಿ ಹೋದ ಮೇಲೆ ನಿಮ್ಮಲ್ಲಿ ಆ ಕಂಪನಿಗೆ ಬೇಕಾದಷ್ಟು ಕೌಶಲವಿಲ್ಲವೆಂದು ಕೆಲಸದಿಂದ ತೆಗೆದು ಹಾಕಬಹುದು. ಆಗ ನಿಮ್ಮಲ್ಲಿ ಅಭದ್ರತೆ ಉಂಟಾಗಬಹುದು. ಸಿಕ್ಕ ಸಿಕ್ಕ ಕೆಲಸಕ್ಕೆ ಸೇರುವ ಅನಿವಾರ್ಯತೆ ಉಂಟಾಗಬಹುದು. ಹೋದ ಮೇಲೆ ಹೇಗೋ ಮ್ಯಾನೇಜ್ ಮಾಡಬಹುದೆಂದು ಅರೆಬರೆ ಕೌಶಲದೊಂದಿಗೆ ವಿಮಾನ ಹತ್ತಬೇಡಿ. ಆಮೇಲೆ ಕಷ್ಟಪಡಬೇಕಾದೀತು. ಸಂಬಂಧಿತ ಕೌಶಲವನ್ನು ಸರಿಯಾಗಿ ಪಡೆದುಕೊಂಡೇ ಫಾರಿನ್‍ಗೆ ಹೋಗಿ.

ಜಾಬ್ ಲೀಗಲ್ ಆಗಿರುವುದೇ?: ವಿದೇಶದಲ್ಲಿ ಜಾಬ್ ಕೊಡಿಸುತ್ತೇವೆ ಎಂದು ಯಾರೋ ಕರೆದರೂ ಎಂದು ಹೋಗಬೇಡಿ. ಅಲ್ಲಿ ನಿಮಗೇನು ಕೆಲಸವೆಂದು ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರು ವಿದೇಶಿಗರನ್ನು ಬಳಸಬಹುದು. ವಿದೇಶಿ ನೆಲದಲ್ಲಿ ಇಲ್ಲಿಗಲ್ ಚಟುವಟಿಕೆ ನಡೆಸಿ ಸಿಕ್ಕಿ ಬಿದ್ದರೆ ಮತ್ತೆ ಭಾರತಕ್ಕೆ ವಾಪಸ್ ಆಗುವುದು ಕಷ್ಟವಾದೀತು.
ವಿದೇಶದಲ್ಲಿ ಕೆಲಸ ಮಾಡಿ ಕೈತುಂಬಾ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎಂಬ ಕನಸು ಕಾಣುವುದು ತಪ್ಲಲ್ಲ. ಒಳ್ಳೆಯ ಅವಕಾಶ ಸಿಕ್ಕಾಗ ಖಂಡಿತವಾಗಿಯೂ ಹೋಗಬಹುದು. ದೇಶದ ಆರ್ಥಿಕತೆಗೆ ವಿದೇಶದಲ್ಲಿರುವ ಭಾರತೀಯರ ಕೊಡುಗೆ ಸಾಕಷ್ಟಿದೆ. ಆದರೆ, ಫಾರಿನ್ ಜಾಬ್ ಆಫರ್ ಬಂದಾಕ್ಷಣ ಹಿಂದೆಮುಂದೆ ನೋಡದೆ ಹೊರಡುವ ಮೊದಲು ಎಲ್ಲರೂ ಎಚ್ಚರಿಕೆ ವಹಿಸಬೇಕೆನ್ನುವುದೇ ನಮ್ಮ ಕಳಕಳಿ.

ಇತ್ತ ಗಮನಿಸಿ
* ಭಾಷೆ ಗೊತ್ತೆ?: ಉದಾಹರಣೆಗೆ ದುಬೈಗೆ ಹೋದರೆ ಅಲ್ಲಿ ಅರೇಬಿಕ್ ಪ್ರಮುಖ ಭಾಷೆ. ನೀವು ಹೋಗುವ ದೇಶದ ಭಾಷೆ ನಿಮಗೆ ಗೊತ್ತಿದ್ದರೆ ಎಂತಹ ಪರಿಸ್ಥಿತಿಯಿಂದಲೂ ಪಾರಾಗಬಹುದು. ಇಂಗ್ಲಿಷ್‍ನಂತಹ ಭಾಷೆಯಾದರೂ ಗೊತ್ತಿರಲಿ. ನಿಮ್ಮ ಸಂಬಂಧಿಕರು, ಸ್ನೇಹಿತರು ಅಲ್ಲಿದ್ದರೆ ಅವರನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಳ್ಳಿ.
* ಅಲ್ಲಿ ನಿಮಗೆ ಉದ್ಯೋಗ ಗ್ಯಾರಂಟಿ ಇದೆಯೇ ತಿಳಿದುಕೊಳ್ಳಿ. ಕೆಲವು ಏಜೆನ್ಸಿಗಳು ಯಾವುದೋ ಐಟಿ ಉದ್ಯೋಗದ ಆಫರ್ ನೀಡಬಹುದು. ಅಲ್ಲಿ ಹೋದಮೇಲೆ ನೀವು ಮನೆಕೆಲಸ ಅಥವಾ ಒಂಟೆ ತೊಳೆಯುವ ಕೆಲಸ ಮಾಡಬೇಕಾದೀತು.
* ಕಾನೂನು ಅರಿವು ಇರಲಿ: ಆಯಾ ದೇಶದ ವೀಸಾದಲ್ಲಿ ಏನು ಮಾಡಬಹುದು ಮತ್ತು ಏನು ಮಾಡಬಾರದು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ.
ಆನ್‍ಲೈನ್ ವಂಚಕರಿದ್ದಾರೆ ಎಚ್ಚರಿಕೆ!
ಹೆಸರು ಹರ್ಷ. ಸಾಫ್ಟ್‍ವೇರ್ ಎಂಜಿನಿಯರ್. ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿ (40). ಇವರ ಇಮೇಲ್‍ಗೆ ಒಂದು ಸಂದೇಶ ಬಂದಿತ್ತು. ಲಂಡನ್‍ನ ಬಿ.ಎಚ್. ಸಾಲಿಸಿಟರ್ ಸಾಫ್ಟ್‍ವೇರ್ ಕಂಪನಿಯಲ್ಲಿ ಉದ್ಯೋಗಾವಕಾಶವಿದೆ. ಮಾಸಿಕ 8 ಲಕ್ಷಕ್ಕೂ ಹೆಚ್ಚು ವೇತನ ಮತ್ತು ಇತರ ಸೌಲಭ್ಯವಿದೆ ಎಂದು ಇಮೇಲ್‍ನಲ್ಲಿ ಬರೆಯಲಾಗಿತ್ತು. ಹರ್ಷ ಅವರು ಇಮೇಲ್ ಮೂಲಕವೇ ಉದ್ಯೋಗಕ್ಕೆ ಸೇರಲು ಸಮ್ಮತಿಸಿದರು. ಫಾರಿನ್‍ಗೆ ಹೋಗಲು ವಿವಿಧ ಹಂತಗಳಲ್ಲಿ ಆ ಕಡೆಯಿಂದ ದುಡ್ಡು ಕೇಳಲಾಗಿದೆ. ಏಪ್ರಿಲ್‍ನಿಂದ ಆಕ್ಟೋಬರ್‍ವರೆಗೆ ವಿವಿಧ ಕಂತುಗಳಲ್ಲಿ ಹರ್ಷ 26.50 ಲಕ್ಷ ಪಾವತಿಸಿದ್ದಾರೆ. ನಂತರ ಆ ಕಡೆಯಿಂದ ಇಮೇಲ್ ಬರುವುದು ಸ್ಥಗಿತವಾಗಿದೆ. ಕಳೆದ ವರ್ಷ ಡಿ. 2ರಂದು ಈ ಕುರಿತು ಬೆಂಗಳೂರು ಸೈಬರ್ ಕ್ರೈಂ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂತಹ ಹಲವು ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಲೇ ಇವೆ. ಮೊಬೈಲ್, ಇಮೇಲ್ ಖಾತೆಗೆ ಉದ್ಯೋಗದ ಆಫರ್ ನೀಡುವ ಅನಾಮಿಕ ಸಂದೇಶಗಳ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ಸೈಬರ್ ಕ್ರೈಂ ಪೆÇಲೀಸರು ಪದೇ ಪದೇ ಎಚ್ಚರಿಸುತ್ತಲೇ ಇದ್ದಾರೆ.
Healthcareನಲ್ಲಿ ಯಾವ್ಯಾವ ಉದ್ಯೋಗಗಳು ಇವೆ? ಏನು ಓದಿರಬೇಕು?

Healthcareನಲ್ಲಿ ಯಾವ್ಯಾವ ಉದ್ಯೋಗಗಳು ಇವೆ? ಏನು ಓದಿರಬೇಕು?

ಆರೋಗ್ಯವಲಯದಲ್ಲಿ ಈಗ ಬೇಡಿಕೆಯಲ್ಲಿರುವ ಮತ್ತು ಮುಂದೆ ಬೇಡಿಕೆ ಪಡೆಯಲಿರುವ ವಿವಿಧ ಉದ್ಯೋಗಾವಕಾಶಗಳ ಮಾಹಿತಿ ಇಲ್ಲಿದೆ.

ಹೆಲ್ತ್‍ಕೇರ್ ಎಂದರೆ ಔಷಧ ಮತ್ತು ಚಿಕಿತ್ಸಾ ವಿಭಾಗ ಮಾತ್ರವಲ್ಲದೆ ಇವೆರಡಕ್ಕೂ ಬೆಂಬಲ ನೀಡುವ ವಿಭಾಗವೂ ಸೇರಿದೆ. ಡಾಕ್ಟರ್, ನರ್ಸ್ ಮಾತ್ರವಲ್ಲದೆ ಆರೋಗ್ಯ ಸೇವೆಗೆ ಸಂಬಂಧಪಟ್ಟ ಇತರ ಉದ್ಯೋಗಗಳೂ ಬೇಡಿಕೆ ಪಡೆಯುತ್ತಿವೆ. ಆರೋಗ್ಯ ಸೇವಾ ವಿಭಾಗಕ್ಕೆ ಪ್ರವೇಶ ಪಡೆಯಲು ಆಯಾ ವಿಭಾಗದ ವಿಶೇಷ ಕೌಶಲಗಳು ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಆರೋಗ್ಯ ಸೇವಾ ವಿಭಾಗಗಳಲ್ಲಿ ಬೇಡಿಕೆ ಪಡೆಯುವ ನಿರೀಕ್ಷೆಯಲ್ಲಿರುವ ಕೆಲವು ಹುದ್ದೆಗಳ ವಿವರ ಇಲ್ಲಿದೆ.

ಫಾರ್ಮಾಸಿಸ್ಟ್
ಔಷಧ ವಿಭಾಗದಲ್ಲಿ ಕೆಲಸ ಮಾಡುವ ಫಾರ್ಮಾಸಿಸ್ಟ್‍ಗಳಿಗೆ ಈಗಲೂ ಉತ್ತಮ ಬೇಡಿಕೆಯಿದೆ. ಮುಂದೆಯೂ ಬೇಡಿಕೆ ಇರುವ ನಿರೀಕ್ಷೆ ಇದೆ. ಔಷಧ ತಯಾರಿಕೆ ಮಾತ್ರವಲ್ಲದೆ ರೋಗಿಯೂ ಎಷ್ಟು ಪ್ರಮಾಣದಲ್ಲಿ ಔಷಧ ಸೇವಿಸಬೇಕೆಂಬ ಸಂಶೋಧನೆಯೂ ಫಾರ್ಮಾಸಿಸ್ಟ್ ಮಾಡಬೇಕಾಗುತ್ತದೆ. ಇದು ಹೊಸ ಬಗೆಯ ಉದ್ಯೋಗವಲ್ಲದೆ ಇದ್ದರೂ ಈಗ ಔಷಧೀಯ ಲೋಕದಲ್ಲಿ ಹೊಸ ಹೊಸ ಅನ್ವೇಷಣೆಗಳು, ಬದಲಾವಣೆಗಳು ಉಂಟಾಗುತ್ತಿರುವುದರಿಂದ ಫಾರ್ಮಾಸಿಸ್ಟ್ ಉದ್ಯೋಗವು ಹೊಸ ಆಯಾಮದತ್ತ ತೆರೆದುಕೊಳ್ಳುತ್ತಿದೆ. ಫಾರ್ಮಾಸಿಸ್ಟ್‍ಗಳು ಡಾಕ್ಟರ್‍ಗಳಿಗೆ ಔಷಧ ತಯಾರಿಸಿ ವಿತರಿಸುವ ಕೆಲಸಕ್ಕೆ ಮಾತ್ರ ಇರುವವರಲ್ಲ. ವೈದ್ಯಕೀಯ ಸಿಬ್ಬಂದಿಗಳಿಗೆ ಔಷಧ ಕುರಿತಾದ ಸಂದೇಹಗಳಿದ್ದರೆ ಪರಿಹರಿಸುವುದು, ಸಂಶೋಧನೆಗಳನ್ನು ಕೈಗೊಳ್ಳುವುದು, ಆಸ್ಪತ್ರೆಗಳಿಗೆ ಆಗಾಗ ಭೇಟಿ ನೀಡಿ ಔಷಧಗಳ ಪರಿಣಾಮಗಳ ಕುರಿತು ನಿಗಾ ವಹಿಸುವುದೂ ಇವರ ಕೆಲಸವಾಗಿದೆ.
ಈ ಕ್ಷೇತ್ರದಲ್ಲಿ ಆರಂಭಿಕರಿಗೆ ಅಥವಾ ಫ್ರೆಷರ್ಸ್‍ಗಳಿಗೆ ಉತ್ತಮ ಬೇಡಿಕೆಯಿದೆ. ಈಗ ಶೇಕಡ 60ರಷ್ಟು ಫಾರ್ಮಾಸಿಸ್ಟ್ ಉದ್ಯೋಗವು ಎಂಟ್ರಿ ಲೆವೆಲ್ ಹಂತದಲ್ಲಿದೆ. ಉಳಿದ ಹುದ್ದೆಗಳು ಅನುಭವಿಗಳಿಗೆ ಮೀಸಲಾಗಿದೆ. ಈ ಕ್ಷೇತ್ರದಲ್ಲಿ ಫ್ರೆಷರ್ಸ್‍ಗಳು ವರ್ಷಕ್ಕೆ 1.5-3.5 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ.
Education Guide

ಐಟಿ ಎಕ್ಸಿಕ್ಯೂಟಿವ್ಸ್
ಆರೋಗ್ಯ ಸೇವಾ ವಲಯದಲ್ಲಿ ಐಟಿ ಎಕ್ಸಿಕ್ಯೂಟಿವ್ಸ್‍ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಡೇಟಾ ಬೇಸ್, ಅಭಿವೃದ್ಧಿ, ಟೆಕ್ ಸಪೆÇೀರ್ಟ್ ಮತ್ತು ಸೊಲ್ಯುಷನ್ಸ್ ವಿಭಾಗಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಲ್ತ್‍ಕೇರ್ ವ್ಯವಸ್ಥೆಯಲ್ಲಿ ತಂತ್ರಜ್ಞಾನವು ಅಂತರ್ಗತ ಭಾಗವಾಗುತ್ತಿರುವುದರಿಂದ ಸಾಫ್ಟ್‍ವೇರ್ ಮತ್ತು ಐಟಿ ಅಡ್ಮಿನಿಸ್ಟ್ರೇಷನ್ ಮತ್ತು ಸಪೆÇೀರ್ಟ್ ವಿಭಾಗದಲ್ಲಿ ಸಿಬ್ಬಂದಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷಗಳ ಅನುಭವ ಇರುವ ಅಭ್ಯರ್ಥಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಶೇಕಡ 55ರಷ್ಟು ಥಟಿ/ಟೆಕ್ ಉದ್ಯೋಗಗಳು ಮಧ್ಯಮ ಹಂತದಲ್ಲಿ ನೇಮಕವಾಗುತ್ತಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2-4 ಲಕ್ಷ ರೂಪಾಯಿ.

ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್
ಆರೋಗ್ಯ ಸೇವಾ ವಿಜ್ಞಾನದಲ್ಲಿ ಕ್ಲಿನಿಕಲ್ ರಿಸರ್ಚ್ ಎನ್ನುವ ಶಾಖೆಯು ಔಷಧಿಗಳ ಪರಿಣಾಮಕಾರಿ ಮತ್ತು ಸುರಕ್ಷತೆಯನ್ನು ಪರಿಶೀಲಿಸಲು, ಆರೋಗ್ಯ ಸಾಧನಗಳು, ರೋಗನಿರ್ಣಯದ ಉತ್ಪನ್ನಗಳನ್ನು ಮತ್ತು ಚಿಕಿತ್ಸಾ ಕಟ್ಟುಪಾಡುಗಳನ್ನು ಪರಿಶೀಲಿಸಲು ಮತ್ತು ಸಂಶೋಧಿಸುವ ಕಾರ್ಯವನ್ನು ಮಾಡುತ್ತದೆ. ಈ ವಿಭಾಗದಲ್ಲಿ ಅಸೋಸಿಯೇಟ್‍ಗಳು ಕ್ಲಿನಿಕಲ್ ಟ್ರಯಲ್‍ಗಳನ್ನು ನಡೆಸುವ ಕಾರ್ಯವನ್ನು ಮಾಡುತ್ತಾರೆ. ಇವರು ಗುಡ್ ಕ್ಲಿನಿಕಲ್ ಪ್ರಾಕ್ಟೀಸ್(ಜಿಎಸ್‍ಪಿ) ಮತ್ತು ಇಂಟರ್‍ನ್ಯಾಷನಲ್ ಕಾನ್ಫರೆನ್ಸ್ ಆನ್ ಹಾಮೊನಿಸೇಷನ್ (ಐಸಿಎಚ್)ನ ಅಂತಾರಾಷ್ಟ್ರೀಯ ನಿಯಂತ್ರಣ ಮತ್ತು ನೈತಿಕ ಮಾರ್ಗದರ್ಶನದಡಿ ಕ್ಲಿನಿಕಲ್ ಟ್ರಯಲ್‍ಗಳನ್ನು ನಡೆಸುತ್ತಾರೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ ಸುಮಾರು 2 ವರ್ಷದವರೆಗೆ ಅನುಭವ ಇದ್ದವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 67ರಷ್ಟು ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್ ಉದ್ಯೋಗಗಳು ಎಂಟ್ರಿ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2.5-5 ಲಕ್ಷ ರೂಪಾಯಿ.

ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಟರ್ಸ್
ರೋಗಿಯ ಕಾಳಜಿಗೆ ಸಂಬಂಧಪಟ್ಟಂತೆ ವಿವಿಧ ಅಂಶಗಳನ್ನು ನಿರ್ವಹಿಸುವ ಕೆಲಸನವನ್ನು ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಟರ್ಸ್‍ಗಳು ಮಾಡುತ್ತಾರೆ. ಸಮಸ್ಯೆ ಕಂಡುಹಿಡಿಯುವಿಕೆ, ಪರಿಹಾರ ಇತ್ಯಾದಿಗಳು ಇವರ ಕಾರ್ಯ. ಇವ
ರು ಹೆಲ್ತ್‍ಕೇರ್ ವಲಯದ ಎಲ್ಲಾ ಯೂನಿಟ್‍ಗಳಲ್ಲಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷ ಅನುಭವ ಇರುವವರಿಗೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಶೇಕಡ 70ರಷ್ಟು ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಷನ್ ಉದ್ಯೋಗಗಳು ಮಿಡ್ ಲೆವೆಲ್‍ನಲ್ಲಿ ಇವೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 1.5-3 ಲಕ್ಷ ರೂಪಾಯಿ.

ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್
ವೈದ್ಯಕೀಯ ದಾಖಲೆಗಳನ್ನು ಬರೆಯುವುದು ಮತ್ತು ನಿರ್ವಹಣೆ ಮಾಡುವುದು ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಕೆಲಸ. ಈ ರೀತಿ ಬರೆದಿಟ್ಟರೆ ಮತ್ತು ನಿರ್ವಹಣೆ ಮಾಡಿದರೆ ವೈದ್ಯಕೀಯ ಉದ್ಯೋಗಿಗಳಿಗೆ ಭವಿಷ್ಯದಲ್ಲಿ ನೆರವಾಗುತ್ತದೆ. ರೋಗಿಯ ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಅನ್ನು ಅಂತಿಮ ಹಂತದಲ್ಲಿ ಪ್ರೂಫ್‍ರೀಡಿಂಗ್ ಮತ್ತು ಎಡಿಟಿಂಗ್ ಕೆಲಸವನ್ನೂ ಇವರು ಮಾಡಬೇಕಾಗುತ್ತದೆ. ಈ ಉದ್ಯೋಗಕ್ಕೆ ಬರುವವರು ಉತ್ತಮ ಕೇಳುಗರಾಗಿರಬೇಕು ಮತ್ತು ಟೈಪಿಸ್ಟ್‍ಗಳಾಗಿರಬೇಕು. ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಉದ್ಯೋಗವನ್ನು ಮನೆಯಲ್ಲಿ ಕುಳಿತು ಮಾಡಲೂ ಅವಕಾಶವಿದೆ.
ಬೇಡಿಕೆ ಹೇಗಿದೆ?: ಸುಮಾರು 2 ವರ್ಷದವರೆಗೆ ಅನುಭವ ಇರುವವರಿಗೆ ಹೆಚ್ಚ ಬೇಡಿಕೆಯಿದೆ. ಶೇಕಡ 80ರಷ್ಟು ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಹುದ್ದೆಗಳು ಎಂಟ್ರಿ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 1.5-2.5 ಲಕ್ಷ ರೂಪಾಯಿ.

ಅರಿವಳಿಕೆ ತಜ್ಞರು
ಮೆಡಿಕಲ್ ಅಪರೇಷನ್, ಸರ್ಜರಿ ನಡೆಸುವ ಮೊದಲು ಅಥವಾ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ರೋಗಿಗಳಿಗೆ ಅರಿವಳಿಕೆ ಕೊಡುವ ಕಾರ್ಯವನ್ನು ಅರಿವಳಿಕೆ ತಜ್ಞರು ಮಾಡುತ್ತಾರೆ. ಅರಿವಳಿಕೆಯು ಆರೋಗ್ಯ ಸೇವಾ ವಿಭಾಗದಲ್ಲಿ ಅತ್ಯಂತ ನಿರ್ಣಾಯಕ ವಿಭಾಗವಾಗಿರುವುದರಿಂದ ಉದ್ಯೋಗಾವಕಾಶ ಹೆಚ್ಚಿದೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷಗಳ ಅನುಭವ ಇರುವವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 70ರಷ್ಟು ಈ ಕ್ಷೇತ್ರದ ಉದ್ಯೋಗಗಳು ಮಿಡ್ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2.5-5 ಲಕ್ಷ ರೂಪಾಯಿ.

ರೇಡಿಯೋಗ್ರಾಫರ್ಸ್
ಎಕ್ಸ್‍ರೇ ಪರೀಕ್ಷೆ, ಮ್ಯಾಗ್ನೆಟಿಕ್ ರಿಸೊನೊನೆನ್ಸ್ ಇಮೇಜಿಂಗ್(ಎಂಆರ್‍ಐ) ಮತ್ತು ಕಂಪ್ಯೂಟೆಡ್ ಟೊಮೊಗ್ರಾಫಿ(ಸಿಟಿ) ಸ್ಕ್ಯಾನ್ ಇತ್ಯಾದಿ ಕಾರ್ಯವನ್ನು ರೇಡಿಯೋಲಾಜಿಕ್ ಟೆಕ್ನೊಲಾಜಿಸ್ಟ್‍ಗಳು ಮಾಡುತ್ತಾರೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ ಸುಮಾರು 5 ವರ್ಷದ ಅನುಭವ ಇರುವವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 60ರಷ್ಟು ರೇಡಿಯೋಗ್ರಾಫಿ ಉದ್ಯೋಗಗಳು ಎಂಟ್ರಿ ಲೆವೆಲ್ ಮತ್ತು ಮಿಡ್ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2-4ಲಕ್ಷ ರೂಪಾಯಿ.
Certification Course
Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಉದ್ಯೋಗಿಗಳು ಕಲಿಯಬೇಕಾದ ಮತ್ತು ಕಲಿಯಬಾರದ ಅಂಶಗಳೇನು? ಈ ಕಾರ್ಯಕ್ರಮ ನೀಡುವ ಪಾಠವನ್ನು ನಮ್ಮ ಕರಿಯರ್ ಪ್ರಗತಿಗೂ ಬಳಸಬಹುದೇ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಬಿಗ್‍ಬಾಸ್ ಕಾರ್ಯಕ್ರಮ ನೀವು ಇಷ್ಟಪಡಬಹುದು. ಇಷ್ಟ ಪಡದೆ ಇರಬಹುದು. ಆದರೆ, ಸಂಪೂರ್ಣವಾಗಿ ನಿರಾಕರಿಸುವುದು ಕಷ್ಟ. ಯಾಕೆಂದರೆ, ಕ್ಯಾಮೆರಾ ಇಲ್ಲವೆನ್ನುವುದನ್ನು ಬಿಟ್ಟರೆ ಪ್ರತಿಯೊಂದು ಮನೆಯಲ್ಲಿ, ಆಫೀಸ್‍ನಲ್ಲಿ ಇರುವ ವಾತಾವರಣದಂತೆಯೇ ಬಿಗ್‍ಬಾಸ್ ಮನೆ ಇರುತ್ತದೆ.
ನೀವು ಕೆಲಸ ಮಾಡುತ್ತಿರುವ ಆಫೀಸ್ ಅನ್ನೇ ನೋಡಿ. ಅದನ್ನೇ ಬಿಗ್‍ಬಾಸ್ ಮನೆಯೆಂಬ ದೃಷ್ಟಿಯಲ್ಲಿ ನೋಡಿ. ಅಲ್ಲಿ ಎಷ್ಟೊಂದು ಜನರಿದ್ದಾರೆ. ವಿವಿಧ ಜಾತಿ, ಧರ್ಮ, ಪ್ರತಿಭೆಯುಳ್ಳವರು ಅಲ್ಲಿರುತ್ತಾರೆ. ಎಲ್ಲರೂ ಒಂದೇ ಮನೆಯಲ್ಲಿ ಇರುವವರಂತೆ ಇರುತ್ತಾರೆ. ಅಲ್ಲೂ ಗುಂಪುಗಾರಿಕೆ ಇದೆ. ಜಗಳವಿದೆ. ದರ್ಪ, ಆಹಂ, ಮತ್ಸರ, ಕಾಲೆಳೆಯುವಿಕೆ ಇದೆ. ಅಷ್ಟೇ ಏಕೆ, ಯಾರ್ಯಾರೋ ಒಳಗೆ ಬರುತ್ತಾರೆ. ಯಾರ್ಯಾರೋ ಹೊರಗೆ ಬರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮವು ಕರಿಯರ್‍ಗೆ ಅತ್ಯಂತ ಮಹತ್ವದ ಪಾಠ ಕಲಿಸುತ್ತದೆ. ನಾವು ಅನುಕರಿಸಬಹುದಾದ ಮತ್ತು ಅನುಕರಿಸಬಾರದ ಹಲವು ಸಂಗತಿಗಳು ಬಿಗ್‍ಬಾಸ್‍ನಲ್ಲಿದೆ.
ಉತ್ತಮ ನಾಯಕತ್ವ: ಕನ್ನಡ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಸ್ಥಾನದಲ್ಲಿ ಇನ್ಯಾರೋ ಸಾಮಾನ್ಯ ನಟರನ್ನು ಕಲ್ಪಿಸಿಕೊಳ್ಳಿ. ಯಾಕೋ, ಸರಿಬರುತ್ತಿಲ್ಲ ತಾನೇ. ಕನ್ನಡದಲ್ಲಿ ಬಿಗ್‍ಬಾಸ್‍ಗೆ ಸುದೀಪ್ ಮಾತ್ರ ಸೂಕ್ತವೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿರುತ್ತದೆ. ಉತ್ತಮ ನಾಯಕತ್ವದ ಲಕ್ಷಣವೇ ಇದು. ನೀವು ಕೆಳಹಂತದ ಉದ್ಯೋಗದಲ್ಲಿದ್ದರೆ ನಿಮಗೆ ನಿಮ್ಮ ಟೀಮ್ ಲೀಡರೇ ನಾಯಕ ಆಗಬಹುದು. ಆ ಟೀಮ್ ಲೀಡರ್‍ಗೆ ಇನ್ಯಾರೋ ಮ್ಯಾನೇಜರ್ ನಾಯಕ ಆಗಿರಬಹುದು. ಮ್ಯಾನೇಜರ್‍ಗೆ ಚೀಫ್ ಮ್ಯಾನೇಜರ್, ಚೀಫ್ ಮ್ಯಾನೇಜರ್‍ಗೆ ಸಿಇಒ ಬಿಗ್‍ಬಾಸ್‍ನಂತೆ ಕಾಣಬಹುದು. ಈ ಎಲ್ಲಾ ಚೈನ್‍ಗಳು ಸಮರ್ಥವಾಗಿರುವುದು ಅತ್ಯಂತ ಮುಖ್ಯ. ಸಹೋದ್ಯೋಗಿಗಳು ಗೌರವಿಸುವಂತಹ ಉತ್ತಮ ವ್ಯಕ್ತಿತ್ವವನ್ನು ಲೀಡರ್ ಹೊಂದಿರಬೇಕು. ಇಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವವರು ಮಾತ್ರ ನಾಯಕರಾಗುತ್ತಾರೆ.
ಬೇಗ ಎದ್ದೇಳಿ: ತಡವಾಗಿ ಮಲಗಿ ತಡವಾಗಿ ಎದ್ದೇಳುವ ಗುಣವನ್ನು ಬಿಗ್‍ಬಾಸ್ ನೋಡಿ ಕಲಿಯಬೇಡಿ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಬಹುತೇಕರಿಗೆ ಬೆಳಗಾಗುವುದು ಒಂಬತ್ತರ ಮೇಲೆಯೇ. ಮತ್ತೆ ಬಹುತೇಕರು ಮಲಗುವುದು ತಡವಾಗಿಯೇ. ಥೇಟ್ ಕಾಪೆರ್Çರೇಟ್ ಕಲ್ಚರ್‍ನಂತೆಯೇ. ರಾತ್ರಿ ಯಾವುದೋ ಪಾರ್ಟಿಗೆ ಹೋಗುವುದು. ಬೆಳಗ್ಗೆ ಒಂಬತ್ತರ ನಂತರ ಎದ್ದೇಳುವುದನ್ನು ಬಹುತೇಕ ಉದ್ಯೋಗಿಗಳು ರೂಢಿಸಿಕೊಂಡಿದ್ದಾರೆ. ಬೆಳಗ್ಗೆ ಎದ್ದು ನಿದ್ದೆಗಣ್ಣಿನಲ್ಲೇ ಆಫೀಸ್‍ಗೆ ಬರುತ್ತಾರೆ. ಇದರ ಬದಲು, ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಎದ್ದು, ವ್ಯಾಯಾಮ, ವಾಕಿಂಗ್ ಮಾಡಿ. ದಿನದ ಆರಂಭ ಉತ್ತಮವಾಗಿದ್ದರೆ ನೀವು ಆಫೀಸ್‍ನಲ್ಲಿಯೂ ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕರಿಯರ್ ಪ್ರಗತಿಗೆ ಈ ಲವಲವಿಕೆ ಅತ್ಯಂತ ಅಗತ್ಯ.
ಗಾಸಿಪ್ ಬೇಡ: ಬಿಗ್‍ಮನೆಯ ಅತ್ಯಂತ ಆಕರ್ಷಣೆ ಅಲ್ಲಿನ ಗಾಸಿಪ್ ಆಗಿದೆ. ಯಾರೋ ಅವರ ಬಗ್ಗೆ ಹೀಗಂದರು, ಹಾಗಂದರು, ಆತ ಹೀಗೆ, ಇವಳು ಹೀಗೆ ಎಂದೆಲ್ಲ ಗುಸುಗುಸಿಗೆ ಬಿಗ್‍ಬಾಸ್ ಕ್ಯಾಮೆರಾ ಕಣ್ಣಾಗುತ್ತದೆ ಮತ್ತು ಕಿವಿಯಾಗುತ್ತದೆ. ಬಿಗ್‍ಮನೆಯಲ್ಲಿ ನಡೆಯುವ ಈ ಗುಸುಗುಸು ಪೂರ್ತಿ ಮನೆಯ ವಾತಾವರಣವನ್ನೇ ಹಾಳು ಮಾಡುತ್ತದೆ. ಆಫೀಸ್‍ನಲ್ಲಿಯೂ ಇಂತಹ ಗಾಸಿಪ್‍ಗಳು ಸಾಮಾನ್ಯ. ನೀವು ಗಾಸಿಪ್ ಮಾಡುವವರಾಗಿದ್ದರೆ ನೀವು ನಾಮಿನೆಟ್ ಆಗುವವರ ಲಿಸ್ಟ್‍ನಲ್ಲಿದ್ದೀರಿ ಎಂದು ತಿಳಿಯಿರಿ.
ಗುಂಪುಗಾರಿಕೆ: ಬಿಗ್‍ಬಾಸ್ ಮನೆಯಲ್ಲಿ ಗುಂಪುಗಾರಿಕೆ ನೋಡಿರುತ್ತೀರಿ. ಇರುವ ಕೆಲವೇ ಮಂದಿಯಲ್ಲಿ ಹಲವು ಬಣಗಳು ಸೃಷ್ಟಿಯಾಗುತ್ತವೆ. ಆಫೀಸ್‍ನಲ್ಲಿಯೂ ಹಾಗೆಯೇ. ಒಂದಿಷ್ಟು ಗುಂಪುಗಾರಿಕೆ, ರಾಜಕೀಯ ಇರುತ್ತದೆ. ಇಂತಹ ಗುಂಪುಗಾರಿಕೆಯೂ ಕಂಪನಿಯ ಶತ್ರು.
ಆರೋಗ್ಯಕರ ಸ್ಪರ್ಧೆ: ಬಿಗ್‍ಬಾಸ್‍ನಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರೂ ಸ್ಫರ್ಧಿಯಾಗಿರುತ್ತಾರೆ. ಎಲ್ಲರೂ ಗೆಲ್ಲಬೇಕೆಂದು ಬಯಸುತ್ತಾರೆ. ಆದರೆ, ಆ ಗೆಲುವು ಪಡೆಯಲು ಅತ್ಯಂತ ಪ್ರಮುಖವಾಗಿ ಬೇಕಾದದ್ದು ಪ್ರಯತ್ನ, ಪ್ರಾಮಾಣಿಕತೆ ಮತ್ತು ಪ್ರತಿಭೆ. ನೀವಿರುವ ಕಂಪನಿಯಲ್ಲಿಯೂ ಉನ್ನತ್ತ ಸ್ಥಾನಕ್ಕೆ ಹೋಗಲು ಪ್ರತಿಯೊಬ್ಬರೂ ಬಯಸುತ್ತಿರುತ್ತಾರೆ. ಪ್ರಯತ್ನ, ಪ್ರತಿಭೆ, ಪ್ರಾಮಾಣಿಕತೆ ಇರುವವರು ಇಲ್ಲೂ ಪ್ರಗತಿ ಕಾಣುತ್ತಾರೆ.
ಪರ್ಫಾಮೆನ್ಸ್ ಮುಖ್ಯ: ಬಿಗ್‍ಬಾಸ್‍ನಲ್ಲಿ ವಿವಿಧ ರೀತಿಯ ಟಾಸ್ಕ್‍ಗಳು ಇರುತ್ತವೆ. ಪ್ರತಿದಿನ, ಕ್ಷಣವೂ ಟಾಸ್ಕ್‍ನಿಂದ ಕೂಡಿರುತ್ತದೆ. ಇಲ್ಲಿ ಉತ್ತಮ ಪರ್ಫಾಮೆನ್ಸ್ ತೋರಿದವರು ಮಾತ್ರ ಉಳಿಯುತ್ತಾರೆ. ಇದ್ದು ಇಲ್ಲದಂತೆ ಇರುವವರು, ಟಾಸ್ಕ್‍ಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳದವರು ಬಿಗ್‍ಬಾಸ್ ಮನೆಯಿಂದ ಮನೆಗೆ ಹೋಗುತ್ತಾರೆ. ಕಂಪನಿಗಳು ಸಹ ಪರ್ಫಾಮೆನ್ಸ್ ತೋರುವವರಿಗೆ ಮಾತ್ರ ಮಣೆ ಹಾಕುತ್ತದೆ. ಇಲ್ಲವಾದರೆ ಮನೆಗೆ ಕಳುಹಿಸುತ್ತದೆ.
ಮಾತು ಮತ್ತು ಕೃತಿ: ಬಿಗ್‍ಬಾಸ್‍ನಲ್ಲಿ ಕೆಲವರು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಅವರ ಮಾತಿಗೂ ಕೃತಿಗೂ ತಾಳೆಯಾಗುವುದೇ ಇಲ್ಲ. ಆಫೀಸ್‍ನಲ್ಲಿಯೂ ಹಾಗೆಯೇ, ಕೆಲವರು ಮಾತು ಮಾತ್ರ ಆಡುತ್ತಾರೆ. ಅವರ ಮಾತು ಕೃತಿಯಾಗುವುದೇ ಇಲ್ಲ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುವವರು ಒಂದಿಷ್ಟು ದಿನ ಕಂಪನಿಯನ್ನು ಯಾಮಾರಿಸಬಹುದಾದರೂ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಕೆಲಸ ಕಲಿಯಿರಿ: ಬಿಗ್‍ಬಾಸ್‍ನಲ್ಲಿ ವಿವಿಧ ವಿಐಪಿಗಳು ಇರುತ್ತಾರೆ. ಅವರೂ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಬಾತ್‍ರೂಂ ಸ್ವಚ್ಛ ಮಾಡಬೇಕಾಗುತ್ತದೆ. ನೀವು ಕರಿಯರ್‍ನಲ್ಲಿ ಪ್ರಗತಿ ಕಾಣಬೇಕಾದರೆ ನಿಮ್ಮ ಕೆಲಸಕ್ಕೆ ಮಾತ್ರ ಸೀಮಿತರಾಗಬೇಡಿ. ಕಂಪನಿಯ ಎಲ್ಲಾ ಸಿಬ್ಬಂದಿಗಳು ಮಾಡುವ ಕೆಲಸದ ಬಗ್ಗೆಯೂ ಅರಿವಿರಲಿ.
ದುಂದು ವೆಚ್ಚ ಬೇಡ: ಬಿಗ್‍ಬಾಸ್‍ನ ಲಗ್ಷುರಿ ಟಾಸ್ಕ್‍ನಿಂದ ಎಲ್ಲರೂ ಕಲಿಯಬಹುದಾದ ಒಂದು ಅಂಶವಿದೆ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟೇ ಖರ್ಚು ಮಾಡಿ ಎಂಬ ಅತ್ಯಂತ ಮಹತ್ವದ ಪಾಠವನ್ನು ಅದು ಹೇಳಿಕೊಡುತ್ತದೆ. ನಿಮ್ಮ ವೇತನಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಕಾರು ಸಾಲ, ಮನೆ ಸಾಲವೆಂದು ಹೆಚ್ಚು ಹೊರೆಯಲ್ಲಿ ಇರಬೇಡಿ.
ಬ್ಯಾಗ್ ಸಿದ್ಧವಾಗಿರಲಿ: ಕೊನೆಯ ಮತ್ತು ಅತ್ಯಂತ ಪ್ರಮುಖ ಪಾಠವೆಂದರೆ `ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಟ್ಟುಕೊಳ್ಳಿ'. ನೀವು ಸದಾ ಯಾವಾಗ ಬೇಕಾದರೂ ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು. ಕೆಲಸ ಹೋಗುವ ಭಯದಲ್ಲಿ ಇರಬೇಡಿ. ನಿಮಗೆ ಎಲ್ಲಿ ಹೋದರೂ ಅವಕಾಶ ಸಿಗುತ್ತದೆ ಎಂಬಂತಹ ವ್ಯಕ್ತಿತ್ವ, ಪ್ರತಿಭೆ ಬೆಳೆಸಿಕೊಳ್ಳಿ.

  • ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಆಫೀಸ್‍ನಲ್ಲಿ ಮತ್ತು ಬಿಗ್‍ಬಾಸ್‍ನಲ್ಲಿ ಉಳಿಯಬಹುದು. ಇತ್ತೀಚೆಗೆ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ಅಭ್ಯರ್ಥಿಯೊಬ್ಬರು ಹೊರಹೋಗಲು ಆರೋಗ್ಯ ಸಮಸ್ಯೆಯೂ ಪ್ರಮುಖ ಕಾರಣವಾಗಿತ್ತು.

  •  ಬಿಗ್‍ಬಾಸ್‍ನಲ್ಲಿ ಅತ್ತರೆ ಅನುಕಂಪದ ಓಟ್ ಬರುತ್ತೆ ಎಂದು ಹೇಳುವವರು ಇದ್ದಾರೆ. ಆದರೆ ಆಫೀಸ್‍ನಲ್ಲಿ ಯಾವಾಗಲೂ ನಮ್ಮ ವೀಕ್‍ನೆಸ್ ಅನ್ನು ಪ್ರದರ್ಶಿಸಬಾರದು. ನೀವು ಸ್ಟ್ರಾಂಗ್ ಆಗಿದ್ದಷ್ಟು ಒಳ್ಳೆಯದು.

  •  ನಿಮಗೆ ಇಷ್ಟವಾಗದ ವಿಚಾರದ ಬಗ್ಗೆ ಸಾತ್ವಿಕವಾಗಿ ಪ್ರತಿಭಟನೆ ಮಾಡಿ. ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡಬೇಡಿ. ಒಳ್ಳೆಯ ಕಾರಣದಿಂದ ಗಮನ ಸೆಳೆಯಿರಿ. ಗಿಮಿಕ್ ಮಾಡಿ ಗಮನ ಸೆಳೆಯಬೇಡಿ.

  •  ಇತರರನ್ನು ಗೌರವಿಸಿ. ನಿಮ್ಮಲ್ಲಿ ಇರುವ ಕೆಟ್ಟಗುಣಗಳನ್ನು ಬಿಟ್ಟುಬಿಡಿ. ನಿಮ್ಮಲ್ಲಿ ಇತರರಿಗೆ ಇಷ್ಟವಾಗದ ಸಂಗತಿಗಳು ಯಾವುದು ಎಂದು ತಿಳಿದುಕೊಳ್ಳಿ.ತಾನು ಮಾತ್ರ ಗೆಲ್ಲಬೇಕೆಂದು ಸ್ವಾರ್ಥಿಯಾದರೆ ಎಲ್ಲರೂ ದೂರ ಸರಿಯುತ್ತಾರೆ.

  •  ನಿಮಗೆ ಗೊತ್ತಿರುವ ಕೌಶಲವನ್ನು ಕಂಪನಿಯ ಇತರ ಸಹೋದ್ಯೋಗಿಗಳಿಗೂ ಹೇಳಿಕೊಡಿ. ಇತರರ ನೋವಿಗೆ ಸ್ಪಂದಿಸಿ. ಅಗತ್ಯಬಿದ್ದರೆ ಸಹಾಯ ಮಾಡಿ.

  •  ನಾವು ಆಡುವ ಮಾತುಗಳ ಕುರಿತೂ ಎಚ್ಚರದಿಂದ ಇರಬೇಕು. ನಿಮಗೆ ತಿಳಿಯದಂತೆ ಆಗುವ ತಪ್ಪುಗಳ ಕುರಿತೂ ಎಚ್ಚರದಿಂದ ಇರಬೇಕು.

  •  ಆಫೀಸ್ ಎಂದರೆ ಸದಾ ಕತ್ತೆಯಂತೆ ದುಡಿಯಬೇಕೆಂದಿಲ್ಲ. ಆಗಾಗ ಫನ್, ಮನರಂಜನೆ ಇರಬೇಕು. ನಗುಮುಖದಿಂದ ಇದ್ದರೆ ಮಾತ್ರ ನಿಮ್ಮ ಆರೋಗ್ಯ ಮತ್ತು ಕಂಪನಿಯ ಆರೋಗ್ಯ ಚೆನ್ನಾಗಿರುತ್ತದೆ.

  •  ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಪ್ರದರ್ಶಿಸಲು ಬಿಗ್‍ಬಾಸ್ ಅಥವಾ ಆಫೀಸ್ ಉತ್ತಮ ವೇದಿಕೆಯಾಗಿದೆ. ಇಲ್ಲಿ ಪ್ರತಿಭಾನ್ವಿತರು ಉಳಿಯುವ ಸಾಧ್ಯತೆ ಹೆಚ್ಚಿದೆ.
ಸಿಎಗೆ ಪರ್ಯಾಯ ಎಸಿಸಿಎ

ಸಿಎಗೆ ಪರ್ಯಾಯ ಎಸಿಸಿಎ

ದೇಶದಲ್ಲಿ ಬಹುತೇಕರು ಚಾರ್ಟೆಡ್ ಅಕೌಂಟೆಂಟ್(ಸಿಎ) ಮಾಡುತ್ತಿದ್ದಾರೆ. ಭಾರತೀಯ ಸಿಎಗೆ ಪರ್ಯಾಯವಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಮನ್ನಣೆ ಪಡೆದಿರುವ ಎಸಿಸಿಎಯನ್ನೂ ಮಾಡಿದರೆ ಇನ್ನಷ್ಟು ಉತ್ತಮ ಉದ್ಯೋಗಾವಕಾಶ ಪಡೆಯಬಹುದು ಎನ್ನುತ್ತಾರೆ ತಜ್ಞರು. ಎಸಿಸಿಎ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


* ಪ್ರವೀಣ್ ಚಂದ್ರ ಪುತ್ತೂರು

ಚಾರ್ಟೆಡ್ ಅಕೌಂಟೆಂಟ್, ಫೈನಾನ್ಶಿಯಲ್ ಅಕೌಂಟೆಂಟ್, ಅಡಿಟರ್, ಮ್ಯಾನೆಜ್‍ಮೆಂಟ್ ಕನ್ಸಲ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಪಡೆಯಲು ಹೆಚ್ಚಿನವರು `ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ' (ಡಿಡಿಡಿ.ಜ್ಚಿZಜಿ.ಟ್ಟಜ) ನೀಡುವ `ಸಿಎ' ಅಥವಾ `ಚಾರ್ಟೆಡ್ ಅಕೌಂಟೆಂಟ್' ಕೋರ್ಸ್ ಮಾಡುತ್ತಾರೆ. ಸಿಎಗೆ ಪರ್ಯಾಯವಾಗಿ ಯಾವ ಕೋರ್ಸ್ ಮಾಡಬಹುದು? ಎಂಬ ಪ್ರಶ್ನೆ ಎದುರಾದರೆ ನಮ್ಮ ಗಮನ ಸೆಳೆಯುವುದು `ದಿ ಅಸೋಸಿಯೇಷನ್ ಆಫ್ ಚಾರ್ಟೆಡ್ ಸರ್ಟಿಫೈಡ್ ಅಕೌಂಟೆಂಟ್ಸ್(ಎಸಿಸಿಎ)'. ಈ ಕುರಿತು ಒಂದು ವಿಶ್ಲೇಷಣೆ ಇಲ್ಲಿದೆ.

ಜಾಗತಿಕವಾಗಿ ಫೇಮಸ್ಸು
ಖಂಡಿತವಾಗಿಯೂ ಭಾರತದ ಸಿಎ ಜಾಗತಿಕ ಗುಣಮಟ್ಟ ಹೊಂದಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ತನ್ನ ಸಿಲೇಬಸ್ ಅನ್ನು ಬದಲಾಯಿಸುವ ಇಂಗಿತವನ್ನೂ ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ಸಂಸ್ಥೆಯು ವ್ಯಕ್ತಪಡಿಸಿದೆ. ಈಗಾಗಲೇ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಅಪ್‍ಡೇಟ್ ಆಗಿರುವ ಎಸಿಸಿಎ ಹೆಚ್ಚು ಫೇಮಸ್ ಎನ್ನುವುದು ಕೆಲವು ಶಿಕ್ಷಣ ಪರಿಣತರ ಅಭಿಪ್ರಾಯ. ಎಸಿಸಿಎಯು ಜಗತ್ತಿನ 181 ದೇಶಗಳಲ್ಲಿ ಸುಮಾರು 1,88,000 ಸದಸ್ಯರನ್ನು ಮತ್ತು 4,80,000 ವಿದ್ಯಾರ್ಥಿಗಳನ್ನು ಹೊಂದಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ 91ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಎಸಿಸಿಎಯು ಇಂಗ್ಲೆಂಡ್‍ನ ಜಿಎಎಪಿ, ಲಾ, ಐಎಫ್‍ಆರ್‍ಎಸ್‍ನ ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ. ಇದು ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚುವರಿ ಜ್ಞಾನವನ್ನು ಒದಗಿಸಿದಂತಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?
* ಎಸಿಸಿಎಗೆ ಸೇರಲು ಯಾವುದೇ ಔಪಚಾರಿಕ ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ. ಆಸಕ್ತರು ನೇರವಾಗಿ ಫೌಂಡೇಷನ್ ಲೆವೆಲ್‍ಗೆ ಸೇರಬಹುದು.. ಅಕೌಂಟೆನ್ಸಿಗೆ ಹೊಸದಾಗಿ ಸೇರಬಯಸುವ ವಿದ್ಯಾರ್ಥಿಗಳು, ಯಾವುದೇ ಅಕೌಂಟೆನ್ಸಿ ವಿದ್ಯಾರ್ಹತೆ ಇಲ್ಲದೆ ಇದ್ದರೂ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು, ಈಗಾಗಲೇ ಡಿಪೆÇ್ಲಮಾ ಅಥವಾ ಬೇರೆ ಸರ್ಟಿಫಿಕೇಟ್ ಕೋರ್ಸ್ ಪಡೆಯುತ್ತಿರುವಾಗಲೇ ಎಸಿಸಿಎ ಶಿಕ್ಷಣವನ್ನು ಪಡೆಯಬಹುದಾಗಿದೆ.
* ಪದವಿ/ಸ್ನಾತಕೋತ್ತರ ಪದವಿ ಅಥವಾ ಇತರ ಶೈಕ್ಷಣಿಕ ಅರ್ಹತೆ ಇರುವ ಅಭ್ಯರ್ಥಿಗಳು ಎಸಿಸಿಎ ಸದಸ್ಯರಾಗಬಹುದು. ಭಾರತೀಯ ಸಿಎಯಲ್ಲಿ ಕೆಲವು ಪೇಪರ್‍ಗಳನ್ನು ಬರೆದು ಪೂರ್ಣಗೊಳಿಸಿದವರಿಗೆ ಎಸಿಸಿಎಯಲ್ಲಿ ಕೆಲವು ಪೇಪರ್‍ಗಳನ್ನು ಬರೆಯುವುದರಿಂದ ವಿನಾಯಿತಿಯನ್ನೂ ನೀಡಲಾಗುತ್ತದೆ. ಅಂದರೆ, ಭಾರತೀಯ ಸಿಎಯಲ್ಲಿ ಕೆಲವು ಪೇಪರ್ ಪೂರ್ಣಗೊಳಿಸಿದವರು ನೇರವಾಗಿ ಎಸಿಸಿಎಯ ಪೆÇ್ರಫೆಷನಲ್ ಲೆವೆಲ್‍ಗೆ ಸೇರಬಹುದು. ಈ ಕುರಿತು ಪೂರ್ಣ ಮಾಹಿತಿಯನ್ನು ಎಸಿಸಿಎ ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು.

ಯಾವಾಗ ಪರೀಕ್ಷೆ ನಡೆಯುತ್ತದೆ?
ಎಸಿಸಿಎ ಶಿಕ್ಷಣವು ಒಟ್ಟು 14 ಪೇಪರ್‍ಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಬರೆಯಬಹುದು. ಪ್ರತಿ ಅವಧಿಯಲ್ಲಿಯೂ 4 ಎಗ್ಸಾಂವರೆಗೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವಿದೆ. ಈ ರೀತಿ ಮಾಡಿದರೆ ಕನಿಷ್ಠ 2 ವರ್ಷದಲ್ಲಿಯೇ ಎಸಿಸಿಎ ಕೋರ್ಸ್ ಪೂರ್ಣಗೊಳಿಸಬಹುದು. ಭಾರತೀಯ ಸಿಎ ಮಾಡಿದವರಿಗೆ ಕೆಲವು ಪೇಪರ್‍ಗಳ ವಿನಾಯಿತಿಯೂ ಲಭ್ಯ ಇರುವುದರಿಂದ ಇದಕ್ಕಿಂತಲೂ ಕಡಿಮೆ ಅವಧಿಯಲ್ಲಿಯೂ ಕೋರ್ಸ್ ಪೂರ್ಣಗೊಳಿಸಬಹುದು. ಎಸಿಸಿಎ ಮೆಂಬರ್‍ಷಿಪ್ ಪಡೆಯಲು ವಿದ್ಯಾರ್ಥಿಗಳಿಗೆ 3 ವರ್ಷ ಅಥವಾ 36 ತಿಂಗಳ ಪ್ರಾಕ್ಟಿಕಲ್ ವರ್ಕ್ ಅನುಭವ ಇರಬೇಕು. ಈ ಕೆಲಸದ ಅನುಭವವನ್ನು ಎಸಿಸಿಎಗೆ ಸೇರುವ ಮುನ್ನ ಅಥವಾ ಎಸಿಸಿಎ ಅಧ್ಯಯನ ಸಮಯದಲ್ಲಿ ಅಥವಾ ಅಧ್ಯಯನ ಪೂರ್ಣಗೊಳಿಸಿದ ನಂತರವೂ ಪಡೆಯಬಹುದು.

ಪರೀಕ್ಷೆ ಯಾವಾಗ ನಡೆಯುತ್ತದೆ
ವರ್ಷಕ್ಕೆ ಎರಡು ಬಾರಿ ಎಸಿಸಿಎ ಪರೀಕ್ಷೆ ನಡೆಸಲಾಗುತ್ತದೆ. ಜೂನ್ ಮತ್ತು ಡಿಸೆಂಬರ್ ಅವಧಿಯ ಪರೀಕ್ಷೆಯನ್ನು `ಅರ್ಲಿ', `ಸ್ಟಾಂಡರ್ಡ್' ಮತ್ತು `ಲೇಟ್' ಎಂಬ ಮೂರು ಸಮಯಗಳಲ್ಲಿ ಬರೆಯಲು ಅವಕಾಶವಿದೆ. ಅರ್ಲಿ(ಬೇಗ) ಎಗ್ಸಾಂ ಮಾರ್ಚ್ 8 ಮತ್ತು ಸೆಪ್ಟೆಂಬರ್ 8ರಂದು ನಡೆಯುತ್ತದೆ. ಈ ಎಗ್ಸಾಂ ಅನ್ನು ಆನ್‍ಲೈನ್‍ನಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಸ್ಟಾಂಡರ್ಡ್ ಎಗ್ಸಾಂ ಮಾರ್ಚ್ 9-ಏಪ್ರಿಲ್ 8ರಂದು ಮತ್ತು ಸೆಪ್ಟೆಂಬರ್ 9 -ಅಕ್ಟೋಬರ್ 8ರಂದು ನಡೆಯುತ್ತದೆ. ಈ ಎಗ್ಸಾಂ ಅನ್ನು ಆನ್‍ಲೈನ್ ಅಥವಾ ಪೇಪರ್ ಮೂಲಕ ಬರೆಯಲು ಅವಕಾಶ ನೀಡಲಾಗುತ್ತದೆ. ಲೇಟ್ ಎಗ್ಸಾಂ 9 ಏಪ್ರಿಲ್-ಮೇ 8ರಂದು ಮತ್ತು ಅಕ್ಟೋಬರ್ 9-ನವೆಂಬರ್ 8ರಂದು ಬರೆಯಲು ಅವಕಾಶವಿದೆ. ಈ ಪರೀಕ್ಷೆಯನ್ನು ಆನ್‍ಲೈನ್ ಮೂಲಕ ಮಾತ್ರ ನಡೆಸಲಾಗುತ್ತದೆ.

ಫೀಸ್ ಎಷ್ಟು?
ಎಸಿಸಿಎ ಪರೀಕ್ಷೆಗೆ ದಾಖಲಾತಿ ಮತ್ತು ಚಂದಾದಾರಿಕೆ (ಸಬ್‍ಸ್ಕ್ರಿಪ್ಷನ್) ಶುಲ್ಕ ಇಂತಿದೆ. ಆರಂಭಿಕ ದಾಖಲಾತಿಗೆ 79 ಪೌಂಡ್. ಅಂದರೆ, ಸುಮಾರು 6,690 ರೂಪಾಯಿ ಆಗಿದೆ. ಮರು ದಾಖಲಾತಿಗೂ ಇಷ್ಟೇ ಶುಲ್ಕ ವಿಧಿಸಲಾಗುತ್ತದೆ. ವಾರ್ಷಿಕ ಸಬ್‍ಸ್ಕ್ರಿಪ್ಷನ್‍ಗೆ 85 ಪೌಂಡ್ ಅಂದರೆ, ಸುಮಾರು 8 ಸಾವಿರ ರೂಪಾಯಿ. ವಿನಾಯಿತಿ(ಎಗ್ಸೆಂಪ್ಷನ್ ಫೀ) ಶುಲ್ಕ: ಜ್ಞಾನದ ಪರೀಕ್ಷೆಗೆ 72 ಪೌಂಡ್(6,097 ರೂ.) ಮತ್ತು ಕೌಶಲ ಪರೀಕ್ಷೆಗೆ 97 ಪೌಂಡ್(8,214) ರೂಪಾಯಿ. ಪರೀಕ್ಷಾ ಪ್ರವೇಶ ಶುಲ್ಕವನ್ನು ಪ್ರತಿವರ್ಷ ಪಾವತಿಸಬೇಕು. ಇಲ್ಲಿ ಒಂದು ಪೌಂಡ್‍ಗೆ 84.68 ರೂಪಾಯಿ ಎಂದು ಲೆಕ್ಕಹಾಕಲಾಗಿದೆ.

 ಸಿಎ ಬೆಸ್ಟಾ? ಎಸಿಸಿಎ ಬೆಸ್ಟಾ?
ಈ ಪ್ರಶ್ನೆಗೆ ಇದಮಿತ್ತಂ ಉತ್ತರ ಕಷ್ಟ. ಈಗಾಗಲೇ ಹೇಳಿದಂತೆ ಭಾರತದ ಸಿಎ ಪೂರ್ಣಗೊಳಿಸಲು 5 ವರ್ಷ ಬೇಕು. ನಿಮಗೆ 6 ತಿಂಗಳಿಗೆ ನಾಲ್ಕು ಪೇಪರ್ ಬರೆಯುವ ಸಾಮಥ್ರ್ಯ ಇದ್ದರೆ ಎಸಿಸಿಎ ಪೂರ್ಣಗೊಳಿಸಲು 2 ವರ್ಷ ಸಾಕು. ಎಸಿಸಿಎ ಎಗ್ಸಾಂ ಜೂನ್ ಮತ್ತು ಡಿಸೆಂಬರ್‍ನಲ್ಲಿ ನಡೆಯುತ್ತದೆ. ಸಿಎ ಪರೀಕ್ಷೆಯು ಜನವರಿ, ಫೆಬ್ರವರಿ, ಏಪ್ರಿಲ್, ಮೇ, ಜುಲೈ, ಆಗಸ್ಟ್, ಅಕ್ಟೋಬರ್, ನವೆಂಬರ್‍ನಲ್ಲಿ ನಡೆಯುತ್ತದೆ.
ಭಾರತದ ಸಿಎ ಶಿಕ್ಷಣದಂತೆ ಇಂಗ್ಲೆಂಡ್‍ನ ಎಸಿಸಿಎ ಇದೆ. ಭಾರತದ ಸಿಎಗಿಂತ ಎಸಿಸಿಎ ಕಲಿಕೆಯು ಹೆಚ್ಚುವರಿಯಾಗಿ ಇಂಗ್ಲೆಂಡ್ ಜಿಎಎಪಿ(ಇಂಗ್ಲೆಂಡ್‍ನ ಅಕೌಂಟಿಂಗ್ ಪ್ರಾಕ್ಟೀಸ್ ಜ್ಞಾನ), ಕಾನೂನು ಮತ್ತು ಅಂತಾರಾಷ್ಟ್ರೀಯ ಹಣಕಾಸು ರಿಪೆÇೀರ್ಟಿಂಗ್ ಸ್ಟಾಂಡರ್ಡ್(ಐಎಫ್‍ಆರ್‍ಎಸ್) ಜ್ಞಾನವನ್ನು ನೀಡುತ್ತದೆ. ಇದರಿಂದ ನಿಮಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅಥವಾ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸಲು ಅನುಕೂಲವುಂಟು ಮಾಡುತ್ತದೆ. ಎಸಿಸಿಎ ಸರ್ಟಿಫಿಕೇಟ್ ಜೊತೆ ಎಂಬಿಎ ಪದವಿಯನ್ನು ಪಡೆದರೆ ಹೆಚ್ಚು ಉದ್ಯೋಗಾವಕಾಶ ದೊರಕುತ್ತದೆ.
ಎಸಿಸಿಎಯ ಶಿಕ್ಷಣ ಗುಣಮಟ್ಟವು ಜಗತ್ತಿನಾದ್ಯಂತ ಇರುವ ಉದ್ಯೋಗದಾತರ ಅವಶ್ಯಕತೆಗೆ ತಕ್ಕಂತೆ ಇದೆ. ಭಾರತದ ಸಿಎಯು ಶೀಘ್ರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ತನ್ನ ಪಠ್ಯಕ್ರಮವನ್ನು ಬದಲಾಯಿಸಿಕೊಳ್ಳಲು ಉದ್ದೇಶಿಸಿದೆ.
ಭಾರತೀಯ ಸಿಎ ಮಾಡುತ್ತಿರುವಾಗ ಬೇರೆ ಕೋರ್ಸ್ ಮಾಡುವುದು ಬಹಳಷ್ಟು ಕಷ್ಟಕಾರಿ ಎನ್ನುತ್ತಾರೆ ಬಹುತೇಕ ಸಿಎ ವಿದ್ಯಾರ್ಥಿಗಳು. ಆದರೆ, ಬೇರೆ ಕೋರ್ಸ್ ಮಾಡುತ್ತಿರುವಾಗಲೇ ಎಸಿಸಿಎ ಕ್ವಾಲಿಫಿಕೇಷನ್ ಪಡೆಯಬಹುದಾಗಿದೆ. ಭಾರತೀಯ ಸಿಎಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಸಿಸಿಎಗೆ ಸಂಬಂಧಪಟ್ಟ ಆನ್‍ಲೈನ್ ತರಬೇತಿಗಳು ಲಭ್ಯ ಇವೆ.

Copyright: Published On Vijaya Karnataka Mini

Monday, 29 May 2017

ಸಂದರ್ಶನದ ಪ್ರಶ್ನೆ: ನಿಮ್ಮ ಬಗ್ಗೆ ಹೇಳಿ..

ಸಂದರ್ಶನದ ಪ್ರಶ್ನೆ: ನಿಮ್ಮ ಬಗ್ಗೆ ಹೇಳಿ..

ಉದ್ಯೋಗ ಸಂದರ್ಶನದಲ್ಲಿ ಕೇಳುವ ಸಾಮಾನ್ಯ ಪ್ರಶ್ನೆಗಳು ಇಲ್ಲಿವೆ. ಇವುಗಳಿಗೆ ಹೇಗೆ ಉತ್ತರಿಸುವುದೆಂದು ತಿಳಿದುಕೊಳ್ಳಿ


* ಪ್ರವೀಣ್ ಚಂದ್ರ ಪುತ್ತೂರು

ಉದ್ಯೋಗ ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳಿಗೆ `ನಮ್ಮಲ್ಲಿ ಏನು ಪ್ರಶ್ನೆ ಕೇಳ್ತಾರಪ್ಪ?' ಎಂಬ ಟೆನ್ಷನ್ ಇರುವುದು ಸಾಮಾನ್ಯ. ಯಾವ ಪ್ರಶ್ನೆ ಕೇಳುತ್ತಾರೆ ಎಂದು ಗೊತ್ತಿದ್ದರೆ ಒಂದಿಷ್ಟು ಹೊತ್ತು ಕನ್ನಡಿ ಮುಂದೆ ನಿಂತುಕೊಂಡು ಉತ್ತರ ಹೇಳಲು ಪ್ರ್ಯಾಕ್ಟೀಸ್ ಮಾಡಬಹುದಿತ್ತು ಎಂದುಕೊಳ್ಳುವವರು ಬಹಳಷ್ಟು ಜನರು ಇರುತ್ತಾರೆ. ಸಂದರ್ಶನದಲ್ಲಿ ಇದೇ ರೀತಿಯ ಪ್ರಶ್ನೆ ಕೇಳುತ್ತಾರೆ ಎಂದು ಇದಮಿತ್ತಂ ಹೇಳುವುದು ಕಷ್ಟ. ಯಾಕೆಂದರೆ, ಪ್ರಶ್ನೆ ಕೇಳುವುದು ಆಯಾ ಸಂದರ್ಶಕರ ಮರ್ಜಿಗೆ ಬಿಟ್ಟ ವಿಷಯ. ಆದರೆ, ಅವರಲ್ಲಿಯೂ ಪ್ರಶ್ನೆ ಕೇಳಲು ಸಾಕಷ್ಟು ವಿಷಯಗಳು ಇರುವುದಿಲ್ಲ. ಬಹುತೇಕ ಪ್ರಶ್ನೆಗಳು ಈ ಹಿಂದೆ ಕೇಳಿದ್ದೇ ಆಗಿರುತ್ತವೆ. ಸಾಮಾನ್ಯವಾಗಿ ಸಂದರ್ಶಕರು ಕೇಳುವ ಸಾಮಾನ್ಯ ಪ್ರಶ್ನೆಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಮುಂದೆ ನೀವು ಸಂದರ್ಶನಕ್ಕೆ ಹೋದಾಗ ಹೇಗೆ ಉತ್ತರಿಸಬೇಕೆಂದು ಈಗಲೇ ತಯಾರಿ ನಡೆಸಿರಿ.
ಪ್ರಶ್ನೆ: ನಿಮ್ಮ ಬಗ್ಗೆ ಸ್ವಲ್ಪ ಹೇಳುವಿರಾ?
ವಾಹ್, ಎಷ್ಟು ಸರಳ ಪ್ರಶ್ನೆ ಎಂದುಕೊಂಡಿರಾ? ನಿಜಕ್ಕೂ ಇದು ಕಠಿಣ ಪ್ರಶ್ನೆ. ನಿಮ್ಮ ಬಗ್ಗೆ ನೀವು ಏನೇನೋ ಹೇಳಲು ಹೋಗಬೇಡಿ. ಇದು ಸರಳ ಪ್ರಶ್ನೆಯಾಗಿ ಕಂಡರೂ ನಿಮ್ಮನ್ನು ಮೌಲ್ಯಮಾಪನ ಮಾಡುವ ಅತ್ಯಂತ ಪ್ರಮುಖ ಪ್ರಶ್ನೆಯೆಂದು ನೆನಪಿಡಿ.
ಈ ಪ್ರಶ್ನೆ ಕೇಳುವ ಹಿಂದೆ ಹಲವು ಉದ್ದೇಶಗಳು ಇರುತ್ತವೆ. ಕೆಲವೊಮ್ಮೆ ಸಂದರ್ಶಕರು ಅಭ್ಯರ್ಥಿಯ ಮನದಲ್ಲಿ ಸಹಜವಾಗಿ ಮೂಡುವ ಆರಂಭಿಕ ನರ್ವಸ್‍ನೆಸ್ ಅನ್ನು ಕಡಿಮೆ ಮಾಡಲು ನಿಮ್ಮ ಬಗ್ಗೆ ಹೇಳಿ, ಓದಿನ ಬಗ್ಗೆ ಹೇಳಿ, ಹವ್ಯಾಸಗಳ ಬಗ್ಗೆ ಹೇಳಿ ಎಂದೆಲ್ಲ ಕೇಳುತ್ತಾರೆ. ಆ ಸಂದರ್ಶನದ ರೂಂಗೆ ನಿಮ್ಮನ್ನು ಹೊಂದಿಕೊಳ್ಳುವಂತೆ ಮಾಡುವುದು ಇದರ ಉದ್ದೇಶ. ನಿಮ್ಮ ಬಗ್ಗೆ ಹೇಳಿ ಎಂದಾಗ ಎಲ್ಲರಂತೆ ನೀವು ಕೂಡ `ನಾನು ಮಿಸ್ಟರ್ ಎಕ್ಸ್, ಇಲ್ಲಿ ಓದಿದ್ದೀನಿ. ಅಲ್ಲಿ ಕೆಲಸ ಮಾಡಿದ್ದೀನಿ' ಎಂದು ಓತಪೆÇ್ರೀತವಾಗಿ ಹೇಳಬೇಡಿ. ನಿಮ್ಮ ಬಗ್ಗೆ ಹೇಳುವುದೂ ಒಂದು ಕಲೆ. ಆ ಕಲೆ ಕಲಿತುಕೊಂಡರೆ ನಿಮ್ಮ ಮುಂದಿರುವ ಸಂದರ್ಶಕರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಬಹುದು.
ನಿಮ್ಮ ಆತ್ಮವಿಶ್ವಾಸದ ಪರೀಕ್ಷೆ: ಸಂದರ್ಶಕರು ಹೆಚ್ಚಾಗಿ ಈ ಪ್ರಶ್ನೆಯಲ್ಲಿ ನೀವು ಹೇಳುವ ಉತ್ತರದೊಳಗಿನ ಮಾಹಿತಿಯ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ ಇರಬಹುದು. ಅವರು ನಿಮ್ಮಲ್ಲಿರುವ ಆತ್ಮವಿಶ್ವಾಸ, ಉತ್ಸಾಹ ಮತ್ತು ಪ್ಯಾಶನ್ ಅನ್ನು ಪರಿಶೀಲಿಸಲು ಹೆಚ್ಚಾಗಿ ಇಂತಹ ಪ್ರಶ್ನೆ ಕೇಳುತ್ತಾರೆ. ನಿಮ್ಮ ಬಗ್ಗೆ ಹೇಳುವಾಗ ತಡಬಡಾಯಿಸಬೇಡಿ. ನಿಮ್ಮ ಬಗ್ಗೆ ನೀವೇ ತಿಳಿದುಕೊಳ್ಳದೆ ಇದ್ದರೆ ಹೇಗೆ? ಜೊತೆಗೆ ಅದನ್ನು ಪ್ರಸಂಟೇಷನ್ ಮಾಡುವ ಕಲೆಯೂ ನಿಮಗೆ ಗೊತ್ತಿರಬೇಕು.
ಉತ್ತರಿಸುವ ಮೊದಲು ಇರಲಿ ಎಚ್ಚರ: ಟೆಲ್ ಮಿ ಅಬೌಟ್ ಯುವರ್‍ಸೆಲ್ಫ್ ಎಂಬ ಪ್ರಶ್ನೆಗೆ ಉತ್ತರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಕೆಲವರು ಅಪಾಯಕಾರಿಯಾಗಿ, ಅನಿರೀಕ್ಷಿತವಾಗಿ ಮತ್ತು ಅಸಂಪ್ರದಾಯಿಕವಾಗಿ ಪ್ರತಿಕ್ರಿಯಿಸುತ್ತರೆ. ಇದು ಸುಲಭದ ಪ್ರಶ್ನೆಯಾಗಿದ್ದರೂ ಉತ್ತರಿಸಲು ಕೆಲವರು ತಡಬಡಾಯಿಸುತ್ತಾರೆ. ಯಾಕೆಂದರೆ, ಎಲ್ಲದಕ್ಕೂ ಸಿದ್ಧತೆ ಮಾಡಿಕೊಂಡಿರುವವರು ಈ ಸರಳ ಪ್ರಶ್ನೆಯ ಬಗ್ಗೆ ಯೋಚಿಸಿರುವುದೇ ಇಲ್ಲ. ಇದಕ್ಕೆ ಸಮರ್ಪಕವಾಗಿ ಉತ್ತರಿಸಿದರೆ ನಿಮ್ಮನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಯಾರಾದರೂ ನಿಮ್ಮ ಬಗ್ಗೆ ಹೇಳಿ ಎಂದು ಕೇಳಿದರೆ, ಪ್ರಶ್ನೆ ಕೇಳಿದವರಿಗೆ ಸಂತೋಷ ಆಗುವಂತೆ ನಿಮ್ಮ ಬಗ್ಗೆ ಹೇಳಿ. ಯಾಕಪ್ಪ ಇವನಲ್ಲಿ ಇವನ ಬಗ್ಗೆ ಕೇಳಿದೆ ಎಂದನಿಸದೆ ಇರಲಿ.
ನಡೆಸಿ ಸಿದ್ಧತೆ: ಇಲ್ಲಿಯವರೆಗೆ ನೀವು ಇದು ಸರಳ ಪ್ರಶ್ನೆ ಎಂದುಕೊಂಡಿರಬಹುದು. ಒಮ್ಮೆ ಕನ್ನಡಿ ಮುಂದೆ ನಿಂತುಕೊಂಡು ನಿಮ್ಮ ಬಗ್ಗೆ ಹೇಳಲು ಪ್ರಯತ್ನಿಸಿ. ಕಷ್ಟವಾಗುತ್ತಿದೆಯಲ್ಲವೇ? ಇಲ್ಲಿಯವರೆಗೆ ಈ ಪ್ರಶ್ನೆಯ ಬಗ್ಗೆ ನೀವು ಗಂಭೀರವಾಗಿ ಯೋಚಿಸದೆ ಇದ್ದರೆ ಈಗಿನಿಂದಲೇ ಈ ಕುರಿತು ಯೋಚಿಸಲು ಆರಂಭಿಸಿ. ನಿಮ್ಮ ಬಗ್ಗೆ ಆಪ್ಯಾಯಮಾನವಾಗಿ ಹೇಳಲು ಕಲಿಯಿರಿ. ಏನು ಹೇಳಬೇಕು ಮತ್ತು ಏನು ಹೇಳಬಾರದು ಎನ್ನುವುದನ್ನು ಮೊದಲೇ ಪಟ್ಟಿಮಾಡಿಟ್ಟುಕೊಳ್ಳಿ.
ಹೀಗೆ ಹೇಳಿ ನೋಡಿ
* `ಐ ಕ್ಯಾನ್ ಸಮ್ಮರೈಜ್ ಹೂ ಐ ಆ್ಯಮ್ ಇನ್ ತ್ರೀ ವಡ್ರ್ಸ್....' ಎಂದು ಆರಂಭಿಸಿದರೆ ಸಂದರ್ಶಕರ ಆಸಕ್ತಿಯನ್ನು ಹೆಚ್ಚಿಸುವಿರಿ. ನೀವು ಸಂಕ್ಷಿಪ್ತವಾಗಿ ಅತ್ಯುತ್ತಮವಾಗಿ ವಿಷಯ ಮಂಡನೆ ಮಾಡುವವರು, ಕ್ರಿಯೇಟಿವ್ ಮತ್ತು ಸೃಜನಶೀಲರೆಂದು ಸಂದರ್ಶಕರು ತಿಳಿದುಕೊಳ್ಳುತ್ತಾರೆ.
* `ದಿ ಕ್ವೊಟೇಷನ್ ಐ ಲೈವ್ ಮೈ ಲೈಫ್ ಬೈ ಈಸ್...' ಎಂದು ಹೇಳಿ ನೋಡಿ. ನಿಮ್ಮ ಪ್ರಗತಿ ಯೋಜನೆಯಲ್ಲಿ ವೈಯಕ್ತಿಕ ಅಭಿವೃದ್ಧಿ ಪ್ರಮುಖವಾಗಿದೆ ಎಂದು ಸಂದರ್ಶಕರು ತಿಳಿದುಕೊಳ್ಳುತ್ತಾರೆ. ನಿಮ್ಮನ್ನು ನೀವು ಮೋಟಿವೇಟ್ ಅಥವಾ ಉತ್ತೇಜಿಸುವವರು ಎಂದು ಸಹ ಅವರು ತಿಳಿದುಕೊಳ್ಳುತ್ತಾರೆ.
* `ಮೈ ಪರ್ಸನಲ್ ಪಿಲಾಸಫಿ ಈಸ್...' ಎಂದು ಆರಂಭಿಸಿ. ಹೀಗೆ ಆರಂಭಿಸಿದರೆ ನೀವು ಕೇವಲ ಉದ್ಯೋಗಿ ಮಾತ್ರವಲ್ಲದೆ ಅತ್ಯುತ್ತಮ ಆಲೋಚನೆಗಾರರು ಎಂದು ಸಂದರ್ಶಕರು ತಿಳಿದುಕೊಳ್ಳುತ್ತಾರೆ.
* `ಪೀಪಲ್ ಹೂ ನೋ ಮಿ ಬೆಸ್ಟ್ ಸೇ ದಟ್ ಐ ಆ್ಯಪ್...' ಎಂದು ಆರಂಭಿಸಿ. ಇದು ನಿಮ್ಮ ಸ್ವ ಅರಿವನ್ನು ಸೂಚಿಸುತ್ತದೆ. ಈ ರೀತಿ ಹೇಳುವುದು ಸಹ ಸಂದರ್ಶಕರ ಕುತೂಹಲವನ್ನು ಕೆರಳಿಸುತ್ತದೆ.
* `ವೆಲ್, ಐ ಗೂಗಲ್ಡ್ ಮೈ ಸೆಲ್ಫ್ ದೀಸ್ ಮಾರ್ನಿಂಗ್, ಆ್ಯಂಡ್ ಇಯರ್ ವಾಟ್ ಐ ಫೌಂಡ್....' ಎಂದು ಆರಂಭಿಸಿದರೆ ನೀವು ಟೆಕ್ ಸೇವಿ, ಫನ್, ಕೂಲ್ ವ್ಯಕ್ತಿಯೆಂದು ಸಂದರ್ಶಕರು ತಿಳಿದುಕೊಳ್ಳಬಹುದು. ಆಯಾ ಸಂದರ್ಶನದ ವಾತಾವರಣವನ್ನು ಗಮನಿಸಿಕೊಂಡು ಇಂತಹ ಮಾತು ಹೇಳಿ. ತುಂಬಾ ಗಂಭೀರ ಸಂದರ್ಶನದಲ್ಲಿ ಈ ರೀತಿಯಾಗಿ ಹೇಳಲು ಹೋಗಬೇಡಿ.
* `ಮೈ ಪ್ಯಾಷನ್ ಈಸ್...' ಎಂದು ಆರಂಭಿಸಿ. ನೀವು ಏನು ಮಾಡುವಿರಿ ಎಂದು ಹೆಚ್ಚು ಜನರು ಆಲೋಚಿಸುವುದಿಲ್ಲ. ನೀವು ಯಾರು ಎಂದು ಹೆಚ್ಚಿನವರು ನೋಡುತ್ತಾರೆ. ನೀವ್ಯಾರು ಎಂಬ ಪ್ರಶ್ನೆಗೆ ನಿಮ್ಮ ಪ್ಯಾಷನ್ ಕುರಿತಾದ ಉತ್ತರವು ಸಂದರ್ಶಕರಿಗೆ ಇಷ್ಟವಾಗಬಹುದು.
* ವೆಬ್ ಐ ವಾಸ್ ಸೆವೆನ್ ಇಯರ್ಸ್ ಓಲ್ಡ್, ಐ ಆಲ್ವೇಸ್ ವಾಟೆಂಡ್ ಟು ಬಿ...' ಎಂದು ಆರಂಭಿಸಿ. ಈ ರೀತಿ ಉತ್ತರಿಸಿದರೆ ನೀವು ಈ ಉದ್ಯೋಗದ ಕುರಿತು ಕೆಲವು ದಿನದಿಂದ ಕನಸು ಕಂಡವರಲ್ಲ, ಹಲವು ವರ್ಷಗಳಿಂದ ಈ ಹುದ್ದೆ ಪಡೆಯಲು ಪ್ರಯತ್ನಿಸುತ್ತಿದ್ದೀರಿ ಎಂದು ಸಂದರ್ಶಕರು ತಿಳಿದುಕೊಳ್ಳುತ್ತಾರೆ.
* ಎಲ್ಲಾದರೂ ಸಂದರ್ಶನವು ಅತ್ಯುತ್ತಮವಾಗಿದ್ದು, ತಮಾಷೆಯಿಂದ ಕೂಡಿದ್ದರೆ ನಿಮ್ಮ ಬಗ್ಗೆ ನೀವು `ಇಫ್ ಹಾಲಿವುಡ್ ಮೇಡ್ ಎ ಮೂವಿ ಅಬೌಟ್ ಮೈ ಲೈಫ್, ಇಟ್ ವುಡ್ ಬಿ ಕಾಲ್ಡ್..' ಎಂದು ಹೇಳಬಹುದು.
* ಕ್ಯಾನ್ ಐ ಶೋ ಯು, ಇನ್‍ಸ್ಟೀಡ್ ಆಫ್ ಟೆಲ್ ಯು' ಎಂದು ಉತ್ತರಿಸಬಹುದು. ನಿಮ್ಮ ಬಗ್ಗೆ ನೀವು ಹೇಳುವುದಕ್ಕಿಂತ ನಿಮ್ಮ ಸಾಧನೆ ಕುರಿತಾದ ಪಿಪಿಟಿ ಇತ್ಯಾದಿಗಳು ಸಿದ್ಧವಾಗಿಟ್ಟುಕೊಂಡರೆ ಸಂದರ್ಶಕರಿಗೆ ತೋರಿಸಬಹುದು.
ಇವೆಲ್ಲ ಕೆಲವು ಉದಾಹರಣೆಗಳಷ್ಟೇ. ಸಂದರ್ಶಕರು ನಿಮ್ಮ ಜೊತೆ ಹೇಗೆ ಸಂವಹನ ನಡೆಸುತ್ತಿದ್ದಾರೆ ಎಂದು ತಿಳಿದುಕೊಂಡು ನಿಮ್ಮ ಕುರಿತು ಹೆಚ್ಚು ಆಸಕ್ತಿದಾಯಕವಾಗಿ ಉತ್ತರಿಸಬಹುದು.
Published in Vijayakarnataka Mini 

Friday, 24 March 2017

ವಿಲಾಸ್ ನಾಯಕ್ ಸಂದರ್ಶನ: ಕಲೆ ಎಂಬ ಕರಿಯರ್

ವಿಲಾಸ್ ನಾಯಕ್ ಸಂದರ್ಶನ: ಕಲೆ ಎಂಬ ಕರಿಯರ್

ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ಬಿಟ್ಟು ಕಲೆಯನ್ನೇ ಕರಿಯರ್ ಆಗಿ ಸ್ವೀಕರಿಸಿ ದೇಶ-ವಿದೇಶಗಳಲ್ಲಿ ಮಿಂಚುತ್ತಿದ್ದಾರೆ ಕರ್ನಾಟದ ಪ್ರತಿಭೆ ವಿಲಾಸ್ ನಾಯಕ್. ಕಲೆಯನ್ನು ಪೂರ್ಣಕಾಲಿಕ ಅಥವಾ ಅರೆಕಾಲಿಕ ಕರಿಯರ್ ಆಗಿ ಸ್ವೀಕರಿಸಲು ಬಯಸುವವರಿಗೆ ಸ್ಪೂರ್ತಿ ತುಂಬುವ ಟಿಪ್ಸ್‍ಗಳನ್ನು ವಿಕೆ ಮಿನಿ ವಿಶೇಷ ಸಂದರ್ಶನದಲ್ಲಿ ಅವರು ನೀಡಿದ್ದಾರೆ.


* ಪ್ರವೀಣ ಚಂದ್ರ ಪುತ್ತೂರು

ರಾಷ್ಟ್ರಮಟ್ಟದ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಚಕಚಕನೆ ಕೆಲವೇ ನಿಮಿಷದಲ್ಲಿ ಪೇಂಟಿಂಗ್ ಬಿಡಿಸಿ ಬೆರಗುಗೊಳಿಸುವ ವಿಲಾಸ್ ನಾಯಕ್ ಬಗ್ಗೆ ನಿಮಗೆ ಗೊತ್ತಿರಬಹುದು. ಈಗ ಅವರು ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಬೇಡಿಕೆ ಪಡೆದಿರುವ ಸ್ಪೀಡ್ ಪೇಂಟರ್.



ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ಸಿಂಗಾಪುರದ ಅಧ್ಯಕ್ಷರ ಚಾರಿಟಿ ಶೋನಲ್ಲಿ, ಏಷ್ಯಾ ಗಾಟ್ ಟಾಲೆಂಟ್‍ನಲ್ಲಿ, ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸೇರಿದಂತೆ ನೂರಾರು ಕಡೆ ಸ್ಪೀಡ್ ಪೇಂಟಿಗೆ ನಡೆಸಿ ಜನರ ಮುಖದಲ್ಲಿ ಅಚ್ಚರಿ ಹುಟ್ಟಿಸಿದ್ದಾರೆ. ಅಬ್ದುಲ್ ಕಲಾಂ, ಸಚಿನ್ ತೆಂಡೂಲ್ಕರ್, ನರೇಂದ್ರ ಮೋದಿ, ಪ್ರಣಬ್ ಮುಖರ್ಜಿ , ಪುಟ್ಬಾಲ್ ದಂತಕತೆ ಪೀಲೆ ಮುಂತಾದವರ ಮುಂದೆ ತನ್ನ ಕಲೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.
ಕೆಲವು ವರ್ಷದ ಹಿಂದೆ ಅವರು ಕಾಪೆರ್Çರೇಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಐದು ವರ್ಷದ ಹಿಂದೆ ಎಚ್‍ಆರ್ ಹುದ್ದೆಯನ್ನು ಬಿಟ್ಟ ಇವರ ಈಗಿನ ಕಲಾ ಕರಿಯರ್‍ನ ಸಕ್ಸಸ್ ಸ್ಟೋರಿ ಅಚ್ಚರಿ ಹುಟ್ಟಿಸುವಂತದ್ದು. ವಿವಿಧ ಹವ್ಯಾಸ, ಪ್ರತಿಭೆಯನ್ನು ಹೊಂದಿದ್ದು, ಇಷ್ಟವಿಲ್ಲದ ಇಷ್ಟವಿಲ್ಲದ ವೃತ್ತಿಯಲ್ಲಿ ಜೀವನ ಸವೆಸುತ್ತಿರುವವರಿಗೆ, ಪ್ರತಿಭೆಯನ್ನು ವೃತ್ತಿಯಾಗಿ ಸ್ವೀಕರಿಸಲು ಬಯಸುವವರಿಗೆ ಅಮೂಲ್ಯ ಸಲಹೆಗಳನ್ನು ವಿಲಾಸ್ ಇಲ್ಲಿ ನೀಡಿದ್ದಾರೆ.

ಶಿಕ್ಷಣ ಮತ್ತು ಕೆಲಸ

ಉಜಿರೆಯಲ್ಲಿ ಬಿಎ ಪದವಿ (7ನೇ ರ್ಯಾಂಕ್), ಮೈಸೂರು ವಿವಿಯಲ್ಲಿ ಎಂಎಸ್‍ಡಬ್ಲ್ಯು ಪದವಿ(2ನೇ ರ್ಯಾಂಕ್) ಕನ್ನಡ ಮುಕ್ತ ವಿವಿಯಲ್ಲಿ ಪಿಜಿಡಿಎಚ್‍ಆರ್‍ಎಂ ಓದಿದ್ದೆ. ಶಿಕ್ಷಣ ಮುಗಿದ ನಂತರ ನಾನು ಶಾಹಿ ಎಕ್ಸ್‍ಪೆÇೀರ್ಟ್ ಕಂಪನಿಯಲ್ಲಿ 1 ವರ್ಷ, 2 ತಿಂಗಳು ಕೆಲಸ ಮಾಡಿದೆ. ನಂತರ ಐಬಿಎಂನ ಮಾನವ ಸಂಪನ್ಮೂಲ ವಿಭಾಗದಲ್ಲಿ ಸುಮಾರು ನಾಲ್ಕೂವರೆ ವರ್ಷ ಕೆಲಸ ಮಾಡಿದೆ. ಹೀಗೆ ಎಂಎನ್‍ಸಿ ಕಂಪನಿಯಲ್ಲಿ ಸುಮಾರು 6 ವರ್ಷ ಕೆಲಸ ಮಾಡಿದ್ದೆ.
ಕೆಲಸದಲ್ಲಿ ಕಲೆಯ ಗುಂಗು

ಆಫೀಸ್‍ನಲ್ಲಿ ಕೆಲಸ ಮಾಡುವಾಗ, ಮನೆಯಲ್ಲಿ ಒಬ್ಬನೇ ಇದ್ದಾಗ, ಚಿತ್ರ ಬಿಡಿಸಿಕೊಂಡಿರುವಾಗ, ಟ್ಯಾಲೆಂಟ್ ಮ್ಯಾನೇಜ್‍ಮೆಂಟ್ ಕುರಿತು ತಿಳುವಳಿಕೆ ಬಂದ ಸಂದರ್ಭದಲ್ಲಿ ನಾನು ನನ್ನ ಬಗ್ಗೆ ಹೆಚ್ಚು ಯೋಚಿಸಲು ಆರಂಭಿಸಿದ್ದೆ. ನಾನು ನನ್ನ ಪ್ರತಿಭೆಯನ್ನು ಏನು ಮಾಡುತ್ತಿದ್ದೇನೆ? ಯಾವ ರೀತಿ ಬಳಕೆ ಮಾಡುತ್ತಿದ್ದೇನೆ? ಯಾಕೆ ವ್ಯರ್ಥ ಮಾಡುತ್ತಿದ್ದೇನೆ? ಇತ್ಯಾದಿ ಚಿಂತನೆಗಳನ್ನು ಮಾಡುತ್ತಿದ್ದೆ. ಇರುವ ಒಂದು ಜೀವನದಲ್ಲಿ ದೇವರು ನಮಗೆ ನೀಡಿರುವ ಪ್ರತಿಭೆಯನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಬೇಕು ಎಂದೆನಿಸಿತ್ತು. ನಾನು ನನ್ನ ಪ್ರತಿಭೆಯನ್ನಿಟ್ಟುಕೊಂಡು ಏನಾದರೂ ಸಾಧನೆ ಮಾಡಬೇಕು ಎಂದೆಲ್ಲ ಯೋಚಿಸುತ್ತಿದ್ದೆ. ಕೆಲಸ ಮುಗಿಸಿ ಮನೆಗೆ ಬಂದು ರಾತ್ರಿಯಿಡಿ ಚಿತ್ರ ಬಿಡಿಸುತ್ತ ಮುಂಜಾನೆ 3-4 ಗಂಟೆಯವರೆಗೆ ಇದೇ ಆಲೋಚನೆಯಲ್ಲಿ ಇರುತ್ತಿದ್ದೆ. ಕೆಲಸ ಮಾಡುವಾಗಲೂ ಮುಂದೆ ಏನಾಗಬೇಕು ಎಂಬ ಪರಿಕಲ್ಪನೆ ಮಾಡುತ್ತಿದ್ದೆ.

ಕೆಲಸ ಬಿಡುವ ರಿಸ್ಕ್
ಕೆಲಸ ಬಿಡಲು ತೆಗೆದುಕೊಳ್ಳುವ ನಿರ್ಧಾರ ಮತ್ತು ಕೆಲಸ ಬಿಟ್ಟ ನಂತರ ಕಲೆಯ ಕಡೆಗೆ ಪೂರ್ತಿ ತೊಡಗಿಸಿಕೊಳ್ಳುವುದು ಕೊಂಚ ಸವಾಲಿನ ಸಂಗತಿ. ಆ ಸಮಯದಲ್ಲಿ ಬಹಳಷ್ಟು ಜನರು ಉತ್ಸಾಹ ಕುಗ್ಗಿಸುವ ಮಾತುಗಳನ್ನಾಡುತ್ತಿದ್ದರು. ರಿಯಾಲಿಟಿ ಶೋನಲ್ಲಿ ಜನಪ್ರಿಯತೆ ಪಡೆದ ತಕ್ಷಣ ಕರಿಯರ್ ಹಾಳು ಮಾಡಿಕೊಳ್ಳಬೇಡಿ. ಇಂತಹ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಬಹಳಷ್ಟು ಜನರು ಹೇಳುತ್ತಿದ್ದರು. ಆದರೆ, ನಾನೂ ಆದಾಗಲೇ ರಿಸ್ಕ್ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಾಗಿತ್ತು.
ಜೀವನದಲ್ಲಿ ನಾಳೆ ಏನಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಯಾಕೆ, ಒಂದು ಖಾಯಂ ಉದ್ಯೋಗಕ್ಕೆ ಅಂಟಿಕೊಂಡು ನಮ್ಮ ಪ್ಯಾಷನ್ ಅನ್ನು ಬಿಡಬೇಕು? ಯಾಕೆ ನಮ್ಮ ಕನಸನ್ನು ಸಾಯಿಸಬೇಕು ಎಂದು ಅನಿಸಿದ್ದರಿಂದ ಎಂಎನ್‍ಸಿ ಜಾಬ್‍ಗೆ ರಿಸೈನ್ ಮಾಡಿದ್ದೆ.

ಸರಿಯಾದ ಪ್ಲಾನ್ ಅಗತ್ಯ

[caption id="attachment_2678" align="alignright" width="270"] Image: Villas Nayak[/caption]

ನಾನು ಎಂಎನ್‍ಸಿ ಕಂಪನಿಗೆ ರಾಜೀನಾಮೆ ನೀಡಿ ಈ ತಿಂಗಳಿಗೆ ಐದು ವರ್ಷವಾಗುತ್ತದೆ. ಇಲ್ಲಿಯವರೆಗೆ ಯಾವುದೇ ಸಮಸ್ಯೆಯಾಗಿಲ್ಲ. ಯಾಕೆಂದರೆ, ಕೆಲಸ ಬಿಡುವ ಕುರಿತು ಮತ್ತು ಕಲೆಯನ್ನು ಕರಿಯರ್ ಆಗಿ ಸ್ವೀಕರಿಸುವ ಕುರಿತು ನಾನು ಸರಿಯಾದ ಪ್ಲಾನ್ ಮಾಡಿದ್ದೆ. ನಾನು ಮಾಡುವುದು ಎಕ್ಸ್‍ಕ್ಲೂಸಿವ್ ಆರ್ಟ್ ಆಗಿರುವ ಕಾರಣ ಅವಕಾಶಗಳು ಸಿಗುತ್ತದೆ ಎನ್ನುವ ಭರವಸೆ ಇತ್ತು. ಈಗ ನನಗೆ ಬರುತ್ತಿರುವ ಹೆಚ್ಚು ಅವಕಾಶವನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ನನ್ನ ಮುಂದಿರುವ ಅತ್ಯುತ್ತಮ ರೀತಿಯ ಸವಾಲಾಗಿದೆ.
ಹೊಸ ಬಗೆಯ ಉದ್ಯೋಗಾವಕಾಶ
ನೀನು ಡಾಕ್ಟರ್ ಆಗು, ಎಂಜಿನಿಯರ್ ಆಗು, ಆರ್ಟಿಸ್ಟ್ ಆಗಿ ಏನು ಮಾಡ್ತಿಯಾ? ಸ್ಟಾಂಡ್ ಅಪ್ ಕಮಿಡಿಯನ್ ಆಗಿ, ಡಿಜೆ ಆಗಿ ಏನು ಮಾಡ್ತಿಯಾ? ಎಂದು ಹೇಳುವವರಿದ್ದಾರೆ. ಆದರೆ, ಇದೆಲ್ಲ ಹೊಸ ಬಗೆಯ ಉದ್ಯೋಗ ಮತ್ತು ಹವ್ಯಾಸಗಳು. ಇಂತಹ ಕಲೆಗಳನ್ನು ವೃತ್ತಿಯಾಗಿ ಸ್ವೀಕರಿಸಿ ಉತ್ತಮ ದುಡಿಮೆ ಮಾಡಬಹುದು ಎನ್ನುವುದಕ್ಕೆ ನನ್ನ ಬದುಕೇ ಸಾಕ್ಷಿ. ನನಗೂ ಎಷ್ಟೋ ಸಾರಿ ಅನಿಸಿದೆ, ನಾನು ಈಗಲೂ ಎಂಎನ್‍ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನನ್ನ ಆರ್ಥಿಕ ಪರಿಸ್ಥಿತಿ ಹೀಗೆ ಇರುತ್ತಿತ್ತಾ ಎಂದು.

ಆರ್ಥಿಕತೆಯೂ ಉತ್ತಮ

ಪ್ರತಿಭೆ ಕೈ ಹಿಡಿದರೆ ಆರ್ಥಿಕವಾಗಿಯೂ ಉತ್ತಮಗೊಳ್ಳಬಹುದು. ನಾನು ಇನ್ನೂ ಎಂಎನ್‍ಸಿ ಕಂಪನಿಯಲ್ಲೇ ಇರುತ್ತಿದ್ದರೆ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಲು ಸಾಧ್ಯವಿರಲಿಲ್ಲ. ಕಲೆಯನ್ನು ಕರಿಯರ್ ಆಗಿ ಸ್ವೀಕರಿಸಿದ ಎರಡೂವರೆ ವರ್ಷದಲ್ಲಿಯೇ ಬೆಂಗಳೂರಿನಲ್ಲಿ ನಾನು ಸ್ವಂತ ಮನೆ ಮಾಡಿದ್ದೇನೆ. (ಇವರ ಚಿತ್ರಕಲೆಯಿಂದ ಸಂಗ್ರಹಗೊಂಡಿರುವ 20 ಮಿಲಿಯನ್‍ಗೂ ಹೆಚ್ಚು ಡಾಲರ್‍ಗಳು ಸಮಾಜ ಸೇವೆಗೆ ಬಳಕೆಯಾಗಿದೆ) .
ಸ್ಪೀಡ್ ಪೇಂಟಿಂಗ್ ಮತ್ತು ಫೈನ್ ಆಟ್ರ್ಸ್: ಈಗ ನನಗೆ ಹೆಚ್ಚು ಪ್ರಮಾಣದಲ್ಲಿ ಸ್ಪೀಡ್ ಪೇಂಟಿಂಗ್ ಆಫರ್ ಬರುತ್ತಿದೆ. ಎಷ್ಟೇಂದರೆ, ನನ್ನ ಫೈನ್ ಆಟ್ರ್ಸ್ ಕುರಿತು ಗಮನಕೊಡಲಾಗದಷ್ಟು. ಈಗಾಗಲೇ 26 ದೇಶ ಸುತ್ತಿದ್ದೇನೆ. ಸ್ಟೇಜ್‍ನಲ್ಲಿ ನಿಂತು ವೇಗವಾಗಿ ಮಾಡುವ ಸ್ಪೀಡ್ ಪೇಂಟಿಂಗ್ ಮತ್ತು ಮನೆಯಲ್ಲಿ ಕುಳಿತು ಸಾವಧಾನವಾಗಿ ರಚಿಸುವ ಫೈನ್ ಆಟ್ರ್ಸ್ ಅನ್ನು ಬ್ಯಾಲೆನ್ಸ್ ಮಾಡುವುದು ನನ್ನ ಮುಂದಿರುವ ಸವಾಲಾಗಿದೆ. ಇದಕ್ಕಾಗಿ ಎಷ್ಟೋ ಸ್ಪೀಡ್ ಪೇಂಟಿಂಗ್ ಶೋಗಳಿಗೆ ಒಪ್ಪಿಗೆ ನೀಡದೆ ಸಮತೋಲನ ಕಾಯ್ದುಕೊಳ್ಳುತ್ತಿದ್ದೇನೆ.

[caption id="attachment_2680" align="alignleft" width="300"] Image Copyrights: Villas Nayak[/caption]

ವೃತ್ತಿ ಮತ್ತು ಪ್ರವೃತ್ತಿ ಜೊತೆಜೊತೆಗೆ
ಕರಿಯರ್ ಜೊತೆ ಹವ್ಯಾಸವನ್ನೂ ಜೊತೆಜೊತೆಯಾಗಿ ನಿಭಾಯಿಸುವವರು ಸಾಕಷ್ಟು ಜನರು ಇದ್ದಾರೆ. ನಾನು ಎಂಎನ್‍ಸಿಯಲ್ಲಿದ್ದಾಗ ಇವೆರಡನ್ನು ಜೊತೆಜೊತೆಯಾಗಿಯೇ ಮಾಡಿದ್ದೆ. ಆದರೆ, ಇದರ ಒಂದು ಅವಗುಣ ಎಂದರೆ ನಮಗೆ ಹವ್ಯಾಸಕ್ಕಾಗಿ ಸಿಗುವ ಸಮಯ ತೀರ ಅತ್ಯಲ್ಪ. ನಿಮ್ಮ ಹವ್ಯಾಸವೇ ಪೂರ್ತಿ ಕರಿಯರ್ ಆದರೆ ನಿಮಗೆ ವರ್ಷದ 345 ದಿನವೂ ದೊರಕುತ್ತದೆ. ನಿಮ್ಮ ಕನಸನ್ನು ಬೇಗ ಈಡೇರಿಸಿಕೊಳ್ಳಬಹುದು.


[caption id="attachment_2681" align="alignright" width="205"] Image Copyrights: Villas Nayak[/caption]

ಕನಸನ್ನು ಚೇಸ್ ಮಾಡಿ
ನೀವು ನಿಮ್ಮ ಕನಸನ್ನು ಫಾಲೊ ಮಾಡಿ. ನಿಮ್ಮ ಕನಸನ್ನು ಸರಿಯಾಗಿ ಹಿಂಬಾಲಿಸಿ. ಇದಕ್ಕೆ ಸರಿಯಾಗಿ ಪ್ಲಾನ್ ಮಾಡಿ, ಕಷ್ಟಪಟ್ಟು ದುಡಿದರೆ ನಂತರ ಹಣ, ಫೇಮ್ ಎಲ್ಲವೂ ನಿಮ್ಮನ್ನು ಫಾಲೊ ಮಾಡುತ್ತೆ.

ಎಂಎನ್‍ಸಿಯಿಂದ ಕಲಿತ ಪಾಠ
ಕಾಪೆರ್Çರೇಟ್ ಜಗತ್ತಿನಲ್ಲಿ ನಾನು ಕಲಿತ ಪಾಠಗಳು ನನ್ನ ಕಲಾ ಕರಿಯರ್‍ಗೆ ಸಾಕಷ್ಟು ನೆರವಾಗಿದೆ. ನನ್ನ ಹಳೆಯ ಸ್ನೇಹಿತರು ಟೀವಿ ಸಂದರ್ಶನಗಳಲ್ಲಿ ಮಾತನಾಡುವುದನ್ನು ನೋಡುವಾಗ `ನಾವು ನೋಡಿದ ಹಳೆಯ ವಿಲಾಸ್ ಇವನೇನಾ?' ಎಂದು ಅಚ್ಚರಿಗೊಳ್ಳುತ್ತಾರೆ. ಜನರೊಂದಿಗೆ ಹೇಗೆ ಸಂವಹನ ನಡೆಸಬೇಕೆಂದು, ಸ್ಟೇಜ್‍ನಲ್ಲಿ ಹೇಗೆ ಮಾತನಾಡಬೇಕೆಂಬ ಕೌಶಲ ನನ್ನಲ್ಲಿ ಬಹಳಷ್ಟು ಕಡಿಮೆ ಇತ್ತು. ಫೇಸ್ ಟು ಫೇಸ್ ಕಮ್ಯುನಿಕೇಷನ್, ಇಮೇಲ್ ಕಮ್ಯುನಿಕೇಷನ್, ಸ್ಟೇಜ್ ಪ್ರಸಂಟೇಷನ್ ಇತ್ಯಾದಿಗಳನ್ನು ಕಾಪೆರ್Çರೇಟ್ ಜಗತ್ತು ನನಗೆ ಕಲಿಸಿಕೊಟ್ಟಿದೆ. ಅಲ್ಲಿ ಕಲಿತ ಪಾಠಗಳು ನನಗೆ ದೇಶ ವಿದೇಶಗಳಿಂದ ಬೇರೆ ಬೇರೆ ಸಂಘಟಕರಿಂದ ಆಫರ್ ಬಂದಾಗ, ಕೋ ಆರ್ಡಿನೇಟ್ ಮಾಡಲು, ಚಾರಿಟಿ ಶೋಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸಲು, ಆಫರ್‍ಗಳ ಕುರಿತು ನೆಗೋಸಿಯೇಷನ್ ಮಾಡಲು ಸಾಕಷ್ಟು ನೆರವಾಗುತ್ತಿದೆ.
ಸ್ಪೀಡ್ ಪೇಂಟಿಂಗ್ ಹಿಂದಿನ ಪರಿಶ್ರಮ
ಕೆಲವೊಂದು ರಿಯಾಲಿಟಿ ಶೋನಲ್ಲಿ ನಾನು ಕೆಲವೇ ನಿಮಿಷದಲ್ಲಿ ಮಾಡುವ ಪೇಟಿಂಗ್ ಹಿಂದೆ ಸಾಕಷ್ಟು ಪ್ರ್ಯಾಕ್ಟೀಸ್ ಇರುತ್ತದೆ. ಸ್ಟೇಜಲ್ಲಿ ಎಷ್ಟು ದೊಡ್ಡ ಕ್ಯಾನ್ವಸ್‍ನಲ್ಲಿ ಪೇಂಟಿಂಗ್ ಮಾಡುತ್ತೇನೋ ಅದೇ ರೀತಿ ಮನೆಯಲ್ಲಿ ಕುಳಿತು 50-60 ಕ್ಯಾನ್ವಸ್‍ನಲ್ಲಿ ತಪ್ಪುಗಳನ್ನು ಕಂಡುಹುಡುಕುತ್ತ, ಮತ್ತೆ ಮತ್ತೆ ಪೇಂಟಿಂಗ್ ರಚಿಸಬೇಕಾಗುತ್ತದೆ. ಇಷ್ಟೆಲ್ಲ ಪ್ರಯತ್ನ ಪಟ್ಟರೂ ಸ್ಟೇಜ್‍ನಲ್ಲಿ ಅದೇ ರೀತಿ ಪೇಂಟಿಂಗ್ ಮೂಡಿ ಬರುತ್ತೇ ಎಂದು ಹೇಳಲಾಗುವುದಿಲ್ಲ.



[caption id="attachment_2682" align="alignleft" width="300"] Image Copyrights: Villas Nayak[/caption]

ಸೋಷಿಯಲ್ ಮೀಡಿಯಾದ ಮಿತವಾದ ಬಳಕೆ
ಈಗ ಅವಶ್ಯಕತೆಗಿಂತ ಹೆಚ್ಚು ವಾಟ್ಸ್‍ಆ್ಯಪ್, ಫೇಸ್‍ಬುಕ್, ಟೀವಿ, ಯೂಟ್ಯೂಬ್ ಇತ್ಯಾದಿಗಳ ಲಭ್ಯತೆ ಇದೆ. ಇವುಗಳನ್ನು ಎಷ್ಟು ಬಳಕೆ ಮಾಡಬೇಕೆಂಬ ಅರಿವು ಎಲ್ಲರಲ್ಲಿಯೂ ಇರಬೇಕು. ಅವಶ್ಯಕತೆ ಇಲ್ಲದೆ ಇದ್ದಾಗ ಇವುಗಳನ್ನು ಸ್ವಿಚ್ ಆಫ್ ಮಾಡಿ. ಯಾವಾಗ ನಾವು ಇವುಗಳೊಂದಿಗೆ ಡಿಸ್‍ಕನೆಕ್ಟ್ ಆಗಿ ನಮ್ಮ ಜೊತೆ ಕನೆಕ್ಟ್ ಆಗ್ತಿವೋ ಆಗ ನಮಗೆ ನಮ್ಮಲ್ಲಿರುವ ಸ್ಟ್ರೆಂಥ್ ಏನು, ನಮ್ಮಲ್ಲಿರುವ ಸಕಾರಾತ್ಮಕ ಶಕ್ತಿಗಳೇನು, ನಮ್ಮ ದೌರ್ಬಲ್ಯ ಏನು ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಇಷ್ಟವಿಲ್ಲದ ಕ್ಷೇತ್ರದಲ್ಲಿಯೂ ಆಸಕ್ತಿ
ಕೆಲವರು ಅನಿವಾರ್ಯವಾಗಿ ಆಸಕ್ತಿ ಇಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಂತಹ ಸನ್ನಿವೇಶದಲ್ಲಿ ಎಷ್ಟು ಸಾಧ್ಯವೋ ಅಷ್ಟು ಆಸಕ್ತಿ ಬೆಳೆಸಿಕೊಳ್ಳಿ. ಇನ್ವಾಲ್ ಆಗಿ ಕೆಲಸ ಮಾಡಿ. ನಿಮ್ಮಲ್ಲಿ ಹಾಡುವುದು, ಕ್ರಿಕೆಟ್ ಆಡುವುದು, ನಾಟಕ, ಚಿತ್ರಕಲೆ, ಕರಕುಶಲತೆ ಇತ್ಯಾದಿ ವಿಶೇಷ ಪ್ರತಿಭೆ ಇದ್ದರೆ, ಸಮಯ ಸಿಕ್ಕಾಗಲೆಲ್ಲ ಇವುಗಳಲ್ಲಿ ತೊಡಗಿಸಿಕೊಳ್ಳಿ. ಸಂತೋಷ ಸಿಗುತ್ತೆ.

ಪ್ರತಿಭಾನ್ವಿತರಿಗೆ ಟಿಪ್ಸ್

  1.  ತುಂಬಾ ಜನರು ತಮ್ಮಲ್ಲಿರುವ ಪ್ರತಿಭೆ ಮತ್ತು ಆರ್ಥಿಕ ತೊಂದರೆಗಳ ಕುರಿತು ನನ್ನಲ್ಲಿ ಹೇಳುತ್ತಾರೆ. ಕೆಲಸ ಬಿಡುವುದಕ್ಕೆ ಆಗೋಲ್ಲ ಅಂತಾರೆ. ನನ್ನಲ್ಲೂ ಆರ್ಥಿಕ ತೊಂದರೆ ಇತ್ತು. ಅಪ್ಪನ ಪುಟ್ಟ ಅಂಗಡಿಯಲ್ಲಿ ಕೆಲಸ ಮಾಡುತ್ತ, ಚಿತ್ರಕಲೆ ಮಾಡುತ್ತ, ಓದುತ್ತ ಬೆಳೆದವನು ನಾನು. ನಿಮ್ಮಲ್ಲಿ ಎಷ್ಟು ಸಮಯವಿದೆ ಅಷ್ಟು ಸಮಯವನ್ನು ಪ್ರತಿಭೆಗಾಗಿ ಮೀಸಲಿರಿಸಿ, ನಿಮ್ಮ ಖುಷಿಗಾಗಿ ಪ್ರತಿಭೆಯನ್ನು ಕಂಟಿನ್ಯೂ ಮಾಡಿ.

  2.  ಯಾವಾಗಲೂ ರಿಸ್ಕ್ ತೆಗೆದುಕೊಳ್ಳಬೇಕು ಎಂಬ ಕಾರಣದಿಂದ ರಿಸ್ಕ್ ತೆಗೆದುಕೊಳ್ಳಬೇಡಿ. ಲೆಕ್ಕಚಾರದ ರಿಸ್ಕ್ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ. ನಾನು ತುಂಬಾ ಯೋಚಿಸಿ, ಅಳೆದುತೂಗಿ ತೆಗೆದುಕೊಂಡಿರುವ ರಿಸ್ಕ್ ಇದಾಗಿದೆ.

  3.  ಪ್ಲಾನ್ ಎ ಮತ್ತು ಪ್ಲಾನ್ ಬಿ ಇರಲಿ. ಎಲ್ಲಾದರೂ ನಾನು ಚಿತ್ರಕಲೆಯಲ್ಲಿ ಯಶಸ್ವಿಯಾಗದೆ ಇದ್ದರೆ ಮತ್ತೆ ಕಾಪೆರ್Çರೇಟ್ ಜಗತ್ತಿಗೆ ಮರಳುವ ತೀರ್ಮಾನ ಮಾಡಿಯೇ ಕೆಲಸ ಬಿಟ್ಟಿದ್ದೆ. ಎಲ್ಲಾದರೂ ನಿಮ್ಮ ಮೊದಲ ಪ್ಲಾನ್ ಯಶಸ್ವಿಯಾಗದೆ ಇದ್ದರೆ ಮತ್ತೊಂದು ಪ್ಲಾನ್‍ಗೆ ಪ್ರವೇಶಿಸಿ.

  4.  ಕಲೆಗೆ ಖಚಿತ ವೇತನ ಇರುವುದಿಲ್ಲ. ಹೀಗಾಗಿ, ಕೆಲಸ ಬಿಡುವ ಮೊದಲು ಕನಿಷ್ಠ ಇಂತಿಷ್ಟು ದುಡಿಯಬಲ್ಲೆ ಎಂಬ ಭರವಸೆ ಹುಟ್ಟಿದ ನಂತರವೇ ತೀರ್ಮಾನ ಕೈಗೊಳ್ಳಿರಿ.

  5.  ಸರಿಯಾಗಿ ಹೋಂವರ್ಕ್ ಮಾಡಿ. ನಿಖರವಾದ ಪ್ಲಾನ್ ಮಾಡಿ. ತಕ್ಷಣಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

ವಿಲಾಸ್ ನಾಯಕ್ ವೆಬ್ ಲಿಂಕ್

All Image Copyrights: Villas Nayak

Published in Vijayakarnataka Mini

Monday, 13 February 2017

ನನ್ ಫಸ್ಟ್ ಲವ್ ಸ್ಟೋರಿ 5ನೇ ಕ್ಲಾಸಲ್ಲಿ ಶುರುವಾಯ್ತು!

ನನ್ ಫಸ್ಟ್ ಲವ್ ಸ್ಟೋರಿ 5ನೇ ಕ್ಲಾಸಲ್ಲಿ ಶುರುವಾಯ್ತು!


(2012ರಲ್ಲಿ ಒನ್ ಇಂಡಿಯಾಕ್ಕಾಗಿ ನೆನಪಿಸಿಕೊಂಡು ಬರೆದ ಸತ್ಯ ಘಟನೆ :-) )

ಹಲವು ವರ್ಷಗಳ ನಂತ್ರ ಅನಿರೀಕ್ಷಿತವಾಗಿ ರಿಲೇಷನ್ ಹುಡುಗಿ ಮಮತಾ ಎದುರಿಗೆ ಸಿಕ್ಕಿದಾಗ ಸುಮ್ಮಗೆ ಕೇಳಿದ್ದೆ.

ಲಾವಣ್ಯ ಹೇಗಿದ್ದಾಳೆ? ಅಂತ.


ಅವ್ಳಿಗೆ ಎಷ್ಟು ಅಚ್ಚರಿಯಾಯಿತೆಂದರೆ... "ಅಯ್ಯೋ.. ಅಣ್ಣಾ, ನೀನಿನ್ನು ಅವಳ್ನ ಮರೆತಿಲ್ವಾ" ಅಂತ ಹೇಳಿದ್ಮೇಳೆ "ಅವ್ಳಿಗೆ ಕಳೆದ ವರ್ಷ ಮದುವೆಯಾಯ್ತು. ಗಂಡ ಮಿಲಿಟಿರಿಯಲ್ಲಿದ್ದಾನೆ" ಅನ್ನೋ ಬಾಂಬ್ ಕೂಡ ಹಾಕಿದಳು.

ಆದ್ರೆ ಆ ಬಾಂಬ್ ನನ್ನೆದೆಯಲ್ಲಿ ಸ್ಪೋಟಿಸಲಿಲ್ಲ.

ಲಾವಣ್ಯ ಅಂದ್ರೆ ನನ್ನ ಮೊದಲ ಲವ್.

ಐದನೇ ಕ್ಲಾಸ್‌ನಲ್ಲಿ ನನಗೆ ಗೊತ್ತಿಲ್ಲದೇ ಸುರುವಾದ ಡವ್.

ಆಗ ಪ್ರೀತಿ ಪ್ರೇಮ ಪ್ರಣಯ ಅಂದ್ರೆ ಏನಂತ ಸರಿಯಾಗಿ ಗೊತ್ತಿರದ ವಯಸ್ಸು.

ಆದ್ರೂ ನಮ್ಮ ಲವ್ ಮದುವೆಯವರೆಗೂ ಬಂದಿತ್ತು!

ಮೂಲ ಊರು ಮಡಿಕೇರಿಯಾದರೂ ನಾನು ಹುಟ್ಟಿದ್ಮೆಲೆ ನಮ್ ಫ್ಯಾಮಿಲಿ ನೆಲೆ ನಿಂತದ್ದು ಪುತ್ತೂರಲ್ಲಿ. ಎಷ್ಟೋ ವರ್ಷಗಳಿಗೊಮ್ಮೆ ಅಜ್ಜಿ ಮನೆ ನೆಪದಲ್ಲಿ ಮಡಿಕೇರಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಯಾಕೋ ಗೊತ್ತಿಲ್ಲ. ಮಡಿಕೇರಿಯಲ್ಲಿ ಅತ್ತೆ ಮನೆಗೆ ಹೋಗುವುದೆಂದರೆ ಭಾರಿ ಖುಷಿ. ಅಲ್ಲಿ ಮನು ಮಮತಾ(ಮಾಮನ ಮಕ್ಕಳು) ರೊಂದಿಗೆ ಆಟವಾಡುವ ಖುಷಿನೋ ಗೊತ್ತಿಲ್ಲ.

ನಾನು ಸಣ್ಣವನಿದ್ದಾಗ ಅಂದ್ರೆ 5ನೇ ಕ್ಲಾಸ್‌ನಲ್ಲಿ ಮಡಿಕೇರಿಯ ಗೋಣಿಕೊಪ್ಪಲು ಸಮೀಪದ ಅಮ್ಮತಿ ಎಂಬಲ್ಲಿಗೆ ಹೋಗಿದ್ದೆ. ಅದು ನನ್ನ ಅತ್ತೆಯ ಮನೆ. ಅಂದ್ರೆ ಅಪ್ಪನ ತಂಗಿ ಮನೆ.

ಅಲ್ಲಿನ ಗದ್ದೆ, ಕುಬ್ಜ ಕಾಫಿ ಗಿಡಗಳು, ಒಂದು ಬೃಹತ್ ಮರದಲ್ಲಿ ಹತ್ತಿಪ್ಪತ್ತು ದೊಡ್ಡ ಜೇನುಗೂಡುಗಳು.

...ಹೀಗೆ ಅಜ್ಜಿ ಮನೆಯ ನೆನಪು ಜೇನಿಗಿಂತ ಹೆಚ್ಚು ಸಿಹಿ. ನಾವು ಮಾಮನ ಪಕ್ಕದ ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೇವು.

ಆ ಮನೆಗೆ ಲಾವಣ್ಯ ಎಂಬ ಆರನೇ ಕ್ಲಾಸ್‌ನ ಹುಡುಗಿ ಕೂಡ ನಮ್ಮ ತರಹನೇ ನೆಂಟರ ಮನೆಗೆಂದು ಬಂದಿದ್ದಳು. ಮೊದಲ ದಿನವೇ ನನಗವಳು ಇಷ್ಟ(?)ವಾಗಿದ್ದಳು. ಮೊದ್ಲಿಗೆ ಒಂದೆರಡು ದಿನ ಸುಮ್ಮನೆ ಸೈಲೆಂಟಾಗಿ ಬಿಟ್ಟಿದಳು. ಮೊದಲು ಅವಳು ಹೇಗಿದ್ದಳು ಅಂತ ವಿವರಿಸಬೇಕು. ಅವರ ಮನೆಯವರು ಕೊಂಚ ಶ್ರೀಮಂತರಾಗಿರಬೇಕು. ತುಂಬಾ ಮಾಡರ್ನ್‌ ಆಗಿದ್ದಳು. ಪುಟ್ಟ ಜೀನ್ಸ್ ಚಡ್ಡಿ, ಕಿವಿಯಲ್ಲಿ ರಿಂಗ್, ವೈಟ್ ಶಾರ್ಟ್ ಶರ್ಟ್, ಬಿಳಿ ಬಣ್ಣ, ನನಗಿಂತ ಉದ್ದವಾಗಿದ್ದ ಲಾವಣ್ಯ ಮುದ್ದಾಗಿ ಕಾಣುತ್ತಿದ್ದಳು.

ಕ್ಷಮಿಸಿ ಹೆಚ್ಚು ನೆನಪಿಲ್ಲ! ಒಂದೆರಡು ದಿನಗಳಲ್ಲಿ ಊರಿಂದ ಬಂದ ನನ್ನೊಂದಿಗೆ ತುಂಬಾ ಆತ್ಮೀಯಳಾಗಿಬಿಟ್ಟಳು. ಎಷ್ಟೆಂದರೆ ಉಳಿದ ಮಕ್ಕಳಿಗೆ ಅಸೂಯೆಯಾಗುವಷ್ಟು. ಆ ಗದ್ದೆ ಬದುಗಳಲ್ಲಿ, ರಸ್ತೆಯ ಬದಿಯಲ್ಲಿ ಸುಮ್ಮಗೆ ನಡೆಯುತ್ತಿದ್ದೇವು. ಆ ನಾಲ್ಕು ದಿನದಲ್ಲಿ ಎಷ್ಟು ಸುತ್ತಾಡಿದ್ದೇವೆ, ಎಷ್ಟು ಮಾತನಾಡಿದ್ದೇವೆ ಅಂದ್ರೆ ಹೇಳೋಕ್ಕಾಗಲ್ಲ.

ನಿಮಗೀಗ ಕೋಪ ಬಂದಿರಬಹುದು. ಬಾಲ್ಯದ ಮಕ್ಕಳ ಆಟವನ್ನು ಲವ್‌ ಅನ್ನೋ ಹೆಸರಿನಲ್ಲಿ ಕರೆದದ್ದು ಉದ್ಧಟ್ಟತನದ ಪರಮಾವಧಿ ಅಂತ ಕರೀಬೇಡಿ. ಕತೆ ಮುಗಿದಿಲ್ಲ.

ಅದೊಂದು ದಿನ. ರಸ್ತೆ, ಗದ್ದೆ ಸುತ್ತಾಡಿಕೊಂಡು ಬಂದು ಸುಸ್ತಾಗಿ ಮನೆಯ ಜಗಲಿಯಲ್ಲಿ ಕುಳಿತುಕೊಂಡೆವು. ಅತ್ತೆಮಾವ ಎಲ್ಲೋ ಹೋಗಿದ್ದರು. ಅಲ್ಲಿ ನಾವಿಬ್ಬರೇ ಇದ್ದೇವು!

ಆ ಸಮಯದಲ್ಲಿ ನಾವು ಮಾತನಾಡಿದ್ದು ನಮ್ ಮದುವೆಯ ಬಗ್ಗೆ..!

ನೀನು ಯಾವಾಗ ಮನೆಗೆ ಹೋಗೋದು. ನಂಗೆ ಬೇಜಾರಾಗ್ತಿದೆ ಅಂತ ಲಾವಣ್ಯ ಅಳು ಮುಖ ಮಾಡಿಕೊಂಡ್ಳು. ಆ ಸಮಯದಲ್ಲಿ ನಮ್ ಮನಸ್ಸಿಗೆ ಹೊಳೆದದ್ದು ಮದುವೆ. ಸರಿ ಮದುವೆ ಕುರಿತು ತುಂಬಾ ಹೊತ್ತು ಮಾತನಾಡಿದೆವು. ಕೊನೆವರೆಗೂ ಜೊತೆಯಾಗಿರೋಣ. ಮದುವೆಯಾದ್ಮೆಳೆ ಜಗಳವಾಡಬಾರ್ದು, ಯಾವ ಕಲ್ಯಾಣಮಂಟಪದಲ್ಲಿ ಮದುವೆಯಾಗೋದು... ಹೀಗೆ ಒಂದಿಷ್ಟು ಕನಸು ಕಾಣುತ್ತ ಮಾತನಾಡಿದ್ದೇವು.

ಆಮೇಲೆ ಏನೋ ಜ್ಞಾನೋದಯವಾದಂತೆ ಹೇ ಬೇಡ ಇಷ್ಟು ಬೇಗ ಮದುವೆಯಾಗೋದು. ನಾವು ಚೆನ್ನಾಗಿ ಓದಿ, ಒಳ್ಳೆ ಕೆಲಸಕ್ಕೆ ಸೇರಿ, ದೊಡ್ಡ ಜನವಾಗಿ ಆಮೇಲೆ ಮದುವೆಯಾಗೋಣ ಅಂತ ಮಾತನಾಡಿಕೊಂಡೆವು. ಜಗಲಿಯಲ್ಲಿ ಕುಳಿತು ಮಾತನಾಡಿದ್ದು ಸಾಕೆನಿಸಿ ಮತ್ತೆ ಆಟವಾಡಲು ಹೋದೆವು..

.....ಸಂಜೆ ಮನೆಗೆ ಮರಳಿದಾಗ ಅದೇ ಜಗಲಿಯಲ್ಲಿ ಮಾವ, ಅತ್ತೆ, ಅಜ್ಜಿ, ಅಜ್ಜ ಎಲ್ಲ ಕೂತು ಜೋರಾಗಿ ನಗುತ್ತ ಮಾತನಾಡುತ್ತಿದ್ದರು.

ಆಮೇಲೆ ನಮಗೆ ಗೊತ್ತಾದ ವಿಷ್ಯವೆಂದ್ರೆ,

ನಾವಿಬ್ಬರು ಮಧ್ಯಾಹ್ನ ಮದುವೆ ಮಾತುಕತೆಯಾಡುವಾಗ ಒಳಗೆ ಮಲಗಿಕೊಂಡಿದ್ದ ಅಜ್ಜಿ ಎಲ್ಲಾ ಕೇಳಿಸಿಕೊಂಡಿದ್ರಂತೆ. ಅದನ್ನು ಎಲ್ಲರಿಗೂ ಹೇಳಿ ಬೊಚ್ಚು ಬಾಯಿಯಿಂದ ನಗುತ್ತಿದ್ದರು. ಅವ್ರ ಹಲ್ಲು ಉದುರಿಸಬೇಕೆಂದು ಆಗ ಅನಿಸಿತ್ತೋ ಇಲ್ವೋ ಅನ್ನೋದು ಈಗ ನೆನಪಿಲ್ಲ!

ನನ್ನನ್ನು ಹತ್ತಿರ ಕೂರಿಸಿಕೊಂಡ ಮಾಮಿ "ಇವಳನ್ನು ಮದುವೆಯಾಗ್ತಿಯಾ? ಅಪ್ಪನಿಗೆ ಫೋನ್‌ ಮಾಡಿ ಹೇಳ್ಬೇಕಾ? ಅಂತ ಅತ್ತೆ ತಮಾಷೆ ಮಾಡತೊಡಗಿದಾಗ ಅವಳು ಅತ್ತಳು. ಯಾಕೋ ಗೊತ್ತಿಲ್ಲ ಅವ್ಳು ಅಳೋದನ್ನು ನೋಡಿ ನಂಗೂ ಅಳು ಬಂದು ಮನೆಯೊಳಗೆ ಓಡಿದೆ.

Monday, 30 January 2017

ವರ್ಡ್ ಪ್ರೆಸ್: ಸ್ವಂತ ವೆಬ್ ಸೈಟ್ ನೀವೇ ನಿರ್ಮಿಸಿಕೊಳ್ಳಿ

ವರ್ಡ್ ಪ್ರೆಸ್: ಸ್ವಂತ ವೆಬ್ ಸೈಟ್ ನೀವೇ ನಿರ್ಮಿಸಿಕೊಳ್ಳಿ

ನನಗೊಂದು ಕನಸಿತ್ತು. ನನ್ನ ವೈಯಕ್ತಿಕ ಹೆಸರಿನಲ್ಲೊಂದು ವೆಬ್ ಸೈಟ್ ಇರಬೇಕು. ಕೆಲವು ವರ್ಷಗಳ ಹಿಂದೆ ಪ್ರವೀಣ್ ಚಂದ್ರ ಡಾಟ್ ಕಾಮ್ ಎಂದು ಡೊಮೈನ್ ಖರೀದಿಸಿದ್ದೆ. ವೆಬ್ ಬಿಲ್ಡರ್ ಅನ್ನೂ ಖರೀದಿಸಿದ್ದೆ. ತಾತ್ಕಾಲಿಕ ಅವಧಿಯ ಹೋಸ್ಟಿಂಗ್ ಅನ್ನೂ ಖರೀದಿಸಿದ್ದೆ. ಅಲ್ಲಿ ಬ್ಲಾಗಿಂಗ್ ರೀತಿಯ ವೆಬ್ ಸೈಟ್ ರೂಪಿಸಲು ಪ್ರಯತ್ನಿಸದರೆ ನನ್ನಿಂದ ಸಾಧ್ಯವಾಗಲೇ ಇಲ್ಲ. ಸರಕಾರಿ ವೆಬ್ ಸೈಟ್ ಗಳಂತೆ ಮುಖ ಪುಟ ರಚಿಸಿ ಲಿಂಕ್ ನೀಡುವುದು ಮಾತ್ರ ನನ್ನಿಂದ ಸಾಧ್ಯವಾಯಿತು.



ಒಂದೆರಡು ತಿಂಗಳು ಕಷ್ಟಪಟ್ಟು ಆ ಆಸೆಯನ್ನು ಅಲ್ಲಿಗೇ ಕೈ ಬಿಟ್ಟೆ. ಖರ್ಚಾದ ಕೆಲವು ಸಾವಿರ ನನ್ನನ್ನು ಅಣಕಿಸುತ್ತಿತ್ತು.

ಆದರೂ ವರ್ಷಕ್ಕೆ ಒಂದೆರಡು ಸಾವಿರ ವಿನಿಯೋಗಿಸಿ ವೆಬ್ ನಿರ್ಮಿಸಬಹುದೆಂಬ ಇತ್ತೀಚಿನ ಸಾಧ್ಯತೆ ನನ್ನನ್ನು ಸುಮ್ಮನಿರಲು ಬಿಡಲಿಲ್ಲ. ಏನಾದರೂ ಆಗಲಿ, ಸ್ವಂತ ವೆಬ್ ಸೈಟ್ ನಿರ್ಮಿಸಬೇಕೆಂದು ಎಚ್ಟಿಎಂಎಲ್, ಸಿಎಸ್ಎಸ್ ಇತ್ಯಾದಿ ಪುಸ್ತಕಗಳನ್ನು ಓದಿದೆ. ಆನ್ ಲೈನ್ ನಲ್ಲಿ ಪಿಡಿಎಫ್ಗಳನ್ನು ಡೌನ್ ಲೋಡ್ ಮಾಡಿಕೊಂಡೆ. ಜಿಯೊ ಬಂದ ಮೇಲೆ ವಿಡಿಯೋ ಟ್ಯಟೋರಿಯಲ್ ಗಳಿಗೂ ಸೇರಿದೆ. ಕೋಡಿಂಗ್ ಆರಂಭ ಅಂತ್ಯ ನೀಡುವುದನ್ನು ಕಂಡುಕೊಂಡೆ. ಆದರೂ, ಕೆಲಸದ ಒತ್ತಡಗಳಿಂದ ಪೂರ್ಣವಾಗಿ ಕಲಿಯಲು ಸಾಧ್ಯವಾಗಲಿಲ್ಲ. ಕೋಡಿಂಗ್ ಬರೆಯುವಾಗ ತಾಳ್ಮೆಯೂ ಕೈಕೊಡುತ್ತಿತ್ತು.

ಆದರೂ, ನನ್ನಲ್ಲೊಂದು ಸ್ವಂತ ವೆಬ್ ಸೈಟ್ ಇರಬೇಕಿತ್ತು ಹೀಗೊಂದು ಕನಸು ನನಗಿತ್ತು. ಆದರೆ, ವೆಬ್ ಸೈಟ್ ನಿರ್ಮಿಸುವವರಿಗೆ ಹತ್ತು ಸಾವಿರವಾದರೂ ಕೊಡುವ ಆಸಕ್ತಿ ನನ್ನಲ್ಲಿರಲಿಲ್ಲ. ಆ ವಿಷಯದಲ್ಲಿ ನನ್ನಲೊಬ್ಬ ಕಂಜೂಸ್ ಇದ್ದ. :-)

ರೆಸ್ಪಾನ್ಸಿವ್ ವೆಬ್ ಸೈಟ್ ನಿರ್ಮಿಸುವ ವಿಷಯದಲ್ಲಿ ಈಗ ನೆಟ್ ಜಗತ್ತಿನಲ್ಲಿ ಕ್ರಾಂತಿಯೇ ನಡೆಯುತ್ತಿದೆ ಎಂದುಕೊಂಡಿದ್ದೇನೆ. ಈಗ ಕೋಡಿಂಗ್ ಜ್ಞಾನ ಇಲ್ಲದವರೂ ತಮ್ಮದೊಂದು ಸ್ವಂತ ವೆಬ್ ತಾಣ ರೂಪಿಸಿಕೊಳ್ಳಬಹುದಾಗಿದೆ. ಅದರ ಪ್ರತಿಫಲವೇ http://praveenputtur.com

ವರ್ಡ್ ಪ್ರೆಸ್ ಮೂಲಕ ವೆಬ್ ಸೈಟ್ ರೂಪಿಸುವವರಿಗೆ ಸಾಕಷ್ಟು ಥೀಮ್ಸ್ ಮತ್ತು ಪ್ಲಗಿನ್ ಗಳು ಉಚಿತವಾಗಿ ದೊರಕುತ್ತವೆ.

ವರ್ಡ್ ಪ್ರೆಸ್ ನಲ್ಲಿ ಬ್ಲಾಗ್ ಹೊಂದಿದ್ದರೆ ಸ್ವಂತ ವೆಬ್ ಸೈಟ್ ರೂಪಿಸಿಕೊಳ್ಳುವುದು ಇನ್ನೂ ಸುಲಭ.

ನಿಮ್ಮ ಈಗಿರುವ ಬ್ಲಾಗ್ ಅನ್ನೇ ಅಪ್ ಗ್ರೇಡ್ ಮಾಡಿದರಾಯ್ತು. ಇದಕ್ಕೆ ವರ್ಡ್ ಪ್ರೆಸ್ ಕೆಲವು ಡಾಲರ್ ಕೇಳುತ್ತದೆ. ಇದನ್ನು ಖರೀದಿಸಲು ನಿಮ್ಮಲ್ಲಿ ಅಂತಾರಾಷ್ಟ್ರೀಯವಾಗಿ ವರ್ಕ್ ಆಗುವ ಡೆಬಿಟ್ ಕಾರ್ಡ್ ಇರಬೇಕು. ನನ್ನ ಕಾರ್ಡ್ ದೇಶಕ್ಕೆ ಸೀಮಿತವಾಗಿರುವ ಕಾರಣ ನನ್ನ ಆ ಪ್ರಯತ್ನ ವಿಫಲವಾಗಿತ್ತು. ಆದರೆ, ಈ ರೀತಿ ಅಪ್ ಗ್ರೇಡ್ ಮಾಡಿ ಬೇಸಿಕ್ ಪ್ಲಾನ್ ಖರೀದಿಸಿದರೆ ಸೌಲಭ್ಯಗಳು ಸೀಮಿತವಾಗಿರುತ್ತವೆ. ನಿಮಗೆ ಬೇಕಾದಂತೆ ವಿನ್ಯಾಸ ಮಾಡಿಕೊಳ್ಳುವುದು ಕಷ್ಟ. ಹೈ ಎಂಡ್ ಪ್ಲಾನ್ ಗೆ ಹೆಚ್ಚು ಡಾಲರ್ ಪಾವತಿಸಬೇಕು. ಹೀಗಾಗಿ ಈ ರೀತಿ ಅಪ್ ಗ್ರೇಡ್ ಮಾಡುವುದಕ್ಕೆ ನನ್ನ ಬೆಂಬಲವಿಲ್ಲ. ಸೀಮಿತ ಸೌಲಭ್ಯ ಸಾಕೆನಿಸಿದರೆ ಅಪ್ ಗ್ರೇಡ್ ಮಾಡಿಕೊಳ್ಳಿ J

ಸ್ವಂತವಾಗಿ ರೂಪಿಸಿ: ನಾನು ಮಾಡಿದಿಷ್ಟು. ಮೊದಲು ಡಿಜಿಕ್ಸ್ ಆನ್ ಲೈನ್ ಎಂಬ ತಾಣದಲ್ಲಿ ಡೊಮೈನ್ ಖರೀದಿಸಿದೆ. ಒಂದು ವರ್ಷದ ಹೋಸ್ಟಿಂಗ್ ಖರೀದಿಸಿದೆ. ಇವೆರಡಕ್ಕೆ ನನಗೆ ಖರ್ಚಾಗಿದ್ದು ಸುಮಾರು ಎರಡು ಮುಕ್ಕಾಲು ಸಾವಿರ. ಒನ್ ಕ್ಲಿಕ್ ವರ್ಡ್ ಪ್ರೆಸ್ ಇನ್ ಸ್ಟಾಲ್ ಸೌಲಭ್ಯ ಇರುವ ತಾಣದಿಂದಲೇ ಹೋಸ್ಟಿಂಗ್ ಖರೀದಿಸಿ. ಡಿಜಿಕ್ಸ್ ಆನ್ ಲೈನ್ ನಲ್ಲಿ ಖರೀದಿಸಿದ್ದರಿಂದ ನನಗೆ  ಒಂದು ವಿಶೇಷ ಲಾಭವಾಯಿತು.

ಈ ತಾಣದ ಹನೀಫ್ ಪುತ್ತೂರು ಎಂಬ ಎಂಬವರ ಪರಿಚಯ. ಇವರು ಅಬುದಾಬಿಯ ಖಲೀಫಾ ವಿವಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಪ್ರೋಗ್ರಾಮರ್ ಅನಾಲಿಸ್ಟ್. ವೆಬ್ ಜಗತ್ತಿಗೆ ತನ್ನದೇ ಆದ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರಿಂದ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡು ವೆಬ್ ಸೈಟ್ ನಿರ್ಮಿಸಿದೆ. ವೆಬ್ ಸೈಟ್ ನಿರ್ಮಿಸುವವರಿಗೆ ಇಂಟರ್ನೆಟ್ ಇಲ್ಲದೆಯೇ ವರ್ಡ್ ಪ್ರೆಸ್ ಕಲಿಸುವ ಟೂಲ್ ಒಂದನ್ನು ಇವರು ನಿರ್ಮಿಸಿದ್ದಾರೆ. ಇದರ ಬಗ್ಗೆ ಮುಂದೆ ಹೇಳುತ್ತೇನೆ.

ಹೋಸ್ಟಿಂಗ್, ಡೊಮೈನ್ ಖರೀದಿಸಿ ಒನ್ ಕ್ಲಿಕ್ ವರ್ಡ್ ಪ್ರೆಸ್ ಇನ್ ಸ್ಟಾಲ್ ಮಾಡಿದ ಬಳಿಕ ನಿಮಗೆ ವರ್ಡ್ ಪ್ರೆಸ್ ಬ್ಲಾಗ್ ತರಹದ್ದೇ ಲಾಗಿನ್ ವ್ಯವಸ್ಥೆ ದೊರಕುತ್ತದೆ. ಅಲ್ಲಿ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಕೊಟ್ಟು ಲಾಗಿನ್ ಆದರೆ ಆಯ್ತು.

ಅಲ್ಲಿ ನಿಮಗೆ ಇಷ್ಟವಾದ ಥೀಮ್ ಮತ್ತು ಪ್ಲಗಿನ್ ಜೋಡಿಸಿಕೊಂಡು ಸ್ವಂತ ವೆಬ್ ಸೈಟ್ ರಚಿಸಿಕೊಳ್ಳಬಹುದು.

  • ಆದಷ್ಟು ಹೆಚ್ಚು ಸ್ಟಾರ್ ರೇಟಿಂಗ್ ಇರುವ ಪ್ಲಗಿನ್ ಮತ್ತು ಥೀಮ್ ಪಡೆದುಕೊಳ್ಳಿ.

  • ಅವಶ್ಯಕತೆ ಇರುವಷ್ಟು ಪ್ಲಗಿನ್ ಅಥವಾ ಥೀಮ್ ಡೌನ್ ಲೋಡ್ ಮಾಡಿಕೊಳ್ಳಿ.

  • ಅನಾವಶ್ಯಕ ಪ್ಲಗಿನ್ ಅಥವಾ ಥೀಮ್ ಗಳನ್ನು ಡಿಲೀಟ್ ಮಾಡಿ.

  • ಇಲ್ಲವಾದರೆ ನಿಮ್ಮವೆಬ್ ಸೈಟ್ ಸ್ಪೀಡ್ ಕಡಿಮೆಯಾಗುತ್ತದೆ.

ವರ್ಡ್ ಪ್ರೆಸ್ ನಲ್ಲಿ ವೆಬ್ ಸೈಟ್ ರಚನೆ

  1. ವರ್ಡ್ ಪ್ರೆಸ್ ಗೆ ಲಾಗಿನ್ ಆಗಿ

  2. ಡ್ಯಾಷ್ ಬೋರ್ಡ್ ನಲ್ಲಿರುವ ಫೀಚರ್ ಗಳನ್ನೆಲ್ಲ ಅವಲೋಕಿಸಿ

  3. ಥೀಮ್ ವಿಭಾಗಕ್ಕೆ ಹೋಗಿ. ನಿಮಗೆ ಇಷ್ಟವಾದ ಒಂದು ಥೀಮ್ ಆಯ್ಕೆ ಮಾಡಿಕೊಂಡು ಇನ್ ಸ್ಟಾಲ್ ಮಾಡಿ ಆ್ಯಕ್ಟಿವೇಟ್ ಮಾಡಿ.

  4. ಪೇಜಸ್ ವಿಭಾಗಕ್ಕೆ ಹೋಗಿ ಪುಟಗಳನ್ನು ರಚಿಸಿ. ಅಂದರೆ, ಮುಖಪುಟ, ಸಂಪರ್ಕಿಸಿ, ಬ್ಲಾಗ್ ಇತ್ಯಾದಿ.

  5. ಮೆನು ವಿಭಾಗಕ್ಕೆ ಹೋಗಿ ಮೆನುಗಳನ್ನು ರಚಿಸಿ. ಪುಟಗಳನ್ನು ಮೆನುಗಳಿಗೆ ಜೋಡಿಸಿ.

  6. ಆ್ಯಡ್ ಪೋಸ್ಟ್ ವಿಭಾಗಕ್ಕೆ ಹೋಗಿ ಹೊಸ ಬರಹಗಳನ್ನು ಪೋಸ್ಟ್ ಮಾಡಬಹುದು.

  7. ಮೊದಲಿಗೆ ನಿಮ್ಮ ವೆಬ್ ಸೈಟಿಗೆ ಹೆಸರು ಮತ್ತು ಟ್ಯಾಗ್ ಲೈನ್ ನೀಡಿ. ಇದಕ್ಕಾಗಿ ಜನರಲ್ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ.

  8. ಹೀಗೆ ಅಲ್ಲಿರುವ ವಿವಿಧ ವಿಭಾಗಗಳಲ್ಲಿ ನಿಮಗೆ ಬೇಕಾದಂತೆ ಮಾರ್ಪಾಡು ಮಾಡಿ. ಗೊತ್ತಾಗದೆ ಇದ್ದರೆ ನನ್ನಲ್ಲಿ ಕೇಳಿ J

  9. ಬ್ಲಾಗ್ ಮಾಡಬಲ್ಲವರಿಗೆ ಇಲ್ಲಿ ಮಾಡಬೇಕಾದ ಪ್ರತಿಯೊಂದನ್ನು ಹೇಳಿಕೊಡಬೇಕಾದ ಅವಶ್ಯಕತೆ ಇಲ್ಲ. ಡ್ಯಾಷ್ ಬೋರ್ಡ್ ಪ್ರವೇಶಿಸಿ ಸೂಕ್ಷ್ಮವಾಗಿ ಅವಲೋಕಿಸಿ ಎಲ್ಲವನ್ನೂ ಕಲಿತುಕೊಳ್ಳಬಹುದು.

ಟಿಪ್ಪಣಿ

ಆರಂಭಿಕರಿಗೆ ಶೇರಿಂಗ್ ಹೋಸ್ಟಿಂಗ್ ಉತ್ತಮ. ಒಂದು ಸರ್ವರ್ ನಲ್ಲಿ ಹಲವು ವೆಬ್ ಸೈಟ್ ಗಳನ್ನು ಪಾರ್ಕ್ ಮಾಡಲಾಗಿರುತ್ತದೆ. ಇದರ ವೇಗ ಕೊಂಚ ಕಡಿಮೆ ಇರುತ್ತದೆ.

ಈ ಎಚ್ಚರಿಕೆಗಳನ್ನು ಗಮನಿಸಿ

  1. ಕೆಲವೊಂದು ಎರರ್ ಗಳು ಉಂಟಾದರೆ ಅದನ್ನು ಸರಿಪಡಿಸಲು ವೆಬ್ ಸೈಟ್ ತಂತ್ರಜ್ಞರೇ ಬೇಕು. ಇದಕ್ಕಾಗಿ ಪ್ರಯೋಗಗಳನ್ನು ಮಾಡುವಾಗ ಎಚ್ಚರವಿರಲಿ. ಹಲವು ಬಾರಿ ವೆಬ್ ಸೈಟ್ ಕ್ರಾಷ್ ಆಗಬಹುದು. ಇದನ್ನು ಸರಿಪಡಿಸಲು ಪರಿಣತರೇ ಬೇಕು.

  2. ಒಂದು ಲಾಗಿನ್ ಆದಾಗ ಒಂದು ಟ್ಯಾಬ್ ಮೂಲಕ ಮಾತ್ರ ಬಳಕೆ ಮಾಡುವುದು ಉತ್ತಮ. ಹಲವು ಟ್ಯಾಬ್ ಗಳಲ್ಲಿ ವೆಬ್ ಸೈಟ್ ಡ್ಯಾಷ್ ಬೋರ್ಡ್ ತೆರೆದಿಡುವುದು ಉತ್ತಮವಲ್ಲ.

ಡೊಮೈನ್ ಅಥವಾ ಹೋಸ್ಟಿಂಗ್ ಖರೀದಿಸದೆ ಲೋಕಲ್ ಹೋಸ್ಟ್ ನಲ್ಲಿ ವೆಬ್ ಸೈಟ್ ನಿರ್ಮಾಣ ಕಲಿಯುವುದು ಹೇಗೆ?
ಈ ರೀತಿ ಖರೀದಿಸಿ ಆಮೇಲೆ ಕಲಿಯುವುದಕ್ಕಿಂತ ಮೊದಲೇ ಕಲಿತು ಆಮೇಲೆ ಹೋಸ್ಟಿಂಗ್ ಡೊಮೈನ್ ಖರೀದಿಸುವುದು ಉತ್ತಮ.

ಸ್ನೇಹಿತರಾದ ಹನೀಫ್ ಪುತ್ತೂರು ಅವರು ಗಿತ್ ಹಬ್ ತಾಣದಲ್ಲಿ ಇದಕ್ಕೊಂದು ಉಚಿತ ಟೂಲ್ ನೀಡಿದ್ದಾರೆ. ಅದರ ಹೆಸರು ಪೋರ್ಟೆಬಲ್ ವರ್ಡ್ ಪ್ರೆಸ್. ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಇದನ್ನು ನೀವು ಪೆನ್ ಡ್ರೈವ್ ನಲ್ಲಿಯೂ ಇಟ್ಟುಕೊಳ್ಳಬಹುದು. ಇಂಟರ್ ನೆಟ್ ಇಲ್ಲದೆ ಬಳಕೆ ಮಾಡಬಹುದು. ಇದರಲ್ಲಿ ನೀವು ಸಾಕಷ್ಟು ಪ್ರಯೋಗ ಮಾಡಿ, ಸುಂದರವಾದ ವೆಬ್ ಸೈಟ್ ನಿರ್ಮಿಸಿದ ಬಳಿಕ ಹೋಸ್ಟಿಂಗ್ ಖರೀದಿಸಬಹುದು. ಹೋಸ್ಟಿಂಗ್ ಡೊಮೈನ್ ಖರೀದಿಸಿದ ಬಳಿಕ ನಿಮ್ಮ ವರ್ಡ್ ಪ್ರೆಸ್ ವೆಬ್ ಸೈಟ್ ಗೆ ಇದನ್ನು ಅಪ್ ಲೋಡ್ ಮಾಡಬಹುದು. ಹೀಗೆ ಮಾಡುವುದರಿಂದ  ಹೋಸ್ಟಿಂಗ್ ಸರ್ವರ್ನಲ್ಲಿ ಪ್ರಯೋಗ ಮಾಡುತ್ತ ಎರರ್, ಕ್ರ್ಯಾಷ್ ಇತ್ಯಾದಿ ತೊಂದರೆಗೆ ಒಳಗಾಗುವ ಅಪಾಯ ಕಡಿಮೆ. ಪೋರ್ಟೆಬಲ್ ವರ್ಡ್ ಪ್ರೆಸ್ ಅನ್ನು ಉಚಿತವಾಗಿ ಬಳಸಬಹುದು. ಅದನ್ನು ಈ ಲಿಂಕ್ ನಿಂದ  ಡೌನ್ ಲೋಡ್ ಮಾಡಿಕೊಳ್ಳಿ. ಈ ಲಿಂಕ್ ನಲ್ಲಿಯೇ ಅದನ್ನು ಬಳಕೆ ಮಾಡಬಹುದಾದ ಮಾರ್ಗದರ್ಶನಗಳು ಇವೆ.

ನಿಮಗೆ ಕೋಡಿಂಗ್ ಬಗ್ಗೆ ಉಚಿತವಾಗಿ ಕಲಿಯಬೇಕೆಂದದಿದ್ದರೆ ಆನ್ ಲೈನ್ ನಲ್ಲಿ ಹಲವು ತಾಣಗಳಿವೆ. ಅವುಗಳಲ್ಲಿ ಡಬ್ಲ್ಯು3 ಸ್ಕೂಲ್ ನನ್ನ ಫೇವರಿಟ್. ಅದರ ಲಿಂಕ್ ಇಲ್ಲಿದೆ.

ನಿಮ್ಮ ಸಲಹೆ ಸೂಚನೆ ಅಥವಾ ಪ್ರಶ್ನೆಗಳಿಗೆ ಸ್ವಾಗತ. ನನ್ನ ವೆಬ್ ಸೈಟ್ ಪ್ರಾಯೋಗಿಕ ಹಂತದಲ್ಲಿ ಇರುವುದರಿಂದ ಕೊಂಚ ಸ್ಲೋ ಅನಿಸಬಹುದು. ಸಹಿಸಿಕೊಳ್ಳಿ.

ನಿಮ್ಮ ವೆಬ್ ಸೈಟ್ ಸ್ಪೀಡ್ ಅನ್ನು ಗೂಗಲ್ ಡೆವಲಪರ್ ಇನ್ ಸೈಟ್ ನಲ್ಲಿ ಪರೀಕ್ಷಿಸಿಕೊಳ್ಳಿ.

ಪ್ರವೀಣ್ ಪುತ್ತೂರು.ಕಾಂ ಮುಖಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ.

Monday, 23 January 2017

ಉಚಿತ ಇ-ಲರ್ನಿಂಗ್ ಕೋರ್ಸ್‍ಗಳಿವು

ಉಚಿತ ಇ-ಲರ್ನಿಂಗ್ ಕೋರ್ಸ್‍ಗಳಿವು

ಕಲಿಯುವ ಆಸಕ್ತಿ ಇರುವವರಿಗೆ ಆನ್‍ಲೈನ್‍ನಲ್ಲಿಂದು ಹಲವು ಉಚಿತ ಕೋರ್ಸ್‍ಗಳು ಲಭ್ಯ ಇವೆ. ಈ ಕೋರ್ಸ್‍ಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಈಗಾಗಲೇ ಉದ್ಯೋಗದಲ್ಲಿರುವವರಿಗೆ ತಮ್ಮ ಕೌಶಲವನ್ನು ಅಪ್‍ಗ್ರೇಡ್ ಮಾಡಿಕೊಳ್ಳಲು ಸಹಾಯಕ. ಪ್ರೋಗ್ರಾಮಿಂಗ್ ಮತ್ತು ಡಿಸೈನ್‍ಗೆ ಸಂಬಂಧಪಟ್ಟ ಹಲವು ಉಚಿತ ಕೋರ್ಸ್‍ಗಳ ವಿವರ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಕಂಪ್ಯೂಟರ್ ಪ್ರೋಗ್ರಾಮಿಂಗ್ ಕುರಿತು ಈಗಾಗಲೇ ನೀವು ಕಾಲೇಜಿನಲ್ಲಿ ಕಲಿತಿರಬಹುದು ಅಥವಾ ಕಲಿಯುತ್ತಿರಬಹುದು. ಎಂದೋ ಕಾಲೇಜಿನಲ್ಲಿ ಈ ವಿಷಯದ ಕುರಿತು ಕಲಿತಿರಬಹುದು. ಪ್ರೋಗ್ರಾಮಿಂಗ್ ಮತ್ತು ಡಿಸೈನ್ ಬಗ್ಗೆ ನಿಮಗೆ ಏನೂ ತಿಳಿಯದೆ ಇರಬಹುದು. ಒಂದಿಷ್ಟು ಸಮಯ ಬಿಡುವು ಮಾಡಿಕೊಂಡರೆ ಈ ಕುರಿತಾದ ಕೋರ್ಸ್‍ಗಳನ್ನು ಉಚಿತವಾಗಿ ಆನ್‍ಲೈನ್‍ನಲ್ಲೇ ಕಲಿಯಬಹುದಾಗಿದೆ.

ಪ್ರೋಗ್ರಾಮಿಂಗ್ ಕೋರ್ಸ್‍ಗಳು
ಕಂಪ್ಯೂಟರ್ ಸೈನ್ಸ್ ಪರಿಚಯ: ಹಾರ್ವಡ್ ವಿವಿಯು ಕಂಪ್ಯೂಟರ್ ಸೈನ್ಸ್ ಸಂಬಂಧಪಟ್ಟ ಉಚಿತ ಪ್ರೋಗ್ರಾಮಿಂಗ್ ಕೋರ್ಸ್ ಲಭ್ಯವಿದೆ. ಇದು ಆರಂಭಿಕರಿಗೆ ಸೂಕ್ತ. ಇದರಲ್ಲಿ ಸಿಎಸ್‍ಎಸ್, ಎಚ್‍ಟಿಎಂಎಲ್ ಮತ್ತು ಪಿಎಚ್‍ಪಿ ಕುರಿತು ಜ್ಞಾನ ಪಡೆದುಕೊಳ್ಳಬಹುದಾಗಿದೆ. ಈ ಕೋರ್ಸ್‍ನ ತರಗತಿಗಳೆಲ್ಲ ಉಚಿತ. ನಿಮಗೆ ಹಾರ್ವಡ್‍ನ ಅಂಗೀಕೃತ ಸರ್ಟಿಫಿಕೇಟ್ ಬೇಕಿದ್ದರೆ ಸುಮಾರು 90 ಡಾಲರ್ ಹಣ ಪಾವತಿಸಬೇಕು. ಈ ಕೋರ್ಸ್‍ನಲ್ಲಿ 180 ಗಂಟೆಯಲ್ಲಿ ಕಲಿಯಬಹುದಾದ 9 ಲೆಸನ್‍ಗಳಿವೆ. ವೆಬ್‍ಸೈಟ್ ಲಿಂಕ್
ಸಾಫ್ಟ್‍ವೇರ್ ಅಭಿವೃದ್ಧಿ: ಈ ಕೋರ್ಸ್ ಮೂಲಕ ವಿದ್ಯಾರ್ಥಿಗಳು ಅತ್ಯಧಿಕ ಗುಣಮಟ್ಟದ ಸಾಫ್ಟ್‍ವೇರ್‍ಗಳನ್ನು ಅಭಿವೃದ್ಧಿಪಡಿಸಲು ಕಲಿಯಬಹುದು. ಕೊಂಚ ಮಟ್ಟಿಗೆ ಪ್ರೋಗ್ರಾಮಿಂಗ್ ಅನುಭವ ಇರುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕಲಿಕಾ ಸಾಮಾಗ್ರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅನುಭವ ಇಲ್ಲದವರೂ ಕಲಿಯಬಹುದು. 16 ಗಂಟೆಯ ಈ ಕ್ಲಾಸ್‍ನಲ್ಲಿ 7 ಪಾಠ ಮತ್ತು 7 ಪ್ರಯೋಗಗಳಿವೆ. ವೆಬ್ ಸೈಟ್ ಲಿಂಕ್
ಎಲ್ಲರೂ ಕಲಿಯಬಹುದಾದ ಪೆÇ್ರೀಗ್ರಾಮಿಂಗ್: ಯೂನಿವರ್ಸಿಟಿ ಆಫ್ ಮಿಚಿಗ ` ಪ್ರೋಗ್ರಾಮಿಂಗ್ ಫಾರ್ ಎವರಿಬಡಿ' ಎಂಬ ಕೋರ್ಸ್ ಅನ್ನು ಕೋರ್ಸ್‍ಇರಾ ಉಚಿತವಾಗಿ ನೀಡುತ್ತಿದೆ. ಪ್ರೋಗ್ರಾಮಿಂಗ್ ಕುರಿತು ಯಾವುದೇ ಅನುಭವ ಇಲ್ಲದವರು ಸಹ ಈ ಕೋರ್ಸ್‍ಗೆ ಸೇರಬಹುದು. 20ರಿಂದ 40 ಗಂಟೆಯಲ್ಲಿ ಕಲಿಯಬಹುದಾದ ಈ ಕೋರ್ಸ್‍ನಲ್ಲಿ 10 ಲೆಸನ್‍ಗಳಿವೆ. ವೆಬ್ ಸೈಟ್ ಲಿಂಕ್
ಡ್ಯಾಷ್ ಜನರಲ್ ಅಸೆಂಬ್ಲಿ: ಡ್ಯಾಷ್ ಎಂಬ ವೆಬ್‍ಸೈಟ್‍ನಲ್ಲಿ ಎಚ್‍ಟಿಎಂಎಲ್, ಸಿಎಸ್‍ಎಸ್ ಮತ್ತು ಜಾವಾಸ್ಕ್ರಿಪ್ಟ್ ಅನ್ನು ಮುದದಿಂದ ಕೊನೆಯವರೆಗೆ ಹಂತಹಂತವಾಗಿ ಸರಳವಾಗಿ ಹೇಳಕೊಡಲಾಗುತ್ತದೆ. ಕೋಡಿಂಗ್ ಬಗ್ಗೆ ಗೊತ್ತಿದ್ದವರು, ಗೊತ್ತಿಲ್ಲದವರೂ ಈ ಕೋರ್ಸ್ ಅನ್ನು ಉಚಿತವಾಗಿ ಕಲಿಯಬಹುದು. ವೆಬ್‍ಸೈಟ್ ಲಿಂಕ್
ಎಂಐಟಿ ಓಪನ್ ಕೋರ್ಸ್: ಸಿ ಮತ್ತು ಸಿಪ್ಲಸ್‍ಪ್ಲಸ್ ಪೆÇ್ರೀಗ್ರಾಮಿಂಗ್ ಭಾಷೆಯ ಕುರಿತು ಕಲಿಯಲು ಈ ನಾಲ್ಕು ವಾರದ ಕೋರ್ಸ್‍ಗೆ ಸೇರಬಹುದು. ಪೆÇ್ರೀಗ್ರಾಮಿಂಗ್ ಭಾಷೆಯ ಪರಿಚಯ ಮಾತ್ರವಲ್ಲದೆ ಮೆಮೊರಿ ಮ್ಯಾನೇಜ್‍ಮೆಂಟ್, ಪಾಯಿಂಟರ್, ಆಬ್ಜೆಕ್ಟ್ ಓರಿಯೆಂಟೆಡ್ ಪೆÇ್ರೀಗ್ರಾಮಿಂಗ್ ಇತ್ಯಾದಿಗಳನ್ನು ಇಲ್ಲಿ ಕಲಿಯಬಹುದು. 8 ಪಾಠ, 8 ಲ್ಯಾಬ್ಸ್‍ನ ಈ ಕೋರ್ಸ್ ಅನ್ನು ಕೇವಲ 16 ಗಂಟೆಯಲ್ಲಿ ಕಲಿಯಬಹುದಾಗಿದೆ. ವೆಬ್‍ಸೈಟ್ ಲಿಂಕ್
ಕೋಡ್ ಅಕಾಡೆಮಿ: ಕೋಡ್ ಅಕಾಡೆಮಿಯಲ್ಲಿ ಎಚ್‍ಟಿಎಂಎಲ್ ಮತ್ತು ಸಿಎಸ್‍ಎಸ್ ಬಳಸಿ ಹಲವು ಲಕ್ಷ ಜನರು ವೆಬ್‍ಸೈಟ್ ರಚಿಸಿದ್ದಾರೆ. ವೆಬ್ ಅಭಿವೃದ್ಧಿಯಲ್ಲಿ ಪರಿಣತಿ ಪಡೆಯಲು ಯಾವುದೇ ಅನುಭವ ಬೇಕಿಲ್ಲ. ಕೋಡ್ ಅಕಾಡೆಮಿಯ 7 ಗಂಟೆಯ 12 ಪಾಠವಿರುವ ಕೋರ್ಸ್‍ಗೆ ಸೇರಬಹುದಾಗಿದೆ. ವೆಬ್‍ಸೈಟ್ ಲಿಂಕ್
ಉದೆಮಿಯಿಂದ ಆ್ಯಪ್ ಕ್ಲಾಸ್: ಐಫೋನ್  ಆ್ಯಪ್ ಅಭಿವೃದ್ಧಿಪಡಿಸಲು ಕಲಿಯುವವರಿಗೆ ಉದೆಮಿಯ ಈ ಕೋರ್ಸ್ ನೆರವಾಗುತ್ತದೆ. 5 ಗಂಟೆಯ 23 ಕ್ಲಾಸ್ ಮುಗಿಸುವ ಹಂತದಲ್ಲಿ ಸಂಪೂರ್ಣ ಕಾರ್ಯನಿರ್ವಹಿಸುವ ಮೊದಲ ಆ್ಯಪ್ ಅನ್ನು ನೀವು ಆ್ಯಪ್ ಸ್ಟೋರ್‍ಗೆ ಸಬ್‍ಮಿಟ್ ಮಾಡಬಹುದಾಗಿದೆ. ವೆಬ್ ವಿಳಾಸ



ಡಿಸೈನ್ ಕಲಿಕೆಗೆ ಕೋರ್ಸ್‍ಗಳು
ಅಡಾಬ್ ಫೋಟೊಶಾಪ್: ಅಡೋಬ್ ಫೋಟೊಶಾಪ್ ಅನ್ನು ಯಾವ ರೀತಿ ಬಳಸಬೇಕೆಂದು ಆರಂಭಿಕರಿಗೆ ಕಲಿಸುವ ಕೋರ್ಸ್ ಇದಾಗಿದೆ. ಈ ಕೋರ್ಸ್‍ನಲ್ಲಿ ಸರಳವಾಗಿ ಪ್ರಾಕ್ಟಿಕಲ್ ಉದಾಹರಣೆಗಳ ಮೂಲಕ ಹೇಳಿಕೊಡಲಾಗಿದೆ. ಈ ಕೋರ್ಸ್‍ನಲ್ಲಿ 26 ಪಾಠಗಳಿದ್ದು 14 ಗಂಟೆಯಲ್ಲಿ ಕಲಿಯಬಹುದಾಗಿದೆ. ವೆಬ್‍ಸೈಟ್ ಲಿಂಕ್: www.adobeknowhow.com  ಅಥವಾ http://bit.ly/JpFOnI
ಇಲ್ಯುಸ್ಟ್ರೇಟರ್ ಕಲಿಯಿರಿ: ಅಡಾಬ್ ಇಲ್ಯುಸ್ಟ್ರೇಟರ್ ಕಲಿತು ಅದ್ಭುತವಾದ ಗ್ರಾಫಿಕ್ಸ್‍ಗಳನ್ನು ತಯಾರಿಸಲು ಬಯಸಿದ್ದೀರಾ? ಹಾಗಿದ್ದರೆ ನಿಮಗೆ ಈ ಕೋರ್ಸ್ ಸೂಕ್ತ. ಈ ಕೋರ್ಸ್‍ನಲ್ಲಿ ಇಲ್ಯುಸ್ಟ್ರೇಟರ್‍ನ ಸಾಮಾನ್ಯ ತಂತ್ರಗಳು, ಅಡ್ವಾನ್ಸಡ್ ವಿಷಯಗಳನ್ನು ಕಲಿಯಬಹುದಾಗಿದೆ. ಸುಮಾರು 41 ಪಾಠಗಳನ್ನು 11 ಗಂಟೆಯಲ್ಲಿ ಕಲಿಯಬಹುದಾಗಿದೆ. ಉದೆಮಿ ಸಂಸ್ಥೆಯ ವೆಬ್‍ಸೈಟ್ ವಿಳಾಸ
ಅಡೊಬ್ ಇನ್‍ಡಿಸೈನ್: ಅಡೋಬ್ ನೋ ಹೌ ವೆಬ್‍ಸೈಟ್‍ನಲ್ಲಿ ಆರಂಭಿಕರಿಗೆ ಅಡೋಬ್ ಇಂಡಿಸೈನ್ ಉಚಿತ ಕೋರ್ಸ್ ಲಭ್ಯವಿದೆ. ಅತ್ಯುತ್ತಮ ಗುಣಮಟ್ಟದ ಪುಟಗಳನ್ನು, ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ಇದು ಸೂಕ್ತ. ಗ್ರಾಫಿಕ್ಸ್, ಟೇಬಲ್ಸ್, ಕಲರ್, ಇಫೆಕ್ಟ್ ಇತ್ಯಾದಿಗಳನ್ನೂ ಇಲ್ಲಿ ಕಲಿಯಬಹುದು. ವೆಬ್ ಸೈಟ್ ಲಿಂಕ್
ಗ್ರಾಫಿಕ್ ಡಿಸೈನ್ ಕೋರ್ಸ್: ಉದೆಮಿಯು ಉಚಿತ ಗ್ರಾಫಿಕ್ ಡಿಸೈನ್ ಕೋರ್ಸ್ ಅನ್ನು ಆರಂಭಿಕರಿಗೆ ನೀಡುತ್ತಿದೆ. ಗ್ರಾಫಿಕ್ ಡಿಸೈನ್ ಜಗತ್ತಿಗೆ ಪ್ರವೇಶಿಸಲು ಬಯಸುವವರಿಗೆ ಇದು ಉತ್ತಮ ಆರಂಭಿಕ ಕೋರ್ಸ್ ಆಗಿದೆ. ವೆಬ್ ವಿಳಾಸ
ಆನ್‍ಲೈನ್ ಮಾರ್ಕೆಟಿಂಗ್ ಕೋರ್ಸ್‍ಗಳು
* ಬಫರ್ ಸಂಸ್ಥೆಯ ಸೋಷಿಯಲ್ ಮೀಡಿಯ 101 ಕೋರ್ಸ್‍ಗೆ ಲಿಂಕ್
* ಅಲಿಸನ್‍ನ ಡಿಪ್ಲೊಮಾ ಇನ್ ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್
* ಉದೆಮಿಯಿಂದ ಅಡ್ವಾನ್ಸಡ್ ಎಸ್‍ಇಒ ಕೋರ್ಸ್
* ಕಾಪಿ ಬ್ಲಾಗರ್‍ನಲ್ಲಿ ಇಂಟರ್‍ನೆಟ್ ಮಾರ್ಕೆಟಿಂಗ್ ಕೋರ್ಸ್ ಲಭ್ಯವಿದೆ. ಲಿಂಕ್
* ಕೋರ್ಸ್ ಇರಾದಲ್ಲಿ ಡಿಜಿಟಲ್ ವಲ್ರ್ಡ್ ಮಾರ್ಕೆಟಿಂಗ್ ಕುರಿತು ಉಚಿತ ಕೋರ್ಸ್ ಇದೆ. ಲಿಂಕ್

Published in Vijayakarnataka Mini

Wednesday, 18 January 2017

ಉಪಯುಕ್ತ ವೆಬ್ ಸೈಟ್: ಕನ್ನಡ ಸ್ಲೇಟ್

ಉಪಯುಕ್ತ ವೆಬ್ ಸೈಟ್: ಕನ್ನಡ ಸ್ಲೇಟ್

ನಿಮಗೆ ಗೂಗಲ್ ನಲ್ಲಿ ಕನ್ನಡದಲ್ಲಿ ಏನೋ ಹುಡುಕಬೇಕೆಂದೆನಿಸುತ್ತದೆ. ನಿಮ್ಮ ಕಂಪ್ಯೂಟ್ ನಲ್ಲಿ ಯೂನಿಕೋಡ್ ನಲ್ಲಿ ಬರೆಯುವ ಸೌಲಭ್ಯ ಇಲ್ಲ ಎಂದಿರಲಿ. ಕೆಲವೊಮ್ಮೆ ಇಂತಹ ಬದಲಾವಣೆಗಳನ್ನು ತಕ್ಷಣ ಆಫೀಸ್ ಕಂಪ್ಯೂಟರ್ ಗಳಲ್ಲಿ ಮಾಡಲು ಸಾಧ್ಯವಾಗುವುದಿಲ್ಲ.

ನೀವು ಕನ್ನಡ ಸ್ಲೇಟ್ ಎಂಬ ವೆಬ್ ಸೈಟ್ ಹೋಗಿಲ್ಲದಿದ್ದರೆ ಒಮ್ಮೆ ಹೋಗಿ ನೋಡಿ. ಇಲ್ಲಿ ನೀವು ನೇರವಾಗಿ ಇಂಗ್ಲಿಷ್ ಅಕ್ಷರದಲ್ಲಿ ಬರೆದರೆ ಕನ್ನಡದಲ್ಲಿ ಅಕ್ಷರ ಮೂಡುತ್ತದೆ. ಇಲ್ಲಿ ನಿಮಗೆ ಬೇಕಾದ ಪದವನ್ನು ಬರೆದು ಅದನ್ನು ಕಾಪಿ ಮಾಡಿ ಗೂಗಲ್ ಗೆ ಪೇಸ್ಟ್ ಮಾಡಬಹುದಾಗಿದೆ.

ಕನ್ನಡ ಸ್ಲೇಟ್ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Saturday, 14 January 2017

ಸಿಎಗೆ ಪರ್ಯಾಯ ಎಸಿಸಿಎ

ಸಿಎಗೆ ಪರ್ಯಾಯ ಎಸಿಸಿಎ

ದೇಶದಲ್ಲಿ ಬಹುತೇಕರು ಚಾರ್ಟೆಡ್ ಅಕೌಂಟೆಂಟ್(ಸಿಎ) ಮಾಡುತ್ತಿದ್ದಾರೆ. ಭಾರತೀಯ ಸಿಎಗೆ ಪರ್ಯಾಯವಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಮನ್ನಣೆ ಪಡೆದಿರುವ ಎಸಿಸಿಎಯನ್ನೂ ಮಾಡಿದರೆ ಇನ್ನಷ್ಟು ಉತ್ತಮ ಉದ್ಯೋಗಾವಕಾಶ ಪಡೆಯಬಹುದು ಎನ್ನುತ್ತಾರೆ ತಜ್ಞರು. ಎಸಿಸಿಎ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


* ಪ್ರವೀಣ್ ಚಂದ್ರ ಪುತ್ತೂರು

ಚಾರ್ಟೆಡ್ ಅಕೌಂಟೆಂಟ್, ಫೈನಾನ್ಶಿಯಲ್ ಅಕೌಂಟೆಂಟ್, ಅಡಿಟರ್, ಮ್ಯಾನೆಜ್‍ಮೆಂಟ್ ಕನ್ಸಲ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಪಡೆಯಲು ಹೆಚ್ಚಿನವರು `ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ' (ಡಿಡಿಡಿ.ಜ್ಚಿZಜಿ.ಟ್ಟಜ) ನೀಡುವ `ಸಿಎ' ಅಥವಾ `ಚಾರ್ಟೆಡ್ ಅಕೌಂಟೆಂಟ್' ಕೋರ್ಸ್ ಮಾಡುತ್ತಾರೆ. ಸಿಎಗೆ ಪರ್ಯಾಯವಾಗಿ ಯಾವ ಕೋರ್ಸ್ ಮಾಡಬಹುದು? ಎಂಬ ಪ್ರಶ್ನೆ ಎದುರಾದರೆ ನಮ್ಮ ಗಮನ ಸೆಳೆಯುವುದು `ದಿ ಅಸೋಸಿಯೇಷನ್ ಆಫ್ ಚಾರ್ಟೆಡ್ ಸರ್ಟಿಫೈಡ್ ಅಕೌಂಟೆಂಟ್ಸ್(ಎಸಿಸಿಎ)'. ಈ ಕುರಿತು ಒಂದು ವಿಶ್ಲೇಷಣೆ ಇಲ್ಲಿದೆ.

ಜಾಗತಿಕವಾಗಿ ಫೇಮಸ್ಸು
ಖಂಡಿತವಾಗಿಯೂ ಭಾರತದ ಸಿಎ ಜಾಗತಿಕ ಗುಣಮಟ್ಟ ಹೊಂದಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ತನ್ನ ಸಿಲೇಬಸ್ ಅನ್ನು ಬದಲಾಯಿಸುವ ಇಂಗಿತವನ್ನೂ ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ಸಂಸ್ಥೆಯು ವ್ಯಕ್ತಪಡಿಸಿದೆ. ಈಗಾಗಲೇ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಅಪ್‍ಡೇಟ್ ಆಗಿರುವ ಎಸಿಸಿಎ ಹೆಚ್ಚು ಫೇಮಸ್ ಎನ್ನುವುದು ಕೆಲವು ಶಿಕ್ಷಣ ಪರಿಣತರ ಅಭಿಪ್ರಾಯ. ಎಸಿಸಿಎಯು ಜಗತ್ತಿನ 181 ದೇಶಗಳಲ್ಲಿ ಸುಮಾರು 1,88,000 ಸದಸ್ಯರನ್ನು ಮತ್ತು 4,80,000 ವಿದ್ಯಾರ್ಥಿಗಳನ್ನು ಹೊಂದಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ 91ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಎಸಿಸಿಎಯು ಇಂಗ್ಲೆಂಡ್‍ನ ಜಿಎಎಪಿ, ಲಾ, ಐಎಫ್‍ಆರ್‍ಎಸ್‍ನ ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ. ಇದು ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚುವರಿ ಜ್ಞಾನವನ್ನು ಒದಗಿಸಿದಂತಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?
* ಎಸಿಸಿಎಗೆ ಸೇರಲು ಯಾವುದೇ ಔಪಚಾರಿಕ ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ. ಆಸಕ್ತರು ನೇರವಾಗಿ ಫೌಂಡೇಷನ್ ಲೆವೆಲ್‍ಗೆ ಸೇರಬಹುದು.. ಅಕೌಂಟೆನ್ಸಿಗೆ ಹೊಸದಾಗಿ ಸೇರಬಯಸುವ ವಿದ್ಯಾರ್ಥಿಗಳು, ಯಾವುದೇ ಅಕೌಂಟೆನ್ಸಿ ವಿದ್ಯಾರ್ಹತೆ ಇಲ್ಲದೆ ಇದ್ದರೂ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು, ಈಗಾಗಲೇ ಡಿಪೆÇ್ಲಮಾ ಅಥವಾ ಬೇರೆ ಸರ್ಟಿಫಿಕೇಟ್ ಕೋರ್ಸ್ ಪಡೆಯುತ್ತಿರುವಾಗಲೇ ಎಸಿಸಿಎ ಶಿಕ್ಷಣವನ್ನು ಪಡೆಯಬಹುದಾಗಿದೆ.
* ಪದವಿ/ಸ್ನಾತಕೋತ್ತರ ಪದವಿ ಅಥವಾ ಇತರ ಶೈಕ್ಷಣಿಕ ಅರ್ಹತೆ ಇರುವ ಅಭ್ಯರ್ಥಿಗಳು ಎಸಿಸಿಎ ಸದಸ್ಯರಾಗಬಹುದು. ಭಾರತೀಯ ಸಿಎಯಲ್ಲಿ ಕೆಲವು ಪೇಪರ್‍ಗಳನ್ನು ಬರೆದು ಪೂರ್ಣಗೊಳಿಸಿದವರಿಗೆ ಎಸಿಸಿಎಯಲ್ಲಿ ಕೆಲವು ಪೇಪರ್‍ಗಳನ್ನು ಬರೆಯುವುದರಿಂದ ವಿನಾಯಿತಿಯನ್ನೂ ನೀಡಲಾಗುತ್ತದೆ. ಅಂದರೆ, ಭಾರತೀಯ ಸಿಎಯಲ್ಲಿ ಕೆಲವು ಪೇಪರ್ ಪೂರ್ಣಗೊಳಿಸಿದವರು ನೇರವಾಗಿ ಎಸಿಸಿಎಯ ಪೆÇ್ರಫೆಷನಲ್ ಲೆವೆಲ್‍ಗೆ ಸೇರಬಹುದು. ಈ ಕುರಿತು ಪೂರ್ಣ ಮಾಹಿತಿಯನ್ನು ಎಸಿಸಿಎ ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು.

ಯಾವಾಗ ಪರೀಕ್ಷೆ ನಡೆಯುತ್ತದೆ?
ಎಸಿಸಿಎ ಶಿಕ್ಷಣವು ಒಟ್ಟು 14 ಪೇಪರ್‍ಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಬರೆಯಬಹುದು. ಪ್ರತಿ ಅವಧಿಯಲ್ಲಿಯೂ 4 ಎಗ್ಸಾಂವರೆಗೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವಿದೆ. ಈ ರೀತಿ ಮಾಡಿದರೆ ಕನಿಷ್ಠ 2 ವರ್ಷದಲ್ಲಿಯೇ ಎಸಿಸಿಎ ಕೋರ್ಸ್ ಪೂರ್ಣಗೊಳಿಸಬಹುದು. ಭಾರತೀಯ ಸಿಎ ಮಾಡಿದವರಿಗೆ ಕೆಲವು ಪೇಪರ್‍ಗಳ ವಿನಾಯಿತಿಯೂ ಲಭ್ಯ ಇರುವುದರಿಂದ ಇದಕ್ಕಿಂತಲೂ ಕಡಿಮೆ ಅವಧಿಯಲ್ಲಿಯೂ ಕೋರ್ಸ್ ಪೂರ್ಣಗೊಳಿಸಬಹುದು. ಎಸಿಸಿಎ ಮೆಂಬರ್‍ಷಿಪ್ ಪಡೆಯಲು ವಿದ್ಯಾರ್ಥಿಗಳಿಗೆ 3 ವರ್ಷ ಅಥವಾ 36 ತಿಂಗಳ ಪ್ರಾಕ್ಟಿಕಲ್ ವರ್ಕ್ ಅನುಭವ ಇರಬೇಕು. ಈ ಕೆಲಸದ ಅನುಭವವನ್ನು ಎಸಿಸಿಎಗೆ ಸೇರುವ ಮುನ್ನ ಅಥವಾ ಎಸಿಸಿಎ ಅಧ್ಯಯನ ಸಮಯದಲ್ಲಿ ಅಥವಾ ಅಧ್ಯಯನ ಪೂರ್ಣಗೊಳಿಸಿದ ನಂತರವೂ ಪಡೆಯಬಹುದು.

ಪರೀಕ್ಷೆ ಯಾವಾಗ ನಡೆಯುತ್ತದೆ
ವರ್ಷಕ್ಕೆ ಎರಡು ಬಾರಿ ಎಸಿಸಿಎ ಪರೀಕ್ಷೆ ನಡೆಸಲಾಗುತ್ತದೆ. ಜೂನ್ ಮತ್ತು ಡಿಸೆಂಬರ್ ಅವಧಿಯ ಪರೀಕ್ಷೆಯನ್ನು `ಅರ್ಲಿ', `ಸ್ಟಾಂಡರ್ಡ್' ಮತ್ತು `ಲೇಟ್' ಎಂಬ ಮೂರು ಸಮಯಗಳಲ್ಲಿ ಬರೆಯಲು ಅವಕಾಶವಿದೆ. ಅರ್ಲಿ(ಬೇಗ) ಎಗ್ಸಾಂ ಮಾರ್ಚ್ 8 ಮತ್ತು ಸೆಪ್ಟೆಂಬರ್ 8ರಂದು ನಡೆಯುತ್ತದೆ. ಈ ಎಗ್ಸಾಂ ಅನ್ನು ಆನ್‍ಲೈನ್‍ನಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಸ್ಟಾಂಡರ್ಡ್ ಎಗ್ಸಾಂ ಮಾರ್ಚ್ 9-ಏಪ್ರಿಲ್ 8ರಂದು ಮತ್ತು ಸೆಪ್ಟೆಂಬರ್ 9 -ಅಕ್ಟೋಬರ್ 8ರಂದು ನಡೆಯುತ್ತದೆ. ಈ ಎಗ್ಸಾಂ ಅನ್ನು ಆನ್‍ಲೈನ್ ಅಥವಾ ಪೇಪರ್ ಮೂಲಕ ಬರೆಯಲು ಅವಕಾಶ ನೀಡಲಾಗುತ್ತದೆ. ಲೇಟ್ ಎಗ್ಸಾಂ 9 ಏಪ್ರಿಲ್-ಮೇ 8ರಂದು ಮತ್ತು ಅಕ್ಟೋಬರ್ 9-ನವೆಂಬರ್ 8ರಂದು ಬರೆಯಲು ಅವಕಾಶವಿದೆ. ಈ ಪರೀಕ್ಷೆಯನ್ನು ಆನ್‍ಲೈನ್ ಮೂಲಕ ಮಾತ್ರ ನಡೆಸಲಾಗುತ್ತದೆ.

ಫೀಸ್ ಎಷ್ಟು?
ಎಸಿಸಿಎ ಪರೀಕ್ಷೆಗೆ ದಾಖಲಾತಿ ಮತ್ತು ಚಂದಾದಾರಿಕೆ (ಸಬ್‍ಸ್ಕ್ರಿಪ್ಷನ್) ಶುಲ್ಕ ಇಂತಿದೆ. ಆರಂಭಿಕ ದಾಖಲಾತಿಗೆ 79 ಪೌಂಡ್. ಅಂದರೆ, ಸುಮಾರು 6,690 ರೂಪಾಯಿ ಆಗಿದೆ. ಮರು ದಾಖಲಾತಿಗೂ ಇಷ್ಟೇ ಶುಲ್ಕ ವಿಧಿಸಲಾಗುತ್ತದೆ. ವಾರ್ಷಿಕ ಸಬ್‍ಸ್ಕ್ರಿಪ್ಷನ್‍ಗೆ 85 ಪೌಂಡ್ ಅಂದರೆ, ಸುಮಾರು 8 ಸಾವಿರ ರೂಪಾಯಿ. ವಿನಾಯಿತಿ(ಎಗ್ಸೆಂಪ್ಷನ್ ಫೀ) ಶುಲ್ಕ: ಜ್ಞಾನದ ಪರೀಕ್ಷೆಗೆ 72 ಪೌಂಡ್(6,097 ರೂ.) ಮತ್ತು ಕೌಶಲ ಪರೀಕ್ಷೆಗೆ 97 ಪೌಂಡ್(8,214) ರೂಪಾಯಿ. ಪರೀಕ್ಷಾ ಪ್ರವೇಶ ಶುಲ್ಕವನ್ನು ಪ್ರತಿವರ್ಷ ಪಾವತಿಸಬೇಕು. ಇಲ್ಲಿ ಒಂದು ಪೌಂಡ್‍ಗೆ 84.68 ರೂಪಾಯಿ ಎಂದು ಲೆಕ್ಕಹಾಕಲಾಗಿದೆ.
ಸಿಎ ಬೆಸ್ಟಾ? ಎಸಿಸಿಎ ಬೆಸ್ಟಾ?
ಈ ಪ್ರಶ್ನೆಗೆ ಇದಮಿತ್ತಂ ಉತ್ತರ ಕಷ್ಟ. ಈಗಾಗಲೇ ಹೇಳಿದಂತೆ ಭಾರತದ ಸಿಎ ಪೂರ್ಣಗೊಳಿಸಲು 5 ವರ್ಷ ಬೇಕು. ನಿಮಗೆ 6 ತಿಂಗಳಿಗೆ ನಾಲ್ಕು ಪೇಪರ್ ಬರೆಯುವ ಸಾಮಥ್ರ್ಯ ಇದ್ದರೆ ಎಸಿಸಿಎ ಪೂರ್ಣಗೊಳಿಸಲು 2 ವರ್ಷ ಸಾಕು. ಎಸಿಸಿಎ ಎಗ್ಸಾಂ ಜೂನ್ ಮತ್ತು ಡಿಸೆಂಬರ್‍ನಲ್ಲಿ ನಡೆಯುತ್ತದೆ. ಸಿಎ ಪರೀಕ್ಷೆಯು ಜನವರಿ, ಫೆಬ್ರವರಿ, ಏಪ್ರಿಲ್, ಮೇ, ಜುಲೈ, ಆಗಸ್ಟ್, ಅಕ್ಟೋಬರ್, ನವೆಂಬರ್‍ನಲ್ಲಿ ನಡೆಯುತ್ತದೆ.
ಭಾರತದ ಸಿಎ ಶಿಕ್ಷಣದಂತೆ ಇಂಗ್ಲೆಂಡ್‍ನ ಎಸಿಸಿಎ ಇದೆ. ಭಾರತದ ಸಿಎಗಿಂತ ಎಸಿಸಿಎ ಕಲಿಕೆಯು ಹೆಚ್ಚುವರಿಯಾಗಿ ಇಂಗ್ಲೆಂಡ್ ಜಿಎಎಪಿ(ಇಂಗ್ಲೆಂಡ್‍ನ ಅಕೌಂಟಿಂಗ್ ಪ್ರಾಕ್ಟೀಸ್ ಜ್ಞಾನ), ಕಾನೂನು ಮತ್ತು ಅಂತಾರಾಷ್ಟ್ರೀಯ ಹಣಕಾಸು ರಿಪೆÇೀರ್ಟಿಂಗ್ ಸ್ಟಾಂಡರ್ಡ್(ಐಎಫ್‍ಆರ್‍ಎಸ್) ಜ್ಞಾನವನ್ನು ನೀಡುತ್ತದೆ. ಇದರಿಂದ ನಿಮಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅಥವಾ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸಲು ಅನುಕೂಲವುಂಟು ಮಾಡುತ್ತದೆ. ಎಸಿಸಿಎ ಸರ್ಟಿಫಿಕೇಟ್ ಜೊತೆ ಎಂಬಿಎ ಪದವಿಯನ್ನು ಪಡೆದರೆ ಹೆಚ್ಚು ಉದ್ಯೋಗಾವಕಾಶ ದೊರಕುತ್ತದೆ.
ಎಸಿಸಿಎಯ ಶಿಕ್ಷಣ ಗುಣಮಟ್ಟವು ಜಗತ್ತಿನಾದ್ಯಂತ ಇರುವ ಉದ್ಯೋಗದಾತರ ಅವಶ್ಯಕತೆಗೆ ತಕ್ಕಂತೆ ಇದೆ. ಭಾರತದ ಸಿಎಯು ಶೀಘ್ರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ತನ್ನ ಪಠ್ಯಕ್ರಮವನ್ನು ಬದಲಾಯಿಸಿಕೊಳ್ಳಲು ಉದ್ದೇಶಿಸಿದೆ.
ಭಾರತೀಯ ಸಿಎ ಮಾಡುತ್ತಿರುವಾಗ ಬೇರೆ ಕೋರ್ಸ್ ಮಾಡುವುದು ಬಹಳಷ್ಟು ಕಷ್ಟಕಾರಿ ಎನ್ನುತ್ತಾರೆ ಬಹುತೇಕ ಸಿಎ ವಿದ್ಯಾರ್ಥಿಗಳು. ಆದರೆ, ಬೇರೆ ಕೋರ್ಸ್ ಮಾಡುತ್ತಿರುವಾಗಲೇ ಎಸಿಸಿಎ ಕ್ವಾಲಿಫಿಕೇಷನ್ ಪಡೆಯಬಹುದಾಗಿದೆ. ಭಾರತೀಯ ಸಿಎಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಸಿಸಿಎಗೆ ಸಂಬಂಧಪಟ್ಟ ಆನ್‍ಲೈನ್ ತರಬೇತಿಗಳು ಲಭ್ಯ ಇವೆ.
ನಿಮ್ಮ ಕರಿಯರ್‍ಗೆ ಈ ಸಾಧಕರು ಸ್ಫೂರ್ತಿಯಾಗಲಿ

ನಿಮ್ಮ ಕರಿಯರ್‍ಗೆ ಈ ಸಾಧಕರು ಸ್ಫೂರ್ತಿಯಾಗಲಿ

ಕರಿಯರ್‍ನಲ್ಲಿ ಸೋಲು ಬಂದಾಗ ಕುಗ್ಗುವವರಿಗೆ ಸ್ಫೂರ್ತಿಯಾಗಬಲ್ಲ ಪ್ರಮುಖ ಸಾಧಕರ ಪರಿಚಯ ಇಲ್ಲಿದೆ.

ಜೀವನದಲ್ಲಿ ಎಲ್ಲವೂ ಇದ್ದರೂ ಸಾಧಿಸಲು ಹಿಂಜರಿಯುವವರಿಗೆ ಪ್ರೇರಣೆ ನೀಡಬಲ್ಲ ವ್ಯಕ್ತಿಗಳ ಪುಟ್ಟ ಪರಿಚಯ ಇಲ್ಲಿದೆ. ಇವರೆಲ್ಲರು `ವಿಕಲತೆ ಎನ್ನುವುದು ಮನಸ್ಸಿನಲ್ಲಿದೆ' ಎನ್ನುವ ಮಾತನ್ನು ನಿಜವಾಗಿಸಿದವರು. ತಮ್ಮ ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಂತು ಜಗತ್ತೇ ನಿಬ್ಬೆರಾಗುವಂತೆ ಮಾಡಿದವರು. ಇವರು ಬದುಕಿರುವ ರೀತಿ ಎಲ್ಲರಿಗೂ ಸ್ಫೂರ್ತಿಯಾಗಲಿ.

ಸುಧಾ ಚಂದ್ರನ್: ಭಾರತೀಯ ನಟಿ ಮತ್ತು ನೃತ್ಯ ಕಲಾವಿದೆ ಸುಧಾ ಚಂದ್ರನ್ ಬಗ್ಗೆ ನಿಮಗೆ ಗೊತ್ತಿರಬಹುದು. ಕೇರಳದಲ್ಲಿ ಜನಿಸಿದ ಇವರಿಗೆ ನೃತ್ಯವೇ ಸರ್ವಸ್ವ. ಭರತನಾಟ್ಯವೆಂದರೆ ಪಂಚಪ್ರಾಣ. 16ನೇ ವಯಸ್ಸಿನಲ್ಲಿ ನಡೆದ ಅಪಘಾತದಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡರು. ನೃತ್ಯವೇ ಸರ್ವಸ್ವ ಎಂದುಕೊಂಡ ಇವರಿಗೆ ಇದರಿಂದ ಆದ ಆಘಾತ ಅಷ್ಟಿಷ್ಟಲ್ಲ. ಎಲ್ಲವೂ ಮುಗಿದು ಹೋಯಿತು ಎಂದುಕೊಳ್ಳಲಿಲ್ಲ. ಜೈಪುರದ ಕೃತಕ ಕಾಲುಗಳಲ್ಲಿಯೇ ನೃತ್ಯ ಮುಂದುವರೆಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದರು. ನೃತ್ಯ ಮಾತ್ರವಲ್ಲದೆ ಟೀವಿ ಮತ್ತು ಸಿನಿಮಾ ಜಗತ್ತಿನಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ.

ರವೀಂದ್ರ ಜೈನ್: ಹುಟ್ಟಿದ್ದಾಗ ಇವರಿಗೆ ಜಗತ್ತು ಸುಂದರವಾಗಿ ಕಾಣಲಿಲ್ಲ. ಅಂಧತ್ವ ಇವರ ಜೊತೆಗಿತ್ತು. ಬೆಳೆಯುತ್ತ ತನಗೆ ಕಣ್ಣಿಲ್ಲ ಎಂಬ ಸತ್ಯ ಅರಿವಾಗತೊಡಗಿತು. ಇದನ್ನು ವೈಕಲ್ಯತೆ ಎಂದುಕೊಳ್ಳದೇ ತಮ್ಮ ಸಾಧನೆ ಮುಂದುವರೆಸಿದರು. ಬಾಲ್ಯದಿಂದಲೂ ಹಾಡಲು ಆರಂಭಿಸಿದ ಇವರು 1970ರ ಆಸುಪಾಸಿನಲ್ಲಿ ಜನಪ್ರಿಯ ಸಂಗೀತ ನಿರ್ದೇಶಕ ಎಂಬ ಹೆಸರು ಪಡೆದರು.

ಗಿರೀಶ್ ಶರ್ಮಾ: ಸಣ್ಣ ಪ್ರಾಯದಲ್ಲೇ ರೈಲು ಅಪಘಾತದಲ್ಲಿ ಗಿರೀಶ್ ತನ್ನ ಒಂದು ಕಾಲನ್ನು ಕಳೆದುಕೊಂಡರು. ಕಾಲಿಲ್ಲದಿದ್ದರೂ ಬ್ಯಾಂಡ್ಮಿಟನ್ ಚಾಂಪಿಯನ್ ಆಗಬೇಕೆಂಬ ಕನಸನ್ನು ತೊರೆಯಲಿಲ್ಲ. ಕೇವಲ ಒಂದೇ ಕಾಲಿನಲ್ಲಿ ಬ್ಯಾಂಡ್ಮಿಟನ್ ಕೋರ್ಟ್‍ನಲ್ಲಿ ಎಲ್ಲರೂ ಅಚ್ಚರಿಪಡುವಂತೆ ಆಡಿ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಶೇಖರ್ ನಾಯ್ಕ್: ಶಿವಮೊಗ್ಗದ ಶೇಖರ್ ನಾಯ್ಕ್‍ಗೆ ಹುಟ್ಟಿದಾಗಲೇ ಅಂಧತ್ವ ಜೊತೆಯಾಗಿತ್ತು. ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳ ಸರದಾರ. ಟಿ20 ಬ್ಲೈಂಡ್ ಕ್ರಿಕೆಟ್ ವಿಶ್ವ ಚಾಂಪಿಯನ್‍ನಲ್ಲಿ ಭಾಗವಹಿಸಿದ್ದಾರೆ. ಇವರ ಹೆಸರಿನಲ್ಲಿ 32 ಶತಕಗಳಿವೆ. ಸಾಕಷ್ಟು ಹಣಕಾಸು ತೊಂದರೆಯ ನಡುವೆಯೂ ಚಾಂಪಿಯನ್ ಆಗಿ ಹೊರಹೊಮ್ಮಿದ ಇವರ ಬದುಕು ನಮ್ಮ ನಿಮ್ಮೆಲ್ಲರ ಕರಿಯರ್ ಸಾಧನೆಗೆ ಸ್ಫೂರ್ತಿಯಾಗಬಲ್ಲದು.

ಎಚ್ ರಾಮಕೃಷ್ಣನ್: ಮಗುವಾಗಿದ್ದಾಗಲೇ ರಾಮಕೃಷ್ಣನ್ ಕಾಲುಗಳೆರಡು ಪೆÇಲೀಯೊದಿಂದ ಊನವಾಗಿದ್ದವು. ಎಲ್ಲರಂತೆ ಶಾಲೆಗೂ ಪ್ರವೇಶ ದೊರಕಲಿಲ್ಲ. ಬದುಕಿನಲ್ಲಿ ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಆದರೂ, ಎದೆಗುಂದದೆ 40 ವರ್ಷ ಪತ್ರಕರ್ತರಾಗಿ ಹೆಸರುಗಳಿಸಿದರು. ಎಸ್‍ಎಸ್ ಮ್ಯೂಸಿಕ್ ಟೆಲಿವಿಷನ್ ಚಾನೆಲ್‍ನ ಸಿಇಒ ಆದರು. ವಿಶೇಷ ಚೇತನರಿಗಾಗಿಯೇ ಕೃಪಾ ಎಂಬ ಟ್ರಸ್ಟ್ ಅನ್ನೂ ನಡೆಸಿಕೊಡುತ್ತಿದ್ದಾರೆ.

ಸಾಯಿ ಪ್ರಸಾದ್ ವಿಶ್ವನಾಥನ್: ಬಾಲ್ಯದಲ್ಲಿಯೇ ತನ್ನ ದೇಹದ ಕೆಳ ಅರ್ಧಭಾಗದ ಸ್ವಾಧೀನ ಕಳೆದುಕೊಂಡರು. ತನ್ನ ವೈಕಲ್ಯವನ್ನು ಮರೆತು ಸಾಧನೆ ಮಾಡಿದ್ದಾರೆ. ಇವರು ಭಾರತದ ಮೊದಲ ವಿಶೇಷ ಚೇತನ ಸ್ಕೈ ಡೈವರ್. 14 ಸಾವಿರ ಅಡಿ ಆಳದಲ್ಲಿ ಸ್ಕೈ ಡೈವಿಂಗ್ ಮಾಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‍ನಲ್ಲಿಯೂ ಹೆಸರು ದಾಖಲಿಸಿದ್ದಾರೆ. ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸ್ಕಾಲರ್‍ಷಿಪ್ ನೀಡುವ ಸಹಸ್ರ ಎಂಬ ಸಂಸ್ಥೆಯ ಸಹ ಸ್ಥಾಪಕರಾಗಿದ್ದಾರೆ.

ಅರುಣಿಮಾ ಸಿನ್ಹಾ: ಚಲಿಸುತ್ತಿರುವ ರೈಲಿನಿಂದ ದರೋಡೆಕೋರರು ತಳ್ಳಿದ್ದರಿಂದ ತನ್ನ ಕಾಲುಗಳನ್ನು ಕಳೆದುಕೊಂಡರು. ತನ್ನ ವೈಕಲ್ಯತೆಗೆ ಎದೆಗುಂದದ ದಿಟ್ಟೆ. ಘಟನೆ ನಡೆದ ಎರಡು ವರ್ಷದಲ್ಲೇ ಮೌಂಟ್ ಎವರೆಸ್ಟ್ ಪರ್ವತವನ್ನು ಹತ್ತಿ ತೋರಿಸಿದರು. ಈ ಸಾಧನೆ ಮಾಡಿದ ಮೊದಲ ವಿಶೇಷ ಚೇತನ ವ್ಯಕ್ತಿ ಎಂಬ ದಾಖಲೆ ಮಾಡಿದ್ದಾರೆ.

ಮಾಲತಿ ಕೃಷ್ಣಮೂರ್ತಿ ಹೊಳ್ಳ: ವಿಷಮ ಜ್ವರದಿಂದ ತನ್ನ ದೇಹದ ಸ್ವಾಧೀನ ಕಳೆದುಕೊಂಡ ಮಾಲತಿ ಕೃಷ್ಣಮೂರ್ತಿ ಹೊಳ್ಳ ಮಾಡಿರುವ ಸಾಧನೆಯೂ ಎಲ್ಲರಿಗೂ ಸ್ಪೂರ್ತಿಯಾಗುವಂತದ್ದು. ವಿವಿಧ ಪ್ಯಾರಾ ಒಲಿಂಪಿಕ್‍ಗಳಲ್ಲಿ ಭಾಗವಹಿಸಿ 300ಕ್ಕೂ ಹೆಚ್ಚು ಮೆಡಲ್‍ಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Published in Vijayakarnataka Mini