Tuesday, 29 November 2016

ಏರ್ ಟ್ರಾಫಿಕ್ ಕಂಟ್ರೋಲರ್ ಉದ್ಯೋಗ ಪಡೆಯುವುದು ಹೇಗೆ?

ಏರ್ ಟ್ರಾಫಿಕ್ ಕಂಟ್ರೋಲರ್ ಉದ್ಯೋಗ ಪಡೆಯುವುದು ಹೇಗೆ?

ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಸಮರ್ಥವಾಗಿ ಆಗುವಂತೆ ನೋಡಿಕೊಳ್ಳುವ `ಏರ್ ಟ್ರಾಫಿಕ್ ಕಂಟ್ರೋಲರ್' ಉದ್ಯೋಗ ಪಡೆಯುವುದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ನಮ್ಮ ರಾಜ್ಯದಲ್ಲಿ ಬಹುತೇಕ ಪ್ರತಿಭಾವಂತರು ಯಾವೆಲ್ಲ ಉದ್ಯೋಗಗಳ ಲಭ್ಯತೆಯಿದೆ? ಏನು ಓದಿದರೆ ಯಾವ ಹುದ್ದೆ ಪಡೆಯಬಹುದು ಎಂಬ ಸಮರ್ಪಕ ಮಾಹಿತಿಯಿಲ್ಲದ ಕಾರಣದಿಂದಲೇ ಹಲವು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಗೊತ್ತಿರದ ಅಥವಾ ಸಮರ್ಪಕ ಮಾಹಿತಿ ಇಲ್ಲದ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್' ಸಹ ಒಂದು. ಬನ್ನಿ, ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.
ರಸ್ತೆಯಲ್ಲಿ ವಾಹನಗಳನ್ನು ನಿಯಂತ್ರಿಸುವ ಟ್ರಾಫಿಕ್ ಪೆÇಲೀಸರನ್ನು ನೀವು ನೋಡಿದ್ದೀರಿ. ಸುಗಮ ವಾಹನ ಸಂಚಾರಕ್ಕೆ ಇವರ ಕೊಡುಗೆ ಅಪಾರವಾದದ್ದು. ಹಾಗೆಯೇ, ಆಕಾಶಕ್ಕೆ ರೊಂಯ್ಯನೆ ನೆಗೆಯುವ, ಭೂಮಿಗೆ ಇಳಿಯುವ ಅಷ್ಟೊಂದು ವಿಮಾನಗಳನ್ನು ವಿಮಾನ ನಿಲ್ದಾಣಗಳಲ್ಲಿ ನಿಯಂತ್ರಿಸಲು ಟ್ರಾಫಿಕ್ ಪೆÇಲೀಸರು ಇದ್ದಾರೆ. ಅವರ ಉದ್ಯೋಗದ ಹೆಸರು `ಏರ್ ಟ್ರಾಫಿಕ್ ಕಂಟ್ರೋಲರ್'. ಇವರ ಕೆಲಸ ಟ್ರಾಫಿಕ್ ಪೆÇಲೀಸರಂತೆಯೇ ಆದರೂ, ಕೆಲಸದ ರೀತಿ ರಿವಾಜುಗಳು ಟ್ರಾಫಿಕ್ ಪೆÇಲೀಸರಿಗಿಂತ ಸಂಪೂರ್ಣ ಭಿನ್ನ. ಅತ್ಯಧಿಕ ವೇಗದಲ್ಲಿ ಆಕಾಶದಲ್ಲಿ ಹಾರುವ ಇವುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್‍ಗಳೂ ಕೊಂಚ ಮೈಮರೆತರೂ ಭಾರೀ ಅನಾಹುತ ಸಂಭವಿಸಬಹುದು. ವಿಮಾನ ನಿಲ್ದಾಣಗಳಲ್ಲಿ ಇರುವ ಆಕರ್ಷಕ ಮತ್ತು ಅತ್ಯಗತ್ಯ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್' ಸಹ ಪ್ರಮುಖವಾದದ್ದು. ಈಗಾಗಲೇ ಆಕಾಶದಲ್ಲಿ ವಿಮಾನಗಳ ದಟ್ಟಣೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ವಿಮಾನಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಈ ಉದ್ಯೋಗಕ್ಕೆ ಉತ್ತಮ ಬೇಡಿಕೆಯಿದೆ.

* ಏರ್ ಟ್ರಾಫಿಕ್ ಕಂಟ್ರೋಲರ್ ಆಗಬೇಕಿದ್ದರೆ ಯಾವ ಎಗ್ಸಾಂ ಪಾಸ್ ಆಗಬೇಕು?
ಸಿವಿಲ್ ಎಟಿಸಿ ಎಂಟ್ರೆನ್ಸ್ ಎಗ್ಸಾಂ ಪಾಸ್ ಆಗಬೇಕು.

* ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಲು ಇರಬೇಕಾದ ಸಾಮಾನ್ಯ ವಿದ್ಯಾರ್ಹತೆ ಏನು?
ಎಲೆಕ್ಟ್ರಾನಿಕ್ಸ್/ ಟೆಲಿ ಕಮ್ಯುನಿಕೇಷನ್/ರೇಡಿಯೊ ಎಂಜಿನಿಯರಿಂಗ್/ಎಲೆಕ್ಟ್ರಾನಿಕ್ಸ್ ಸ್ಪೆಷಲೈಜೇಷನ್‍ನಲ್ಲಿ ಎಲೆಕ್ಟ್ರಿಕಲ್‍ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು ಎಟಿಸಿ ಎಂಟೆನ್ಸ್ ಎಗ್ಸಾಂಗೆ ಅರ್ಜಿ ಸಲ್ಲಿಸಬಹುದು. ವೈರ್‍ಲೆಸ್ ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್, ರೇಡಿಯೋ ಫಿಸಿಕ್ಸ್ ಅಥವಾ ರೇಡಿಯೊ ಎಂಜಿನಿಯರಿಂಗ್ ಅನ್ನು ವಿಶೇಷ ವಿಷಯವಾಗಿ ಆಯ್ಕೆ ಮಾಡಿಕೊಂಡು ಎಂಎಸ್ಸಿ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು. ಇವುಗಳಲ್ಲಿ ಶೇಕಡ 60ಕ್ಕಿಂತ ಹೆಚ್ಚು ಅಂಕ ಪಡೆದವರು ಮಾತ್ರ ಪರೀಕ್ಷೆ ಬರೆಯಬಹುದಾಗಿದೆ.

* ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಬರೆಯಲು ವಯೋಮಿತಿ ಎಷ್ಟು?
ಕನಿಷ್ಠ 21 ವರ್ಷ. ಗರಿಷ್ಠ 27 ವರ್ಷ.

* ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಲಿಖಿತ ಪರೀಕ್ಷೆ, ಧ್ವನಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಶೇಕಡ 50ರಷ್ಟು ಪ್ರಶ್ನೆಗಳಿರುತ್ತವೆ. ಉಳಿದ ಶೇಕಡ 50ರಷ್ಟು ಪ್ರಶ್ನೆಗಳು ಸಾಮಾನ್ಯ ಜ್ಞಾನ, ಸಾಮಾನ್ಯ ಬುದ್ಧಿಮತ್ತೆ(ಇಂಟಲಿಜೆನ್ಸ್), ಜನರಲ್ ಆ್ಯಪ್ಟಿಟ್ಯೂಡ್, ಇಂಗ್ಲಿಷ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆ ಪಾಸ್ ಆದ ನಂತರ ಧ್ವನಿ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ.

* ಎಟಿಸಿ ಎಂಟ್ರೆನ್ಸ್ ಎಗ್ಸಾಂನಲ್ಲಿ ಒಮ್ಮೆ ಅಭ್ಯರ್ಥಿಗಳು ಆಯ್ಕೆಯಾದ ನಂತರ ಮುಂದಿನ ತರಬೇತಿಗೆ ಎಲ್ಲಿಗೆ ಕಳುಹಿಸಲಾಗುತ್ತದೆ?
ಅಲಹಾಬಾದ್ ಅಥವಾ ಹೈದರಾಬಾದ್‍ನಲ್ಲಿರುವ ಸಿವಿಲ್ ಏವಿಯೇಷನ್ ಟ್ರೈನಿಂಗ್ ಕಾಲೇಜುಗಳಿಗೆ ಕಳುಹಿಸಲಾಗುತ್ತದೆ.

* ತರಬೇತಿ ಅವಧಿ ಎಷ್ಟು? ಯಾವೆಲ್ಲ ಮಾಡ್ಯುಲ್‍ಗಳನ್ನು ಓದಬೇಕಾಗುತ್ತದೆ ಮತ್ತು ಪ್ರಾಕ್ಟಿಕಲ್‍ನಲ್ಲಿ ಏನೆಲ್ಲ ಇರುತ್ತದೆ?
ಈಗ ತರಬೇತಿ ಅವಧಿಯು ಸುಮಾರು 1 ವರ್ಷದ್ದಾಗಿದೆ. ಅಂದರೆ 6 ತಿಂಗಳ ಎರಡು ವಿಭಾಗದಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್‍ಗಳು: ಏರ್ ಟ್ರಾಫಿಕ್ ಸರ್ವೀಸಸ್, ಏರೊಡ್ರೊಮ್ಸ್ ಆ್ಯಂಡ್ ಗ್ರೌಂಡ್ ಏಯ್ಡ್‍ಸ್, ಏರ್ ಲಿಜಿಸ್ಲೆಷನ್, ಮೆಟಿಯೊರೊಲಾಜಿ, ಕಮ್ಯುನಿಕೇಷನ್ ಪೆÇ್ರಸಿಜರ್, ಟೆಕ್ನಿಕಲ್, ಸರ್ಚ್ ಆ್ಯಂಡ್ ರಿಸ್ಕ್ಯೂ, ಏರ್ ನ್ಯಾವಿಗೇಷನ್ ಇತ್ಯಾದಿ ಮಾಡ್ಯುಲ್‍ಗಳಿರುತ್ತವೆ.

* ತರಬೇತಿ ಖರ್ಚು ಎಷ್ಟು?
ವೆಚ್ಚವನ್ನು ದೇಶದ ವಿಮಾನಯಾನ ಪ್ರಾಧಿಕಾರ ನೋಡಿಕೊಳ್ಳುತ್ತದೆ.

* ತರಬೇತಿಯಲ್ಲಿ ಅನರ್ಹತೆ ಪಡೆಯುವ ಸಾಧ್ಯತೆ ಇದೆಯೇ?
ಹೌದು, ಅಭ್ಯರ್ಥಿಯು ಎರಡು ಬಾರಿ ಪರೀಕ್ಷೆ ಬರೆದರೂ ಶೇಕಡ 70ಕ್ಕಿಂತ ಹೆಚ್ಚು ಅಂಕ ಪಡೆಯದಿದ್ದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಆಗುವ ಅರ್ಹತೆ ಕಳೆದುಕೊಳ್ಳುತ್ತಾರೆ.

* ತರಬೇತಿ ಮುಗಿದ ನಂತರ ಅಭ್ಯರ್ಥಿಗಳಿಗೆ ಮೊದಲು ದೊರಕುವ ಉದ್ಯೋಗ ಯಾವುದು?
ಜೂನಿಯರ್ ಎಕ್ಸಿಕ್ಯೂಟಿವ್(ಎಟಿಸಿ).

* ಯಾರು ಕೆಲಸ ಕೊಡುತ್ತಾರೆ?
ಭಾರತದಲ್ಲಿ ಏರ್ ಪೆÇೀರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಮಾತ್ರ ಪ್ರಮುಖ ಉದ್ಯೋಗದಾತ. ಎಚ್‍ಎಎಲ್ ಇತ್ಯಾದಿ ಸಂಸ್ಥೆಗಳಲ್ಲಿಯೂ ಇಂತಹ ಉದ್ಯೋಗಗಳು ಇರುತ್ತವೆ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಎಎಐ ಜಾಬ್ ನೀಡುತ್ತದೆ. ಒಂಥರಾ ಇದು ಜಾಬ್ ಗ್ಯಾರಂಟಿ ಕೋರ್ಸ್ .

* ವೇತನ ಎಷ್ಟಿರುತ್ತದೆ?
ತರಬೇತಿ ಅವಧಿಯಲ್ಲಿ ಟ್ರೈನಿಗಳಿಗೆ ಉಚಿತ ವಸತಿಯೊಂದಿಗೆ 7,500 ರೂ. ನೀಡಲಾಗುತ್ತದೆ. ಜೂನಿಯರ್ ಎಕ್ಸಿಕ್ಯೂಟಿವ್(ಎಟಿಸಿ)-ಗೆ 16,400ರಿಂದ 40 ಸಾವಿರ ರೂ. ಇರುತ್ತದೆ. ಮ್ಯಾನೇಜರ್(ಎಟಿಸಿ)ಗೆ 24,900ರೂ.ನಿಂದ 50,500 ರೂ.ವರೆಗೆ ಇರುತ್ತದೆ. ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್)(ನಾನ್ ಎಕ್ಸಿಕ್ಯೂಟಿವ್ ಕೇಡರ್)ಗೆ 14, 500 ರೂ.ನಿಂದ 33, 500 ರೂ.ವರೆಗೆ ಇರುತ್ತದೆ.

* ಉದ್ಯೋಗದ ನೆಗೆಟಿವ್ ಮತ್ತು ಪಾಸಿಟೀವ್ ಗುಣಗಳೇನು?
ಪಾಸಿಟೀವ್: ಚಾಲೆಂಜಿಂಗ್ ಎನ್ವಾಯರ್ನ್‍ಮೆಂಟ್, ಕೆಲವೇ ಸೆಕೆಂಡಿನಲ್ಲಿ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ, ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಅವಕಾಶ ಇದೆ.
ನೆಗೆಟಿವ್: ಅತ್ಯಧಿಕ ಒತ್ತಡವಿರುತ್ತದೆ. ಶಿಫ್ಟ್ ಡ್ಯೂಟಿ ಇರುತ್ತದೆ. ಹೆಚ್ಚುವರಿ ಕೆಲಸದ ಒತ್ತಡ ಇರುತ್ತದೆ. ರಜೆಯ ಕೊರತೆ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ರಜೆ ಸಿಗುವುದು ಅಪರೂಪ, ಅತ್ಯಧಿಕ ವೃತ್ತಿಪರ ರಿಸ್ಕ್ ಇರುವ ಕೆಲಸ ಇದಾಗಿದೆ.

* ಎಟಿಸಿ ಅಧಿಕಾರಿಗೆ ಯಾವೆಲ್ಲ ರ್ಯಾಂಕ್ ಅಥವಾ ಭಡ್ತಿ ದೊರಕುತ್ತದೆ?
ಜೂನಿಯರ್ ಎಕ್ಸಿಕ್ಯೂಟಿವ್, ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಜಾಯಿಂಟ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಡೈರೆಕ್ಟರ್(ಎಟಿಎಂ), ಎಎಐ ಆಡಳಿತ ಮಂಡಳಿಯ ಸದಸ್ಯ(ಎಟಿಎಂ).

* ತರಬೇತಿ ಮತ್ತು ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸಗಳ ಲಿಂಕ್

www.aai.aero

www.atcguild.com

www.aviationmagic.com

www.aaians.org

www.iata.org


Published in Vijayakarnataka Mini
Cabin Crew ಉದ್ಯೋಗ ಪಡೆಯುವುದು ಹೇಗೆ?

Cabin Crew ಉದ್ಯೋಗ ಪಡೆಯುವುದು ಹೇಗೆ?

ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಉದ್ಯೋಗ ಪಡೆಯುವುದು ಹೇಗೆಂಬ ಪ್ರಶ್ನೆ ಹಲವರಲ್ಲಿ ಇರಬಹುದು. ಇದಕ್ಕಾಗಿ ಯಾವ ಕೋರ್ಸ್ ಕಲಿಯಬೇಕು? ಎಲ್ಲಿ ತರಬೇತಿ ಪಡೆಯಬೇಕು? ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು

ವಿಮಾನ ಸಿಬ್ಬಂದಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. 1. ಫ್ಲೈಟ್ ಕ್ರ್ಯೂ. ಇವರು ವಿಮಾನದ ಹಾರಾಟ ನಡೆಸುವವರು. 2. ಕ್ಯಾಬಿನ್ ಕ್ರ್ಯೂ. ವಿಮಾನದ ಪ್ರಯಾಣಿಕರ ಸೇವೆ ಇತ್ಯಾದಿಗಳನ್ನು ಮಾಡುವವರು ಕ್ಯಾಬಿನ್ ಸಿಬ್ಬಂದಿ. ಕ್ಯಾಬಿನ್ ಕ್ರ್ಯೂ ವಿಭಾಗದಲ್ಲಿ ಫ್ಲೈಟ್ ಅಟೆಡೆಂಟ್, ಸ್ಟಿವಡ್ರ್ಸ್, ಸ್ಟಿವಡ್ರ್ಸ್‍ಸೆಸ್, ಗಗನ ಸಖರು ಅಥವಾ ಗಗನ ಸಖಿಯರು. ವಿಮಾನದಲ್ಲಿ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಆರಾಮದಾಯಕತೆ, ಸುರಕ್ಷತೆ ಒದಗಿಸುವ ಕಾರ್ಯ ಕ್ಯಾಬಿನ್ ಸಿಬ್ಬಂದಿಗಳದ್ದು.

ಫ್ಲೈಟ್ ಅಟೆಡೆಂಟ್ ಕಾರ್ಯಗಳು
ನೋಡುಗರಿಗೆ ಫ್ಲೈಟ್ ಅಟೆಡೆಂಟ್ ಅಥವಾ ಗಗನ ಸಖಿಯರು ಗ್ಲಾಮರಸ್ ಆಗಿ ಕಾಣಿಸಬಹುದು. ಇವರ ಕೆಲಸ ಸುಲಭ ಎಂದು ಕೊಳ್ಳಬಹುದು. ಫ್ಲೈಟ್ ಅಟೆಡೆಂಟ್‍ಗಳಿಗೆ ಅವರದ್ದೇ ಆದ ಹಲವು ಜವಾಬ್ದಾರಿಗಳಿವೆ.
* ಪ್ರಯಾಣಿಕರು ವಿಮಾನ ಏರುವಾಗ ಸ್ವಾಗತಿಸುವುದು ಅಥವಾ ವಿಮಾನ ಇಳಿಯುವಾಗ ಧನ್ಯವಾದ ಸಮರ್ಪಿಸುವುದು.
* ಪ್ರಯಾಣಿಕರಿಗೆ ತಮ್ಮ ತಮ್ಮ ಸೀಟುಗಳನ್ನು ತೋರಿಸಿಕೊಡುವುದು, ಮಕ್ಕಳಿಗೆ ಅಥವಾ ಹಿರಿಯರ ಕುರಿತು ವಿಶೇಷ ಕಾಳಜಿ ವಹಿಸುವುದು. ವಿಶೇಷ ಚೇತನ ಪ್ರಯಾಣಿಕರ ಕುರಿತು ವಿಶೇಷ ಅಸ್ಥೆ ತೋರುವುದು.
* ಪ್ರಯಾಣಿಕರಿಗೆ ಆಹಾರ ಅಥವಾ ಪಾನೀಯಗಳನ್ನು ಸರ್ವ್ ಮಾಡುವುದು.
* ಪ್ರಯಾಣಿಕರಿಗೆ ಲಭ್ಯವಿರುವ ತುರ್ತು ಸಲಕರಣೆಗಳು ಮತ್ತು ಸುರಕ್ಷತಾ ಪ್ರಕ್ರಿಯೆಗಳ ಮಾಹಿತಿ ನೀಡುವುದು.
* ಅಗತ್ಯವಿದ್ದರೆ ಪ್ರಥಮ ಚಿಕಿತ್ಸೆ ನೀಡುವುದು.
* ತುರ್ತು ಸಂದರ್ಭವನ್ನು ಸಮರ್ಥವಾಗಿ ಎದುರಿಸುವುದು.
* ಪ್ರಯಾಣಿಕರಿಗೆ ಸುದ್ದಿ ಪತ್ರಿಕೆಗಳನ್ನು, ಮ್ಯಾಗಜಿನ್‍ಗಳನ್ನು ಅಥವಾ ವಿಮಾನದಲ್ಲಿ ಲಭ್ಯವಿರುವ ಮನರಂಜನಾ ಅಥವಾ ಸುದ್ದಿ ಪತ್ರಿಕೆಗಳನ್ನು ಒದಗಿಸುವುದು.
* ಕೆಲವೊಂದು ವಾಣಿಜ್ಯ ಉತ್ಪನ್ನಗಳ ಮಾರಾಟ ಮಾಡುವ ಕೆಲಸವನ್ನೂ ವಿಮಾನದಲ್ಲಿ ಫ್ಲೈಟ್ ಅಟೆಡೆಂಟ್ ಮಾಡಬೇಕಾಗುತ್ತದೆ. ಪದಾರ್ಥಗಳ ಮಾರಾಟ ಮಾಡುವುದು.
ಇವರು ಈ ಕೆಲಸವನ್ನು ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಮಾಡಬೇಕಾಗುತ್ತದೆ. ವಿಭಿನ್ನ ವರ್ತನೆಯ ಹಲವು ಪ್ರಯಾಣಿಕರ ಜೊತೆ ವ್ಯವಹರಿಸಬೇಕಾಗುತ್ತದೆ. ಕೆಲವು ಪ್ರಯಾಣಿಕರಿಗೆ ವಿವಿಧ ಟೈಮ್ ಝೋನ್‍ನಲ್ಲಿ ಪ್ರಯಾಣ ಮಾಡುವಾಗ ಅಥವಾ ಹೆಚ್ಚು ದೂರ ಪ್ರಯಾಣ ಮಾಡುವಾಗ ವಿಶೇಷ ಕಾಳಜಿ ಬೇಕಾಗುತ್ತದೆ. ಹಲವು ಸಂದರ್ಭದಲ್ಲಿ ಪ್ರಯಾಣಿಕರು ಸಿಡಿಮಿಡಿಗೊಂಡರೂ ಫ್ಲೈಟ್ ಅಟೆಡೆಂಟ್ ಸಾವಧಾನವಾಗಿ ವ್ಯವಹರಿಸಬೇಕಾಗುತ್ತದೆ.

ಶೈಕ್ಷಣಿಕ ಅರ್ಹತೆಗಳೇನು?
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರೂ ಪದವಿ ಅಥವಾ ಹೋಟೇಲ್ ಮ್ಯಾನೇಜ್‍ಮೆಂಟ್ ಆ್ಯಂಡ್ ಕೆಟರಿಂಗ್‍ನಲ್ಲಿ 3 ವರ್ಷದ ಡಿಪೆÇ್ಲಮಾ, ರಾಷ್ಟ್ರೀಯ ಭಾಷೆಗಳ ಜ್ಞಾನ ಮತ್ತು ಒಂದಾದರೂ ಅಂತಾರಾಷ್ಟ್ರೀಯ (ಇಂಗ್ಲಿಷ್)ಭಾಷಾ ಜ್ಞಾನ ಸಾಮಾನ್ಯವಾಗಿ ಇರಬೇಕಾಗುತ್ತದೆ. ದೈಹಿಕ ಆರೋಗ್ಯ ಉತ್ತಮವಾಗಿರಬೇಕಾಗುತ್ತದೆ. ವಯಸ್ಸು: 25 ವರ್ಷಕ್ಕಿಂತ ಕಡಿಮೆ ಇರಬೇಕು. ಎತ್ತರ: ಕನಿಷ್ಠ 170 ಸೆಂ.ಮಿ. ಇರಬೇಕಾಗುತ್ತದೆ. ಎತ್ತರಕ್ಕೆ ಹೊಂದಾಣಿಕೆಯಾಗುವಷ್ಟು ತೂಕ ಇರಬೇಕು. ಹೆಚ್ಚಾಗಿ ಅವಿವಾಹಿತರನ್ನೇ ಈ ಹುದ್ದೆಗೆ ನೇಮಿಸಿಕೊಳ್ಳಲಾಗುತ್ತದೆ. ಗೋಚರವಾಗುವಂತಹ ಟ್ಯಾಟೂ ಇತ್ಯಾದಿಗಳು ಇರಬಾರದು.
ಏರ್ ಕ್ಯಾಬಿನ್ ಸಿಬ್ಬಂದಿಗಳಿಗೆ ಉದ್ಯೋಗದಲ್ಲಿ ವಿವಿಧ ಆಯ್ಕೆಗಳು ಇರುತ್ತವೆ. ಇವರು ಸಾರ್ವಜನಿಕ ಸ್ವಾಮ್ಯದ ಏರ್ ಇಂಡಿಯಾದಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಬಹುದು. ಬಹುತೇಕರು ದೇಶ ಮತ್ತು ವಿದೇಶದಲ್ಲಿ ಸಂಚರಿಸುವ ಖಾಸಗಿ ವಿಮಾನ ಕಂಪನಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಸ್ಪೈಸ್ ಜೆಟ್, ಜೆಟ್ ಏರ್‍ವೇಸ್, ಇಂಡಿಗೊನಂತಹ ಕಂಪನಿಗಳು ಗಗನಸಖಿಯರಿಗೆ ನೆಚ್ಚಿನ ಸಂಸ್ಥೆಗಳಾಗಿ ಹೊರಹೊಮ್ಮಿದೆ. ಉದ್ಯೋಗದಲ್ಲಿ ಅನುಭವ ಪಡೆದ ನಂತರ ಇವರೆಲ್ಲರು ಸೂಪರ್‍ವೈಸರ್‍ಗಳಾಗಿ ಜೂನಿಯರ್ ಕ್ಯಾಬಿನ್ ಸಿಬ್ಬಂದಿಗಳಿಗೆ ಕೆಲಸ ವಹಿಸುವುದು ಅಥವಾ ತರಬೇತಿ ನೀಡುವ ಕಾರ್ಯವನ್ನೂ ಮಾಡಬಹುದಾಗಿದೆ. ಕೆಲವು ವಿಮಾನ ಕಂಪನಿಗಳು ಅನುಭವ ಪಡೆದವರನ್ನು ತಮ್ಮ ಸಂಸ್ಥೆಯಲ್ಲಿಯೇ ಉಳಿಸಿಕೊಂಡು ವಿವಿಧ ಆಡಳಿತ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತದೆ.

ದೇಶದ ಪ್ರಮುಖ ತರಬೇತಿ ಸಂಸ್ಥೆಗಳು
ಕ್ಯಾಬಿನ್ ಕ್ರ್ಯೂ ಉದ್ಯೋಗಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ತರಬೇತಿ ನೀಡುವ ಸಂಸ್ಥೆಗಳೂ ದೇಶದಲ್ಲಿ ಹೆಚ್ಚಾಗುತ್ತಿವೆ. ಬಹುತೇಕ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಹಣ ಪೀಕುವ ಉದ್ದೇಶದಿಂದ ಹುಟ್ಟಿಕೊಂಡಿವೆ. ದೇಶದಲ್ಲಿ ಇರುವ ನಂಬಿಕಸ್ಥ ತರಬೇತಿ ಸಂಸ್ಥೆಗಳ ಮಾಹಿತಿ ಇಲ್ಲಿದೆ.
* ಇಂಡಿಯನ್ ಏರ್‍ಲೈನ್ಸ್ ಲಿಮಿಟೆಡ್, ಸೆಂಟ್ರಲ್ ಟ್ರೈನಿಂಗ್ ಎಸ್ಟಾಬ್ಲಿಷ್‍ಮೆಂಟ್, ಹೈದರಾಬಾದ್
* ಐಎಟಿಎ
* ಸ್ಕೈಲೈನ್ ಎಜುಕೇಷನಲ್ ಇನ್‍ಸ್ಟಿಟ್ಯೂಟ್, ನವದೆಹಲಿ
* ಇಂಡಿಯನ್ ಏವಿಯೇಷನ್ ಅಕಾಡೆಮಿ, ಮುಂಬೈ
* ಕ್ಯೂನಿ ಅಕಾಡೆಮಿ ಆಫ್ ಟ್ರಾವೆಲ್, ದೆಹಲಿ
* ಏರ್ ಹೋಸ್ಟ್ರೇಸ್ ಅಕಾಡೆಮಿ(ಎಎಚ್‍ಎ), ದೆಹಲಿ, ಚಂಡೀಗಢ, ಮುಂಬೈ
* ಫ್ರಾಂಕ್ ಫಿನ್ ಇನ್‍ಸ್ಟಿಟ್ಯೂಟ್ ಆಫ್ ಏರ್ ಹೋಸ್ಟ್ರೇಸ್ ಟ್ರೈನಿಂಗ್, ದೆಹಲಿ

ರಾಜ್ಯದಲ್ಲಿರುವ ಕೆಲವು ತರಬೇತಿ ಸಂಸ್ಥೆಗಳು
ರಾಜ್ಯದಲ್ಲಿ ಹಲವು ಖಾಸಗಿ ತರಬೇತಿ ಸಂಸ್ಥೆಗಳು ಕ್ಯಾಬಿನ್ ಕ್ರ್ಯೂ ತರಬೇತಿ ನೀಡುತ್ತಿವೆ.
ಆಪ್ಟೆಕ್ ಏವಿಯೇಷನ್ ಆ್ಯಂಡ್ ಹಾಸ್ಪಿಟಲಿಟಿ ಅಕಾಡೆಮಿ: ಬೆಳಗಾವಿ, ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಆಪ್ಟೆಕ್ ಏವಿಯೇಷನ್ ಕೇಂದ್ರಗಳಿವೆ. ಇಲ್ಲಿ ಕ್ಯಾಬಿನ್ ಕ್ರ್ಯೂ ಮತ್ತು ಏರ್ ಹೋಸ್ಟ್ರಸ್ ಇತ್ಯಾದಿ ತರಬೇತಿಗಳನ್ನು ನೀಡಲಾಗುತ್ತದೆ.
ಎಸ್ಸೆನ್ಸ್ ಲರ್ನಿಂಗ್: ಬೆಂಗಳೂರಿನಲ್ಲಿರುವ ಎಸ್ಸೆನ್ಸ್ ಲರ್ನಿಂಗ್ ಸಹ ಏರ್ ಕ್ರ್ಯೂ ತರಬೇತಿ ನೀಡುತ್ತಿದೆ.
ಅವಲೊನ್ ಅಕಾಡೆಮಿ: ಇದು ರಾಜ್ಯದ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಹಲವು ಕೇಂದ್ರಗಳನ್ನು ಹೊಂದಿದೆ.
ಕೈರಾಳಿ ಏವಿಯೇಷನ್: ಇದು ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ತರಬೇತಿ ಕೇಂದ್ರ ಹೊಂದಿದೆ.
* ಬೆಂಗಳೂರಿನಲ್ಲಿರುವ ವಾಸವಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಅಡ್ವಾನ್ಸಡ್ ಸ್ಟಡೀಸ್‍ನಲ್ಲಿ ಡಿಪೆÇ್ಲಮಾ ಇನ್ ಪೆÇ್ರಫೆಷನಲ್ ಕ್ಯಾಬಿನ್ ಕ್ರ್ಯೂ ಸರ್ವೀಸ್ ಎಂಬ ಕೋರ್ಸ್ ಲಭ್ಯವಿದೆ.
* ಬೆಂಗಳೂರಿನ ಏಜೆ ಏವಿಯೇಷನ್ ಅಕಾಡೆಮಿಯಲ್ಲಿ ಡಿಪೆÇ್ಲಮಾ ಇನ್ ಪೆÇ್ರಫೆಷನಲ್ ಕ್ಯಾಬಿನ್ ಕ್ರ್ಯೂ ಸರ್ವೀಸಸ್ ಕಲಿಯಬಹುದಾಗಿದೆ.

Published in Vijayakarnataka Mini

Sunday, 27 November 2016

ಇಂಟರ್‍ನೆಟ್ ಗುರು: ಆನ್‍ಲೈನ್ ಟ್ಯೂಟರ್ ಆಗುವಿರಾ?

ಇಂಟರ್‍ನೆಟ್ ಗುರು: ಆನ್‍ಲೈನ್ ಟ್ಯೂಟರ್ ಆಗುವಿರಾ?

ಈಗಿನ ಇಂಟರ್‍ನೆಟ್ ಜಗತ್ತು ಹಲವು ವಿಭಿನ್ನ ಉದ್ಯೋಗಾವಕಾಶಗಳನ್ನು ಮನೆ ಬಾಗಿಲಿಗೆ ತಂದಿರಿಸಿದೆ. ಅಂತಹ ಹುದ್ದೆಗಳಲ್ಲಿ ಆನ್‍ಲೈನ್ ಟೀಚಿಂಗ್ ಸಹ ಪ್ರಮುಖವಾದದ್ದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಬಹುತೇಕ ವಿದ್ಯಾರ್ಥಿಗಳಿಂದು ಶಾಲೆ, ಕಾಲೇಜು ಮುಗಿಸಿ ಟ್ಯೂಷನ್‍ಗೆಂದು ಹೊರಗಡೆ ಹೋಗುವುದಿಲ್ಲ. ತಮ್ಮ ಮನೆಯಲ್ಲಿಯೇ ವೆಬ್ ಕ್ಯಾಮ್ ಆನ್ ಮಾಡಿ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುತ್ತಾರೆ. ಅವರಿಗೆ ಆನ್‍ಲೈನ್ ಟೀಚರ್ ಪಾಠ ಮಾಡುತ್ತಾರೆ. ಈ ರೀತಿಯ ಶಿಕ್ಷಣ ಟ್ರೆಂಡ್ ಈಗ ಹೆಚ್ಚಾಗಿದೆ. ಇದರಿಂದ ಉದ್ಯೋಗಾವಕಾಶವೂ ಹೆಚ್ಚಾಗಿದೆ. ಆನ್‍ಲೈನ್ ಟ್ಯೂಟರ್ ಎಂದು ಜಾಬ್ ವೆಬ್‍ಸೈಟ್‍ಗಳಲ್ಲಿ ಹುಡುಕಿದರೆ ಸಾಕಷ್ಟು ಜಾಬ್ ಆಫರ್‍ಗಳು ಕಾಣಸಿಗುತ್ತವೆ. ಮನೆಯಲ್ಲಿಯೇ ಕುಳಿತು ಪಾಠ ಮಾಡುವುದರಿಂದ ಇದು ಗ್ರಹಿಣಿಯರಿಗೆ, ನಿವೃತ್ತರಿಗೆ ಮತ್ತು ಉನ್ನತ್ತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪಾರ್ಟ್‍ಟೈಂ ಉದ್ಯೋಗವಾಗುತ್ತದೆ. ಈಗ ಆನ್‍ಲೈನ್‍ನಲ್ಲಿ ಹೊಸ ಹೊಸ ಕೋರ್ಸ್‍ಗಳನ್ನು ಕಲಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಆನ್‍ಲೈನ್ ಟ್ಯೂಟರ್‍ಗಳಿಗೆ ಉದ್ಯೋಗಾವಕಾಶ ಹೆಚ್ಚಾಗುತ್ತಿದೆ.

ಅರ್ಹತೆ ಏನಿರಬೇಕು?
ಆನ್‍ಲೈನ್ ಟ್ಯೂಟರ್ ಆಗಲು ಉಳಿದ ಟೀಚಿಂಗ್ ಪೆÇೀಸ್ಟ್‍ಗಳಿಗೆ ಇರುವಂತೆ ಟೀಚಿಂಗ್ ಶಿಕ್ಷಣ, ಸ್ನಾತಕೋತ್ತರ ಇತ್ಯಾದಿ ವಿದ್ಯಾರ್ಹತೆ ಇರಬೇಕು. ತಂತ್ರಜ್ಞಾನದ ಸಮರ್ಪಕ ಬಳಕೆ ತಿಳಿದರಬೇಕಾಗುತ್ತದೆ. ಹೆಚ್ಚಿನ ಟ್ಯೂಟರ್ ಸಂಸ್ಥೆಗಳು ಉತ್ತಮ ಸಂವಹನ ಕೌಶಲ ಇರುವವರಿಗೆ ಆದ್ಯತೆ ನೀಡುತ್ತವೆ.
ಹೇಗೆ ಟೀಚಿಂಗ್ ಮಾಡಬೇಕು?: ಆನ್‍ಲೈನ್ ಟ್ಯೂಟರ್‍ಗಳು ಕ್ಲಾಸ್ ರೂಂನಲ್ಲಿ ಪಾಠ ಮಾಡುವ ಕೆಲಸವನ್ನೇ ಮಾಡುತ್ತಾರೆ. ಆದರೆ, ಆನ್‍ಲೈನ್‍ನಲ್ಲಿ ಕೇವಲ ಬೋಧನೆ ಮಾಡುತ್ತ ಇದ್ದರೆ ಸಾಲದು. ಇಂಟರ್‍ನೆಟ್ ತಂತ್ರಜ್ಞಾನದ ವೆಬ್ ಕ್ಯಾಮೆರಾ, ಫೆÇೀರಮ್‍ಗಳು, ಸೋಷಿಯಲ್ ಮೀಡಿಯಾ, ಬ್ಲಾಗಿಂಗ್ ತಾಣಗಳು, ಚಾಟ್ ರೂಂ ಇತ್ಯಾದಿಗಳನ್ನು ಬಳಸಿ ಪಾಠ ಮಾಡಬೇಕಾಗುತ್ತದೆ. ಇಮೇಲ್, ಚಾಟ್ ರೂಂ ಅಥವಾ ಮೆಸೆಜ್ ಬೋರ್ಡ್ ಮೂಲಕ ವಿದ್ಯಾರ್ಥಿಯೊಂದಿಗೆ ಮುಖಾಮುಖಿಯಾಗಬೇಕಾಗುತ್ತದೆ.

ಟ್ಯೂಟರ್‍ಗೆ ಟಿಪ್ಸ್
ನಿಮ್ಮ ಆನ್‍ಲೈನ್ ಟೀಚಿಂಗ್ ಹೆಚ್ಚು ಪರಿಣಾಮಕಾರಿಯಾಗಲು ಸಹಕರಿಸುವ ಒಂದಿಷ್ಟು ಟಿಪ್ಸ್‍ಗಳು ಇಲ್ಲಿವೆ.
* ಆನ್‍ಲೈನ್‍ನಲ್ಲಿ ಏನು ಪಾಠ ಮಾಡಬೇಕೆಂದು ಮೊದಲೇ ರೂಪುರೇಷೆ ಸಿದ್ಧವಾಗಿರುತ್ತದೆ. ಅದನ್ನು ಸಮರ್ಪಕವಾಗಿ ಪ್ರಸಂಟೇಷನ್ ಮಾಡುವ ಕಲೆ ನಿಮಗಿರಬೇಕು. ವಿದ್ಯಾರ್ಥಿಗಳು ತಕ್ಷಣ ಏನಾದರೂ ಪ್ರಶ್ನೆ ಕೇಳಿದರೆ ಉತ್ತರಿಸುವ ಜ್ಞಾನ ನಿಮ್ಮಲ್ಲಿ ಇರಬೇಕು. ಇದಕ್ಕಾಗಿ ಆನ್‍ಲೈನ್‍ನಲ್ಲಿ ವಿದ್ಯಾರ್ಥಿಗಳಿಗೆ ಇಂಪ್ರೆಷನ್ ಮಾಡುವಂತಹ ಗುಣ ಬೆಳೆಸಿಕೊಳ್ಳಿ.
* ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಇರುವವರು ಎಂದು ಕಡೆಗಣಿಸಬೇಡಿ. ಕಾಲಕಾಲಕ್ಕೆ ಎಲ್ಲಾ ಅಸೈನ್‍ಮೆಂಟ್‍ಗಳನ್ನು ಕೇಳಿರಿ. ಅವರಿಗೆ ಹೋಂವರ್ಕ್ ಕುರಿತು ನೆನಪಿಸುತ್ತ ಇರಿ. ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಮೂಡಿಸಿ. ಆನ್‍ಲೈನ್ ಎನ್ನುವುದು ಮಾಧ್ಯಮವಷ್ಟೇ, ಕ್ಲಾಸ್‍ರೂಂನಲ್ಲಿ ಪಾಠ ಮಾಡುವಷ್ಟು ಸೀರಿಯಸ್‍ನೆಸ್ ಇಲ್ಲೂ ಇರಲಿ.
* ನಿಗದಿತ ಸಮಯದಲ್ಲಿ ಇಂತಿಷ್ಟು ವಿಷಯಗಳನ್ನು ಬೋಧಿಸುವ ಅನಿವಾರ್ಯತೆ ಇರುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೇ ಎಂದು ತಿಳಿದುಕೊಂಡೇ ಮುಂದುವರೆಯಿರಿ.
* ಪ್ಲಾನಿಂಗ್ ಇರಲಿ: ಸಿದ್ಧತೆ ನಡೆಸದೆ ಆನ್‍ಲೈನ್ ಟೀಚಿಂಗ್ ಮಾಡಬೇಡಿ. ಪ್ರತಿದಿನ ಹೆಚ್ಚು ಕಲಿಯಿರಿ. ಪರಿಣಾಮಕಾರಿಯಾಗಿ ಬೋಧನೆ ಮಾಡಿ.
* ಸಮರ್ಪಕ ಫೀಡ್‍ಬ್ಯಾಕ್ ನೀಡಿ. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿ. ಜೊತೆಗೆ, ಅವರಲ್ಲಿ ಹೆಚ್ಚು ಹೆಚ್ಚು ಪ್ರಶ್ನೆ ಕೇಳುವಂತೆ ಮಾಡಿ. ವಿದ್ಯಾರ್ಥಿಗಳು ಕೇಳಿದ ಕಲಿಕಾ ಸಾಮಾಗ್ರಿಗಳನ್ನು ಶೀಘ್ರದಲ್ಲಿ ಸಲ್ಲಿಸಲು ಪ್ರಯತ್ನ ಮಾಡಿ. ಸಾಧ್ಯವಾದರೆ ಒಂದೇ ದಿನದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಿ.
* ವಿದ್ಯಾರ್ಥಿಗಳೊಂದಿಗೆ ಪಠ್ಯದ ವಿಷಯ ಹೊರತುಪಡಿಸಿ ಬೇರೆ ಯಾವುದೇ ವಿಷಯಗಳನ್ನು ಮಾತನಾಡಬೇಡಿ.
* ಗುಣಮಟ್ಟ ಕಾಯ್ದುಕೊಳ್ಳಿ. ಆನ್‍ಲೈನ್ ಕಲಿಕಾ ಅನುಭವವನ್ನು ಉತ್ತಮ ಪಡಿಸಲು ಯತ್ನಿಸಿ. ಗುಣಮಟ್ಟದಲ್ಲಿ ಎಂದಿಗೂ ರಾಜಿಯಾಗಬೇಡಿ.

ಉದ್ಯೋಗ ಹುಡುಕಾಟ ಹೇಗೆ?
ಇಂಟರ್‍ನೆಟ್: ಆನ್‍ಲೈನ್ ಟೀಚಿಂಗ್ ಉದ್ಯೋಗ ಹುಡುಕಾಟಕ್ಕೆ ಇಂಟರ್‍ನೆಟ್ ಪ್ರಮುಖ ಮಾಧ್ಯಮ. ಜಾಬ್ ಪೆÇೀರ್ಟಲ್‍ಗಳಲ್ಲಿ ನಿಮ್ಮ ರೆಸ್ಯೂಂ ಅಪ್‍ಲೋಡ್ ಮಾಡಿ. ಅಲ್ಲಿ ಸ್ಪಷ್ಟವಾಗಿ ಆನ್‍ಲೈನ್ ಟ್ಯೂಟರ್ ಆಗಲು ಬಯಸಿರುವುದನ್ನು ಉಲ್ಲೇಖಿಸಿ. ರೆಸ್ಯೂಂನಲ್ಲಿ ಇಮೇಲ್ ಐಡಿ ಮತ್ತು ಫೆÇೀನ್ ನಂಬರ್ ಬರೆಯಲು ಮರೆಯಬೇಡಿ.
ವೆಬ್‍ಸೈಟ್‍ಗಳು: ನೀವು ಯಾವುದಾದರೂ ಪ್ರಮುಖ ಆನ್‍ಲೈನ್ ಟ್ಯೂಷನ್ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದಾರ? ನೇರವಾಗಿ ಆ ಸಂಸ್ಥೆಯ ವೆಬ್‍ಸೈಟ್‍ಗೆ ಪ್ರವೇಶಿಸಿ. ಅಲ್ಲಿ ಉದ್ಯೋಗಾವಕಾಶ ಇದೆಯೇ ಎಂದು ಕರಿಯರ್ ವಿಭಾಗದಲ್ಲಿ ಹುಡುಕಿ. ಅಲ್ಲಿ ಇದ್ದರೆ ಅರ್ಜಿ ಸಲ್ಲಿಸಿ. ಇಲ್ಲದಿದ್ದರೂ ಒಂದು ಇಮೇಲ್‍ನಲ್ಲಿ ರೆಸ್ಯೂಂ ಫಾವರ್ಡ್ ಮಾಡಿಬಿಡಿ.
ಆನ್‍ಲೈನ್ ನೇಮಕಾತಿ ಸಂಸ್ಥೆಗಳು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆನ್‍ಲೈನ್ ಟೀಚಿಂಗ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕಲು ನೇಮಕಾತಿ ಸಂಸ್ಥೆಗಳು ಅಥವಾ ಏಜೆನ್ಸಿಗಳು ಇರುತ್ತವೆ. ಇಂತಹ ಸಂಸ್ಥೆಗಳನ್ನೂ ಸಂಪರ್ಕಿಸಬಹುದು. ಆದರೆ, ಈ ವಿಭಾಗದಲ್ಲಿ ವಂಚಕರು ಹೆಚ್ಚಿರುತ್ತಾರೆ. ಅತ್ಯಧಿಕ ಶುಲ್ಕ ಕೇಳುವ ಏಜೆನ್ಸಿ ಅಥವಾ ಕನ್ಸಲ್ಟೆಂಟ್‍ಗಳಿಂದ ದೂರವಿರಿ.
ನ್ಯೂಸ್‍ಪೇಪರ್ಸ್-ಆನ್‍ಲೈನ್: ಸುದ್ದಿಪತ್ರಿಕೆಗಳ ಉದ್ಯೋಗ ಮಾಹಿತಿ ವಿಭಾಗದಲ್ಲಿಯೂ ಆನ್‍ಲೈನ್ ಟ್ಯೂಟರ್ ಓಪನಿಂಗ್ಸ್ ಕುರಿತು ಮಾಹಿತಿ ಇರುತ್ತದೆ. ಹೀಗಾಗಿ ಪತ್ರಿಕೆಗಳನ್ನು ಓದುತ್ತಿರಿ. ಆನ್‍ಲೈನ್ ನ್ಯೂಸ್ ಪೆÇೀರ್ಟಲ್‍ಗಳಲ್ಲಿಯೂ ಉದ್ಯೋಗ ಸುದ್ದಿಗಳಿವೆಯೇ ನೋಡಿಕೊಳ್ಳಿ.
ಪರ್ಸನಲ್ ರೆಫರೆನ್ಸ್: ಈಗಾಗಲೇ ಆನ್‍ಲೈನ್ ಟೀಚಿಂಗ್ ಮಾಡುತ್ತಿರುವ ಸ್ನೇಹಿತರು ಇದ್ದರೆ ಅವರಿಂದಲೂ ಉದ್ಯೋಗ ಮಾಹಿತಿ ಪಡೆದುಕೊಳ್ಳಿ. ಸೋಷಿಯಲ್ ನೆಟ್‍ವರ್ಕಿಂಗ್ ಸೈಟ್‍ಗಳಲ್ಲಿಯೂ ಇಂತಹ ಕರಿಯರ್ ಮಾಡುತ್ತಿರುವವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು. ಅವರಿಂದ ಮಾಹಿತಿ ಪಡೆದುಕೊಳ್ಳಬಹುದು.
ಆನ್‍ಲೈನ್ ಟ್ಯೂಟರ್ ಕೋರ್ಸ್
ನೀವು ಎಂಎ ಇತ್ಯಾದಿ ಶಿಕ್ಷಣ ಪಡೆದಿದ್ದರೂ ಆನ್‍ಲೈನ್‍ನಲ್ಲಿ ಟೀಚಿಂಗ್ ಮಾಡಲು ವಿಶೇಷ ಕೌಶಲ ಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟ ವಿವಿಧ ಕೋರ್ಸ್‍ಗಳನ್ನು ಕಲಿತರೆ ಉಪಯೋಗವಾಗಬಹುದು. ಆನ್‍ಲೈನ್‍ನಲ್ಲಿ ಇದಕ್ಕೆ ಸಂಬಂಧಪಟ್ಟ ಸರ್ಟಿಫಿಕೇಷನ್‍ಗಳು, ಕೋರ್ಸ್‍ಗಳು ಲಭ್ಯ ಇವೆ. ಇವುಗಳನ್ನು ಬಳಸಿಕೊಳ್ಳಬಹುದು. ಕೆಲವು ಲಿಂಕ್‍ಗಳನ್ನು ಇಲ್ಲಿ ನೀಡಲಾಗಿದೆ.
ಟೀಚರ್ ಫೌಂಡೇಷನ್
ಟಿಇಎಫ್‍ಎಲ್ ಟೆಸೊಲ್:
ಟ್ಯೂಟರ್ ಇಂಡಿಯಾ
ಟೀಚರ್ ಡಿಪೆÇ್ಲಮಾ ಕೋರ್ಸ್

Thursday, 24 November 2016

ಯೋಗ ಶಿಕ್ಷಣದಿಂದ ಉದ್ಯೋಗಾವಕಾಶ

ಯೋಗ ಶಿಕ್ಷಣದಿಂದ ಉದ್ಯೋಗಾವಕಾಶ

ವಿಶ್ವಸಂಸ್ಥೆಯ ಸದಸ್ಯತ್ವ ಪಡೆದ 177 ದೇಶಗಳಲ್ಲಿ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆ `ಯೋಗ'ದ ಹವಾ ಆವರಿಸಿದೆ. ಯೋಗವನ್ನು ಕರಿಯರ್ ಆಯ್ಕೆ ಮಾಡಿಕೊಂಡವರಿಗೆ ಬೇಡಿಕೆಯೂ ಹೆಚ್ಚಾಗಿದೆ. ಯೋಗದಿಂದ ಯಾವೆಲ್ಲ ಉದ್ಯೋಗ ಪಡೆಯಬಹುದು? ಹೆಚ್ಚಿನ ಮಾಹಿತಿ ಇಲ್ಲಿದೆ.
ಹಣ, ಅಂತಸ್ತು, ಐಶ್ವರ್ಯವಿದ್ದರೂ ಮಾನಸಿಕ ನೆಮ್ಮದಿ ಇಲ್ಲವೆನ್ನುವುದು ಬಹುತೇಕರ ಅಳಲು. ಕೆಲಸದ ಒತ್ತಡ, ಸಂಸಾರದ ಜಂಜಾಟಗಳಿಂದ ಬೇಸೆತ್ತವರು ಸಾಕಷ್ಟಿದ್ದಾರೆ. ಮನಸ್ಸಿನ ಆರೋಗ್ಯ ಉತ್ತಮವಾಗಿದ್ದರೆ ಹ್ಯಾಪಿಯಾಗಿ ಇರಬಹುದು ಎಂಬುದು ಎಲ್ಲರಿಗೂ ಮನದಟ್ಟಾಗುತ್ತಿದೆ. ಈ ಒತ್ತಡ, ಜಂಜಡದ ಬದುಕಿನಲ್ಲಿ ರಿಲ್ಯಾಕ್ಸ್ ಆಗಲು ಎಲ್ಲರೂ ಯೋಗವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯೇ ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಿದೆ. ಹೀಗಾಗಿ ಯೋಗಕ್ಕೆ ಎಲ್ಲಿಲ್ಲದ ಮಹತ್ವ ಬಂದುಬಿಟ್ಟಿದೆ.

ಯೋಗವೆಂಬ ಕರಿಯರ್
ಯೋಗವನ್ನೇ ಕರಿಯರ್ ಆಗಿ ಸ್ವೀಕರಿಸಿ ಬದುಕಿನಲ್ಲಿ ಯಶಸ್ವಿಯಾದ ಅದೇಷ್ಟೋ ಜನರು ನಮ್ಮ ನಿಮ್ಮ ನಡುವೆ ಇದ್ದಾರೆ. ಕೆಲವರು ಶಾಲಾ ಕಾಲೇಜುಗಳಲ್ಲಿ ಯೋಗ ಕಲಿಸುತ್ತಿದ್ದಾರೆ. ಇನ್ನು ಕೆಲವರು ಸ್ವಂತ ಯೋಗ ತರಗತಿಗಳನ್ನು ನಡೆಸಿ ಜನರಿಗೆ ಯೋಗದ ಅರಿವು ಮೂಡಿಸುತ್ತಿದ್ದಾರೆ. ಇನ್ನು ಕೆಲವರು ಯೋಗವನ್ನೇ ಬಿಸ್ನೆಸ್ ಆಗಿಸಿ ದುಡ್ಡು ಬಾಚಿಕೊಳ್ಳುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮವನ್ನು ಜೊತೆಯಾಗಿಸಿಕೊಂಡು ಸಾಕಷ್ಟು ಆಸ್ತಿ, ಅಂತಸ್ತು ಗಳಿಸಿದವರೂ ಸಿಗುತ್ತಾರೆ. ಹೀಗೆ ಯೋಗದಿಂದ ಸಾಕಷ್ಟು ಜನರಿಗೆ ಉದ್ಯೋಗಭಾಗ್ಯ ದೊರಕಿದೆ.

ಎಲ್ಲೆಲ್ಲಿ ಕೆಲಸ ಮಾಡಬಹುದು?
* ಸ್ವಂತ ಉದ್ಯೋಗ: ಬೆಂಗಳೂರಿನಂತಹ ನಗರಗಳಲ್ಲಿ ಯೋಗ ಟೀಚರ್/ಇನ್‍ಸ್ಟ್ರಕ್ಟರ್‍ಗಳಿಗೆ ಉತ್ತಮ ಬೇಡಿಕೆಯಿದೆ. ಸ್ವಂತ ಯೋಗ ಕ್ಲಾಸ್‍ಗಳನ್ನು ನಡೆಸಿದರೆ ಉತ್ತಮ ಆದಾಯ ಗಳಿಸಬಹುದು. ಇದಕ್ಕೆ ಹೆಚ್ಚು ಹೂಡಿಕೆ ಅಗತ್ಯವಿಲ್ಲ. ಜಿಮ್ ಇತ್ಯಾದಿಗಳಿಗೆ ಕನ್ನಡಿ, ಆಧುನಿಕ ಸಲಕರಣೆಗಳ ಅಗತ್ಯವಿದೆ. ಆದರೆ, ಯೋಗ ಕ್ಲಾಸ್ ನಡೆಸಲು ಹೆಚ್ಚು ಹೂಡಿಕೆ ಬೇಕಿಲ್ಲ. ನೆಲಕ್ಕೆ ಹಾಸಲು ಕಾರ್ಪೇಟ್ ಇದ್ದರೆ ಸಾಕು. ಮನೆಯ ಟೇರಸಿಯಲ್ಲೇ ಯೋಗ ಕ್ಲಾಸ್ ನಡೆಸಿಕೊಳ್ಳಬಹುದು.
* ಟೀಚಿಂಗ್: ಸ್ವಂತ ಕಲಿಕಾ ಕೇಂದ್ರಗಳನ್ನು ತೆರೆಯಲು ಸಾಧ್ಯವಾಗದೆ ಇರುವವರು ರೆಸಾರ್ಟ್, ಜಿಮ್, ಸ್ಕೂಲ್, ಆರೋಗ್ಯ ಕೇಂದ್ರ, ಹೌಸಿಂಗ್ ಸೊಸೈಟಿಗಳು ಮತ್ತು ದೊಡ್ಡ ಸಂಸ್ಥೆಗಳಲ್ಲಿ ಯೋಗ ತರಬೇತುದಾರರಾಗಿ ಕೆಲಸ ಪಡೆಯಬಹುದು. ಈಗ ಶಾಲೆಗಳಲ್ಲಿ ಯೋಗ ಇನ್‍ಸ್ಟ್ರಕ್ಟರ್‍ಗಳನ್ನು ನೇಮಿಸುವುದು ಕಡ್ಡಾಯವೆಂದು ಸರಕಾರ ಹೇಳಿದೆ. ಹೀಗಾಗಿ ಖಾಸಗಿ, ಸರಕಾರಿ ಶಾಲೆಗಳಲ್ಲಿಯೂ ಯೋಗ ತರಬೇತುದಾರರಾಗಿ ಕೆಲಸ ಪಡೆದುಕೊಳ್ಳಬಹುದು.
* ಯೋಗದ ಉತ್ತೇಜನಕ್ಕೆ ಹಲವು ಕೇಂದ್ರಗಳನ್ನು, ಕೌನ್ಸಿಲ್‍ಗಳನ್ನು, ಸಂಶೋಧನಾ ವಿಭಾಗಗಳನ್ನು ಸರಕಾರ ತೆರೆದಿದೆ. ಇಂತಹ ವಿಭಾಗಗಳಲ್ಲಿಯೂ ಕೆಲಸ ಪಡೆಯಲು ಪ್ರಯತ್ನಿಸಬಹುದು.
* ವಿವಿಧ ಸೆಲೆಬ್ರೆಟಿಗಳು, ರಾಜಕಾರಣಿಗಳು, ವಿವಿಐಪಿಗಳು ಪರ್ಸನಲ್ ಯೋಗ ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಹೀಗೆ ಪರ್ಸನಲ್ ಟ್ರೈನರ್ ಆಗಿಯೂ ಕೆಲಸ ಮಾಡಬಹುದಾಗಿದೆ.
* ವಿವಿಧ ಕಾಯಿಲೆಗಳಿಗೆ ನೀಡುವ ಯೋಗ ಥೆರಪಿಯೂ ಜನಪ್ರಿಯತೆ ಪಡೆದಿದೆ. ಇದು ಸಹ ಉದ್ಯೋಗಾವಕಾಶ ಹೆಚ್ಚಿಸಿದೆ.
ಹೊಸದಾಗಿ ಯೋಗ ತರಬೇತು ನೀಡುವವರಿಗೆ 10-15 ಸಾವಿರ ರೂ. ತಿಂಗಳ ವೇತನ ದೊರಕಬಹುದು. ಅನುಭವ ಹೆಚ್ಚಿದಂತೆಲ್ಲ ವೇತನ ಹೆಚ್ಚು ಸಿಗಬಹುದು. ಸ್ವಂತ ಯೋಗ ತರಗತಿ ಆರಂಭಿಸಿದವರು ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ.

ಯೋಗ ಶಿಕ್ಷಣ
ಬೆಂಗಳೂರು ವಿವಿ, ಕರ್ನಾಟಕ ವಿವಿ, ಮಂಗಳೂರು ವಿವಿ ಸೇರಿದಂತೆ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಥವಾ ವಿದ್ಯಾಸಂಸ್ಥೆಗಳಲ್ಲಿ ಯೋಗ ಕಲಿಸಲು ಪ್ರತ್ಯೇಕ ವಿಭಾಗ ಮೀಸಲಿಡಲಾಗಿದೆ. ಪಿಯುಸಿಯಲ್ಲಿ ಕನಿಷ್ಠ 50ಕ್ಕಿಂತ ಹೆಚ್ಚು ಅಂಕ ಪಡೆದವರು ಯೋಗ ಥೆರಪಿಯಲ್ಲಿ ಬಿಎ/ಬಿಎಸ್ಸಿ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಬಹುದು. ಈ ಪದವಿ ಪಡದವರು ನಂತರ ಯೋಗ ಥೆರಪಿಯಲ್ಲಿ ಎಂಎ/ಎಂಎಸ್ಸಿ ಪಡೆಯಬಹುದಾಗಿದೆ. ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ನ್ಯಾಚುರೊಪಿ ಮತ್ತು ಯೋಗಿಕ್ ಸೈನ್ಸಸ್, ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ನ್ಯಾಚೊರೊಪತಿ ಮತ್ತು ಯೋಗಿಕ್ ಸೈನ್ಸಸ್, ಬೆಳಗಾವಿಯ ಕೆಎಲ್‍ಇಎಸ್ ಕಾಲೇಜ್ ಆಫ್ ನ್ಯಾಚೊರೊಪತಿ ಮತ್ತು ಯೋಗ, ಮೈಸೂರಿನ ನೇಚರ್ ಕ್ಯೂರ್ ಮತ್ತು ಯೋಗ ಕಾಲೇಜ್, ಪಿಕೆಟಿಆರ್ ಹಾಸ್ಪಿಟಲ್‍ನಲ್ಲೂ ಯೋಗ ಶಿಕ್ಷಣ ಪಡೆಯಬಹುದಾಗಿದೆ.

ಯಾವ ಕೆಲಸ ಸಿಗುತ್ತೆ?
* ರಿಸರ್ಚ್ ಆಫೀಸರ್-ಯೋಗ ಮತ್ತು ನ್ಯಾಚೊರೊಪಥಿ
* ಯೋಗ ಏರೋಬಿಕ್ ಇನ್‍ಸ್ಟ್ರಕ್ಟರ್
* ಅಸಿಸ್ಟೆಂಟ್ ಆಯುರ್ವೇದಿಕ್ ಡಾಕ್ಟರ್
* ಕ್ಲೀನಿಕಲ್ ಸೈಕೊಲಾಜಿಸ್ಟ್
* ಯೋಗ ಥೆರಪಿಸ್ಟ್
* ಯೋಗ ಇನ್‍ಸ್ಟ್ರಕ್ಟರ್
* ಯೋಗ ಟೀಚರ್
* ಥೆರಪಿಸ್ಟ್ಸ್ ಮತ್ತು ನ್ಯಾಚುರೊಪಥಿಸ್
* ಹೆಲ್ತ್ ಕ್ಲಬ್‍ಗಳಲ್ಲಿ ಟ್ರೈನರ್/ಇನ್‍ಸ್ಟ್ರಕ್ಟರ್

ನಿಮಗಿದು ತಿಳಿದಿರಲಿ
* ಕಿ.ಪೂ. 2ನೇ ಶತಮಾನದಲ್ಲಿ ಪತಂಜಲಿ ಮುನಿ ಬರೆದ `ಯೋಗ ಸೂತ್ರಗಳು' ಕೃತಿಯನ್ನು ಯೋಗಶಾಸ್ತ್ರದ ಮೂಲಗ್ರಂಥವೆಂದು ಪರಿಗಣಿಸಲಾಗಿದೆ.
* ಕಿ.ಶ. 15ನೇ ಶತಮಾನದಲ್ಲಿ ಸ್ವಾಮಿ ಗೋರಖನಾಥರು ಹಠ ಯೋಗ ಪ್ರದೀಪಿಕ ಎಂಬ ಕೃತಿ ಬರೆದಿದ್ದಾರೆ.

ಯೋಗದಿಂದ ಏನು ಪ್ರಯೋಜನ?
* ದೈಹಿಕ ಮತ್ತು ಮಾನಸಿಕ ಆರೋಗ್ಯ
* ಆಧುನಿಕ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಅನೇಕ ಕಾಯಿಲೆಗಳು ಯೋಗದ ಮೂಲಕ ಪರಿಹಾರವಾಗುತ್ತವೆ.

Monday, 21 November 2016

ಮೆಡಿಕಲ್ ಶಾಪ್ ಇಡಬೇಕೆಂದಿದ್ದೀರಾ? ಇಲ್ಲಿದೆ ಮಾರ್ಗದರ್ಶನ

ಮೆಡಿಕಲ್ ಶಾಪ್ ಇಡಬೇಕೆಂದಿದ್ದೀರಾ? ಇಲ್ಲಿದೆ ಮಾರ್ಗದರ್ಶನ

ಸ್ವಂತ ಮೆಡಿಕಲ್ ಸ್ಟೋರ್ ಓನರ್ ಆಗಬೇಕಾದರೆ ಏನು ಓದಿರಬೇಕು? ಮೆಡಿಕಲ್ ಸ್ಟೋರ್‍ನಲ್ಲಿ ಯಾವೆಲ್ಲ ವಿಧಗಳಿವೆ? ಲೈಸನ್ಸ್ ಪಡೆಯುವುದು ಹೇಗೆ? ರಿಜಿಸ್ಟ್ರೇಷನ್ ಹೇಗೆ? ಫಾರ್ಮಸಿ ಬಿಸ್ನೆಸ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು
ಜಗತ್ತಿನಲ್ಲಿಂದು ರೋಗಗಳಿಗೆ ಬರವಿಲ್ಲ. ಇದಕ್ಕೆ ಪೂರಕವಾಗಿ ಕಾಪೆರ್Çರೇಟ್ ಆಸ್ಪತ್ರೆಗಳೂ, ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಗಳೂ ಹೆಚ್ಚಾಗಿವೆ. ರೋಗಿಗಳಿದ್ದಲ್ಲಿ ಆಸ್ಪತ್ರೆಗಳು ಇರುವಂತೆ, ಆಸ್ಪತ್ರೆಗಳು ಇದ್ದಲ್ಲಿ ಮೆಡಿಕಲ್ ಸ್ಟೋರ್‍ಗಳು ಇದ್ದೇ ಇರುತ್ತವೆ. ಗಲ್ಲಿಗಲ್ಲಿಯಲ್ಲಿಂದು ಮೆಡಿಕಲ್ ಶಾಪ್‍ಗಳು ತಲೆಎತ್ತಿವೆ. ಹೆಲ್ತ್‍ಕೇರ್ ಮತ್ತು ಫಾರ್ಮಸಿ ಬಿಸ್ನೆಸ್ ಜೋರಾಗಿಯೇ ನಡೆಯುತ್ತಿದೆ. ಕೆಲವು ಕಡೆ ಸಾಕಷ್ಟು ಮೆಡಿಕಲ್ ಶಾಪ್‍ಗಳಿದ್ದರೆ, ಇನ್ನು ಕೆಲವೆಡೆ ಒಂದೂ ಮೆಡಿಕಲ್ ಶಾಪ್ ಇಲ್ಲದಿರಬಹುದು. ಇಂತಹ ಸ್ಥಳದಲ್ಲಿ ಮೆಡಿಕಲ್ ಶಾಪ್ ಇದ್ದಿದ್ದರೆ ಸಾಕಷ್ಟು ಜನರಿಗೆ ಹೆಲ್ಪ್ ಆಗಬಹುದಿತ್ತು ಎಂಬ ಭಾವನೆ ನಿಮ್ಮಲ್ಲಿ ಇರಬಹುದು. ಫಾರ್ಮಸಿ ಬಿಸ್ನೆಸ್‍ಗೆ ಬಿ.ಫಾರ್ಮಾ/ಎಂ.ಫಾರ್ಮಾ ಇತ್ಯಾದಿ ಶೈಕ್ಷಣಿಕ ಅರ್ಹತೆ ಇದ್ದರೆ ನೀವೂ ಮೆಡಿಕಲ್ ಶಾಪ್ ಮಾಲಿಕರಾಗಬಹುದು.

 

ಮೆಡಿಕಲ್ ಶಾಪ್ ವಿಧಗಳು
ಮೆಡಿಕಲ್ ಶಾಪ್ ತೆರೆಯಲು ವಿವಿಧ ಬಗೆಯ ಲೈಸನ್ಸ್‍ಗಳು ಅಸ್ತಿತ್ವದಲ್ಲಿವೆ.
1. ಹಾಸ್ಪಿಟಲ್ ಫಾರ್ಮಸಿ: ಆಸ್ಪತ್ರೆಯ ಒಳಭಾಗದಲ್ಲಿ ರೋಗಿಗಳ ಅನುಕೂಲಕ್ಕಾಗಿ ಮೆಡಿಕಲ್ ಶಾಪ್ ನಿರ್ಮಿಸುವುದನ್ನು ಹಾಸ್ಪಿಟಲ್ ಫಾರ್ಮಸಿ ಎನ್ನುತ್ತಾರೆ. ಹೆಚ್ಚಾಗಿ ಇದಕ್ಕೆ ಆ ಆಸ್ಪತ್ರೆಯ ರೋಗಿಗಳೇ ಪ್ರಮುಖ ಗ್ರಾಹಕರಾಗಿರುತ್ತಾರೆ.
2. ಸ್ಟಾಂಡೊಲಾನ್ ಫಾರ್ಮಸಿ: ಯಾವುದಾದರೂ ರೆಸಿಡೆನ್ಶಿಯಲ್ ಪ್ರದೇಶದಲ್ಲಿ ಅಲ್ಲಿನ ನಿವಾಸಿಗಳ ಅನುಕೂಲಕ್ಕಾಗಿ ಫಾರ್ಮಸಿ ಅಥವಾ ಮೆಡಿಕಲ್ ಸ್ಟೋರ್ ಸೆಟಪ್ ಮಾಡುವುದಾಗಿದೆ.
3. ಚೈನ್ ಫಾರ್ಮಸಿ: ಮಾಲ್ ಅಥವಾ ಇತರ ಶಾಪಿಂಗ್ ತಾಣಗಳಲ್ಲಿ ಯಾವುದಾದರೂ ಫಾರ್ಮಸಿ ಜಾಲವು ತನ್ನ ಸ್ಟೋರ್ ತೆರೆಯುವುದಾಗಿದೆ. ಇದು ಒಂದು ನೆಟ್‍ವರ್ಕ್ ಆಗಿ ಕಾರ್ಯನಿರ್ವಹಿಸುತ್ತದೆ.
4. ಟೌನ್‍ಷಿಪ್ ಫಾರ್ಮಸಿ: ಯಾವುದಾದರೂ ಟೌನ್‍ಷಿಪ್ ಒಳಗೆ ಫಾರ್ಮಸಿ ನಿರ್ಮಿಸುವುದನ್ನು ಟೌನ್‍ಷಿಪ್ ಫಾರ್ಮಸಿ ಎನ್ನುತ್ತಾರೆ.
ದೇಶದಲ್ಲಿ ಬಹುತೇಕ ಮೆಡಿಕಲ್ ಸ್ಟೋರ್‍ಗಳಿಂದು ಸ್ಟಾಂಡ್‍ಅಲೋನ್ ಫಾರ್ಮಸಿ ಅನ್ವಯ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಿನಂತಹ ನಗರಗಳಲ್ಲಿ ಇಂದು ಮೆಡ್‍ಪ್ಲಸ್, ಟ್ರಸ್ಟ್ ಕೆಮಿಸ್ಟ್, ಮೆಡ್ ಝೋನ್ ಇತ್ಯಾದಿ ಹಲವು ಚೈನ್ ಫಾರ್ಮಸಿಗಳು ಹೆಚ್ಚಾಗುತ್ತಿವೆ. ಚೈನ್ ಫಾರ್ಮಸಿ, ಟೌನ್‍ಷಿಪ್ ಫಾರ್ಮಸಿಗಳನ್ನು ಹೆಚ್ಚಾಗಿ ಆಸ್ಪತ್ರೆಗಳು ಅಥವಾ ಕಂಪನಿಗಳು ಸ್ಥಾಪಿಸುತ್ತವೆ. ಆದರೆ, ಸ್ಟಾಂಡ್‍ಅಲೊನ್ ಫಾರ್ಮಸಿಗಳನ್ನು ಹೆಚ್ಚಾಗಿ ಸ್ವಂತ ಮಾಲಿಕತ್ವ ಅಥವಾ ಪಾಲುದಾರಿಕೆಯಲ್ಲಿ ಇಂತಹ ಬಿಸ್ನೆಸ್ ಮಾಡಲಾಗುತ್ತದೆ.

ತೆರಿಗೆಗೆ ಸಂಬಂಧಪಟ್ಟ ವಿಷಯ
ಭಾರತದಲ್ಲಿ ಸರಕು ಅಥವಾ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯಾಟ್ ರಿಜಿಸ್ಟ್ರೇಷನ್ ಅವಶ್ಯಕ. ಯಾವ ರಾಜ್ಯದಲ್ಲಿ ನೀವು ಮೆಡಿಕಲ್ ಸ್ಟೋರ್ ತೆರೆಯುವಿರೋ ಅಲ್ಲಿನ ವ್ಯಾಟ್ ನೀತಿನಿಯಮಕ್ಕೆ ತಕ್ಕಂತೆ ನೀವು ಕಾರ್ಯನಿರ್ವಹಿಸಬೇಕಾಗುತ್ತದೆ. ಆಯಾ ರಾಜ್ಯದ ವ್ಯಾಟ್ ಅಥವಾ ಮಾರಾಟ ತೆರಿಗೆ ಇಲಾಖೆಗೆ ವ್ಯಾಟ್ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ. ಕರ್ನಾಟಕ ವ್ಯಾಟ್ ರಿಜಿಸ್ಟ್ರೇಷನ್‍ಗಾಗಿ ಈ ವೆಬ್ ವಿಳಾಸಕ್ಕೆ ಭೇಟಿ ನೀಡಿರಿ. 

ಲೈಸನ್ಸ್ ಪಡೆಯುವುದು ಹೇಗೆ?
ಫಾರ್ಮಸಿ ಬಿಸ್ನೆಸ್‍ಗೆ ಫಾರ್ಮಸಿ ಅಥವಾ ಡ್ರಗ್ ಲೈಸನ್ಸ್ ಪಡೆಯುವುದು ಅತ್ಯಂತ ಅಗತ್ಯ. ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಜೇಶನ್ ಮತ್ತು ಸ್ಟೇಟ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಜೇಶನ್ ಕಂಟ್ರೋಲ್ ಈ ಡ್ರಗ್ ಲೈಸನ್ಸ್ ನೀಡುತ್ತದೆ. ಸಾಮಾನ್ಯ ಮೆಡಿಕಲ್ ಶಾಪ್ ತೆರೆಯಲು ರಿಟೇಲ್ ಡ್ರಗ್ ಲೈಸನ್ಸ್(ಆರ್‍ಡಿಎಲ್) ಸಾಕಾಗುತ್ತದೆ. ವೋಲ್ ಸೇಲ್ ಡ್ರಗ್ ಲೈಸನ್ಸ್(ಡಬ್ಲ್ಯುಡಿಎಲ್) ಸಹ ದೊರಕುತ್ತದೆ. ಹೆಚ್ಚಿನ ರಾಜ್ಯಗಳಲ್ಲಿ ಫಾರ್ಮಾಸಿಯಲ್ಲಿ ಪದವಿ ಅಥವಾ ಡಿಪ್ಲೊಮಾ ಪಡೆದವರಿಗೆ ಮಾತ್ರ ಇಂತಹ ಲೈಸನ್ಸ್ ದೊರಕುತ್ತದೆ. ಈ ಕಂಡಿಷನ್ ವೋಲ್‍ಸೇಲ್ ಡ್ರಗ್ ಲೈಸನ್ಸ್‍ಗೆ ಅನ್ವಯವಾಗುವುದಿಲ್ಲ.

ಏನೆಲ್ಲ ಬೇಕು?
ಮೆಡಿಕಲ್ ಶಾಪ್ ಲೈಸನ್ಸ್ ಪಡೆಯಲು ಅಥವಾ ಮೆಡಿಕಲ್ ಶಾಪ್ ನಿರ್ಮಿಸಲು ಬೇಕಾಗುವ ಕನಿಷ್ಠ ಅವಶ್ಯಕತೆಗಳು ಈ ರೀತಿ ಇವೆ.
* ಸ್ಥಳ: ಮೆಡಿಕಲ್ ಶಾಪ್‍ಗಾದರೆ ಕನಿಷ್ಠ 10 ಚದರಡಿ ಸ್ಥಳಾವಕಾಶ ಇರಬೇಕು. ಎಲ್ಲಾದರೂ ರಿಟೇಲ್ ಅಥವಾ ವೋಲ್‍ಸೇಲ್ ಬಿಸ್ನೆಸ್‍ಗೆ ಕನಿಷ್ಠ 15 ಚದರಡಿ ಸ್ಥಳಾವಕಾಶ ಇರಬೇಕು.
* ಸ್ಟೋರೇಜ್: ಮೆಡಿಕಲ್ ಶಾಪ್‍ನಲ್ಲಿ ಕಡ್ಡಾಯವಾಗಿ ರೆಫ್ರಿಜರೇಟರ್ ಇರಬೇಕು.
* ಸಿಬ್ಬಂದಿ ವರ್ಗ: ಮೆಡಿಕಲ್ ಶಾಪ್‍ನಲ್ಲಿ ಔಷಧ ಮಾರಾಟ ಮಾಡುವವರು ಫಾರ್ಮಾ ಸಂಬಂಧಿತ ಶಿಕ್ಷಣ ಪಡೆದಿರಬೇಕು.

ಏನು ಓದಿರಬೇಕು?
ಫಾರ್ಮಸಿ ಲೈಸನ್ಸ್ ಪಡೆಯಲು ಮತ್ತು ಫಾರ್ಮಸಿ ರಿಜಿಸ್ಟ್ರಾರ್ ಮಾಡಲು ನೀವು ಬಿ.ಫಾರ್ಮಾ ಅಥವಾ ಎಂ. ಫಾರ್ಮಾ ಓದಿರಬೇಕು. ಕೆಲವರು ಈ ರೀತಿ ಶಿಕ್ಷಣ ಪಡೆದವರ ಹೆಸರಿನಲ್ಲಿ ಗುಡ್‍ವಿಲ್ ಪೇಮೇಂಟ್ ಒಪ್ಪಂದ ಮಾಡಿಕೊಂಡು ಮೆಡಿಕಲ್ ಶಾಪ್ ನಿರ್ಮಿಸಬಹುದು. ಇದು ನ್ಯಾಯಸಮ್ಮತವಲ್ಲವಾದರೂ ದೇಶದಲ್ಲಿಂದು ಇಂತಹ ಮೆಡಿಕಲ್ ಸಂಖ್ಯೆ ಸಾಕಷ್ಟಿದೆ.
ನೀವು ಎಷ್ಟು ಹಣ ಹೂಡಿಕೆ ಮಾಡಲು ರೆಡಿ ಇದ್ದೀರಿ ಎನ್ನುವುದರ ಮೇಲೆ ನೀವು ಎಷ್ಟು ದೊಡ್ಡ ಮೆಡಿಕಲ್ ಸ್ಟೋರ್ ನಿರ್ಮಿಸಬಹುದು ಎನ್ನುವುದು ನಿಂತಿದೆ. ಪುಟ್ಟ ಕೋಣೆಯಂತಹ ರೂಂಗೆ ಬಾಡಿಗೆ, ಅಡ್ವಾನ್ಸ್ ಎಂದು ಹಲವು ಲಕ್ಷ ಖರ್ಚು ಮಾಡಬೇಕಾಗುತ್ತದೆ. ನಂತರ ಅಲ್ಲಿ ಔಷಧಗಳನ್ನು ಸಂಗ್ರಹಿಸಬೇಕು.
ಇಂತಹ ಮೆಡಿಕಲ್ ಸ್ಟೋರ್ ಮಾಡಿದ ನಂತರ ಡಾಕ್ಟರ್ ಅಥವಾ ಹಾಸ್ಪಿಟಲ್‍ನ ನೆಟ್‍ವರ್ಕ್ ನಿಮಗೆ ಅಗತ್ಯವಿರುತ್ತದೆ. ನೀವು ಗಮನಿಸಿರಬಹುದು. ಕೆಲವು ಡಾಕ್ಟರ್‍ಗಳು ಅವರು ಹೇಳಿದ ಮೆಡಿಕಲ್ ಸ್ಟೋರ್‍ಗೆ ಹೋಗುವಂತೆ ತಿಳಿಸುತ್ತಾರೆ. ಇಲ್ಲಿ ಡಾಕ್ಟರ್‍ಗೂ ಮೆಡಿಕಲ್ ಸ್ಟೋರ್‍ನವರಿಗೂ ಒಳ ಒಪ್ಪಂದ ಇರುತ್ತದೆ. ಇಂತಹ ನೆಟ್ ವರ್ಕ್ ಳಿದ್ದರೆ ಮಾತ್ರ ಔಷಧಗಳು ಹೆಚ್ಚು ಮಾರಾಟವಾಗುತ್ತವೆ. ಇದು ಕೂಡ ನೈತಿಕ ಹಾದಿಯಲ್ಲ. ಆದರೆ, ಹೆಚ್ಚಿನವರು ಇದೇ ಹಾದಿಯನ್ನು ಫಾಲೊ ಮಾಡುತ್ತಿದ್ದಾರೆ.

ಡಾಕ್ಯುಮೆಂಟ್ಸ್ ಏನುಬೇಕು?
ಡ್ರಗ್ ಲೈಸನ್ಸ್ ಪಡೆಯಲು ಮತ್ತು ಮೆಡಿಕಲ್ ಶಾಪ್ ತೆರೆಯಲು ಬೇಕಾದ ಅರ್ಜಿ ನಮೂನೆಗಳು ಮತ್ತು ದಾಖಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ನೀವು ಕರ್ನಾಟಕ ರಾಜ್ಯದವರಾದರೆ ಈ ರಾಜ್ಯದ ಫಾರ್ಮಸಿ ಲೈಸನ್ಸ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಳ್ಳಬೇಕು. ಡ್ರಗ್ ಲೈಸನ್ಸ್‍ಗಾಗಿ ಡೆಪೆÇಸಿಟ್ ಮಾಡಿದ ಮೊತ್ತದ ಚಲನ್, ಡಿಕ್ಲರೇಷನ್, ಸ್ಥಳದ ಕೀ ಪ್ಲಾನ್, ಸೈಟ್ ಪ್ಲಾನ್ ಬ್ಲೂಪ್ರಿಂಟ್ ಇತ್ಯಾದಿಗಳನ್ನು ನೀಡಬೇಕಾಗುತ್ತದೆ. ಈ ಕುರಿತು ಮಾಹಿತಿ ಪಡೆಯಲು ಮತ್ತು ಅರ್ಜಿ ನಮೂನೆಗಾಗಿ ವೆಬ್‍ಸೈಟ್ ಗೆ ಭೇಟಿ ನೀಡಿ.

Published in Vijaya Karnataka Mini

Friday, 18 November 2016

ವಿದೇಶಿ ಉದ್ಯೋಗಕ್ಕೆ ಹೋಗುವಿರಾ? ಈ ಮಾಹಿತಿಗಳು ನಿಮ್ಮ ಗಮನದಲ್ಲಿ ಇರಲಿ

ವಿದೇಶಿ ಉದ್ಯೋಗಕ್ಕೆ ಹೋಗುವಿರಾ? ಈ ಮಾಹಿತಿಗಳು ನಿಮ್ಮ ಗಮನದಲ್ಲಿ ಇರಲಿ

ಫಾರಿನ್ ಎಂಬ ಮೂರಕ್ಷರದ ಸೆಳೆದ ಅಗಾಧವಾದದ್ದು. ವಿದೇಶಕ್ಕೆ ತೆರಳಿ ಅಲ್ಲಿ ಕೈತುಂಬಾ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎನ್ನುವುದು ಬಹುತೇಕರ ಕನಸು. ಫಾರಿನ್‍ಗೆ ಹೋಗಿ ಬಂದವರನ್ನು ಕಂಡಾಗ ನಮ್ಮಲ್ಲಿನ ಯುವಕರಿಗೂ ಆಸೆ ಚಿಗುರುತ್ತದೆ. ನಾವೂ ಅವರಂತಾಗಬೇಕು ಎಂದು ಸಾಲಗೀಲ ಮಾಡಿ ವೀಸಾ, ಪಾಸ್‍ಪೆÇೀರ್ಟ್ ರೆಡಿ ಮಾಡುತ್ತಾರೆ. ಕಾಣದ ಕಡಲಿಗೆ ಹಂಬಲಿಸಿದ ಮನದಂತೆ ಗೊತ್ತಿಲ್ಲದ ಊರಿಗೆ ಪ್ರಯಾಣ ಬೆಳೆಸುತ್ತಾರೆ.
ನಿಮಗೆ ಗೊತ್ತಿರಬಹುದು. ದುಬೈನಲ್ಲೀಗ ಮಹಾ ಬಿಕ್ಕಟ್ಟು. ತೈಲವನ್ನು ಮೊಗೆಮೊಗೆದು ಹಣ ಸಂಪಾದಿಸಿ ಶ್ರೀಮಂತವಾದ ಕೊಲ್ಲಿ ರಾಷ್ಟ್ರದಲ್ಲೀಗ ವಿದೇಶಿಗರು ಹಸಿವಿನಿಂದ ಕಂಗೆಟ್ಟಿದ್ದಾರೆ. ಲಕ್ಷ ಲಕ್ಷ ಭಾರತೀಯರು ಭಾರತಕ್ಕೆ ವಾಪಸ್ಸಾಗಲೂ ಆಗದೆ, ಅಲ್ಲಿರಲು ಆಗದೆ ತತ್ತರಿಸಿದ್ದಾರೆ. ಕಣ್ಣುಮುಚ್ಚಿ ವಿದೇಶಕ್ಕೆ ಉದ್ಯೋಗದ ಆಸೆಯಿಂದ ಹೋಗುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಬಲ್ಲದು. ವಿದೇಶಿ ಉದ್ಯೋಗದ ಕನಸಿನಲ್ಲಿರುವವರಿಗೆ ಒಂದಿಷ್ಟು ಟಿಪ್ಟ್‍ಗಳು ಇಲ್ಲಿವೆ.

* ಪ್ರವೀಣ್ ಚಂದ್ರ ಪುತ್ತೂರು

ಮಧ್ಯವರ್ತಿಗಳಿಂದ ಮೋಸ: ವಿದೇಶದಲ್ಲಿ ಕೆಲಸ ಮಾಡಲು ಬಯಸುವ ಭಾರತೀಯರನ್ನು ವಂಚಿಸಲೆಂದೇ ಸಾಕಷ್ಟು ವಂಚಕರು ಬಕಪಕ್ಷಿಗಳಂತೆ ಕಾದುಕುಳಿತಿದ್ದಾರೆ. ಫಾರಿನ್‍ನಲ್ಲಿ ಜಾಬ್ ನೀಡುತ್ತೇವೆ ಎಂದು ಭರವಸೆ ನೀಡಿ ವೀಸಾ, ಪಾಸ್‍ಪೆÇೀರ್ಟ್ ಇತ್ಯಾದಿ ಶುಲ್ಕವೆಂದು ಹೇಳಿ ಲಕ್ಷಲಕ್ಷ ಪೀಕಿ ಪರವೂರಿನಲ್ಲಿ ನರಕದರ್ಶನ ಮಾಡಿಸಲೆಂದೇ ಹಲವು ಏಜೆನ್ಸಿಗಳು, ಮಧ್ಯವರ್ತಿಗಳು ಇರುತ್ತಾರೆ. ವಿದೇಶಿ ಜಾಬ್ ಆಫರ್ ನೀಡುವ ಅಪರಿಚಿತ ಮಧ್ಯವರ್ತಿಗಳನ್ನು ಯಾವತ್ತೂ ನಂಬಲೇಬೇಡಿ. ಹೀಗಾಗಿ ನಂಬಿಕಸ್ಥ ಏಜೆನ್ಸಿಗಳ ಮುಖಾಂತರ ಮಾತ್ರ ಹೋಗಿ. ನೀವು ಆಯ್ಕೆ ಮಾಡಿಕೊಳ್ಳುವ ಏಜೆನ್ಸಿಗಳ ಕುರಿತು ಏನಾದರೂ ದೂರುಗಳಿವೆಯೇ ಎಂದು ಆನ್‍ಲೈನ್ ಫಾರಮ್‍ಗಳಲ್ಲಿ ಹುಡುಕಾಡಿ.

ವೀಸಾದ ವಿಷಯ: ನಿಮಗೆ ಉದ್ಯೋಗದ ಆಫರ್ ಜೊತೆ ನೀಡಿರುವ ವೀಸಾವನ್ನು ಸರಿಯಾಗಿ ಓದಿಕೊಳ್ಳಿ. ಕೆಲವರು ವಿಸಿಟಿಂಗ್ ವೀಸಾ ಕೊಟ್ಟು ನಿಮ್ಮನ್ನು ಕೆಲಸಕ್ಕೆ ಕಳುಹಿಸುತ್ತಾರೆ. ಆಮೇಲೆ ನೀವು ಆ ದೇಶದಲ್ಲಿ ಕದ್ದು ಮುಚ್ಚಿ (ಕೆಲವೊಮ್ಮೆ ಸಂಪೂರ್ಣವಾಗಿ ಗ್ರಹಬಂಧನದಲ್ಲಿ) ಬದುಕಬೇಕಾಗುತ್ತದೆ. ಹೀಗಿದ್ದರೆ, ಅಲ್ಲಿಂದ ವಾಪಸ್ ಬರಲು ಸಹ ಕಳ್ಳತನದ ಹಾದಿಯನ್ನೇ ಹಿಡಿಯಬೇಕಾಗುತ್ತದೆ. ಸಿಕ್ಕಿಬಿದ್ದರೆ ಕಠಿಣ ಶಿಕ್ಷೆಗೂ ಒಳಗಾಗಬೇಕಾಗುತ್ತದೆ. ವೀಸಾದ ಅವಧಿ ಎಷ್ಟಿದೆ ಎಂದು ಖಚಿತಪಡಿಸಿಕೊಳ್ಳಿ. ಅತ್ಯಂತ ಕಡಿಮೆ ಅವಧಿಯದ್ದಾಗಿದ್ದರೆ ವಾಪಸ್ ಬರಲು ವ್ಯವಸ್ಥೆಯೇನಿದೆ? ನೀವು ಅಷ್ಟು ದಿನ ದುಡಿದ ಹಣ ವಿಮಾನ ಟಿಕೇಟ್‍ಗೆ ಸಾಕಾಗಬಲ್ಲದೇ? ತಿಳಿದುಕೊಳ್ಳಿ.

ಯಾವ ಕಂಪನಿ?: ನಿಮಗೆ ಯಾವ ಕಂಪನಿಯಿಂದ ಜಾಬ್ ಆಫರ್ ಬಂದಿದೆ ಎಂದು ತಿಳಿದುಕೊಳ್ಳಿ. ಅಂತಹ ಕಂಪನಿ ಅಸ್ತಿತ್ವದಲ್ಲಿದೆಯೇ ತಿಳಿದುಕೊಳ್ಳಿ. ನಿಮಗೆ ಉದ್ಯೋಗದ ಆಫರ್ ನೀಡಿದ ಕಂಪನಿಯ ಅಸಲಿಯತ್ತನ್ನು ವೆಬ್‍ಸೈಟ್‍ನಲ್ಲಿಯೂ ಪರಿಶೀಲಿಸಬಹುದು. ಇದು ಬೆಂಗಳೂರಿನ ರಿಜೋರ್ಸ್ ರಿಸೋರ್ಸ್ ಫೌಂಡೇಷನ್ ಆಗಿದ್ದು, ಅಸಲಿ ಮತ್ತು ನಕಲಿ ಕಂಪನಿಗಳನ್ನು ಖಚಿತಪಡಿಸಲಾಗುತ್ತದೆ.

ಭಾವನಾತ್ಮಕ ಸಂಗತಿ: ಮೊದಲಿಗೆ ನೀವು ಪರವೂರಿನಲ್ಲಿ ಕೆಲಸ ಮಾಡುವಷ್ಟು ಮಾನಸಿಕ ಸಾಮಥ್ರ್ಯ ಹೊಂದಿದ್ದೀರೋ ತಿಳಿದುಕೊಳ್ಳಿ. ಅಲ್ಲಿ ಅತ್ಯಂತ ಕಷ್ಟವನ್ನೂ ಎದುರಿಸಬೇಕಾದೀತು. ಮನೆಯವರ ನೆನಪು ಕಾಡಬಹುದು. ಇವೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು ಫಾರಿನ್‍ಗೆ ಹೋಗುವ ಕುರಿತು ನಿರ್ಧಾರ ಮಾಡಿ.

ಎಲ್ಲಿಗೆ ಹೋಗುವಿರಿ?: ತೈಲ ದರ ಇಳಿಕೆಯಿಂದ ಬಿಕ್ಕಟ್ಟು ಅನುಭವಿಸುತ್ತಿರುವ ದುಬೈಗೋ, ಐಸಿಸ್ ಹಾವಳಿ ಅತಿಯಾಗಿರುವ ಇನ್ನೊಂದು ದೇಶಕ್ಕೋ, ಬಂಡುಕೋರರು ಇರುವ ಆ ದೇಶಕ್ಕೋ, ರಾಜಕೀಯ ಸಿತ್ಯಾಂತರದಲ್ಲಿ ಗಲಭೆಯೇಳುತ್ತಿರುವ ದೇಶಕ್ಕೋ, ವಿದೇಶಿಗರ ಮೇಲೆ ಸದಾ ಹಲ್ಲೆ ನಡೆಸುತ್ತಿರುವ ಅಸುರಕ್ಷಿತ ದೇಶಕ್ಕೋ... ಯಾವ ದೇಶಕ್ಕೆ ನೀವು ಹೋಗುವಿರಿ? ಅಲ್ಲಿನ ಬೆಳವಣಿಗೆಗಳೇನು? ಇತ್ಯಾದಿಗಳನ್ನು ತಿಳಿದುಕೊಂಡೇ ಮುಂದುವರೆಯಿರಿ.

ಎಷ್ಟು ವೇತನ ಸಿಗುತ್ತದೆ?: ಕೆಲವು ಉದ್ಯೋಗದ ಆಫರ್‍ಗಳು ಭಾರತದ ಹಣದ ಲೆಕ್ಕದಲ್ಲಿ ಆಫರ್ ನೀಡುತ್ತವೆ. ಆದರೆ, ವಿದೇಶದಲ್ಲಿ ಅಲ್ಲಿನ ಖರ್ಚುವೆಚ್ಚುಗಳು ಹೆಚ್ಚಿರುವುದರಿಂದ ಹಣ ಉಳಿಸುವುದು ಕಷ್ಟವಾಗುತ್ತದೆ. ನಿಮ್ಮ ವೇತನದಲ್ಲಿಯೇ ವಸತಿ ಇತ್ಯಾದಿಗಳೂ ಕಟ್ ಆದರೆ ನಿಮಗೆ ಏನೂ ಉಳಿಯದು. ಅದಕ್ಕಾಗಿ ಅತ್ಯಧಿಕ ಮೊತ್ತದ ಆಫರ್ ಸಿಕ್ಕಿದೆಯೇ, ಸಾಧಾರಣ ವೇತನದ ಆಫರ್ ದೊರಕಿರುವುದೇ ತಿಳಿದು ಮುಂದುವರೆಯಿರಿ. ವಸತಿ ಸೌಲಭ್ಯ ಇಲ್ಲದಿದ್ದರೆ ಗೊತ್ತಿಲ್ಲದ ಊರಿನಲ್ಲಿ ಎಲ್ಲಿ ಉಳಿದುಕೊಳ್ಳುವಿರಿ. ಅದಕ್ಕೆ ಬೇಕಾದಷ್ಟು ಹಣ ಎಲ್ಲಿಂದ ಹೊಂದಿಸುವಿರಿ.

ಕೌಶಲವಿದೆಯೇ?: ಫಾರಿನ್ ಜಾಬ್ ಆಫರ್ ಮಾಡುವಾಗ ನಿಮ್ಮಲ್ಲಿ ಯಾವುದಾದರೂ ಕೌಶಲವನ್ನು ಬಯಸಲಾಗುತ್ತದೆ. ಅಲ್ಲಿ ಹೋದ ಮೇಲೆ ನಿಮ್ಮಲ್ಲಿ ಆ ಕಂಪನಿಗೆ ಬೇಕಾದಷ್ಟು ಕೌಶಲವಿಲ್ಲವೆಂದು ಕೆಲಸದಿಂದ ತೆಗೆದು ಹಾಕಬಹುದು. ಆಗ ನಿಮ್ಮಲ್ಲಿ ಅಭದ್ರತೆ ಉಂಟಾಗಬಹುದು. ಸಿಕ್ಕ ಸಿಕ್ಕ ಕೆಲಸಕ್ಕೆ ಸೇರುವ ಅನಿವಾರ್ಯತೆ ಉಂಟಾಗಬಹುದು. ಹೋದ ಮೇಲೆ ಹೇಗೋ ಮ್ಯಾನೇಜ್ ಮಾಡಬಹುದೆಂದು ಅರೆಬರೆ ಕೌಶಲದೊಂದಿಗೆ ವಿಮಾನ ಹತ್ತಬೇಡಿ. ಆಮೇಲೆ ಕಷ್ಟಪಡಬೇಕಾದೀತು. ಸಂಬಂಧಿತ ಕೌಶಲವನ್ನು ಸರಿಯಾಗಿ ಪಡೆದುಕೊಂಡೇ ಫಾರಿನ್‍ಗೆ ಹೋಗಿ.

ಜಾಬ್ ಲೀಗಲ್ ಆಗಿರುವುದೇ?: ವಿದೇಶದಲ್ಲಿ ಜಾಬ್ ಕೊಡಿಸುತ್ತೇವೆ ಎಂದು ಯಾರೋ ಕರೆದರೂ ಎಂದು ಹೋಗಬೇಡಿ. ಅಲ್ಲಿ ನಿಮಗೇನು ಕೆಲಸವೆಂದು ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರು ವಿದೇಶಿಗರನ್ನು ಬಳಸಬಹುದು. ವಿದೇಶಿ ನೆಲದಲ್ಲಿ ಇಲ್ಲಿಗಲ್ ಚಟುವಟಿಕೆ ನಡೆಸಿ ಸಿಕ್ಕಿ ಬಿದ್ದರೆ ಮತ್ತೆ ಭಾರತಕ್ಕೆ ವಾಪಸ್ ಆಗುವುದು ಕಷ್ಟವಾದೀತು.
ವಿದೇಶದಲ್ಲಿ ಕೆಲಸ ಮಾಡಿ ಕೈತುಂಬಾ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎಂಬ ಕನಸು ಕಾಣುವುದು ತಪ್ಲಲ್ಲ. ಒಳ್ಳೆಯ ಅವಕಾಶ ಸಿಕ್ಕಾಗ ಖಂಡಿತವಾಗಿಯೂ ಹೋಗಬಹುದು. ದೇಶದ ಆರ್ಥಿಕತೆಗೆ ವಿದೇಶದಲ್ಲಿರುವ ಭಾರತೀಯರ ಕೊಡುಗೆ ಸಾಕಷ್ಟಿದೆ. ಆದರೆ, ಫಾರಿನ್ ಜಾಬ್ ಆಫರ್ ಬಂದಾಕ್ಷಣ ಹಿಂದೆಮುಂದೆ ನೋಡದೆ ಹೊರಡುವ ಮೊದಲು ಎಲ್ಲರೂ ಎಚ್ಚರಿಕೆ ವಹಿಸಬೇಕೆನ್ನುವುದೇ ನಮ್ಮ ಕಳಕಳಿ.
ಇತ್ತ ಗಮನಿಸಿ
* ಭಾಷೆ ಗೊತ್ತೆ?: ಉದಾಹರಣೆಗೆ ದುಬೈಗೆ ಹೋದರೆ ಅಲ್ಲಿ ಅರೇಬಿಕ್ ಪ್ರಮುಖ ಭಾಷೆ. ನೀವು ಹೋಗುವ ದೇಶದ ಭಾಷೆ ನಿಮಗೆ ಗೊತ್ತಿದ್ದರೆ ಎಂತಹ ಪರಿಸ್ಥಿತಿಯಿಂದಲೂ ಪಾರಾಗಬಹುದು. ಇಂಗ್ಲಿಷ್‍ನಂತಹ ಭಾಷೆಯಾದರೂ ಗೊತ್ತಿರಲಿ. ನಿಮ್ಮ ಸಂಬಂಧಿಕರು, ಸ್ನೇಹಿತರು ಅಲ್ಲಿದ್ದರೆ ಅವರನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಳ್ಳಿ.
* ಅಲ್ಲಿ ನಿಮಗೆ ಉದ್ಯೋಗ ಗ್ಯಾರಂಟಿ ಇದೆಯೇ ತಿಳಿದುಕೊಳ್ಳಿ. ಕೆಲವು ಏಜೆನ್ಸಿಗಳು ಯಾವುದೋ ಐಟಿ ಉದ್ಯೋಗದ ಆಫರ್ ನೀಡಬಹುದು. ಅಲ್ಲಿ ಹೋದಮೇಲೆ ನೀವು ಮನೆಕೆಲಸ ಅಥವಾ ಒಂಟೆ ತೊಳೆಯುವ ಕೆಲಸ ಮಾಡಬೇಕಾದೀತು.
* ಕಾನೂನು ಅರಿವು ಇರಲಿ: ಆಯಾ ದೇಶದ ವೀಸಾದಲ್ಲಿ ಏನು ಮಾಡಬಹುದು ಮತ್ತು ಏನು ಮಾಡಬಾರದು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ.

ಆನ್‍ಲೈನ್ ವಂಚಕರಿದ್ದಾರೆ ಎಚ್ಚರಿಕೆ!
ಹೆಸರು ಹರ್ಷ. ಸಾಫ್ಟ್‍ವೇರ್ ಎಂಜಿನಿಯರ್. ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿ (40). ಇವರ ಇಮೇಲ್‍ಗೆ ಒಂದು ಸಂದೇಶ ಬಂದಿತ್ತು. ಲಂಡನ್‍ನ ಬಿ.ಎಚ್. ಸಾಲಿಸಿಟರ್ ಸಾಫ್ಟ್‍ವೇರ್ ಕಂಪನಿಯಲ್ಲಿ ಉದ್ಯೋಗಾವಕಾಶವಿದೆ. ಮಾಸಿಕ 8 ಲಕ್ಷಕ್ಕೂ ಹೆಚ್ಚು ವೇತನ ಮತ್ತು ಇತರ ಸೌಲಭ್ಯವಿದೆ ಎಂದು ಇಮೇಲ್‍ನಲ್ಲಿ ಬರೆಯಲಾಗಿತ್ತು. ಹರ್ಷ ಅವರು ಇಮೇಲ್ ಮೂಲಕವೇ ಉದ್ಯೋಗಕ್ಕೆ ಸೇರಲು ಸಮ್ಮತಿಸಿದರು. ಫಾರಿನ್‍ಗೆ ಹೋಗಲು ವಿವಿಧ ಹಂತಗಳಲ್ಲಿ ಆ ಕಡೆಯಿಂದ ದುಡ್ಡು ಕೇಳಲಾಗಿದೆ. ಏಪ್ರಿಲ್‍ನಿಂದ ಆಕ್ಟೋಬರ್‍ವರೆಗೆ ವಿವಿಧ ಕಂತುಗಳಲ್ಲಿ ಹರ್ಷ 26.50 ಲಕ್ಷ ಪಾವತಿಸಿದ್ದಾರೆ. ನಂತರ ಆ ಕಡೆಯಿಂದ ಇಮೇಲ್ ಬರುವುದು ಸ್ಥಗಿತವಾಗಿದೆ. ಕಳೆದ ವರ್ಷ ಡಿ. 2ರಂದು ಈ ಕುರಿತು ಬೆಂಗಳೂರು ಸೈಬರ್ ಕ್ರೈಂ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂತಹ ಹಲವು ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಲೇ ಇವೆ. ಮೊಬೈಲ್, ಇಮೇಲ್ ಖಾತೆಗೆ ಉದ್ಯೋಗದ ಆಫರ್ ನೀಡುವ ಅನಾಮಿಕ ಸಂದೇಶಗಳ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ಸೈಬರ್ ಕ್ರೈಂ ಪೆÇಲೀಸರು ಪದೇ ಪದೇ ಎಚ್ಚರಿಸುತ್ತಲೇ ಇದ್ದಾರೆ.


www.praveenputtur.com


Published in VK Mini


Monday, 14 November 2016

Healthcareನಲ್ಲಿ ಯಾವ್ಯಾವ ಉದ್ಯೋಗಗಳು ಇವೆ? ಏನು ಓದಿರಬೇಕು?

Healthcareನಲ್ಲಿ ಯಾವ್ಯಾವ ಉದ್ಯೋಗಗಳು ಇವೆ? ಏನು ಓದಿರಬೇಕು?

ಆರೋಗ್ಯವಲಯದಲ್ಲಿ ಈಗ ಬೇಡಿಕೆಯಲ್ಲಿರುವ ಮತ್ತು ಮುಂದೆ ಬೇಡಿಕೆ ಪಡೆಯಲಿರುವ ವಿವಿಧ ಉದ್ಯೋಗಾವಕಾಶಗಳ ಮಾಹಿತಿ ಇಲ್ಲಿದೆ.

ಹೆಲ್ತ್‍ಕೇರ್ ಎಂದರೆ ಔಷಧ ಮತ್ತು ಚಿಕಿತ್ಸಾ ವಿಭಾಗ ಮಾತ್ರವಲ್ಲದೆ ಇವೆರಡಕ್ಕೂ ಬೆಂಬಲ ನೀಡುವ ವಿಭಾಗವೂ ಸೇರಿದೆ. ಡಾಕ್ಟರ್, ನರ್ಸ್ ಮಾತ್ರವಲ್ಲದೆ ಆರೋಗ್ಯ ಸೇವೆಗೆ ಸಂಬಂಧಪಟ್ಟ ಇತರ ಉದ್ಯೋಗಗಳೂ ಬೇಡಿಕೆ ಪಡೆಯುತ್ತಿವೆ. ಆರೋಗ್ಯ ಸೇವಾ ವಿಭಾಗಕ್ಕೆ ಪ್ರವೇಶ ಪಡೆಯಲು ಆಯಾ ವಿಭಾಗದ ವಿಶೇಷ ಕೌಶಲಗಳು ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಆರೋಗ್ಯ ಸೇವಾ ವಿಭಾಗಗಳಲ್ಲಿ ಬೇಡಿಕೆ ಪಡೆಯುವ ನಿರೀಕ್ಷೆಯಲ್ಲಿರುವ ಕೆಲವು ಹುದ್ದೆಗಳ ವಿವರ ಇಲ್ಲಿದೆ.

ಫಾರ್ಮಾಸಿಸ್ಟ್
ಔಷಧ ವಿಭಾಗದಲ್ಲಿ ಕೆಲಸ ಮಾಡುವ ಫಾರ್ಮಾಸಿಸ್ಟ್‍ಗಳಿಗೆ ಈಗಲೂ ಉತ್ತಮ ಬೇಡಿಕೆಯಿದೆ. ಮುಂದೆಯೂ ಬೇಡಿಕೆ ಇರುವ ನಿರೀಕ್ಷೆ ಇದೆ. ಔಷಧ ತಯಾರಿಕೆ ಮಾತ್ರವಲ್ಲದೆ ರೋಗಿಯೂ ಎಷ್ಟು ಪ್ರಮಾಣದಲ್ಲಿ ಔಷಧ ಸೇವಿಸಬೇಕೆಂಬ ಸಂಶೋಧನೆಯೂ ಫಾರ್ಮಾಸಿಸ್ಟ್ ಮಾಡಬೇಕಾಗುತ್ತದೆ. ಇದು ಹೊಸ ಬಗೆಯ ಉದ್ಯೋಗವಲ್ಲದೆ ಇದ್ದರೂ ಈಗ ಔಷಧೀಯ ಲೋಕದಲ್ಲಿ ಹೊಸ ಹೊಸ ಅನ್ವೇಷಣೆಗಳು, ಬದಲಾವಣೆಗಳು ಉಂಟಾಗುತ್ತಿರುವುದರಿಂದ ಫಾರ್ಮಾಸಿಸ್ಟ್ ಉದ್ಯೋಗವು ಹೊಸ ಆಯಾಮದತ್ತ ತೆರೆದುಕೊಳ್ಳುತ್ತಿದೆ. ಫಾರ್ಮಾಸಿಸ್ಟ್‍ಗಳು ಡಾಕ್ಟರ್‍ಗಳಿಗೆ ಔಷಧ ತಯಾರಿಸಿ ವಿತರಿಸುವ ಕೆಲಸಕ್ಕೆ ಮಾತ್ರ ಇರುವವರಲ್ಲ. ವೈದ್ಯಕೀಯ ಸಿಬ್ಬಂದಿಗಳಿಗೆ ಔಷಧ ಕುರಿತಾದ ಸಂದೇಹಗಳಿದ್ದರೆ ಪರಿಹರಿಸುವುದು, ಸಂಶೋಧನೆಗಳನ್ನು ಕೈಗೊಳ್ಳುವುದು, ಆಸ್ಪತ್ರೆಗಳಿಗೆ ಆಗಾಗ ಭೇಟಿ ನೀಡಿ ಔಷಧಗಳ ಪರಿಣಾಮಗಳ ಕುರಿತು ನಿಗಾ ವಹಿಸುವುದೂ ಇವರ ಕೆಲಸವಾಗಿದೆ.
ಈ ಕ್ಷೇತ್ರದಲ್ಲಿ ಆರಂಭಿಕರಿಗೆ ಅಥವಾ ಫ್ರೆಷರ್ಸ್‍ಗಳಿಗೆ ಉತ್ತಮ ಬೇಡಿಕೆಯಿದೆ. ಈಗ ಶೇಕಡ 60ರಷ್ಟು ಫಾರ್ಮಾಸಿಸ್ಟ್ ಉದ್ಯೋಗವು ಎಂಟ್ರಿ ಲೆವೆಲ್ ಹಂತದಲ್ಲಿದೆ. ಉಳಿದ ಹುದ್ದೆಗಳು ಅನುಭವಿಗಳಿಗೆ ಮೀಸಲಾಗಿದೆ. ಈ ಕ್ಷೇತ್ರದಲ್ಲಿ ಫ್ರೆಷರ್ಸ್‍ಗಳು ವರ್ಷಕ್ಕೆ 1.5-3.5 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ.

ಐಟಿ ಎಕ್ಸಿಕ್ಯೂಟಿವ್ಸ್
ಆರೋಗ್ಯ ಸೇವಾ ವಲಯದಲ್ಲಿ ಐಟಿ ಎಕ್ಸಿಕ್ಯೂಟಿವ್ಸ್‍ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಡೇಟಾ ಬೇಸ್, ಅಭಿವೃದ್ಧಿ, ಟೆಕ್ ಸಪೆÇೀರ್ಟ್ ಮತ್ತು ಸೊಲ್ಯುಷನ್ಸ್ ವಿಭಾಗಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಲ್ತ್‍ಕೇರ್ ವ್ಯವಸ್ಥೆಯಲ್ಲಿ ತಂತ್ರಜ್ಞಾನವು ಅಂತರ್ಗತ ಭಾಗವಾಗುತ್ತಿರುವುದರಿಂದ ಸಾಫ್ಟ್‍ವೇರ್ ಮತ್ತು ಐಟಿ ಅಡ್ಮಿನಿಸ್ಟ್ರೇಷನ್ ಮತ್ತು ಸಪೆÇೀರ್ಟ್ ವಿಭಾಗದಲ್ಲಿ ಸಿಬ್ಬಂದಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷಗಳ ಅನುಭವ ಇರುವ ಅಭ್ಯರ್ಥಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಶೇಕಡ 55ರಷ್ಟು ಥಟಿ/ಟೆಕ್ ಉದ್ಯೋಗಗಳು ಮಧ್ಯಮ ಹಂತದಲ್ಲಿ ನೇಮಕವಾಗುತ್ತಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2-4 ಲಕ್ಷ ರೂಪಾಯಿ.

ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್
ಆರೋಗ್ಯ ಸೇವಾ ವಿಜ್ಞಾನದಲ್ಲಿ ಕ್ಲಿನಿಕಲ್ ರಿಸರ್ಚ್ ಎನ್ನುವ ಶಾಖೆಯು ಔಷಧಿಗಳ ಪರಿಣಾಮಕಾರಿ ಮತ್ತು ಸುರಕ್ಷತೆಯನ್ನು ಪರಿಶೀಲಿಸಲು, ಆರೋಗ್ಯ ಸಾಧನಗಳು, ರೋಗನಿರ್ಣಯದ ಉತ್ಪನ್ನಗಳನ್ನು ಮತ್ತು ಚಿಕಿತ್ಸಾ ಕಟ್ಟುಪಾಡುಗಳನ್ನು ಪರಿಶೀಲಿಸಲು ಮತ್ತು ಸಂಶೋಧಿಸುವ ಕಾರ್ಯವನ್ನು ಮಾಡುತ್ತದೆ. ಈ ವಿಭಾಗದಲ್ಲಿ ಅಸೋಸಿಯೇಟ್‍ಗಳು ಕ್ಲಿನಿಕಲ್ ಟ್ರಯಲ್‍ಗಳನ್ನು ನಡೆಸುವ ಕಾರ್ಯವನ್ನು ಮಾಡುತ್ತಾರೆ. ಇವರು ಗುಡ್ ಕ್ಲಿನಿಕಲ್ ಪ್ರಾಕ್ಟೀಸ್(ಜಿಎಸ್‍ಪಿ) ಮತ್ತು ಇಂಟರ್‍ನ್ಯಾಷನಲ್ ಕಾನ್ಫರೆನ್ಸ್ ಆನ್ ಹಾಮೊನಿಸೇಷನ್ (ಐಸಿಎಚ್)ನ ಅಂತಾರಾಷ್ಟ್ರೀಯ ನಿಯಂತ್ರಣ ಮತ್ತು ನೈತಿಕ ಮಾರ್ಗದರ್ಶನದಡಿ ಕ್ಲಿನಿಕಲ್ ಟ್ರಯಲ್‍ಗಳನ್ನು ನಡೆಸುತ್ತಾರೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ ಸುಮಾರು 2 ವರ್ಷದವರೆಗೆ ಅನುಭವ ಇದ್ದವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 67ರಷ್ಟು ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್ ಉದ್ಯೋಗಗಳು ಎಂಟ್ರಿ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2.5-5 ಲಕ್ಷ ರೂಪಾಯಿ.

ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಟರ್ಸ್
ರೋಗಿಯ ಕಾಳಜಿಗೆ ಸಂಬಂಧಪಟ್ಟಂತೆ ವಿವಿಧ ಅಂಶಗಳನ್ನು ನಿರ್ವಹಿಸುವ ಕೆಲಸನವನ್ನು ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಟರ್ಸ್‍ಗಳು ಮಾಡುತ್ತಾರೆ. ಸಮಸ್ಯೆ ಕಂಡುಹಿಡಿಯುವಿಕೆ, ಪರಿಹಾರ ಇತ್ಯಾದಿಗಳು ಇವರ ಕಾರ್ಯ. ಇವರು ಹೆಲ್ತ್‍ಕೇರ್ ವಲಯದ ಎಲ್ಲಾ ಯೂನಿಟ್‍ಗಳಲ್ಲಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷ ಅನುಭವ ಇರುವವರಿಗೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಶೇಕಡ 70ರಷ್ಟು ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಷನ್ ಉದ್ಯೋಗಗಳು ಮಿಡ್ ಲೆವೆಲ್‍ನಲ್ಲಿ ಇವೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 1.5-3 ಲಕ್ಷ ರೂಪಾಯಿ.

ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್
ವೈದ್ಯಕೀಯ ದಾಖಲೆಗಳನ್ನು ಬರೆಯುವುದು ಮತ್ತು ನಿರ್ವಹಣೆ ಮಾಡುವುದು ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಕೆಲಸ. ಈ ರೀತಿ ಬರೆದಿಟ್ಟರೆ ಮತ್ತು ನಿರ್ವಹಣೆ ಮಾಡಿದರೆ ವೈದ್ಯಕೀಯ ಉದ್ಯೋಗಿಗಳಿಗೆ ಭವಿಷ್ಯದಲ್ಲಿ ನೆರವಾಗುತ್ತದೆ. ರೋಗಿಯ ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಅನ್ನು ಅಂತಿಮ ಹಂತದಲ್ಲಿ ಪ್ರೂಫ್‍ರೀಡಿಂಗ್ ಮತ್ತು ಎಡಿಟಿಂಗ್ ಕೆಲಸವನ್ನೂ ಇವರು ಮಾಡಬೇಕಾಗುತ್ತದೆ. ಈ ಉದ್ಯೋಗಕ್ಕೆ ಬರುವವರು ಉತ್ತಮ ಕೇಳುಗರಾಗಿರಬೇಕು ಮತ್ತು ಟೈಪಿಸ್ಟ್‍ಗಳಾಗಿರಬೇಕು. ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಉದ್ಯೋಗವನ್ನು ಮನೆಯಲ್ಲಿ ಕುಳಿತು ಮಾಡಲೂ ಅವಕಾಶವಿದೆ.
ಬೇಡಿಕೆ ಹೇಗಿದೆ?: ಸುಮಾರು 2 ವರ್ಷದವರೆಗೆ ಅನುಭವ ಇರುವವರಿಗೆ ಹೆಚ್ಚ ಬೇಡಿಕೆಯಿದೆ. ಶೇಕಡ 80ರಷ್ಟು ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಹುದ್ದೆಗಳು ಎಂಟ್ರಿ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 1.5-2.5 ಲಕ್ಷ ರೂಪಾಯಿ.

ಅರಿವಳಿಕೆ ತಜ್ಞರು
ಮೆಡಿಕಲ್ ಅಪರೇಷನ್, ಸರ್ಜರಿ ನಡೆಸುವ ಮೊದಲು ಅಥವಾ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ರೋಗಿಗಳಿಗೆ ಅರಿವಳಿಕೆ ಕೊಡುವ ಕಾರ್ಯವನ್ನು ಅರಿವಳಿಕೆ ತಜ್ಞರು ಮಾಡುತ್ತಾರೆ. ಅರಿವಳಿಕೆಯು ಆರೋಗ್ಯ ಸೇವಾ ವಿಭಾಗದಲ್ಲಿ ಅತ್ಯಂತ ನಿರ್ಣಾಯಕ ವಿಭಾಗವಾಗಿರುವುದರಿಂದ ಉದ್ಯೋಗಾವಕಾಶ ಹೆಚ್ಚಿದೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷಗಳ ಅನುಭವ ಇರುವವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 70ರಷ್ಟು ಈ ಕ್ಷೇತ್ರದ ಉದ್ಯೋಗಗಳು ಮಿಡ್ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2.5-5 ಲಕ್ಷ ರೂಪಾಯಿ.

ರೇಡಿಯೋಗ್ರಾಫರ್ಸ್
ಎಕ್ಸ್‍ರೇ ಪರೀಕ್ಷೆ, ಮ್ಯಾಗ್ನೆಟಿಕ್ ರಿಸೊನೊನೆನ್ಸ್ ಇಮೇಜಿಂಗ್(ಎಂಆರ್‍ಐ) ಮತ್ತು ಕಂಪ್ಯೂಟೆಡ್ ಟೊಮೊಗ್ರಾಫಿ(ಸಿಟಿ) ಸ್ಕ್ಯಾನ್ ಇತ್ಯಾದಿ ಕಾರ್ಯವನ್ನು ರೇಡಿಯೋಲಾಜಿಕ್ ಟೆಕ್ನೊಲಾಜಿಸ್ಟ್‍ಗಳು ಮಾಡುತ್ತಾರೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ ಸುಮಾರು 5 ವರ್ಷದ ಅನುಭವ ಇರುವವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 60ರಷ್ಟು ರೇಡಿಯೋಗ್ರಾಫಿ ಉದ್ಯೋಗಗಳು ಎಂಟ್ರಿ ಲೆವೆಲ್ ಮತ್ತು ಮಿಡ್ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2-4ಲಕ್ಷ ರೂಪಾಯಿ.
Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಉದ್ಯೋಗಿಗಳು ಕಲಿಯಬೇಕಾದ ಮತ್ತು ಕಲಿಯಬಾರದ ಅಂಶಗಳೇನು? ಈ ಕಾರ್ಯಕ್ರಮ ನೀಡುವ ಪಾಠವನ್ನು ನಮ್ಮ ಕರಿಯರ್ ಪ್ರಗತಿಗೂ ಬಳಸಬಹುದೇ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಬಿಗ್‍ಬಾಸ್ ಕಾರ್ಯಕ್ರಮ ನೀವು ಇಷ್ಟಪಡಬಹುದು. ಇಷ್ಟ ಪಡದೆ ಇರಬಹುದು. ಆದರೆ, ಸಂಪೂರ್ಣವಾಗಿ ನಿರಾಕರಿಸುವುದು ಕಷ್ಟ. ಯಾಕೆಂದರೆ, ಕ್ಯಾಮೆರಾ ಇಲ್ಲವೆನ್ನುವುದನ್ನು ಬಿಟ್ಟರೆ ಪ್ರತಿಯೊಂದು ಮನೆಯಲ್ಲಿ, ಆಫೀಸ್‍ನಲ್ಲಿ ಇರುವ ವಾತಾವರಣದಂತೆಯೇ ಬಿಗ್‍ಬಾಸ್ ಮನೆ ಇರುತ್ತದೆ.
ನೀವು ಕೆಲಸ ಮಾಡುತ್ತಿರುವ ಆಫೀಸ್ ಅನ್ನೇ ನೋಡಿ. ಅದನ್ನೇ ಬಿಗ್‍ಬಾಸ್ ಮನೆಯೆಂಬ ದೃಷ್ಟಿಯಲ್ಲಿ ನೋಡಿ. ಅಲ್ಲಿ ಎಷ್ಟೊಂದು ಜನರಿದ್ದಾರೆ. ವಿವಿಧ ಜಾತಿ, ಧರ್ಮ, ಪ್ರತಿಭೆಯುಳ್ಳವರು ಅಲ್ಲಿರುತ್ತಾರೆ. ಎಲ್ಲರೂ ಒಂದೇ ಮನೆಯಲ್ಲಿ ಇರುವವರಂತೆ ಇರುತ್ತಾರೆ. ಅಲ್ಲೂ ಗುಂಪುಗಾರಿಕೆ ಇದೆ. ಜಗಳವಿದೆ. ದರ್ಪ, ಆಹಂ, ಮತ್ಸರ, ಕಾಲೆಳೆಯುವಿಕೆ ಇದೆ. ಅಷ್ಟೇ ಏಕೆ, ಯಾರ್ಯಾರೋ ಒಳಗೆ ಬರುತ್ತಾರೆ. ಯಾರ್ಯಾರೋ ಹೊರಗೆ ಬರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮವು ಕರಿಯರ್‍ಗೆ ಅತ್ಯಂತ ಮಹತ್ವದ ಪಾಠ ಕಲಿಸುತ್ತದೆ. ನಾವು ಅನುಕರಿಸಬಹುದಾದ ಮತ್ತು ಅನುಕರಿಸಬಾರದ ಹಲವು ಸಂಗತಿಗಳು ಬಿಗ್‍ಬಾಸ್‍ನಲ್ಲಿದೆ.
ಉತ್ತಮ ನಾಯಕತ್ವ: ಕನ್ನಡ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಸ್ಥಾನದಲ್ಲಿ ಇನ್ಯಾರೋ ಸಾಮಾನ್ಯ ನಟರನ್ನು ಕಲ್ಪಿಸಿಕೊಳ್ಳಿ. ಯಾಕೋ, ಸರಿಬರುತ್ತಿಲ್ಲ ತಾನೇ. ಕನ್ನಡದಲ್ಲಿ ಬಿಗ್‍ಬಾಸ್‍ಗೆ ಸುದೀಪ್ ಮಾತ್ರ ಸೂಕ್ತವೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿರುತ್ತದೆ. ಉತ್ತಮ ನಾಯಕತ್ವದ ಲಕ್ಷಣವೇ ಇದು. ನೀವು ಕೆಳಹಂತದ ಉದ್ಯೋಗದಲ್ಲಿದ್ದರೆ ನಿಮಗೆ ನಿಮ್ಮ ಟೀಮ್ ಲೀಡರೇ ನಾಯಕ ಆಗಬಹುದು. ಆ ಟೀಮ್ ಲೀಡರ್‍ಗೆ ಇನ್ಯಾರೋ ಮ್ಯಾನೇಜರ್ ನಾಯಕ ಆಗಿರಬಹುದು. ಮ್ಯಾನೇಜರ್‍ಗೆ ಚೀಫ್ ಮ್ಯಾನೇಜರ್, ಚೀಫ್ ಮ್ಯಾನೇಜರ್‍ಗೆ ಸಿಇಒ ಬಿಗ್‍ಬಾಸ್‍ನಂತೆ ಕಾಣಬಹುದು. ಈ ಎಲ್ಲಾ ಚೈನ್‍ಗಳು ಸಮರ್ಥವಾಗಿರುವುದು ಅತ್ಯಂತ ಮುಖ್ಯ. ಸಹೋದ್ಯೋಗಿಗಳು ಗೌರವಿಸುವಂತಹ ಉತ್ತಮ ವ್ಯಕ್ತಿತ್ವವನ್ನು ಲೀಡರ್ ಹೊಂದಿರಬೇಕು. ಇಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವವರು ಮಾತ್ರ ನಾಯಕರಾಗುತ್ತಾರೆ.
ಬೇಗ ಎದ್ದೇಳಿ: ತಡವಾಗಿ ಮಲಗಿ ತಡವಾಗಿ ಎದ್ದೇಳುವ ಗುಣವನ್ನು ಬಿಗ್‍ಬಾಸ್ ನೋಡಿ ಕಲಿಯಬೇಡಿ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಬಹುತೇಕರಿಗೆ ಬೆಳಗಾಗುವುದು ಒಂಬತ್ತರ ಮೇಲೆಯೇ. ಮತ್ತೆ ಬಹುತೇಕರು ಮಲಗುವುದು ತಡವಾಗಿಯೇ. ಥೇಟ್ ಕಾಪೆರ್Çರೇಟ್ ಕಲ್ಚರ್‍ನಂತೆಯೇ. ರಾತ್ರಿ ಯಾವುದೋ ಪಾರ್ಟಿಗೆ ಹೋಗುವುದು. ಬೆಳಗ್ಗೆ ಒಂಬತ್ತರ ನಂತರ ಎದ್ದೇಳುವುದನ್ನು ಬಹುತೇಕ ಉದ್ಯೋಗಿಗಳು ರೂಢಿಸಿಕೊಂಡಿದ್ದಾರೆ. ಬೆಳಗ್ಗೆ ಎದ್ದು ನಿದ್ದೆಗಣ್ಣಿನಲ್ಲೇ ಆಫೀಸ್‍ಗೆ ಬರುತ್ತಾರೆ. ಇದರ ಬದಲು, ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಎದ್ದು, ವ್ಯಾಯಾಮ, ವಾಕಿಂಗ್ ಮಾಡಿ. ದಿನದ ಆರಂಭ ಉತ್ತಮವಾಗಿದ್ದರೆ ನೀವು ಆಫೀಸ್‍ನಲ್ಲಿಯೂ ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕರಿಯರ್ ಪ್ರಗತಿಗೆ ಈ ಲವಲವಿಕೆ ಅತ್ಯಂತ ಅಗತ್ಯ.
ಗಾಸಿಪ್ ಬೇಡ: ಬಿಗ್‍ಮನೆಯ ಅತ್ಯಂತ ಆಕರ್ಷಣೆ ಅಲ್ಲಿನ ಗಾಸಿಪ್ ಆಗಿದೆ. ಯಾರೋ ಅವರ ಬಗ್ಗೆ ಹೀಗಂದರು, ಹಾಗಂದರು, ಆತ ಹೀಗೆ, ಇವಳು ಹೀಗೆ ಎಂದೆಲ್ಲ ಗುಸುಗುಸಿಗೆ ಬಿಗ್‍ಬಾಸ್ ಕ್ಯಾಮೆರಾ ಕಣ್ಣಾಗುತ್ತದೆ ಮತ್ತು ಕಿವಿಯಾಗುತ್ತದೆ. ಬಿಗ್‍ಮನೆಯಲ್ಲಿ ನಡೆಯುವ ಈ ಗುಸುಗುಸು ಪೂರ್ತಿ ಮನೆಯ ವಾತಾವರಣವನ್ನೇ ಹಾಳು ಮಾಡುತ್ತದೆ. ಆಫೀಸ್‍ನಲ್ಲಿಯೂ ಇಂತಹ ಗಾಸಿಪ್‍ಗಳು ಸಾಮಾನ್ಯ. ನೀವು ಗಾಸಿಪ್ ಮಾಡುವವರಾಗಿದ್ದರೆ ನೀವು ನಾಮಿನೆಟ್ ಆಗುವವರ ಲಿಸ್ಟ್‍ನಲ್ಲಿದ್ದೀರಿ ಎಂದು ತಿಳಿಯಿರಿ.
ಗುಂಪುಗಾರಿಕೆ: ಬಿಗ್‍ಬಾಸ್ ಮನೆಯಲ್ಲಿ ಗುಂಪುಗಾರಿಕೆ ನೋಡಿರುತ್ತೀರಿ. ಇರುವ ಕೆಲವೇ ಮಂದಿಯಲ್ಲಿ ಹಲವು ಬಣಗಳು ಸೃಷ್ಟಿಯಾಗುತ್ತವೆ. ಆಫೀಸ್‍ನಲ್ಲಿಯೂ ಹಾಗೆಯೇ. ಒಂದಿಷ್ಟು ಗುಂಪುಗಾರಿಕೆ, ರಾಜಕೀಯ ಇರುತ್ತದೆ. ಇಂತಹ ಗುಂಪುಗಾರಿಕೆಯೂ ಕಂಪನಿಯ ಶತ್ರು.
ಆರೋಗ್ಯಕರ ಸ್ಪರ್ಧೆ: ಬಿಗ್‍ಬಾಸ್‍ನಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರೂ ಸ್ಫರ್ಧಿಯಾಗಿರುತ್ತಾರೆ. ಎಲ್ಲರೂ ಗೆಲ್ಲಬೇಕೆಂದು ಬಯಸುತ್ತಾರೆ. ಆದರೆ, ಆ ಗೆಲುವು ಪಡೆಯಲು ಅತ್ಯಂತ ಪ್ರಮುಖವಾಗಿ ಬೇಕಾದದ್ದು ಪ್ರಯತ್ನ, ಪ್ರಾಮಾಣಿಕತೆ ಮತ್ತು ಪ್ರತಿಭೆ. ನೀವಿರುವ ಕಂಪನಿಯಲ್ಲಿಯೂ ಉನ್ನತ್ತ ಸ್ಥಾನಕ್ಕೆ ಹೋಗಲು ಪ್ರತಿಯೊಬ್ಬರೂ ಬಯಸುತ್ತಿರುತ್ತಾರೆ. ಪ್ರಯತ್ನ, ಪ್ರತಿಭೆ, ಪ್ರಾಮಾಣಿಕತೆ ಇರುವವರು ಇಲ್ಲೂ ಪ್ರಗತಿ ಕಾಣುತ್ತಾರೆ.
ಪರ್ಫಾಮೆನ್ಸ್ ಮುಖ್ಯ: ಬಿಗ್‍ಬಾಸ್‍ನಲ್ಲಿ ವಿವಿಧ ರೀತಿಯ ಟಾಸ್ಕ್‍ಗಳು ಇರುತ್ತವೆ. ಪ್ರತಿದಿನ, ಕ್ಷಣವೂ ಟಾಸ್ಕ್‍ನಿಂದ ಕೂಡಿರುತ್ತದೆ. ಇಲ್ಲಿ ಉತ್ತಮ ಪರ್ಫಾಮೆನ್ಸ್ ತೋರಿದವರು ಮಾತ್ರ ಉಳಿಯುತ್ತಾರೆ. ಇದ್ದು ಇಲ್ಲದಂತೆ ಇರುವವರು, ಟಾಸ್ಕ್‍ಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳದವರು ಬಿಗ್‍ಬಾಸ್ ಮನೆಯಿಂದ ಮನೆಗೆ ಹೋಗುತ್ತಾರೆ. ಕಂಪನಿಗಳು ಸಹ ಪರ್ಫಾಮೆನ್ಸ್ ತೋರುವವರಿಗೆ ಮಾತ್ರ ಮಣೆ ಹಾಕುತ್ತದೆ. ಇಲ್ಲವಾದರೆ ಮನೆಗೆ ಕಳುಹಿಸುತ್ತದೆ.
ಮಾತು ಮತ್ತು ಕೃತಿ: ಬಿಗ್‍ಬಾಸ್‍ನಲ್ಲಿ ಕೆಲವರು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಅವರ ಮಾತಿಗೂ ಕೃತಿಗೂ ತಾಳೆಯಾಗುವುದೇ ಇಲ್ಲ. ಆಫೀಸ್‍ನಲ್ಲಿಯೂ ಹಾಗೆಯೇ, ಕೆಲವರು ಮಾತು ಮಾತ್ರ ಆಡುತ್ತಾರೆ. ಅವರ ಮಾತು ಕೃತಿಯಾಗುವುದೇ ಇಲ್ಲ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುವವರು ಒಂದಿಷ್ಟು ದಿನ ಕಂಪನಿಯನ್ನು ಯಾಮಾರಿಸಬಹುದಾದರೂ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಕೆಲಸ ಕಲಿಯಿರಿ: ಬಿಗ್‍ಬಾಸ್‍ನಲ್ಲಿ ವಿವಿಧ ವಿಐಪಿಗಳು ಇರುತ್ತಾರೆ. ಅವರೂ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಬಾತ್‍ರೂಂ ಸ್ವಚ್ಛ ಮಾಡಬೇಕಾಗುತ್ತದೆ. ನೀವು ಕರಿಯರ್‍ನಲ್ಲಿ ಪ್ರಗತಿ ಕಾಣಬೇಕಾದರೆ ನಿಮ್ಮ ಕೆಲಸಕ್ಕೆ ಮಾತ್ರ ಸೀಮಿತರಾಗಬೇಡಿ. ಕಂಪನಿಯ ಎಲ್ಲಾ ಸಿಬ್ಬಂದಿಗಳು ಮಾಡುವ ಕೆಲಸದ ಬಗ್ಗೆಯೂ ಅರಿವಿರಲಿ.
ದುಂದು ವೆಚ್ಚ ಬೇಡ: ಬಿಗ್‍ಬಾಸ್‍ನ ಲಗ್ಷುರಿ ಟಾಸ್ಕ್‍ನಿಂದ ಎಲ್ಲರೂ ಕಲಿಯಬಹುದಾದ ಒಂದು ಅಂಶವಿದೆ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟೇ ಖರ್ಚು ಮಾಡಿ ಎಂಬ ಅತ್ಯಂತ ಮಹತ್ವದ ಪಾಠವನ್ನು ಅದು ಹೇಳಿಕೊಡುತ್ತದೆ. ನಿಮ್ಮ ವೇತನಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಕಾರು ಸಾಲ, ಮನೆ ಸಾಲವೆಂದು ಹೆಚ್ಚು ಹೊರೆಯಲ್ಲಿ ಇರಬೇಡಿ.
ಬ್ಯಾಗ್ ಸಿದ್ಧವಾಗಿರಲಿ: ಕೊನೆಯ ಮತ್ತು ಅತ್ಯಂತ ಪ್ರಮುಖ ಪಾಠವೆಂದರೆ `ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಟ್ಟುಕೊಳ್ಳಿ'. ನೀವು ಸದಾ ಯಾವಾಗ ಬೇಕಾದರೂ ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು. ಕೆಲಸ ಹೋಗುವ ಭಯದಲ್ಲಿ ಇರಬೇಡಿ. ನಿಮಗೆ ಎಲ್ಲಿ ಹೋದರೂ ಅವಕಾಶ ಸಿಗುತ್ತದೆ ಎಂಬಂತಹ ವ್ಯಕ್ತಿತ್ವ, ಪ್ರತಿಭೆ ಬೆಳೆಸಿಕೊಳ್ಳಿ.

  • ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಆಫೀಸ್‍ನಲ್ಲಿ ಮತ್ತು ಬಿಗ್‍ಬಾಸ್‍ನಲ್ಲಿ ಉಳಿಯಬಹುದು. ಇತ್ತೀಚೆಗೆ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ಅಭ್ಯರ್ಥಿಯೊಬ್ಬರು ಹೊರಹೋಗಲು ಆರೋಗ್ಯ ಸಮಸ್ಯೆಯೂ ಪ್ರಮುಖ ಕಾರಣವಾಗಿತ್ತು.

  •  ಬಿಗ್‍ಬಾಸ್‍ನಲ್ಲಿ ಅತ್ತರೆ ಅನುಕಂಪದ ಓಟ್ ಬರುತ್ತೆ ಎಂದು ಹೇಳುವವರು ಇದ್ದಾರೆ. ಆದರೆ ಆಫೀಸ್‍ನಲ್ಲಿ ಯಾವಾಗಲೂ ನಮ್ಮ ವೀಕ್‍ನೆಸ್ ಅನ್ನು ಪ್ರದರ್ಶಿಸಬಾರದು. ನೀವು ಸ್ಟ್ರಾಂಗ್ ಆಗಿದ್ದಷ್ಟು ಒಳ್ಳೆಯದು.

  •  ನಿಮಗೆ ಇಷ್ಟವಾಗದ ವಿಚಾರದ ಬಗ್ಗೆ ಸಾತ್ವಿಕವಾಗಿ ಪ್ರತಿಭಟನೆ ಮಾಡಿ. ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡಬೇಡಿ. ಒಳ್ಳೆಯ ಕಾರಣದಿಂದ ಗಮನ ಸೆಳೆಯಿರಿ. ಗಿಮಿಕ್ ಮಾಡಿ ಗಮನ ಸೆಳೆಯಬೇಡಿ.

  •  ಇತರರನ್ನು ಗೌರವಿಸಿ. ನಿಮ್ಮಲ್ಲಿ ಇರುವ ಕೆಟ್ಟಗುಣಗಳನ್ನು ಬಿಟ್ಟುಬಿಡಿ. ನಿಮ್ಮಲ್ಲಿ ಇತರರಿಗೆ ಇಷ್ಟವಾಗದ ಸಂಗತಿಗಳು ಯಾವುದು ಎಂದು ತಿಳಿದುಕೊಳ್ಳಿ.ತಾನು ಮಾತ್ರ ಗೆಲ್ಲಬೇಕೆಂದು ಸ್ವಾರ್ಥಿಯಾದರೆ ಎಲ್ಲರೂ ದೂರ ಸರಿಯುತ್ತಾರೆ.

  •  ನಿಮಗೆ ಗೊತ್ತಿರುವ ಕೌಶಲವನ್ನು ಕಂಪನಿಯ ಇತರ ಸಹೋದ್ಯೋಗಿಗಳಿಗೂ ಹೇಳಿಕೊಡಿ. ಇತರರ ನೋವಿಗೆ ಸ್ಪಂದಿಸಿ. ಅಗತ್ಯಬಿದ್ದರೆ ಸಹಾಯ ಮಾಡಿ.

  •  ನಾವು ಆಡುವ ಮಾತುಗಳ ಕುರಿತೂ ಎಚ್ಚರದಿಂದ ಇರಬೇಕು. ನಿಮಗೆ ತಿಳಿಯದಂತೆ ಆಗುವ ತಪ್ಪುಗಳ ಕುರಿತೂ ಎಚ್ಚರದಿಂದ ಇರಬೇಕು.

  •  ಆಫೀಸ್ ಎಂದರೆ ಸದಾ ಕತ್ತೆಯಂತೆ ದುಡಿಯಬೇಕೆಂದಿಲ್ಲ. ಆಗಾಗ ಫನ್, ಮನರಂಜನೆ ಇರಬೇಕು. ನಗುಮುಖದಿಂದ ಇದ್ದರೆ ಮಾತ್ರ ನಿಮ್ಮ ಆರೋಗ್ಯ ಮತ್ತು ಕಂಪನಿಯ ಆರೋಗ್ಯ ಚೆನ್ನಾಗಿರುತ್ತದೆ.

  •  ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಪ್ರದರ್ಶಿಸಲು ಬಿಗ್‍ಬಾಸ್ ಅಥವಾ ಆಫೀಸ್ ಉತ್ತಮ ವೇದಿಕೆಯಾಗಿದೆ. ಇಲ್ಲಿ ಪ್ರತಿಭಾನ್ವಿತರು ಉಳಿಯುವ ಸಾಧ್ಯತೆ ಹೆಚ್ಚಿದೆ.


 

Published in VK Mini