Tuesday, 29 November 2016

ಏರ್ ಟ್ರಾಫಿಕ್ ಕಂಟ್ರೋಲರ್ ಉದ್ಯೋಗ ಪಡೆಯುವುದು ಹೇಗೆ?

SHARE
ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಸಮರ್ಥವಾಗಿ ಆಗುವಂತೆ ನೋಡಿಕೊಳ್ಳುವ `ಏರ್ ಟ್ರಾಫಿಕ್ ಕಂಟ್ರೋಲರ್' ಉದ್ಯೋಗ ಪಡೆಯುವುದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ನಮ್ಮ ರಾಜ್ಯದಲ್ಲಿ ಬಹುತೇಕ ಪ್ರತಿಭಾವಂತರು ಯಾವೆಲ್ಲ ಉದ್ಯೋಗಗಳ ಲಭ್ಯತೆಯಿದೆ? ಏನು ಓದಿದರೆ ಯಾವ ಹುದ್ದೆ ಪಡೆಯಬಹುದು ಎಂಬ ಸಮರ್ಪಕ ಮಾಹಿತಿಯಿಲ್ಲದ ಕಾರಣದಿಂದಲೇ ಹಲವು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಗೊತ್ತಿರದ ಅಥವಾ ಸಮರ್ಪಕ ಮಾಹಿತಿ ಇಲ್ಲದ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್' ಸಹ ಒಂದು. ಬನ್ನಿ, ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.
ರಸ್ತೆಯಲ್ಲಿ ವಾಹನಗಳನ್ನು ನಿಯಂತ್ರಿಸುವ ಟ್ರಾಫಿಕ್ ಪೆÇಲೀಸರನ್ನು ನೀವು ನೋಡಿದ್ದೀರಿ. ಸುಗಮ ವಾಹನ ಸಂಚಾರಕ್ಕೆ ಇವರ ಕೊಡುಗೆ ಅಪಾರವಾದದ್ದು. ಹಾಗೆಯೇ, ಆಕಾಶಕ್ಕೆ ರೊಂಯ್ಯನೆ ನೆಗೆಯುವ, ಭೂಮಿಗೆ ಇಳಿಯುವ ಅಷ್ಟೊಂದು ವಿಮಾನಗಳನ್ನು ವಿಮಾನ ನಿಲ್ದಾಣಗಳಲ್ಲಿ ನಿಯಂತ್ರಿಸಲು ಟ್ರಾಫಿಕ್ ಪೆÇಲೀಸರು ಇದ್ದಾರೆ. ಅವರ ಉದ್ಯೋಗದ ಹೆಸರು `ಏರ್ ಟ್ರಾಫಿಕ್ ಕಂಟ್ರೋಲರ್'. ಇವರ ಕೆಲಸ ಟ್ರಾಫಿಕ್ ಪೆÇಲೀಸರಂತೆಯೇ ಆದರೂ, ಕೆಲಸದ ರೀತಿ ರಿವಾಜುಗಳು ಟ್ರಾಫಿಕ್ ಪೆÇಲೀಸರಿಗಿಂತ ಸಂಪೂರ್ಣ ಭಿನ್ನ. ಅತ್ಯಧಿಕ ವೇಗದಲ್ಲಿ ಆಕಾಶದಲ್ಲಿ ಹಾರುವ ಇವುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್‍ಗಳೂ ಕೊಂಚ ಮೈಮರೆತರೂ ಭಾರೀ ಅನಾಹುತ ಸಂಭವಿಸಬಹುದು. ವಿಮಾನ ನಿಲ್ದಾಣಗಳಲ್ಲಿ ಇರುವ ಆಕರ್ಷಕ ಮತ್ತು ಅತ್ಯಗತ್ಯ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್' ಸಹ ಪ್ರಮುಖವಾದದ್ದು. ಈಗಾಗಲೇ ಆಕಾಶದಲ್ಲಿ ವಿಮಾನಗಳ ದಟ್ಟಣೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ವಿಮಾನಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಈ ಉದ್ಯೋಗಕ್ಕೆ ಉತ್ತಮ ಬೇಡಿಕೆಯಿದೆ.

* ಏರ್ ಟ್ರಾಫಿಕ್ ಕಂಟ್ರೋಲರ್ ಆಗಬೇಕಿದ್ದರೆ ಯಾವ ಎಗ್ಸಾಂ ಪಾಸ್ ಆಗಬೇಕು?
ಸಿವಿಲ್ ಎಟಿಸಿ ಎಂಟ್ರೆನ್ಸ್ ಎಗ್ಸಾಂ ಪಾಸ್ ಆಗಬೇಕು.

* ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಲು ಇರಬೇಕಾದ ಸಾಮಾನ್ಯ ವಿದ್ಯಾರ್ಹತೆ ಏನು?
ಎಲೆಕ್ಟ್ರಾನಿಕ್ಸ್/ ಟೆಲಿ ಕಮ್ಯುನಿಕೇಷನ್/ರೇಡಿಯೊ ಎಂಜಿನಿಯರಿಂಗ್/ಎಲೆಕ್ಟ್ರಾನಿಕ್ಸ್ ಸ್ಪೆಷಲೈಜೇಷನ್‍ನಲ್ಲಿ ಎಲೆಕ್ಟ್ರಿಕಲ್‍ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು ಎಟಿಸಿ ಎಂಟೆನ್ಸ್ ಎಗ್ಸಾಂಗೆ ಅರ್ಜಿ ಸಲ್ಲಿಸಬಹುದು. ವೈರ್‍ಲೆಸ್ ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್, ರೇಡಿಯೋ ಫಿಸಿಕ್ಸ್ ಅಥವಾ ರೇಡಿಯೊ ಎಂಜಿನಿಯರಿಂಗ್ ಅನ್ನು ವಿಶೇಷ ವಿಷಯವಾಗಿ ಆಯ್ಕೆ ಮಾಡಿಕೊಂಡು ಎಂಎಸ್ಸಿ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು. ಇವುಗಳಲ್ಲಿ ಶೇಕಡ 60ಕ್ಕಿಂತ ಹೆಚ್ಚು ಅಂಕ ಪಡೆದವರು ಮಾತ್ರ ಪರೀಕ್ಷೆ ಬರೆಯಬಹುದಾಗಿದೆ.

* ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಬರೆಯಲು ವಯೋಮಿತಿ ಎಷ್ಟು?
ಕನಿಷ್ಠ 21 ವರ್ಷ. ಗರಿಷ್ಠ 27 ವರ್ಷ.

* ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಲಿಖಿತ ಪರೀಕ್ಷೆ, ಧ್ವನಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಶೇಕಡ 50ರಷ್ಟು ಪ್ರಶ್ನೆಗಳಿರುತ್ತವೆ. ಉಳಿದ ಶೇಕಡ 50ರಷ್ಟು ಪ್ರಶ್ನೆಗಳು ಸಾಮಾನ್ಯ ಜ್ಞಾನ, ಸಾಮಾನ್ಯ ಬುದ್ಧಿಮತ್ತೆ(ಇಂಟಲಿಜೆನ್ಸ್), ಜನರಲ್ ಆ್ಯಪ್ಟಿಟ್ಯೂಡ್, ಇಂಗ್ಲಿಷ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆ ಪಾಸ್ ಆದ ನಂತರ ಧ್ವನಿ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ.

* ಎಟಿಸಿ ಎಂಟ್ರೆನ್ಸ್ ಎಗ್ಸಾಂನಲ್ಲಿ ಒಮ್ಮೆ ಅಭ್ಯರ್ಥಿಗಳು ಆಯ್ಕೆಯಾದ ನಂತರ ಮುಂದಿನ ತರಬೇತಿಗೆ ಎಲ್ಲಿಗೆ ಕಳುಹಿಸಲಾಗುತ್ತದೆ?
ಅಲಹಾಬಾದ್ ಅಥವಾ ಹೈದರಾಬಾದ್‍ನಲ್ಲಿರುವ ಸಿವಿಲ್ ಏವಿಯೇಷನ್ ಟ್ರೈನಿಂಗ್ ಕಾಲೇಜುಗಳಿಗೆ ಕಳುಹಿಸಲಾಗುತ್ತದೆ.

* ತರಬೇತಿ ಅವಧಿ ಎಷ್ಟು? ಯಾವೆಲ್ಲ ಮಾಡ್ಯುಲ್‍ಗಳನ್ನು ಓದಬೇಕಾಗುತ್ತದೆ ಮತ್ತು ಪ್ರಾಕ್ಟಿಕಲ್‍ನಲ್ಲಿ ಏನೆಲ್ಲ ಇರುತ್ತದೆ?
ಈಗ ತರಬೇತಿ ಅವಧಿಯು ಸುಮಾರು 1 ವರ್ಷದ್ದಾಗಿದೆ. ಅಂದರೆ 6 ತಿಂಗಳ ಎರಡು ವಿಭಾಗದಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್‍ಗಳು: ಏರ್ ಟ್ರಾಫಿಕ್ ಸರ್ವೀಸಸ್, ಏರೊಡ್ರೊಮ್ಸ್ ಆ್ಯಂಡ್ ಗ್ರೌಂಡ್ ಏಯ್ಡ್‍ಸ್, ಏರ್ ಲಿಜಿಸ್ಲೆಷನ್, ಮೆಟಿಯೊರೊಲಾಜಿ, ಕಮ್ಯುನಿಕೇಷನ್ ಪೆÇ್ರಸಿಜರ್, ಟೆಕ್ನಿಕಲ್, ಸರ್ಚ್ ಆ್ಯಂಡ್ ರಿಸ್ಕ್ಯೂ, ಏರ್ ನ್ಯಾವಿಗೇಷನ್ ಇತ್ಯಾದಿ ಮಾಡ್ಯುಲ್‍ಗಳಿರುತ್ತವೆ.

* ತರಬೇತಿ ಖರ್ಚು ಎಷ್ಟು?
ವೆಚ್ಚವನ್ನು ದೇಶದ ವಿಮಾನಯಾನ ಪ್ರಾಧಿಕಾರ ನೋಡಿಕೊಳ್ಳುತ್ತದೆ.

* ತರಬೇತಿಯಲ್ಲಿ ಅನರ್ಹತೆ ಪಡೆಯುವ ಸಾಧ್ಯತೆ ಇದೆಯೇ?
ಹೌದು, ಅಭ್ಯರ್ಥಿಯು ಎರಡು ಬಾರಿ ಪರೀಕ್ಷೆ ಬರೆದರೂ ಶೇಕಡ 70ಕ್ಕಿಂತ ಹೆಚ್ಚು ಅಂಕ ಪಡೆಯದಿದ್ದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಆಗುವ ಅರ್ಹತೆ ಕಳೆದುಕೊಳ್ಳುತ್ತಾರೆ.

* ತರಬೇತಿ ಮುಗಿದ ನಂತರ ಅಭ್ಯರ್ಥಿಗಳಿಗೆ ಮೊದಲು ದೊರಕುವ ಉದ್ಯೋಗ ಯಾವುದು?
ಜೂನಿಯರ್ ಎಕ್ಸಿಕ್ಯೂಟಿವ್(ಎಟಿಸಿ).

* ಯಾರು ಕೆಲಸ ಕೊಡುತ್ತಾರೆ?
ಭಾರತದಲ್ಲಿ ಏರ್ ಪೆÇೀರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಮಾತ್ರ ಪ್ರಮುಖ ಉದ್ಯೋಗದಾತ. ಎಚ್‍ಎಎಲ್ ಇತ್ಯಾದಿ ಸಂಸ್ಥೆಗಳಲ್ಲಿಯೂ ಇಂತಹ ಉದ್ಯೋಗಗಳು ಇರುತ್ತವೆ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಎಎಐ ಜಾಬ್ ನೀಡುತ್ತದೆ. ಒಂಥರಾ ಇದು ಜಾಬ್ ಗ್ಯಾರಂಟಿ ಕೋರ್ಸ್ .

* ವೇತನ ಎಷ್ಟಿರುತ್ತದೆ?
ತರಬೇತಿ ಅವಧಿಯಲ್ಲಿ ಟ್ರೈನಿಗಳಿಗೆ ಉಚಿತ ವಸತಿಯೊಂದಿಗೆ 7,500 ರೂ. ನೀಡಲಾಗುತ್ತದೆ. ಜೂನಿಯರ್ ಎಕ್ಸಿಕ್ಯೂಟಿವ್(ಎಟಿಸಿ)-ಗೆ 16,400ರಿಂದ 40 ಸಾವಿರ ರೂ. ಇರುತ್ತದೆ. ಮ್ಯಾನೇಜರ್(ಎಟಿಸಿ)ಗೆ 24,900ರೂ.ನಿಂದ 50,500 ರೂ.ವರೆಗೆ ಇರುತ್ತದೆ. ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್)(ನಾನ್ ಎಕ್ಸಿಕ್ಯೂಟಿವ್ ಕೇಡರ್)ಗೆ 14, 500 ರೂ.ನಿಂದ 33, 500 ರೂ.ವರೆಗೆ ಇರುತ್ತದೆ.

* ಉದ್ಯೋಗದ ನೆಗೆಟಿವ್ ಮತ್ತು ಪಾಸಿಟೀವ್ ಗುಣಗಳೇನು?
ಪಾಸಿಟೀವ್: ಚಾಲೆಂಜಿಂಗ್ ಎನ್ವಾಯರ್ನ್‍ಮೆಂಟ್, ಕೆಲವೇ ಸೆಕೆಂಡಿನಲ್ಲಿ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ, ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಅವಕಾಶ ಇದೆ.
ನೆಗೆಟಿವ್: ಅತ್ಯಧಿಕ ಒತ್ತಡವಿರುತ್ತದೆ. ಶಿಫ್ಟ್ ಡ್ಯೂಟಿ ಇರುತ್ತದೆ. ಹೆಚ್ಚುವರಿ ಕೆಲಸದ ಒತ್ತಡ ಇರುತ್ತದೆ. ರಜೆಯ ಕೊರತೆ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ರಜೆ ಸಿಗುವುದು ಅಪರೂಪ, ಅತ್ಯಧಿಕ ವೃತ್ತಿಪರ ರಿಸ್ಕ್ ಇರುವ ಕೆಲಸ ಇದಾಗಿದೆ.

* ಎಟಿಸಿ ಅಧಿಕಾರಿಗೆ ಯಾವೆಲ್ಲ ರ್ಯಾಂಕ್ ಅಥವಾ ಭಡ್ತಿ ದೊರಕುತ್ತದೆ?
ಜೂನಿಯರ್ ಎಕ್ಸಿಕ್ಯೂಟಿವ್, ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಜಾಯಿಂಟ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಡೈರೆಕ್ಟರ್(ಎಟಿಎಂ), ಎಎಐ ಆಡಳಿತ ಮಂಡಳಿಯ ಸದಸ್ಯ(ಎಟಿಎಂ).

* ತರಬೇತಿ ಮತ್ತು ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸಗಳ ಲಿಂಕ್

www.aai.aero

www.atcguild.com

www.aviationmagic.com

www.aaians.org

www.iata.org


Published in Vijayakarnataka Mini
SHARE

Author: verified_user

0 ಪ್ರತಿಕ್ರಿಯೆಗಳು: