* ಪ್ರವೀಣ್ ಚಂದ್ರ
ಬೆಂಗಳೂರಿನ ಜಯನಗರದ ಒಂದು ಕಾಲೇಜು. ಅದಿತಿ ಇನ್ನೇನೂ ಕ್ಲಾಸ್ ಪ್ರವೇಶಿಸಬೇಕೆಂದಿದ್ದಳು. ಆಗ ಅವಳಿಗೆ ವಾಣಿಯಿಂದ ಒಂದು ಎಸ್‍ಎಂಎಸ್ ಬರುತ್ತದೆ. `ವೆರಿ ಅರ್ಜೆಂಟ್, ನೀಡೆಡ್ 4 ಸ್ಕ್ರೈಬ್ಸ್. ಸುರಾನ ಕಾಲೇಜು' ಎಂದಿರುತ್ತೆ. ಕ್ಲಾಸ್‍ನೊಳಗೆ ಹೋದವಳೇ ತನ್ನ ಮೂವರು ಗೆಳತಿಯರನ್ನು `ಕ್ಲಾಸ್ ಬಂಕ್ ಮಾಡೋಣ' ಎಂದು ಹೊರಗೆಳೆದುಕೊಂಡು ಬರುತ್ತಾಳೆ. ಎಲ್ಲೋ ಫಿಲ್ಮ್ ನೋಡುವ ಪ್ಲಾನ್ ಇರಬೇಕು ಎಂದು ಎಲ್ಲರೂ ಖುಷಿಯಿಂದಲೇ ಹೊರಬರುತ್ತಾರೆ. ಆದರೆ ಆಕೆ ಅವರೆಲ್ಲರನ್ನೂ ಕರೆದುಕೊಂಡು ಬಂದದ್ದು ಸುರಾನ ಕಾಲೇಜಿಗೆ.
ಅವರೆಲ್ಲರು ಎಗ್ಸಾಂ ಹಾಲ್ ಪ್ರವೇಶಿಸಿದರು. ಅಲ್ಲಿ ತಮಗೆ ನಿಗದಿಪಡಿಸಿದ ದೃಷ್ಟಿ ವಿಶೇಷ ಚೇತನ ವಿದ್ಯಾರ್ಥಿಯ ಮುಂದೆ ಕುಳಿತರು. ಅವರಿಗೆ ಪ್ರಶ್ನೆಪತ್ರಿಕೆಯಲ್ಲಿದ್ದ ಪ್ರಶ್ನೆಗಳನ್ನು ಓದಿ ಹೇಳತೊಡಗಿದರು. ಆ ವಿದ್ಯಾರ್ಥಿ ಹೇಳಿದ ಉತ್ತರಗಳನ್ನು ಉತ್ತರ ಪತ್ರಿಕೆಯಲ್ಲಿ ಟಿಕ್ ಮಾಡತೊಡಗಿದರು. ಈ ರೀತಿ ಎಗ್ಸಾಂ ಬರೆಯುವವರನ್ನು ಸ್ಕ್ರೈಬ್ ಅಥವಾ ಸಹಾಯಕ ಬರಹಗಾರರು ಎನ್ನುತ್ತಾರೆ. ಪರೀಕ್ಷಾ ಅಭ್ಯರ್ಥಿ ಹೇಳಿದ್ದನ್ನೇ ಉತ್ತರ ಪತ್ರಿಕೆಯಲ್ಲಿ ಟಿಕ್ ಮಾಡುತ್ತಾರೋ ಎಂದು ನಿಗಾವಹಿಸಲು ಪಕ್ಕದಲ್ಲಿ ಒಬ್ಬರು ಇನ್ವಿಜಲೇಟರ್ ಇರುತ್ತಾರೆ.
ಕಾಲೇಜು ವಿದ್ಯಾರ್ಥಿಗಳ ಫೇವರಿಟ್
ದೃಷ್ಟಿ ವಿಶೇಷ ಚೇತನರಿಗೆ ಪರೀಕ್ಷೆ ಬರೆಯಲು ನೆರವಾಗುವ ಕಾರ್ಯ ಕಾಲೇಜಿನ ಕೆಲವು ತರುಣ ತರುಣಿಯರಿಗೆ ಅಚ್ಚುಮೆಚ್ಚು. `ಈ ವರ್ಷ ಒಟ್ಟು ಹನ್ನೆರಡು ಪರೀಕ್ಷೆ ಬರೆದಿದ್ದೇನೆ. ನನಗೆ ಸಿಕ್ಕ ಕ್ಯಾಂಡಿಡೆಟ್ ತುಂಬಾ ಬ್ರಿಲಿಯಂಟ್ ಆಗಿದ್ದ. ತುಂಬಾ ವಿಷಯ ತಿಳಿದುಕೊಂಡಿದ್ದ' ಎನ್ನುತ್ತಾರೆ ಕೃಪಾ ಕೆ. ಆಕೆ ಆರ್‍ವಿ ಕಾಲೇಜಿನ ವಿದ್ಯಾರ್ಥಿನಿ. `ಪಾಪಾ, ಅವರಿಗೂ ನಮ್ಮಂತೆ ಕಣ್ಣು ಕಾಣುತ್ತಿದ್ದರೆ ಚೆನ್ನಾಗಿತ್ತು. ಆದರೆ, ಅವರ ಗ್ರಹಿಕಾ ಶಕ್ತಿ ತುಂಬಾ ಉತ್ತಮವಾಗಿರುತ್ತದೆ. ಎಷ್ಟೆಷ್ಟೋ ಕಷ್ಟದ ಉತ್ತರಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಈ ರೀತಿ ಎಗ್ಸಾಂ ಬರೆಯುವುದು ಸಮಾಜ ಸೇವೆಯೂ ಹೌದು. ನಮಗೂ ವಿಶೇಷ ಅನುಭವ ನೀಡುತ್ತದೆ' ಎನ್ನುತ್ತಾರೆ ಅವರು.
ಆಕೆಯ ಗೆಳತಿ ಅನುಪಮ ವಿಎಸ್ ಅನುಭವ ಭಿನ್ನವಾಗಿತ್ತು. `ಆ ವಿದ್ಯಾರ್ಥಿ ಏನೂ ಓದಿಕೊಂಡು ಬಂದಿರಲಿಲ್ಲ. ನೀವೇ ನಿಮಗೆ ಗೊತ್ತಿದ್ದನ್ನೇ ಟಿಕ್ ಮಾಡಿ ಎನ್ನುತ್ತಿದ್ದ. ಈ ರೀತಿ ಮಾಡಿದರೆ ನಿನಗೆ ಏನು ಉಪಯೋಗ' ಎಂದು ಪ್ರಶ್ನಿಸಿದೆ. `ನಮಗೆ ಒಂದು ಡಿಗ್ರಿ ಸಿಕ್ಕರೆ ಸಾಕು ಮೇಡಂ. ಎಲ್ಲಾದರೂ ಕೆಲಸ ಸಿಗಬಹುದು ಎಂದಾಗ ಪಾಪ ಎನಿಸಿತು' ಎಂದರು.
`ದೃಷ್ಟಿ ಚೇತನರಿಗೆ ಪರೀಕ್ಷೆ ಬರೆಯಲು ಕಾಲೇಜು ವಿದ್ಯಾರ್ಥಿಗಳು ಆಸಕ್ತಿ ವಹಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಸಬ್ಜೆಕ್ಟ್ ಬರೆಯಲು ಮಾತ್ರ ಬರುತ್ತಾರೆ. ಆದರೆ, ಇಂತಹ ಸಮಾಜ ಸೇವೆ ಮಾಡಲು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿವಹಿಸಬೇಕು. ಈ ಮೂಲಕ ಅಂಧರ ಬದುಕು ಬೆಳಗಲು ಸಹಾಯ ಹಸ್ತ ನೀಡಬೇಕು' ಎನ್ನುತ್ತಾರೆ ಆರ್. ಜೆ. ಪೈ ಮಜೈನ್. ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜೆಎಂಆರ್ ಸ್ಕೂಲ್ ಫಾರ್ ಬ್ಲೈಂಡ್ ಚಿಲ್ಡ್ರನ್ಸ್‍ನ ಮಾಜಿ ಅಧ್ಯಕ್ಷರು.
ಟೆಕಿಗಳಿಗೂ ಅಚ್ಚುಮೆಚ್ಚು
ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲ. ಐಟಿಬಿಟಿಗಳಲ್ಲಿ ಕೆಲಸ ಮಾಡುವವರೂ ದೃಷ್ಟಿ ಚೇತನರಿಗೆ ಪರೀಕ್ಷೆ ಬರೆಯಲು ನೆರವಾಗುತ್ತಾರೆ. ಸಾಫ್ಟ್‍ವೇರ್ ಉದ್ಯೋಗಿಯಾಗಿರುವ 25 ವರ್ಷ ವಯಸ್ಸಿನ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ನಿವಾಸಿ ಕಾರ್ತಿಕ್ ಎಂ ಸಹ ಇಂತಹ ಅನೇಕ ಪರೀಕ್ಷೆಗಳನ್ನು ಬರೆದಿದ್ದಾರೆ. ಜಯನಗರ ನ್ಯಾಷನಲ್ ಕಾಲೇಜು, ಶೇಷಾದ್ರಿಪುರಂ ಕಾಲೇಜುಗಳಲ್ಲಿ ಸ್ಕ್ರೈಬ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಾಗವೇಣಿ ಎಂಬ ವಿದ್ಯಾರ್ಥಿನಿಗೆ ಬ್ಯಾಂಕ್ ಎಗ್ಸಾಂ ಬರೆಯಲೂ ಇವರು ಸಹಾಯಕ ಬರಹಗಾರರಾಗಿದ್ದರು. ಮಾತ್ರವಲ್ಲದೆ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಪಾಠ ಓದಿ ಹೇಳುವುದು, ರೆಕಾರ್ಡ್ ಕೇಳಿಸುವುದು, ಓದಿನ ಕುರಿತಾದ ಸಂದೇಹಗಳನ್ನು ನಿವಾರಿಸುವ ಕಾರ್ಯವನ್ನು ಮಾಡುತ್ತಾರೆ. ಇವರು ಕಾಲೇಜಿನಲ್ಲಿ ಓದುತ್ತಿದ್ದಾಗ ಈ ಕಾರ್ಯಕ್ಕೆ ಪ್ರತಿದಿನ ಒಂದಿಷ್ಟು ಸಮಯ ಮೀಸಲಿಡುತ್ತಿದ್ದರಂತೆ. ಈಗ ಉದ್ಯೋಗ ಸಿಕ್ಕ ನಂತರ ವಾರಾಂತ್ಯಗಳಲ್ಲಿ ಈ ಸೋಷಿಯಲ್ ವರ್ಕ್ ಮಾಡುತ್ತಾರೆ. ಇವರು ಆರಂಭದಲ್ಲಿ ಸಮರ್ಥನಂ ಎಂಬ ಎನ್‍ಜಿಒ ಜೊತೆ ಕಾರ್ಯನಿರ್ವಹಿಸುತ್ತಿದ್ದರು. ನಂತರ ಇಂತಹ ವಿಶೇಷ ಚೇತನರಿಗಾಗಿಯೇ ಸ್ಟೆಪ್ಪಿಂಗ್ ಸ್ಟೋನ್ ಎಂಬ ಕಂಪ್ಯೂಟರ್ ತರಬೇತಿ ಕೇಂದ್ರ ತೆರೆದಿದ್ದಾರೆ.
ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‍ನಲ್ಲಿ ಕೆಲಸ ಮಾಡುವ ವಾಣಿ ಶೆಟ್ಟಿ ಹಲವು ಬಾರಿ ಸ್ಕ್ರೈಬ್ ಆಗಿ ಸೇವೆ ಸಲ್ಲಿಸಿದ್ದಾರೆ. ಸೋಷಿಯಲ್ ನೆಟ್‍ವರ್ಕ್ ಸೈಟ್‍ಗಳ ಮೂಲವೂ ಇಂತಹ ವಾಲೆಂಟರ್ಸ್‍ಗಳನ್ನು ಕಂಡುಹಿಡಿಯಬಹುದು ಎನ್ನುತ್ತಾರೆ ಇವರು. ಫೇಸ್‍ಬುಕ್‍ನಲ್ಲಿ ಬ್ಲೈಂಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಆಸಕ್ತರು ಬೇಕಿದ್ದಾರೆ ಎಂದು ಸ್ಟೇಟಸ್ ಹಾಕಿದ್ದಾರಂತೆ. ಬಹಳಷ್ಟು ಜನರು ಪ್ರತಿಕ್ರಿಯೆ ನೀಡಿದ್ದರು ಎನ್ನುತ್ತಾರೆ.
ನೀವೂ ವಾಲೆಂಟರ್ ಆಗಿ
ನಿಮ್ಮ ಊರಿನಲ್ಲಿರುವ, ಕಾಲೇಜಿನಲ್ಲಿರುವ ದೃಷ್ಟಿ ವಿಶೇಷಚೇತನರನ್ನು ನೇರವಾಗಿ ಸಂಪರ್ಕಿಸಿ ಅವರಿಗೆ ಓದಲು ಅಥವಾ ಪರೀಕ್ಷೆ ಬರೆಯಲು ನೆರವಾಗಬಹುದು. ಇಲ್ಲವಾದರೆ ಎನ್‍ಜಿಒಗಳ ನೆರವು ಪಡೆಯಬಹುದು. ಸಮರ್ಥನಂ ಎಂಬ ಎನ್‍ಜಿಒ ರಾಜ್ಯದಲ್ಲಿ ಬೆಂಗಳೂರು, ಗದಗ, ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ ಮಿತ್ರಜ್ಯೋತಿ ಎಂಬ ಎನ್‍ಜಿಒ ಕಳೆದ 25 ವರ್ಷಗಳಿಂದ ಇಂತಹ ಸೇವೆ ನೀಡುತ್ತಿದೆ. ನೀವು ನಿಮ್ಮ ಊರಿನಲ್ಲಿರುವ ಇಂತಹ ಸಂಸ್ಥೆಗಳನ್ನು ಹುಡುಕಿ ವಾಲೆಂಟರ್ ಆಗಬಹುದು.
ದೃಷ್ಟಿ ವಿಶೇಷಚೇತನರ ಶಿಕ್ಷಣಕ್ಕೆ ನೀವು ಹಲವು ಬಗೆಯಲ್ಲಿ ನೆರವು ನೀಡಬಹುದು. ಉದಾಹರಣೆಗೆ ನೀವು ಪಾಠ ಓದಬೇಕು. ವಿಷುಯಲ್ ಚಾಲೆಂಜ್ಡ್ ವಿದ್ಯಾರ್ಥಿಗಳು ಅದನ್ನು ಕೇಳಿಸಿಕೊಳ್ಳುತ್ತಾರೆ. ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನೀವು ಸ್ಕ್ರೈಬ್ ಸರ್ವೀಸ್ ನೀಡಬಹುದು. ಇಂತಹ ವಿದ್ಯಾರ್ಥಿಗಳಿಗೆ ಟ್ಯೂಷನ್ ಸೇವೆಯನ್ನೂ ನೀಡಬಹುದು. ಕೆಲವೊಂದು ಎನ್‍ಜಿಒಗಳು ನಡೆಸುವ ಇಂತಹ ಸೇವೆಯಲ್ಲಿ ಆನ್‍ಲೈನ್ ಮೂಲಕ ಟ್ಯೂಷನ್ ನಡೆಸುವ ವ್ಯವಸ್ಥೆಯೂ ಇರುತ್ತದೆ. ಅಂದರೆ, ಸ್ಕೈಪ್ ಮೂಲಕ ವಾಯ್ಸ್ ಚಾಟ್ ಮಾಡುತ್ತ ಈ ಮಕ್ಕಳಿಗೆ ಪಾಠ ಮಾಡಬಹುದು. ಇಂಗ್ಲಿಷ್ ಭಾಷೆ, ಸಾಫ್ಟ್ ಸ್ಕಿಲ್, ಪರ್ಸನಲಿಟಿ ಡೆವಲಪ್‍ಮೆಂಟ್ ಬಗ್ಗೆಯೂ ಹೇಳಿಕೊಡಬಹುದು. ಇಂತಹ ಕೆಲವು ಮಕ್ಕಳು ಅತೀವ ಬೇಸರದಲ್ಲಿರುತ್ತಾರೆ. ಅವರಿಗೆ ಕೌನ್ಸಿಲಿಂಗ್ ನಡೆಸಿ ಬದುಕಿನಲ್ಲಿ ಹುಮ್ಮಸ್ಸು ತುಂಬಬಹುದು. ಕೇವಲ ಶಿಕ್ಷಣ ಮಾತ್ರವಲ್ಲದೆ ಸಂಗೀತ, ಡ್ಯಾನ್ಸ್, ಆಟ ಮತ್ತು ಇತರ ಚಟುವಟಿಕೆಗಳನ್ನು ಇವರಿಗೆ ಹೇಳಿಕೊಡಬಹುದು. ಒಟ್ಟಾರೆ ವಿಶೇಷ ಚೇತನರಿಗೆ ಕಣ್ಣಾಗುವ ಹೃದಯ ನಿಮ್ಮಲ್ಲಿದ್ದರೆ ಸಾಕು.
ಅನುಕಂಪ ಬೇಡ
ದೃಷ್ಟಿ ವಿಶೇಷ ಚೇತನರಿಗೆ ಬದಲಿ ಬರಹಗಾರರಾಗಿ ಅನುಕಂಪದಿಂದ ಕಾರ್ಯನಿರ್ವಹಿಸಬಾರದು. ಅವರು ನಮ್ಮಂತೆಯೇ ಎಂಬ ಫ್ರೆಂಡ್ಲಿ ಭಾವನೆಯಿಂದ ಈ ಕಾರ್ಯನಿರ್ವಹಿಸಬೇಕು. ಇದೊಂದು ಸೋಷಿಯಲ್ ರೆಸ್ಪಾನ್ಸಿಬಿಲಿಟಿ.
ಕಾರ್ತಿಕ್ ಎಂ | ಟೆಕಿ, ಬೆಂಗಳೂರು
ಕನ್ನಡಕ್ಕೆ ಇ-ಸ್ಪೀಕ್ ಕೊಟ್ಟ ಶ್ರೀಧರ್
ದೃಷ್ಟಿ ವಿಶೇಷ ಚೇತನರಿಗೆ ದೃಷ್ಟಿ ವಿಶೇಷ ಚೇತನ ಯುವಕ ಶ್ರೀಧರ್ ಟಿಎಸ್ ನೀಡಿದ ಕೊಡುಗೆ ಇಲ್ಲಿ ಸ್ಮರಿಸಲೇಬೇಕು. ಶ್ರೀಧರ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವರು. ಸ್ಕ್ರೀನ್ ರೀಡರ್ ತಂತ್ರಾಂಶವನ್ನು ಕನ್ನಡ ಯೂನಿಕೋಡ್ ಅಕ್ಷರಗಳನ್ನು ಓದಲು ಸಾಧ್ಯವಾಗುವಂತಹ ಇ-ಸ್ಪೀಕ್ ತಂತ್ರಾಂಶವನ್ನು ಶ್ರೀಧರ್ ಟಿಎಸ್ ನೆರವಿನಿಂದ ಅಭಿವೃದ್ಧಿಪಡಿಸಲಾಗಿದೆ. ಇದು ಕಂಪ್ಯೂಟರ್ ಪರದೆಯಲ್ಲಿ ಮೂಡುವ ಅಕ್ಷರಗಳನ್ನು `ಟೆಕ್ಸ್ಟ್ ಟು ಸ್ಪೀಚ್' ಮೂಲಕ ಧ್ವನಿ ರೂಪದಲ್ಲಿ ಕೇಳಿಸುತ್ತದೆ. ಇದರಿಂದ ಕಂಪ್ಯೂಟರ್‍ನಲ್ಲಿರುವ ವಿಷಯಗಳನ್ನು ಪಡೆದುಕೊಳ್ಳಲು ಮತ್ತು ಐಟಿಬಿಟಿಯಂತಹ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಲು ದೃಷ್ಟಿ ವಿಶೇಷ ಚೇತನರಿಗೆ ಸಾಧ್ಯವಾಗಿದೆ. ``ನನಗೆ ಶಿಕ್ಷಣ ಪಡೆಯಲು ಈ ಇ-ಸ್ಪೀಕ್ ಸಾಕಷ್ಟು ನೆರವಾಗಿದೆ. ಜೊತೆಗೆ, ನನ್ನ ಕುಟುಂಬ, ಕಸಿನ್ಸ್, ಕಾಲೇಜ್ ಬ್ಯಾಚ್‍ಮೇಟ್ಸ್, ಶಿಕ್ಷಕರ ಸಹಾಯ ಸದಾ ಸ್ಮರಣೀಯ. ದೃಷ್ಟಿ ವಿಶೇಷ ಚೇತನರಿಗೆ ಪಾಠ ಓದಲು, ಪರೀಕ್ಷೆ ಬರೆಯಲು ನೆರವಾಗಲೂ ತಾವೆಲ್ಲರೂ ಸ್ನೇಹಿತರಾಗಿ ಮುಂದೆ ಬರಬೇಕು' ಎಂದು ಮನವಿ ಮಾಡಿದ್ದಾರೆ ಶ್ರೀಧರ್ ಟಿಎಸ್.
facebook page- write for blind
0 ಪ್ರತಿಕ್ರಿಯೆಗಳು: